ಶಿಕ್ಷಣ ವ್ಯವಸ್ಥೆಯ ಬದಲಿಸಿದ ಭಾರತದ ನವೋದ್ಯಮಗಳು

ಖಾಸಗಿಯವರನ್ನೂ ಪಾಲುದಾರರನ್ನಾಗಿಸಿಕೊಳ್ಳಬೇಕಿದೆ ಹೊಸ ಶಿಕ್ಷಣ ನೀತಿ
– ಎನ್‌ ರವಿಶಂಕರ್.‌

ಇದು, ಕೇಂದ್ರ ಸರ್ಕಾರ ರೂಪಿಸಿರುವ ಹೊಸ ಶಿಕ್ಷಣ ನೀತಿಯ ಬಗೆಗಿನ ಲೇಖನವಲ್ಲ! ಅದರ ಬಗ್ಗೆ ಚರ್ಚಿಸಲು ಇರಬೇಕಾದ ಜ್ಞಾನ, ಅನುಭವಗಳು ಬೇರೆಯೇ ಅನಿಸುತ್ತದೆ. ಆದರೆ, ಹೊಸ ಶಿಕ್ಷಣ ನೀತಿಯ ಹಿನ್ನೆಲೆಯಲ್ಲಿ, ಹೆಚ್ಚು ಚರ್ಚೆಯಾಗದ ಮತ್ತೊಂದು ವಿಷಯದ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವಿದು. ಹೊಸ ಶಿಕ್ಷಣ ನೀತಿಗೆ ಖಾಸಗಿ ವಲಯ ಅದರಲ್ಲೂ ಖಾಸಗಿ ನವೋದ್ಯಮಗಳು, ಪರೋಕ್ಷವಾಗಿಯಾದರೂ ನೀಡಿರುವ ಅಮೂಲ್ಯ ಕೊಡುಗೆಯನ್ನೂ ಸ್ಮರಿಸಬೇಕಿದೆ. ನೆನಪಿರಲಿ, ಇಲ್ಲಿರುವುದು ಖಾಸಗಿಯವರು ನೀಡಿರುವ ಸಮಗ್ರ ಕೊಡುಗೆಯ ದಾಖಲೆಯಲ್ಲ. ಬದಲಿಗೆ, ನನಗೆ ಮೇಲ್ನೋಟಕ್ಕೆ ಕಂಡ, ಅವರಲ್ಲಿ ಕೆಲವರು ಕಕ್ಷಿಗಾರರಾದಾಗ ನನ್ನ ನೇರ ಅನುಭವಕ್ಕೆ ಬಂದ ಅರ್ಧದೃಷ್ಟಿಯ ವಿವರ! ಇದು, ಇಂತಹ ನವೋದ್ಯಮಗಳಲ್ಲಿನ ಆಕ್ಷೇಪಣೀಯ ಅಂಶಗಳನ್ನು ಬೇಕೆಂದೇ ಬದಿಗಿಟ್ಟು, ಗುಣಾತ್ಮಕ ಅಂಶಗಳನ್ನು ಮಾತ್ರ ನೋಡುವ ಪ್ರಯತ್ನ. ನಮ್ಮ ಶಿಕ್ಷಣ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳದೆ, ತಮ್ಮದೇ ಛಾಪು ಮೂಡಿಸಲು ಪ್ರಯತ್ನಿಸಿದ ಕೆಲವು ನವೋದ್ಯಮಕರ್ತರ ಸ್ಫೂರ್ತಿದಾಯಕ ಕಥೆಗಳು ಇವು. ಸರ್ಕಾರಿ ವ್ಯವಸ್ಥೆಯೊಡನೆ ಸಮಾನಾಂತರ ಕಾಯ್ದುಕೊಂಡು, ಒಳಿಗನವರಾಗದೆಯೂ ಒಳಗೊಂಡು, ನಮ್ಮ ಶಿಕ್ಷಣ ʻನೀತಿʼಯನ್ನು ಪರೋಕ್ಷವಾಗಿ ತಿದ್ದಿದ ಶ್ರೇಯ ಇಂಥವರಿಗೆ ಸಲ್ಲಬೇಕು.

ಬೋಧನಾತ್ಮಕ ಕಲಿಕೆ ಮತ್ತು ಪಠ್ಯಪುಸ್ತಕಗಳಿಗೆ ಪರ್ಯಾಯ
ಹತ್ತಿರತ್ತಿರ ಎರಡು ದಶಕಗಳ ಹಿಂದೆ ಹಾರ್ವರ್ಡ್‌ ಶಿಕ್ಷಿತ ಆಶಿಶ್‌ ರಾಜ್‌ಪಾಲ್‌ ಐಡಿಸ್ಕವರ್‌ಐ ಸಂಸ್ಥೆಯನ್ನು ಹುಟ್ಟುಹಾಕಿದರು. Instruction Based Education / ಬೋಧನಾತ್ಮಕ ಕಲಿಕೆಯನ್ನು ಪ್ರಶ್ನಿಸಿ Experiential Learning / ಅನುಭವಾತ್ಮಕ ಕಲಿಕೆಗೆ ಒತ್ತು ನೀಡುವುದು ಅವರ ಉದ್ದೇಶವಾಗಿತ್ತು. ಆದರೆ, ಶಿಕ್ಷಣ ವ್ಯವಸ್ಥೆಯನ್ನು ತಿದ್ದಬೇಕಾದರೆ, ಮೊದಲು ಶಿಕ್ಷಕರನ್ನು ತಿದ್ದಬೇಕು. ಅದಕ್ಕಾಗಿ ಅನುಭವಾತ್ಮಕ ಶಿಕ್ಷಣ ನೀಡುವ ಸಾಮರ್ಥ್ಯವನ್ನು ಶಿಕ್ಷಕರಲ್ಲಿ ಬೆಳೆಸಲು ʼಶಿಕ್ಷಕರ ಶಿಕ್ಷಣ ಶಾಲೆʼಯನ್ನು ಸ್ಥಾಪಿಸಿದರು, ಶಾಲೆಗಳೊಡಗೂಡಿ ಸಾವಿರಾರು ಶಿಕ್ಷಕರಿಗೆ ತರಬೇತಿ ನೀಡಿದರು. ಹಾಗೆ ಮಾಡುವಾಗ, ಪಠ್ಯಪುಸ್ತಕಗಳು ಶಿಕ್ಷಣವನ್ನು ನೀರಸವಾಗಿಸುತ್ತಿವೆ ಎನ್ನುವುದನ್ನು ಮನಗಂಡು, ಅನುಭವಾತ್ಮಕ ಕಲಿಕೆಗೆ ಪೂರಕವೆನಿಸುವ ಪಠ್ಯಪುಸ್ತಕಗಳನ್ನು ತಯಾರು ಮಾಡಲು XSEED ಸಂಸ್ಥೆಯನ್ನು ಹುಟ್ಟುಹಾಕಿದರು. ಸರ್ಕಾರಗಳು ರೂಪಿಸಿದ್ದ ಪಠ್ಯಕ್ರಮಕ್ಕೆ ಬದ್ಧವಾಗಿದ್ದುಕೊಂಡೇ ಪಾಠ ಹೇಳುವ ರೀತಿಯಲ್ಲಿ ಬದಲಾವಣೆ ತಂದರು. ಪಠ್ಯಪುಸ್ತಕದಿಂದ ಹಿಡಿದು pedagogy / ಶಿಕ್ಷಣ ಕ್ರಮದವರೆಗೆ ಎಲ್ಲವನ್ನೂ ಒಂದು ಹಂತಕ್ಕೆ ಹದಗೊಳಿಸಿದರು. ಮೊದಲಿಗೆ ಇದರ ಪ್ರಯೋಜನ ಹೆಚ್ಚು ದುಡ್ಡು ಕೊಟ್ಟು ಪಡೆಯಬಲ್ಲ ದುಬಾರಿ ಶಾಲೆಗಳಿಗಷ್ಟೇ ಮೀಸಲಿತ್ತಾದರೂ, ನಂತರದ ವರ್ಷಗಳಲ್ಲಿ ಸ್ವಲ್ಪ ಮಟ್ಟಿಗಾದರೂ ಮಧ್ಯಮ ವರ್ಗದವರು ಹೋಗುವ ಶಾಲೆಗಳಿಗೂ ಬಂದಿತು. ಇರುವ ವ್ಯವಸ್ಥೆಯನ್ನು ಧಿಕ್ಕರಿಸದೆ, ಆದರೆ ಪೂರ್ಣವಾಗಿ ಒಪ್ಪದೆ, ಇತಿಮಿತಿಯಲ್ಲಿ ಶಿಕ್ಷಣ ಕ್ರಾಂತಿ ಸಾದ್ಯ ಎಂದು ನಿರೂಪಿಸದರು ಆಶಿಶ್‌ ರಾಜ್‌ಪಾಲ್.‌ ಮುಂದಿನ ದಶಕದಲ್ಲಿ ಬಂದ ಶಿಕ್ಷಣ ಕ್ಷೇತ್ರದ ನವೋದ್ಯಮಿಗಳಿಗೆ ಮಾದರಿಯಾದರು.

ಗ್ರಾಮೀಣ ಪ್ರದೇಶಗಳಿಗೆ ಶಿಕ್ಷಣ
ನಗರಗಳಲ್ಲಿನ ಮಕ್ಕಳು ಎರಡೂವರೆ ವರ್ಷಕ್ಕೆ ಶಿಕ್ಷಣ ಆರಂಭಿಸಿದರೆ ಗ್ರಾಮೀಣ ಪ್ರದೇಶದ ಮಕ್ಕಳು ಸರಿಯಾದ ಶಾಲಾ ಶಿಕ್ಷಣ ಪಡೆಯಲು ಪ್ರಾರಂಭಿಸುವುದು ಸುಮಾರು ಆರು ವರ್ಷದ ವೇಳೆಗೆ. ಮಕ್ಕಳ ಮೆದುಳಿನ ಬೆಳವಣಿಗೆ ಅತಿ ಹೆಚ್ಚು ಇರುವುದು 2 ವರ್ಷದಿಂದ ಎಂಟು ವರ್ಷದವರೆಗೆ ಎನ್ನುತ್ತಾರೆ. ಈ ಅವಧಿಯಲ್ಲಿ ಕಲಿಕೆಯಿಂದ ಮಕ್ಕಳು ವಂಚಿತರಾಗದಿರಲಿ ಎಂದು ಉಮೇಶ್ ಮಲ್ಹೊತ್ರ ‘ಹಿಪ್ಪೋಕ್ಯಾಂಪಸ್ ಲರ್ನಿಂಗ್ ಸೆಂಟರ್’ (HLC) ಎಂಬ ಹೆಸರಿನಲ್ಲಿ ಸಾವಿರಾರು ಗ್ರಾಮೀಣ ಪ್ರಿಸ್ಕೂಲ್ ಗಳನ್ನು ತೆರೆದರು. ಅತ್ಯಂತ ಕಡಿಮೆ ಖರ್ಚಿನಲ್ಲಿ ಅತ್ಯುತ್ಕೃಷ್ಟ ಗುಣಮಟ್ಟದ ಶಿಕ್ಷಣವನ್ನು ಕೊಟ್ಟರೂ, ಅದನ್ನು ಲಾಭದಾಯಕ ಉದ್ಯಮವಾಗಿ ಸ್ಥಾಪಿಸಿದರು ಎನ್ನುವುದನ್ನು ಇಲ್ಲಿ ವಿಶೇಷವಾಗಿ ಹೇಳಬೇಕು. ಸರ್ಕಾರ ಮಾಡಬೇಕಾದ ಕೆಲಸವನ್ನು ನಿಸ್ವಾರ್ಥವಾಗಿ ಇವರೇ ಮಾಡಿದರು. ಸರ್ಕಾರವಾಗಲಿ ಖಾಸಗಿಯವರಾಗಲಿ ಅನುಕರಿಸಬಹುದಾದ ಮಾದರಿ ಸ್ಥಾಪಿಸಿದರು.
ವೃತ್ತಿಪರ ಶಿಕ್ಷಣಕ್ಕೆ ಒತ್ತು
ಒಂದರ್ಥದಲ್ಲಿ Finishing School ಎಂದು ಕರೆಯಿಸಿಕೊಳ್ಳುವ ನವೋದ್ಯಮಗಳಿವು. ಇಲ್ಲಿ, ಎರಡು ತರಹದ ಸಂಸ್ಥೆಗಳು ಹುಟ್ಟಿಕೊಂಡವು. ಮೊದಲನೆಯದು, ಕಾಲೇಜುಗಳಲ್ಲಿ ಕಲಿಯುವುದಕ್ಕೂ, ನಂತರ ದೊರಕುವ ಉದ್ಯೋಗಗಳು ಅಪೇಕ್ಷಿಸುವುದಕ್ಕೂ ನಡುವೆ ಇರುವ ಅಂತರವನ್ನೂ skill deficit ಅನ್ನು ಕಡಿಮೆ ಮಾಡುವ ನವೋದ್ಯಮಗಳು. ಉದಾಹರಣೆಗೆ – ೧೨ ವರ್ಷದ ಹಿಂದೆ, ಪರ್ಪಲ್‌ಲೀಪ್‌ ಎಂಬ ಸಂಸ್ಥೆ, ವೃತ್ತಿಪರ ಕಾಲೇಜುಗಳಲ್ಲಿ ಲರ್ನಿಂಗ್‌ ಸೆಂಟರ್‌ಗಳನ್ನು ಆರಂಭಿಸಿ, ಕಾಲೇಜಿಗೂ ವೃತ್ತಿಗೆ ಬೇಕಾದ ಕೌಶಲಕ್ಕೂ ನಡುವಿನ ಸೇತುವೆ ನಿರ್ಮಿಸಲು ಪ್ರಯತ್ನಿಸಿತು. ಇದರಿಂದ ಅನೇಕರಿಗೆ ಕೆಲಸ ಸಿಗುವ ಸಾಧ್ಯತೆ, ಮತ್ತು ಆರಂಭಿಕ ಸಂಬಳ ಹೆಚ್ಚಿತು. ಎರಡನೆಯ ತರಹದ ನವೋದ್ಯಮಗಳು ಕೈಗಾರಿಕೆಗಳ ಪರ ನಿಂತು, National Skill Development Corporation ನಂತಹ ಸರ್ಕಾರಿ ಸಂಸ್ಥೆಗಳ ಬೆಂಬಲ ಪಡೆದು, ಆಯಾ ಕೈಗಾರಿಕೆಗೆ ಬೇಕಾದ ತರಬೇತಿಯನ್ನು paid apprentice ಗಳನ್ನು ನೇಮಿಸಿಕೊಳ್ಳುವ ಮೂಲಕ ಮಾಡಿದವು. ಅಂದರೆ, ಮೊದಲು ಕೆಲಸ ಕೊಟ್ಟು, ಒಂದರ್ಧ ಸಂಬಳವನ್ನೂ ಕೊಟ್ಟು ತರಬೇತಿ ನೀಡುವುದು. ಆಮೇಲೆ, ಅಲ್ಲಿಯೇ ಖಾಯಂ ಮಾಡಿಕೊಳ್ಳುವುದು. ಅಪ್ರಸ್ತುತವಾಗುತ್ತಿದ್ದ ಕಲಿಕೆಯಿಂದ ನಿರಾಶರಾಗಿದ್ದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ, ಅವರ ಶಿಕ್ಷಣಕ್ಕೆ ಸಾರ್ಥಕರೂಪ ನೀಡುವ ನಿಟ್ಟಿನಲ್ಲಿ ಇಂತಹ Finishing School ಮಾದರಿಯ ನವೋದ್ಯಮಗಳ ಕೊಡುಗೆ ಅಪಾರ.

ಪ್ರವೇಶ ಪರೀಕ್ಷೆ ತಯಾರಿ
ಉನ್ನತ ವ್ಯಾಸಂಗಕ್ಕೆ ಮತ್ತು ವಿದೇಶಿ ವಿಶ್ವವಿದ್ಯಾಲಯಗಳಿಗೆ ಹೋಗಬಯಸುವ ವಿದ್ಯಾರ್ಥಿಗಳಿಗೆ ಅಲ್ಲಿನ ಪ್ರವೇಶ ಪರೀಕ್ಷೆಗಳು ಕಬ್ಬಿಣದ ಕಡಲೆಯಾಗಿದ್ದವು. ವಿದ್ಯಾರ್ಥಿಗಳು ಶಾಲೆಕಾಲೇಜುಗಳಲ್ಲಿ ಕಲಿತದ್ದು, ಈ ಪ್ರವೇಶ ಪರೀಕ್ಷೆಗಳನ್ನು ಎದುರಿಸಲು ಸಾಲುತ್ತಿರಲಿಲ್ಲ. ಅದಕ್ಕೆ ಬೇಕಿದ್ದ ಕೌಶಲಗಳು ಮತ್ತು ಸಾಮರ್ಥ್ಯಗಳೇ ಬೇರೆ. ಈ ಅಂತರವನ್ನು ಕಡಿಮೆ ಮಾಡಿ ಅರ್ಹ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅನುವಾಗುವಂತೆ ಮಾಡಿದ್ದು ʼಟಾಪರ್‌ʼನಂತಹ ನವೋದ್ಯಮಗಳು. ಟಾಪರ್‌ಗೂ ಮುನ್ನ ಇಂತಹ ಪ್ರವೇಶ ಪರೀಕ್ಷೆ ತಯಾರಿ ಕೇಂದ್ರಗಳು ಇದ್ದವಾದರೂ, ಅವುಗಳು ದೊಡ್ಡ ನಗರಗಳಿಗೆ ಸೀಮಿತವಾಗಿದ್ದವು. ಟಾಪರ್‌ನಂತಹ ನವೋದ್ಯಮಗಳು ಮನೆಯಲ್ಲೇ ಕುಳಿತು ಮೊಬೈಲ್‌ / ಕಂಪ್ಯೂಟರ್‌ನಲ್ಲಿ ಪ್ರವೇಶ ಪರೀಕ್ಷೆ ತಯಾರಿ ಸಾಧ್ಯವಾಗುವಂತೆ ಮಾಡಿದವು. ಇಂದು, ಈ ಕ್ಷೇತ್ರ ಎಷ್ಟರ ಮಟ್ಟಿಗೆ ಬೆಳೆದಿದೆಯೆಂದರೆ, ಹೈಸ್ಕೂಲ್‌ ದೆಸೆಯಿಂದಲೇ ಯಾವ ಉನ್ನತ ವ್ಯಾಸಂಗಕ್ಕೆ ಮತ್ತು ಉತ್ಕೃಷ್ಟ ವಿಶ್ವವಿದ್ಯಾಲಯಕ್ಕೆ ಅನುಗುಣವಾದ ತಯಾರಿ ನಡೆಸಬೇಕು ಎಂಬುದನ್ನು ವಿದ್ಯಾರ್ಥಿಯ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕನಾಗಿ ನಿರ್ಧರಿಸಿ, ಅವರು ಅಲ್ಲಿ ಪ್ರವೇಶ ಪಡೆಯುವವರೆಗೂ ಕೈಹಿಡಿದು ತರಬೇತಿ ನೀಡುವ ಯೂನಿವೆರೈಟಿ ಮತ್ತು ಯೂನಿರಿಲೈನಂತಹ ಆಧುನಿಕ ಆನ್‌ಲೈನ್‌ ಸಂಸ್ಥೆಗಳಿವೆ. ವಿದ್ಯಾರ್ಥಿಗಳ ಭವಿಷ್ಯರೇಖೆ ಬದಲಿಸುತ್ತಿವೆ!

ನಿರಂತರ ಕಲಿಕೆ
ಒಮ್ಮೆ ಶಿಕ್ಷಣ ಮುಗಿಸಿ ಕೆಲಸಕ್ಕೆ ಸೇರಿದರೆ ಮತ್ತೆಂದೂ ಓದು-ವಿದ್ಯೆಯ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂಬಂತಿದ್ದುದು ಬದಲಾಗಿ ಉದ್ಯೋಗಕ್ಕೆ ಬೇಕಾದ ಕೌಶಲ-ಸಾಮರ್ಥ್ಯಗಳು ಪ್ರಸ್ತುತವಾಗಿರಬೇಕಾದರೆ ಕಲಿಕೆ ನಿರಂತರವಾಗಿರಬೇಕು ಎಂಬಲ್ಲಿಗೆ ಬಂದು ನಿಂತಿದೆ. ಹೀಗಿರುವಾಗ, ಅಂತಹ ನಿರಂತರ ಶಿಕ್ಷಣವನ್ನು ಒದಗಿಸುವ ಜವಾಬ್ದಾರಿಯನ್ನು ಯಾರು ಹೊರಬೇಕು? ಸರ್ಕಾರಗಳಿಗಾದರೋ ಶಾಲಾಕಾಲೇಜಿನ ಪಠ್ಯವನ್ನು ಪ್ರಸ್ತುತವಾಗಿರಿಸುವುದೇ ಕಷ್ಟವಾಗಿದೆ. ಇನ್ನ ಉದ್ಯಮಗಳು ತನ್ನ ಉದ್ಯೋಗಿಗಳಿಗೆ ಶಿಕ್ಷಣ ಕೊಡಿಸುವ ಜವಾಬ್ದಾರಿ ಹೊತ್ತುಕೊಂಡರೆ ಮೂಲೋದ್ದೇಶದಿಂದ ದೂರಸರಿದಂತಾಗುತ್ತದೆ. ಇಂತಹ ಸಂದರ್ಭದಲ್ಲಿ ಗ್ರೇಟ್‌ ಲರ್ನಿಂಗ್‌ ಮತ್ತು ಸಿಂಪ್ಲಿಲರ್ನ್‌ನಂತಹ ನವೋದ್ಯಮಗಳು ಸಹಾಯಕ್ಕೆ ಬಂದವು. ಆ ಹೊತ್ತಿಗೆ ಪ್ರಸ್ತುತವಾದ, ಟ್ರೆಂಡ್‌ನಲ್ಲಿರುವ ತಂತ್ರಜ್ಞಾನದ ಕೋರ್ಸ್‌ಗಳನ್ನು ಆನ್‌ಲೈನ್‌ ಮೂಲಕ ಊಡಿಸಿದವು. ಕೆಲಸಕ್ಕೆ ಚ್ಯುತಿ ಬಾರದಂತೆ, ಕಲಿಕೆಯೂ ನಿರಂತರವಾಗಿರುವಂತೆ ನೋಡಿಕೊಂಡವು. ಈಗ, ಇಂತಹ upskilling ಸಂಸ್ಥೆಗಳು ಕೇವಲ ಸಾಫ್ಟ್‌ವೇರ್‌ ಮತ್ತು ಮ್ಯಾನೇಜ್‌ಮೆಂಟ್‌ನಂತಹ ವೃತ್ತಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಅನೇಕ ವೃತ್ತಿವಲಯಗಳಲ್ಲಿ ಕಾಣಬಹುದಾಗಿದೆ.

ಪಠ್ಯದ ಆನ್‌ಲೈನ್‌ ಕಲಿಕೆ ‌
“ಒಬ್ಬೊಬ್ಬರ ಕಲಿಕೆಯ ವೇಗ ಒಂದೊಂದು ತರಹ ಇರುತ್ತದೆ. ಆದ್ದರಿಂದಲೇ ಶಾಲೆಯಲ್ಲಿ ಹೇಳಿಕೊಡುವ ಪಾಠ ಅನೇಕರಿಗೆ ಅರ್ಥವಾಗುವುದಿಲ್ಲ ಅಥವ ಹಲವರಿಗೆ ಬೋರ್‌ ಆಗುತ್ತದೆ. ಶಿಕ್ಷಣವನ್ನು ಆಸಕ್ತಿದಾಯಕವಾಗಿಸುವುದು ಮತ್ತು ಅವರವರ ವೇಗಕ್ಕೂ ಅನುಕೂಲಕ್ಕೂ ತಕ್ಕಂತೆ ಕಲಿಯುವಂತೆ ಮಾಡಲಿದೆ ಬೈಜೂಸ್‌” ಎಂದಿದ್ದರು ಅಪ್ರತಿಮ ಶಿಕ್ಷಕ / ಕೋಚ್‌ ಮತ್ತು ತಮ್ಮದೇ ಹೆಸರಿನ ಬೈಜೂಸ್‌ನ ಸ್ಥಾಪಕ ಬೈಜು ರವೀಂದ್ರನ್.‌
ಇಂದು, ಬೈಜೂಸ್‌ ಎಂಬತ್ತು ಸಾವಿರ ಕೋಟಿಗೂ ಹೆಚ್ಚು ಬೆಲೆಬಾಳುವ ನವೋದ್ಯಮ. ಅದಕ್ಕೆ ಕಾರಣ ಕ್ಲಿಷ್ಟ ಗಣಿತ ಮತ್ತು ವಿಜ್ಞಾನದ ಪಾಠಗಳನ್ನು ಸಾಮಾನ್ಯ ವಿದ್ಯಾರ್ಥಿಗಳಿಗೆ ಅರ್ಥವಾಗುವ ಹಾಗೆ, ಆಸಕ್ತಿ ಹುಟ್ಟಿಸುವ ರೀತಿಯಲ್ಲಿ ಹೇಳಿಕೊಟ್ಟದ್ದು. ವೇದಾಂತು, ಕ್ಯೂಮ್ಯಾಥ್‌ ಮುಂತಾದ ಕಂಪನಿಗಳು ಕೂಡ ಇ-ಕಲಿಕೆಯಲ್ಲಿ ಮಹತ್ತರ ಕೆಲಸ ಮಾಡಿವೆ. ಇವುಗಳ ಬಗ್ಗೆ ಮಾತನಾಡುವಾಗ ಶಾಲಾಕೊಠಡಿಯೊಳಕ್ಕೆ ಡಿವೈಸ್‌ಗಳನ್ನು ತಂದು ಶಿಕ್ಷಣವನ್ನು ಹೈಬ್ರಿಡ್‌ ಮಾಡಿದ ಎಜುಟರ್‌ ಮತ್ತು ವಿಶ್ವವಿದ್ಯಾಲಯಗಳ ದೂರಶಿಕ್ಷಣ ಕೋರ್ಸ್‌ಗಳನ್ನು ಆನ್‌ಲೈನ್‌ ಮೂಲಕ ದೇಶಾದ್ಯಂತ ತಲುಪಿಸಿದ ಸ್ಕೂಲ್‌ಗುರು ಎಂಬೆರೆಡು ನವೋದ್ಯಮಗಳ ಪಾತ್ರವನ್ನೂ ಸ್ಮರಿಸಬೇಕು.

ಪಠ್ಯೇತರ ಕಲಿಕೆ
ಓದಿನ ಜೊತೆಗೆ ಆಟವೂ ಬೇಕು. ಆದರೆ, ಯಾವ ವಯಸ್ಸಿನ ಮಕ್ಕಳು ಯಾವ ಆಟ ಅಡಬೇಕು? ಮೈದಾನಗಳ ಕೊರತೆ ಇರುವೆಡೆ ಪಿಟಿ ಪೀರಿಯಡ್‌ಗಳನ್ನು ನಿರ್ವಹಿಸುವುದು ಹೇಗೆ? ಬುದ್ಧಿ ಮತ್ತು ದೈಹಿಕ ಬೆಳವಣಿಗೆಗೆ ಅನುಗುಣವಾಗಿ ಆಟದ ಪಠ್ಯಕ್ರಮ ರೂಪಿಸಿ, ಅದನ್ನು ನಿರ್ವಹಿಸುವ ಜವಾಬ್ದಾರಿ ಹೊತ್ತದ್ದು ೧೩ ವರ್ಷದ ಹಿಂದೆ ಸೌಮಿಲ್‌ ಮಜುಂದಾರ್‌ ಪ್ರಾರಂಬಿಸಿದ ಎಜುಸ್ಪೋರ್ಟ್ಸ್‌ ಎಂಬ ನವೋದ್ಯಮ. ಶಾಲೆಗಳ ದೈಹಿಕ ಶಿಕ್ಷಣ ಪಠ್ಯಕ್ರಮವನ್ನು ಇವರಿಗೆ ಹೊರಗುತ್ತಿಗೆ ನೀಡಿದರೆ – ದೈಹಿಕ ಶಿಕ್ಷಕರನ್ನು ನೇಮಿಸುವುದರಿಂದ ಹಿಡಿದು, ಆಟಗಳ ಮೂಲಕ ಮಗುವಿನ ಬೆಳವಣಿಗೆಯ ರಿಪೋರ್ಟ್‌ ನೀಡುವುದರವರೆಗೆ – ಮಿಕ್ಕಿದ್ದೆಲ್ಲವನ್ನೂ ಇವರೇ ನೋಡಿಕೊಳ್ಳುತ್ತಾರೆ. ಇಂದು ಪಠ್ಯೇತರ ಕಲಿಕೆ ಆಟೋಟಗಳನ್ನೂ ಮೀರಿದೆ. ಮಕ್ಕಳಿಗೆ ಕೋಡಿಂಗ್‌ ಮೂಲಕ ಪಾಠ ಕಲಿಸುವ ವೈಟ್‌ಹ್ಯಾಟ್‌, ಕ್ಯಾಂಪ್‌ಕೆ೧೨, ಸ್ಟೇಕ್ಯೂರಿಯಸ್‌ನಂತಹ ನವೋದ್ಯಮಗಳು, ಪಠ್ಯೇತರ ಚಟುವಟಿಕೆಯ ಮೂಲಕ ಮಕ್ಕಳಲ್ಲಿ ಸೃಜನಶೀಲತೆಯ ಬೀಜ ಬಿತ್ತುವ ಯುಏಬಲ್ ನಂತಹ ನವೋದ್ಯಮಗಳು ಈಗೀಗ ಪ್ರವರ್ಧಮಾನಕ್ಕೆ ಬರುತ್ತಿವೆ.
ಒಟ್ಟಿನಲ್ಲಿ, ಸರ್ಕಾರ ರೂಪಿಸಿದ ವ್ಯವಸ್ಥೆ ಜಡವಾದಾಗಲೂ, ಹಳತಾದಾಗಲೂ ಖಾಸಗಿಯವರು ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾದ ಶಿಕ್ಷಣವನ್ನು ನೀಡುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ಕಲ್ಯಾಣ ಸರ್ಕಾರಕ್ಕೆ ʼಸರ್ವರಿಗೂ ಶಿಕ್ಷಣ ನೀಡುವುದುʼ ತಾನು ನಿರ್ವಹಿಸಬೇಕಾದ ಆದ್ಯ ಕರ್ತವ್ಯಗಳಲ್ಲೊಂದು. ಆದರೆ ಖಾಸಗಿಯವರಿಗೆ ಅದು ಉದ್ಯಮ. ಉದ್ಯಮ ಸಾಮಾನ್ಯವಾಗಿ ತನ್ನ ಗ್ರಾಹಕನ ಅವಶ್ಯಕತೆ ಮತ್ತು ಬೇಕುಗಳಿಗೆ ಅನುಗುಣವಾಗಿ ತನ್ನ ಉತ್ಪನ್ನ / ಸೇವೆಯನ್ನು ರೂಪಿಸಿಕೊಳ್ಳುತ್ತದೆ. ಕಳೆದೆರೆಡು ದಶಕಗಳಲ್ಲಿ ನಮ್ಮ ಶಿಕ್ಷಣದ ವಿಷಯದ ವಿಷಯದಲ್ಲೂ ಹಾಗೆಯೇ ಆಗಿದೆ. ಸರ್ಕಾರಗಳಿಗೆ ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿರುವ ನವೋದ್ಯಮಗಳಿಂದ ಕಲಿಯಬೇಕಿರುವುದು ಸಾಕಷ್ಟಿದೆ. ಅವರು ಹಾಕಿಕೊಟ್ಟಿರುವ ಅಡಿಪಾಯವನ್ನು ಸದ್ಬಳಕೆ ಮಾಡಿಕೊಂಡು, ಖಾಸಗಿಯವರನ್ನೂ ಇದರಲ್ಲಿ ʼಪಾಲುದಾರʼರನ್ನಾಗಿಸಿಕೊಂಡು, ಹೊಸ ಶಿಕ್ಷಣ ನೀತಿಯನ್ನು ಸಕ್ರಿಯವಾಗಿ ಜಾರಿಗೆ ತರಬೇಕಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top