ಯುಪಿಎಸ್‌ಸಿಯಲ್ಲಿ ಐಚ್ಛಿಕ ವಿಷಯದ ಆಯ್ಕೆ ಹೇಗೆ?

– ಎಚ್.ಎಸ್. ಕೀರ್ತನಾ.
ಯುಪಿಎಸ್‌ಸಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಯಶಸ್ಸು ಪಡೆಯಲು ಐಚ್ಛಿಕ ವಿಷಯಗಳ ಆಯ್ಕೆಯ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕೆಂದು ಸಲಹೆ ನೀಡಲಾಗುತ್ತದೆ. ಹಾಗಾದರೆ ಐಚ್ಛಿಕ ವಿಷಯ ಆಯ್ಕೆ ಮಾಡಿಕೊಳ್ಳುವಾಗ ಯಾವ ಮಾನದಂಡ ಅನುಸರಿಸಬೇಕು ಎನ್ನುವುದರ ಬಗ್ಗೆ ಈ ಬಾರಿಯ ನಾಗರಿಕ ಸೇವಾ ಪರೀಕ್ಷೆಯಲ್ಲಿ 167ನೇ ರಾರಯಂಕ್ ಪಡೆದಿರುವ ಬೆಂಗಳೂರಿನ ಎಚ್.ಎಸ್.ಕೀರ್ತನಾ ಇಲ್ಲಿ ಮಾಹಿತಿ ನೀಡಿದ್ದಾರೆ.
ಯುಪಿಎಸ್‌ಸಿಯಲ್ಲಿ ಜನರಲ್ ಸ್ಟಡೀಸ್ ತುಂಬಾ ಓದುವುದಿರುತ್ತದೆ. ಹಾಗಾಗಿ ಐಚ್ಛಿಕ ವಿಷಯದ ಓದು ರಿಲ್ಯಾಕ್ಸೇಷನ್ ಕೊಡುವ ಹಾಗಿರಬೇಕು. ಒಟ್ಟು 26 ಐಚ್ಛಿಕ ವಿಷಯಗಳಿರುತ್ತವೆ. ಇದರಲ್ಲಿ ಯಾವುದಾದರೂ ಒಂದು ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯ ಪರೀಕ್ಷೆಯಲ್ಲಿ 250 ಅಂಕದ ಎರಡು ಪತ್ರಿಕೆಗಳಿರುತ್ತವೆ.

ಆಸಕ್ತಿ ಇರಬೇಕು
ಐಚ್ಛಿಕ ವಿಷಯವನ್ನು ಆಯ್ಕೆ ಮಾಡಿಕೊಳ್ಳುವಾಗ ಆ ವಿಷಯದಲ್ಲಿ ನಿಮಗೆ ಆಸಕ್ತಿ ಇರಬೇಕು. ಆಸಕ್ತಿ ಇಲ್ಲದ ವಿಷಯ ಆಯ್ಕೆ ಮಾಡಿಕೊಂಡರೆ ಓದು ಬೇಸರ ತರಿಸುತ್ತದೆ. ನೀವು ಆಯ್ಕೆ ಮಾಡಿಕೊಳ್ಳುವ ವಿಷಯ ಇದುವರೆಗಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಯಶಸ್ಸಿಗೆ ಹೇಗೆ ಕಾರಣವಾಗಿದೆ, ಆ ವಿಷಯ ತೆಗೆದುಕೊಂಡ ಎಷ್ಟು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಇತ್ಯಾದಿ ಅಂಶಗಳನ್ನು ಅವಲೋಕನ ಮಾಡಬೇಕು.

ಕನಿಷ್ಠ ನಾಲ್ಕು ವಿಷಯ ಓದಿ
ಐಚ್ಛಿಕ ವಿಷಯ ತೆಗೆದುಕೊಳ್ಳುವ ಮುನ್ನ, ಯುಪಿಎಸ್‌ಸಿಯ 26 ಐಚ್ಛಿಕ ವಿಷಯಗಳಲ್ಲಿ ನಿಮ್ಮಿಷ್ಟದ ನಾಲ್ಕು ಐಚ್ಛಿಕ ವಿಷಯಗಳ ಪಠ್ಯಕ್ರಮವನ್ನು ಒಮ್ಮೆ ಓದಿಕೊಳ್ಳಿ. ಯಾವುದು ಸುಲಭ, ಯಾವುದು ಕಷ್ಟ ಎಂದು ಅಲೋಚಿಸಿ. ಆನಂತರ ವಿಷಯ ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಆಯ್ಕೆ ಮಾಡಿಕೊಂಡ ವಿಷಯದಲ್ಲಿ ಕೋಚಿಂಗ್ ಇಲ್ಲದೆ ನಾನು ಎಷ್ಟು ಯಶಸ್ಸು ಪಡೆಯಬಲ್ಲೆ. ಕೋಚಿಂಗ್ ಎಷ್ಟು ಅವಶ್ಯಕವಿದೆ ಎನ್ನವುದನ್ನೂ ಗಮನಿಸಿ. ಕೆಲವು ವಿಷಯಗಳಿಗೆ ಕೋಚಿಂಗ್ ತುಂಬಾ ಅಗತ್ಯ.

ಸ್ಟಡಿ ಮೆಟಿರಿಯಲ್ ಲಭ್ಯತೆ
ಆಯ್ಕೆ ಮಾಡಿಕೊಂಡ ಐಚ್ಛಿಕ ವಿಷಯಕ್ಕೆ ಸಾಕಷ್ಟು ಸ್ಟಡಿ ಮೆಟಿರಿಯಲ್ ಹಾಗೂ ಮಾರ್ಗದರ್ಶಕರು ಬೇಕಾಗುತ್ತಾರೆ. ಸ್ಟಡಿ ಮೆಟಿರಿಯಲ್ ಹಾಗೂ ಮಾರ್ಗದರ್ಶಕರು ಇರದಿದ್ದರೆ ಆ ವಿಷಯವನ್ನು ಆಯ್ಕೆ ಮಾಡಿಕೊಳ್ಳುವಾಗ ಜಾಗ್ರತೆ ವಹಿಸಿ. ನೀವು ಪದವಿಯಲ್ಲಿ ಓದಿರುವ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದ್ದರೆ, ಅದನ್ನೂ ಪರಿಶೀಲಿಸಬಹುದು. ಏಕೆಂದರೆ ಇದರಿಂದ ಆ ವಿಷಯದ ಮೇಲೆ ಬೇಗನೆ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ.

ಗುಂಪು ಚರ್ಚೆಗೆ ಅವಕಾಶವಿರಲಿ
ನೀವು ಆಯ್ಕೆ ಮಾಡಿಕೊಂಡ ಐಚ್ಛಿಕ ವಿಷಯದ ಬಗ್ಗೆ ತಿಳಿದುಕೊಂಡಿರುವ ಸಂಪನ್ಮೂಲ ವ್ಯಕ್ತಿಗಳು (ಗೆಳೆಯರು, ಸಂಬಂಧಿಕರು, ಶಿಕ್ಷಕರು) ನಿಮಗೆ ಚರ್ಚೆಗೆ ಸಿಗುವಂತಿರಬೇಕು. ಚರ್ಚೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಗುಂಪು ಚರ್ಚೆ ಇಲ್ಲದೆ ಏಕಾಂಗಿಯಾಗಿ ಅಧ್ಯಯನ ಮಾಡುವುದು ಅಷ್ಟೊಂದು ಪರಿಣಾಮಕಾರಿಯಲ್ಲ.

ಸಾಮಾನ್ಯವಾಗಿ ಆಯ್ಕೆ ಮಾಡುವ ಐಚ್ಛಿಕ ವಿಷಯಗಳು
1. ಭೂಗೋಳ, 2. ಸಾರ್ವಜನಿಕ ಆಡಳಿತ, 3. ಸಮಾಜಶಾಸ್ತ್ರ
ಹೆಚ್ಚು ಸಕ್ಸೆಸ್ ರೇಟ್ ಇರುವ ಐಚ್ಛಿಕ ವಿಷಯಗಳು
1. ಕಾನೂನು 2. ಅರ್ಥಶಾಸ್ತ್ರ.

ಓದುವಾಗ ಯುಪಿಎಸ್‌ಸಿ ಪರೀಕ್ಷೆ ಬರೆಯುವುದಕ್ಕಾಗಿಯೇ ಓದುತ್ತಿದ್ದೇನೆ ಎನ್ನುವುದನ್ನು ಬಿಟ್ಟು ಬಿಡಿ. ವಿಷಯವೊಂದನ್ನು ತಪ್ಪು ಮಾಹಿತಿ ಇಲ್ಲದೆ ತಿಳಿದುಕೊಳ್ಳುವುದಕ್ಕೆ ಓದುತ್ತಿದ್ದೇನೆ ಎಂದುಕೊಂಡು ಓದಿ. ನಿಮ್ಮ ಸುತ್ತಮುತ್ತಲಿನ ವಿಷಯವನ್ನು ಕುತೂಹಲದಿಂದ ಗ್ರಹಿಸಿ, ಆ ಬಗ್ಗೆ ಅಧ್ಯಯನ ಮಾಡುತ್ತಾ ಹೋಗಿ. ನಾನು ಇಂದು ಹೊಸ ವಿಷಯ ಕಲಿತೆ ಎನ್ನುವ ಹುಮ್ಮಸ್ಸು ಇನ್ನಷ್ಟು ಓದುವುದಕ್ಕೆ ಪ್ರೇರೇಪಿಸುತ್ತದೆ. ನಾನು ಮಾಡುತ್ತಿರುವುದು ಒಳ್ಳೆಯ ಕೆಲಸ, ಸ್ವಲ್ಪ ತಡವಾಗಿಯಾದರೂ ಉತ್ತಮ ಫಲಿತಾಂಶ ಸಿಗುತ್ತದೆ ಎನ್ನುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಆಸಕ್ತಿ ಇದ್ದಿದ್ದೇ ಆದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರೂ ಇದರಲ್ಲಿ ಯಶಸ್ಸನ್ನು ಗಳಿಸಬಹುದು.
– ಎಚ್.ಎಸ್. ಕೀರ್ತನಾ, 167ನೇ ರಾರಯಂಕ್

ಈ ತಪ್ಪು ಮಾಡಬೇಡಿ

ಯಾರದೋ ಶಿಫಾರಸಿಗೆ ತಲೆಬಾಗಿ, ನಿಮಗೆ ಆಸಕ್ತಿ ಇಲ್ಲದಿರುವ ವಿಷಯ ಆಯ್ಕೆ ಮಾಡಿಕೊಳ್ಳುವುದು.
ಈ ಹಿಂದಿನ ವರ್ಷಗಳಲ್ಲಿ ಹೆಚ್ಚು ರಾರಯಂಕ್ ಪಡೆದವರ ಐಚ್ಛಿಕ ವಿಷಯವನ್ನು ನೋಡಿ ಅದನ್ನೇ ಆಯ್ಕೆ ಮಾಡಿಕೊಳ್ಳುವುದು. ರಾರಯಂಕ್ ಪಡೆದವರ ಅನುಭವ ಕೇಳಿ ಆಯ್ಕೆ ಮಾಡಿಕೊಳ್ಳುವುದು. ಕೋಚಿಂಗ್ ಸೆಂಟರ್ ಅಭಿಪ್ರಾಯದ ಮೇರೆಗೆ ವಿಷಯ ಆಯ್ಕೆ ಮಾಡಿಕೊಳ್ಳುವುದು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top