ಹೋಟೆಲ್ ಓಪನ್‌ಗೆ ಕ್ಷಣಗಣನೆ

– ವಿಮಾನ, ರೈಲು ಸಂಚಾರದ ಆರಂಭದ ಹಿನ್ನೆಲೆಯಲ್ಲಿ ಆಹಾರ, ವಸತಿ ವ್ಯವಸ್ಥೆ ಅನಿವಾರ್ಯ – ಶೀಘ್ರವೇ ದೇಗುಲಗಳೂ ತೆರೆಯುವ ಸಾಧ್ಯತೆ | ಜನಜೀವನ ವೇಗವಾಗಿ ಮರಳಿ ಹಳಿಗೆ.

– ಎಚ್.ಪಿ.ಪುಣ್ಯವತಿ,  ಬೆಂಗಳೂರು. 

ಕೊರೊನಾ ನಡುವೆಯೇ ಬದುಕು ಕಟ್ಟಿಕೊಳ್ಳುವುದು ಅನಿವಾರ್ಯ ಎಂಬ ಸಂದೇಶಕ್ಕೆ ಪೂರಕವಾಗಿ ಜನಜೀವನ ವೇಗವಾಗಿ ಮರಳಿ ಹಳಿಗೆ ಬರುತ್ತಿದೆ. ಇದರ ಭಾಗವಾಗಿ, ರಾಜ್ಯದಲ್ಲಿ ಹೋಟೆಲ್‌ಗಳ ಮರು ಆರಂಭಕ್ಕೂ ಕ್ಷಣಗಣನೆ ಆರಂಭವಾಗಿದೆ. ಜತೆಗೆ ಕೆಲವೇ ದಿನಗಳಲ್ಲಿ ದೇವಾಲಯಗಳ ಬಾಗಿಲುಗಳೂ  ತೆರೆಯಲಿವೆ. ಲಾಕ್‌ಡೌನ್‌ ಸಡಿಲಿಕೆ ನಂತರ ವಾಣಿಜ್ಯ ಚಟುವಟಿಕೆಗಳು ಗರಿಗೆದರಿವೆ. ಕೈಗಾರಿಕೆಗಳ ಶಟರ್ ಕೂಡಾ ಓಪನ್ ಆಗಿದೆ. ಬಸ್, ರೈಲು ಸಂಚಾರವೂ ಆರಂಭಗೊಂಡಿದೆ. ಸೋಮವಾರದಿಂದ ವಿಮಾನವೂ ಹಾರಾಡಲಿದೆ. ಈ ಸನ್ನಿವೇಶದಲ್ಲಿ ನಾನಾ ಕಡೆಯಿಂದ ಆಗಮಿಸುವ ಸಾವಿರಾರು ಮಂದಿಗೆ ಅತ್ಯಂತ ಅಗತ್ಯವಾದ ಆಹಾರ ಮತ್ತು ವಸತಿಗೆ ಸರಕಾರ ವ್ಯವಸ್ಥೆ ಮಾಡಿಕೊಡಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಸರಕಾರ ಹೋಟೆಲ್‌ಗಳ ಮರು ಆರಂಭಕ್ಕೆ ಕೆಲವೇ ದಿನದಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ. ರಾಜ್ಯದಲ್ಲಿ ಎಲ್ಲ ಉದ್ದಿಮೆಗಳು ಕಾರ್ಯಾರಂಭ ಮಾಡಿದ್ದು, ಊರಿಗೆ ಹೋಗಿದ್ದ ಉದ್ಯೋಗಿಗಳು, ಕಾರ್ಮಿಕರು ಮರಳಿ ಬೆಂಗಳೂರಿಗೆ ಬರುತ್ತಿದ್ದಾರೆ. ಊಟ, ತಿಂಡಿಗೆ ಹೋಟೆಲ್ ಮೇಲೆಯೇ ಅವಲಂಬಿತರು ಸಾಕಷ್ಟು ಮಂದಿ ಇದ್ದಾರೆ. ಹೀಗಾಗಿ ಬಂದವರಿಗೆ ವ್ಯವಸ್ಥೆ ಮಾಡುವುದರ ಜತೆಗೆ ಸ್ಥಳೀಯವಾಗಿ ವ್ಯವಹಾರ ವರ್ಧನೆಗೆ ಹೋಟೆಲ್, ರೆಸ್ಟೋರೆಂಟ್‌ಗಳ ಲಾಕ್ ಓಪನ್ ಮಾಡುವುದು ಅಗತ್ಯವಾಗಿದೆ ಎನ್ನುವುದು ಸರಕಾರಕ್ಕೆ ಮನವರಿಕೆಯಾಗಿದೆ.

ಉದ್ಯಮದಿಂದಲೂ ಮನವಿ : ಈ ನಡುವೆ ಹೋಟೆಲ್ ಮಾಲೀಕರ ಸಂಘ ಮತ್ತು ಕಾರ್ಮಿಕರು ಕೂಡಾ ಅನುಮತಿಗಾಗಿ ಒತ್ತಡ ಹೇರುತ್ತಿದ್ದಾರೆ. ಎಲ್ಲ ವ್ಯವಹಾರಗಳಿಗೆ ಅವಕಾಶ ಕೊಟ್ಟಿರುವಾಗ ಹೋಟೆಲ್ ಉದ್ಯಮಕ್ಕೆ ಅನ್ಯಾಯ ಮಾಡುತ್ತಿರುವುದು ಸರಿಯಲ್ಲ ಎಂದು ಮಾಲೀಕರ ಸಂಘ ಹೇಳುತ್ತಿದೆ. ತಕ್ಷಣವೇ ಉದ್ಯಮ ತೆರೆಯದಿದ್ದರೆ ಲಕ್ಷಾಂತರ ಕಾರ್ಮಿಕರು, ಮಾಲೀಕರು ಹಾಗೂ ಅವರ ಕುಟುಂಬದವರು ಈಗ ಬೀದಿಗೆ ಬೀಳುವ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಪಾರ್ಸೆಲ್ ನಿಲ್ಲಿಸುವ ಎಚ್ಚರಿಕೆ: ಪ್ರಸಕ್ತ ಹೋಟೆಲ್‌ಗಳಿಗೆ ಪಾರ್ಸೆಲ್ ನೀಡಲಷ್ಟೇ ಅವಕಾಶ ನೀಡಲಾಗಿದೆ. ‘‘ಊಟ ಪಾರ್ಸೆಲ್ ನೀಡುವುದು ಲಾಭದಾಯಕವಲ್ಲ. ನಮಗೆ ನಷ್ಟವಾಗುತ್ತದೆ. ಹೋಟೆಲ್‌ಗೆ ಬಂದು ತಿಂದು ಹೋಗುವುದರ ಜೊತೆಗೆ ಪಾರ್ಸೆಲ್ ನೀಡಿದರೆ ಅದರಿಂದ ಅನುಕೂಲವಾಗುತ್ತದೆ. ಎಲ್ಲದಕ್ಕೂ ರುಬ್ಬುವವರು, ತರಕಾರಿ ಹಚ್ಚುವವರು, ಅಡುಗೆ ಮಾಡುವವರು, ಸ್ವಚ್ಛಗೊಳಿಸುವವರು ಹೀಗಾಗಿ ಒಂದು ಊಟಕ್ಕಾಗಲಿ, ನೂರು ಊಟಕ್ಕಾಗಲಿ ಅಷ್ಟೇ ಖರ್ಚು ಬರುತ್ತದೆ. ಹೀಗಿರುವಾಗ ನಾವು ಬೆರಳೆಣಿಕೆ ಪಾರ್ಸೆಲ್ ಊಟ ಕಟ್ಟುತ್ತಾ ಎಷ್ಟೂ ಅಂತ ನಷ್ಟ ಮಾಡಿಕೊಳ್ಳೋದು? ನಮಗೂ ಸಾಕಾಗಿದೆ. ಹೋಟೆಲ್ ತೆರೆಯಲು ಅನುಮತಿ ಕೊಡದಿದ್ದರೆ ಪಾರ್ಸೆಲ್ ಸೇವೆಯನ್ನೂ ನಿಲ್ಲಿಸುತ್ತೇವೆ,’’ ಎನ್ನುತ್ತಾರೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ  ಚಂದ್ರಶೇಖರ ಹೆಬ್ಬಾರ್.

ಓಪನ್‌ನ ತುರ್ತು ಏನು? ರಾಜ್ಯದ 50000 ಹೋಟೆಲ್‌ಗಳಲ್ಲಿ ಒಟ್ಟು 2 ಲಕ್ಷ ಕಾರ್ಮಿಕರಿದ್ದಾರೆ. ಅವರಿಗೆ 2 ತಿಂಗಳಿನಿಂದ ಸಂಬಳ ಆಗಿಲ್ಲ. 75% ಕಾರ್ಮಿಕರು ಊರು ಸೇರಿದ್ದಾರೆ. ಉಳಿದವರಿಗೆ ಮಾಲೀಕರೇ ಊಟ ಹಾಕುತ್ತಿದ್ದಾರೆ. ಹೋಟೆಲ್ ಕಾರ್ಮಿಕರಿಗೂ ಸರಕಾರ ಪರಿಹಾರ ನೀಡಬೇಕು ಎಂಬ ಬೇಡಿಕೆ ಜೋರಾಗಿದೆ.

ಮೇ 26ಕ್ಕೆ ಸಿಎಂ ಜತೆ ಸಭೆ:  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕಳೆದ ವಾರ ಭೇಟಿ ಮಾಡಿದ್ದಾಗ ಮೂರು ದಿನ ಸಮಯ ಕೇಳಿದ್ದರು. ಅದರಂತೆ ಈಗ ಮೇ 26ಕ್ಕೆ ಸಭೆ ಕರೆಯುವ ನಿರೀಕ್ಷೆ ಇದೆ. ಸಿಎಂ ಭೇಟಿವರೆಗೂ ಕಾಯುತ್ತೇವೆ. ನಂತರ ನಮ್ಮ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ  ಎಂದು ಚಂದ್ರಶೇಖರ ಹೆಬ್ಬಾರ್ ತಿಳಿಸಿದರು.

ವಾರದೊಳಗೆ ದೇವರ ದರ್ಶನಕ್ಕೆ ಅವಕಾಶ? :  ರಾಜ್ಯದಲ್ಲಿ ದೇವಾಲಯಗಳನ್ನೂ ತೆರೆಯಬೇಕೆಂಬ ಆಗ್ರಹವೂ ಜೋರಾಗಿದ್ದು, ಈ ವಾರದ ಅಂತ್ಯದೊಳಗೆ ಸರಕಾರ ಅನುಮತಿ ನೀಡುವ ಸಾಧ್ಯತೆ ಇದೆ. ಮೇ 26ರಿಂದ ಆನ್‌ಲೈನ್‌ ದರ್ಶನ ಮತ್ತು ಆನ್‌ಲೈನ್‌ ಪೂಜೆಗೆ ಸರಕಾರ ಅವಕಾಶ ಮಾಡಿಕೊಟ್ಟಿದೆ. ಇದು ದೇವಾಲಯ ತೆರೆಯುವುದಕ್ಕೆ ಮುನ್ನುಡಿ ಎಂದು ಹೇಳಲಾಗುತ್ತಿದೆ. ಕೊರೊನಾ ಆತಂಕದಲ್ಲಿರುವ ಜನರೂ ದೇವರ ದರ್ಶನದ ಹಪಹಪಿಯಲ್ಲಿದ್ದಾರೆ. ಜತೆಗೆ ಲಕ್ಷಾಂತರ ಅರ್ಚಕರು, ಸಿಬ್ಬಂದಿಯೂ ಕಾಯುತ್ತಿದ್ದಾರೆ.

ಓಪನ್‌ನ ತುರ್ತು ಏನು? 

– ಎಲ್ಲ ವ್ಯವಹಾರಗಳು, ಬಸ್, ರೈಲು ಸಂಚಾರ ಮರು ಆರಂಭಗೊಂಡಿರುವುದರಿಂದ ಹೋಟೆಲ್, ತಿಂಡಿ ಊಟದ ಅಗತ್ಯ ಹೆಚ್ಚಾಗಿದೆ

– ಬಸ್ ಸಂಚಾರದ ವೇಳೆ ಮಾರ್ಗ ಮಧ್ಯೆ ಆಹಾರದ ವ್ಯವಸ್ಥೆ ಇಲ್ಲದೆ ಸಮಸ್ಯೆ

– ಸಂಚಾರ ವ್ಯವಸ್ಥೆ  ಆರಂಭವಾಗಿದ್ದರಿಂದ ಹೊರ ಪ್ರದೇಶದಿಂದ ಬರುವ ಜನರು ಹೋಟೆಲ್‌ನ್ನೇ ಅವಲಂಬಿಸಬೇಕಾಗಿದೆ

– ಸೋಮವಾರದಿಂದ ವಿಮಾನ ಸಂಚಾರವೂ ಶುರುವಾಗುತ್ತದೆ, ಹೊರಗಿನಿಂದ ಬರುವವವರು ಉಳಿಯುವುದು ಎಲ್ಲಿ?

– 50 ಸಾವಿರ ಪೈಕಿ 2 ಸಾವಿರ ಹೋಟೆಲ್ ತೆರೆದಿವೆ

– ರಾಜ್ಯಾದ್ಯಂತ ಸುಮಾರು 50 ಸಾವಿರ ಹೋಟೆಲ್‌ಗಳಿದ್ದು,  ಸದ್ಯ 2,500 ಹೋಟೆಲ್‌ಗಳು ಮಾತ್ರ ಪಾರ್ಸೆಲ್ ನೀಡುತ್ತಿವೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top