ಸ್ವ ಪ್ರಯತ್ನಕ್ಕೆ ಅತಿ ದೊಡ್ಡ ಉದಾಹರಣೆ ಎಂದರೆ ಅದು ಹೆಚ್ಚೆನ್ . ಇವತ್ತಿಗೆ ಅವರು ಹುಟ್ಟಿ ಒಂದು ನೂರು ವರ್ಷ .

ವಾದಿರಾಜ ಸಾಮರಸ್ಯ – ಫೇಸ್ ಬುಕ್ ವಾಲ್‌ ನಿಂದ…

School dropout ಹುಡುಗನೊಬ್ಬ ಗೌರಿಬಿದನೂರು ಸಮೀಪದ ಹೊಸೂರಿನಿಂದ ನೆಡೆದು ಬಂದು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ ಸೇರಿ ಅಲ್ಲಿಯೇ ಕಾಲೇಜು ಓದಿ , ಮೇಷ್ಟ್ರಾಗಿ , ಅಮೇರಿಕಾದಲ್ಲಿ ಪಿಹೆಚ್ಡಿ ಮಾಡಿ , ಅದೇ ಕಾಲೇಜಿನಲ್ಲಿ ಪ್ರಿನ್ಸಿಪಾಲಾಗಿ , ವಿಶ್ವವಿದ್ಯಾಲಯದ ಉಪಕುಲಪತಿಯಾಗಿ , ನಿವೃತ್ತಿಯನಂತರ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ , ಕೊನೆಗೆ ಅಧ್ಯಕ್ಷರಾದದ್ದು ವಿಸ್ಮಯದ ಕಥೆ .

ಹೆಚ್ ನರಸಿಂಹಯ್ಯನವರ ಆತ್ಮಕಥೆ – ಹೋರಾಟದ ಹಾದಿ – ಓದಿ ವರ್ಷಗಟ್ಟಳೆ ಅದೇ ಗುಂಗಿನಲ್ಲಿ ಇರುವಂತೆ ಮಾಡಿತ್ತು . ಬೆಂಗಳೂರಿಗೆ ಬಂದಾಗಲೊಮ್ಮೆ ಹೆಚ್ಚೆನ್ ಮೇಷ್ಟ್ರನ್ನ ಹುಡುಕಿಕೊಂಡು ಹೋಗಿದ್ದೆ . ಅವರು ತೋರಿದ ಪ್ರೀತಿ ನನ್ನನ್ನು ಪದೇ ಪದೇ ಅವರಿದ್ದ ನ್ಯಾಷನಲ್ ಕಾಲೇಜಿನ ಹಾಸ್ಟೆಲ್ಲಿಗೆ ಹೋಗುವಂತೆ ಮಾಡಿತು . ಆನಂತರ ನಾನು ಬೆಂಗಳೂರಿಗೆ ಬಂದು ಇರುವಂತಾದದ್ದು ಅವರ ಅಸಂಖ್ಯ ವಿಧ್ಯಾರ್ಥಿಗಳಲ್ಲಿ ನಾನೂ ಒಬ್ಬನೇನೊ ಎನ್ನುವಂತೆ ಮಾಡಿತ್ತು .
ನನ್ನ ಆರೆಸ್ಸೆಸ್ ಹಿನ್ನೆಲೆ ಅವರ ಪ್ರೀತಿಯಲ್ಲಿ ಒಂದಿನಿತು ಕಡಿಮೆ ಮಾಡಲಿಲ್ಲ .
ಅವರೆ ಒಮ್ಮೆ ಹೇಳಿದರು – ‘ ನಿಮ್ಮ ಹೊ ವೆ ಶೇಷಾದ್ರಿ , ನಾನು ಒಟ್ಟಿಗೆ ಓದಿದವರು , ಸೆಂಟ್ರಲ್ ಕಾಲೇಜಿನಲ್ಲಿ ಅವರದ್ದು ಕೆಮಿಸ್ಟ್ರಿ , ನಂದು ಫಿಸಿಕ್ಸು ‘ – ಅಷ್ಟು ಸಾಕಾಯಿತು ಹೆಚ್ಚೆನ್ನವರನ್ನು ಕೇಶವಕೃಪಾಕ್ಕೆ ಕರೆತರಲು …
ದೇಶದುದ್ದಗಲಕ್ಕೆ ಅನುದಿನವೂ ಊರೂರು ತಿರುಗುವ ಶೇಷಾದ್ರಿರವರಿಗೂ ಅವತ್ತು ಹಳೆಯ ಗೆಳೆಯನನ್ನು ಕಾಣುವ ಸಂಭ್ರಮ .
ಅವತ್ತು ಗೆಳೆಯರಿಬ್ಬರ ಭರ್ಜರಿ ಹರಟೆ . ಮಧ್ಯಾಹ್ನದ ಊಟ , ಮುದ್ದೆ – ಸೊಪ್ಪಿನ ಸಾರು . ಹೆಚ್ಚೆನ್ ಖುಷಿಪಟ್ಟರು . ಅಡುಗೆ ಮನೆಗೆ ತೆರಳಿ ಪರಿಚಯ ಮಾಡಿಕೊಂಡರು . ನಾನು ಆಗಾಗ ಊಟಕ್ಕೆ ಬರಬಹುದೇನಪ್ಪ ಎಂದು ಅಡುಗೆಯ ಮಣಿವಣ್ಣನ ಹೆಗಲು ಸವರಿದ್ದರು .

ಮತ್ತೊಂದು ದಿನ ಮೇಷ್ಟ್ರನ್ನ ಕೇಳಿದೆ ‘ ನಿಮ್ಮ ಜೀವನದಲ್ಲಿ ನಿರ್ಣಾಯಕ ಘಳಿಗೆ ಅಂದ್ರೆ ಯಾವುದದು ? ‘
‘ 1942 – ಚಲೇಜಾವ್ ಚಳವಳಿ , ಬಿಎಸ್ಸಿ ಓದ್ತಾ ಇದ್ದೆ , ಮನಸ್ಸಿನಲ್ಲಿ ಹೊಯ್ದಾಟ , ಚಳವಳಿಗೆ ಹೋಗಬೇಕು , ಹೋದರೆ , ಜೈಲು ಸೇರಬೇಕಾಗುತ್ತೆ , ಕ್ಲಾಸು , ಪರೀಕ್ಷೆ ಗೋತಾ . ಮುಂದೆ ಮೇಷ್ಟ್ರು ಆಗುವ ಕನಸಿಗೂ ಕಲ್ಲು ಬೀಳುತ್ತೆ . ಏನಾದರಾಗಲಿ ಎಂದು ಚಳವಳಿಗೆ ಹೋದೆ . ಜೈಲು ಸೇರಿ ವರ್ಷ ಕಳ್ಕೊಂಡೆ . ಆವತ್ತಿನ ನಿರ್ಧಾರ ನನ್ನ ಮಟ್ಟಿಗೆ ಅದು ನಿರ್ಣಾಯಕ ‘ ಹೆಚ್ಚೆನ್ ವಿವರಿಸಿದ್ದರು .
‘ ಯಾವಾಗ ಕಳೆದುಕೊಳ್ಳುವುದನ್ನು ಕಲಿತೆನೋ ಆನಂತರ ಜೀವನದಲ್ಲಿ ದುಃಖ ಸುಳಿಯಲಿಲ್ಲ ! ‘

ಅವತ್ತೊಂದಿನ ಆಗ ಕನ್ನಡಪ್ರಭದಲ್ಲಿದ್ದ ಗೆಳೆಯ ರವಿಪ್ರಕಾಶರವರನ್ನು ಕರೆದುಕೊಂಡು ಮೇಷ್ಟ್ರ ಹತ್ತಿರ ಹೋಗಿದ್ದೆ . ಆಗ ಸೋನಿಯಾ ಪ್ರಧಾನಿಯಾಗೊ ವಿಷಯ ಜೋರು ಚರ್ಚೆಯಲ್ಲಿತ್ತು . ಅದೇ ವಿಷಯವನ್ನು ರವಿಪ್ರಕಾಶ್ ಕೇಳಿದರು . ‘ ನಮ್ಮ ಕಾಲೇಜಿನ ಅಟೆಂಡರ್ ರಾಮಣ್ಣ ಈ ದೇಶದ ಪ್ರಧಾನಿ ಆಗಬಹುದು , ಸೋನಿಯಾ ಆಗಕೂಡದು . ಸ್ವಾತಂತ್ರ್ಯ ದ ಹೋರಾಟ ಮಾಡಿದ್ದಾದರು ಏತಕ್ಕೆ ? ಮತ್ತೆ ಅವರನ್ನೇ ತಂದು ಕೂಡಿಸುವುದಕ್ಕಾ ? ‘ ಮೇಷ್ಟ್ರು ಗುಡುಗಿದ್ದರು .
‘ ಆ ಗಾಂಧಿನೇ ಬೇರೆ – ಈ ಗಾಂಧಿಗಳೇ ಬೇರೆ ‘ ಈ ಸ್ಪಷ್ಟತೆ ಇದ್ದ ಒಬ್ಬನೆ ಗಾಂಧಿವಾದಿ ಅಂದ್ರೆ ಅದು ಹೆಚ್ಚೆನ್ ಮಾತ್ರ .

ಮತ್ತೊಂದ್ಸಲ ಬದುಕಿನ ಸಾರ್ಥಕತೆಯ ಬಗ್ಗೆ ಕೇಳಿದೆ .
‘ ನನ್ನನ್ನ ತುಂಬಾ ಹೊಗಳ್ತಾರಪ್ಪ ಆದರೆ ಯಾರು ಅನುಸರಿಸಲ್ಲ , ಆದರೆ ನಿಮ್ಮಲ್ಲಿ ಹಾಗಲ್ಲ , ನೀವ್ಯಾರು ಶೇಷಾದ್ರಿನ ಹೊಗಳಲ್ಲ , ಅದರೆ ಅನುಸರಿಸುತ್ತೀರ , ಅದೇ ನಿಜವಾದ ಸಾರ್ಥಕತೆ ಅನ್ಸುತ್ತೆ ‘

ದಿನಗಳೆದಂತೆ ಮೇಷ್ಟ್ರು ಸೊರಗಿದರು . ಅವತ್ತು ಸಂಜೆ 7 ಕ್ಕೆ ಹಾಸ್ಟೆಲ್ ಗೆ ಹೋದಾಗ ಮೇಷ್ಟ್ರು ಊಟ ಸಾಗಿತ್ತು . ನಡುಗುತ್ತಿದ್ದ ಕೈನಿಂದಾಗಿ ಚಮಚದಲ್ಲಿ ತಿನ್ನುವುದೂ ಕಷ್ಟವಾಗಿತ್ತು . ಅನ್ನ ಮೈಮೇಲೆ ಬೀಳುತ್ತಿತ್ತು . ನಡುಗುವ ಕೈ ಹಿಡಿದು ಸಹಾಯ ಮಾಡಿದೆ . ‘ ವಯಸ್ಸಾಗಿ ಬಿಟ್ಟರೆ back to childhood ‘ ಹೆಚ್ಚೆನ್ ಸಣ್ಣ ಧ್ವನಿಯಲ್ಲಿ ಹೇಳಿದ್ದರು .

ಕೆಲವೇ ದಿನ ಮೇಷ್ಟ್ರು ಆಸ್ಪತ್ರೆ ಸೇರಿರೋ ಸುದ್ದಿ ಬಂತು . ಅಶೋಕಾ ಪಿಲ್ಲರ್ ಹತ್ತಿರದ ಮಯ್ಯಾ ಆಸ್ಪತ್ರೆ . ಅವರ ಶಿಷ್ಯನದೇ . ICU ನಲ್ಲಿದ್ದ ಮೇಷ್ತ್ರನ್ನ ಕಿಟಿಕಿಯಿಂದ ನೋಡಿದ್ದಷ್ಟೆ .
ಅವತ್ತು ಜನವರಿ 31 , 2005 ಬೆಳಗಿನ ಜಾವ ಸುದ್ದಿ ಬಂತು ‘ ಹೆಚ್ಚೆನ್ ತೀರಿಕೊಂಡರು ‘
ಶೇಷಾದ್ರಿ ವೀಲ್ ಚೇರ್ ನಲ್ಲಿ ಬಂದರು ಗೆಳೆಯನ ಪಾರ್ಥಿವ ಶರೀರ ನೋಡಲು . ಅಸಾಧ್ಯ ಜನಸಾಗರ . ಮೈಲುದ್ದದ ಸಾಲು .
ವಾಪಸ್ ಬಂದಾಗ ಶೇಷಾದ್ರಿ ಮೆಲುದನಿಯಲ್ಲಿ ಹೇಳಿದರು . ‘ ಜೀವನದಲ್ಲಿ ಆದ್ರೆ ಮೇಷ್ಟ್ರಾಗಬೇಕಾಪ್ಪ , ಅದೂ ನಮ್ಮ ನರಸಿಂಹಯ್ಯನ ಥರ ‘

* * * * *

ಮತ್ತೊಂದೆರಡು ದಿನ ಬಿಟ್ಟು ಮಯ್ಯಾ ಆಸ್ಪತ್ರೆಗೆ ಹೋಗಿ ಡಾಕ್ಟರ್ರನ್ನ ಕೇಳಿದೆ. ‘ ಮೇಷ್ಟ್ರು ಕೊನೆ ಮಾತು ಅಂತ ಏನು ಹೇಳಿದ್ರು ? ‘
ಸಾಯೋ ಎರಡು ದಿನ ಮುಂಚೆ ICU ನಲ್ಲಿದ್ದ ಮೇಷ್ಟ್ರು ಹತ್ತಿರ ಕರೆದರು . ಮೂಗಿಗೆ , ಕೈಗೆ ಕಟ್ಟಿದ ನಾಲ್ಕಾರು ನಳಿಕೆಗಳನ್ನು ಕಣ್ಣಲ್ಲೇ ತೋರಿಸುತ್ತಾ ‘ ಏನಪ್ಪಾ ಸ್ವಲ್ಪ ಜಾಗ ಮಾಡು , ಏನೇನೋ ಕಟ್ಟಿಬಿಟ್ಟಿದ್ದಿಯಾ . ಇಲ್ಲಿ ಪ್ರಾಣ ಹೋಗೋಕು ಜಾಗ ಇಲ್ಲ ! ‘
ಇಂತಹ ಕೊನೆಮಾತನ್ನು ಹೆಚ್ಚೆನ್ ಮಾತ್ರ ಹೇಳಬಲ್ಲರು .

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top