ಹೇಳಿಕೊಟ್ಟ ಮಾತು, ತಂದುಕೊಟ್ಟ ಜುಬ್ಬಾ ಮತ್ತು ವ್ಯರ್ಥಾಲಾಪ!

‘ಕೆಲವು ವಿದ್ಯಾರ್ಥಿಗಳು ಘೋಷಣೆ ಕೂಗಿದ ಮಾತ್ರಕ್ಕೆ ದೇಶದ್ರೋಹವಾಗುತ್ತದೆಯೇ’ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಕೇಳುತ್ತಾರೆಂದರೆ ಏನರ್ಥ? ಸಂಸತ್ ಭವನದ ಮೇಲೇ ಅಫ್ಜಲ್ ಭಯೋತ್ಪಾದನಾ ದಾಳಿಯ ಸಂಚು ರೂಪಿಸಿದನಲ್ಲ, ನಮ್ಮ ಯೋಧರು ಪ್ರಾಣಪಣಕ್ಕಿಟ್ಟು ಕಾದಾಡದಿದ್ದರೆ ಸಿಂಧಿಯಾರಂಥವರು ಸಂಸತ್ತಿನಲ್ಲಿ ನೆಮ್ಮದಿಯಿಂದ ಕೂತಿರಲು ಸಾಧ್ಯವಾಗುತ್ತಿತ್ತೇ?

rahul gandhiಇದು ನಿಜಕ್ಕೂ ಕಾಂಗ್ರೆಸ್ಸಿಗರು ಆಲೋಚಿಸಬೇಕಾದ ಸಂಗತಿ. ಇತ್ತೀಚೆಗಿನ ಒಂದೆರಡು ಪ್ರಸಂಗಗಳನ್ನು ನಿಮ್ಮ ಮುಂದಿಡುತ್ತೇನೆ. ಆ ನಂತರ ನೀವೇ ತೀರ್ವನಿಸಿ, ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷವನ್ನು ಏನು ಮಾಡಬಹುದು ಅಂತ. ಕಳೆದ ವರ್ಷ ನೇಪಾಳದಲ್ಲಿ ಭೀಕರ ಭೂಕಂಪ ಸಂಭವಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಆ ಭಯಂಕರ ಪ್ರಕೃತಿ ವಿಕೋಪಕ್ಕೆ ಅರ್ಧಕ್ಕರ್ಧ ನೇಪಾಳವೇ ಜರ್ಜರಿತವಾಯಿತು. ಆಗ ರಾಹುಲ್​ಗೆ ಯಾರೋ ಸಲಹೆ ಕೊಟ್ಟರು ಅಂತ ತೋರುತ್ತದೆ- ನೇಪಾಳಕ್ಕೆ ಹೋಗಿ ಸಾಂತ್ವನ ಹೇಳಿ ಬನ್ನಿ ಅಂತ. ಅವರು ನೇಪಾಳಕ್ಕೆ ತೆರಳಿದರು. ಭೂಕಂಪ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಕಷ್ಟಕಾಲದಲ್ಲಿ ಒದಗಿದ ರಾಹುಲ್​ರನ್ನು ನೇಪಾಳ ಸರ್ಕಾರದ ಪ್ರಮುಖರೇ ಸ್ವಾಗತಿಸಿದರು. ಸಂಪ್ರದಾಯದಂತೆ ಪ್ರವಾಸದ ಕೊನೆಯಲ್ಲಿ ‘ವಿಸಿಟರ್ಸ್ ಬುಕ್’ನಲ್ಲಿ ಸಾಂತ್ವನದ ಸಾಲುಗಳನ್ನು ಬರೆಯಬೇಕಿತ್ತು. ಮೂರು ಸಾಲು ಸಾಂತ್ವನ ಬರೆಯಲು ರಾಹುಲ್ ದೆಹಲಿ ಕಾಂಗ್ರೆಸ್ ಕಚೇರಿಯಿಂದ ಮೊಬೈಲ್ ಎಸ್ಸೆಮ್ಮೆಸ್ ತರಿಸಿಕೊಂಡಿದ್ದರು ಅಂದರೆ ನಂಬಲಾದೀತಾ? ಮೊಬೈಲ್​ಗೆ ಬಂದ ಮೆಸೇಜಿನ ಒಂದೊಂದು ಪದವನ್ನೂ ನೋಡಿ ನೋಡಿ ಕಾಪಿ ಮಾಡುತ್ತಿದ್ದರು. ಹಾಗೆ ಕಾಲಕಾಲಕ್ಕೆ ನೆರವಾಗುವುದಕ್ಕೆ ಅಂತ ದೆಹಲಿ ಕಾಂಗ್ರೆಸ್ ಕಚೇರಿಯಲ್ಲಿ ಎಂಬಿಎ ಪದವೀಧರರ ಒಂದು ತಂಡವನ್ನೇ ರಾಹುಲ್ ಇಟ್ಟುಕೊಂಡಿದ್ದಾರೆ.

ಆ ಪ್ರಸಂಗ ನಡೆದ ಕೆಲ ದಿನಗಳ ನಂತರ ಇಂಡಿಯಾ ಟಿವಿಯಲ್ಲಿ ಅದರ ಸಂಪಾದಕ ರಜತ್ ಶರ್ಮಾ ನಡೆಸುವ ಜನಪ್ರಿಯ ಲೈವ್ ಶೋ ‘ಆಪ್ ಕಿ ಅದಾಲತ್​ನಲ್ಲಿ’ ಕಾಂಗ್ರೆಸ್ ಯುವ ನಾಯಕ, ರಾಹುಲ್ ಆಪ್ತ ಜ್ಯೋತಿರಾದಿತ್ಯ ಸಿಂಧಿಯಾ ಭಾಗವಹಿಸಿದ್ದರು. ನೇಪಾಳದಲ್ಲಿ ರಾಹುಲ್ ಕಾಪಿ ಪ್ರಸಂಗದ ಕುರಿತು ಪತ್ರಕರ್ತ ರಜತ್ ಶರ್ಮಾ ಪ್ರಸ್ತಾಪಿಸಿದರು. ತಕ್ಷಣ ಸಿಂಧಿಯಾ ಕೆಂಡಾಮಂಡಲವಾದರು. ‘ನಾನೀಗ ನಿಮ್ಮ ಕಾರ್ಯಕ್ರಮದ ನಡುವೆ ನನ್ನ ಮೊಬೈಲ್ ನೋಡುತ್ತಿರುತ್ತೇನೆ ಅಂದುಕೊಳ್ಳಿ. ಅದರರ್ಥ ಮೊಬೈಲ್​ನಲ್ಲಿರುವ ಮೆಸೇಜ್ ನೋಡಿಕೊಂಡು ಮಾತನಾಡುತ್ತೇನೆಂದೇ?’ ಎಂದು ಶರ್ವಗೆ ಮರುಪ್ರಶ್ನೆ ಕೇಳಿದರು. ಆಗ ಶರ್ಮಾ ‘ಹೌದಾ ಹಾಗಾದರೆ ಇಲ್ಲಿ ನೋಡಿ’ ಅಂತ ಹೇಳಿ ಎರಡೇ ಸೆಕೆಂಡಿನಲ್ಲಿ ಮೊಬೈಲ್ ಮೆಸೇಜ್ ನೋಡಿಕೊಂಡು ರಾಹುಲ್ ವಿಸಿಟರ್ಸ್ ಬುಕ್​ನಲ್ಲಿ ಸಂತಾಪ ಸಂದೇಶ ಬರೆಯುತ್ತಿರುವ ವಿಡಿಯೋವನ್ನು ಸ್ಟುಡಿಯೋದ ಬಿಗ್ ಸ್ಕ್ರೀನ್​ನಲ್ಲಿ ಮೇಲೆ ಪ್ಲೇ ಮಾಡಿದರು. ಅದನ್ನು ನೋಡುತ್ತಿದ್ದಂತೆ ಸಿಂಧಿಯಾ ಮುಖ ಪೆಚ್ಚಾಗದೆ ಇನ್ನೇನಾದೀತು? ಅಷ್ಟೇ ಅಲ್ಲ, ನಾಲಿಗೆ ಕಚ್ಚಿಕೊಂಡು ಕುಳಿತವರು ಮರುಮಾತನಾಡಲೇ ಇಲ್ಲ.

ಇದು ಒಂದು ಪ್ರಸಂಗ. ಅದಕ್ಕಿಂತಲೂ ದುಃಖದ ಮತ್ತೊಂದು ಪ್ರಸಂಗ ಇದೆ ಕೇಳಿ. ಅದು ಇಲ್ಲೇ ಬೆಂಗಳೂರಲ್ಲಿ ನಡೆದದ್ದು. ರಾಹುಲ್ ಜೊತೆಗೆ ನಿಕಟ ಒಡನಾಟ ಇಟ್ಟುಕೊಂಡಿರುವ ಯುವ ಕಾಂಗ್ರೆಸ್ ನಾಯಕರೊಬ್ಬರು ನನ್ನ ಬಳಿ ಖುದ್ದು ಹೇಳಿಕೊಂಡ ವಿಚಾರವಿದು. ದೇಶದ ನಾನಾ ರಾಜ್ಯಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಆಗ ರೈತರ ಮನೆಗಳಿಗೆ ಭೇಟಿ ನೀಡಿದರೆ ಪೊಲಿಟಿಕಲ್ ಮೈಲೇಜ್ ಸಿಗುತ್ತದೆ ಎಂಬ ಸಲಹೆಗಾರರ ಮಾತಿನ ಪ್ರಕಾರ ರಾಹುಲ್ ರೈತರ ಮನೆಗಳಿಗೆ ಭೇಟಿ ಕೊಡುತ್ತಿದ್ದರು. ಮಹಾರಾಷ್ಟ್ರ, ಹರಿಯಾಣ, ಆಂಧ್ರ ಮುಂತಾದ ರಾಜ್ಯಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಭೇಟಿಕೊಟ್ಟು ಕಷ್ಟಸುಖ ಆಲಿಸುತ್ತಿದ್ದರು. ಇತ್ತ ಕರ್ನಾಟಕದಲ್ಲೂ ರೈತರು ಸಾಯುತ್ತಿದ್ದಾರೆ, ಕಾಂಗ್ರೆಸ್ಸೇತರ ರಾಜ್ಯಗಳಿಗೆ ಮಾತ್ರ ಏಕೆ ಭೇಟಿ ಕೊಡುತ್ತೀರಿ, ಕರ್ನಾಟಕಕ್ಕೂ ಒಮ್ಮೆ ಬಂದು ರೈತರ ಕಷ್ಟಸುಖ ಆಲಿಸಿ ಸಾಂತ್ವನ ಹೇಳಿಹೋಗಿ ಎಂಬ ವಿರೋಧಿಗಳ ಮೊನಚು ಮಾತುಗಳು ರಾಹುಲ್ ಕಿವಿಗೆ ತಲುಪಿದವು. ಹೀಗಾಗಿ ಕರ್ನಾಟಕದಲ್ಲೂ ರೈತರ ಮನೆಗಳಿಗೆ ಭೇಟಿ ಕೊಡುವ ತೀರ್ಮಾನ ಮಾಡಿದರು. ಭೇಟಿಗೆ ದಿನ ನಿಗದಿಯೂ ಆಯಿತು. ಆಗ ಸ್ಥಳೀಯ ಕಾಂಗ್ರೆಸ್ಸಿಗರಿಗೆ ಒಳಗೊಳಗೇ ಒಂದು ಅಳುಕಿತ್ತು. ಜೀನ್ಸ್ ಪ್ಯಾಂಟು, ಟೀ ಶರ್ಟು, ಅದರ ಮೇಲೊಂದು ವಿಚಿತ್ರ ಕೋಟು ತೊಟ್ಟು ಬೂಟುಗಾಲಿನಲ್ಲಿ ರಾಹುಲ್ ಬಂದುಬಿಟ್ಟರೆ ಏನು ಮಾಡುವುದು ಅಂತ. ಹೀಗಾಗಿ ಏನಕ್ಕೂ ಇರಲಿ ಅಂತ ರಾಹುಲ್ ಅಳತೆಗೆ ಸರಿಹೊಂದುವ ಒಂದು ಜೊತೆ ಸಾದಾಸೀದಾ ಚಪ್ಪಲಿ, ಎರಡು ಜೊತೆ ಜುಬ್ಬಾ ಪೈಜಾಮಾ ಎತ್ತಿಟ್ಟುಕೊಂಡು ವಿಮಾನ ನಿಲ್ದಾಣಕ್ಕೆ ಹೋದರು. ವಿಐಪಿ ಲಾಂಜ್​ನಲ್ಲಿ ಕಾಯುತ್ತಿದ್ದವರ ನಿರೀಕ್ಷೆ ನಿಜವಾಯಿತು. ಒಂದು ಜೊತೆ ಚಪ್ಪಲಿ, ಜುಬ್ಬಾ ಕೈಗಿಟ್ಟು ‘ಹಳ್ಳಿಗೆ ಹೋಗುವಾಗ ಇದನ್ನು ಹಾಕಿಕೊಳ್ಳಿ ರಾಹುಲ್​ಜಿ’ ಎಂದರು. ಬಂದ ವೇಷದಲ್ಲೇ ರಾಹುಲ್ ಏನಾದರೂ ರೈತರ ಮನೆಗಳಿಗೆ ಭೇಟಿ ಕೊಟ್ಟಿದ್ದರೆ ದೇವರೇ ಗತಿ ಎಂದು ಈ ನಾಯಕರು ಒಳಗೊಳಗೇ ಅಂದುಕೊಂಡಿದ್ದಿರಬೇಕು. ಈ ಪ್ರಸಂಗವನ್ನು ಹೇಳುವುದಕ್ಕೆ ಒಂದು ನಿರ್ದಿಷ್ಟವಾದ ಕಾರಣವಿದೆ. ಸಾರ್ವಜನಿಕ ಜೀವನದಲ್ಲಿರುವವರು ಸಮಯ ಸಂದರ್ಭಕ್ಕೆ ತಕ್ಕಂತೆ ವೇಷ ಹಾಕಬೇಕು, ನಾಟಕ ಮಾಡಬೇಕು ಎಂದಲ್ಲ. ಉಡುಗೆ, ತೊಡುಗೆ, ಹಾವಭಾವ, ಆಂಗಿಕ ಭಾಷೆ(ಬಾಡಿ ಲಾಂಗ್ವೇಜ್) ಯ ವಿಷಯದಲ್ಲಿ ಕನಿಷ್ಠ ಸೂಕ್ಷ್ಮ ಸಂವೇದನೆ, ಸ್ಪಂದನೆಯಾದರೂ ಇದ್ದರೆ ಚೆನ್ನ ಎಂಬುದಷ್ಟೆ…

ದೆಹಲಿಯ ಕಾಂಗ್ರೆಸ್ ಕಚೇರಿಗೆ ಆಗಾಗ ಭೇಟಿ ಕೊಡುವ ಕೆಲ ಕಾಂಗ್ರೆಸ್ ನಾಯಕರ ಅನುಭವ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಮೊದಲು ಅದೆಷ್ಟೇ ಸಾರಿ ಭೇಟಿ ಮಾಡಿರಲಿ, ಪ್ರತಿಸಲವೂ ಹಿರಿಕಿರಿಯ ನಾಯಕರನ್ನು ರಾಹುಲ್ ಅದೇ ಮೊದಲ ಸಲ ಭೇಟಿ ಆದವರಂತೆ, ಅಪರಿಚಿತರಂತೆಯೇ ನೋಡುತ್ತಾರೆ, ನಡೆಸಿಕೊಳ್ಳುತ್ತಾರೆ. ಯಾವುದೇ ವಿಚಾರ ಪ್ರಸ್ತಾಪಿಸಲಿ ತಕ್ಷಣ ಪ್ರತಿಕ್ರಿಯೆಯನ್ನು ನಿರೀಕ್ಷಿಸುವ ಹಾಗೇ ಇಲ್ಲ. ಕಚೇರಿಯಲ್ಲಿರುವ ಎಂಬಿಎಗಳು ಎಲ್ಲವನ್ನೂ ಲ್ಯಾಪ್​ಟಾಪ್, ಗ್ಯಾಜೆಟ್ಟುಗಳಲ್ಲಿ ಮೊದಲು ದಾಖಲಿಸಿಕೊಳ್ಳುತ್ತಾರೆ. ಅರ್ಧ ಗಂಟೆಯ ನಂತರ ಮೊಬೈಲಿಗೊಂದು ರೆಡಿಮೇಡ್ ಮೆಸೇಜ್ ಬರುತ್ತದೆ. ಅದು ರಾಹುಲ್ ಇಂಗಿತ ಎಂದು ಭಾವಿಸಿಕೊಳ್ಳಬೇಕು. ‘ಅಲ್ಲಾರಿ ಆ ಮನುಷ್ಯನ ಕಣ್ಣೋಟದಲ್ಲಿ ಜೀವಂತಿಕೆಯೇ ಇರಲ್ಲವಲ್ರೀ. ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದ್ದನ್ನೇ ನೋಡಿಲ್ಲ. ಮೊಗದಲ್ಲಿ ಲವಲವಿಕೆಯಿಲ್ಲ. ಮಾತಿನಲ್ಲಿ ಹುಮ್ಮಸ್ಸು, ಆತ್ಮವಿಶ್ವಾಸವಿರುವುದಿಲ್ಲ. ಪ್ರೀತಿ, ಅಭಿಮಾನದ ಪ್ರತಿಸ್ಪಂದನೆ ಇರುವುದಿಲ್ಲ. ಮಾತನಾಡುವಾಗ ಎಲ್ಲೋ ನೋಡುವುದು, ಗಡ್ಡ ಕೆರೆದುಕೊಳ್ಳುವುದು…ಛೇ.. ಬೇಸರವಾಗುತ್ತದೆ’ ಎಂದು ಅದೇ ಕಾಂಗ್ರೆಸ್ ನಾಯಕರು ಹೇಳುತ್ತಾರೆ ಖಾಸಗಿಯಾಗಿ ಮಾತನಾಡುವಾಗ. ಯಾಕೆ ಹೀಗೆ? ಕಾಂಗ್ರೆಸ್ಸಿಗರೇ ಉತ್ತರ ಕಂಡುಕೊಳ್ಳಬೇಕು.

ಮೇಲೆ ಹೇಳಿದ್ದೆಲ್ಲ ತೀರಾ ಪ್ರಾಥಮಿಕ ಸಂಗತಿಗಳು. ಕೆಲವಂತೂ ವೈಯಕ್ತಿಕವಾದದ್ದು. ಆದರೆ ಇಂಥ ಸಣ್ಣಸಣ್ಣ ವಿಚಾರಗಳಲ್ಲೇ ಹೀಗಾದರೆ ದೇಶದ ಆಂತರಿಕ ಸುರಕ್ಷೆ, ಆರ್ಥಿಕತೆ, ವಿದೇಶ ಸಂಬಂಧ, ಆಡಳಿತ ನಿರ್ವಹಣೆ, ಕುಸಿದಿರುವ ಪಕ್ಷದ ಪುನರುಜ್ಜೀವನ ಇತ್ಯಾದಿ ಸೂಕ್ಷ್ಮ ಮತ್ತು ಮಹತ್ವದ ವಿಷಯಗಳಲ್ಲಿ ಈ ಮನುಷ್ಯ ಹೇಗೆ ನಡೆದುಕೊಂಡಾನು? ಹೇಗೆ ನಿಭಾಯಿಸಿಯಾನು ಎಂಬುದಕ್ಕಾಗಿ ಇವಿಷ್ಟು ವಿಚಾರದ ಪ್ರಸ್ತಾಪ.

ರಾಹುಲ್ ಗಾಂಧಿಗೆ ನಿಜಕ್ಕೂ ಕಲಿಯುವ ಆಸಕ್ತಿಯಿದ್ದರೆ, ರೈತರ ಆತ್ಮಹತ್ಯೆಯಂತಹ ವಿಷಯದಲ್ಲಿ ದೇಶಾದ್ಯಂತ ಸುತ್ತಿ ಕಾರಣ ಕಂಡು ಹಿಡಿದು ಒಂದು ಅಧ್ಯಯನ ವರದಿಯನ್ನು ಕೇಂದ್ರ ಸರ್ಕಾರದ ಕೈಗಿತ್ತು ಹೀಗೆ ಮಾಡಿ ಎಂದು ಕಿವಿ ಹಿಂಡಬಹುದಿತ್ತು. ಅದಕ್ಕೆ ಸರ್ಕಾರ ಕಿವಿಗೊಡದೇ ಹೋದರೆ ಸಂಸತ್ತಿನ ಅಧಿವೇಶನವನ್ನು ಆ ಉದ್ದೇಶಕ್ಕೆ ಬಳಸಿಕೊಳ್ಳಬಹುದಿತ್ತು. ಆದರೆ ಅವರು ಎಂದೂ ಹಾಗೆ ಮಾಡುವುದಿಲ್ಲ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ವಿಧೇಯಕದ ವಿಚಾರವನ್ನೇ ತೆಗೆದುಕೊಳ್ಳಿ. ಈ ವಿಧೇಯಕ ಹಿಂದಿನ ಯುಪಿಎ ಸರ್ಕಾರವೇ ರೂಪಿಸಿದ್ದು. ಹಾಗಾದರೆ ಯುಪಿಎ ಸರ್ಕಾರದ ಉತ್ತಮ ಯೋಜನೆಯನ್ನು ಎನ್​ಡಿಎ ಸರ್ಕಾರ ಜಾರಿಗೊಳಿಸಬಾರದೇ? ಯಾವ ಉದ್ದೇಶಕ್ಕಾಗಿ ಕಳೆದ ಒಂದೂ ಮುಕ್ಕಾಲು ವರ್ಷದಿಂದ ವಿಧೇಯಕಕ್ಕೆ ಅಡ್ಡಗಾಲು ಹಾಕಲಾಗುತ್ತಿದೆ? ಭೂ ಸ್ವಾಧೀನ ತಿದ್ದುಪಡಿ ಮಸೂದೆಗೆ ಯಾಕಾಗಿ ತಡೆಯೊಡ್ಡಲಾಗುತ್ತಿದೆ? ಎನ್​ಡಿಎ ಸರ್ಕಾರ ಏನೂ ಮಾಡಿಲ್ಲ ಎಂದು ಮುಂದೆ ಹೇಳಬಹುದು ಅಂತಲೇ? ಇದು ಮಾದರಿ ನಡೆಯೇನು? ಇಂಥ ನಡವಳಿಕೆಯಿಂದ ನಷ್ಟ ಯಾರಿಗೆ? ರಾಹುಲ್ ಗಾಂಧಿಗೋ ನೂರಿಪ್ಪತ್ತು ಕೋಟಿ ಜನರಿಗೋ? ಪ್ರತಿಬಾರಿ ಸಂಸತ್ ಅಧಿವೇಶನ ನಡೆಯುವಾಗಲೂ ಕಲಾಪಕ್ಕೆ ಅಡ್ಡಿಪಡಿಸಲು ಒಂದೊಂದು ಕುಂಟುನೆಪ ಸಿದ್ಧವಾಗಿರುತ್ತದೆ. ಮೊದಲು ಅಸಹಿಷ್ಣುತೆ ಗುಲ್ಲು, ಇದೀಗ ವಿಶ್ವವಿದ್ಯಾಲಯಗಳು ಮತ್ತು ವಿದ್ಯಾರ್ಥಿಗಳ ಮೇಲೆ ಕೇಂದ್ರ ಸರ್ಕಾರ ಗದಾಪ್ರಹಾರ ಮಾಡುತ್ತಿದೆ ಎನ್ನುವ ವಿಚಾರ. ಹೀಗೇ ಆದರೆ ಈ ಸಲದ ಬಜೆಟ್ ಅಧಿವೇಶನವೂ ಹಳ್ಳಹಿಡಿಯುವುದು ಗ್ಯಾರಂಟಿ.

ರಾಹುಲ್ ಮಾತ್ರವಲ್ಲ, ಅವರದ್ದೇ ಧಾಟಿಯಲ್ಲಿ ಎಲ್ಲ ಕಾಂಗ್ರೆಸ್ ನಾಯಕರೂ ಮಾತನಾಡುವುದನ್ನು ಕಂಡಾಗ ಮತ್ತಷ್ಟು ಅಚ್ಚರಿಯಾಗುತ್ತದೆ. ಅದಕ್ಕೆ ರಾಹುಲ್​ಗಿಂತಲೂ ಮೇಲಿನವರ ಆಣತಿಯೇ ಕಾರಣ ಇರಬೇಕು ಅನ್ನಿಸುತ್ತದೆ. ‘ಕೆಲವು ವಿದ್ಯಾರ್ಥಿಗಳು ಘೊಷಣೆ ಕೂಗಿದ ಮಾತ್ರಕ್ಕೆ ದೇಶದ್ರೋಹವಾಗುತ್ತದೆಯೇ’ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಕೇಳುತ್ತಾರೆಂದರೆ ಏನರ್ಥ? ಅವರ ಬುದ್ಧಿಮಟ್ಟ ಎಂಥದ್ದು? ಈ ದೇಶದ ಆತ್ಮದಂತಿರುವ ಸಂಸತ್ ಭವನದ ಮೇಲೇ ಅಫ್ಜಲ್ ಭಯೋತ್ಪಾದನಾ ದಾಳಿಯ ಸಂಚು ರೂಪಿಸಿದನಲ್ಲ, ಆವತ್ತು ನಮ್ಮ ಯೋಧರು ಪ್ರಾಣಪಣಕ್ಕಿಟ್ಟು ಉಗ್ರರೊಂದಿಗೆ ಕಾದಾಡದಿದ್ದರೆ ಸಿಂಧಿಯಾರಂಥವರು ಇಂದು ಸಂಸತ್ತಿನಲ್ಲಿ ನೆಮ್ಮದಿಯಿಂದ ಕೂತಿರಲು ಸಾಧ್ಯವಾಗುತ್ತಿತ್ತೇ? ಕೂಗಿದ ಘೊಷಣೆಯಾದರೂ ಯಾವುದು? ‘ಅಫ್ಜಲ್ ಹಮ್ ಶರ್ವಿುಂದಾ ಹೈ, ತೇರೆ ಕಾತಿಲ್ ಜಿಂದಾ ಹೈ’ (ಅಫ್ಜಲ್ ನಿನ್ನನ್ನು ಕೊಂದವರು ಇನ್ನೂ ಬದುಕಿದ್ದಾರೆ ಎನ್ನಲು ನಮಗೆ ನಾಚಿಕೆ ಆಗುತ್ತದೆ) ‘ದಿ ವಾರ್ ವಿಲ್ ಕಂಟಿನ್ಯೂ, ಟಿಲ್ ದಿ ಡಿಸ್ಟ್ರಕ್ಷನ್ ಆಫ್ ಇಂಡಿಯಾ’ (ಭಾರತವನ್ನು ಸರ್ವನಾಶ ಮಾಡುವವರೆಗೆ ಯುದ್ಧ ನಿರಂತರವಾಗಿರುತ್ತದೆ) ‘ಭಾರತ್ ಕೋ ರಗ್ಡಾ, ಲೇ ರಗ್ಡಾ’ (ಭಾರತವನ್ನು ಒಡೆಯಿರಿ, ಛಿದ್ರಗೊಳಿಸುತ್ತಲೇ ಇರಿ)… ಇತ್ಯಾದಿ. ನೀವು ಹೇಳುವ ಸಂವಿಧಾನದ 19ನೇ ವಿಧಿಯ ಅಭಿವ್ಯಕ್ತಿ ಸ್ವಾತಂತ್ರ್ಯಲ್ಲಿ ಹೀಗೆಲ್ಲ ಹೇಳುವುದಕ್ಕೆ ಮತ್ತು ಮಾಡುವುದಕ್ಕೆ ಅವಕಾಶ ಇದೆಯೇ? ಮಾತನಾಡಲು, ಶಸ್ತ್ರರಹಿತವಾಗಿ ಮತ್ತು ಶಾಂತಿಯುತವಾಗಿ ಸಭೆ ಸೇರಲು, ಸಂಘಟನೆಗಳನ್ನು ರಚಿಸಲು, ಭಾರತದಾದ್ಯಂತ ಮುಕ್ತವಾಗಿ ಸಂಚರಿಸಲು, ವಾಸಿಸಲು, ಮನೆ ಕಟ್ಟಿಕೊಳ್ಳಲು, ನಿಗದಿತ ಚೌಕಟ್ಟಿನಲ್ಲಿ ನೌಕರಿ ಮಾಡಲು, ಉದ್ಯಮ ನಡೆಸಲು ಸಂವಿಧಾನದಲ್ಲಿ ಅವಕಾಶವಿದೆ. ಅಷ್ಟೇ ಅಲ್ಲ ಧಾರ್ವಿುಕ ಸಭೆ ನಡೆಸಲು, ಧರ್ಮ ಸಂದೇಶ ಸಾರುವುದಕ್ಕೂ ಅವಕಾಶವಿದೆ. ಆದರೆ ಮತಾಂತರ ಮಾಡಲು, ಜೆಹಾದ್ ಸಾರಲಲ್ಲ. ಜೆಎನ್​ಯುುನಲ್ಲಿ ಕನ್ಹಯ್ಯಾ, ಉಮರ್ ಖಾಲಿದ್ ಹಾಗೂ ಇತರರು ಹಾಕಿದ ಘೊಷಣೆ ಯಾವುದರಲ್ಲಿ ಸೇರುತ್ತದೆ ಎಂಬುದನ್ನು ಕಾಂಗ್ರೆಸ್ ಸಂಸದರು ಮತ್ತು ರಾಹುಲ್ ಗಾಂಧಿಯೇ ದೇಶಕ್ಕೆ ವಿವರಿಸಿದರೆ ಒಳ್ಳೆಯದು.

ರಾಹುಲ್​ಗೆ ಗೊತ್ತಿದೆಯೋ ಇಲ್ಲವೋ. ಅವರ ಮುತ್ತಜ್ಜ ನೆಹರು ಕುಟುಂಬದ ಅನೇಕರು ವಿದ್ರೋಹಿಗಳ ಷಡ್ಯಂತ್ರಕ್ಕೆ ಬಲಿಯಾಗಿದ್ದಾರೆ. ಭಿಂದ್ರನ್​ವಾಲೆ ಅಂತ ಒಬ್ಬ ಪಾತಕಿ ಇದ್ದ. ಪಂಜಾಬ್​ನಲ್ಲಿ ಆತನ ಆಟಾಟೋಪ ಹೆಚ್ಚಾದಾಗ ಅಜ್ಜಿ ಇಂದಿರಾ ದೇಶಹಿತಕ್ಕಾಗಿ ಆತನನ್ನು ಮುಲಾಜಿಲ್ಲದೆ ಹೊಸಕಿ ಹಾಕಿದರು. ದೇಶದ ಏಕತೆ, ಸಾರ್ವಭೌಮತೆಗೇ ಸವಾಲು ಹಾಕಿದ್ದ ಖಲಿಸ್ತಾನ್ ಚಳವಳಿ ಭಿಂದ್ರನ್​ವಾಲೆ ಸಾವಿನೊಂದಿಗೆ ಅಂತ್ಯವಾಯಿತು. ಆತನಿಗೆ ಗತಿ ತೋರಿಸಿದ ಕಾರಣಕ್ಕೆ ಇಂದಿರಾ ಪ್ರಾಣಾರ್ಪಣೆಯನ್ನೂ ಮಾಡಬೇಕಾಯಿತು. ಭಿಂದ್ರನ್​ವಾಲೆ ಮತ್ತು ಬಂಟರನ್ನು ಸದೆಬಡಿಯಲು ಪಂಜಾಬ್​ನ ಸ್ವರ್ಣ ಮಂದಿರಕ್ಕೆ ಮಿಲಿಟರಿ ನುಗ್ಗಿಸುವಾಗ ಅದರ ಪರಿಣಾಮವೇನಾಗಬಹುದೆಂದು ಇಂದಿರಾಗೆ ಗೊತ್ತಿರಲಿಲ್ಲ ಅಂತೇನಿಲ್ಲ. ಆದರೂ ದೇಶದ ಪ್ರಧಾನಿಯಾಗಿ ಅವರು ರಾಜಿ ಮಾಡಿಕೊಳ್ಳಲಿಲ್ಲ. ರಾಹುಲ್ ಅಪ್ಪ ರಾಜೀವ್ ತನ್ನ ರಾಜಕೀಯ ನಿಲುವಿನಿಂದಾಗಿಯೇ ಪ್ರಾಣಕ್ಕೆ ಸಂಚಕಾರ ತಂದುಕೊಂಡರು. ಅದೇ ರಕ್ತ ಹಂಚಿಕೊಂಡು ಹುಟ್ಟಿದ ರಾಹುಲ್ ತನ್ನ ಪಿತೃಗಳ ಪೂರ್ವಾಪರ ಅರಿಯದವರಂತೆ ಅಫ್ಜಲನ ಸಂತತಿಯವರ ಜೊತೆಗೆ ಕೈಜೋಡಿಸುತ್ತಿದ್ದಾರಲ್ಲ, ಏನೆನ್ನುವುದು ಇದಕ್ಕೆ? ಕಾಂಗ್ರೆಸ್ ನಾಯಕರು ಯಾವ ಹಂತಕ್ಕೆ ತಲುಪಿದ್ದಾರೆಂದರೆ ಅಫ್ಜಲ್ ಸಂಸತ್ ಮೇಲಿನ ದಾಳಿ ರೂವಾರಿಯಾಗಿದ್ದ ಎಂಬುದೇ ಅನುಮಾನಾಸ್ಪದ ಎಂದು ಪಿ.ಚಿದಂಬರಂ ಹೊಸ ರಾಗ ಶುರು ಮಾಡಿದ್ದಾರೆ. ಆತನಿಗೆ ಗಲ್ಲುಶಿಕ್ಷೆ ಕೊಡುವಾಗ ಇವರೇ ದೇಶದ ಗೃಹ ಸಚಿವರಾಗಿದ್ದರಲ್ಲವೇ? ಬುದ್ಧಿಗೇಡಿಗಳು!

ಎಲ್ಲಕ್ಕಿಂತ ಮಿಗಿಲಾದ ತಮಾಷೆ ಎಂದರೆ ರಾಹುಲ್ ಸಂಸತ್ತಿನಲ್ಲಿ ಮಾತನಾಡಲು ಮೋದಿ ಬಿಡುತ್ತಿಲ್ಲವಂತೆ…!

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top