ಹಟಮಾರಿ ಡ್ರ್ಯಾಗನ್ ಮೆತ್ತಗಾದದ್ದು ಹೇಗೆಂದರೆ…

ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಕೊನೇ ಕ್ಷಣದಲ್ಲಿ ಪಾಕ್ ಪ್ರವಾಸ ರದ್ದುಗೊಳಿಸಿದ್ದರ ಒಳಮರ್ಮವೇನು? ಪಾಕಿಸ್ತಾನಕ್ಕಿಂತ ಭಾರತದ ಸಹವಾಸವೇ ಲೇಸೆಂದು ಅರಿಯಲು ಚೀನಾಕ್ಕೆ ಇಷ್ಟು ವರ್ಷ ಹಿಡಿಯಿತೇ?

17modi_with_china_pres1 

ಶತಮೂರ್ಖ ಪಾಕಿಸ್ತಾನವನ್ನು ಭಾರತ ಅಲಕ್ಷೃ ಮಾಡಿಬಿಡಬಹುದು. ಇನ್ನೂ ಹೆಚ್ಚೆಂದರೆ ಒಮ್ಮೆ ಯುದ್ಧಮಾಡಿ ಆ ದೇಶವನ್ನು ಹೊಸಕಿಹಾಕಿಬಿಡಬಹುದು. ಆದರೆ ಉಡಿಯಲ್ಲಿ ಕಟ್ಟಿಕೊಂಡಿರುವ ಕೆಂಡದಂಥ ಚೀನಾದ ವಿಷಯದಲ್ಲಿ ಹಾಗೆನ್ನಲಾಗದು. ಅರುಣಾಚಲದಿಂದ ಹಿಡಿದು ಕಾಶ್ಮೀರದವರೆಗೆ ಚೀನಿ ಸೈನಿಕರು ಕೊಡುತ್ತಿರುವ ಉಪಟಳ ತೀರಾ ಅತಿ ಆಯಿತು ಅನ್ನಿಸಿದಾಗ ಒಮ್ಮೆ ನಾವು ಗುಟುರು ಹಾಕಿದರೂ ಮತ್ತೆ ಆ ದೇಶದೊಂದಿಗೆ ಸ್ನೇಹಹಸ್ತದ ನಿರೀಕ್ಷೆ ಮಾಡಲೇಬೇಕಾಗುತ್ತದೆ. ಬಲಾಢ್ಯ ಸೇನೆ ಹೊಂದಿರುವ ಚೀನಾದೊಂದಿಗೆ ಆರ್ಥಿಕ ಸಹಕಾರ ಮತ್ತು ಸೈನಿಕ ಸೌಹಾರ್ದ ಎಂಬ ದ್ವಿಮುಖ ರಾಜತಾಂತ್ರಿಕತೆಯನ್ನು ಮುಂದುವರೆಸುವುದು ಸದ್ಯಕ್ಕೆ ನಮಗೆ ಅನಿವಾರ್ಯ ಕೂಡ.

ಪಾಕಿಸ್ತಾನ ಶುದ್ಧ ಭಯೋತ್ಪಾದಕ ದೇಶ ಎಂದೇ ಜಗತ್ಪ್ರಸಿದ್ಧ. ಅಲ್ಲಿ ನಡೆಯುತ್ತಿರುವ ಅನಾಹುತಗಳಿಗೆಲ್ಲ ಮತಾಂಧತೆ ಮತ್ತು ಅಪ್ರಬುದ್ಧತೆ ಇವೆರಡೇ ಕಾರಣ. ಪಾಕಿಸ್ತಾನದ ಆಳುಗರಿಗಾಗಲೀ ಅಥವಾ ಅಲ್ಲಿನ ಭಯೋತ್ಪಾದಕ ಸಂಘಟನೆಗಳ ಮುಖ್ಯಸ್ಥರಿಗಾಗಲೀ ಮುಂದಾಲೋಚನೆ, ಬುದ್ಧಿವಂತಿಕೆ ಇತ್ಯಾದಿಗಳ ಗಂಧವೇ ಇಲ್ಲ. ಆದರೆ ಚೀನಾ ಹಾಗಲ್ಲ. ಅದು ಸಾಮ್ರಾಜ್ಯಶಾಹಿ ಮಾತ್ರವಲ್ಲ, ಪಕ್ಕಾ ವ್ಯವಹಾರಸ್ಥ ದೇಶ. ಶತಮಾನಗಳೇ ಕಳೆದರೂ ಚೀನಿಯರ ಈ ಮಾನಸಿಕತೆಯಲ್ಲಿ ಎಳ್ಳಷ್ಟೂ ವ್ಯತ್ಯಾಸವಾಗಿಲ್ಲ. ಹೀಗಾಗಿ ಮಿಲಿಟರಿ ಆಕ್ರಮಣ, ಗಡಿ ಅತಿಕ್ರಮಣ ಇವೆಲ್ಲ ಅವರಿಗೆ ಮಾಮೂಲು. ಯುದ್ಧಮಾಡಲು ಅವರ ಬಳಿ ಜಗತ್ತಿನ ಯಾವ ದೇಶಕ್ಕೂ ಕಮ್ಮಿ ಇರದಷ್ಟು ಶಸ್ತ್ರಾಸ್ತ್ರ ಸಂಗ್ರಹವಿದೆ. ಅಸಂಖ್ಯಾತ ಸೈನಿಕ ಬಲ ಇದೆ. ಕಮ್ಯುನಿಸ್ಟ್ ಸರ್ಕಾರಗಳ ಹತ್ತು ಹಲವು ಪ್ರಮಾದಗಳಿಂದಾಗಿ ಕಾಲಕ್ರಮೇಣ ಚೀನಾದ ಆರ್ಥಿಕ ವ್ಯವಸ್ಥೆಯ ಬುಡ ಅಲುಗಾಡುತ್ತಿದೆ ಎಂಬ ಅಭಿಪ್ರಾಯವಿದೆಯಾದರೂ ಭಾರತದಂತಹ ಚೇತರಿಸಿಕೊಳ್ಳುತ್ತಿರುವ ದೇಶಕ್ಕೆ ಕಿರುಕುಳ ಕೊಡಲು ಅವರಿಗೆ ಯಾವುದೇ ಕೊರತೆ ಇಲ್ಲ. ಕೊನೇ ಪಕ್ಷ ತನ್ನ ಅಸ್ತಿತ್ವದ ಪ್ರದರ್ಶನಕ್ಕಾದರೂ ಚೀನಾ ನೆರೆಹೊರೆಯ ದೇಶಗಳೊಂದಿಗೆ ಕಾಲುಕೆರೆದು ಯುದ್ಧೋನ್ಮಾದವನ್ನು ಪ್ರದರ್ಶಿಸುತ್ತಲೇ ಇದೆ.

ಚೀನಾ ಉಪಟಳ ಕೊಡುತ್ತಿರುವುದು ಕೇವಲ ಭಾರತಕ್ಕೆ ಅಂದರೆ ಅದು ತಪ್ಪು ಕಲ್ಪನೆ. ಜಪಾನ್, ದಕ್ಷಿಣ ಕೊರಿಯಾ, ವಿಯೆಟ್ನಾಂ, ಫಿಲಿಪ್ಪೀನ್ಸ್, ಮಲೇಷ್ಯಾ, ಬ್ರೂನೈ ಮತ್ತು ಇಂಡೋನೇಷ್ಯಾ ಹೀಗೆ ತನ್ನೊಂದಿಗೆ ಗಡಿ ಹಂಚಿಕೊಂಡಿರುವ ಎಲ್ಲ ದೇಶಗಳೊಂದಿಗೂ ಚೀನಾದ್ದು ಇದೇ ರಗಳೆ. ನೆಲ-ಜಲ ಗಡಿ ವಿಚಾರದಲ್ಲಿ ಒಂದಿಲ್ಲೊಂದು ದೇಶದೊಂದಿಗೆ ಅದು ತಂಟೆತಗಾದೆ ತೆಗೆಯುವುದನ್ನು ರೂಢಿಮಾಡಿಕೊಂಡಿದೆ. ಅದಕ್ಕೇ ಹೇಳಿದ್ದು, ಚೀನಾದ ಜತೆ ಏಗಬೇಕಾದರೆ ಭಾರತದಂತಹ ದೇಶ ದ್ವಿಮುಖ ರಾಜತಾಂತ್ರಿಕತೆಯನ್ನು ಅನುಸರಿಸುವುದು ಅನಿವಾರ್ಯ ಅಂತ. ಭವಿಷ್ಯದ ದೃಷ್ಟಿಯಿಂದ ಆಲೋಚಿಸುವುದಾದರೆ ಚೀನಾದೊಂದಿಗೆ ಅನಿವಾರ್ಯ ಹೊಂದಾಣಿಕೆ ಮಾಡಿಕೊಂಡಿರುವ ನೆರೆದೇಶಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ವ್ಯೂಹಾತ್ಮಕ ತಂತ್ರಗಾರಿಕೆಯನ್ನು ಅನುಸರಿಸಬೇಕು. ಒಂದು ತಿಂಗಳ ಹಿಂದೆ ಪ್ರಧಾನಿ ಮೋದಿ ನೇಪಾಳ ಮತ್ತು ಭೂತಾನ್ ದೇಶಗಳಿಗೆ ಕೈಗೊಂಡ ಪ್ರವಾಸವನ್ನು ನಾವು ಆ ಹಿನ್ನೆಲೆಯಲ್ಲಿ ನೋಡಬಹುದು.

ಪರಿಸ್ಥಿತಿ ಎಷ್ಟು ಸೂಕ್ಷ್ಮವಾಗಿದೆ ಎಂದರೆ, ಸಾಮ್ರಾಜ್ಯಶಾಹಿ ಧೋರಣೆಯನ್ನೇ ಪ್ರವೃತ್ತಿಯನ್ನಾಗಿಸಿಕೊಂಡಿರುವ ಚೀನಾ ಮತ್ತು ಅಮೆರಿಕ ಪರಸ್ಪರ ಎಷ್ಟೇ ತಿಕ್ಕಾಟ ನಡೆಸುತ್ತಿದ್ದರೂ, ಭಾರತವನ್ನು ಕಾಡುವ ವಿಷಯದಲ್ಲಿ ಈ ಎರಡೂ ದೇಶಗಳದ್ದೂ ಒಂದೇ ನೀತಿ. ಅವು ಭಾರತಕ್ಕೆ ಕೊಡುತ್ತಿರುವ ಕಿರುಕುಳ ಒಂದಲ್ಲ ಎರಡಲ್ಲ. ಒಂದುವೇಳೆ ಅಮೆರಿಕ ಮತ್ತು ಚೀನಾಗಳು ಸಕಲ ಬೆಂಬಲ ನೀಡದೇ ಹೋಗಿದ್ದರೆ ಪಾಕಿಸ್ತಾನದ ಆಟ ಬಂದ್ ಆಗಿ ಎಷ್ಟೋ ವರ್ಷಗಳಾಗಬೇಕಿತ್ತು. ಆದರೆ ಆಗಿದ್ದೇನು? ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಪಾಕಿಸ್ತಾನಕ್ಕೆ ಅಂಟಿಕೊಂಡಿರುವ ದಟ್ಟ ದಾರಿದ್ರೃವನ್ನೇ ಚೀನಾ ಮತ್ತು ಅಮೆರಿಕ ಬಂಡವಾಳ ಮಾಡಿಕೊಳ್ಳಲು ಮುಂದಾದವು. ಆ ಎರಡೂ ದೇಶಗಳು ಬರೀ ದುಡ್ಡು ಕೊಟ್ಟಿದ್ದರೆ ಪಾಕಿಸ್ತಾನ ಕೈಯ್ಯೊಡ್ಡಿದ್ದಕ್ಕೆ ನೀಡಿದ ಭಿಕ್ಷೆ ಅಂತ ಭಾವಿಸಿ ಸುಮ್ಮನಾಗಬಹುದಿತ್ತು. ಆದರೆ ಅಷ್ಟಕ್ಕೇ ನಿಲ್ಲಲಿಲ್ಲ. ಪಾಕಿಸ್ತಾನಕ್ಕೆ ಅತ್ಯಾಧುನಿಕ ಯುದ್ಧ ಟ್ಯಾಂಕ್‍ಗಳನ್ನು, ಹಡಗುಗಳನ್ನು, ಯುದ್ಧವಿಮಾನಗಳನ್ನು ಅವು ಯಥೇಚ್ಛವಾಗಿ ಪೂರೈಸುತ್ತ ಬಂದವು. ಅತ್ಯಾಧುನಿಕ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲು ತಾಂತ್ರಿಕ ನೆರವು ನೀಡಿದವು. ಎಲ್ಲದಕ್ಕಿಂತ ದೊಡ್ಡ ಪ್ರಮಾದ ಪಾಕಿಸ್ತಾನದ ಪರಮಾಣು ಕಾರ್ಯಕ್ರಮಕ್ಕೆ ಚೀನಾ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಿದ್ದು. ಪಾಕಿಸ್ತಾನ ಮಾತ್ರವಲ್ಲ, ನೇಪಾಳ, ಭೂತಾನ್, ಮ್ಯಾನ್ಮಾರ್, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಮಾಲ್ಡಿವ್ಸ್‍ಗಳನ್ನೂ ಭಾರತದ ವಿರುದ್ಧ ಎತ್ತಿಕಟ್ಟಲು ಚೀನಾ ಹವಣಿಸುತ್ತಲೇ ಇದೆ. ಬಾಹ್ಯವಾಗಿ ಮಾತ್ರವಲ್ಲ ಆಂತರಿಕವಾಗಿಯೂ ಭಾರತವನ್ನು ಅಸ್ಥಿರಗೊಳಿಸಲು ಚೀನಾ ಯತ್ನಿಸುತ್ತಿರುವುದಕ್ಕೆ ಬೇಕಾದಷ್ಟು ಪುರಾವೆಗಳಿವೆ. ಆರ್ಥಿಕ, ಸಾಮಾಜಿಕ ನ್ಯಾಯದ ಹೆಸರಲ್ಲಿ ರಕ್ತಹರಿಸುತ್ತಿರುವ ನಕ್ಸಲರಿಗೂ ಚೀನಾ ಶಸ್ತ್ರಾಸ್ತ್ರ, ದುಡ್ಡುಕಾಸನ್ನೆಲ್ಲ ಕೊಟ್ಟು ಕುಮ್ಮಕ್ಕು ನೀಡುತ್ತಿದೆ ಅಂತ ನಮ್ಮ ಸೇನೆ, ಗುಪ್ತದಳ ಮತ್ತು ಬೇರೆ ಬೇರೆ ತನಿಖಾ ಆಯೋಗಗಳು ಸಾಕಷ್ಟು ಬಾರಿ ಪುರಾವೆ ಸಹಿತ ಹೇಳಿವೆ. ಏನಿದರ ಉದ್ದೇಶ? ಬಲಿಷ್ಠವಾಗುತ್ತಿರುವ ಭಾರತವನ್ನು ಬಗ್ಗುಬಡಿಯುವುದೊಂದೇ ತಾನೆ? ಹಾಗಿದ್ದರೆ ಚೀನಾದೊಂದಿಗೆ ಬರೀ ಸ್ನೇಹ, ಸೌಹಾರ್ದ, ವ್ಯಾಪಾರಿ ಸಂಬಂಧದ ಆಲೋಚನೆಯೊಂದನ್ನು ಮಾಡಿದರೆ ಸಾಕೇ? ಸಾಲದು. ಅದಕ್ಕೀಗ ಕಾಲ ಪಕ್ವವಾಗುತ್ತಿದೆ.

ಪ್ರಧಾನಿ ಮೋದಿ ಜಪಾನ್ ಪ್ರವಾಸದ ವೇಳೆ ಒಂದು ಮಾತನ್ನು ಹೇಳಿದ್ದರು. ಅನ್ಯದೇಶದ ನೆಲದಲ್ಲಿ ಬೇರೊಂದು ದೇಶವನ್ನು ಟೀಕಿಸಿದ್ದು ಸರಿಯೋ ತಪ್ಪೋ ಎಂಬುದರ ಚರ್ಚೆ ನಡೆಯುತ್ತಿದೆ. ಆ ಮಾತು ಬೇರೆ. ಮೋದಿ ಹೇಳಿದ್ದು `ಪರಮ ಶತ್ರುಗಳು ಬಗಲಲ್ಲೇ ಇದ್ದಾರೆ, ಅವರಲ್ಲಿ 18ನೇ ಶತಮಾನದ ಸಾಮ್ರಾಜ್ಯಶಾಹಿ ಧೋರಣೆಯನ್ನು ನಾವು ಸ್ಪಷ್ಟವಾಗಿ ಕಾಣುತ್ತಿದ್ದೇವೆ. ಅವರು ನೆರೆರಾಷ್ಟ್ರಗಳ ಭೂಭಾಗವನ್ನು ಅತಿಕ್ರಮಿಸುತ್ತಿದ್ದಾರೆ. ಬೇರೆಯವರ ಜಲಪ್ರದೇಶದಲ್ಲಿ ಒಳನುಸುಳುತ್ತಿದ್ದಾರೆ. ಸಾಲದ್ದಕ್ಕೆ ಅನ್ಯ ರಾಷ್ಟ್ರಗಳ ಮೇಲೆ ದಂಡೆತ್ತಿ ಹೋಗುತ್ತಿದ್ದಾರೆ. ಅನ್ಯರ ಭೂಭಾಗಗಳ ಮೇಲೆ ಕಬ್ಜಾ ಸ್ಥಾಪಿಸುತ್ತಿದ್ದಾರೆ’ ಅಂತ. ಅವರು ಯಾವುದೇ ದೇಶದ ಹೆಸರನ್ನು ನೇರವಾಗಿ ಉಲ್ಲೇಖಿಸಿರಲಿಲ್ಲ. ಆದರೂ ಆಗಬೇಕಾದ ಪರಿಣಾಮ ಆಗಿತ್ತು. ಬಿಟ್ಟ ಬಾಣ ಬೀಜಿಂಗ್‍ನಲ್ಲಿ ಕುಳಿತ ಚೀನಾದ ಪ್ರಮುಖರಿಗೆ ನೇರವಾಗಿ ನಾಟಿತ್ತು. ಮೋದಿ ಮಾತನ್ನು ಚೀನಾದ ಸರ್ಕಾರಿ ದೈನಿಕ `ಗ್ಲೋಬಲ್ ಟೈಮ್ಸ್’ ವಿಶ್ಲೇಷಣೆ ಸಹಿತ ವರದಿ ಮಾಡಿತು. ಚೀನಾದಲ್ಲಿ ಮಾಧ್ಯಮ ತನ್ನ ಸರ್ಕಾರದ ಧೋರಣೆಯನ್ನು ವಿಶ್ಲೇಷಣೆ ಮಾಡಿದ್ದು, ಸರ್ಕಾರಕ್ಕೆ ಕಿವಿಮಾತು ಹೇಳಿದ್ದು ಇದೇ ಮೊದಲು ಅಂತ ತೋರುತ್ತದೆ. ಚೀನಾ ಮಟ್ಟಿಗೆ ಅದು ಐತಿಹಾಸಿಕ ಬೆಳವಣಿಗೆ. ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೊ ಅಬೆ ನಿಲುವಿನಿಂದಾಗಿ ಉಭಯ ದೇಶಗಳ ನಡುವೆ ಏರ್ಪಟ್ಟಿರುವ ಗಟ್ಟಿ ಬಾಂಧವ್ಯವನ್ನು ಅಲಕ್ಷಿಸುವ ಹಾಗಿಲ್ಲ. ಮೋದಿ ಪ್ರಧಾನಿಯಾದ ಬಳಿಕ ನೇಪಾಳ, ಭೂತಾನ್ ಸೇರಿ ಚೀನಾದ ನೆರಳಲ್ಲಿ ಬದುಕುತ್ತಿದ್ದ ನೆರೆರಾಷ್ಟ್ರಗಳು ಭಾರತದತ್ತ ಆಸೆಗಣ್ಣಿನಿಂದ ನೋಡತೊಡಗಿವೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಸದ್ಯದ ಮಟ್ಟಿಗೆ ಗಡಿ ತಗಾದೆ ಬದಿಗಿಟ್ಟು ಭಾರತದ ಜತೆ ವ್ಯಾಪಾರ, ವಾಣಿಜ್ಯ ಸಂಬಂಧ ಸುಧಾರಿಸಿಕೊಳ್ಳುವತ್ತ ಗಮನ ಕೊಡುವುದು ಜಾಣ ನಡೆ ಆದೀತು ಎಂದು `ಗ್ಲೋಬಲ್ ಟೈಮ್ಸ್’ ಚೀನಾ ಸರ್ಕಾರಕ್ಕೆ ಕಿವಿಮಾತಿನ ರೀತಿಯಲ್ಲಿ ಬರೆದಿತ್ತು. ಅಷ್ಟೇ ಅಲ್ಲ, ಭಾರತ-ಜಪಾನ್ ಸ್ನೇಹದಿಂದ ಭಾರತ-ಚೀನಾದ ನಂಟೇನೂ ಮುಕ್ಕಾಗದು ಎಂಬ ಎಚ್ಚರಿಕೆಯನ್ನೂ ವರದಿಯ ಕೊನೇ ಸಾಲಲ್ಲಿ ಸೇರಿಸಲಾಗಿತ್ತು. ಚೀನಾದೊಂದಿಗೆ ಭಾರತದ ಸ್ನೇಹ ಸಂಬಂಧ, ಬಾಂಧವ್ಯಗಳೆಲ್ಲ ಎಲ್ಲಿದ್ದವು, ಯಾವಾಗಿತ್ತು? ಸ್ನೇಹ ಹೇಗಿರಲು ಸಾಧ್ಯ? ಜಪಾನ್‍ನಲ್ಲಿ ಮೋದಿ ಹೂಡಿದ ಪರೋಕ್ಷ ವಾಗ್ಬಾಣ ಮತ್ತು ಅದರ ಹಿನ್ನೆಲೆಯಲ್ಲಿ `ಗ್ಲೋಬಲ್ ಟೈಮ್ಸ್’ ಮಾಡಿದ ವರದಿ ಪರಿಣಾಮ ಚೀನಾ ನಾಯಕರ ಕಣ್ಣು ತೆರೆಸಿಲ್ಲ ಅಂತ ಹೇಳುವುದು ಹೇಗೆ?

ನೇರ ಪರಿಣಾಮ ಏನಾಯಿತು ಅಂದರೆ ಚೀನಾ ಅಧ್ಯಕ್ಷರು ಪಾಕಿಸ್ತಾನದ ಪ್ರವಾಸ ರದ್ದುಮಾಡಬೇಕಾಗಿ ಬಂತು. ಮೂಲ ಕಾರ್ಯಕ್ರಮದ ಪ್ರಕಾರ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ತ್ರಿರಾಷ್ಟ್ರ ಪ್ರವಾಸ ಹಮ್ಮಿಕೊಂಡಿದ್ದರು. ಶ್ರೀಲಂಕಾ, ಪಾಕಿಸ್ತಾನ ಮತ್ತು ಭಾರತಕ್ಕೆ ಅವರ ಪ್ರವಾಸ ನಿಕ್ಕಿ ಆಗಿತ್ತು. ದಿಢೀರ್ ಅಂತ ಪಾಕ್ ಪ್ರವಾಸ ಮುಂದೂಡಿದರು. ಪಾಕಿಸ್ತಾನದಲ್ಲಿ ಆಂತರಿಕ ಪರಿಸ್ಥಿತಿ ಸರಿಯಿಲ್ಲ ಎಂಬುದು ಮೇಲ್ನೋಟದ ಕಾರಣವಾದರೂ ಪ್ರವಾಸ ಕಾರ್ಯಕ್ರಮ ಬದಲಾಗಲು ಆಂತರಂಗಿಕ ಕಾರಣ ಏನೆಂಬುದು ಇಡೀ ಜಗತ್ತಿಗೇ ಗೊತ್ತು.

ಭಾರತದ ವಿಷಯದಲ್ಲಿ ಚೀನಾದ್ದು ಮಿಲಿಟರಿ ಕಿರುಕುಳ ಮಾತ್ರವಲ್ಲ, ವ್ಯಾಪಾರ ವಹಿವಾಟಿನ ವಿಷಯದಲ್ಲೂ ಅದೇ ಧೋರಣೆ. ನಾವಾದರೆ ಸಣ್ಣ ಪಿನ್ನು, ಪೆನ್ನಿಂದ ಹಿಡಿದು ಅಗ್ಗದಲ್ಲಿ ಸಿಗುತ್ತದೆ ಅನ್ನುವ ಕಾರಣಕ್ಕೆ ಹಿಂದೆಮುಂದೆ ನೋಡದೆ ಚೈನಾ ಮೇಡ್ ಉತ್ಪನ್ನಗಳನ್ನು ಖರೀದಿಸಿ ಖುಷಿಪಡುತ್ತೇವೆ. ಆದರೆ ಚೀನಾ ಸರ್ಕಾರಕ್ಕೆ ಭಾರತದ ಉತ್ಪನ್ನಗಳೆಂದರೆ ಅಲರ್ಜಿ. ಭಾರತ ಜಗತ್ತಿನ ಇತರ ದೇಶಗಳಿಗೆ ಪ್ರಮುಖವಾಗಿ ನಲ್ವತ್ತೊಂದು ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಪ್ಲಾಸ್ಟಿಕ್ ಉತ್ಪನ್ನಗಳು, ನಾರು-ನಾರಿನ ಉತ್ಪನ್ನಗಳು, ಎಲೆಕ್ಟ್ರಿಕಲ್ ಉಪಕರಣಗಳು, ಆಪ್ಟಿಕಲ್ ಮಷಿನರಿ, ವಾಹನಗಳು ಹಾಗೂ ಔಷಧ ಇವು ಪ್ರಮುಖ ರಫ್ತು ಉತ್ಪನ್ನಗಳು. ಆದರೆ ಚೀನಾದಲ್ಲಿ ಮಾತ್ರ ನಮ್ಮ ಕಂಪನಿಗಳು ಇವ್ಯಾವನ್ನೂ ಸಲೀಸಾಗಿ ಮಾರಾಟ ಮಾಡಲು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ಭಾರತದ ಒಂದು ಕಂಪನಿ ಪರವಾನಗಿ ನೋಂದಣಿ ಮಾಡಲು ಕನಿಷ್ಠ ಐದು ವರ್ಷ ಬೇಕು. ಹಾಗೂಹೀಗೂ ನೋಂದಣಿ ಮಾಡಿಕೊಂಡರು ಅಂದುಕೊಳ್ಳಿ, ಅಲ್ಲಿ ವಿಧಿಸುವ ವಿಪರೀತ ಆಮದು ಸುಂಕ ಕಟ್ಟಿ ವ್ಯಾಪಾರ ವ್ಯವಹಾರ ಮಾಡಲು ಸಾಧ್ಯವೇ ಇಲ್ಲ. ಅದೇ ಭಾರತದಲ್ಲಿ ಚೀನಾದ ಕಂಪನಿ ಮೂರರಿಂದ ಐದು ತಿಂಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಚೀನಾದ ಉತ್ಪನ್ನಕ್ಕೆ ಆಮದು ಸುಂಕದ ಕಾಟವೂ ಇಲ್ಲ. ನಮ್ಮ ಸರ್ಕಾರಗಳು ಇದುವರೆಗೂ ಇದೇ ನೀತಿಯನ್ನು ಸಹಿಸಿಕೊಂಡು, ಅನುಸರಿಸಿಕೊಂಡು ಬಂದಿವೆ ಅಂದರೆ ಏನು ಹೇಳೋಣ? ಆಮದು-ರಫ್ತು ವಿಚಾರದಲ್ಲಿ ಚೀನಾದ ಭಾರತ-ವಿರೋಧಿ ನೀತಿಯ ಪರಿಣಾಮ ಏನು ಗೊತ್ತೇ? ಭಾರತದ ರಿಸರ್ವ್ ಬ್ಯಾಂಕ್ ವರದಿಯೇ ಹೇಳುವ ಪ್ರಕಾರ, ಭಾರತಕ್ಕೆ ವಾರ್ಷಿಕ 39 ಶತಕೋಟಿ ಡಾಲರ್ ವಹಿವಾಟು ನಷ್ಟವಾಗುತ್ತಿದೆ. ಬಹುಶಃ ವ್ಯಾಪಾರ ವ್ಯವಹಾರದ ವಿಚಾರದಲ್ಲಿ ಇನ್ನೂ ಬಹಳ ಕಾಲ ಚೀನಾಕ್ಕೊಂದು ನೀತಿ ಭಾರತಕ್ಕೊಂದು ನೀತಿ ಮುಂದುವರಿಯಲು ಸಾಧ್ಯವಿಲ್ಲ. ಈ ಬದಲಾವಣೆಗೆ ಅಧ್ಯಕ್ಷ ಜಿನ್‍ಪಿಂಗ್ ಭಾರತ ಭೇಟಿ ಒಂದು ಶುಭಾರಂಭ ಅಂತ ವಿಶ್ಲೇಷಣೆ ಮಾಡಲಾಗುತ್ತಿದೆ.

ಜಿನ್‍ಪಿಂಗ್ ದೆಹಲಿಯಲ್ಲಿ ಪ್ರಧಾನಿ ಮೋದಿ ಜತೆ ಮಾತುಕತೆಗೆ ಕುಳಿತುಕೊಳ್ಳುವವರೆಗೂ ಅತ್ತ ಚೀನಾದ ಸೈನಿಕರು ಲಡಾಖ್‍ನಲ್ಲಿ ಲಡಾಯಿ ಮಾಡುವ ದುಸ್ಸಾಹಸ ಮಾಡುತ್ತಲೇ ಇದ್ದರು. ಚೀನಿ ಸೈನಿಕರ ಉಪಟಳದ ಕುರಿತು ಪ್ರಧಾನಿ ಮೋದಿ ಮಾತುಕತೆ ವೇಳೆ ಖಡಕ್ಕಾಗಿಯೇ ಪ್ರಸ್ತಾಪಿಸಿದ್ದರು. ಅದರ ಪರಿಣಾಮ ಎನ್ನುವ ಹಾಗೆ ಮಾತುಕತೆ ಮುಗಿದು ಅರ್ಧ ಗಂಟೆಯಲ್ಲಿ ಭಾರತದ ನೆಲದಿಂದ ಚೀನಿ ಸೈನಿಕರು ತಾವಾಗೇ ಕಾಲ್ಕಿತ್ತರು. ಚೀನಾದ ನಡವಳಿಕೆಯಲ್ಲಿ ಇದೊಂದು ಸಕಾರಾತ್ಮಕ ಬೆಳವಣಿಗೆ ಅಂತ ಭಾವಿಸಬಹುದೇ?

ಹಾಗೆ ಭಾವಿಸುವುದಕ್ಕೆ ಸಾಕಷ್ಟು ಕಾರಣಗಳಿವೆ. ಮುಖ್ಯವಾಗಿ ಭಾರತವು ಚೀನಾ ಮತ್ತು ಪಾಕಿಸ್ತಾನಕ್ಕೆ ಹೊರತಾಗಿ ಇತರೆಲ್ಲ ನೆರೆ ರಾಷ್ಟ್ರಗಳೊಂದಿಗೆ ಸ್ನೇಹ ಸಂಬಂಧದ ಹೊಸ ಅಧ್ಯಾಯ ಆರಂಭಿಸಿದೆ. ಈ ಬೆಳವಣಿಗೆ ಪಾಕಿಸ್ತಾನಕ್ಕಿಂತ ಹೆಚ್ಚಾಗಿ ಚೀನಾದ ನಾಯಕರಲ್ಲಿ ತಳಮಳ ಉಂಟುಮಾಡಿದೆ. ಇಂಥ ಸಂದರ್ಭದಲ್ಲಿ ಬೇರೆ ಹಾದಿ ತುಳಿದರೆ ತನಗೇ ನಷ್ಟ ಎಂಬುದು ಚೀನಾಕ್ಕೆ ಅರ್ಥವಾದಂತಿದೆ. ಅದರ ಪರಿಣಾಮವಾಗಿ ಅಮೆರಿಕದಂತೆ ಚೀನಾ ಕೂಡ ದ್ವೇಷಸಾಧನೆಯ ರಾಜತಾಂತ್ರಿಕತೆ ಬದಿಗಿಟ್ಟು ಉದ್ಯಮ ಸಂಬಂಧವನ್ನು ಗಟ್ಟಿ ಮಾಡಿಕೊಂಡು ಉದ್ಯೋಗ ಮತ್ತು ಆರ್ಥಿಕ ಮುಗ್ಗಟ್ಟಿನಿಂದ ಪಾರಾಗುವ ಕಡೆ ಗಮನ ಕೇಂದ್ರೀಕರಿಸಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಅಧ್ಯಕ್ಷ ಜಿನ್‍ಪಿಂಗ್ ವಾಸ್ತವಿಕ ನೆಲೆಗಟ್ಟಿನಲ್ಲಿ, ಮುಕ್ತವಾಗಿ ಆಲೋಚನೆ ಮಾಡುತ್ತಾರೆ ಎಂಬ ಅಭಿಪ್ರಾಯ ಅಂತಾರಾಷ್ಟ್ರೀಯ ವಲಯದಲ್ಲಿ ಬಲಗೊಳ್ಳುತ್ತಿದೆ. ಭಾರತ ಭೇಟಿಯ ವೇಳೆ ಜಿನ್‍ಪಿಂಗ್ ಅವರ ಹಾವಭಾವದಲ್ಲೂ ಅಂತಹ ಲಕ್ಷಣಗಳು ವ್ಯಕ್ತವಾಗಿದೆ.

ಅದು ನಿಜವೇ ಆದರೆ ಭಾರತ, ಜಪಾನ್ ಮತ್ತು ಚೀನಾ ಶಕ್ತಿಗಳು ಒಗ್ಗೂಡುವ ಕನಸು ನನಸಾಗಿ `21ನೇ ಶತಮಾನ ಏಷ್ಯಾದ ಶತಮಾನ’ ಎಂಬ ಹೇಳಿಕೆ ಸಾಕಾರವಾದೀತು. ಖಂಡಿತ ಹೊಸ ನಿರೀಕ್ಷೆ ಇಟ್ಟುಕೊಳ್ಳಬಹುದು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top