ಹರಿಪ್ರಕಾಶ ಕೋಣೆಮನೆ

 
HPK (1)1ಕನ್ನಡದ ನಂ.1 ದೈನಿಕ ವಿಜಯವಾಣಿ ಪತ್ರಿಕೆಯ ಸಂಪಾದಕರು ಹಾಗೂ ವಿ ಆರ್ ಎಲ್‌ ಮೀಡಿಯಾ ಲಿಮಿಟೆಡ್‌ನ  ನಿರ್ದೇಶಕರೂ ಆಗಿರುವ ಹರಿಪ್ರಕಾಶ ಕೋಣೆಮನೆ ಅವರು ಮೂಲತಃ ಗ್ರಾಮೀಣ ಹಿನ್ನಲೆಯಿಂದ ಬಂದವರು. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ನಂದೊಳ್ಳಿ ಗ್ರಾಮದ ಕೃಷಿಕರಾದ ಶ್ರೀ ವೆಂಕಟರಮಣ ಕೋಣೆಮನೆ ಹಾಗೂ ಶ್ರೀಮತಿ ಪಾರ್ವತಿಯವರ ಪುತ್ರನಾಗಿ ಜನಿಸಿದರು. ಹೈಸ್ಕೂಲ್‌ವರೆಗಿನ ಪ್ರಾಥಮಿಕ ಶಿಕ್ಷಣವನ್ನು ಊರು ನಂದೊಳ್ಳಿ ಮತ್ತು ಯಲ್ಲಾಪುರದಲ್ಲಿ ಮುಗಿಸಿದರು. ನಂತರ ಶಿರಸಿಯ ಎಂಎಂ ಆರ್ಟ್ಸ್‌ ಆ್ಯಂಡ್ ಸೈನ್ಸ್‌ ಕಾಲೇಜಿನಲ್ಲಿ ಬಿ.ಎ. ಪದವಿ ಓದು.

ಮೈಸೂರು ವಿ.ವಿಯಿಂದ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಡಿಪ್ಲೊಮ ಪದವಿ ಗಳಿಸಿದರು. ಬಾಲ್ಯದಿಂದಲೂ ನಾಗರಿಕ ಸೇವಾ ಕ್ಷೇತ್ರದ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದ ಅವರು ಯಪಿಎಸ್ಸಿ ನಡೆಸುವ ನಾಗರಿಕ ಸೇವಾ ಪರೀಕ್ಷೆಗೆ ಎರಡು ವರ್ಷಕಾಲ ಹೈದರಾಬಾದ್, ದೆಹಲಿ ಮತ್ತು ಬೆಂಗಳೂರಲ್ಲಿ ತರಬೇತಿ ಪಡೆದು ಅಧ್ಯಯನ ನಡೆಸಿದರು. ಆದರೆ, ಅದೇ ವೇಳೆಗೆ ಒಳಮನಸ್ಸು ಪತ್ರಿಕೋದ್ಯಮ ಕ್ಷೇತ್ರದತ್ತ ಸೆಳೆದದ್ದರಿಂದ 2002ರಲ್ಲಿ ನಾಡಿನ ಹಿರಿಯ ಪತ್ರಿಕೆ ಸಂಯುಕ್ತ ಕರ್ನಾಟಕ ಪತ್ರಿಕೆಯ ಮೂಲಕ ಪತ್ರಿಕೋದ್ಯಮದಲ್ಲಿ ಪೂರ್ಣಕಾಲಿಕವಾಗಿ ತೊಡಗಿಸಿಕೊಂಡರು. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿಪರ ಪತ್ರಿಕೋದ್ಯಮ ಶುರು ಮಾಡಿದ ಅವರು ಕೆಲವೇ ತಿಂಗಳುಗಳಲ್ಲಿ ಎಲ್ಲ ಆವೃತ್ತಿಗಳ ಸುದ್ದಿ ಸಮನ್ವಯಕಾರರಾಗಿ ಬಡ್ತಿ ಪಡೆದದ್ದು ಹರಿಪ್ರಕಾಶ ಅವರ ದಕ್ಷತೆ ಮತ್ತು ಚುರುಕುತನಕ್ಕೆ ಸಾಕ್ಷಿ.

 ಮುಂದೆ 2005ರಲ್ಲಿ ವಿಆರ್‍ಎಲ್‌ ಮೀಡಿಯಾ ಸಂಸ್ಥೆ ಉಷಾ ಕಿರಣ ದಿನಪತ್ರಿಕೆ ಆರಂಭಿಸಿದಾಗ ಅದರ ಹುಬ್ಬಳ್ಳಿ ಆವೃತ್ತಿಯ ಮುಖ್ಯಸ್ಥರಾಗಿ ನೇಮಕಗೊಂಡರು. ಆ ವೇಳೆ ಉಷಾ ಕಿರಣ ಪತ್ರಿಕೆ ಬೇರೆಲ್ಲ ಆವೃತ್ತಿಗಳಿಗಿಂತ ಹೆಚ್ಚಿನ ಪ್ರಸಾರ ಸಂಖ್ಯೆ ಹೊಂದುವಂತೆ ಮಾಡುವಲ್ಲಿ ಹರಿಪ್ರಕಾಶ ಅವರ ಪಾತ್ರ ಪ್ರಮುಖವಾದದ್ದು. ಉಷಾ ಕಿರಣ ಪತ್ರಿಕೆಯ ಹುಬ್ಬಳ್ಳಿ ಆವೃತ್ತಿ ಕಚೇರಿಯಲ್ಲಿ ಮೊದಲ ಬಾರಿಗೆ ಪೇಪರ್‍ಲೆಸ್ ಆಫೀಸ್ ಕಲ್ಪನೆಯನ್ನು ಸಾಕಾರ ಮಾಡಿ ಕಂಪ್ಯೂಟರ್ ಮತ್ತು ಇತರ ತಂತ್ರಜ್ಞಾನವನ್ನು ಕನ್ನಡ ಪತ್ರಿಕೋದ್ಯಮದಲ್ಲಿ ಬಹು ಬಳಕೆ ತಂದದ್ದು ವೃತ್ತಿ ಜೀವನದ ಹೆಚ್ಚುಗಾರಿಕೆ ಎಂದರೆ ತಪ್ಪಾಗಲಾರದು.
 
ಮುಂದೆ ಟೈಮ್ಸ್‌ ಆಫ್ ಇಂಡಿಯಾ ಕನ್ನಡ ದಿನ ಪತ್ರಿಕೆ ಆರಂಭವಾದಾಗ ಅದರ ಬೆಂಗಳೂರು ಬ್ಯೂರೋದ ಮುಖ್ಯಸ್ಥರಾಗಿ ಕೆಲಸ ಮಾಡಿದರು. 2008ರಲ್ಲಿ ಪುನಃ ಸಂಯುಕ್ತ ಕರ್ನಾಟಕ ಪತ್ರಿಕೆ ಪ್ರವೇಶ. ಅಲ್ಲಿ ಸಹಾಯಕ ಸಂಪಾದಕರಾಗಿ ಸಂಯುಕ್ತ ಕರ್ನಾಟಕ ಪತ್ರಿಗೆ ಹೊಸ ರೂಪ ಕೊಡಲು ವಿಶೇಷ ಪ್ರಯತ್ನ ಮಾಡಿದರು. ಸಂಯುಕ್ತ ಕರ್ನಾಟಕ ಪತ್ರಿಕೆಗೆ ಹೊಸ ವಿನ್ಯಾಸ, ಸುದ್ದಿ ಆಯ್ಕೆ ಮತ್ತು ಬರವಣಿಗೆ ಶೈಲಿಯಲ್ಲಿ ಹೊಸತನ ತಂದರು. ಹೊಸ ಹೊಸ ಅಂಕಣಗಳನ್ನು ಪರಿಚಯಿಸಿದರು. ಸಂಯಕ್ತ ಕರ್ನಾಟಕ ಪತ್ರಿಕೆಯಲ್ಲಿ 2008ರಿಂದ 2010ರವರೆಗೆ ಎರಡು ವರ್ಷಕಾಲ ಪ್ರತಿ ಮಂಗಳವಾರ ಹರಿಪ್ರಕಾಶ ಅವರು ಬರೆಯುತ್ತಿದ್ದ ಸಕಾಲಿಕ ವಿಷಯಗಳ ಮೇಲಿನ ದೇಶಕಾಲ ಅಂಕಣ ಜನಪ್ರಿಯವಾಗಿತ್ತು. ಅಂಕಣಗಳ ಸಂಗ್ರಹ ದೇಶಕಾಲ ಹೆಸರಿನಲ್ಲೇ ಪುಸ್ತಕ ರೂಪದಲ್ಲಿ ತೆರೆಕಂಡು ಅಪಾರ ಮೆಚ್ಚುಗೆ ಪಡೆದುಕೊಂಡಿತು.
 
2010ರಲ್ಲಿ ಉದಯವಾಣಿ ಪತ್ರಿಕೆಯ ಬೆಂಗಳೂರು ಆವೃತ್ತಿಯ ಸುದ್ದಿ ಸಂಪಾದಕರಾಗಿ ನಿಯುಕ್ತಿಗೊಂಡದ್ದು ವೃತ್ತಿ ಜೀವನದಲ್ಲಿ ಮತ್ತೊಂದು ಪ್ರಮುಖ ಘಟ್ಟ ಎಂದರೆ ತಪ್ಪಲ್ಲ. ಕೇವಲ ಅತ್ಯಲ್ಪ ಕಾಲದಲ್ಲಿ ಉದಯವಾಣಿ ಬೆಂಗಳೂರು ಆವೃತ್ತಿಯನ್ನು ರೀಲಾಂಚ್ ಮಾಡಿ ಪತ್ರಿಕೆಗೆ ಹೊಸ ರೂಪ ಕೊಡುವಲ್ಲಿ ಪ್ರಮುಖವಾಗಿ ಶ್ರಮಿಸಿದರು. ಹೊಸ ರೂಪದಲ್ಲಿ ಹೊರಬಂದ ಉದಯವಾಣಿ ಪತ್ರಿಕೆ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತು. ಉದಯವಾಣಿ ರೀಲಾಂಚ್ ವೇಳೆ ಕನ್ನಡ ಪತ್ರಿಕೋದ್ಯಮದಲ್ಲೇ ಹೊಸ ಪ್ರಯೋಗವಾದ ದಿನವೂ ಕಲರ್‍ಫುಲ್‌ ಸುದ್ದಿ ಪುಟ ಬಾಲ್ಕನಿ ಹೊಸ ಸಂಪ್ರದಾಯ ಮತ್ತು ಇತಿಹಾಸವನ್ನು ಸೃಷ್ಟಿಸಿತು. ಹೊಸ ಪ್ರಯೋಗ ಓದುಗರಿಂದ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡಿತು.
 
ಚುರುಕುಶೈಲಿಯ ಬರವಣಿಗೆಯಿಂದಲೇ ಗುರುತಿಸಿಕೊಂಡಿರುವ ಹರಿಪ್ರಕಾಶ ಅವರು ಸುತ್ತಮುತ್ತಲಿನ ಜಗತ್ತಿನ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸಿ ಟಿಪ್ಪಣಿ ಮಾಡುವ ಕಲೆ ಕರಗತ ಮಾಡಿಕೊಂಡಿದ್ದಾರೆ. ದೂರದೃಷ್ಟಿ, ಮತ್ತು ವಿಶ್ಲೇಷಣಾತ್ಮಕ ಮತ್ತು ಸಮತೋಲನದ ಅತ್ಯುತ್ತಮ ರಾಜಕೀಯ ವಿಶ್ಲೇಷಣೆ ಮಾಡುವುದರ ಜೊತೆಗೆ ಮಾಹಿತಿಯುಕ್ತ ಸೃಜನಾತ್ಮಕ ಬರವಣಿಗೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೊಸ ಹೊಸ ವಿಷಯಗಳನ್ನು ತತ್‌ಕ್ಷಣವೇ ಗ್ರಹಿಸುವ ಶಕ್ತಿ ಹೊಂದಿದ್ದು, ತಂಡದ ಸದಸ್ಯರ ದೌರ್ಬಲ್ಯ ಹಾಗೂ ಧನಾತ್ಮಕ ವಿಷಯಗಳನ್ನು ಅರಿತು ಅವರ ಸಾಮರ್ಥ್ಯವನ್ನು ಪತ್ರಿಕೆಯ ಹಿತಕ್ಕೆ ತಕ್ಕಂತೆ ಬಳಸಿಕೊಳ್ಳುವುದು ಹರಿಪ್ರಕಾಶ ಅವರ ವಿಶೇಷತೆ ಎನ್ನಲಡ್ಡಿಯಿಲ್ಲ. ಎಂತಹ ಒತ್ತಡದ ಪರಿಸ್ಥಿತಿಯಲ್ಲೂ ಶಾಂತಚಿತ್ತರಾಗಿ ಸರಿಯಾದ ನಿರ್ಧಾರದೊಂದಿಗೆ ಪತ್ರಿಕಾಕರ್ತರ ತಂಡ ಮುನ್ನಡೆಸುವುದು ಹರಿಪ್ರಕಾಶ ಅವರ ಹತ್ತು ಹಲವು ಗುಣಗಳಲ್ಲಿ ಒಂದು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿವಿಧ ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸುವ ಮೂಲಕ ತಮ್ಮೊಳಗಿನ ಕತೃತ್ವಶಕ್ತಿಯ ಜತೆಗೆ ಉತ್ತಮ ನಾಯಕತ್ವ ಗುಣವನ್ನು ಸಾಬೀತು ಮಾಡಿದ್ದಾರೆ.
 
ಗ್ರಾಮೀಣ ಹಿನ್ನೆಲೆ ಹೊಂದಿದ ಅವರು, 2011ರಲ್ಲಿ ಮತ್ತೆ ವಿಆರ್‍ಎಲ್‌ ಸಮೂಹಕ್ಕೆ ಪದಾರ್ಪಣೆ. 2011ರ ಜೂನ್ ತಿಂಗಳಿನಲ್ಲಿ ವಿಆರ್‍ಎಲ್‌ ಮೀಡಿಯಾ ಸಂಸ್ಥೆಯ ಒಡೆತನದ ವಿಜಯವಾಣಿ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯಾರಂಭ ಮಾಡಿದರು. ವಿಜಯವಾಣಿ ಪತ್ರಿಕೆಯ ಆರಂಭಿಕ ತಂಡದ ಸದಸ್ಯರಾಗಿ ರಾಜ್ಯದ ಉದ್ದಗಲಕ್ಕೆ ವ್ಯಾಪಿಸಿರುವ ಹತ್ತು ಆವೃತ್ತಿಗಳ ಮೂಲಕ ಉತ್ತಮ ಪತ್ರಿಕಾಕರ್ತರ ತಂಡ ಕಟ್ಟುವಲ್ಲಿ ವಿಶೇಷ ಪರಿಶ್ರಮಪಟ್ಟರು. ಒಂದು ತಂಡವಾಗಿ ಸಂಪೂರ್ಣ ಪರಿಶ್ರಮ ಹಾಕಿ ಕೆಲಸ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಕೇವಲ ಎರಡು ವರ್ಷಗಳಲ್ಲಿ ವಿಜಯವಾಣಿ ಪತ್ರಿಕೆ ಕನ್ನಡದ ಮುಂಚೂಣಿ ಪತ್ರಿಕೆಯಾಗಿ ಭದ್ರ ನೆಲೆ ಕಂಡುಕೊಂಡಿದ್ದೇ ನಿದರ್ಶನ. ವಿಜಯವಾಣಿ ಪತ್ರಿಕೆಯ ಡೆಪ್ಯುಟಿ ಎಡಿಟರ್ ಆಗಿ ಹರಿಪ್ರಕಾಶ ಅವರು 400ಕ್ಕೂ ಹೆಚ್ಚು ಸಹೋದ್ಯೋಗಿಗಳನ್ನು ಒಂದು ತಂಡವೆಂಬಂತೆ ಮುನ್ನಡೆಸಿದ್ದು, ಅವರ ವೃತ್ತಿ ಬದುಕಿನ ಮಹತ್ವದ ಮೈಲಿಗಲ್ಲು ಎಂದರೆ ತಪ್ಪಲ್ಲ. ಇತ್ತೀಚೆಗೆ ಪತ್ರಿಕೆಯ ಸ್ಥಾಪಕ ಸಂಪಾದಕರಾದ ಶ್ರೀಯುತ ತಿಮ್ಮಪ್ಪ ಭಟ್ ಅವರು ನಿವೃತ್ತರಾದಾಗ ಪತ್ರಿಕೆಯ ಆಡಳಿತ ಮಂಡಳಿ ಪ್ರಧಾನ ಸಂಪಾದಕ ಸ್ಥಾನದ ಜವಾಬ್ದಾರಿಯನ್ನೂ ಹರಿಪ್ರಕಾಶ್ ಕೋಣೆಮನೆ ಅವರ ಹೆಗಲೇರಿಸಿತು. ಇದು ಅವರ ಸಾಮರ್ಥ್ಯ ಹಾಗೂ ಕರ್ತವ್ಯ ಬದ್ಧತೆಗೆ ಸಂದ ಗೌರವ ಎಂದು ಹೇಳಬಹುದು. ಇದರೊಂದಿಗೆ ಅತ್ಯಂತ ಕಿರಿಯವಯಸ್ಸಿನಲ್ಲೇ ಅಂದರೆ 39ನೇ ವಯಸ್ಸಿನಲ್ಲೇ ರಾಜ್ಯದ ಅಗ್ರಗಣ್ಯ ಪತ್ರಿಕೆಯ ಪ್ರಧಾನ ಸಂಪಾದಕರಾದ ಕೀರ್ತಿಗೆ ಅವರು ಭಾಜನರಾದರು.
 
ವಿ ಆರ್ ಎಲ್‌ ಮೀಡಿಯಾ ನಿರ್ದೇಶಕ – ಪತ್ರಿಕೆಯ ಪ್ರಧಾನ ಸಂಪಾದಕರಾದ ಬೆನ್ನಲ್ಲೇ ಅವರ ಸಾಧನೆಯನ್ನು ಗುರುತಿಸಿದ ಆಡಳಿತ ಮಂಡಳಿ, ಅವರನ್ನು ವಿ ಆರ್ ಎಲ್‌ ಮೀಡಿಯಾ ಲಿಮಿಟೆಡ್‌ನ ನಿರ್ದೇಶಕರನ್ನಾಗಿಯೂ ನಾಮನಿರ್ದೇಶನ ಮಾಡಿತು. 
 
ವಿಜಯವಾಣಿ ಪತ್ರಿಕೆಯಲ್ಲಿ ಈಗ ಅವರು ಕಾಮೆಂಟರಿ ಅಂಕಣದ ಮೂಲಕ ಪ್ರಚಲಿತ ವಿದ್ಯಮಾನಗಳ ಮೇಲೆ ಸೂಕ್ಷ್ಮನೋಟ, ವಸ್ತುನಿಷ್ಠ ವಿಶ್ಲೇಷಣೆಯ ಲೇಖನಗಳ ಮೂಲಕ ಅಪಾರ ಓದುಗರ ಮನಸ್ಸಿನ ಕದ ತಟ್ಟುತ್ತಿದ್ದಾರೆ. 2014ರ ಜನವರಿಯಲ್ಲಿ ಮಲೇಷ್ಯಾ ದೇಶಕ್ಕೆ ವಿಜಯವಾಣಿ ಪತ್ರಿನಿಧಿಯಾಗಿ ತೆರಳಿದ್ದ ಅವರು, ಅಲ್ಲಿನ ವಿಸಿಟ್ ಮಲೇಷ್ಯಾ 2014- ಮೆಗಾ ಎಫ್‍ಎಎಂ ಇವೆಂಟ್‍ನಲ್ಲಿ ಭಾಗಿಯಾಗಿದ್ದರು. ಮಲೇಷ್ಯಾ ಪ್ರವಾಸದ ಸಂದರ್ಭದಲ್ಲಿ ಮತ್ತು ಆ ನಂತರ ಬರೆದ ಸರಣಿ ಲೇಖನಗಳು ಓದುಗರಿಂದ ಅಪಾರ ಮೆಚ್ಚುಗೆ ಗಳಿಸಿತು.
 
ಆಯಾ ರಾಷ್ಟ್ರಗಳಲ್ಲಿರುವ ಅಮೆರಿಕ ರಾಯಭಾರ ಕಚೇರಿ ಸಿಬ್ಬಂದಿ, ರಾಜಕೀಯ, ಆರೋಗ್ಯ, ಪರಿಸರ ಸೇರಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿರುವ ಜಗತ್ತಿನ ವಿವಿಧ ದೇಶಗಳ ಇಬ್ಬರನ್ನು ಗುರುತಿಸಿ, ಈ ಕಾರ್ಯಕ್ರಮಕ್ಕೆ ಆಯ್ಕೆ ಮಾಡುತ್ತದೆ. ಹೀಗೆ ಭಾರತದಿಂದ ಈ ಬಾರಿ ಆಯ್ಕೆಯಾದ ಇಬ್ಬರು ಪ್ರತಿನಿಧಿಗಳ ಪೈಕಿ ಹರಿಪ್ರಕಾಶ್ ಅವರಿಗೆ ಆಹ್ವಾನ ಸಿಕ್ಕಿದ್ದು ಮತ್ತೊಂದು ವಿಶೇಷ.
 
ಹಾಗೆ ಅವರು ಇತ್ತೀಚೆಗೆ (2014ರ ಅ.27ರಿಂದ ನ.15ರ ತನಕ) ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ನಡೆದ `ಎಡ್ವರ್ಡ್ ಆರ್. ಮ್ಯುರೋ ಪತ್ರಕರ್ತರ ಕಾರ್ಯಕ್ರಮದಡಿ ವಾರ್ಷಿಕವಾಗಿ ನಡೆಯುವ ಜಾಗತಿಕ ನಾಯಕತ್ವ ವಿನಿಮಯ ಕಾರ್ಯಕ್ರಮ’ದಲ್ಲಿ ಪಾಲ್ಗೊಂಡಿದ್ದರು. ಅಮೆರಿಕದ ವಿದೇಶಾಂಗ ಇಲಾಖೆ ಆಹ್ವಾನದ ಮೇರೆಗೆ ಈ ಕಾರ್ಯಕ್ರಮಕ್ಕೆ ತೆರಳಿದ ಅವರು, ಅಮೆರಿಕದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಂದರ, ವಿದೇಶಾಂಗ ನೀತಿಗಳ ವರದಿಗಾರಿಕೆಯಲ್ಲಿ ಮಾಧ್ಯಮಗಳ ಕಾರ್ಯಸೂಚಿ, ಪ್ರಸಕ್ತ ಸನ್ನಿವೇಶದಲ್ಲಿ ಎದುರಿಸುತ್ತಿರುವ ಸವಾಲುಗಳ ಕುರಿತ ಚರ್ಚಾಗೋಷ್ಠಿಯಲ್ಲೂ ಭಾಗಿಯಾಗಿದ್ದ ಅವರಿಗೆ, ವಿಶೇಷ ಪ್ರಶಂಸಾ ಪತ್ರವನ್ನು ಅಮೆರಿಕ ಸರ್ಕಾರ ನೀಡಿದೆ.
 
ಇದೇ ವೇಳೆ ಅವರು ಅಮೆರಿಕದ ಉತ್ತರದಿಂದ ದಕ್ಷಿಣದ ತನಕ ಪ್ರವಾಸ ಮಾಡಿದ್ದು, ವಾಷಿಂಗ್ಟನ್‍ನಲ್ಲಿರುವ ಮ್ಯೂಸಿಯಂ, ಅಮೆರಿಕದ ಕಾಂಗ್ರೆಸ್ (ಸಂಸತ್ತು)- ಸ್ಪೀಕರ್ ಜತೆಗೆ ಚರ್ಚೆ-ವಿದೇಶಾಂಗ ಇಲಾಖೆಯ ಕೇಂದ್ರ ಕಚೇರಿಗೆ ಭೇಟಿ ಮತ್ತು ಎರಡೂ ಕಡೆಗಳಲ್ಲಿ ಕಾರ್ಯದರ್ಶಿ, ಸಹ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ, ಅಮೆರಿಕದ ಪ್ರತಿಷ್ಠಿತ ಸಿರಾಕ್ಯೂಸ್ ಮತ್ತು ಅರಿಜೋನಾ ವಿವಿಗಳಿಗೆ ಭೇಟಿ, ಅಲ್ಲಿ ಅಂತಾರಾಷ್ಟೀಯ ಸಂಬಂಧ,ಸಾರ್ವಜನಿಕ ಸಂವಹನ ವಿಷಯಗಳ ಮೇಲೆ ತಜ್ಞರೊಂದಿಗೆ ಚರ್ಚೆ, ನ್ಯೂಯಾರ್ಕರ್, ಯುಎಸ್‍ಎ ಟುಡೆ (ನಂ-1 ದಿನಪತ್ರಿಕೆ), ಎಂಎಸ್‍ಎನ್‍ಬಿಸಿ ಟಿವಿ ಚಾನೆಲ್‍ಗೆ ಭೇಟಿ ಮಾಡಿ ಅಲ್ಲಿನ ಸಂಪಾದಕೀಯ ಸಿಬ್ಬಂದಿಯೊಂದಿಗೆ ಚರ್ಚೆ ಇತ್ಯಾದಿಗಳು ಪ್ರಮುಖ ಕಾರ್ಯಕ್ರಮಗಳು, ಮೆಕ್ಸಿಕೋ ಗಡಿ ಪ್ರದೇಶದಲ್ಲಿ ಸುತ್ತಾಡಿ ಅಲ್ಲಿನ ಅಕ್ರಮ ವಲಸಿಗರ ಸಮಸ್ಯೆ, ಮಾದಕ ವಸ್ತು ಕಳ್ಳಸಾಗಣೆ ಅಮೆರಿಕದಲ್ಲಿ ಸೃಷ್ಟಿಸಿರುವ ಅವಾಂತರಗಳ ಕುರಿತು ಪ್ರತ್ಯಕ್ಷ ಅಧ್ಯಯನ ಇವೆಲ್ಲ ಅವರ ಪಾಲಿಗೆ ಅಮೆರಿಕ ಪ್ರವಾಸದ ವೇಳೆ ಸಿಕ್ಕ ಮರೆಯಲಾಗದ ಅನುಭವ.

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top