ಈ ರೀತಿಯ‌ ಅಪಪ್ರಚಾರ, ಕಿರುಕುಳ ಸರಿಯೆ?

ಕೆಲ ಸಂದರ್ಭಗಳಲ್ಲಿ ವಿನಾಕಾರಣ ಕಿರಿಕಿರಿ,‌ ತೊಂದರೆ ಅನುಭವಿಸಬೇಕಾಗಿ ಬರುತ್ತದೆ. ಕೆಲ ವರ್ಷಗಳ ಹಿಂದಿನ ಅನುಭವ. ಈ ಹಿಂದೆ ನಾನು ವಿಜಯವಾಣಿ, ದಿಗ್ವಿಜಯ ನ್ಯೂಸ್ ಸಂಪಾದಕನಾಗಿದ್ದಾಗ ರಮಜಾನ್ ಹಬ್ಬದಂದು ಓರ್ವ ಪ್ರಬುದ್ಧ ಲೇಖಕರು ಬರೆದ ಉತ್ತಮ ಲೇಖನ ಪ್ರಕಟಿಸಿದ್ದೆವು. ಪುಟ ವಿನ್ಯಾಸ ಮಾಡುವಾಗ ಲೇಖನ ಗಮನ ಸೆಳೆಯುವಂತೆ ಮಾಡಲು,‌ ಪುಟದ ಅಂದ ಹೆಚ್ಚಿಸಲು ನನ್ನ ಆಗಿನ ಸಹೋದ್ಯೋಗಿಗಳು ಒಂದು ಸಾಂದರ್ಭಿಕ ಚಿತ್ರ ಬಳಸಿದ್ದರು. ಹಾಗೆ ದೇವರ ಚಿತ್ರ ಬಳಸುವುದು ನಿಷಿದ್ಧ ಎಂಬ ಮಾಹಿತಿ ಕೊರತೆ ನಮ್ಮ‌ ಸಹೋದ್ಯೋಗಿಗಳಿಗೆ ಇತ್ತು. ಹಾಗಾಗಿ ಚಿತ್ರ ಬಳಸಿಬಿಟ್ಟರು. ಆದರೆ ಅದರಲ್ಲಿ ದುರುದ್ದೇಶ ಏನೂ ಇರಲಿಲ್ಲ. ಅದಕ್ಕೇ ಬೆದರಿಕೆಗಳು ಎದುರಾದವು. ಆ ಪ್ರಕರಣ ಎಷ್ಟು ಗಂಭೀರ ಸ್ವರೂಪ ಪಡೆದುಕೊಂಡಿತು ಎಂದರೆ ನಮ್ಮ ಕಚೇರಿಗಳಿಗೆ ಎಂಟು ದಿನ ಪೊಲೀಸ್ ಪಹರೆ ಹಾಕಬೇಕಾಗಿ ಬಂತು.

ಈಗ ಕಳೆದ ಕೆಲ‌ ದಿನಗಳಿಂದ‌ ಅಂಥದ್ದೇ ವಿಚಿತ್ರ ಪ್ರಸಂಗವನ್ನು ನಾನು‌ ಎದುರಿಸುತ್ತಿದ್ದೇನೆ. ಕೊರೊ‌ನಾ ಸೋಂಕಿನ ಸುದ್ದಿ ಪ್ರಕಟಿಸುವಾಗ ತಬ್ಲಿಘ್ ಕುರಿತು ಪ್ರಸ್ತಾಪ ಮಾಡಬಾರದೆಂಬುದು ಕೆಲವರ ತಕರಾರು, ಆಕ್ಷೇಪ. ಉದಾಹರಣೆಗೆ ಮಂಗಳವಾರದ ವಿಕ ಆವೃತ್ತಿಯಲ್ಲಿ ‘ಒಂದೇ ದಿನ ಏಳು ಮಕ್ಕಳಿಗೆ ತಬ್ಲಿಘಿ ಸೋಂಕು’ ಎಂಬ ತಲೆಬರಹದ ಒಂದು ಸುದ್ದಿ ಪ್ರಕಟಿಸಿದ್ದೇವೆ. ಆ ಸುದ್ದಿಯ ಮೊದಲ ಪ್ಯಾರಾ ಹೀಗಿದೆ. ರಾಜ್ಯದಲ್ಲಿ ಹೊಸದಾಗಿ‌15 ಪ್ರಕರಣ ಪತ್ತೆಯಾಗಿದ್ದು, ಅದರಲ್ಲಿ ತಬ್ಲಿಘಿ ಸಂಪರ್ಕದಲ್ಲಿರುವ 18 ವರ್ಷದೊಳಗಿನ ಏಳು ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಕೊರೊನಾ ಸೋಂಕು ಪೀಡಿತ ತಬ್ಲಿಘಿಗಳ ಸಂಪರ್ಕದಿಂದ ಮಕ್ಕಳಿಗೆ ಸೋಂಕು ತಗುಲಿದೆ ಎನ್ನುವುದಷ್ಟೆ ಈ ಸುದ್ದಿಯ ಸ್ಪಷ್ಟ ಸಾರ.

ಆದರೆ ‘ಒಂದೇ ದಿನ ಏಳು ಮಕ್ಕಳಿಗೆ ತಬ್ಲಿಘಿ ಸೋಂಕು’ ಎಂಬ ಪೂರ್ಣ ಹೆಡ್ಡಿಂಗ್ ಮರೆಮಾಚಿ, ಅದರಲ್ಲಿನ ‘ತಬ್ಲಿಘಿ ಸೋಂಕು’ ಎಂಬ ಎರಡು ಪದವನ್ನಷ್ಟೇ ಇಟ್ಟುಕೊಂಡು ಅಪಪ್ರಚಾರ ಶುರುಮಾಡಿಕೊಂಡಿದ್ದಾರೆ. ತಬ್ಲಿಘಿ‌ ವೈರಸ್ ಎಂಬ ಪದವನ್ನೇ ನಾವು ಬಳಸಿಲ್ಲ. ಆದರೆ ಹೀಗೆ ಬಳಸಿದ್ದೇವೆಂದು ದೂಷಿಸತೊಡಗಿದ್ದಾರೆ.

ಈ ಸುದ್ದಿಯನ್ನಿಟ್ಟುಕೊಂಡು ನನ್ನ ಜಾತಿ, ನನ್ನ ಹಿನ್ನೆಲೆ ಇತ್ಯಾದಿಗಳನ್ನೆಲ್ಲ ಇಟ್ಟುಕೊಂಡು ಯಾರ ಘನತೆಗೂ ತಕ್ಕದಲ್ಲದ ಚರ್ಚೆಯನ್ನು ಕೆಲ ಕಿಡಿಗೇಡಿಗಳು ವಾಟ್ಸಾಪ್ ಮತ್ತು ಫೇಸ್ ಬುಕ್ ನಲ್ಲಿ ನಡೆಸುತ್ತಿದ್ದಾರೆ. ಅಷ್ಟು ಸಾಲದ್ದಕ್ಕೆ ನನ್ನ ಫೋನ್ ನಂಬರನ್ನು ವಾಟ್ಸಾಪ್ ಗುಂಪುಗಳಲ್ಲಿ ಹಂಚಿ ಫೋನ್ ಮಾಡಿ ಕಿರುಕುಳ ನೀಡುವ ಅಭಿಯಾನ‌ ಶುರು ಮಾಡಿದ್ದಾರೆ. ಮಂಗಳವಾರ ಇಡೀ ದಿನ ಇಂಥ ಫೋನುಗಳದ್ದೇ ಕಿರುಕುಳ. ಆರಂಭದಲ್ಲಿ ಒಬ್ಬಿಬ್ಬರಿಗೆ ತಿಳಿಹೇಳುವ ಯತ್ನ ಮಾಡಿದೆ. ತಬ್ಲಿಘಿಗಳ ನಡೆಯನ್ನು‌ ಇನ್ನೂ ಸಮರ್ಥಿಸಿಕೊಳ್ಳುತ್ತೀರಾ ಕೇಳಿದೆ. ಸರಕಾರ ಕೊಡುವ ಮಾಹಿತಿಯನ್ನು ಓದುಗರಿಗೆ ತಲುಪಿಸದೇ ತಡೆಹಿಡಿಯುವುದು ಅಪರಾಧ ಆಗುವುದಿಲ್ಲವೇ ಎಂದು ಪ್ರಶ್ನೆ ಮಾಡಿದೆ. ಪತ್ರಿಕೆ ಮಾಡುವ ಕೊರೊನಾ ಜಾಗೃತಿಯಲ್ಲಿ ಇದೊಂದು ಸಣ್ಣ ಭಾಗ ಎಂದೆ. ಇದ್ಯಾವುದನ್ನೂ ಅವರು ಕೇಳಿಸಿಕೊಳ್ಳಲು ತಯಾರಿರಲಿಲ್ಲ. ಇದು‌ ದುರುದ್ದೇಶಪೂರ್ವಕ ಅಭಿಯಾನ ಎಂದು ಗೊತ್ತಾದ ಮೇಲೆ ಅಪರಿಚಿತ ನಂಬರಿನಿಂದ ಬರುವ ಫೋನ್ ರಿಸೀವ್ ಮಾಡುವುದ ನಿಲ್ಲಿಸಿದೆ. ಒಂದೇ ನಂಬರಿಂದ ಹತ್ತಾರು ಬಾರಿ ಕರೆ ಬರುತ್ತಿತ್ತು. ಮಧ್ಯರಾತ್ರಿಯವರೆಗೂ ನಿರಂತರ ಕರೆಗಳು ಬರುತ್ತಲೇ ಇದ್ದವು. ಕೆಲ ನಂಬರನ್ನು ಸೆಲೆಕ್ಟ್ ಮಾಡಿ ಬ್ಲಾಕ್ ಮಾಡಿದೆ. ಇದರಿಂದ ಕೆಲವರು ಸಕಾರಣಕ್ಕಾಗಿ ನನ್ನನ್ನು ಸಂಪರ್ಕಿಸಬೇಕೆನ್ನುವವರಿಗೆ ತೊಂದರೆ ಆಗಿದ್ದರೂ ಆಗಿರಬಹುದು. ನಾನು ಕರೆ ಸ್ವೀಕರಿಸದೇ ಯಾರಿಗಾದರೂ ಸಮಸ್ಯೆ ಆಗಿದ್ದರೆ ಕ್ಷಮೆಯಿರಲಿ. ಅದಕ್ಕೆ ಕಾರಣ ನಾನಲ್ಲ, ಆ ಕಿಡಿಗೇಡಿಗಳು.
ಹಾಗೇ ಒಂದು ಮನವಿ, ಇನ್ನು ಮುಂದೆ ಅಪರಿಚಿತರು ಯಾರಾದರೂ ನನಗೆ ಕರೆ ಮಾಡುವುದಿದ್ದರೆ ಮೊದಲು ಒಂದು ಸಂದೇಶ ಕಳಿಸಿ ನಂತರ ಕರೆ ಮಾಡಿದರೆ ನಾನು ಕರೆ ಸ್ವೀಕರಿಸಲು ಅನುಕೂಲ.

ಈ ರೀತಿ ದುರುದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುವವರು, ಕಿರುಕುಳ ನೀಡುವವರು ಮತ್ತು ಬೆದರಿಕೆ ಹಾಕುವವರ ವಿರುದ್ಧ ಪೊಲೀಸರಿಗೆ ಮಾಹಿತಿ ನೀಡುವುದೂ ಅನಿವಾರ್ಯವಾಗುತ್ತಿದೆ.

ನೋಡೋಣ ಮುಂದೇನೇನಾಗುತ್ತದೆ ಅಂತ…
ಎಚ್.ಕೆ.

* ಕಿಡಿಗೇಡಿಗಳು ಬಳಸುತ್ತಿರುವ ಅಸಾಂವಿಧಾನಿಕ,ಅಮಾನುಷ ಪದಗಳನ್ನು ಉದ್ದೇಶಪೂರ್ವಕವಾಗಿ ಉಲ್ಲೇಖಿಸಿಲ್ಲ.
* ಸಂಬಂಧಪಟ್ಟವರು ಕೇಳಿದರೆ ಖಾಸಗಿಯಾಗಿ ನೀಡಲಾಗುವುದು.
#Karnatakapolice
#Bengalurupolice
#BasavarajBommai

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top