ಎಚ್‌-1ಬಿ ವೀಸಾ – ಮೀಸೆ ತಿರುವಿದ ಅಮೆರಿಕ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್‌-1ಬಿ, ಎಲ್‌-1 ಮತ್ತಿತರ ಎಲ್ಲ ವಿದೇಶಿ ವರ್ಕ್‌ ವೀಸಾಗಳನ್ನು ಜೂನ್‌ 24ರಿಂದ ಡಿಸೆಂಬರ್‌ 31ರ ತನಕ ಅಮಾನತಿನಲ್ಲಿಟ್ಟಿದ್ದಾರೆ. ಇದರ ಉದ್ದೇಶವೇನು? ಇದರಿಂದ ಯಾರಿಗೆ ಲಾಭ? ಭಾರತೀಯರಿಗೆ ಏನು ನಷ್ಟ?

ಎಷ್ಟು ಎಚ್‌-1ಬಿ ವೀಸಾಗಳಿವೆ?
ಅಮೆರಿಕ ಸಂಸ್ಥಾನ ಪ್ರತಿವರ್ಷ 65,000 ಎಚ್‌-1ಬಿ ವೀಸಾಗಳನ್ನು (ಅಲ್ಲದೆ ವಿದೇಶಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ 20,000 ವೀಸಾಗಳನ್ನು) ವಿತರಿಸುತ್ತದೆ. 2016ರವರೆಗೂ ಶೇ.70ರಷ್ಟು ಎಚ್‌-1ಬಿ ವೀಸಾಗಳನ್ನು ಭಾರತೀಯರೇ ಪಡೆದಿದ್ದಾರೆ ಎನ್ನುತ್ತದೆ ಅಮೆರಿಕದ ಡಿಪಾರ್ಟ್‌ಮೆಂಟ್‌ ಆಫ್‌ ಹೋಮ್‌ಲ್ಯಾಂಡ್‌ ಸೆಕ್ಯುರಿಟಿ. ಔದ್ಯಮಿಕ ಅಂಕಿಅಂಶಗಳ ಪ್ರಕಾರ ಸುಮಾರು 3ರಿಂದ 3.5 ಲಕ್ಷ ಭಾರತೀಯ ಎಂಜಿನಿಯರ್‌ಗಳು ಎಚ್‌-1ಬಿ ವೀಸಾದ ಮೇಲೆ ಅಮೆರಿಕದಲ್ಲಿದ್ದಾರೆ. ಈ ವೀಸಾಕ್ಕಾಗಿ ಕಾಯುತ್ತಿರುವವರ ಸಂಖ್ಯೆಯೂ ಸಾವಿರಾರು.

ಈಗೇಕೆ ಈ ನಡೆ?
2016ರಲ್ಲಿ, ಅಮೆರಿಕದ ಅಧ್ಯಕ್ಷ ಚುನಾವಣೆಯ ವೇಳೆ ಡೊನಾಲ್ಡ್‌ ಟ್ರಂಪ್‌ ‘ಬೈ ಅಮೆರಿಕನ್‌, ಹೈರ್‌ ಅಮೆರಿಕನ್‌’ ಎಂದು ಘೋಷಿಸಿದ್ದರು. ಸ್ಥಳೀಯ ಅಮೆರಿಕನ್‌ ಟೆಕ್‌ ಉದ್ಯೋಗಿಗಳು, ಅಮೆರಿಕದಲ್ಲಿ ಈ ಕ್ಷೇತ್ರದಲ್ಲಿ ಪ್ರತಿಭೆಗಳ ಕೊರತೆಯಿಲ್ಲ ಎಂದು ಟ್ರಂಪ್‌ರನ್ನು ನಂಬಿಸುವಲ್ಲಿ ಯಶಸ್ವಿಯಾಗಿದ್ದರು. ಕಡಿಮೆ ಸಂಬಳಕ್ಕೆ ದುಡಿಯುವ ಭಾರತ- ಚೀನಾ ನೌಕರರನ್ನು ನೇಮಿಸಿಕೊಳ್ಳುವ ಟೆಕ್‌ ಕಂಪನಿಗಳ ತಂತ್ರವನ್ನು ನಿರಾಯುಧಗೊಳಿಸುವುದಾಗಿ ಟ್ರಂಪ್‌ ಸಾರಿದ್ದರು. ಇದನ್ನು ಪಾಲಿಸುವ ಹಾದಿಯಲ್ಲಿ ಅವರಿದ್ದಾರೆ. ಜೊತೆಗೆ, ಹೆಚ್ಚಿರುವ ನಿರುದ್ಯೋಗ ಸಮಸ್ಯೆ, ಕೊರೊನಾ ಕಾರಣದಿಂದಾಗಿ ಉಂಟಾಗಿರುವ ಉದ್ಯೋಗನಾಶದ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬೇಕಾದ ಹೊಣೆ ಟ್ರಂಪ್‌ ಮೇಲಿದೆ. ಜೊತೆಗೆ, ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷ ಚುನಾವಣೆಗೆ ಟ್ರಂಪ್‌ ಮತ್ತೆ ನಿಲ್ಲಲಿದ್ದು, ಅದಕ್ಕಾಗಿ ಮತದಾರರನ್ನು ಒಲಿಸಿಕೊಳ್ಳುವ ತಂತ್ರವಿದು ಎಂದು ವಿಶ್ಲೇಷಿಸಲಾಗಿದೆ.

ಈ ಹಿಂದಿನ ಕ್ರಮಗಳು
ಈ ಹಿಂದೆಯೂ, ಸ್ಥಳೀಯ ಉದ್ಯೋಗಿಗಳ ಮೇಲೆ ಆಗುತ್ತಿರುವ ನೆಗೆಟಿವ್‌ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಟ್ರಂಪ್‌ ಹಾಗೂ ಒಬಾಮಾ ಆಡಳಿತಗಳು ಕೆಲವು ನಿಯಮ- ನಿರ್ಬಂಧಗಳನ್ನು ಹೇರಿದ್ದವು. ಎಚ್‌1ಬಿ ವೀಸಾಗಳ ನೀಡಿಕೆಯಲ್ಲಿ ಸೀಮಿತತೆ, ಕನಿಷ್ಠ ಸಂಬಳದ ಹೆಚ್ಚಳ ಮುಂತಾದ ಕ್ರಮಗಳನ್ನು ಕೈಗೊಂಡಿವೆ. ಉದಾಹರಣೆಗೆ 2017ರಲ್ಲಿ ಅಮೆರಿಕದ ಸಂಸತ್‌ನಲ್ಲಿ ಮಂಡನೆಯಾದ ಮಸೂದೆಯ ಪ್ರಕಾರ, ಎಚ್‌-1ಬಿ ವೀಸಾ ಪಡೆಯಲು ಇರುವ ವೇತನ ಅರ್ಹತೆಯ ಮಿತಿಯನ್ನು 60 ಸಾವಿರ ಡಾಲರ್‌ನಿಂದ (ಸುಮಾರು 40 ಲಕ್ಷ ರೂಪಾಯಿ) 1 ಲಕ್ಷ 30 ಸಾವಿರ ಡಾಲರ್‌ಗೆ (87 ಲಕ್ಷ 58 ಸಾವಿರ ರೂಪಾಯಿ) ಏರಿಸಲಾಗಿದೆ. ಜೊತೆಗೆ, ಅಮೆರಿಕದ ಸೇರಿದಂತೆ ಯಾವುದೇ ದೇಶದ ಬಹುರಾಷ್ಟ್ರೀಯ ಕಂಪನಿಗಳು ಮೊದಲ ಪ್ರಾಶಸ್ತ್ಯವನ್ನು ಅಲ್ಲಿನ ಉದ್ಯೋಗಿಗಳಿಗೆ ನೀಡಬೇಕು.

ಎಷ್ಟು ಉದ್ಯೋಗಗಳು ಅಮೆರಿಕನ್ನರಿಗೆ?
ಟ್ರಂಪ್‌ ಸರಕಾರದ ‘ಅಮೆರಿಕ ಫಸ್ಟ್‌’ ನೀತಿಯ ಭಾಗವಾಗಿ ಕೈಗೊಂಡಿರುವ ಈ ಕ್ರಮದಿಂದಾಗಿ ಸುಮಾರು 5.25 ಲಕ್ಷ ಉದ್ಯೋಗಗಳು ಅಮೆರಿಕದ ಸ್ಥಳೀಯರಿಗೆ ಮುಕ್ತವಾಗುವ ಸಾಧ್ಯತೆ ಇದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಆದರೆ ಈ ನೀತಿ ಮುಂದಿನ ವರ್ಷ ಬರುವವರಿಗೆ ಅನ್ವಯ ಆಗಲಿರುವುದರಿಂದ, ಈಗಾಗಲೇ ಇರುವ ಉದ್ಯೋಗಿಗಳಿಗೆ ಇದರಿಂದ ಏನೂ ಬಾಧಕವಿಲ್ಲ. ಹಾಗೂ ಹೊಸದಾಗಿ ಸೃಷ್ಟಿಯಾಗುವ ಕೆಲಸಗಳಷ್ಟೇ ಅಮೆರಿಕನ್ನರ ಪಾಲಾಗಲಿವೆ. ಆದರೆ ಅಮೆರಿಕದ ಆರ್ಥಿಕ ಕುಸಿತ, ಕೊರೊನಾದ ಪರಿಣಾಮ ಅಲ್ಲಿ ಹೊಸದಾಗಿ ಉದ್ಯೋಗಗಳೇ ಸೃಷ್ಟಿಯಾಗುತ್ತಿಲ್ಲ.

ಅಮೆರಿಕದ ಕಂಪನಿಗಳಿಂದಲೇ ಯಾಕೆ ವಿರೋಧ?
ಎಚ್‌-1ಬಿ ವೀಸಾ ನಿರ್ಬಂಧದಿಂದ ಭಾರತೀಯ ಐಟಿ ಕಂಪನಿಗಳಿಗಿಂತಲೂ, ಅಮೆರಿಕದ ತಂತ್ರಜ್ಞಾನ ಕಂಪನಿಗಳಿಗೇ ಹೊಡೆತ ಬೀಳಲಿದೆ. ಎಚ್‌-1ಬಿ ಮತ್ತಿತರ ವೀಸಾವನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಡೆದಿರುವ ಕಂಪನಿಗಳಲ್ಲಿ ಗೂಗಲ್‌, ಅಮೆಜಾನ್‌, ಫೇಸ್‌ಬುಕ್‌ ಮತ್ತು ಮೈಕ್ರೊಸಾಫ್ಟ್‌ ಸೇರಿವೆ. 2019ರಲ್ಲಿ ಅತಿ ಹೆಚ್ಚು ಎಚ್‌-1ಬಿ ವೀಸಾ ಪಡೆದಿರುವ ಟಾಪ್‌ 10 ಕಂಪನಿಗಳಲ್ಲಿ 7 ಕಂಪನಿಗಳು ಅಮೆರಿಕದ್ದೇ ಕಂಪನಿಗಳಾಗಿವೆ. ಹೀಗಾಗಿ ಈ ಪ್ರಮುಖ ಕಂಪನಿಗಳು ಟ್ರಂಪ್‌ ನೀತಿಗೆ ಆಕ್ಷೇಪ ವ್ಯಕ್ತಪಡಿಸಿವೆ. ಗೂಗಲ್‌ ಸಿಇಒ ಸುಂದರ್‌ ಪಿಚೈ, ಮೈಕ್ರೊಸಾಫ್ಟ್‌ ಅಧ್ಯಕ್ಷ ಬ್ರಾಡ್‌ ಸ್ಮಿತ್‌, ಟೆಕ್‌ನೆಟ್‌ ಅಧ್ಯಕ್ಷ ಲಿಂಡಾ ಮೋರ್‌. ಟ್ವಿಟರ್‌ ಮುಂತಾದ ಕಂಪನಿಗಳು ಟ್ರಂಪ್‌ ಅವರ ಈ ನಿಲುವನ್ನು ಆಕ್ಷೇಪಿಸಿವೆ. ಅಮೆರಿಕದ ಆರ್ಥಿಕತೆಯ ಪ್ರಮುಖ ಭಾಗವೇ ಅದರ ವಲಸೆ ಕೆಲಸಗಾರರು. ಇವರು ಇಲ್ಲಿ ತೆರಿಗೆ ಪಾವತಿಸುವುದಲ್ಲದೆ ದೇಶದ ಸ್ಪರ್ಧಾತ್ಮಕತೆಗೆ ನೆರವಾಗುತ್ತಾರೆ ಎಂದಿದ್ದಾರೆ.

ಭಾರತದ ಕಂಪನಿಗಳ ಕ್ರಮ
ಭಾರತ ಮೂಲದ ಇನ್‌ಫೋಸಿಸ್‌, ವಿಪ್ರೋ, ಕಾಗ್ನಿಸೆಂಟ್‌, ಟಿಸಿಎಸ್‌ ಮುಂತಾದ ದೈತ್ಯ ಐಟಿ ಕಂಪನಿಗಳು ಅಮೆರಿಕದ ಸಿಲಿಕಾನ್‌ ಸಿಟಿಯಲ್ಲಿ ನೆಲೆಯೂರಿದ್ದು, ದೊಡ್ಡ ಪ್ರಮಾಣದ ಭಾರತೀಯ ನೌಕರರನ್ನು ಅಲ್ಲಿಗೆ ಕರೆದೊಯ್ದಿವೆ. ಆದರೆ ಕಳೆದೆರಡು ವರ್ಷಗಳಿಂದ ಬದಲಾಗುತ್ತಿರುವ ಅಮೆರಿಕದ ನೀತಿಯ ಫಲವಾಗಿ, ಅವು ಕೂಡ ತಮ್ಮಲ್ಲಿನ ಕೆಲಸಗಾರರಲ್ಲಿ ಶೇ.50 ಭಾಗವನ್ನು ಅಮೆರಿಕನ್ನರಿಗೆ ಮೀಸಲಿಟ್ಟಿವೆ. ಹೀಗಾಗಿ ಆದರೂ ಈ ಕಂಪನಿಗಳ ಒಟ್ಟಾರೆ ಭಾರತೀಯರಲ್ಲಿ ನಾಲ್ಕನೇ ಮೂರು ಭಾಗ ಉದ್ಯೋಗಿಗಳು ಎಚ್‌-1ಬಿ ವೀಸಾದಲ್ಲಿದ್ದಾರೆ.

ಪ್ರತಿಭೆಗೆ ಮನ್ನಣೆ
ಮೆರಿಟ್‌ಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಟ್ರಂಪ್‌ ಹೇಳಿದ್ದಾರೆ. ಮೆರಿಟ್‌ಗೆ ಆದ್ಯತೆ ನೀಡುವುದಾದರೆ, ಹೆಚ್ಚಿನ ಸಂಬಳದ ಆಫರ್‌ ಪಡೆಯುವ ಭಾರತೀಯರು ಸಹಜವಾಗಿಯೇ ಸುಲಭವಾಗಿ ಎಚ್‌-1ಬಿ ವೀಸಾ ಪಡೆಯಬಲ್ಲರು. ಅಮೆರಿಕದಲ್ಲಿ ಐಟಿ, ಇಂಜಿನಿಯರಿಂಗ್‌, ಮೆಡಿಕಲ್‌ ಮುಂತಾದ ಕ್ಷೇತ್ರಗಳಲ್ಲಿ ದುಡಿಯಬಲ್ಲ ಯುವ ಪ್ರತಿಭೆಗಳ ತೀವ್ರ ಕೊರತೆಯಿದೆ. ಈ ಜಾಗವನ್ನು ಭಾರತೀಯರೇ ತುಂಬುತ್ತಾರೆ.

ಚೀನಾಗೆ ಕೊಕ್‌?
ಟ್ರಂಪ್‌ ಅವರ ಈ ಕ್ರಮದ ಹಿಂದೆ ಚೀನಾಗೆ ಕೊಕ್‌ ನೀಡುವ ಉದ್ದೇಶವೂ ಇದೆ ಎನ್ನಲಾಗುತ್ತದೆ. ಚೀನಾದ ಸಾಕಷ್ಟು ಮಂದಿಯೂ ಎಚ್‌-1ಬಿ ವೀಸಾದಲ್ಲಿ ಉದ್ಯೋಗಿಗಳಾಗಿ ಬರುತ್ತಿದ್ದು, ಅವರನ್ನು ಸದ್ಯಕ್ಕೆ ನಿವರಿಸಿಕೊಳ್ಳಲು ಟ್ರಂಪ್‌ ಈ ಮೂಲಕ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

 

ವೀಸಾದ ವಿಧಗಳು
ಎಚ್‌1-ಬಿ ವೀಸಾ
ವಿದೇಶದಲ್ಲೇ ನೇಮಕಗೊಂಡು ಅಮೆರಿಕದಲ್ಲಿ ಕೆಲಸಕ್ಕೆ ತೆರಳುವವರಿಗಾಗಿ ಈ ವೀಸಾ ನೀಡಲಾಗುತ್ತದೆ. ಅರ್ಜಿದಾರರು ಪದವಿ/ಸ್ನಾತಕೋತ್ತರ ಪದವಿ ಪಡೆದಿರಬೇಕು.
ಎಲ್‌-1 ವೀಸಾ
ಜಾಗತಿಕ ಕಂಪನಿಯಲ್ಲಿರುವ ಉದ್ಯೋಗಿ ತಾತ್ಕಾಲಿಕವಾಗಿ ಅಮೆರಿಕಕ್ಕೆ ತೆರಳಲು ಈ ವೀಸಾ ಪಡೆಯಬೇಕು. ಅರ್ಜಿದಾರರು ವ್ಯವಸ್ಥಾಪನೆ/ ಕಾರ್ಯನಿರ್ವಾಹಕ ಹುದ್ದೆಯಲ್ಲಿರಬೇಕು.
ಎಲ್‌-2 ವೀಸಾ
ಎಲ್‌1 ವೀಸಾ ಪಡೆದವರ ಮೇಲೆ ಆಧರಿತವಾಗಿರುವವರು. ಅಂದರೆ ಸಂಗಾತಿ, ಮಕ್ಕಳು (21 ವರ್ಷಕ್ಕಿಂತ ಕಡಿಮೆ ವಯೋಮಾನದ ‘ಅವಿವಾಹಿತರು’) ಈ ವೀಸಾ ಪಡೆಯಬಹುದು. ಉದ್ಯೋಗಿಯ ಸಂಗಾತಿಯೂ ಅಮೆರಿಕದಲ್ಲಿ ಹೊಸ ಕೆಲಸಕ್ಕೆ ಸೇರಬಹುದಾದರು, ಅವರ ಮಕ್ಕಳಿಗೆ ಈ ಅವಕಾಶವಿಲ್ಲ.
ಇ-2 ವೀಸಾ
ಇದನ್ನು ‘ಇನ್ವೆಸ್ಟರ್‌ ವೀಸಾ’ (ಹೂಡಿಕೆದಾರರ ವೀಸಾ) ಎಂದು ಕರೆಯಲಾಗುತ್ತದೆ. ಇದನ್ನು ಪಡೆಯುವವರು ಅಮೆರಿಕಕ್ಕೆ ತೆರಳಿ ತಮ್ಮ ಹೂಡಿಕೆಯನ್ನು ನಿಯಂತ್ರಿಸಬಹುದು.
ಒ- ವೀಸಾ
ವಿಜ್ಞಾನ, ಕಲೆ, ಶಿಕ್ಷ ಣ, ಉದ್ಯಮ, ಸಿನೆಮಾ ಮತ್ತು ಟಿ.ವಿ ಕ್ಷೇತ್ರದಲ್ಲಿ ಅದ್ಭುತ ಸಾಮರ್ಥ್ಯ‌ ಇರುವವರಿಗಾಗಿ.
ಪಿ- ವೀಸಾ
ಕ್ರೀಟಾಪಟುಗಳು, ಮನರಂಜನಕಾರರು, ಕಲಾವಿದರು ಮತ್ತು ಅಮೆರಿಕದಲ್ಲಿ ಕಾರ್ಯಕ್ರಮ ನೀಡುವವರಿಗೆ ಕೊಡಲಾಗುತ್ತದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top