ಕರಿಯ ಬಿಳಿಯ ಕಲಹ, ಕೆಂಪಾದ ಅಮೆರಿಕ

ಕೊರೊನಾ ವೈರಸ್ ಹಾವಳಿಯ ನಡುವೆಯೂ ಸಾವಿರಾರು ಜನ ಅಮೆರಿಕದಲ್ಲಿ ರಸ್ತೆಗಿಳಿದು ಪ್ರತಿಭಟಿಸುತ್ತಿದ್ದಾರೆ. ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ವರ್ಣೀಯನನ್ನು ಪೊಲೀಸರು ಕೊಂದು ಹಾಕಿದ ನಂತರ ಈ ಪ್ರತಿಭಟನೆಯ ಜ್ವಾಲೆ ಭುಗಿಲೆದ್ದಿದೆ.

ಅಮೆರಿಕದ ಆಳದಲ್ಲಿ ಸದಾ ಜೀವಂತವಾಗಿರುವ ವರ್ಣದ್ವೇಷ ಮತ್ತೊಮ್ಮೆ ಭುಗಿಲೆದ್ದಿದೆ. ಶ್ವೇತವರ್ಣೀಯರು- ಕಪ್ಪುವರ್ಣೀಯರ ನಡುವೆ ತಲೆಮಾರುಗಳಿಂದ ಹರಿದುಬಂದ ದ್ವೇಷ ಪ್ರಕಟವಾಗಲು ಮತ್ತೊಂದು ಘಟನೆ ಕಾರಣವಾಗಿದೆ. ಹೆಚ್ಚಿನ ಸಲ ನಡೆಯುವಂತೆ, ಈ ಬಾರಿಯೂ ಅದಕ್ಕೆ ಕಾರಣರಾದವರು ಶ್ವೇತವರ್ಣೀಯ ಪೊಲೀಸರು. ಕರಿಯ ಅಮೆರಿಕನ್ನರ ಜೊತೆಗೆ ಸದಾ ಒರಟುತನ, ಅಸೂಕ್ಷ್ಮ ರೀತಿಯಲ್ಲಿ ನಡೆದುಕೊಳ್ಳುವ ಬಿಳಿಯ ಪೊಲೀಸರು ಈ ಬಾರಿ ಕರಿಯನೊಬ್ಬನನ್ನು ಹಾಡಹಗಲೇ ಕುತ್ತಿಗೆಯೊತ್ತಿ ಕೊಂದುಬಿಟ್ಟಿದ್ದಾರೆ. ಅದೇ ಈಗ ಹೋರಾಟ ಭುಗಿಲೇಳಲು ಕಾರಣ.

ಜಾರ್ಜ್ ಫ್ಲಾಯ್ಡ್‌ನ ಕಗ್ಗೊಲೆ
ಅಮೆರಿಕದ ಮಿನ್ನೆಪೊಲಿಸ್ ಎಂಬಲ್ಲಿ ಮೇ 25ರಂದು 45 ವರ್ಷದ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪುವರ್ಣೀಯ ವ್ಯಕ್ತಿ, ಒಂದು ಅಂಗಡಿಯಲ್ಲಿ 20 ಡಾಲರ್ ನೀಡಿ ಸಿಗರೇಟ್ ಕೊಂಡುಕೊಂಡ. ಅಂಗಡಿಯವರು ಆ ನೋಟು ನಕಲಿ ಎಂದು ಗೊತ್ತಾಗಿ ಪೊಲೀಸರಿಗೆ ಕರೆ ಮಾಡಿದರು. ಪೊಲೀಸರು ಬಂದಾಗ ಫ್ಲಾಯ್ಡ್ ಇನ್ನೂ ಅಂಗಡಿಯ ಹೊರಗೆ ಆತನ ಕಾರಿನಲ್ಲಿ ಕುಳಿತೇ ಇದ್ದ. ಪೊಲೀಸರು ಬಂದವರೇ ಅನಾಮತ್ತಾಗಿ ಆತನನ್ನು ಹಿಡಿದು ಹೊರಗೆಳೆದು, ತಮ್ಮ ಕಾರಿನ ಬಳಿ ಎಳೆದುಕೊಂಡು ಹೋದರು. ಆತ ಪ್ರತಿಭಟಿಸಿದಾಗ, ಅವನನ್ನು ನೆಲಕ್ಕೆ ಒತ್ತಿಹಿಡಿದು, ಕುತ್ತಿಗೆಯ ಮೇಲೆ ತಮ್ಮ ಮೊಣಕಾಲೂರಿ ನಿಂತರು. ಭರ್ತಿ ಎಂಟು ನಿಮಿಷ ನಲುವತ್ತಾರು ಸೆಕೆಂಡ್ ಹೀಗೆ ಒತ್ತಿ ಹಿಡಿದಿದ್ದರು. ಆತ ಅಲ್ಲೇ ಪ್ರಾಣಬಿಟ್ಟ.

ರೊಚ್ಚಿಗೆದ್ದ ಕರಿಯರು
ಎಷ್ಟೋ ವರ್ಷಗಳಿಂದ ಶ್ವೇತವರ್ಣೀಯ ಪೊಲೀಸರ ನಾನಾ ಬಗೆಯ ದೌರ್ಜನ್ಯಗಳನ್ನು ಅನುಭವಿಸುತ್ತ ಬಂದಿರುವ ಕಪ್ಪುವರ್ಣೀಯರು ಈ ಘಟನೆಯಿಂದ ಸಿಡಿದೆದ್ದರು.

ಕಾನೂನಿಗೆ ಪ್ರತಿರೋಧ
ಕಪ್ಪುವರ್ಣೀಯರಲ್ಲಿ ಕೂಡ ಅಪರಾಧಿಗಳು, ಅಮಲುವ್ಯಸನಿಗಳು, ಮಾಫಿಯಾ ಗ್ಯಾಂಗ್‌ಗಳು, ಕಾನೂನನ್ನು ಧಿಕ್ಕರಿಸುವವರ ಸಂಖ್ಯೆ ಹೆಚ್ಚಿದ್ದು, ಪೊಲೀಸರಿಗೂ ಇವರಿಗೂ ಘರ್ಷಣೆ ಸದಾಕಾಲ ನಡೆಯುತ್ತಿರುತ್ತದೆ. ಕರಿಯರು ಹೆಚ್ಚಾಗಿ ಸ್ಲಂನಂಥ ಕಾಲನಿಗಳನ್ನು ವಾಸಿಸುತ್ತಾರೆ, ಇವರಲ್ಲಿ ಶ್ರೀಮಂತರು ಕಡಿಮೆ. ಹೆಚ್ಚಿನವರು ಆಫ್ರಿಕನ್ ಮೂಲದವರು ಹಾಗೂ ಇವರ ಹಿರಿಯರು ಅಮೆರಿಕಕ್ಕೆ ಜೀತಕ್ಕಾಗಿ ತರಲ್ಪಟ್ಟವರು. ಯಾವುದೇ ಸಮಾಜ ಕಲ್ಯಾಣ ಕಾರ್ಯಕ್ರಮಗಳು ಇವರ ಜೀವನವನ್ನು ಮೇಲೆತ್ತಲು ಸಾಧ್ಯವಾಗಿಲ್ಲ. ಹೆಚ್ಚನವರು ಪ್ಲಂಬರ್, ಮೆಕ್ಯಾನಿಕ್, ಕಾರ್ಮಿಕ ಮುಂತಾದ ಸಣ್ಣಪುಟ್ಟ ಕೆಲಸಗಳಿಂದ ಕುಟುಂಬ ಸಾಗಿಸುತ್ತಾರೆ. ಬೇಗನೆ ಶ್ರೀಮಂತರಾಗುವ ಹಪಹಪಿಯಿಂದ ಕೆಲವು ಯುವಕರು ಡ್ರಗ್ ಮಾಫಿಯಾ ಸೇರುತ್ತಾರೆ.

ಬ್ಲ್ಯಾಕ್ ಲೈವ್ಸ್ ಮ್ಯಾಟರ್
2013ರಲ್ಲಿ ಅಮೆರಿಕದಾದ್ಯಂತ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಎಂಬ ಚಳವಳಿ ಭುಗಿಲೆದ್ದಿತು. ಫ್ಲೋರಿಡಾದಲ್ಲಿ ಟ್ರೆವಿನ್ ಮಾರ್ಟಿನ್ ಎಂಬ ಕರಿಯನನ್ನು ಬಿಳಿಯನೊಬ್ಬ ಶೂಟ್ ಮಾಡಿ ಸಾಯಿಸಿದರೂ ದೋಷಮುಕ್ತನಾಗಿದ್ದ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆದಿತ್ತು. ನಂತರ 2014ರ ಶೂಟೌಟ್ ಪ್ರಕರಣಗಳನ್ನೂ ಸೇರಿಸಿಕೊಂಡು ಬೃಹತ್ತಾಗಿ ಬೆಳೆದು, ಇಡೀ ಜಗತ್ತಿನ ಗಮನ ಸೆಳೆದಿತ್ತು. ಇದೀಗ ಈ ಚಳವಳಿಯು ಇನ್ನೊಂದು ಸುತ್ತಿನ ವೇಗವರ್ಧನೆ ಪಡೆಯುವ ದಿಕ್ಕಿನಲ್ಲಿ ಸಾಗಿದೆ.

ಉಸಿರಾಡೋಕೆ ಆಗ್ತಿಲ್ಲ: 

ಜಾರ್ಜ್ ಫ್ಲಾಯ್ಡ್ನ ಕುತ್ತಿಗೆಯನ್ನು ಒತ್ತಿಹಿಡಿದವನು ಡೆರೆಕ್ ಚೌವಿನ್ ಎಂಬ ಪೊಲೀಸ್ ಅಧಿಕಾರಿ. ಅವನಿಗೆ ಸಹಕರಿಸಿದವರು ಥಾಮಸ್ ಲೇನ್, ಅಲೆಕ್ಸಾಂಡರ್ ಕುಯೆಂಗ್ ಎಂಬ ಶ್ವೇತವರ್ಣೀಯ ಪೊಲೀಸರು ಹಾಗೂ ಹಾಗೂ ತೌ ತಾವೊ ಎಂಬ ಥಾಯ್ಲೆಂಡ್ ಮೂಲದ ಪೊಲೀಸ್ ಅಧಿಕಾರಿ. ಈಗ ನಾಲ್ವರನ್ನೂ ಕೆಲಸದಿಂದ ವಜಾ ಮಾಡಿ ಬಂಧಿಸಿ ಕೊಲೆ ಆರೋಪ ಹೊರಿಸಲಾಗಿದೆ. ಕುತ್ತಿಗೆ ಅಮುಕಿದ ಕೊನೆಯ ಕ್ಷಣದಲ್ಲಿ ಫ್ಲಾಯ್ಡ್ ‘ಐ ಕಾಂಟ್ ಬ್ರೀದ್’ ಎಂದು ಹೇಳಿದ್ದ. ಈಗ ಆ ಮಾತು, ಪ್ರತಿಭಟನಾಕಾರರ ಪ್ಲಕಾರ್ಡ್‌ಗಳಲ್ಲಿ ಮಿಂಚುತ್ತಿದೆ.

ದೌರ್ಜನ್ಯದ ಇತಿಹಾಸ
ಅಮೆರಿಕದಲ್ಲಿ ಬಿಳಿಯರಿಂದ ಕರಿಯರ ಮೇಲೆ ಆಗುತ್ತಿರುವ ದೌರ್ಜನ್ಯಕ್ಕೆ ಶತಮಾನಗಳ ಇತಿಹಾಸವಿದೆ. ಒಂದು ಕಾಲದಲ್ಲಿ ಇಲ್ಲಿದ್ದ ಮೂಲನಿವಾಸಿಗಳನ್ನು ಯುರೋಪಿನಿಂದ ಬಂದ ಶ್ವೇತವರ್ಣೀಯರು ಸರ್ವನಾಶ ಮಾಡಿದ್ದರು. ನಂತರ ಅಳಿದುಳಿದ ಅಮೆರಿಕನ್ ಇಂಡಿಯನ್ನರನ್ನು ಜೀತದಾಳುಗಳನ್ನಾಗಿಸಿದ್ದರು. ನಂತರ ಆಫ್ರಿಕದ ಕರಿಯರನ್ನು ಇಲ್ಲಿಗೆ ಜೀತದಾಳುಗಳನ್ನಾಗಿ ಕರೆತಂದು ದುಡಿಸಿಕೊಂಡರು. ಈ ಎರಡೂ ಜನಾಂಗಗಳು ಶ್ವೇತವರ್ಣೀಯರು ದೌರ್ಜನ್ಯವನ್ನು ಶತಮಾನಗಳ ಕಾಲ ಸಹಿಸಿಕೊಂಡರು. 1860ರ ದಶಕದಲ್ಲಿ, ಲಿಂಕನ್‌ರ ಅಧ್ಯಕ್ಷತೆಯ ಅವಧಿಯಲ್ಲಿ ಕಾನೂನಿನ ಮೂಲಕ ಜೀತವನ್ನು ನಿಷೇಧಿಸಲಾಯಿತು. ಈ ಸಂದರ್ಭದಲ್ಲಿ ಅಮೆರಿಕದಲ್ಲಿ ಬಿಳಿಯರು- ಕರಿಯರ ನಡುವೆ ಅಂತರ್ಯುದ್ಧವೇ ನಡೆದಿತ್ತು. ಮಾರ್ಟಿನ್ ಲೂಥರ್ ಕಿಂಗ್ ಕರಿಯರ ಹೋರಾಟದ ನೇತೃತ್ವ ವಹಿಸಿದ್ದರು. ನಂತರ ಇವರ ಪುತ್ರ, ಕಿಂಗ್ ಜೂನಿಯರ್ ಕಾಲದಲ್ಲಿಯೂ ಹೋರಾಟ ಮುಂದುವರಿಯಿತು. ಬರಾಕ್ ಒಬಾಮ ಅವರು ಅಮೆರಿಕದ ಮೊತ್ತ ಮೊದಲ ಕಪ್ಪುವರ್ಣೀಯ ಅಧ್ಯಕ್ಷರಾದರೂ ಕರಿಯ- ಬಿಳಿಯ ಸಂಘರ್ಷ ಕೊನೆಗಾಣಲಿಲ್ಲ. ಆದರೆ ಸಾಕಷ್ಟು ಬಿಳಿಯರು ಕರಿಯರ ಪರ ನಿಂತು ಹೋರಾಡಿದ್ದಾರೆ.

2014ರಲ್ಲೂ ಇಂಥದೇ ಘಟನೆ
2014ರಲ್ಲೂ ನ್ಯೂಯಾರ್ಕ್ ನಗರದಲ್ಲಿ ಫ್ಲಾಯ್ಡ್ ಥರದ ಘಟನೆ ನಡೆದಿತ್ತು. ಅಲ್ಲೂ ಎರಿಕ್ ಗಾರ್ನರ್ ಎಂಬ ಕರಿಯನನ್ನು ಪೊಲೀಸ್ ಅಧಿಕಾರಿಯೊಬ್ಬ ಕುತ್ತಿಗೆಯೊತ್ತಿ ಹಿಡಿದು ಕೊಂದಿದ್ದ. ಆತನೂ ‘ಐ ಕಾಂಟ್ ಬ್ರೀದ್’ ಎಂದು ಹನ್ನೊಂದು ಬಾರಿ ನರಳಿದ್ದ. 2016ರಲ್ಲಿ ಮಿನ್ನೆಸೋಟಾದಲ್ಲಿ ಬಿಳಿಯನೊಬ್ಬ ಫಿಲಂಡೋ ಕ್ಯಾಸ್ಟಿಲೆ ಎಂಬ ಕರಿಯನನ್ನು ವಿನಾಕಾರಣ ಗುಂಡಿಕ್ಕಿ ಕೊಂದುಹಾಕಿದ್ದ. ಅದೇ ವರ್ಷ ಲೂಯಿಸಿಯಾನದಲ್ಲಿ ಸಿಡಿಗಳನ್ನು ಮಾರುತ್ತಿದ್ದ ಆಲ್ಟನ್ ಸ್ಟರ್ಲಿಂಗ್ ಎಂಬಾತನನ್ನು ಪೊಲೀಸರು ಶೂಟ್ ಮಾಡಿ ಸಾಯಿಸಿದ್ದರು.

ಅಧ್ಯಕ್ಷ ಟ್ರಂಪ್ ಅದಕ್ಷ ನಿರ್ವಹಣೆ
ಪ್ರತಿಭಟನಾಕಾರರ ಮೇಲೆ ಟ್ರಂಪ್ ಕೆಂಡ ಕಾರಿದ್ದಾರೆ. ಪ್ರತಿಭಟನಾರರು ಠಕ್ಕರು, ಲೂಟಿಕೋರರು ಎಂದು ತಮ್ಮ ಟ್ವೀಟ್‌ಗಳಲ್ಲಿ ಹೇಳಿದ್ದಾರೆ. ಪ್ರತಿಭಟನೆ ಕೈಬಿಡದಿದ್ದರೆ ಸೇನೆ ಕಳುಹಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ದಂಗೆ ಪರಿಸ್ಥಿತಿಯನ್ನು ನಿಭಾಯಿಸಲಾಗದೆ ಮೈ ಪರಚಿಕೊಳ್ಳುವಂತೆ ಟ್ರಂಪ್ ಪ್ರತಿಕ್ರಿಯೆ ಕಾಣಿಸುತ್ತಿದ್ದು, ಗಲಭೆಯ ಕಿಚ್ಚಿಗೆ ತುಪ್ಪ ಸುರಿಯಲು ಕಾರಣವಾಗಿದೆ.

ಯುರೋಪಿಗೂ ಹಬ್ಬಿದ ಪ್ರತಿಭಟನೆ
ಲಂಡನ್‌ನ ಟ್ರಫಾಲ್ಗರ್ ಸ್ಕ್ವೇರ್‌ನಲ್ಲೂ ಕಪ್ಪುವರ್ಣೀಯರು ಸೇರಿ ಪ್ರತಿಭಟಿಸಿದ್ದಾರೆ. ಯುರೋಪ್‌ನಲ್ಲೂ ಸಾಕಷ್ಟು ಕರಿಯರು ಇದ್ದು, ಪ್ರತಿಭಟನೆಗಳು ಜೋರಾಗುವ ಲಕ್ಷಣಗಳಿವೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top