ಶವಸಂಸ್ಕಾರದ ಯೋಧರು – ಕೊರೊನಾ ಸಾವಿನ ಭೀತಿ ತೊಲಗಲಿ

ಕೋವಿಡ್‌ ಸೋಂಕಿನಿಂದ ಮೃತಪಟ್ಟ ಕನಕಪುರದ ವ್ಯಕ್ತಿರೊಬ್ಬರ ಅಂತ್ಯ ಸಂಸ್ಕಾರವನ್ನು ನಗರಸಭೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಸಹಕಾರದೊಂದಿಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ ಮುಂದೆ ನಿಂತು ನಡೆಸಿಕೊಟ್ಟಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ) ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ತರಬೇತಿ ಪಡೆದು ಕೋವಿಡ್‌ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ನಡೆಸುತ್ತಿದ್ದು, ಭಾನುವಾರ ಕೂಡ ಮೂವರ ಶವಸಂಸ್ಕಾರ ನಡೆಸಿದ್ದಾರೆ. ಕೋವಿಡ್‌ನಿಂದ ಯಾರೇ ಮೃತಪಟ್ಟರೂ, ಅವರ ಅಂತ್ಯಸಂಸ್ಕಾರ ನಡೆಸಲು ಪ್ರತಿ ಜಿಲ್ಲೆಯಲ್ಲೂ ತಲಾ 10 ಜನರ ತಂಡವನ್ನು ಬಜರಂಗ ದಳ ಸಜ್ಜುಗೊಳಿಸಿದೆ. ಬಳ್ಳಾರಿಯಲ್ಲಿ ಅನಾರೋಗ್ಯದಿಂದ ಮೃತಪಟ್ಟ ತಾಯಿಯ ಅಂತ್ಯಸಂಸ್ಕಾರ ನಡೆಸುವುದಕ್ಕೆ ಕೋವಿಡ್‌ ಸೋಂಕಿತ ಪುತ್ರನಿಗೆ ಅಲ್ಲಿನ ಜಿಲ್ಲಾಡಳಿತ ಸಕಲ ಸುರಕ್ಷತೆಗಳೊಂದಿಗೆ ಅವಕಾಶ ಮಾಡಿಕೊಟ್ಟು ಮಾನವೀಯತೆ ಮೆರೆದಿದೆ.
ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರದ ಸುತ್ತ ಹರಡಿರುವ ಕರಾಳತೆಯನ್ನು ಪರಿಹರಿಸಲು ನಡೆಯುತ್ತಿರುವ ಸಕಾರಾತ್ಮಕ ಕ್ರಿಯೆಗಳು ಇವು. ಕೆಲವೇ ದಿನಗಳ ಹಿಂದೆ, ಕೊರೊನಾ ಸೋಂಕಿನಿಂದ ಮೃತಪಟ್ಟವರ ಶವಗಳನ್ನು ಸಂಸ್ಕಾರ ಮಾಡುವುದಕ್ಕೆ ಆಯಾ ಊರಿನವರೇ ಸ್ಮಶಾನದಲ್ಲಿ ಅಡ್ಡಿಪಡಿಸುವ ಸುದ್ದಿಗಳು ಬರುತ್ತಿದ್ದವು. ಬಳ್ಳಾರಿಯಲ್ಲಿ ನಾಲ್ಕಾರು ಹೆಣಗಳನ್ನು ಬೀದಿ ನಾಯಿಗಳಂತೆ ಗುಂಡಿಗೆಸೆದು ಮಣ್ಣು ಮುಚ್ಚಿದ್ದು ಕೂಡ ವರದಿಯಾಗಿತ್ತು. ಹತ್ತಿರದ ಬಂಧುಗಳು ಕೂಡ ಸಮೀಪ ಬರುತ್ತಿರಲಿಲ್ಲ. ಹೀಗಾಗಿ ಎಷ್ಟೇ ಬಂಧುಬಳಗ ಹೊಂದಿದ ವ್ಯಕ್ತಿಯಾಗಿದ್ದರೂ ಒಂಟಿಯಾಗಿ ಮಸಣದೆಡೆಗೆ ಸಾಗುವ ಅಂತ್ಯ ಇಂಥವರದಾಗಿರುತ್ತಿತ್ತು. ಕೇರಳದಲ್ಲಿ ಸೋಂಕಿನಿಂದ ಮೃತರಾದ ವೈದ್ಯರೊಬ್ಬರ ಶವ ಸಂಸ್ಕಾರಕ್ಕೆ ಹೋದಾಗ ಕಲ್ಲು ಹೊಡೆದು ಓಡಿಸಿದ ಘಟನೆ ಕೂಡ ವರದಿಯಾಗಿತ್ತು. ಜನ ಸೋಂಕಿಗಿಂತಲೂ ಸಾವಿನ, ಅಂತ್ಯಸಂಸ್ಕಾರದ ಭೀಕರತೆಗೇ ಹೆಚ್ಚು ಹೆದರಿಕೊಂಡಿದ್ದರು. ಮೃತರಿಗೆ ಗೌರವಯುತ ಅಂತ್ಯಸಂಸ್ಕಾರ ನಡೆಯಬೇಕು ಎಂಬುದು ಎಲ್ಲರ ಕಳಕಳಿ ಆಗಿತ್ತು. ಇಂಥ ಸನ್ನಿವೇಶದಲ್ಲೇ ಭರವಸೆ ಮೂಡಿಸುವ, ಧನಾತ್ಮಕ ನಡೆಗಳು ಕಂಡುಬರುತ್ತಿವೆ. ಸಕಲ ಸುರಕ್ಷತಾ ಕ್ರಮಗಳೊಂದಿಗೆ ಅಂತ್ಯಸಂಸ್ಕಾರ ನಡೆಸುವುದು ಎಲ್ಲ ಬಗೆಯಿಂದ ನಿರಪಾಯಕಾರಿ ಎಂಬ ಭಾವನೆಯನ್ನು ಸಮಾಜದಲ್ಲಿ ಮೂಡಿಸುವ ಇಂಥ ಕೆಲಸಗಳು ಹೆಚ್ಚು ಹೆಚ್ಚು ನಡೆಯಬೇಕು. ಆಗ ಸಮಾಜದಲ್ಲಿ ಒಂದು ಬಗೆಯ ಭರವಸೆಯ ಅಲೆ ಮೂಡುತ್ತದೆ.
ಕೋವಿಡ್‌ ಮೃತರ ಅಂತ್ಯಸಂಸ್ಕಾರ ಹೇಗೆ ನಡೆಸಬೇಕು ಎಂಬುದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಹಲವು ಮಾರ್ಗಸೂಚಿಗಳನ್ನು ನೀಡಿದ್ದು, ಅದರಂತೆಯೇ ಮಾಡುವ ಅವಕಾಶವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾಡಿಕೊಟ್ಟಿವೆ. ಕುಟುಂಬದವರು ಶವಗಳ ಅಂತಿಮ ದರ್ಶನ ಮಾಡಬಹುದು ಹಾಗೂ ಅಂತ್ಯಸಂಸ್ಕಾರವನ್ನು ನೆರವೇರಿಸಬಹುದು. ಪೌರಕಾರ್ಮಿಕರು, ಅಧಿಕಾರಿಗಳು ಅದಕ್ಕೆ ನೆರವಾಗುತ್ತಾರೆ. ಆದರೆ ಲಭ್ಯ ಎಲ್ಲ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಸಂಸ್ಕಾರದ ಬಳಿಕ ಸ್ವಚ್ಛತಾ ಕಾರ್ಯವನ್ನು ನಡೆಸಬೇಕು. ಇವೆಲ್ಲದರ ಬಗ್ಗೆ ಒಂದು ಬಗೆಯ ಜಾಗೃತಿ, ತಿಳಿವಳಿಕೆ ಮೂಡಿದಾಗ, ಕೋವಿಡ್‌ ಮೃತರ ಸಂಸ್ಕಾರವೂ ಒಂದು ಸಹಜ ಸಂಗತಿಯಾಗಿ ಸಮಾಜದಲ್ಲಿ ಅಂಗೀಕೃತವಾಗಬಹುದು. ಮೃತರ ಸಂಖ್ಯೆ ಹೆಚ್ಚಾಗದಿರಲಿ ಎಂದೇ ನಾವು ಬಯಸಿದರೂ, ವಾಸ್ತವ ಚಿತ್ರಣ ಸಾವುಗಳು ಹೆಚ್ಚಾಗಲಿದೆ ಎಂದೇ ಸೂಚಿಸುತ್ತಿದೆ. ಅದಕ್ಕೆ ನಾವು ಸಜ್ಜಾಗಬೇಕು. ಈಗ ಸಂಸ್ಕಾರವನ್ನು ನಡೆಸುತ್ತಿರುವವರು ನಿಜಕ್ಕೂ ಧೈರ‍್ಯವಂತ ಮತ್ತು ಮಾನವೀಯತೆಯುಳ್ಳ ಕೊರೊನಾ ಯೋಧರು. ಇವರಿಗೆ ನಮ್ಮ ನಮನ, ಗೌರವ ಸಲ್ಲುತ್ತದೆ. ಇನ್ನಷ್ಟು ಜನಪ್ರತಿನಿಧಿಗಳು, ಅಧಿಕಾರಿಗಳು, ಸೆಲೆಬ್ರಿಟಿಗಳು, ಗಣ್ಯರು ಕೋವಿಡ್‌ ಮೃತರ ಅಂತ್ಯಸಂಸಾರದಲ್ಲಿ ಪಾಲುಗೊಂಡು ಜನತೆಗೆ ಧೈರ‍್ಯ ತುಂಬುವ ಕೆಲಸ ಮಾಡಬೇಕು. ಆಗ ಸಮಾಜದಲ್ಲಿ ಈ ಬಗ್ಗೆ ತುಂಬಿರುವ ಅಸ್ಪೃಶ್ಯತಾ ಭಾವನೆ, ಭೀತಿ ಮಾಯವಾಗುತ್ತದೆ. ಆಗ ಕಾಯಿಲೆಯನ್ನೂ ಎದುರಿಸುವ ಮನಸ್ಥೈರ‍್ಯ ನಮ್ಮಲ್ಲಿ ಸಾಮುದಾಯಿಕವಾಗಿ ಮೂಡುತ್ತದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top