ರಸಗೊಬ್ಬರ ಅಭಾವ – ರೈತರಲ್ಲಿ ಹಾಹಾಕಾರ ನಿವಾರಿಸಿ

ಮಾರುಕಟ್ಟೆಯಲ್ಲಿ ರಸಗೊಬ್ಬರದ ತೀವ್ರ ಅಭಾವ ಉಂಟಾಗಿದೆ. ರಾಜ್ಯಾದ್ಯಂತ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳೂ ಗರಿಗೆದರಿ ನಡೆಯುತ್ತಿವೆ. ಹೀಗಾಗಿ ರಸಗೊಬ್ಬರ ಕೃಷಿ ವಲಯದ ತಕ್ಷಣದ ಬೇಡಿಕೆಯಾಗಿದೆ. ಒಂದು ತಿಂಗಳಿನಿಂದಲೂ ಮಾರುಕಟ್ಟೆಯಲ್ಲಿ ರಸಗೊಬ್ಬರದ ಅಭಾವ ಉಂಟಾಗಿದ್ದು, ರೈತರಲ್ಲಿ ಹಾಹಾಕಾರವೇ ಕಂಡುಬಂದಿದೆ. ಮುಖ್ಯವಾಗಿ ಯೂರಿಯಾದ ಕೊರತೆ ತಲೆದೋರಿದೆ. ಬಯಲುಸೀಮೆಯಲ್ಲಿ ಬೆಳೆಯುವ ಎಲ್ಲ ಬೆಳೆಗಳಿಗೂ ಸಾರಜನಕವನ್ನು ಪೂರೈಸುವ ಏಕೈಕ ರಸಗೊಬ್ಬರ ಎಂದರೆ ಯೂರಿಯಾ. ಮಳೆ ಚೆನ್ನಾಗಿ ಹನಿಯುತ್ತಿರುವ ಈ ಸಂದರ್ಭದಲ್ಲಿಯೇ ಬೆಳೆಗಳಿಗೆ ತಕ್ಕ ಯೂರಿಯಾ ಕೊಡುವುದು ರೈತರ ರೂಢಿ. ಅದನ್ನು ಸಿಂಪಡಿಸದಿದ್ದರೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ. ಕೆಲವೆಡೆ ರಸಗೊಬ್ಬರ ಬಳಕೆಗೆ ಭೂಮಿ ಎಷ್ಟು ಒಗ್ಗಿಹೋಗಿದೆ ಎಂದರೆ, ಅದನ್ನು ಹಾಕದಿದ್ದರೆ ಸಾರಜನಕವೇ ಭೂಮಿಯಲ್ಲಿ ಸಿಗದೆ ಹೋಗುವುದರಿಂದ ಬೆಳೆಯೆಲ್ಲ ನಾಶವಾಗುತ್ತದೆ. ಇಂಥ ಆತಂಕದಲ್ಲಿ ರೈತರಿದ್ದಾರೆ.
ಮಳೆಗಾಲದ ಈ ಹಂತದಲ್ಲಿ ಕೃಷಿ ಚಟುವಟಿಕೆಗೆ ಪೂರಕವಾಗಿ ರಾಜ್ಯ ಸರಕಾರ ಸಾಕಷ್ಟು ರಸಗೊಬ್ಬರ ದಾಸ್ತಾನು ಮಾಡಬೇಕು ಹಾಗೂ ವರ್ತಕರಿಗೆ ಅದನ್ನು ಪೂರೈಸಬೇಕು. ಆಯಾ ರಾಜ್ಯದ ಬೇಡಿಕೆಗೆ ಅನುಗುಣವಾಗಿ ಕೇಂದ್ರದಿಂದ ಅದು ಪೂರೈಕೆಯಾಗುತ್ತದೆ. ಆದರೆ ಈ ಬಾರಿ ಜಿಲ್ಲೆಗಳಿಗೆ, ಬೇಡಿಕೆ ಎಷ್ಟಿದೆಯೋ ಅದರ ಅರ್ಧದಷ್ಟು ಮಾತ್ರ ರಸಗೊಬ್ಬರ ಪೂರೈಕೆಯಾಗಿದೆ. ಬೇಡಿಕೆಗೆ ತಕ್ಕ ಪೂರೈಕೆ ಇಲ್ಲದಿರುವುದರಿಂದ ಬೆಲೆ ಹೆಚ್ಚು ಮಾಡಿ ಮಾರುತ್ತಿರುವುದು ಕೆಲವು ಕಡೆ ವರದಿಯಾಗಿದೆ. ಬೆಲೆ ಏರಿಕೆಗಾಗಿಯೇ ಕೃತಕವಾಗಿ ಅಭಾವ ಸೃಷ್ಟಿಸಿರುವುದೂ ಕೆಲವೆಡೆ ಕಂಡುಬಂದಿದೆ. ಒಟ್ಟಾರೆಯಾಗಿ ಸಮಸ್ಯೆ ತಟ್ಟಿರುವುದು ಮಾತ್ರ ಕೃಷಿ ಕ್ಷೇತ್ರಕ್ಕೆ. ರೈತರೂ ಚೆನ್ನಾಗಿ ಮಳೆ ಬೀಳಲು ಆರಂಭಿಸಿದ ಕೂಡಲೇ ಹೆಚ್ಚೇನೂ ಯೋಚನೆ ಮಾಡದೆ, ಅಗತ್ಯವೇ ಇಲ್ಲವೇ ಎಂದು ಕೂಡ ಯೋಚಿಸದೆ, ಬೆಳೆ ಪುಷ್ಕಳವಾಗಿ ಬರಲಿ ಎಂದು ಯೂರಿಯಾ ಬಳಸುತ್ತಾರೆ. ಇದು ಯೂರಿಯಾ ಅತಿ ಬಳಕೆಗೂ ಕಾರಣವಾಗಿದ್ದು, ಇದರಿಂದಲೂ ಸ್ವಲ್ಪ ಮಟ್ಟಿಗೆ ಯೂರಿಯಾಗೆ ತತ್ವಾರ ಸೃಷ್ಟಿಯಾಗಿರಲು ಸಾಧ್ಯವಿದೆ.
ಭಾರತದಲ್ಲಿ ಕಳೆದ ವರ್ಷ ಸುಮಾರು 2.73 ಕೋಟಿ ಮೆಟ್ರಿಕ್‌ ಟನ್‌ ರಸಗೊಬ್ಬರವನ್ನು ಬಳಸಲಾಗಿತ್ತು. ಅಂದರೆ ಪ್ರತಿ ಹೆಕ್ಟೇರ್‌ಗೆ 137.6 ಕಿಲೋದಷ್ಟು. ಯೂರಿಯಾ ಸೇರಿದಂತೆ ರಸಗೊಬ್ಬರಕ್ಕೆ ಕೇಂದ್ರ ಸರಕಾರ ಸಾಕಷ್ಟು ಸಬ್ಸಿಡಿ ನೀಡುವುದು ಹಸಿರು ಕ್ರಾಂತಿಯ ಕಾಲದಿಂದಲೂ ನಡೆದುಬಂದಿದೆ. ಅನಂತಕುಮಾರ್‌ ಅವರು ಕೇಂದ್ರದಲ್ಲಿ ರಸಗೊಬ್ಬರ ಖಾತೆ ಸಚಿವರಾಗಿದ್ದಾಗ ರಸಗೊಬ್ಬರವನ್ನು ಪರಿಸರಸ್ನೇಹಿ ಆಗುವಂತೆ ಮಾಡಿ, ಬೇವು ಮಿಶ್ರಿತ ಯೂರಿಯಾ ಮುಂತಾದವನ್ನು ಬಳಕೆಗೆ ತರುವಲ್ಲಿ ಮುಖ್ಯ ಪಾತ್ರ ವಹಿಸಿದರು. ರೈತರಿಗೆ ರಸಗೊಬ್ಬರ ಒದಗಿಸುವಲ್ಲಿ ಹಾಗೂ ಅದಕ್ಕೆ ಸಬ್ಸಿಡಿ ಒದಗಿಸುವಲ್ಲಿ ಕೇಂದ್ರ ಸರಕಾರದ ನೀತಿ ಸಾಕಷ್ಟು ಚೆನ್ನಾಗಿಯೇ ಕೆಲಸ ಮಾಡುತ್ತಿದೆ. ಆದರೆ ರಸಗೊಬ್ಬರ ಬಳಕೆಯ ಸೀಸನ್‌ನಲ್ಲಿ ಮಾತ್ರ ಆಗಾಗ ಕೃತ ಅಭಾವ ಉಂಟಾಗುವುದು, ರಾಜ್ಯಗಳಿಗೆ ಅಸಮರ್ಪಕ ಪೂರೈಕೆ, ರಸಗೊಬ್ಬರಕ್ಕಾಗಿ ಹಾಹಾಕಾರ ಉಂಟಾಗಿ ದೊಂಬಿಯೇ ನಡೆಯುವುದು- ಮುಂತಾದವುಗಳನ್ನು ತಡೆಯಲು ಸಾಧ್ಯವಾಗಿಲ್ಲ. ರಸಗೊಬ್ಬರ ಬಳಕೆಯನ್ನು ಪೂರ್ತಿಯಾಗಿ ಕೈಬಿಡುವುದು, ಪರಿಸರಸ್ನೇಹಿ ಗೊಬ್ಬರ ಬಳಕೆಯ ಸಾವಯವ ಮತ್ತು ಸಹಜ ವಿಧಾನಗಳು ರೈತರಿಗೆ ಇನ್ನೂ ಅಷ್ಟು ಆಪ್ತವಾಗಿಲ್ಲ. ಹೀಗಾಗಿ ಪ್ರತಿ ಸೀಸನ್‌ನಲ್ಲೂ ರಾಜ್ಯ ಸರಕಾರಗಳು ರಸಗೊಬ್ಬರ ವಿಚಾರದಲ್ಲಿ ತಲೆನೋವು ಎದುರಿಸುತ್ತಿವೆ.
ಸದ್ಯಕ್ಕೆ ರಸಗೊಬ್ಬರ ಲಭ್ಯತೆಯಿಲ್ಲ ಎಂದು ಭಯಭೀತವಾಗಿರುವ ರೈತರಿಗೆ ಅದನ್ನು ಒದಗಿಸಿಕೊಡುವುದು, ಕೃತಕ ಅಭಾವ ಸೃಷ್ಟಿ ಹಾಗೂ ಬೆಲೆಯೇರಿಕೆ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಸರಕಾರದ ಆದ್ಯತೆ ಆಗಬೇಕು. ಅಪಾಯಕಾರಿ ರಸಗೊಬ್ಬರಗಳ ಬಳಕೆಯ ಇಳಿಮುಖಕ್ಕೆ ಉತ್ತೇಜನ ಹಾಗೂ ಇನ್ನಷ್ಟು ಉತ್ತಮ ವಿಧಾನಗಳ ಆವಿಷ್ಕಾರದತ್ತ ದೀರ್ಘಕಾಲಿಕ ನೀತಿಯೊಂದನ್ನು ರೂಪಿಸುವುದು ಮುಂದಿನ ಆದ್ಯತೆ ಆಗಬೇಕು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top