– ವಿಜಯ್‌ಕುಮಾರ್ ಎಚ್. ಕೆ.
ಡಾ. ಹೆಚ್.ಎನ್ ಎಂದೇ ಪ್ರಖ್ಯಾತರಾದ ಹೊಸೂರು ನರಸಿಂಹಯ್ಯನವರು ಜೂನ್ 6, 1920ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮದಲ್ಲಿ ಬಡ ಹಿಂದುಳಿದ ಕುಟುಂಬದಲ್ಲಿ ಹುಟ್ಟಿದರು. ತಂದೆ ಹನುಮಂತಪ್ಪ, ತಾಯಿ ವೆಂಕಟಮ್ಮ, ತಂಗಿ ಗಂಗಮ್ಮ. ಮನೆಯಲ್ಲಿ ಮಾತಾಡುವ ಭಾಷೆ ಕನ್ನಡವೆಂದರೆ ಹೆಚ್ಚು ಪ್ರೀತಿ. ಶಾಲೆಯಲ್ಲಿ ಪಠ್ಯದ ಜೊತೆಗೆ ಸ್ವಾತಂತ್ರ್ಯ ಚಳವಳಿಗಳ ಬಗ್ಗೆ, ಜಾತೀಯತೆ, ಅಸ್ಪೃಶ್ಯತೆ ಬಗ್ಗೆ ಶಿಕ್ಷ ಕರು ತಿಳಿಸುತ್ತಿದ್ದದ್ದು ಇವರ ಮೇಲೆ ಪ್ರಭಾವ ಬೀರಿತ್ತು. ಗಾಂಧೀಜಿಯವರ ಸರಳಜೀವನದಿಂದ ಪ್ರಭಾವಿತರಾಗಿದ್ದರು.
ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿಗೆ 1935ರಲ್ಲಿ ಸೇರಿದರು. 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಬೆಂಗಳೂರು, ಮೈಸೂರು ಮತ್ತು ಪುಣೆಯ ಯರವಾಡ ಜೈಲಿನಲ್ಲಿ 9 ತಿಂಗಳ ಕಾರಾಗೃಹವಾಸ ಅನುಭವಿಸಿದರು. ಅನಂತರ ವಿದ್ಯಾಭ್ಯಾಸ ಮುಂದುವರಿಸಿ ಭೌತಶಾಸ್ತ್ರದ ಬಿ.ಎಸ್ಸಿ ಆನರ್ಸ್ ಮತ್ತು ಎಂ.ಎಸ್ಸಿ ಪದವಿಗಳನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಪಡೆದರು. 1946ರಲ್ಲಿ ಬೆಂಗಳೂರು ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಭೌತಶಾಸ್ತ್ರ ಅಧ್ಯಾಪಕರಾಗಿ ಸೇರಿ, ಪ್ರಾಧ್ಯಾಪಕರಾಗಿ ಹನ್ನೆರಡು ವರ್ಷ ಸೇವೆ ಸಲ್ಲಿಸಿದರು. ಅನಂತರ ಅದೇ ಕಾಲೇಜಿನ ಪ್ರಿನ್ಸಿಪಾಲರಾಗಿದ್ದರು. ಅಮೆರಿಕದ ಓಹಿಯೊ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ನ್ಯೂಕ್ಲಿಯರ್ ಫಿಸಿಕ್ಸ್‌ನಲ್ಲಿ ಡಾಕ್ಟರೇಟ್ ಪದವಿ ಗಳಿಸಿ ಸದರನ್ ಇಲಿನಾಯ್ಸ್ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷ (1967-68) ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.
ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ನೇಮಕಗೊಂಡು ವಿಶ್ವವಿದ್ಯಾಲಯದ ಪುರೋಭಿವೃದ್ಧಿಗೆ ಶ್ರಮಿಸಿದರು (1972-77). 1975ರಿಂದ ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ಅಧ್ಯಕ್ಷ ರಾದರು. ತಮ್ಮ ಜೀವನದ ಬಹುಭಾಗವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟ ಇವರು ಗ್ರಾಮಾಂತರ ಪ್ರದೇಶಗಳಲ್ಲಿ ಶಿಕ್ಷ ಣ ಸಂಸ್ಥೆಗಳ ಸ್ಥಾಪನೆಗೆ ಕಾರಣರಾದರು. ಗೌರಿಬಿದನೂರು ಮತ್ತು ಬಾಗೇಪಲ್ಲಿಯಲ್ಲಿ ನ್ಯಾಷನಲ್ ಕಾಲೇಜುಗಳು, ಹೊಸೂರು, ಯಲ್ದೂರು, ಮುಡಿಯನೂರು, ಸುಬ್ರಹ್ಮಣ್ಯಪುರಗಳಲ್ಲಿ ನ್ಯಾಷನಲ್ ಸ್ಥಾಪನೆಯಿಂದಾಗಿ ಗ್ರಾಮಾಂತರ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ದೊರಕುವಂತೆ ಮಾಡಿದರು.
ಹೆಚ್ಎನ್ ವ್ಯಕ್ತಿತ್ವ ಅದ್ಭುತಗಳ ಗಣಿ. ಕುಗ್ರಾಮವೊಂದರ ಅತ್ಯಂತ ಬಡತನದ ಕುಟುಂಬದಲ್ಲಿ ಹುಟ್ಟಿ ಬಂದ ಹಳ್ಳಿಯ ಹುಡುಗನೊಬ್ಬ ನಿರಂತರವಾದ ಶ್ರಮದಿಂದ, ಅಚಲವಾದ ವಿಶ್ವಾಸದಿಂದ, ವೈಚಾರಿಕ ಮನೋಭಾವದಿಂದ ಪ್ರತಿಭಾವಂತನಾಗಿ ಬೆಳೆದು ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ನಮ್ಮಲ್ಲಿ ಬೆರಗು ಹುಟ್ಟಿಸುತ್ತದೆ. ಅವರ ಬದುಕು ಅನೇಕರಿಗೆ ಸ್ಪೂರ್ತಿಯ ಸೆಲೆ. ಅವರ ಸರಳ ಜೀವನ ಶೈಲಿ, ಅನನ್ಯ ರಾಷ್ಟ್ರಪ್ರೇಮ, ಬದುಕು ರೂಪಿಸಿದ ಶಿಕ್ಷ ಣ ಸಂಸ್ಥೆಯ ಮೇಲಿನ ನಿಷ್ಠೆ, ಕಡು ಬಡತನದ ಬದುಕಿನೊಂದಿಗಿನ ಹೋರಾಟ, ಅಚಲವಾದ ಆತ್ಮವಿಶ್ವಾಸ, ವೈಚಾರಿಕ ಮನೋಭಾವ ಹೀಗೆ ಅನೇಕ ಕಾರಣಗಳಿಂದ ನರಸಿಂಹಯ್ಯನವರ ವ್ಯಕ್ತಿತ್ವ ನಮಗೆ ಆಪ್ತವಾಗುತ್ತದೆ.
ಅವರು ಧರಿಸುವ ಬಟ್ಟೆ, ಸೇವಿಸುವ ಆಹಾರ, ವಾಸಿಸುವ ಕೋಣೆ ಹೀಗೆ ಪ್ರತಿಯೊಂದು ಅವರ ಸರಳ ಬದುಕಿಗೆ ಸಾಕ್ಷಿಯಾಗಿದ್ದವು. ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಹುದ್ದೆಯನ್ನು ಅಲಂಕರಿಸಿದಾಗಲೂ ಅವರು ತಮ್ಮ ವೇಷಭೂಷಣಗಳಲ್ಲಿ ಬದಲಾವಣೆ ಮಾಡಿಕೊಳ್ಳಲಿಲ್ಲ. ಒಂದು ಹಂತದಲ್ಲಿ ಅಂಥದ್ದೊಂದು ಒತ್ತಡ ಬಂದಾಗ ಹುದ್ದೆಯನ್ನು ತ್ಯಜಿಸಲು ಮುಂದಾದರೇ ವಿನಹ ಸರಳತೆಯನ್ನು ಬಿಟ್ಟುಕೊಡಲಿಲ್ಲ. ಬದುಕಿನುದ್ದಕ್ಕೂ ಸರಳತೆ, ನೇರತನ, ದಿಟ್ಟತನ ಮತ್ತು ಸತ್ಯವನ್ನು ಅನುಸರಿಸಿಕೊಂಡು ಬಂದ ಡಾ. ಹೆಚ್.ಎನ್. ನಿರೀಶ್ವರವಾದಿಯಾಗಿದ್ದರು. ಯಾವುದನ್ನೂ ಪ್ರಶ್ನಿಸದೇ ಒಪ್ಪುತ್ತಿರಲಿಲ್ಲ. ಪವಾಡ ಮಾಡುವವರನ್ನು ಬಯಲಿಗೆಳೆಯುತ್ತಿದ್ದರು. ಅಮೆರಿಕದಲ್ಲೇ ಉಪನ್ಯಾಸಕರಾಗಿ ಕೆಲಸ ಮಾಡುವಂತೆ ಏನೆಲ್ಲ ಪ್ರಲೋಭನೆಗಳನ್ನೊಡ್ಡಿದರೂ ಅವರು ಒಪ್ಪಲಿಲ್ಲ. ಅಧ್ಯಾಪಕ, ಆಡಳಿತಗಾರ, ಸ್ನೇಹಮಯ ಮಾನವತಾವಾದಿ, ವಿಚಾರವಾದಿ, ಮೇಲ್ಮಟ್ಟದ ಹಾಸ್ಯ ಪ್ರಜ್ಞೆ ಅವರದು. ರಾಷ್ಟ್ರೀಯತಾವಾದಿಯಾಗಿದ್ದು ಖಾದಿ ಬಟ್ಟೆಯನ್ನೇ ಧರಿಸುತ್ತಿದ್ದರು.
ನಾಗರಬಾವಿಯನ್ನು ‘ಜ್ಞಾನಭಾರತಿ’ಯನ್ನಾಗಿ ಮಾಡಿದರು. 1980ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾದರು. 1969ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿತು. ಕೇಂದ್ರ ಸರಕಾರ ‘ಪದ್ಮಭೂಷಣ’ ಪ್ರಶಸ್ತಿಯನ್ನು ನೀಡಿತು. 1992ರಲ್ಲಿ ಇವರ ‘ತೆರೆದ ಮನ’ ಎಂಬ ಲೇಖನಗಳ ಸಂಗ್ರಹ, 1995ರಲ್ಲಿ ಇವರ ಆತ್ಮಕಥೆ ‘ಹೋರಾಟದ ಹಾದಿ’ ಪ್ರಕಟವಾಯಿತು. ಮೌಢ್ಯತೆಯ ವಿರೋಧಿಯಾಗಿದ್ದ ಇವರು ಯಾವ ಧಾರ್ಮಿಕ ಅಂತ್ಯಸಂಸ್ಕಾರದಲ್ಲೂ ನನಗೆ ನಂಬಿಕೆಯಿಲ್ಲ ಮತ್ತು ನಾನು ಸತ್ತಾಗ ನಮ್ಮ ಯಾವ ಸಂಸ್ಥೆಗೂ ರಜ ಕೊಡಕೂಡದು ಎಂದು ಉಯಿಲು ಬರೆದಿದ್ದರು. ಜ.31, 2005ರಂದು ಇಹಲೋಕ ತ್ಯಜಿಸಿದರು.