ಮನರಂಜನೆ ಮನೆ ಮನ ಕೆಡಿಸದಿರಲಿ

– ಡಾ. ರೋಹಿಣಾಕ್ಷ ಶಿರ್ಲಾಲು. 
ಲಾಕ್‌ಡೌನ್‌ ಕಾಲಘಟ್ಟದಲ್ಲಿ ನಮ್ಮ ಬಹುತೇಕ ಖಾಸಗಿ ಮನರಂಜನಾ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳ ಎಪಿಸೋಡ್‌ಗಳು ಚಿತ್ರೀಕರಣವಿಲ್ಲದೆ ಮುಕ್ತಾಯವಾಗಿವೆ. ಜನ ಮನೆಯಿಂದ ಹೊರಗೆ ಹೋಗಲಾರದೆ ಮನೆಯಲ್ಲೇ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಬಂದುದರಿಂದ, ಮನರಂಜನೆಗಾಗಿ ಟಿವಿ ಚಾನೆಲ್‌ಗಳನ್ನೇ ಅವಲಂಬಿಸಬೇಕಾಗಿ ಬಂದಾಗ ಸರಕಾರಿ ದೂರದರ್ಶನ ಚಾನೆಲ್ ಬಹುವರ್ಷಗಳ ಹಿಂದೆ ಪ್ರಸಾರ ಮಾಡಿದ್ದ ರಾಮಾಯಣ, ಮಹಾಭಾರತ ಮೊದಲಾದ ಜನಪ್ರಿಯ ಪೌರಾಣಿಕ ಧಾರಾವಾಹಿಗಳನ್ನು ಪ್ರಸಾರ ಮಾಡಿತು. ಈ ಪ್ರಸಾರಗಳು ದಾಖಲೆಯನ್ನೇ ನಿರ್ಮಿಸಿತು. ದೇಶಾದ್ಯಂತ ಕೋಟ್ಯಂತರ ಟಿವಿ ವೀಕ್ಷ ಕರು ಈ ಕಥೆಗಳನ್ನು ನೋಡಿದರು. ಈ ತಲೆಮಾರಿನ ಅನೇಕ ಮಕ್ಕಳು ಮೊದಲ ಬಾರಿಗೆ ಈ ಕಥೆಗಳನ್ನು ಕೇಳಿದ, ನೋಡಿದ ಅನುಭವ ಪಡೆದುಕೊಂಡರು. ಇದೇ ಸಂದರ್ಭ ನಮ್ಮ ಮನರಂಜನೆಯ ಕ್ಷೇತ್ರ ಹೇಗಿದೆ ಎನ್ನುವುದರ ಆತ್ಮಾವಲೋಕನಕ್ಕೂ ಒಂದು ಅವಕಾಶವಾಗಿದೆ. ಇಂದು ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳೇ ಸಮುದಾಯದ ಅತಿದೊಡ್ಡ ಮನರಂಜನೆಯ ಅವಕಾಶಗಳಾಗಿವೆ.
ಒಂದೊಂದು ಭಾಷೆಗೆ ಒಂದೆರಡು ಚಾನೆಲ್‌ಗಳಿದ್ದುದು ಹತ್ತಾರು ಚಾನೆಲ್‌ಗಳಾಗಿ, ಸರಣಿಯಾಗಿ ವರ್ಷಗಳ ಕಾಲ ಪ್ರಸಾರವಾಗುವ ಧಾರಾವಾಹಿಗಳು ಹುಟ್ಟಿಕೊಂಡವು. ಕೌಟುಂಬಿಕ ಕಥೆಗಳು ಎನ್ನುವ ಹೆಸರಿನಲ್ಲಿ ಮನೆಯೊಳಗಿನ ಬದುಕನ್ನೇ ಕೇಂದ್ರೀಕರಿಸಿ, ಮಹಿಳಾ ವೀಕ್ಷಕರನ್ನೇ ಗಮನದಲ್ಲಿರಿಸಿಕೊಂಡು ಕಥೆಗಳನ್ನು ಹೆಣೆಯಲಾಯಿತು. ಕುಟುಂಬದ ಸದಸ್ಯರೆಲ್ಲ ಜತೆಯಾಗಿ ಕುಳಿತು ಧಾರಾವಾಹಿಗಳನ್ನು ನೋಡುವ ಹವ್ಯಾಸ ಬದುಕಿನ ಭಾಗವೇ ಆಗಿಬಿಟ್ಟಿತು. ಪರದೆಗೆ ಸೀಮಿತಗೊಳ್ಳದೆ ಮನಸ್ಸಿನಾಳಕ್ಕೆ ಇಳಿಯಿತು. ಹೀಗಾಗಿ ನಮ್ಮ ದಿನನಿತ್ಯದ ಮಾತುಕತೆಗಳಲ್ಲಿ ಕಥೆಯ ಪಾತ್ರಗಳ ಬದುಕಿನ ಸಂತೋಷ, ದುಃಖಗಳು ಕಾಣಿಸಿಕೊಳ್ಳತೊಡಗಿದವು. ಇಷ್ಟೊಂದು ಪ್ರಭಾವಿಸುವ ಧಾರಾವಾಹಿಗಳ ಕಥೆಗಳು ಹೇಗಿವೆ ಎಂದು ಅಧ್ಯಯನ ಮಾಡಿದರೆ ಆಘಾತವಾಗಬಹುದು. ಆ ಕಥೆಗಳು ನಮ್ಮ ಸಮಾಜದ ಮೇಲೆ ಉಂಟುಮಾಡುವ ಪರಿಣಾಮಗಳೇನು ಎನ್ನುವುದನ್ನು ಯಾರೂ ಗಂಭೀರವಾಗಿ ಗಮನಿಸಿದ ಹಾಗೆ ಇಲ್ಲ. ಒಂದೆಡೆ ಕೌಟುಂಬಿಕ ನ್ಯಾಯಾಲಯಗಳ ಮುಂದೆ ದಿನಬೆಳಗಾದರೆ ನೋಂದಣಿಯಾಗುವ ವಿಚ್ಛೇದನಾ ಪ್ರಕರಣಗಳು, ಇನ್ನೊಂದೆಡೆ ಕೌಟುಂಬಿಕ ಬದುಕಿನ ಮಾನಸಿಕತೆಯನ್ನು ಹದಗೆಡಿಸುತ್ತಿರುವ ಧಾರಾವಾಹಿಗಳು ಈ ಕುರಿತು ನಿಜವಾಗಿಯೂ ಚರ್ಚೆಗಳಾಗಬೇಕು. ನಮ್ಮ ಜನ ಈ ಬಗೆಯ ಕಥೆಗಳನ್ನು ಇಚ್ಛೆಪಟ್ಟು ನೋಡುತ್ತಿದ್ದಾರೋ? ಅಥವಾ ಅನಿವಾರ್ಯತೆಯೋ?
ಉದಾಹರಣೆ ಗಮನಿಸೋಣ. ಬಹುತೇಕ ಕೌಟುಂಬಿಕ ಧಾರಾವಾಹಿಗಳಲ್ಲಿ ಮದುವೆಗಳು ಭಾರಿ ರಣತಂತ್ರದ ಚಟುವಟಿಕೆಗಳು! ಒಂದೋ ದಾರಿಯಲ್ಲಿ ಹೋಗುವ ಅನಾಮಿಕನೊಬ್ಬ ಯಾರದೋ ಬೆದರಿಕೆಗೆ ಯಾವುದೋ ಹುಡುಗಿಯ ಕೊರಳಿಗೆ ಮಾಂಗಲ್ಯ ಬಿಗಿಯುವುದು, ಹುಡುಗನೊಬ್ಬ ತಾನು ಪ್ರೀತಿಸಿದ ಹುಡುಗಿಯನ್ನು ಇನ್ಯಾರೋ ಮದುವೆ ಆಗುವಾಗ ಅಲ್ಲೇ ಚಪ್ಪರದ ಅಥವಾ ಅಡುಗೆ ಕೆಲಸದವನಾಗಿ ನೋಡುವುದು, ಕುಟುಂಬದ ಯಾರದ್ದೋ ಹಠಕ್ಕಾಗಿ ಹುಡುಗಿಯೊಬ್ಬಳು ತನಗಿಷ್ಟವಿಲ್ಲದಿದ್ದರೂ ಬೇರೊಬ್ಬ ಹುಡುಗನನ್ನು ಮದುವೆಯಾಗುವುದು, ಈಗಾಗಲೇ ಒಂದು ಮದುವೆ ಆಗಿರುವ ಹುಡುಗನೊಬ್ಬ ಆಕಸ್ಮಿಕ ಪ್ರಸಂಗಕ್ಕೆ ಸಿಲುಕಿ ಇನ್ನೊಂದು ಹುಡುಗಿಯನ್ನು ಮದುವೆಯಾಗುವುದು, ಹೆಣ್ಣೊಬ್ಬಳ ಮೇಲೆ ಅಥವಾ ಅವರ ಕುಟುಂಬದ ಸದಸ್ಯರ ಮೇಲಿನ ಯಾವುದೋ ದ್ವೇಷಕ್ಕಾಗಿ ಆಕೆಯನ್ನು ಮದುವೆಯಾಗುವುದು, ಆಕೆಯನ್ನು ಇನ್ಮುಂದೆ ಬೇರಾರೂ ಮದುವೆಯಾಗಲಾರದಂತೆ ಮಾಡುವ ಹಠಕ್ಕೆ ಹೆಣ್ಣೊಬ್ಬಳ ಕೊರಳಿಗೆ ಮಾಂಗಲ್ಯ ಕಟ್ಟುವುದು, ಹೆಣ್ಣೊಬ್ಬಳು ತನಗಿಷ್ಟವಿಲ್ಲದಿದ್ದರೂ ಒತ್ತಾಯಕ್ಕೆ ಕಟ್ಟಿದ ಕೊರಳ ಮಾಂಗಲ್ಯವನ್ನು ಮುಂದಿಟ್ಟುಕೊಂಡು ಆ ಬಲತ್ಕಾರದ ಸಂಬಂಧದಿಂದ ಬಿಡುಗಡೆಯಾಗಲಾರದ ಅಸಹಾಯಕತೆ ತೋರಿಸುವುದು, ಯಾವುದೋ ಆಸ್ತಿ ಪಡೆಯುವ ತಂತ್ರವಾಗಿ ಮದುವೆಯಾಗುವುದು, ಯಾವುದೋ ದ್ವೇಷಕ್ಕಾಗಿ ಮದುವೆಯನ್ನು ತಡೆಯುವುದು, ಹೆಣ್ಣಿನ ತಂದೆ ತಾಯಿಯರು ಅಸಹಾಯಕರಾಗಿ ಬಲಾತ್ಕಾರದ ಒಪ್ಪಂದಕ್ಕೆ ಶರಣಾಗುವಂತೆ ಮಾಡುವುದು, ಹೆಂಡತಿಯೇ ಗಂಡನನ್ನು ಬಂಧಿಸಿಡುವುದು, ವಿಚ್ಛೇದನ ಪಡೆದರೂ ಮನೆಯವರ ಮುಂದೆ ಗಂಡ ಹೆಂಡತಿಯಂತೆ ತೋರಿಸಿಕೊಳ್ಳುವುದು, ಆಕೆಗೆ ಮಗುವಾಗುವುದಿಲ್ಲ ಎನ್ನುವುದನ್ನು ತಿಳಿದುಕೊಂಡು ತಮ್ಮ ಮನೆಯ ಸದಸ್ಯರಲ್ಲೊಬ್ಬನಿಗೆ ಆಕೆಯನ್ನು ಮದುವೆ ಮಾಡಿಸಿ ಸೇಡು ತೀರಿಸಿಕೊಳ್ಳುವುದು… ಹೀಗೆ ಮದುವೆ ಎನ್ನುವುದು ಧಾರಾವಾಹಿಗಳ ಪಾಲಿಗೆ ಒಂದು ತಂತ್ರಗಾರಿಕೆಯೇ ಹೊರತು ಸಂಬಂಧದ ಬೆಸುಗೆಯಲ್ಲ.
ಕುಟುಂಬದ ಒಳಿತು ಮತ್ತು ವ್ಯಕ್ತಿಯ ಹಿತಕ್ಕಾಗಿ ಮದುವೆಗಳು ಆಗುವುದಿಲ್ಲ. ಕುಟುಂಬವನ್ನು ಒಡೆಯುವುದಕ್ಕಾಗಿ, ವ್ಯಕ್ತಿಯ ನಾಶಕ್ಕಾಗಿ ಮದುವೆಗಳನ್ನು ಹೆಣೆಯಲಾಗುತ್ತದೆ! ಒಂದೋ ಹೆಣ್ಣು ಇಲ್ಲಿ ಪರಮ ಕ್ರೂರಿ. ಇಲ್ಲವೇ ಅಸಹಾಯಕಿ. ಕಣ್ಣೀರು ಸುರಿಸುವ ಅಳುಮುಂಜಿ. ಇಲ್ಲವೇ ದ್ವೇಷದ ಬೆಂಕಿ. ಅತ್ತೆ ಸೊಸೆಯರ ಪಾತ್ರಗಳಂತೂ ತದ್ವಿರುದ್ದ. ತನ್ನದೆ ಕುಟುಂಬದ ಸದಸ್ಯರೊಬ್ಬರನ್ನು ಕೊಲ್ಲಲು ವರ್ಷಾನುಗಟ್ಟಲೆ ತಂತ್ರಗಾರಿಕೆ. ಅನ್ನಕ್ಕೆ, ಹಾಲಿಗೆ ವಿಷ ಬೆರೆಸಿ ಹೊಂಚು ಹಾಕುವ ಮನೆ ಮಂದಿ. ಇದನ್ನು ನೋಡುವುದು ಕುಟುಂಬದ ಎಲ್ಲಾ ಸದಸ್ಯರು ಜತೆಯಾಗಿ. ಅದರಲ್ಲೂ ಬಹುತೇಕ ಸೀರಿಯಲ್‌ಗಳ ವೀಕ್ಷಕರು ಮಹಿಳೆಯರು. ಹದಿವಯಸ್ಸಿನ ಹೆಣ್ಣು ಮಗಳು ವರ್ಷಗಟ್ಟಲೆ ಈ ಕತೆಯನ್ನು ನೋಡುತ್ತಾ ಬೆಳೆದರೆ ಅದು ಆಕೆಯ ಮೇಲೆ ಮಾಡಬಹುದಾದ ಪರಿಣಾಮ ಏನು? ಆಕೆ ಮದುವೆ, ಕುಟುಂಬ ಸಂಬಂಧಗಳನ್ನು ಗ್ರಹಿಸುವ ಬಗೆ ಹೇಗಿರಬಹುದು?
ಇಂತಹ ಧಾರಾವಾಹಿಗಳು ಬೇರೆ ಬೇರೆ ವಯೋಮಾನದ ವಯಸ್ಸಿನ ವ್ಯಕ್ತಿಗಳ ಮನಸಿನ ಮೇಲೆ ಉಂಟುಮಾಡುವ ನಕಾರಾತ್ಮಕ ಪರಿಣಾಮಗಳೇನು ಎನ್ನುವುದರ ಅಧ್ಯಯನ ನಡೆಸಿ ಈ ಧಾರಾವಾಹಿಗಳು ಪ್ರಸಾರಕ್ಕೆ ಯೋಗ್ಯವೇ ಇಲ್ಲವೇ ಎಂದು ಪ್ರಮಾಣಿಕರಿಸುವ ವ್ಯವಸ್ಥೆ ನಮ್ಮಲ್ಲಿದೆಯೆ? ಇಲ್ಲ ಎಂದಾದರೆ ಯಾಕಿಲ್ಲ? ಶಾಲೆಯ ಪರಿಸರದಲ್ಲಿ ಮಕ್ಕಳ ಮನಸಿಗೆ ಸಣ್ಣ ಆಘಾತವೂ ಆಗದಂತೆ ಬೆಳೆಸಲು ನೂರಾರು ಪ್ರಯೋಗಗಳಾಗಿವೆ. ಅದರ ಪರಿಣಾಮ ಮಕ್ಕಳಿಗೆ ಹೊಡೆಯಬಾರದು, ಪರಸ್ಪರ ಹೋಲಿಸಬಾರದು, ಮಗುವನ್ನು ನಿಂದಿಸಬಾರದು, ಹೀಗೆ ನೂರಾರು ಮನಶ್ಶಾಸ್ತ್ರೀಯ ಹಿನ್ನೆಲೆಯ ನಿಯಮಗಳು ಜಾರಿಯಾಗಿದೆ. ಇನ್ನೊಂದೆಡೆ ಮಗುವನ್ನು ಪೋಷಿಸುವ ಸಂದರ್ಭದಲ್ಲಿ ಪಾಲಕರು ಮಗುವಿನ ಮನಸಿಗೆ ಕೆಡುಕೆನಿಸುವ ಯಾವ ಸಂಗತಿಗಳೂ ಬೀಳದಿರಲೆಂಬಂತೆ ಬೆಳೆಸುತ್ತಾರೆ. ಆದರೆ ಧಾರಾವಾಹಿಗಳು ಈ ಎರಡೂ ಹಂತಗಳ ಪ್ರಯತ್ನವನ್ನೂ ಮಣ್ಣು ಮಾಡುತ್ತವೆ. ಕೌಟುಂಬಿಕ ಧಾರಾವಾಹಿಗಳು ಕೌಟುಂಬಿಕ ಜೀವನದ ಮೇಲೆ ನಡೆಸುವ ಪರಿಣಾಮಗಳ ಬಗ್ಗೆ ಮನೋವಿಜ್ಞಾನಿಗಳು ಅಧ್ಯಯನ ನಡೆಸಬೇಕಾಗಿದೆ.
ಜನರಿಗೆ ಮನರಂಜನೆ ಬೇಕು ನಿಜ. ಹಾಗೆಂದು ಮನರಂಜನೆಯೇ ನೈತಿಕತೆಯನ್ನು ಹಾಳುಗೆಡಹುವಂತಿದ್ದರೆ? ಒಂದೆಡೆ ಮಕ್ಕಳು ಆರೋಗ್ಯಪೂರ್ಣ ಮನಸಿನಿಂದ ಬೆಳೆಯುವಂತಾಗಲು ನಡೆಸುವ ಎಲ್ಲಾ ಪ್ರಯತ್ನಗಳೂ ವ್ಯರ್ಥವಲ್ಲವೇ? ಐದಾರು ವರ್ಷ ಪ್ರಸಾರಗೊಂಡರೂ ಕೊನೆಯಾಗದ ಕಥೆಗಳು. ಕಥೆಯ ಆರಂಭಕ್ಕೂ ಮುಂದುವರಿಕೆಗೂ ಸಂಬಂಧವೇ ಇಲ್ಲ. ಪ್ರತಿ ಎಪಿಸೋಡ್‌ನಲ್ಲೂ ದ್ವೇಷ, ಅಸೂಯೆ, ವಂಚನೆಯ ದೃಶ್ಯ. ಹಗೆ ಸಾಧಿಸಿದ ಪಾತ್ರಕ್ಕೆ ಯಾವ ಶಿಕ್ಷೆಯೂ ಇಲ್ಲ. ನಿರ್ದೇಶಕರು ಆ ದುಷ್ಟತನಕ್ಕೆ ಆದ ದಂಡನೆಯನ್ನು ತೋರಿಸಲು ಬದ್ಧರಲ್ಲ. ಇಂತಹ ನಡವಳಿಕೆಗಳು ಉದ್ದೇಶಪೂರ್ವಕವೇ? ಕುಟುಂಬ ಜೀವನವನ್ನು ಕೆಡಿಸುವ ಪ್ರಜ್ಞಾಪೂರ್ವಕ- ಅಪ್ರಜ್ಞಾಪೂರ್ವಕ ಸಂಚು ಇದರ ಹಿಂದೆ ಇರಬಹುದೇ? ಖಂಡಿತವಾಗಿಯೂ ಚರ್ಚೆಗಳಾಗಬೇಕು. ಬಹುತೇಕ ಹಿಂದೂ ಕುಟುಂಬಗಳು, ಹಿಂದೂ ಹೆಸರಿನ ಪಾತ್ರಗಳು, ಹಿಂದೂ ಆಚರಣೆಗಳು, ಹಿಂದೂ ದೇವರುಗಳು ಹೀಗೆ ಈ ಧಾರಾವಾಹಿಗಳಲ್ಲಿ ಬಳಸುವ ಎಲ್ಲಾ ಗುರುತುಗಳು ಹಿಂದೂಗಳದೇ ಆಗಿರುವುದು ಆಕಸ್ಮಿಕವೋ? ಇದರ ಪರಿಣಾಮವೂ ಹಿಂದೂ ಕುಟುಂಬ ಪದ್ಧತಿ, ಹಿಂದೂ ಜೀವನ ಪದ್ಧತಿ ಮೇಲಾಗುತ್ತಿರುವುದೂ ಸುಳ್ಳಲ್ಲ. ಒಂದು ವೇಳೆ ಅದು ಕಲೆಯೇ ಆಗಿದ್ದರೆ ಆ ಕಲೆಗೂ ಸಾಮಾಜಿಕ ಜವಾಬ್ದಾರಿ ಇರುತ್ತಿತ್ತು. ಆದರೆ ಇಂದು ಅವು ಕಲೆಯಾಗಿ ಉಳಿದಿಲ್ಲ. ಧಾರಾವಾಹಿಗಳನ್ನೇ ನೋಡುತ್ತಾ ಬೆಳೆದ ಒಂದು ತಲೆಮಾರಿಗೆ ತನ್ನ ಸಮಾಜದ ಯಾವ ಆಚರಣೆಗೂ ಅರ್ಥ ಕಾಣದಿರಬಹುದು.
ದೇಶದಲ್ಲಿ ಸಾವಿರಾರು ರೈತರು ಬರಗಾಲದಿಂದ ಕಂಗೆಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಲಿ, ಭಯೋತ್ಪಾದಕರಿಂದ ದಾಳಿಯಾಗಿ ನೂರಾರು ಅಮಾಯಕರು ಸಾಯುವುದಾಗಲಿ, ಸೈನಿಕರು ಹುತಾತ್ಮರಾಗುವುದಾಗಲಿ, ರಾಜ್ಯದೊಳಗೆ ನೆರೆ ಬಂದು ನೂರಾರು ಕುಟುಂಬಗಳು ಕೊಚ್ಚಿಕೊಂಡು ಹೋದ ಸಂಗತಿಗಳ್ಯಾವುದೂ ಈ ಮಾಧ್ಯಮವನ್ನು ಬಾಧಿಸಲೇ ಇಲ್ಲ. ಅವೆಲ್ಲವೂ ಕ್ಷುಲ್ಲಕ ಸಂಗತಿಗಳೆ? ಸಮಕಾಲೀನ ಸಮಾಜದ ಯಾವೊಂದು ವಾಸ್ತವಿಕ ಸಂಗತಿಯೂ ಕಥೆಯನ್ನು ಸೇರಿಕೊಳ್ಳುವುದೇ ಇಲ್ಲ. ಅಲ್ಲಿರುವ ಅಳುಮುಂಜಿ ಅಸಹಾಯಕ ಹಾಗೂ ಸೇಡು ಸಾಧಿಸುವ ಕ್ರೂರ ಹೆಣ್ಣು ಪಾತ್ರಗಳಾಚೆ, ಯಾವ ಸಹಾಯವೂ ಇಲ್ಲದೆ, ಛಲದಿಂದ ಓದಿ ಸಾಧಿಸಿದ ಹೆಣ್ಣು ಮಗಳು, ಬಡತನದ ನಡುವೆಯೂ ಮಕ್ಕಳನ್ನು ಉನ್ನತ ಗುರಿಯೆಡೆಗೆ ಸಾಗಿಸಿದ ವಿಜಯಶಾಲಿಗಳು, ಛಲದ ದಾಪುಗಾಲಲ್ಲಿ ಅಧಿಕಾರದ ದೊಡ್ಡ ಹುದ್ದೆಗಳನ್ನು ದಕ್ಕಿಸಿಕೊಂಡ ಪ್ರತಿಭೆಗಳಾಗಲಿ ಪಾತ್ರಗಳಾಗುವುದಿಲ್ಲ. ಬದುಕಿನಲ್ಲಿ ಎಲ್ಲ ಅನನುಕೂಲತೆಗಳ ನಡುವೆಯೂ ಗೆದ್ದ ಅದರ್ಶ ವ್ಯಕ್ತಿಗಳು ಕಥೆಯ ಪಾತ್ರಗಳಾಗುವುದಿಲ್ಲ. ಮನುಷ್ಯರನ್ನು ಮನೋರೋಗಿಗಳನ್ನಾಗಿಸಬಹುದಾದ, ಮನೆ-ಮನಸುಗಳನ್ನು ಒಡೆಯುವ, ಕೆಡಿಸುವ ಇಂತಹ ಮನರಂಜನೆಯ ಮಾಯಾಜಾಲಕ್ಕೆ ಕೊನೆ ಹಾಡಿ, ಸಾಂಸ್ಕೃತಿಕ ಆಕ್ರಮಣವನ್ನು ತಡೆಯಬೇಕಿದೆ. ಇದು ಪ್ರಜ್ಞಾವಂತ ಸಮಾಜದ ಕರ್ತವ್ಯವೂ ಹೌದು.
(ಲೇಖಕರು ಕರ್ನಾಟಕ ಕೇಂದ್ರೀಯ ವಿವಿ ಸಹಾಯಕ ಪ್ರಾಧ್ಯಾಪಕ, ವಾಗ್ದೇವಿ ಪ್ರಶಸ್ತಿ ಪುರಸ್ಕೃತರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top