ರಾಜಧಾನಿಗೆ ಅಷ್ಟ ದಿಗ್ಬಂಧನ

– ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ 8 ವಲಯ ಸ್ಥಾಪನೆ ಉಸ್ತುವಾರಿಗೆ 8 ಸಚಿವರು, 8 ಐಎಎಸ್ ಅಧಿಕಾರಿಗಳ ನೇಮಕ.

ವಿಕ ಸುದ್ದಿಲೋಕ ಬೆಂಗಳೂರು.
ರಾಜಧಾನಿ ಬೆಂಗಳೂರು ಸೇರಿ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀವ್ರ ಕಳವಳ ವ್ಯಕ್ತವಾಗಿದೆ. ಈ ಸಂಬಂಧ ಸುದೀರ್ಘ ಚರ್ಚೆ ನಡೆದ ಬಳಿಕ, ಬೆಂಗಳೂರು ಕೊರೊನಾ ಸೋಂಕು ನಿರ್ವಹಣೆಗೆ 8 ವಲಯಗಳ ಉಸ್ತುವಾರಿಯನ್ನು ಸಚಿವರ ಹೆಗಲಿಗೆ ಹಾಕಲಾಗಿದೆ. ಇವರ ಜತೆಗೆ 8 ವಲಯಗಳಿಗೂ 8 ಐಎಎಸ್ ಅಧಿಕಾರಿಗಳನ್ನು ಸಂಯೋಜಕರನ್ನಾಗಿ ನೇಮಿಸಲಾಗಿದೆ.
ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಪ್ರಮಾಣ ಹೆಚ್ಚಳ, ಲಭ್ಯವಿರುವ ವೈದ್ಯಕೀಯ ಸೌಲಭ್ಯ, ಆರೋಗ್ಯ ಸಿಬ್ಬಂದಿ, ಆರೈಕೆ ಕೇಂದ್ರ ಇತ್ಯಾದಿ ಮೂಲ ಸೌಲಭ್ಯ ಹಾಗೂ ಸಮಸ್ಯೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು. ಸೋಂಕು ಮತ್ತಷ್ಟು ವ್ಯಾಪಕವಾಗಿ ಹರಡದಂತೆ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಲಯವಾರು ಉಸ್ತುವಾರಿ ಸಚಿವರು ಹಾಗೂ ಸಂಯೋಜಕರು ಸಭೆ ನಡೆಸಿ 3 ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಯಿತು. ವರದಿ ಬಂದ ಬಳಿಕ ಏನೇನು ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂಬುದನ್ನು ಸರಕಾರ ತೀರ್ಮಾನಿಸಲಿದೆ. ಸಚಿವರ ಮಧ್ಯೆ ಹೊಂದಾಣಿಕೆ ಕೊರತೆ ಇರುವ ಬಗ್ಗೆ ಪರೋಕ್ಷ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ 7 ಸಚಿವರು ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಅವರನ್ನು 8 ವಲಯಕ್ಕೆ ಉಸ್ತುವಾರಿಯಾಗಿ ನೇಮಿಸಲಾಗಿದೆ.
ಸಂಪುಟ ಸಭೆ ಬಳಿಕ ಬೆಂಗಳೂರಿನ ಸಚಿವರ ಜತೆಗೆ ಸಿಎಂ ಯಡಿಯೂರಪ್ಪ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ. ಕೊರೊನಾ ಸೋಂಕು ನಿಯಂತ್ರಣ ಮಾಡದೇ ಇದ್ದರೆ ವಿಶ್ವಮಟ್ಟದಲ್ಲಿಬೆಂಗಳೂರು ತಲೆತಗ್ಗಿಸುವ ಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಪರಿಸ್ಥಿತಿ ನಿರ್ವಹಣೆ ಮಾಡುವಂತೆ ಸಚಿವರಿಗೆ ಕಿವಿಮಾತು ಹೇಳಿದ್ದಾರೆ. ಇದರ ಬೆನ್ನಲ್ಲೇ ಬೆಂಗಳೂರಿನ ಎಂಟು ವಲಯಕ್ಕೆ ಹಿರಿಯ ಐಎಎಸ್ ಅಧಿಕಾರಿಗಳನ್ನು ಸಂಯೋಜಕರನ್ನಾಗಿ ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಇಂದು ಸಭೆ ಇಲ್ಲ: ಸಚಿವರು ಹಾಗೂ ಅಧಿಕಾರಿಗಳಿಗೆ ವಲಯವಾರು ಉಸ್ತುವಾರಿ ಹಂಚಿಕೆ ಮಾಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಅರಮನೆ ಮೈದಾನದಲ್ಲಿ ಕರೆಯಲಾಗಿದ್ದ ಬೆಂಗಳೂರಿನ ಶಾಸಕರು, ಸಚಿವರು, ಸಂಸದರು ಹಾಗೂ ಬಿಬಿಎಂಪಿ ಸದಸ್ಯರ ಸಭೆಯನ್ನು ಮುಂದೂಡಲಾಗಿದೆ. ಕೊರೊನಾ ನಿರ್ವಹಣೆ ಕುರಿತ ಕ್ರಮಗಳ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿತ್ತು. ಆದರೆ ಉಸ್ತುವಾರಿಗಳ ಕಾರ್ಯನಿರ್ವಹಣೆ ನೋಡಿಕೊಂಡು ಮುಂದೆ ಸಭೆ ನಡೆಸುವ ಸಾಧ್ಯತೆ ಇದೆ.

ಲಾಕ್‌ಡೌನ್‌ ಬೇಡಿಕೆ ಇಲ್ಲ
ಸಂಪುಟ ಸಭೆಯಲ್ಲಿ ಯಾರೊಬ್ಬರೂ ಲಾಕ್‌ಡೌನ್‌ ಜಾರಿಗೆ ಆಗ್ರಹಿಸಿಲ್ಲ. ಪ್ರತಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದ್ದು, ಜಿಲ್ಲಾಹಾಗೂ ತಾಲೂಕು ಆಸ್ಪತ್ರೆಗಳ ಸಾಮರ್ಥ್ಯ ಹೆಚ್ಚಳಕ್ಕೆ ಆಗ್ರಹಿಸಲಾಗಿದೆ.

ಯಾರಿಗೆ ಯಾವ ವಲಯ?
ಪೂರ್ವ ವಲಯ: ಡಾ. ಅಶ್ವತ್ಥನಾರಾಯಣ, ತುಷಾರ್ ಗಿರಿನಾಥ್
ದಕ್ಷಿಣ ವಲಯ: ಆರ್.ಅಶೋಕ, ಮನೀಷ್ ಮೌದ್ಗೀಲ್
ಪಶ್ಚಿಮ ವಲಯ: ವಿ.ಸೋಮಣ್ಣ , ರಾಜೇಂದ್ರ ಕುಮಾರ್ ಕಠಾರಿಯಾ
ಮಹದೇವಪುರ ವಲಯ: ಬೈರತಿ ಬಸವರಾಜ್, ಡಾ.ಎನ್.ಮಂಜುಳಾ
ಯಲಹಂಕ ವಲಯ: ಎಸ್.ಆರ್.ವಿಶ್ವನಾಥ, ನವೀನ್‌ರಾಜ್‌ ಸಿಂಗ್
ಆರ್ ಆರ್ ನಗರ ವಲಯ: ಎಸ್.ಟಿ.ಸೋಮಶೇಖರ್, ಡಾ.ಆರ್.ವಿಶಾಲ್
ದಾಸರಹಳ್ಳಿ ವಲಯ: ಗೋಪಾಲಯ್ಯ, ಡಾ. ಪಿ.ಸಿ.ಜಾಫರ್
ಬೊಮ್ಮನಹಳ್ಳಿ ವಲಯ: ಸುರೇಶ್ ಕುಮಾರ್, ಕ್ಯಾ. ಪಿ. ಮಣಿವಣ್ಣನ್

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top