ದುರಂತಗಳ ಸರಮಾಲೆಯಲ್ಲಿ ಆ ಎರಡು ರತ್ನಗಳು?

ಭಾರತ ವಿಜ್ಞಾನದಲ್ಲಿ ಮಹೋನ್ನತ ಎತ್ತರಕ್ಕೆ ಏರಬೇಕೆಂಬ ಕನಸು ಕಂಡಿದ್ದ ವಿಜ್ಞಾನಿ ವಿಕ್ರಂ ಸಾರಾಭಾಯ್ ಏಕಾಏಕಿ ಹೊರಟು ಹೋಗಲು ಕಾರಣ ಏನು? ದೇಶದ ಏಕತೆ ಅಖಂಡತೆಗಾಗಿ ಬಡಿದಾಡಿ ಪ್ರಾಣಾರ್ಪಣೆ ಮಾಡಿದ ಶ್ಯಾಮಪ್ರಸಾದ್ ಮುಖರ್ಜಿ ಸಾವಿನ ತನಿಖೆಯಾಗುವುದಿಲ್ಲ ಯಾಕೆ?

shyama_prasad_mukherjee_image_title_rbc31

Scientist Vikram Sarabhai

 

ಮೊನ್ನೆ ಮೊನ್ನೆಯಷ್ಟೇ ನಿಗೂಢವಾಗಿ ಕಣ್ಮರೆಯಾದ ಮಲೇಷ್ಯಾ ವಿಮಾನಕ್ಕಾಗಿ ಹುಡುಕಾಟ ನಡೆಸಲು ಅಮೆರಿಕವೂ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳು ನಾಮುಂದು ತಾಮುಂದು ಎನ್ನುತ್ತ ಬಂದದ್ದು ಗೊತ್ತಲ್ಲವೇ? ಕೊನೆಗೆ ಇದೆಲ್ಲ ರಗಳೆಯೇ ಬೇಡ ಅಂತ ಮಲೇಷ್ಯಾ ಸರ್ಕಾರವೇ ಆ ವಿಚಾರದಲ್ಲಿ ಒಂದು ಪೂರ್ಣವಿರಾಮ ಹಾಕಿತು. ವಿಮಾನ ಕಣ್ಮರೆಯ ಹಿಂದಿನ ವೃತ್ತಾಂತಗಳೆಲ್ಲ ಗೊತ್ತಾದ ನಂತರವೇ ಮಲೇಷ್ಯಾ ಸರ್ಕಾರ ಹಾಗೊಂದು ಗಟ್ಟಿ ನಿರ್ಧಾರಕ್ಕೆ ಬರಲು ಸಾಧ್ಯ. ಮುಂದೆ ಯಾವತ್ತೋ ಒಂದು ದಿನ ಸತ್ಯ ಹೊರಬಂದೀತು, ಇರಲಿ. ಆದರೆ, 1966ರಲ್ಲಿ ಮುಂಬೈನಿಂದ ಪ್ಯಾರಿಸ್‍ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ನಾಪತ್ತೆಯಾದಾಗ ಅಮೆರಿಕದ ಮಾತು ಹೇಗೂ ಇರಲಿ, ಭಾರತದ ಸರ್ಕಾರ ಕೂಡ ಕನಿಷ್ಠ ಹುಡುಕಾಟ ನಡೆಸುವ ಅಥವಾ ತನಿಖೆಗೆ ಆದೇಶಿಸುವ ಉಮೇದು ತೋರಲಿಲ್ಲವಲ್ಲ ಯಾಕೆ? ಹಾಗಿದ್ದರೆ ಆ ವಿಮಾನ ಅಪಘಾತಕ್ಕೆ ಪ್ರಾಮುಖ್ಯತೆ ಕಡಿಮೆ ಇತ್ತೇನು? ಭಾರತದ ಅಣ್ವಸ್ತ್ರ ಕಾರ್ಯಕ್ರಮದ ಜನಕ ಡಾ. ಹೋಮಿ ಭಾಭಾ ಅವರು ಪ್ರಯಾಣಿಸುತ್ತಿದ್ದುದೇ ಆ ವಿಮಾನ ಕಣ್ಮರೆಯಾಗಲು ಮುಖ್ಯ ಕಾರಣ ಎಂಬುದು ಇಂದಿಗೂ ಬಲವಾಗಿ ನಂಬಿರುವ ತರ್ಕ. ವಿಚಿತ್ರ ನೋಡಿ, 1966ರ ಜನೆವರಿ 11ರಂದು ತಾಷ್ಕೆಂಟ್‍ನಲ್ಲಿ ಆಗಿನ ಪ್ರಧಾನಿ ಲಾಲಬಹಾದ್ದೂರ್ ಶಾಸ್ತ್ರಿ ಅನುಮಾನಾಸ್ಪದವಾಗಿ ಸಾವಿಗೀಡಾದರು. ಮುಂದೆ ಎರಡು ವಾರದ ಅಂತರದಲ್ಲಿ, ಅಂದರೆ ಜನೆವರಿ 24ರಂದು ಹೋಮಿ ಭಾಭಾ ಪ್ರಯಾಣಿಸುತ್ತಿದ್ದ ವಿಮಾನ ನಿಗೂಢವಾಗಿ ಕಣ್ಮರೆ ಆಯಿತು. ಆದರೆ ಆ ಎರಡೂ ದುರಂತ ಘಟನೆಗಳ ಕುರಿತು ನಂತರ ಅಧಿಕಾರಕ್ಕೆ ಬಂದ ಯಾವ ಸರ್ಕಾರವೂ ತಲೆ ಕೆಡಿಸಿಕೊಳ್ಳುವುದೇ ಇಲ್ಲ.

ವಿಮಾನ ಅಪಘಾತದ ಕಾರಣ ಹುಡುಕುವ ಉಸಾಬರಿಯನ್ನು ಸರ್ಕಾರ ಬಿಟ್ಟರೆ ಏನಾಯಿತು, ಫ್ರೆಂಚ್ ವೈಮಾನಿಕ ಸಾಹಸಿ ಡೇನಿಯಲ್ ರೋಶೆ ವಿಮಾನ ಅಪಘಾತದ ಮೂಲ ಹುಡುಕುವ ಪ್ರಯತ್ನಕ್ಕೆ ಕೈಹಾಕುತ್ತಾರೆ. ಸುಮಾರು ಐದು ವರ್ಷಗಳ ಕಾಲ ಸತತ ಹಡುಕಾಟ ನಡೆಸಿ ಆಲ್ಪ್ಸ್ ಪರ್ವತಶ್ರೇಣಿಯ ತುತ್ತ ತುದಿಯಲ್ಲಿ ಎರಡು ವಿಮಾನಗಳ ಅವಶೇಷಗಳನ್ನು ಹೆಕ್ಕಿ ತೆಗೆಯುತ್ತಾರೆ. ವಿಮಾನದ ಬ್ಲ್ಯಾಕ್‍ಬಾಕ್ಸ್, ಕ್ಯಾಮರಾ, ಆಭರಣ ಇತ್ಯಾದಿಗಳೆಲ್ಲ ಪರ್ವತ ಶಿಖರದ ಆಳದಲ್ಲಿ ಪತ್ತೆಯಾಗುತ್ತವೆ. ಭಾಭಾ ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಇಟಲಿಯ ಫೈಟರ್ ಜೆಟ್ ಡಿಕ್ಕಿ ಹೊಡೆದದ್ದೇ ಅವಘಡಕ್ಕೆ ಕಾರಣ ಎಂಬ ತರ್ಕವನ್ನು ರೋಶೆ ಮುಂದಿಡುತ್ತಾರೆ. ತಾನು ನಡೆಸಿದ ಶೋಧದ ಕುರಿತು ಆತ ಒಂದು ಡಿವಿಡಿ ಮಾಡಿದ್ದಾನೆ. ಶೋಧದ ವೇಳೆ ಸಿಕ್ಕಿರುವ ಸುಮಾರು 80 ಕೆ.ಜಿ.ಯಷ್ಟು ಅವಶೇಷ, ದಾಖಲೆ, ಪುರಾವೆಗಳನ್ನೆಲ್ಲ ಈಗಲೂ ಭಾರತ ಸರ್ಕಾರಕ್ಕೆ ಕೊಡಲು ತಯಾರು, ಅದರ ಶಿಪ್‍ಮೆಂಟ್ ಚಾರ್ಜ್ ಕೊಟ್ಟರೆ ಸಾಕು ಅಂತ ರೋಶೆ ಬಹಿರಂಗ ಆಹ್ವಾನ ನೀಡಿದ್ದಾನೆ. ಆದರೆ ಆ ಬಗ್ಗೆ ಯೋಚನೆ ಮಾಡುವುದಕ್ಕೂ ನಮ್ಮ ಸರ್ಕಾರಕ್ಕೆ ಆಸಕ್ತಿ ಮತ್ತು ಪುರುಸೊತ್ತು ಎರಡೂ ಇಲ್ಲವಲ್ಲ…

ವಿಕ್ರಂ ಸಾರಾಭಾಯ್! ಭಾರತದ ಹೆಮ್ಮೆಯ ಬಾಹ್ಯಾಕಾಶ ವಿಜ್ಞಾನಿ. ಕೈಗಾರಿಕಾ ಕುಟುಂಬದಿಂದ ಬಂದ ಅವರು, ವಿಜ್ಞಾನ ರಂಗಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಹೋಮಿ ಭಾಭಾರ ನಂತರ ಅವರು ಅಣುಶಕ್ತಿ ಆಯೋಗದ ಅಧ್ಯಕ್ಷರೂ ಆಗಿದ್ದರು. 1970, ಡಿಸೆಂಬರ್ 30; ಕೇರಳದ ತಿರುವನಂತಪುರದಲ್ಲಿರುವ ರಾಕೆಟ್ ಲಾಂಚಿಂಗ್ ಸ್ಟೇಷನ್‍ಗೆ ಸೇವೆ ಒದಗಿಸುವ ಥುಂಬಾ ರೈಲು ನಿಲ್ದಾಣದ ಅಡಿಗಲ್ಲು ನೆರವೇರಿಸಲು ಸಾರಾಭಾಯ್ ಹೋಗಿರುತ್ತಾರೆ. ಕಾರ್ಯಕ್ರಮದ ನಂತರ ರಾತ್ರಿ ತಮಗೆ ಅತ್ಯಂತ ಪ್ರಿಯವಾಗಿದ್ದ ಕೋವಲಮ್ ಬೀಚ್‍ನ ಹಾಲ್ಕಿಯಮ್ ಕ್ಯಾಸಲ್ ರೆಸಾರ್ಟ್‍ನಲ್ಲಿ ಸಾರಾಭಾಯ್ ತಂಗುತ್ತಾರೆ. ಅದೇ ಅವರ ಪಾಲಿಗೆ ಕರಾಳ ರಾತ್ರಿಯಾಯಿತು. ಸಾಗರದ ಅಲೆಗಳನ್ನು ನೋಡುತ್ತ ಐಷಾರಾಮಿ ರೆಸಾರ್ಟ್‍ನ ಕೋಣೆಯಲ್ಲಿ ರಾತ್ರಿ ನಿದ್ರೆಗೆ ಜಾರಿದ ಸಾರಾಭಾಯ್ ಬೆಳಗ್ಗೆ ಜೀವಂತವಾಗಿ ಹೊರಬರಲೇ ಇಲ್ಲ. ಆ ವೇಳೆ ಸಾರಾಭಾಯ್ ಮಗಳು ಮಲ್ಲಿಕಾ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ವಿಕ್ರಂ ಸಾರಾಭಾಯ್ ಪೋಸ್ಟ್ ಮಾರ್ಟಂ ಮಾಡುವುದಕ್ಕೂ ಆಕೆ ಪಟ್ಟುಹಿಡಿಯಲಿಲ್ಲ ಅಂತ ಹೇಳಲಾಗುತ್ತದೆ. ಒಬ್ಬ ಶ್ರೇಷ್ಠ ವಿಜ್ಞಾನಿ ನಿಗೂಢವಾಗಿ ಸಾವಿಗೀಡಾದರೂ ನಮ್ಮ ಸರ್ಕಾರ ಒಂದು ಸೂಕ್ತ ತನಿಖೆಗೆ ಆದೇಶ ಮಾಡುವುದಿಲ್ಲ. ಯಾಕೆ ಇಂಥ ಅಸಡ್ಡೆ, ಉದಾಸೀನ? ವಿಕ್ರಂ ಸಾರಾಭಾಯ್ ಸಾವಿಗೀಡಾಗುವ ಕೆಲ ದಿನದ ಹಿಂದೆ ತಮ್ಮ ಆಪ್ತರ ಬಳಿ, “ನನ್ನ ಮೇಲೆ ಅಮೆರಿಕ ಮತ್ತು ರಷ್ಯಾ ಸರ್ಕಾರಗಳು ತೀವ್ರ ನಿಗಾ ಇಟ್ಟಿವೆ” ಅಂತ ಹೇಳಿಕೊಂಡಿದ್ದರಂತೆ. ಈ ವಿಷಯವನ್ನು ಸಾರಾಭಾಯ್‍ಗೆ ಅತ್ಯಂತ ಆಪ್ತರಾಗಿದ್ದ ಸ್ಕಾಲರ್ ಕಮಲಾ ಚೌಧುರಿ ಕೆಲ ಸಮಯದ ನಂತರ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಉಹೂಂ…ನಮ್ಮ ಸರ್ಕಾರಗಳು ಅದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವ ಗೋಜಿಗೇ ಹೋಗುವುದಿಲ್ಲ.

1953, ಜೂನ್ 23; ನೆಹರು ಅನುಸರಿಸಿದ `ಕಾಶ್ಮೀರ ನೀತಿ’ಯ ವಿರುದ್ಧ ಉಪವಾಸ ಸತ್ಯಾಗ್ರಹ ಕುಳಿತು ಬಂಧನಕ್ಕೊಳಗಾಗಿದ್ದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅನುಮಾನಾಸ್ಪದವಾಗಿ ಸಾವಿಗೀಡಾಗುತ್ತಾರೆ. ಶ್ಯಾಮಪ್ರಸಾದ್ ಮುಖರ್ಜಿಗೆ ಜೀ ಹುಜೂರ್ ಸಂಸ್ಕøತಿ ಗೊತ್ತೇ ಇರಲಿಲ್ಲ. ಏನಿದ್ದರೂ ನೇರಾನೇರ. ಅವರಿಗೆ ಎಲ್ಲದರ ಕುರಿತೂ ಸ್ವಂತ ಆಲೋಚನೆ ಇತ್ತು. ದೇಶದ ಹಿನ್ನೆಲೆಯ ಆಳ ಅಗಲವನ್ನು ಚೆನ್ನಾಗಿ ತಿಳಿದುಕೊಂಡಿದ್ದರು. ದೇಶದ ಭವಿಷ್ಯದ ಬಗ್ಗೆ ಅವರದ್ದೇ ಆದ ಸ್ಪಷ್ಟ ಕಲ್ಪನೆ ಇತ್ತು. ಆತ್ಮಸಾಕ್ಷಿಗೆ ವಿರುದ್ಧವಾಗಿ ಯಾರೊಂದಿಗೂ ಯಾವ ವಿಚಾರದಲ್ಲೂ ಅವರು ರಾಜಿ ಮಾಡಿಕೊಳ್ಳುವವರಾಗಿರಲಿಲ್ಲ. ಅವರು ರಾಜಕೀಯದಲ್ಲಿ ಮೊದಲ ಹೆಜ್ಜೆ ಇರಿಸಿದ್ದು ಬಂಗಾಳದ ವಿಧಾನಪರಿಷತ್ ಸದಸ್ಯರಾಗಿ. ಒಂದು ವರ್ಷ ಬಂಗಾಳದ ಪ್ರೋಗ್ರೆಸ್ಸಿವ್ ಒಕ್ಕೂಟ ಸರ್ಕಾರದಲ್ಲಿ ಹಣಕಾಸು ಸಚಿವರೂ ಆದರು. ತಮ್ಮ ವಿಚಾರಕ್ಕೆ ಒಗ್ಗದ ಕೆಲಸಕ್ಕೆ ಆಗಿನ ಸರ್ಕಾರ ಮುಂದಾದಾಗ ಮುಲಾಜಿಲ್ಲದೆ ರಾಜೀನಾಮೆ ಬಿಸಾಕಿ ಹೊರಬಂದರು. ಮುಖರ್ಜಿಯವರ ಶಕ್ತಿ ಮತ್ತು ಸಾಮಥ್ರ್ಯವನ್ನು ಗುರುತಿಸಿದ್ದ ನೆಹರು 1950ರಲ್ಲಿ ಮಧ್ಯಂತರ ಸರ್ಕಾರದಲ್ಲಿ ಸೇರುವಂತೆ ಅವರಿಗೆ ಆಹ್ವಾನ ನೀಡಿದರು. ಅದಕ್ಕೆ ಒಪ್ಪಿದ ಮುಖರ್ಜಿ ಕೈಗಾರಿಕೆ ಮತ್ತು ನಾಗರಿಕ ಸರಬರಾಜು ಮಂತ್ರಿಯಾದರು. ಅದೇ ನೆಹರು ದೆಹಲಿಗೆ ಬರಲು ಪಾಕಿಸ್ತಾನ ಪ್ರಧಾನಿ ಲಿಯಾಖತ್ ಅಲಿಗೆ ಆಹ್ವಾನ ನೀಡಿ `ದೆಹಲಿ ಒಪ್ಪಂದ’ಕ್ಕೆ ಮುಂದಾದಾಗ, ಮುಖರ್ಜಿ ಒಂದು ಕ್ಷಣವೂ ತಡಮಾಡದೆ ಮಂತ್ರಿ ಪದವಿಗೆ ರಾಜೀನಾಮೆ ನೀಡಿ ನೆಹರು ನಡೆಯನ್ನು ಪ್ರತಿಭಟಿಸಿದರು. ಲಿಯಾಖತ್ ಅಲಿ ಜತೆ ಮಾಡಿಕೊಂಡ ಒಪ್ಪಂದದ ಪ್ರಕಾರ ನೆಹರು `ಅಲ್ಪಸಂಖ್ಯಾತ ಆಯೋಗ’ ರಚನೆ ಮಾಡಿದರು. ಆಗ ಮುಖರ್ಜಿ, “ಪೂರ್ವ ಪಾಕಿಸ್ತಾನದಲ್ಲಿ ಹಿಂದುಗಳ ನರಕಯಾತನೆ, ಬರ್ಬರತೆಯನ್ನೊಮ್ಮೆ ಕಣ್ಬಿಟ್ಟು ನೋಡಿ, ನಂತರ ದೆಹಲಿ ಪ್ಯಾಕ್ಟ್‍ಗೆ ಸಹಿ ಮಾಡಿ” ಅಂತ ನೆಹರುಗೆ ಮುಖದ ಮೇಲೆ ಹೊಡೆದಂತೆ ಹೇಳಿಬಿಟ್ಟರು. ಮುಖರ್ಜಿಯ ಕಟೂಕ್ತಿ ಕೇಳಿ ನೆಹರು ಒಳಗೊಳಗೇ ಕೊತಕೊತ. ಮುಖರ್ಜಿ ಮಾತನ್ನು ಕೇಳಿಸಿಕೊಳ್ಳುವುದು ಅತ್ಲಾಗಿರಲಿ, ನೆಹರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಶೇಖ್ ಅಬ್ದುಲ್ಲಾರ ತ್ರಿರಾಷ್ಟ್ರ ಸಿದ್ಧಾಂತಕ್ಕೆ ಒಪ್ಪಿಗೆಯ ಮುದ್ರೆಯೊತ್ತುತ್ತಾರೆ. ಆರ್ಟಿಕಲ್ 371 ಜಾರಿಯಾಗುತ್ತದೆ. ಕಾಶ್ಮೀರಕ್ಕೆ ವಿಶೇಷ ರಾಷ್ಟ್ರದ ಸ್ಥಾನಮಾನ ದಕ್ಕುತ್ತದೆ. ರಾಷ್ಟ್ರದೊಳಗೊಂದು ರಾಷ್ಟ್ರ. ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ಪ್ರಧಾನಿ, ಪ್ರತ್ಯೇಕ ಧ್ವಜ. ಭಾರತದ ರಾಷ್ಟ್ರಪತಿ ಕಾಶ್ಮೀರಕ್ಕೆ ಕಾಲಿಡುವುದಿದ್ದರೂ ಕಾಶ್ಮೀರ ಸರ್ಕಾರದ ಅನುಮತಿ ಪಡೆಯಬೇಕು. ಕಾಶ್ಮೀರಿಗಳಿಗೆ ಪ್ರತ್ಯೇಕ ಐಡೆಂಟಿಟಿ ಕಾರ್ಡು. ನೆಹರು ಅನುಸರಿಸಿದ ಮುಸ್ಲಿಂ ಓಲೈಕೆ ನೀತಿಯನ್ನು ಶ್ಯಾಮಪ್ರಸಾದ್ ಮುಖರ್ಜಿ ಸುತಾರಾಂ ಒಪ್ಪುವುದಿಲ್ಲ. “ಏಕ್ ದೇಶ್ ಮೇ ದೋ ವಿಧಾನ್, ದೋ ಪ್ರಧಾನ್, ದೋ ನಿಶಾನ್ ನಹಿ ಚಲೇಂಗೆ” ಎಂದು ಘೋಷಿಸಿ ನೇರವಾಗಿ ಕಾಶ್ಮೀರದ ಯುದ್ಧಕಣಕ್ಕೆ ಧುಮುಕುತ್ತಾರೆ. ಮುಖರ್ಜಿ ಆಕ್ರೋಶದ ಮೊದಲ ಪರಿಣಾಮ ಅಂದರೆ ಕಾಶ್ಮೀರದಲ್ಲಿ ಐಡೆಂಟಿಟಿ ಕಾರ್ಡ್ ವ್ಯವಸ್ಥೆ ರದ್ದಾಗುತ್ತದೆ. ಹೋರಾಟದ ಫಲವಾಗಿ ಆದ ಪರಿಣಾಮ ಅಂದೊಂದೇ ಅನ್ನಿ. ನೆಹರು ಪ್ರಮಾದ ಕಂಡು ಬುಸುಗುಟ್ಟಿದ ಮುಖರ್ಜಿ ಆರ್ಟಿಕಲ್ 371 ರದ್ದಾಗಬೇಕು, ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ ಆಗಲೇಬೇಕೆಂದು ಹಠ ತೊಡುತ್ತಾರೆ. ಕಾಶ್ಮೀರಿ ಐಡೆಂಟಿಟಿ ಕಾರ್ಡ್ ಹೊಂದಿದವರು ಮಾತ್ರ ಕಾಶ್ಮೀರ ಪ್ರವೇಶಿಸಬೇಕೆಂಬ ಕಾಯ್ದೆಯನ್ನು ಧಿಕ್ಕರಿಸಿ ಕಾಶ್ಮೀರ ಗಡಿ ಪ್ರವೇಶಿಸುತ್ತಾರೆ. ಅದು ನಡೆದದ್ದು 1953ರ ಮೇ 11ರಂದು. ಕಾಶ್ಮೀರದ ಲಖನ್‍ಪುರಕ್ಕೆ ಬರುತ್ತಿದ್ದಂತೆ ಮುಖರ್ಜಿ ಬಂಧನವಾಗುತ್ತದೆ. ಅರೆಸ್ಟ್ ಆದೇಶದ ವಿರುದ್ಧ ಮುಖರ್ಜಿ ಉಪವಾಸ ಸತ್ಯಾಗ್ರಹ ಶುರುಮಾಡಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತಾರೆ. ಲಖನ್‍ಪುರದ ಭೂತಬಂಗಲೆಯೊಂದರಲ್ಲಿ ಕಾಶ್ಮೀರ ಸರ್ಕಾರ ಮುಖರ್ಜಿಯವರನ್ನು ಬಂಧಿಸಿಡುತ್ತದೆ. ಹಾಗೆ ಬಂಧನದಲ್ಲಿರುವಾಗಲೇ ಜೂನ್ 23ರಂದು ಶ್ಯಾಮಪ್ರಸಾದ್ ಮುಖರ್ಜಿ ಅನುಮಾನಾಸ್ಪದವಾಗಿ ಸಾವಿಗೀಡಾಗುತ್ತಾರೆ.

ಭಾರತದ ಏಕತೆ, ರಾಷ್ಟ್ರೀಯತೆ, ಆರ್ಥಿಕತೆ, ಕೈಗಾರಿಕೀಕರಣ, ಸಾಮಾಜಿಕ ನ್ಯಾಯ ಎಲ್ಲದರ ಬಗ್ಗೆ ಸ್ಪಷ್ಟ ನಿಲುವು, ದೂರದೃಷ್ಟಿ ಹೊಂದಿದ್ದ ಮತ್ತೊಬ್ಬ ಮಹಾನ್ ನಾಯಕ ಅಲ್ಲಿಗೆ ಅವಸಾನ ಹೊಂದುತ್ತಾನೆ. ಮುಖರ್ಜಿ ತಾಯಿ ಜೋಗ್‍ಮಯದೇವಿ ಪ್ರಧಾನಿ ನೆಹರುಗೆ ಪತ್ರ ಬರೆದು ಮಗನ ಸಾವಿನ ಕುರಿತು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದರು. ಆಗ ನೆಹರು ಕೊಟ್ಟ ಉತ್ತರ ಏನು ಗೊತ್ತೇ? “ಮುಖರ್ಜಿ ಸಾವಿನ ಕುರಿತು ನಾನು ಹಲವರಿಂದ ಮಾಹಿತಿ ಪಡೆದಿದ್ದೇನೆ, ಸಾವಿನ ಹಿಂದೆ ರಾಜಕೀಯ ಪಿತೂರಿ ಇಲ್ಲವೇ ಇಲ್ಲ. ಹಾಗಾಗಿ ಮತ್ತೊಂದು ಬೇರೆ ತನಿಖೆ ಬೇಕಿಲ್ಲ” ಅಂತ ಕಡ್ಡಿಮುರಿದಂತೆ ಹೇಳಿಬಿಡುತ್ತಾರೆ ನೆಹರು. ಮುಖರ್ಜಿ ಸಾವಿನ ಬಗ್ಗೆ 1984ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದರು-“ಅದು ನೆಹರು ಕಾನ್ಸ್ ಪಿರಸಿ” ಅಂತ. ಕೇಳುವವರು ಯಾರು?

ಮುಖರ್ಜಿ ಎಂಥಾ ನಾಯಕ ಆಗಿದ್ದರು ಅನ್ನುವುದಕ್ಕೆ 1943ರಲ್ಲಿ ಅವರು ಆಡಿದ್ದ ಒಂದು ಮಾತಿನ ನಿದರ್ಶನ ಸಾಕು. ಆಗ ಅವರು ಹಿಂದು ಮಹಾಸಭಾದ ಅಧ್ಯಕ್ಷರಾಗಿದ್ದರು. “ಹಿಂದುಗಳಿಗೆ ಅಂತ ಪ್ರತ್ಯೇಕವಾಗಿ ಯಾವ ವಿಶೇಷ ಸವಲತ್ತೂ ಸರ್ಕಾರದಿಂದ ಬೇಕಿಲ್ಲ, ಇಡೀ ದೇಶ ಸುಧಾರಣೆ ಆದರೆ ಅದರಲ್ಲಿ ಹಿಂದುಗಳಿಗೂ ಪಾಲು ಸಿಗುತ್ತದೆ” ಅಂತ ಖಡಾಖಂಡಿತವಾಗಿ ಹೇಳಿದ್ದರು ಅವರು. ಇವತ್ತಾದರೂ ಯಾರಾದರೊಬ್ಬರು ಈ ಮಾತನ್ನು ಕೇಳಿಸಿಕೊಳ್ಳುತ್ತಾರಾ…

ಶ್ಯಾಮಪ್ರಸಾದ್ ಮುಖರ್ಜಿ ನಂತರ ಅಂಥದ್ದೇ ಮತ್ತೊಬ್ಬ ನಾಯಕ ಅಂತ ಇದ್ದರೆ ಅದು ಪಂಡಿತ ದೀನದಯಾಳ್ ಉಪಾಧ್ಯಾಯ. ಆದರೇನಾಯಿತು? ಅವರಿಗೆ ಬಂದೊದಗಿದ ಗತಿ ಏನು? ನಿಗೂಢ ಸಾವಿನ ಪರಂಪರೆಯ ಆಳ ಅಗಲ ಎಷ್ಟು? ಹಾಗಿದ್ದರೆ ಭಾರತದ ಅಂತಸ್ಸತ್ವ ಬತ್ತಿಸುವ ಹುನ್ನಾರದಲ್ಲಿ ಪಾಕಿಸ್ತಾನ, ಅಮೆರಿಕ, ಎಲ್‍ಟಿಟಿಇ, ಇಟಲಿ, ತಾಲಿಬಾನ್‍ಗಳು, ನಕ್ಸಲರು ಹೀಗೆ ಎಲ್ಲರೂ ಒಂದಾಗಿಬಿಟ್ಟಿದ್ದಾರಾ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top