ವೈದ್ಯರು ವಿವೇಚನೆ ಬಳಸಲಿ: ರೋಗಿಗಳ ಹಿತಚಿಂತನೆಯ ಆದ್ಯತೆ

ಕೊರೊನಾ ವೈರಸ್‌ ವಿರುದ್ಧದ ಯುದ್ಧದಲ್ಲಿ ವೈದ್ಯರೇ ಸೇನಾನಿಗಳು ಎಂಬುದು ರುಜುವಾತಾಗಿ ಹೋಗಿದೆ. ಕೋವಿಡ್‌ ಕಾಯಿಲೆಯ ಲಕ್ಷಣಗಳನ್ನು ಸಮರ್ಪಕವಾಗಿ ಗುರುತಿಸುವುದು, ಅಗತ್ಯ ಪ್ರತ್ಯೇಕ ನಿಗಾ ವ್ಯವಸ್ಥೆ ಮಾಡುವುದು, ರಾಷ್ಟ್ರೀಯ ವೈದ್ಯಕೀಯ ಸಂಸ್ಥೆ ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡುವುದು, ಸೋಂಕಿತರ ಜೊತೆ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಗುರುತಿಸಿ ಪರೀಕ್ಷೆಗೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ನೆರವಾಗುವುದು- ಇವೆಲ್ಲವನ್ನೂ ವೈದ್ಯಕೀಯ ಸೇವೆಯಲ್ಲಿರುವವರು ಮಾಡಬೇಕಿದೆ. ಕೋವಿಡ್‌ ಚಿಕಿತ್ಸೆಗಾಗಿ ಸರಕಾರ ಪ್ರತ್ಯೇಕ ಕೇಂದ್ರಗಳನ್ನು ತೆರೆದಿದ್ದರೂ ಇಂಥ ತುರ್ತು ಸಂದರ್ಭಗಳಲ್ಲಿ ಖಾಸಗಿ ವೈದ್ಯಕೀಯ ಸೇವೆಯ ಮೇಲೆ ಇರುವ ಭಾರ ಸಣ್ಣದೇನಲ್ಲ. ಖಾಸಗಿ ಆಸ್ಪತ್ರೆಗಳು, ವೈದ್ಯರು ಗಣನೀಯವಾದ ಸೇವೆಯನ್ನು ಸಲ್ಲಿಸುತ್ತಲೂ ಇದ್ದಾರೆ.
ಆದರೆ ಕೆಲವೆಡೆಗಳಿಂದ ಇದಕ್ಕೆ ವ್ಯತಿರಿಕ್ತವಾದ ವರದಿಗಳೂ ಬರುತ್ತಿವೆ. ಜಾಂಡೀಸ್‌ ಇದ್ದ ವ್ಯಕ್ತಿಗೆ ಕೊರೊನಾ ವೈರಸ್‌ ಸೋಂಕು ಇರಬಹುದು ಎಂಬ ಅನುಮಾನದಿಂದ, ಕೋವಿಡ್‌ ಪರೀಕ್ಷೆ ನೆಪದಲ್ಲಿ ಯಾವುದೇ ಚಿಕಿತ್ಸೆ ನೀಡದ ಪರಿಣಾಮ ಧಾರವಾಡದ ಯುವ ಎಂಜಿನಿಯರ್‌ ಮೃತಪಟ್ಟ ಘಟನೆ ಹುಬ್ಬಳ್ಳಿಯ ಒಂದು ಆಸ್ಪತ್ರೆಯಲ್ಲಿ ನಡೆದಿದೆ. ಇದು, ರೋಗಿಗಳ ಬದುಕು- ಸಾವು ವೈದ್ಯರ ಕೈಯಲ್ಲಿ ಇದೆ ಎಂಬ ಮಾತಿಗೆ ಪೂರಕ ಸಾಕ್ಷ್ಯ ನೀಡುವಂತೆ ಇದ್ದು, ವಿವೇಚನೆ ಬಳಸಿ ಚಿಕಿತ್ಸೆ ನೀಡಿದ್ದರೆ ಆತ ಉಳಿಯುತ್ತಿದ್ದ ಎಂದು ಭಾವಿಸಲು ಕಾರಣವಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಗಮನಿಸಬಹುದಾದ ಬೆಳವಣಿಗೆ ಎಂದರೆ, ಯಾವುದೇ ಸಾಮಾನ್ಯ ಕೆಮ್ಮು- ಶೀತ- ಜ್ವರದ ಪ್ರಕರಣವನ್ನೂ ಕೋವಿಡ್‌ ಇರಬಹುದು ಎಂದು ಶಂಕಿಸುವ ಅಪಾಯ. ಕೋವಿಡ್‌ ಮತ್ತು ಸಾಮಾನ್ಯ ಫ್ಲೂ ಜ್ವರದ ಲಕ್ಷಣಗಳು ಸ್ಪಷ್ಟವಾಗಿ ಪ್ರತ್ಯೇಕವಾಗಿವೆ. ವೈದ್ಯರಿಗಂತೂ ಇದರ ಸ್ಪಷ್ಟ ಪರಿಚಯ, ಪರಿಕಲ್ಪನೆ ಅಗತ್ಯ. ಕೋವಿಡ್‌ನ ಕಾರಣ ನೀಡಿ ಇನ್ನುಳಿದ ರೋಗಗಳಿಗೆ ಚಿಕಿತ್ಸೆ ನೀಡದೆ ಇರಲೂ ಇದು ನೆಪವಾಗಬಾರದು. ಈ ಬಗ್ಗೆ ಸರಕಾರ ಖಾಸಗಿ ಆಸ್ಪತ್ರೆಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕು.
ಇನ್ನೊಂದೆಡೆ ಸಚಿವ ಸುರೇಶ್‌ಕುಮಾರ್‌ ಅವರು, ಕೊರೊನಾ ಲಕ್ಷ ಣಗಳಿದ್ದವರನ್ನು ನಿಯೋಜಿತ ಆಸ್ಪತ್ರೆಗೆ ಕಳುಹಿಸದೆ ತಮ್ಮಲ್ಲೇ ಅನಗತ್ಯ ಚಿಕಿತ್ಸೆ ನೀಡಿ ನಿರ್ಲಕ್ಷ ್ಯವೆಸಗುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಅತ್ತ ಇನ್ನೊಬ್ಬ ಸಚಿವ ಆರ್‌.ಅಶೋಕ್‌ ಅವರು ಕೂಡ, ತುರ್ತು ಪರಿಸ್ಥಿತಿಯಲ್ಲೂ ನೆಪ ಹೇಳಿ ವೈದ್ಯಕೀಯ ಸೇವೆ ನೀಡದ ವೈದ್ಯರನ್ನು ವಿಪತ್ತು ನಿರ್ವಹಣೆ 2005ರ ಕಾಯಿದೆಯಡಿ ಶಿಕ್ಷೆಗೆ ಗುರಿ ಪಡಿಸಲಾಗುತ್ತದೆ ಎಂದು ಹೇಳಿದ್ದಾರೆ. ಇವೆಲ್ಲವೂ ಕಾಯಿದೆ- ಕಾನೂನು ಸಂಬಂಧಿಸಿದ ಮಾತುಗಳಾದವು. ಆದರೆ ವೈದ್ಯರ ಕರ್ತವ್ಯಕ್ಕೆ ಸಂಬಂಧಿಸಿದಂತೆ, ಅವರು ನಿರ್ಲಕ್ಷ್ಯ ಎಸಗಿದ್ದಾರೋ ಇಲ್ಲವೋ ಎಂಬುದನ್ನು ಗೊತ್ತುಪಡಿಸುವುದು ಸುಲಭವಲ್ಲ. ಎಲ್ಲ ವೈದ್ಯರೂ ತಮ್ಮ ಸೇವೆ ಆರಂಭಿಸುವ ಮುನ್ನ ವೃತ್ತಿಬದ್ಧತೆ, ಜನಹಿತದ ಶಪಥವನ್ನು ಮಾಡಿರುತ್ತಾರೆ. ಅದಕ್ಕನುಗುಣವಾಗಿ ನಡೆಯುವವರೇ ಹೆಚ್ಚು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ನಿರ್ಲಕ್ಷ್ಯ ತೋರುವ ಸರಕಾರಿ ವೈದ್ಯರ ಸಂಖ್ಯೆಯೂ ದೊಡ್ಡದಿದೆ. ಸರಕಾರಿ ಅಧಿಕಾರಶಾಹಿಯ ಕೈಯಲ್ಲಿ ಸಿಲುಕಿ ನಲುಗುವ ಅಪಾಯದಿಂದ ಪಾರಾಗಲು, ಕೋವಿಡ್‌ ನೆಪವೊಡ್ಡಿ ಶಂಕಿತ ರೋಗಿಗಳಿಂದ ಕಳಚಿಕೊಳ್ಳಬಯಸುವ ಖಾಸಗಿ ಆಸ್ಪತ್ರೆಗಳ ಸಂಖ್ಯೆಯೂ ಸಾಕಷ್ಟಿದೆ. ಇಂಥವರಿಗೆ ಹೇಳಬಹುದಾದ ಮಾತೆಂದರೆ, ಸರಕಾರದ ನೀತಿ ನಿಯಮಗಳ ಮಾತು ಹಾಗಿರಲಿ. ತಮ್ಮ ವೃತ್ತಿಗೆ ಪ್ರಾಮಾಣಿಕ ನೈತಿಕ ಬದ್ಧತೆ ತೋರಿಸುವುದೇ ವೈದ್ಯರ ಪ್ರಥಮ ಆದ್ಯತೆಯಾಗಿರಬೇಕು. ಮನುಕುಲದ ಭವಿಷ್ಯವನ್ನೇ ತಿದ್ದಿ ಬರೆಯಬಲ್ಲ ಅವಕಾಶ ಈಗ ವೈದ್ಯರ ಕೈಯಲ್ಲಿದೆ. ಅದನ್ನು ಅವರು ತ್ರಿಕರಣಪೂರ್ವಕವಾಗಿ ಮಾಡಿದರೆ, ಇತಿಹಾಸ ಅವರನ್ನು ಖಂಡಿತ ನೆನಪಿಟ್ಟುಕೊಳ್ಳುತ್ತದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top