ದುಷ್ಟ ಪ್ರವೃತ್ತಿಯ ಅನಾವರಣ – ದಿಲ್ಲಿಯ ಘಟನೆ ಮರುಕಳಿಸದಿರಲಿ

ಸಾಮಾಜಿಕ ಜಾಲತಾಣ ಇನ್ಸ್‌ಟಾಗ್ರಾಂನಲ್ಲಿ ರಹಸ್ಯ ಗ್ರೂಪ್ ರಚಿಸಿಕೊಂಡು ಸಹಪಾಠಿ ವಿದ್ಯಾರ್ಥಿನಿಯರನ್ನು ಗ್ಯಾಂಗ್ ರೇಪ್ ಮಾಡುವ ಬಗ್ಗೆ ಹೊಂಚು ಹಾಕುತ್ತಿದ್ದ ದಿಲ್ಲಿಯ ಪ್ರತಿಷ್ಠಿತ ವರ್ಗದ ವಿದ್ಯಾರ್ಥಿಗಳ ಬಳಗವೊಂದನ್ನು ದಿಲ್ಲಿ ಪೊಲೀಸರು ಭೇದಿಸಿದ್ದಾರೆ. ಇದರ ಅಡ್ಮಿನ್‌ನನ್ನು ಬಂಧಿಸಿದ್ದು, ಆತ ಸೇರಿದಂತೆ ಇತರ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. 18ರ ಹರೆಯದ ಈ ಅಡ್ಮಿನ್‌ನ್ನ ಗ್ರೂಪ್‌ನಲ್ಲಿ ಹಲವು ಅಪ್ರಾಪ್ತ ವಯಸ್ಕರೂ ಇದ್ದಾರೆ. ಈ ಪ್ರಕರಣವನ್ನು ಒಬ್ಬಾಕೆ ವಿದ್ಯಾರ್ಥಿನಿ ಬಯಲಿಗೆಳೆದಿದ್ದಳು. ಈ ವಿದ್ಯಾರ್ಥಿನಿಯ ಫೋಟೋವನ್ನೂ ತಿದ್ದಿ ನಗ್ನಚಿತ್ರಕ್ಕೆ ಜೋಡಿಸಿ ಈ ಗ್ರೂಪ್‌ನಲ್ಲಿ ಹಂಚಿಕೊಳ್ಳಲಾಗಿತ್ತು. ಈ ಗ್ರೂಪ್‌ನಲ್ಲಿ ಅಶ್ಲೀಲ ಫೋಟೋ, ವಿಡಿಯೋ, ಸಂದೇಶ ವಿನಿಮಯವಾಗುತ್ತಿತ್ತು. ಸಹಪಾಠಿ ವಿದ್ಯಾರ್ಥಿನಿಯರ ಸಾಮೂಹಿಕ ಅತ್ಯಾಚಾರ ಮಾಡುವ ಬಗ್ಗೆ, ಲೈಂಗಿಕ ಕಿರುಕುಳ ನೀಡುವ ಬಗ್ಗೆಯೂ ಚರ್ಚೆಯಾಗಿತ್ತು.
ಈ ಪ್ರಕರಣದ ಹಲವು ಆಯಾಮಗಳು, ಅದರಲ್ಲೂ ಮನೋವೈಜ್ಞಾನಿಕ ಆಯಾಮಗಳ ಬಗ್ಗೆ ಚರ್ಚಿಸಲು ಇದು ಸಕಾಲ. ಇಂಥ ಗ್ರೂಪ್‌ಗಳು ದಿಲ್ಲಿಯಲ್ಲಿ ಮಾತ್ರವೇ ಇದೆ ಎಂದು ನಾವು ಸುಮ್ಮನಾಗುವ ಕಾಲವಲ್ಲ ಇದು. ಯಾಕೆಂದರೆ ಅನೇಕ ಸಾಮೂಹಿಕ ಅತ್ಯಾಚಾರದ ಪ್ರಕರಣಗಳಲ್ಲಿ, ಅತ್ಯಾಚಾರಿಗಳು ಅಶ್ಲೀಲ ವಿಡಿಯೋಗಳಿಂದ ಪ್ರೇರಿತರಾಗಿದ್ದುದನ್ನು ದಾಖಲಿಸಲಾಗಿದೆ. ಗ್ಯಾಂಗ್ ರೇಪ್‌ಗಳಲ್ಲಿ ಅಪ್ರಾಪ್ತ ವಯಸ್ಕ ಹುಡುಗರೂ ಭಾಗವಹಿಸಿ, ಊಹಿಸಲಾಗದ ಕ್ರೌರ್ಯ ಮೆರೆದಿದ್ದಾರೆ. ಯಾವುದೇ ಕಾನೂನುಗಳು ಇಂಥ ಮನಸ್ಸುಗಳು ಅತ್ಯಾಚಾರದಿಂದ ವಿಮುಖವಾಗುವುದನ್ನು ತಡೆಯಲು ಅಸಮರ್ಥವಾಗಿವೆ. ಇಂಥ ಹೊತ್ತಿನಲ್ಲಿ ಬಯಲಾಗಿರುವ ಈ ಸುದ್ದಿ ಎಚ್ಚರಿಕೆಯ ಕರೆಗಂಟೆಯೆಂದೇ ನಾವು ಭಾವಿಸಬೇಕು. ನಮ್ಮ ಸುತ್ತಮುತ್ತ ಕೂಡ ಇಂಥ ಗ್ರೂಪ್‌ಗಳು ಇರಬಹುದು.
ತಂತ್ರಜ್ಞಾನದ ಜೊತೆ ಸೇರಿಕೊಂಡ ದುಷ್ಟತನ ಎಲ್ಲೆಡೆಯೂ ಬಹು ವೇಗವಾಗಿ ಹರಡುತ್ತದೆ. ಇಂದು ಮಕ್ಕಳಿಗೂ ಸ್ಮಾರ್ಟ್‌ಪೋನ್‌ಗಳು ಹಾಗೂ ಅಗ್ಗದ ನೆಟ್‌ವರ್ಕ್‌ಗಳು ಲಭ್ಯವಾಗಿವೆ. ಅಶ್ಲೀಲ ಸಾಹಿತ್ಯ, ಮನರಂಜನೆ, ಪೋರ್ನ್‌ ಸೈಟ್‌ಗಳ ಲಭ್ಯತೆಗಳು ಮಕ್ಕಳ ಮುಗ್ಧತೆಯನ್ನು ನಾಶ ಮಾಡಿವೆ. ಬಹುಬೇಗನೆ ಲೈಂಗಿಕ ವಿಚಾರಗಳಿಗೆ ತೆರೆದುಕೊಳ್ಳುವ ಇವರು, ಅದನ್ನು ಪ್ರಯೋಗಿಸಿ ನೋಡುವ ಹರೆಯದ ಹುಚ್ಚು ಹುಮ್ಮಸ್ಸನ್ನೂ ಮೈಗೂಡಿಸಿಕೊಳ್ಳುತ್ತಾರೆ. ಹರೆಯದ ಸ್ವಭಾವಸಹಜವಾದ ಈ ಪ್ರವೃತ್ತಿ ಸಾತ್ವಿಕ ಹಾದಿಯಲ್ಲಿ ಸಾಗದೆ ಅಪರಾಧದ ದಾರಿಯಲ್ಲಿ ಸಾಗಿದರೆ ಮಾತ್ರ ಸಮಸ್ಯೆ ಶುರುವಾಗುತ್ತದೆ. ಲೈಂಗಿಕ ಅನ್ವೇಷಣೆಗಳು ವಯೋಸಹಜ. ಇದನ್ನು ತಂದೆತಾಯಿ, ಪೋಷಕರು, ಶಿಕ್ಷಕರು ಗುರುತಿಸಿ ಆರೋಗ್ಯಕರವಾದ ಜ್ಞಾನ ವಿಸ್ತರಣೆಯ ಹಾದಿಯಲ್ಲಿ ಇವರನ್ನು ಕರೆದೊಯ್ಯಬೇಕು. ಆದರೆ ಲೈಂಗಿಕ ಸಾಹಸ ಪ್ರವೃತ್ತಿಯ ಜೊತೆಗೆ ಇಂಥದೇ ಸಮಾನ ಮನಸ್ಕರ ಗುಂಪು ಸೇರಿಕೊಂಡಾಗ ಮಾತ್ರ ಅದು ಅಪಾಯದ ಮುನ್ಸೂಚನೆ. ಇಂಥ ಹರೆಯದ ಹುಡುಗರ ಗುಂಪುಗಳಲ್ಲಿ ಏನು ನಡೆಯುತ್ತದೆ ಎಂಬ ಬಗ್ಗೆ ಯಾವಾಗಲೂ ಸಮಾಜ ಕಣ್ಣಿಟ್ಟಿರಬೇಕು. ಈ ನಿಟ್ಟಿನಲ್ಲಿ ತಡಮಾಡಿದರೆ, ನಮ್ಮ ಮನೆಗಳಲ್ಲೇ ಒಬ್ಬ ಲೈಂಗಿಕ ಪಾತಕಿ ಇರುವ ಸತ್ಯ ತಡವಾಗಿ ಗೊತ್ತಾದೀತು ಎಂಬುದಕ್ಕೆ ಈ ಘಟನೆ ಸಾಕ್ಷಿ.
ಈ ಗ್ರೂಪ್‌ನಲ್ಲಿದ್ದವರು ಪ್ರತಿಷ್ಠಿತ ಮನೆತನದ ಹುಡುಗರು. ಇವರು ತಮಗಿರುವ ಪ್ರಭಾವ, ಅಧಿಕಾರ, ಹಣ ಬಳಸಿಕೊಂಡು ಇದರಿಂದ ಪಾರಾಗದಂತೆ ಸಾಕ್ಷಿ ಸಹಿತ ಪ್ರಕರಣ ಬಿಗಿಗೊಳಿಸಬೇಕಾದ ಹೊಣೆ ಪೊಲೀಸರದು. ಇದರಲ್ಲಿರುವ ಅಪ್ರಾಪ್ತ ವಯಸ್ಕರನ್ನು ಬಾಲಾಪರಾಧಿ ಕಾಯಿದೆ ನಿಯಮದಂತೆ ತನಿಖೆಗೆ ಒಳಪಡಿಸುವುದು ಸರಿ; ಆದರೆ ಇವರು ಸರಿಯಾದ ಪಾಠ ಕಲಿಯುವಂತೆ ಮಾಡುವುದೂ ಅಗತ್ಯ. ಈ ಹುಡುಗರಿಗೆ ಶಿಕ್ಷೆಯಾಗುತ್ತದೋ ಇಲ್ಲವೋ ಬೇರೆ ಮಾತು. ಆದರೆ ಶಿಕ್ಷಣವಂತೂ ಆಗಬೇಕು. ನಮ್ಮೂರುಗಳಿಗೂ ಈ ಅಪರಾಧ ಪ್ರವೃತ್ತಿ ಹಬ್ಬದಂತೆ ಸರಿಯಾದ ಶಿಕ್ಷಣ ದೊರೆಯಬೇಕು. ಸಹಪಾಠಿಗಳೂ ಸೇರಿ ಇತರ ಹೆಣ್ಣುಮಕ್ಕಳ ಬಗ್ಗೆ ಗೌರವದಿಂದ ನೋಡುವ ಪ್ರವೃತ್ತಿ ಬೆಳೆಸಬೇಕು. ಸಾಮಾಜಿಕ ಜಾಲತಾಣಗಳನ್ನು ಹೇಗೆ ಬಳಸಬೇಕು ಎಂಬ ಎಚ್ಚರವೂ ಮೂಡಬೇಕು. ಇಂಥ ಗ್ರೂಪ್‌ಗಳ ನಿಯಂತ್ರಣಕ್ಕೆ ಸಾಮಾಜಿಕ ತಾಣಗಳು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿದ್ದರೆ, ಸರಕಾರದ ಮಧ್ಯಪ್ರವೇಶ ಅನಿವಾರ್ಯವಾದೀತು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top