ಮನೆ ಆರೈಕೆ ಉಪಕ್ರಮ – ಗಂಭೀರ ರೋಗಿಗಳಿಗೆ ಹಾಸಿಗೆ ಉಳಿಸೋಣ

ರಾಜ್ಯದಲ್ಲಿ ಕೊರೊನಾ ಸೋಂಕಿತರಾಗಿ ಸಣ್ಣಪುಟ್ಟ ಲಕ್ಷಣಗಳಿಂದ ಗುಣಮುಖರಾಗುವ ಹಾಗೂ ಪಾಸಿಟಿವ್‌ ಆಗಿದ್ದೂ ಯಾವುದೇ ಲಕ್ಷಣಗಳನ್ನು ತೋರಿಸದ ರೋಗಿಗಳು ಸಾಕಷ್ಟಿದ್ದಾರೆ. ಇಂಥವರನ್ನೂ ಪತ್ತೆ ಹಚ್ಚಿ ಈಗ ನಿಗದಿತ ಸರಕಾರಿ ಕೋವಿಡ್‌ ಚಿಕಿತ್ಸಾ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಈಗಿನ ಪರಿಸ್ಥಿತಿ ಹೇಗಿದೆಯೆಂದರೆ, ಎಲ್ಲ ಕಡೆಯೂ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಭರ್ತಿಯಾಗುತ್ತಿವೆ ಹಾಗೂ ವೈದ್ಯ ಸಿಬ್ಬಂದಿಯ ಸಂಖ್ಯೆಯೂ ಸಾಕಷ್ಟಿಲ್ಲ. ಇದರಿಂದಾಗಿ, ಕೋವಿಡ್‌ ರೋಗಿಗಳ ಪರಿಸ್ಥಿತಿ ಉಲ್ಬಣಗೊಂಡರೆ ಗತಿಯೇನು ಎಂಬ ಆತಂಕ ಆ ರೋಗಿಗಳನ್ನೂ, ಅವರ ಸಂಬಂಧಿಕರನ್ನೂ ಹಾಗೂ ಇತರರನ್ನೂ ಕಾಡುತ್ತಿದೆ. ಇದನ್ನು ಮೊದಲೇ ಯೋಚಿಸಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಕೆಲ ವಾರಗಳ ಹಿಂದೆಯೇ ಮನೆ ಆರೈಕೆಯ ಕ್ರಮಕ್ಕೆ ಅನುಮೋದನೆ ನೀಡಿತ್ತು. ಸದ್ಯ ರಾಜ್ಯದಲ್ಲೂ ಇಂಥದೊಂದು ಉಪಕ್ರಮಕ್ಕೆ ಸರಕಾರ ಮುಂದಾಗುವ ಸಾಧ್ಯತೆ ಇದೆ. ಮತ್ತು ಇದು ಅಪೇಕ್ಷಣೀಯ ಕೂಡ.
ದಿಲ್ಲಿಯಲ್ಲಿ ಲಕ್ಷಣ ರಹಿತ ರೋಗಿಗಳ ಸಂಖ್ಯೆ ಹೆಚ್ಚಿದ್ದರಿಂದ ಈ ಕ್ರಮ ಜಾರಿ ಮಾಡಲಾಗಿದೆ. ರಾಜ್ಯದಲ್ಲಿ ಲಕ್ಷಣ ರಹಿತ ಸೋಂಕಿತರಾದ ವೈದ್ಯರು, ನರ್ಸ್‌ಗಳಿಗೆ ಮಾತ್ರ ಈ ಕ್ರಮ ಅನ್ವಯಿಸಲಾಗಿತ್ತು. ರಾಜ್ಯದಲ್ಲಿರುವ ಸಕ್ರಿಯ ಪ್ರಕರಣಗಳಲ್ಲಿ ಶೇ.80ಕ್ಕೂ ಅಧಿಕ ರೋಗಿಗಳು ಲಕ್ಷಣರಹಿತರೇ ಆಗಿದ್ದಾರೆ. ಇವರಲ್ಲಿ ಬಹುತೇಕರು ನಿಗದಿಪಡಿಸಿದ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಇತ್ತೀಚೆಗೆ ಕೋವಿಡ್‌ ಆರೈಕೆ ಕೇಂದ್ರಗಳನ್ನು ಆರಂಭಿಸಿದ್ದು, ಅಲ್ಲಿಗೆ ಈ ವರ್ಗದ ರೋಗಿಗಳನ್ನು ಸ್ಥಳಾಂತರಿಸಲಾಗುತ್ತಿದೆ. ಆದರೆ ಈಗಿರುವ ವ್ಯವಸ್ಥೆಯಲ್ಲಿ, ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಸಾವನ್ನು ತಡೆಯುವುದೇ ನಮ್ಮ ಗುರಿ ಆಗಬೇಕು. ಲಕ್ಷಣಗಳಿಲ್ಲದ ರೋಗಿಗಳಿಗೆ ತೀರಾ ನಿಗಾ ಬೇಕಿಲ್ಲ, ಅವರು ಮನೆಯಲ್ಲೇ ಉಳಿದು ಚಿಕಿತ್ಸೆ ಪಡೆಯಬಹುದು. ರೋಗಿಯನ್ನು ಎಲ್ಲರಿಂದ ಪ್ರತ್ಯೇಕಿಸುವುದರಿಂದ ಮನೆಯವರ, ಕುಟುಂಬದವರ ಆರೈಕೆ ಸಾಮೀಪ್ಯಗಳಿಲ್ಲದೆ ರೋಗಿಗಳು ಖಿನ್ನತೆಗೊಳಗಾಗುವ ಸಾಧ್ಯತೆ ಹೆಚ್ಚು. ಮನೆ ಆರೈಕೆಯಿಂದ ಇದನ್ನೂ ತಡೆಯಬಹುದು. ಈಗ ಸೋಂಕು ಹೆಚ್ಚಳವಾಗುತ್ತಿರುವ ಪ್ರಮಾಣವನ್ನು ಗಮನಿಸಿದರೆ ಇದು ಸಮುದಾಯ ಸೋಂಕಾಗಿ ವ್ಯಾಪಿಸಿರುವ ಸಂಶಯವೇ ಮೂಡುತ್ತದೆ. ಭಾರತದಂಥ ಮನುಷ್ಯ- ಮನುಷ್ಯ ಸಂಪರ್ಕ ಹೆಚ್ಚಿರುವ ದೇಶಗಳಲ್ಲಿ ಇದು ಸಮುದಾಯ ಪ್ರತಿರೋಧ ಶಕ್ತಿಯ ಮೂಲಕವೇ ಶಮನವಾಗಬೇಕಾದ ರೋಗದಂತೆ ಕಾಣಿಸುತ್ತಿದೆ. ಇಂಥ ಹೊತ್ತಿನಲ್ಲಿ ಇತರ ಜ್ವರಗಳಂತೆಯೇ ಇದು ಕೂಡ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಂಡು ಗುಣವಾಗಬಲ್ಲ ರೋಗ ಎಂಬ ಸ್ಥಾನ ಪಡೆಯುವುದು ಅಗತ್ಯವಾಗಿದೆ.
ಆದರೆ ಮನೆ ಆರೈಕೆ ಪಡೆಯುವವರು ಹೆಚ್ಚಿನ ಎಚ್ಚರ ವಹಿಸುವುದು ಅಗತ್ಯ. ರೋಗಿಯು ಪ್ರತ್ಯೇಕ ಕೋಣೆಯಲ್ಲಿ ವಾಸಿಸಬೇಕು. ಬಟ್ಟೆ, ಆಹಾರ, ಶೌಚಾಲಯ ಎಲ್ಲದರಲ್ಲೂ ಪ್ರತ್ಯೇಕತೆ ಕಾಯ್ದುಕೊಳ್ಳಬೇಕು. ಜ್ವರ ಜೋರಾದರೆ, ಉಸಿರಾಟದ ತೊಂದರೆ ಕಂಡು ಬಂದರೆ ಆಸ್ಪತ್ರೆಗೆ ದಾಖಲಾಗುವ ವ್ಯವಸ್ಥೆಯನ್ನು ಸರಕಾರ ಮಾಡಬೇಕಾಗುತ್ತದೆ. ಆರೋಗ್ಯ ಸಿಬ್ಬಂದಿ ಇವರೊಂದಿಗೆ ಸಂಪರ್ಕದಲ್ಲಿರಬೇಕು. ಲಕ್ಷಣಗಳಿಲ್ಲದ ರೋಗಿಗಳು ಹೊರಗಡೆ ಸುತ್ತಾಡದಂತೆ ಕ್ವಾರಂಟೈನ್‌ ವ್ಯವಸ್ಥೆಯನ್ನೂ ಸರಕಾರ ರೂಪಿಸಬೇಕು. ಲಕ್ಷಣಗಳಿಲ್ಲದ ರೋಗಿಗಳಿಂದ ಅವರ ಮನೆಯಲ್ಲಿರುವ ವಯಸ್ಕರಿಗೆ, ಇತರ ಆರೋಗ್ಯ ತೊಂದರೆಗಳಿಂದ ನರಳುತ್ತಿರುವವರಿಗೆ ತೊಂದರೆ ಉಂಟಾಗದಂತೆಯೂ ನೋಡಿಕೊಳ್ಳಬೇಕಿದೆ.
ಕೋವಿಡ್‌ ರೋಗದ ಬಗ್ಗೆ ಸಮಾಜದಲ್ಲಿ ಒಂದು ಬಗೆಯ ಭಯಭೀತಿ ಸೃಷ್ಟಿಯಾಗಿದೆ. ಕೋವಿಡ್‌ ರೋಗಿಗಳು ಇರುವ ಮನೆಯವರನ್ನೂ ಅಸ್ಪೃಶ್ಯರಂತೆ ನಡೆಸಿಕೊಳ್ಳುವುದು ಕಂಡುಬರುತ್ತಿದೆ. ಒಬ್ಬ ಕೋವಿಡ್‌ ಹೊಂದಿದ್ದರೆ ಮನೆಯ ಎಲ್ಲರಿಗೂ ಅದು ಬರಬೇಕೆಂದೇನೂ ಇಲ್ಲ. ನ್ಯುಮೋನಿಯಾ, ಡೆಂಗೆ ಮುಂತಾದ ಜ್ವರಗಳಷ್ಟು ಅಪಾಯಕಾರಿಯಾದ ಜ್ವರವೂ ಇದಲ್ಲ. ಇದನ್ನು ಸಾರ್ವಜನಿಕರು ಅರ್ಥ ಮಾಡಿಕೊಂಡು, ಮಾನವೀಯತೆಯಿಂದ ನಡೆದುಕೊಳ್ಳಬೇಕು. ಹಾಗೆಯೇ, ಕೋವಿಡ್‌ ಚಿಕಿತ್ಸೆಗೆ ಸರಕಾರ ತೆಗೆದುಕೊಳ್ಳುತ್ತಿರುವ ಹೊಸ ಉಪಕ್ರಮಗಳನ್ನು ಅನಗತ್ಯ ಟೀಕೆ ಅಥವಾ ವ್ಯಂಗ್ಯ ಮಾಡದೆ, ಸಹಕಾರದ ಮೂಲಕ ಈ ಗಂಡಾಂತರದಿಂದ ಪಾರಾಗುವ ಏಕತೆಯನ್ನೂ ಎಲ್ಲರೂ ಪ್ರದರ್ಶಿಸಬೇಕು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top