ಖಾಸಗಿ ದರ ನಿಗದಿಯಾಗಲಿ – ಕೋವಿಡ್ ಚಿಕಿತ್ಸೆಯನ್ನು ವಿಸ್ತರಿಸುವುದು ಅಗತ್ಯ

ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಒದಗಿಸಲು ಸರಕಾರ ಮುಂದಾಗಿದೆ. ಆದರೆ ಈ ಬಗ್ಗೆ ಒಂದು ಒಮ್ಮತ ಹಾಗೂ ದರ ನಿಗದಿ ಮಾಡುವುದು ಇನ್ನೂ ಸರಕಾರಕ್ಕೆ ಸಾಧ್ಯವಾಗಿಲ್ಲ. ದರ ನಿಗದಿಯ ಬಗ್ಗೆ ಖಾಸಗಿ ಆಸ್ಪತ್ರೆಗಳು ಹಗ್ಗ ಜಗ್ಗಾಟ ನಡೆಸುವುದು ಖಂಡಿತ. ಯಾಕೆಂದರೆ ಕೋವಿಡ್ ಚಿಕಿತ್ಸೆ ಸುಲಭದ್ದಲ್ಲ. ಇದು ಇನ್ನೊಬ್ಬರಿಗೆ ಸುಲಭವಾಗಿ ಹರಡಬಹುದಾದ್ದರಿಂದ, ಅದನ್ನು ತಡೆಯಲು ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಾದ್ದರಿಂದ, ಚಿಕಿತ್ಸೆ ವೆಚ್ಚವೂ ಹೆಚ್ಚಾಗುವುದು ಖಚಿತ. ಈ ವಿಚಾರದಲ್ಲಿ ಒಂದು ಮಾರ್ದದರ್ಶಿ ಸೂತ್ರವನ್ನು ಸರಳವಾಗಿ ರೂಪಿಸುವುದು ಹಾಗೂ ಅದನ್ನು ಜಾರಿಗೆ ತರುವುದು ಸರಕಾರಕ್ಕೆ ಸಾಧ್ಯವಾಗಬೇಕು. ಒಂದು ಮೂಲದ ಪ್ರಕಾರ ಸರಕಾರ ಹಾಗೂ ಖಾಸಗಿ 50:50 ಸೂತ್ರದಲ್ಲಿ ರೋಗಿಗಳನ್ನು ಹಂಚಿಕೊಳ್ಳಲಿವೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಕೋವಿಡ್ ರೋಗಿಗಳಿಗೆ ಸರಕಾರ ಉಚಿತವಾಗಿ ಚಿಕಿತ್ಸೆ ನೀಡುತ್ತಿದೆ; ಆದರೆ ಖಾಸಗಿ ಆಸ್ಪತ್ರೆಗಳೂ ಉಚಿತವಾಗಿ ಚಿಕಿತ್ಸೆ ನೀಡಬೇಕು ಎಂದು ನಿರ್ದೇಶಿಸುವ ಸ್ವಾತಂತ್ರ್ಯ ತನಗಿಲ್ಲ. ಆ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುವ ಅಧಿಕಾರ ರಾಜ್ಯ ಸರಕಾರಗಳಿಗೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದೆ. ಇತ್ತೀಚೆಗೆ ದಿಲ್ಲಿಯಲ್ಲಿ ಖಾಸಗಿ ಆಸ್ಪತ್ರೆಗಳ ಕೋವಿಡ್ ಚಿಕಿತ್ಸೆಯ ದರಗಳನ್ನು ನಿರ್ಧರಿಸುವ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ರಚಿಸಿದ ಸಮಿತಿ, ವಿವಿಧ ಬಗೆಯ ಚಿಕಿತ್ಸೆಗಳಿಗೆ ಮೇಲ್ಮಿತಿಯೊಂದನ್ನು ನಿಗದಿಪಡಿಸಿ ನೀಡಿತ್ತು. ಇಂಥ ಕ್ರಮವೊಂದನ್ನು ರಾಜ್ಯದಲ್ಲೂ ಕೈಗೊಳ್ಳಬಹುದಾಗಿದೆ.
ಕೋವಿಡ್ ಸೋಂಕಿತರ ಹಾಗೂ ಸಾವಿಗೆ ಈಡಾಗುವವರ ಸಂಖ್ಯೆ ಪ್ರತಿದಿನವೂ ಏರುತ್ತಿದೆ. ಈ ಏರಿಕೆ ಪ್ರಮಾಣ ನವೆಂಬರ್‌ವರೆಗೂ ಇರಬಹುದು ಎಂದೇ ಕೆಲವು ತಜ್ಞರು ಹೇಳುತ್ತಿದ್ದಾರೆ. ಲಾಕ್‌ಡೌನ್‌ ತೆಗೆಯಲಾಗಿದೆ ಹಾಗೂ ಎಲ್ಲ ಸಾಮಾಜಿಕ ವಾಣಿಜ್ಯ ಚಟುವಟಿಕೆಗಳು ಮುಕ್ತವಾಗಿ ನಡೆಯುತ್ತಿವೆ. ಒಂದು ಹಂತದಲ್ಲಿ ನಮ್ಮ ಜನಜೀವನ ಕೋವಿಡ್‌ಗೆ ಹೊಂದಿಕೊಳ್ಳುವುದು ಹಾಗೂ ಸಮುದಾಯದ ಪ್ರತಿರೋಧ ಶಕ್ತಿ ಪಡೆಯುವುದು ಅಗತ್ಯವಾಗಿದೆ. ಇನ್ನು ಮುಂದೆ ಸರಕಾರಿ ಆಸ್ಪತ್ರೆಗಳಲ್ಲಷ್ಟೇ ಕೋವಿಡ್ ಸ್ಫೋಟವನ್ನು ನಿಯಂತ್ರಿಸಲು ಸಾಧ್ಯವಾಗದು. ಇತರ ಹಲವು ರೋಗಗಳಂತೆ ಕೋವಿಡ್‌ಗೂ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಬೇಕಾಗುತ್ತದೆ. ಆದರೆ ಇದಕ್ಕೊಂದು ಖಚಿತ ಮಾರ್ಗಸೂಚಿ, ನಿಗಾ, ವಿಶೇಷ ಎಚ್ಚರಗಳೂ ಅಗತ್ಯವಿವೆ.
ಕೋವಿಡ್ ರೋಗಿಗಳನ್ನು ಇತರ ರೋಗಿಗಳಿಂದ ಪ್ರತ್ಯೇಕಿಸಿ ಇಡಬಹುದಾದ ಐಸೋಲೇಷನ್ ವಾರ್ಡ್‌ಗಳ ವ್ಯವಸ್ಥೆಗೆ ಆಸ್ಪತ್ರೆಗಳಲ್ಲಿ ಸೋಂಕಿಲ್ಲದ ವಿಶಾಲ ಜಾಗ ಅಗತ್ಯವಿದೆ. ಇಕ್ಕಟ್ಟಾದ ಖಾಸಗಿ ಆಸ್ಪತ್ರೆಗಳಲ್ಲಿ ಅದು ಸಾಧ್ಯವಿಲ್ಲ. ಅದರಿಂದ ಇತರ ರೋಗಿಗಳಿಗೂ ಕೋವಿಡ್ ಸೋಂಕು ಹಬ್ಬಬಹುದು. ಆದ್ದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಸಾಕಷ್ಟು ಗಾಳಿ ಬೆಳಕಿನ ಪ್ರತ್ಯೇಕ ಜಾಗ, ಇತರ ರೋಗಿಗಳ ಚಿಕಿತ್ಸೆಗೂ ಆರೋಗ್ಯಕ್ಕೂ ತೊಂದರೆಯಾಗದಂಥ ವ್ಯವಸ್ಥೆಗಳು ಪ್ರಮುಖವಾಗಿರಬೇಕು. ಕೋವಿಡ್ ಸೋಂಕಿತರ ಪರೀಕ್ಷೆಯ ಫಲಿತಾಂಶವನ್ನು ಸಕಾಲಕ್ಕೆ ಸರಕಾರಿ ವ್ಯವಸ್ಥೆಗೆ ತಿಳಿಸುವುದು, ಕುಟುಂಬದ ಕಂಟೈನ್ಮೆಂಟ್ ಮತ್ತು ಕಾಂಟ್ಯಾಕ್ಟ್ ಟ್ರೇಸಿಂಗ್‌ಗೆ ಶೀಘ್ರ ವ್ಯವಸ್ಥೆ ಮಾಡುವುದು ಮುಂತಾದ ವಿಚಾರಗಳಲ್ಲಿ ಖಾಸಗಿಯವರು ಸರಕಾರಕ್ಕೆ ಸಹಕರಿಸಬೇಕು. ಹಾಗೆಯೇ ಸರಕಾರ ಪರೀಕ್ಷೆ- ಚಿಕಿತ್ಸೆಗೆ ನಿಗದಿಪಡಿಸಿದ ಏಕರೂಪದ ದರಗಳಲ್ಲಿ ಪ್ರಾಮಾಣಿಕ ಚಿಕಿತ್ಸೆಯನ್ನು ನೀಡುವುದೂ ಅವುಗಳ ಬಾಧ್ಯತೆಯಾಗಬೇಕು. ಸರಕಾರ ವಿಮೆ ಸೌಲಭ್ಯವನ್ನು ರೋಗಿಗಳು ಇಲ್ಲೂ ಪಡೆಯುವಂತಾಗಬೇಕು. ತುರ್ತು ಸ್ಥಿತಿಯಲ್ಲಿ ಸುಲಿಗೆ ಮಾಡುವುದು ಅಥವ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಪ್ರವೃತ್ತಿಗೆ ಆಸ್ಪದ ನೀಡಬಾರದು. ಇವೆಲ್ಲವನ್ನೂ ಖಾಸಗಿ ಆಸ್ಪತ್ರೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕಿದೆ. ಇದರ ಜೊತೆಗೆ ಸರಕಾರಿ ಆಸ್ಪತ್ರೆಗಳಲ್ಲೂ ಕೋವಿಡ್ ಚಿಕಿತ್ಸೆ ಸೇವೆಯನ್ನು ಸಬಲೀಕರಿಸಬೇಕು. ಯಾಕೆಂದರೆ ಬಡವರು ಖಾಸಗಿ ಆಸ್ಪತ್ರೆಗಳಿಗೆ ತೆರಳಲು ಸಾಧ್ಯವಿಲ್ಲ. ಇಲ್ಲಿ ಸೇವೆ ಸಲ್ಲಿಸುವವರಿಗೂ ಸಾಕಷ್ಟು ಸುರಕ್ಷತಾ ಸಾಮಗ್ರಿ ಹಾಗೂ ನೈತಿಕ ಬೆಂಬಲ ಒದಗಿಸಬೇಕು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top