ಇಡೀ ವಿಶ್ವವೇ ತತ್ತರಿಸಿಹೋಗುವಂತೆ ಮಾಡಿರುವ ಕೊರೊನಾ ವೈರಸ್ ಪ್ರಾಕೃತಿಕವಾದುದ್ದಲ್ಲ, ಅದು ಮಾನವ ಸೃಷ್ಟಿಯಾಗಿರಬಹುದು ಎಂಬ ಒಂದು ವಾದ ಆರಂಭದಿಂದಲೇ ಚಾಲ್ತಿಯಲ್ಲಿತ್ತು. ಆದರೆ ಅದಕ್ಕೆ ಯಾರೂ ಹೆಚ್ಚು ಕಿವಿಗೊಟ್ಟಿರಲಿಲ್ಲ. ಈಗ ಫ್ರಾನ್ಸ್‌ನ ವೈದ್ಯಕೀಯ ತಜ್ಞ ಡಾ. ಲಕ್ ಮಾಂಟೆಗ್ನೈರ್ ಎಂಬುವರು, ಚೀನಾದ ವುಹಾನ್‌ನಲ್ಲಿನ ‘ನ್ಯಾಷನಲ್ ಬಯೋಸೇಫ್ಟಿ’ ಪ್ರಯೋಗಾಲಯದಲ್ಲಿಯೇ ಕೊರೊನಾ ವೈರಾಣು ಸೃಷ್ಟಿಯಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಕೊರೊನಾ ವೈರಾಣು ಕಣಗಳ ಅಧ್ಯಯನ ನಡೆಸಿರುವ ಅವರು “ಕೊರೊನಾ ವೈರಾಣು ರಚನೆಯನ್ನು ಗಮನಿಸಿದರೆ ಅದರಲ್ಲಿ ಎಚ್‌ಐವಿ ಮತ್ತು ಮಲೇರಿಯಾ ಕ್ರಿಮಿಯ ರಚನೆಗಳು ಹಾಗೂ ಕೆಲವು ಸೂಕ್ಷ್ಮಾಣು ಅಂಶಗಳು ಕೂಡ ಇವೆ. ಅದು ನೈಸರ್ಗಿಕವಾಗಿ ಉತ್ಪತ್ತಿಯಾಗಿರಲು ಸಾಧ್ಯವೇ ಇಲ್ಲ,” ಎಂದು ಖಚಿತವಾಗಿ ನುಡಿದಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಂತೂ ಇದನ್ನು ಮೊದಲಿನಿಂದ ‘ಚೀನಾ ವೈರಸ್’ ಎಂದೇ ಕರೆಯುತ್ತ ಬಂದಿದ್ದು, ಅದು ಚೀನಾ ನಿರ್ಮಿತ ಜೈವಿಕ ಬಾಂಬ್ ಎಂದು ಸತತವಾಗಿ ಆರೋಪಿಸುತ್ತಲೇ ಇದ್ದಾರೆ. ಈ ನಡುವೆ ಚೀನಾ ಕೂಡ, ತಾನು ಈ ಹಿಂದೆ ನೀಡಿರುವ ಸೋಂಕಿತ ಮೃತರ ಸಂಖ್ಯೆ ನಿಜವಾದುದಲ್ಲ ಎಂದು ಒಪ್ಪಿಕೊಂಡಿದೆ. ವುಹಾನ್‌ನಲ್ಲಿ ಮೃತರಾದವರ ಸಂಖ್ಯೆ ಅಧಿಕೃತವಾಗಿ ಈಗ ದುಪ್ಪಟ್ಟಾಗಿದೆ.
ಈ ವೈರಸ್ ವಿಷಯದಲ್ಲಿ ಚೀನಾ ಮೊದಲಿನಿಂದಲೂ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವ ರೀತಿಯಲ್ಲಿ ವರ್ತಿಸುತ್ತಿದೆ. ವುಹಾನ್‌ನಲ್ಲಿ ಡಿಸೆಂಬರ್ ಮೊದಲ ಭಾಗದಲ್ಲಿಯೇ ಸೋಂಕು ಹರಡುತ್ತಿರುವುದು ಖಚಿತವಾಗಿದ್ದರೂ ಸರಕಾರ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳದೆ ಸುಮ್ಮನಿತ್ತು. ಖಚಿತ ಮಾಹಿತಿ ನೀಡಿದ ವೈದ್ಯನನ್ನೇ ಬೆದರಿಸಿ ಬಾಯಿ ಮುಚ್ಚಿಸಿತು. ನಂತರ ಆ ವೈದ್ಯ ಸೋಂಕಿನಿಂದ ಸತ್ತು ಹೋದ. ವುಹಾನ್‌ನಿಂದ ವಿದೇಶ ಪ್ರಯಾಣ ಹೋಗುವ ಮತ್ತು ಬರುವವರನ್ನು ತಡೆಯುವ ಯಾವುದೇ ಯತ್ನವನ್ನು ಚೀನಾ ಡಿಸೆಂಬರ್ ಕೊನೆಯವರೆಗೂ ಮಾಡಲಿಲ್ಲ. ಹೀಗಾಗಿ ಲಕ್ಷಾಂತರ ಮಂದಿ ಚೀನಾದಿಂದ ಸೋಂಕನ್ನು ಹೊರಗೆ ಒಯ್ಯುವುದು ಸಾಧ್ಯವಾಯಿತು. ವಿಶ್ವ ಸಂಸ್ಥೆಯ ಅರಿವಿಗೆ ಈ ವಿಚಾರವನ್ನು ತಂದ ಬಳಿಕವೂ, ಈ ವೈರಸ್ ಮನುಷ್ಯನಿಂದ ಮನುಷ್ಯನಿಗೆ ಹರಡುವುದಿಲ್ಲ ಎಂದೇ ಚೀನಾ ಸುಳ್ಳು ಹೇಳಿತ್ತು. ಅದು ಕೂಡ ನಿಜವಲ್ಲ ಎಂದು ಮತ್ತೆ ಗೊತ್ತಾಯಿತು. ಹೀಗೆ ಚೀನಾದ ಯಾವುದೇ ವರ್ತನೆಯನ್ನು ನೋಡಿದರೂ ಅಲ್ಲಿ ದಟ್ಟವಾದ ರಹಸ್ಯವೊಂದನ್ನು ಮುಚ್ಚಿಟ್ಟುಕೊಂಡ ಬಗೆಯಲ್ಲಿದೆ. ಇನ್ನು ಅಲ್ಲಿಂದ ಸರಿಯಾದ ಮಾಹಿತಿಗಳು ಅಲ್ಲಿರುವ ಸರ್ವಾಧಿಕಾರಿ ಸರಕಾರದ ದೆಸೆಯಿಂದಾಗಿ ಹೊರಬರುವುದು ಸಾಧ್ಯವೇ ಇಲ್ಲ.
ಸದ್ಯಕ್ಕೆ ನಮ್ಮ ಆದ್ಯತೆ ಈ ಸೋಂಕನ್ನು ತಡೆಗಟ್ಟುವುದು ಹೇಗೆ ಎಂಬುದೇ ಆಗಿರಬೇಕು ನಿಜ; ಆದರೆ ಇದರ ಹಿಂದಿರಬಹುದಾದ ಚೀನಾದ ಕುತ್ಸಿತ ಲಾಭಕೋರತನವನ್ನೂ ಗಮನಿಸದೆ ಇರುವುದು ಸಾಧ್ಯವಿಲ್ಲ. ಸೋಂಕುಪೀಡಿತಗೊಂಡು ಒದ್ದಾಡುತ್ತಿರುವ ದೇಶಗಳಿಗೆ ಚೀನಾ ಈಗ ಸಾಲ ನೀಡಲು, ಮಾಸ್ಕ್- ಗ್ಲೌಸ್- ಔಷಧಗಳನ್ನು ಮಾರುವ ಲಾಭದಾಯಕ ಒಪ್ಪಂದಗಳನ್ನು ಮಾಡಿಕೊಳ್ಳಲು ಮುಂದಾಗಿದೆ. ಭಾರತಕ್ಕೆ ಕೂಡ ಅದು ಕಳಿಸಿರುವ ಪಿಪಿಇ ಕಿಟ್‌ಗಳು ಗುಣಮಟ್ಟ ಮಾನದಂಡವನ್ನು ಅರ್ಧದಷ್ಟೂ ಪೂರೈಸದ ಕಳಪೆ ಸಾಮಗ್ರಿ ಎಂದು ತಜ್ಞರು ಹೇಳಿದ್ದಾರೆ. ಇಂಥ ದುರ್ಬುದ್ಧಿ ಹೊಂದಿರಬಹುದಾದ ಚೀನಾದ ಜೊತೆಗೆ ನಮ್ಮ ವ್ಯವಹಾರ ಹೇಗಿರಬೇಕು, ಎಷ್ಟಿರಬೇಕು ಎಂಬುದು ಈಗ ಮುಂದಿರುವ ಪ್ರಶ್ನೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಗ್ಗಿದ್ದ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಚೀನಾ ಈ ಸೋಂಕಿನ ಪ್ರಯೋಗ ಮಾಡಿತೇ? ಈ ಬಗ್ಗೆ ಕೂಲಂಕಷ ತನಿಖೆ ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳಿಂದ ಆಗಬೇಕು. ನಾವು ಕೂಡ ಚೀನಾದ ಜೊತೆಗಿನ ವ್ಯವಹಾರದಲ್ಲಿ ಇನ್ನು ಮುಂದೆ ಹೆಚ್ಚಿನ ಎಚ್ಚರ ವಹಿಸಬೇಕು.