ಮಕ್ಕಳ ಲೋಕದಲ್ಲಿ ಕೊರೊನಾ ಕೋಲಾಹಲ

ಕೊರೊನಾ ವೈರಾಣು ಹಾಗೂ ಅದನ್ನು ತಡೆಯಲು ಜಗತ್ತಿನಾದ್ಯಂತ ಹೇರಲಾದ ಲಾಕ್‌ಡೌನ್‌ಗಳ ಪರಿಣಾಮ ಕೋಟ್ಯಂತರ ಮಕ್ಕಳು ವಿಚಿತ್ರ ರೀತಿಯ ಬವಣೆ ಅನುಭವಿಸುತ್ತಿದ್ದಾರೆ. ಎಷ್ಟು ಮಕ್ಕಳು, ಏನೇನು ಸಂಕಷ್ಟ ಅನುಭವಿಸುತ್ತಿದ್ದಾರೆ? ಒಂದು ನೋಟ ಇಲ್ಲಿದೆ.

ಆಟ ಹಾಗೂ ಪಾಠಗಳಲ್ಲಿ ಮಗ್ನರಾಗಿರಬೇಕಿದ್ದ ಮಕ್ಕಳು ಸುಮ್ಮನೆ ಮನೆಗಳಲ್ಲಿ ಬಂಧಿಯಾಗಿರುವುದನ್ನು ನೋಡುವುದೇ ಒಂದು ಹಿಂಸೆ. ಕೊರೊನಾ ವೈರಸ್‌ ತಡೆಯಲು ತೆಗೆದುಕೊಳ್ಳಲಾದ ಕ್ರಮಗಳ ಪರಿಣಾಮ ಪ್ರಪಂಚದಾದ್ಯಂತ ಸುಮಾರು 160 ಕೋಟಿ ಮಕ್ಕಳು ಶಾಲೆಯಿಂದ ಆಚೆ ಬಿದ್ದಿದ್ದಾರೆ. ಇವರಲ್ಲಿ ಕೆಲವೇ ಮಕ್ಕಳು ಮಾತ್ರ ಮನೆಯಲ್ಲೂ ಅಧ್ಯಯನ ಮುಂದುವರಿಸಬಹುದಾದ ಸೌಲಭ್ಯ ಹೊಂದಿದ್ದಾರೆ. ಮಧ್ಯಮ, ಕೆಳಮಧ್ಯಮ ಹಾಗೂ ಬಡ ವರ್ಗದ ಕೋಟ್ಯಂತರ ಮಕ್ಕಳು ಪಾಠ ಪ್ರವಚನಗಳ ಜೊತೆಗೆ ಇನ್ನೂ ಅನೇಕ ಸೌಲಭ್ಯಗಳನ್ನು ಕಳೆದುಕೊಂಡು, ಆಟವಾಡಲು ಗೆಳೆಯ/ತಿಯರೂ ಸಿಗದೆ ಖಿನ್ನತೆಗೆ ಜಾರುತ್ತಿದ್ದಾರಂತೆ. ಹಾಗೆಂದು ವಿಶ್ವ ಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್‌) ಹೇಳಿದೆ. ಶೈಕ್ಷಣಿಕ ಅಂತರದ ಹೆಚ್ಚಳ, ಆನ್‌ಲೈನ್‌ ಪೀಡನೆಗಳು, ಅಪೌಷ್ಟಿಕತೆ, ಕೌಟುಂಬಿಕ ದೌರ್ಜನ್ಯ ಮುಂತಾದ ಸಮಸ್ಯೆಗಳನ್ನು ಮಕ್ಕಳು ಎದುರಿಸಬೇಕಿದೆ.
ದಿನಕ್ಕೆ 6000 ಸಾವು
ಕೊರೊನಾ ವೈರಸ್‌ ಪ್ರಸರಣವನ್ನು ಪರಿಣಾಮಕಾರಿಯಾಗಿ ತಡೆಯದೆ ಹೋದಲ್ಲಿ, ಮುಂದಿನ ಆರು ತಿಂಗಳಲ್ಲಿ ಜಗತ್ತಿನಾದ್ಯಂತ ಪ್ರತಿದಿನ ಅಂದಾಜು 6000 ಮಕ್ಕಳಂತೆ ಮರಣ ಹೊಂದಲಿದ್ದಾರೆ ಎಂದು ಯುನಿಸೆಫ್‌ ಹೇಳಿದೆ. ಇದು ಐದು ವರ್ಷದ ಕೆಳಗಿನ ಮಕ್ಕಳ ಲೆಕ್ಕಾಚಾರ. ಸುಮಾರು 140 ದೇಶಗಳಲ್ಲಿ ಕೋವಿಡ್‌ನಿಂದಾಗಿ ಸಂಪೂರ್ಣ ವಹಿವಾಟು ಬಂದ್‌ ಆಗಿದ್ದು, ಇಲ್ಲಿನ ಮಕ್ಕಳಲ್ಲಿ 77% ನಾಲ್ಕು ಗೋಡೆಗಳ ಒಳಗೆ ಲಾಕ್‌ ಆಗಿದ್ದಾರಂತೆ. ಮಕ್ಕಳ ಸುರಕ್ಷತೆಗಾಗಿ ಯುನಿಸೆಫ್‌ ಬಲಿಷ್ಠ ರಾಷ್ಟ್ರಗಳಿಂದ ನಿಧಿ ಸಂಗ್ರಹಿಸುತ್ತಿದ್ದು, ಅದನ್ನು ಬಡ ದೇಶಗಳ ಮಕ್ಕಳ ಸುರಕ್ಷತೆಗಾಗಿ ವಿನಿಯೋಗಿಸುತ್ತಿದೆ.

ಶೈಕ್ಷಣಿಕ ಕಂದಕ ವಿಸ್ತಾರ
ಜಾಗತಿಕವಾಗಿ ಸುಮಾರು 160 ಕೋಟಿ ಮಕ್ಕಳು ಶಾಲೆಗಳ ಸಾಂಪ್ರದಾಯಿಕ ಶಿಕ್ಷಣದಿಂದ ಹೊರಗೆ ಉಳಿದಿದ್ದಾರೆ. ಕೆಲವೇ ಶ್ರೀಮಂತ ದೇಶಗಳ ಮಕ್ಕಳು ಹಾಗೂ ಬಡ ದೇಶಗಳ ಶ್ರೀಮಂತ ತಂದೆ ತಾಯಿಗಳ ಮಕ್ಕಳು ಮಾತ್ರ ಈ ಶೈಕ್ಷಣಿಕ ಖಾಲಿತನವನ್ನು ತುಂಬಿಕೊಳ್ಳಲು ಸಮರ್ಥರಾಗಿದ್ದಾರೆ. ಇವರ ಸಂಖ್ಯೆ ಶೇ.15 ಮಾತ್ರ. ಉಳಿದ ಮಕ್ಕಳು ಆನ್‌ಲೈನ್‌ ಶಿಕ್ಷಣವನ್ನು ಪಡೆಯಲು ನಾನಾ ಕಾರಣಗಳಿಗೆ ಅಸಾಧ್ಯ ಸನ್ನಿವೇಶದಲ್ಲಿದ್ದಾರೆ. ಎರಡು ತಿಂಗಳಿಗೂ ಅಧಿಕ ಕಾಲದ ಅಂತರ ನೀಡುವುದರಿಂದ, ನಿರಂತರತೆ ಕಾಪಾಡಲು ಸಾಧ್ಯವಾಗದೆ ಇರುವುದರಿಂದ ಬಡ ಮಕ್ಕಳು ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆ.

ಭಾರತದ ಮಕ್ಕಳ ಶಿಕ್ಷಣ
ಯುನೆಸ್ಕೋ ಲೆಕ್ಕಾಚಾರ ಹಾಕಿರುವ ಪ್ರಕಾರ ಭಾರತದಲ್ಲಿ 32.10 ಕೋಟಿ ಮಕ್ಕಳು ಮನೆಗಳಲ್ಲೇ ಬಾಕಿಯಾಗಿದ್ದಾರೆ. 2018ರಲ್ಲಿ ನಡೆದ ಒಂದು ಸಮೀಕ್ಷೆಯ ಪ್ರಕಾರ, ಗ್ರಾಮೀಣ ಪ್ರದೇಶದ 5ನೇ ತರಗತಿಯ ಶೇ.50 ಮಕ್ಕಳು ಮಾತ್ರ ಎರಡನೇ ತರಗತಿಯ ಪಠ್ಯಪುಸ್ತಕವನ್ನು ಓದಬಲ್ಲರು. ಒಂದು ಮಾದರಿ ರಾಷ್ಟ್ರೀಯ ಸಮೀಕ್ಷೆಯಲ್ಲಿ ಕಂಡುಬಂದಂತೆ, ಶೇ.24 ಮಕ್ಕಳ ಕುಟುಂಬಗಳಲ್ಲಿ ಮಾತ್ರ ಇಂಟರ್‌ನೆಟ್‌ ಸೌಲಭ್ಯವಿದೆ ಹಾಗೂ ಶೇ.20 ಮಂದಿ ಮಕ್ಕಳು ಮಾತ್ರ ಇಂಟರ್‌ನೆಟ್‌ ಬಳಸಿ ಪಠ್ಯಕ್ರಮ ಕಲಿಯಬಲ್ಲರು. ಮನೆಗಳಲ್ಲಿ ಇತರ ಪುಸ್ತಕ ಹೊಂದಿದವರು ಶೇ.4 ಮಾತ್ರ.

ವಲಸಿಗರ ಮಕ್ಕಳು ದುಡಿಯಲು
ಭಾರತದಲ್ಲಿ 2017-18ರಲ್ಲಿ 19% ಮಕ್ಕಳು ಹೈಸ್ಕೂಲ್‌ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ದುಡಿಯಲು ಹೋಗಿದ್ದರು. 2011ರ ಜನಗಣತಿಯಲ್ಲಿ 30 ಲಕ್ಷ ದುಡಿಯುವ ಮಕ್ಕಳು ಕಂಡುಬಂದಿದ್ದರು. ಈ ಸಲದ ಕೊರೊನಾಘಾತದಿಂದ ಈ ಸಂಖ್ಯೆ ಇನ್ನಷ್ಟು ಏರಲಿದೆ. ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ಬಂದು ದುಡಿಯುತ್ತಿದ್ದ ವಲಸಿಗರು ಕೆಲಸ ಕಳೆದುಕೊಂಡು ಊರಿಗೆ ಮರಳಿರುವುದು, ಅವರ ವಸತಿ ಹಾಗೂ ಕೆಲಸದ ಸನ್ನಿವೇಶಗಳೂ ಅಸ್ತವ್ಯಸ್ತ ಆಗಿರುವುದರಿಂದ ಇವರ ಮಕ್ಕಳೂ ಶಾಲೆಗಳಿಂದ ಹೊರಬಿದ್ದಿದ್ದಾರೆ. ಇವರೂ ಕುಟುಂಬದ ಹೊಟ್ಟೆ ಹೊರೆಯಲು ದುಡಿಯಲು ಹೋಗುವುದು ಖಚಿತ. ಸುಮಾರು 75 ಲಕ್ಷ ವಲಸೆ ಕಾರ್ಮಿಕರು ಕೋವಿಡ್‌ ಸಂದರ್ಭದಲ್ಲಿ ನೆಲೆ ಕಳೆದುಕೊಂಡಿದ್ದು, ಅದರನುಸಾರ ಇಂಥ ಮಕ್ಕಳ ಸಂಖ್ಯೆ 25 ಲಕ್ಷದಷ್ಟಿರಬಹುದೆಂಬ ಅಂದಾಜು.

ಬಾಲ್ಯವಿವಾಹ
ಉತ್ತರ ಕರ್ನಾಟಕದ ಕೆಲವು ಭಾಗ ಹಾಗೂ ಉತ್ತರ ಭಾರತದ ಕೆಲವೆಡೆ ಸರಕಾರಿ ಶಾಲೆಗಳು ಬಡ ಕುಟುಂಬದ ಹೆಣ್ಣುಮಕ್ಕಳಿಗೆ ವರದಾನ. ಇವರು ಇಲ್ಲಿ ಮಾತ್ರ ಶಿಕ್ಷಣ ಪಡೆಯಲು ಸಾಧ್ಯ. ಈ ಶಿಕ್ಷಣವೇ ಇವರನ್ನು ಬಾಲ್ಯವಿವಾಹದಿಂದ ಗುರಾಣಿಯಂತೆ ರಕ್ಷಿಸುತ್ತಿದೆ, ಒಂದು ವೇಳೆ ಮೂರು ತಿಂಗಳಿಗಿಂತಲೂ ಹೆಚ್ಚು ಕಾಲ ಶಿಕ್ಷಣ ನಿಂತುಹೋಗಿ, ಶಾಲೆಗಳು ಆರಂಭವಾಗದೆ ಇದ್ದರೆ, ಹೆತ್ತವರು ಮಕ್ಕಳನ್ನು ಮದುವೆ ಮಾಡಿ ಸಾಗಹಾಕಿಬಿಡುತ್ತಾರೆ. ಅನೇಕ ಕಡೆ ಅವರನ್ನು ಆರೋಗ್ಯ ಕಾರ್ಯಕರ್ತರು, ಶಾಲೆ ಟೀಚರ್‌ಗಳು ರಕ್ಷಿಸುವ ಕೆಲಸ ಮಾಡುತ್ತಾರೆ. ಪ್ರಸ್ತಿತ ಸನ್ನಿವೇಶದಲ್ಲಿ ರಕ್ಷಣೆಯೂ ಸಾಧ್ಯವಿಲ್ಲ. ಇತರ ಬಡದೇಶಗಳಲ್ಲೂ ಇದೇ ಕತೆ. 2015ರಲ್ಲಿ ಎಬೋಲಾ ವೈರಸ್‌ ಹರಡಿದಾಗ, ಒಂದು ವರ್ಷ ಶಾಲೆಗಳನ್ನ ಮುಚ್ಚಲಾಗಿತ್ತು. ಆಗ ಸಿಯೆರಾ ಲಿಯೋನ್‌ನ ಶೇ.19 ಹೆಣ್ಣುಮಕ್ಕಳನ್ನು ಅಪ್ರಾಪ್ತ ವಯಸ್ಸಿನಲ್ಲೇ ಮದುವೆ ಮಾಡಿಸಿದ್ದು ಕಂಡುಬಂದಿತ್ತು.

ಅಪೌಷ್ಟಿಕತೆಯ ಸಮಸ್ಯೆ
ಭಾರತ, ಬಾಂಗ್ಲಾ, ಮ್ಯಾನ್ಮಾರ್‌, ಆಫ್ರಿಕಾದ ಹಲವು ದೇಶಗಳಲ್ಲಿ ಪ್ರಾಥಮಿಕ ಹಾಗೂ ಹೈಸ್ಕೂಲ್‌ ಮಕ್ಕಳಲ್ಲಿ ಹೆಚ್ಚಿನವರು ತಮ್ಮ ತುತ್ತಿಗಾಗಿ ಶಾಲೆಗಳನ್ನೇ ನಂಬಿದ್ದಾರೆ. ಜಾಗತಿಕವಾಗಿ ಸುಮಾರು ಅರ್ಧದಷ್ಟು ಮಕ್ಕಳು ಶಾಲೆಯ ಮಧ್ಯಾಹ್ನದೂಟವನ್ನೇ ನೆಚ್ಚಿಕೊಂಡಿದ್ದಾರೆ. ವಿಶ್ವಸಂಸ್ಥೆಯ ನೆರವು, ಸರಕಾರಗಳ ಉಪಕ್ರಮ ಹಾಗೂ ಎನ್‌ಜಿಒಗಳ ಸಹಾಯದೊಂದಿಗೆ ಈಗ ಬಹುತೇಕ ಎಲ್ಲ ಬಡ ದೇಶಗಳೂ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಜಾರಿಗೆ ತರುವ ಉಪಾಯವಾಗಿ ಶಾಲಾ ಮಕ್ಕಳಿಗೆ ಮಧ್ಯಾಹ್ನದೂಟವನ್ನು ಕೊಡಮಾಡುತ್ತಿವೆ. ಭಾರತದಲ್ಲಿ ಸುಮಾರು 3 ಕೋಟಿ ಮಕ್ಕಳು ಈ ಮಧ್ಯಾಹ್ನದೂಟವಿಲ್ಲದೆ ಹಸಿವು, ಅಪೌಷ್ಟಿಕತೆಗೆ ತುತ್ತಾಗಿರುವ ಸಾಧ್ಯತೆ ಇದೆ.

ಸೈಬರ್‌ ಅಪಾಯ
ಕೋವಿಡ್‌ನಿಂದಾಗಿ ಮಕ್ಕಳು ಶಾಲಾ ಚಟುವಟಿಕೆ ಹಾಗೂ ಸ್ನೇಹಿತ/ತೆಯರೊಂದಿಗೆ ಆಟವಾಡುವ ಸಾಧ್ಯತೆಗಳಿಂದ ವಂಚಿತವಾಗಿರುವುದರಿಂದ, ಮೊಬೈಲ್‌ ಅಥವಾ ಇತರ ಗ್ಯಾಜೆಟ್‌ಗಳಲ್ಲಿ ಆನ್‌ಲೈನ್‌ ಆಟ, ವಿಡಿಯೋ ಗೇಮ್‌ ಅಥವಾ ಚಾಟ್‌ಗಳ ಮೊರೆ ಹೋಗುತ್ತಿದ್ದಾರೆ. ಇಂಥ ಚಟುವಟಿಕೆಗಳ ವೇಳೆ ಹೆತ್ತವರು ಸರಿಯಾಗಿ ನಿಗಾ ವಹಿಸದಿದ್ದರೆ ಮಕ್ಕಳು ಸೈಬರ್‌ ಅಪಾಯಗಳಿಗೆ ತುತ್ತಾಗುವ ಅಪಾಯ ಅಧಿಕವಿದೆ. ಎಲ್ಲ ಮಕ್ಕಳಿಗೂ ಇವನ್ನು ಸರಿಯಾಗಿ ನಿರ್ವಹಿಸುವ ತಿಳಿವಳಿಕೆ, ಕೌಶಲ್ಯ ಇರುವುದಿಲ್ಲ. ಹೆಚ್ಚಿನ ಹೆತ್ತವರಿಗೂ ಇರುವುದಿಲ್ಲ. ಹೊಸ ವಾಸ್ತವ(ವರ್ಚುವಲ್‌ ರಿಯಾಲಿಟಿ)ವನ್ನು ಅರ್ಥ ಮಾಡಿಕೊಳ್ಳುವ ವಿವೇಕ ಅವರಲ್ಲಿ ಇರುವುದಿಲ್ಲ. ಮಕ್ಕಳು ಲೈಂಗಿಕ ಪೀಡನೆ, ಬ್ಲ್ಯಾಕ್‌ಮೇಲ್‌ಗೆ ತುತ್ತಾಗುವ ಸಾಧ್ಯತೆಗಳು ಅಧಿಕವಿವೆ.

ಖಿನ್ನತೆ, ವ್ಯಗ್ರತೆ
ಲಾಕ್‌ಡೌನ್‌ನ ಅವಧಿಯಲ್ಲಿ ಮಕ್ಕಳಲ್ಲಿ ವ್ಯಗ್ರತೆ ಹಾಗೂ ಖಿನ್ನತೆಯ ಲಕ್ಷಣಗಳು ಶೇ.60ರಷ್ಟು ಹೆಚ್ಚಿವೆ ಎಂದು ಅಮೆರಿಕದಲ್ಲಿ ನಡೆಸಲಾದ ಅಧ್ಯಯನವೊಂದು ತಿಳಿಸಿದೆ. ಬಡ- ಮಧ್ಯಮ ಕುಟುಂಬಗಳು ಹೆಚ್ಚಿರುವ ಭಾರತದಂಥ ದೇಶಗಳಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಿರಬಹುದು. ಯಾಕೆಂದರೆ ಮಕ್ಕಳ ಎಲ್ಲ ಚಟುವಟಿಕೆಗಳನ್ನೂ ಕಟ್ಟಿಹಾಕಲಾಗಿರುವುದರಿಂದ, ಅವರು ತಮ್ಮ ಶಕ್ತಿಯನ್ನೆಲ್ಲ ಮನೆಯೊಳಗೇ ವಿನಿಯೋಗಿಸಬೇಕಾಗುತ್ತದೆ. ಎಲ್ಲ ಹೆತ್ತವರಿಗೂ ಸರಿಯಾದ ಪೇರೆಂಟಿಂಗ್‌ ಕಲೆ ತಿಳಿದಿರುವುದಿಲ್ಲ. ಹೀಗಾಗಿ ಮಕ್ಕಳ ಮೇಲಿನ ದೌರ್ಜನ್ಯಗಳೂ ಹೆಚ್ಚಬಹುದು. ಇದರಿಂದ ಮಕ್ಕಳು ಖಿನ್ನತೆಗೊಳಗಾಗುವುದು, ಮಾನಸಿಕ ಸಮಸ್ಯೆಗಳಿಗೆ ತುತ್ತಾಗುವುದು ಶತಸ್ಸಿದ್ಧ.

ಲಸಿಕೆ ಹಾಕಲಾಗದು
ಕೋವಿಡ್‌ನಿಂದಾಗಿ ತಡೆಹಿಡಿಯಲ್ಪಟ್ಟ ಚಟುವಟಿಕೆಗಳ ಪರಿಣಾಮ, ಲಸಿಕೆ ಶಿಬಿರಗಳೂ ನಿಂತುಹೋಗಿವೆ. ಹೀಗಾಗಿ ಲಸಿಕೆಯಿಂದ ತಡೆಗಟ್ಟಬಹುದಾದ ಕಾಯಿಲೆಗಳಿಗೆ ಆಹ್ವಾನ ನೀಡಿದಂತಾಗುತ್ತಿದೆ. ಉದಾಹರಣೆಗೆ, ಪ್ರತಿವರ್ಷ 12 ಕೋಟಿ ಮಕ್ಕಳಿಗೆ ದಡಾರದ ಲಸಿಕೆ ನೀಡಲಾಗುತ್ತಿದ್ದು, ಅದು ಈ ವರ್ಷ ತಪ್ಪಿಹೋಗಿದೆ. 2018ರಲ್ಲಿಯೇ 1.40 ಲಕ್ಷ ಮಕ್ಕಳು ದಡಾರಕ್ಕೆ ಬಲಿಯಾಗಿದ್ದರು. ಲಸಿಕೆಯಿಂದ ಇವುಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿತ್ತು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top