ಪ್ರಜೆಗಳ ವರ್ತನೆಯೇ ನಿರ್ಣಾಯಕ – ಸೋಂಕು ಮುಕ್ತಗೊಳ್ಳಲು ಎಲ್ಲರೂ ಸಹಕರಿಸಿ ​

ಕೊರೊನಾ ವೈರಸ್‌ ಹರಡುವಿಕೆಯನ್ನು ತಡೆಗಟ್ಟಲು ವಿಧಿಸಲಾದ ಮೂರು ವಾರಗಳ ಮೊದಲ ಲಾಕ್‌ಡೌನ್‌ ಮುಗಿದು ಈಗ ಮೇ.3ರವರೆಗೆ ಎರಡನೇ ಹಂತದ ನಿರ್ಬಂಧ ವಿಧಿಸಲಾಗಿದೆ. ಕೊರೊನಾ ಸೋಂಕು ಹರಡಿರುವ ಇತರ ಹಲವು ದೇಶಗಳಿಗೆ ಹೋಲಿಸಿದರೆ, ಲಾಕ್‌ಡೌನ್‌ ಅವಧಿಯಲ್ಲಿ ಸೋಂಕಿನ ಪ್ರಮಾಣವನ್ನು ಸಾಕಷ್ಟು ಪರಿಣಾಮಕಾರಿಯಾಗಿಯೇ ತಡೆಗಟ್ಟಲಾಗಿದೆ. ಸೋಂಕುಗಳು ಮಿತಿ ಮೀರಿ ಹೋಗದಂತೆ ಇದು ಸಹಕರಿಸಿದೆ. ಆದರೆ ಈ ಲಾಕ್‌ಡೌನ್‌ ದುಷ್ಪರಿಣಾಮವಾಗಿ ಆರ್ಥಿಕತೆ ದೊಡ್ಡ ಹೊಡೆತ ತಿಂದಿದೆ. ಇದನ್ನು ಸರಿದೂಗಿಸಿಕೊಂಡು ಹೋಗಲು ಮುಂದಿನ ಅವಧಿಯಲ್ಲಿ ಲಾಕ್‌ಡೌನ್‌ನ ಕೆಲವು ಉಪಕ್ರಮಗಳನ್ನು ಸಡಿಲಗೊಳಿಸುವ ಚಿಂತನೆಗೆ ಕೇಂದ್ರ ಮುಂದಾಗಿದೆ. ಆರ್ಥಿಕತೆ ಮತ್ತು ಜನರ ಜೀವನೋಪಾಯದ ಮೇಲೆ ಆಗಬಹುದಾದ ಹೊರೆಯನ್ನು ಇಳಿಸಲು ಕೇಂದ್ರ ಸರಕಾರ ನೂತನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ಕೆಲವು ಅಗತ್ಯ ಸೇವೆಗಳು ಹಾಗೂ ವ್ಯಾಪಾರ ಚಟುವಟಿಕೆಗಳು ಮುಂದಿನ ದಿನಗಳಲ್ಲಿ ಮುಕ್ತವಾಗಲಿವೆ.

ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಿರುವ ಸನ್ನಿವೇಶ ಎಂದರೆ, ನಾವು ಕೋವಿಡ್‌-19ನ್ನು ಪೂರ್ತಿಯಾಗಿ ಮಣಿಸಿಲ್ಲ. ಅದು ತೆರೆಮರೆಯಲ್ಲಿ ಹೊಂಚು ಹಾಕುತ್ತಿದ್ದು, ನಾವು ಸಾಮಾಜಿಕ ಅಂತರವನ್ನು ಮರೆತು ಹೊರಗೆ ಬರುವುದನೆ್ನೕ ಕಾಯುತ್ತಿದೆ ಎಂಬುದು ನಮಗೆ ನೆನಪಿರಬೇಕು. ಅದಕ್ಕಾಗಿಯೇ ಹಿರಿಯ ವೈದ್ಯಕೀಯ ತಜ್ಞರು, ಲಾಕ್‌ಡೌನ್‌ ತೆಗೆಯುವ ಮುನ್ನ ಆರೋಗ್ಯ ಸೇವೆಗಳನ್ನು ಸಂಪೂರ್ಣ ಸುಸಜ್ಜಿತಗೊಳಿಸಿಕೊಳ್ಳಿ; ಯಾಕೆಂದರೆ ಲಾಕ್‌ಡೌನ್‌ ತೆರವು ಮಾಡಿದ ಕೂಡಲೇ ಕೊರೊನಾ ಮರುದಾಳಿ ಮಾಡುವ ಸಂಭವವಿದೆ ಎಂದಿದ್ದರು. ಆರೋಗ್ಯ ಸೇವೆಯನ್ನು ವಿಸ್ತರಿಸಲು ಸರಕಾರ ತನ್ನಿಂದಾದ ಪ್ರಯತ್ನ ಮಾಡುತ್ತಲೇ ಇದೆ. ಆದರೆ ಕೋವಿಡ್‌ ಹರಡುವಿಕೆಯನ್ನು ತಡೆಯುವಲ್ಲಿ ಮುಂದಿನ ದಿನಗಳಲ್ಲಿ ಮಹತ್ವ ಪಡೆಯಲಿರುವುದು ಪ್ರಜೆಗಳ ನಡವಳಿಕೆ. ಲಾಕ್‌ಡೌನ್‌ ಇರುವಾಗಲೇ ಅದನ್ನು ಉಲ್ಲಂಘಿಸಲು ಚಡಪಡಿಸುವ ಜನ, ತುಸು ಸಡಿಲಿಸಿದರೆ ಏನು ಮಾಡಬಹುದು ಎಂಬುದನ್ನು ಈಗಲೇ ಊಹಿಸಿಕೊಳ್ಳಬಹುದು.

ಲಾಕ್‌ಡೌನ್‌ ಸಡಿಲಿಸಲಾಗಿದೆ ಎಂದ ಮಾತ್ರಕ್ಕೆ ಬೇಕಾಬಿಟ್ಟಿ ಬೀದಿಗಳಲ್ಲಿ ತಿರುಗಾಡಬಹುದು ಎಂದರ್ಥವಲ್ಲ. ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದರೆ, ಅವಿತು ಕೂತ ವೈರಾಣುಗಳು ಮಾನವ ದೇಹವನ್ನು ಆಕ್ರಮಿಸಿಕೊಳ್ಳಬಹುದು. ನಮ್ಮ ಉಡಾಫೆ ಇನ್ನೊಬ್ಬರ ಜೀವವನ್ನೂ ತೆಗೆಯಬಹುದು. ಸಡಿಲಿಕೆಯನ್ನು ದುರ್ಬಳಕೆ ಮಾಡಿಕೊಳ್ಳದಿರುವುದು, ತುರ್ತು ಮತ್ತು ಅಗತ್ಯ ಸೇವೆಗಳಿಗಾಗಿ ಮಾತ್ರ ಖಾಸಗಿ ವಾಹನಗಳನ್ನು ಬಳಸುವುದು, ಗುಂಪು ಸೇರದಿರುವುದು, ಪಡಿತರ, ಆಹಾರ ಪದಾರ್ಥ, ದಿನಸಿ ಅಂಗಡಿಗಳಲ್ಲಿ ನೂಕುನುಗ್ಗಲು ಮಾಡದಿರುವುದು, ಅಗತ್ಯವಾದಲ್ಲಿ ಮಾತ್ರ ಆಸ್ಪತ್ರೆಗಳಿಗೆ ಭೇಟಿ ನೀಡುವುದು, ಸಾರ್ವಜನಿಕ- ಸರಕಾರಿ ಸೇವೆಗಳನ್ನು ಅಗತ್ಯಕ್ಕೆ ತಕ್ಕಷ್ಟು ಬಳಸಿಕೊಳ್ಳುವುದು, ಸರಕಾರ ಸೂಚಿಸಿದ ಕಚೇರಿಗಳನ್ನು ಮಾತ್ರ ತೆರೆಯುವುದು ಹಾಗೂ ಉಳಿದವರು ಮನೆಯಿಂದಲೇ ಕೆಲಸ ಮಾಡುವುದು, ಸೋಂಕಿತರು ಹಾಗೂ ಶಂಕಿತರು ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುವುದು- ಇವೆಲ್ಲ ಯಥಾಸ್ಥಿತಿಯಲ್ಲಿ ಮುಂದುವರಿಯುವುದು ಅಗತ್ಯ.

​​ಈ ಲಾಕ್‌ಡೌನ್‌ ಹಾಗೂ ನಿರ್ಬಂಧಗಳಿರುವುದು ನಮ್ಮದೇ ಅಮೂಲ್ಯ ಜೀವಗಳ ರಕ್ಷಣೆಗಾಗಿ ಎಂಬ ಪ್ರಜ್ಞೆ ನಮಗಿರಬೇಕು. ಇದನ್ನು ಈಗ ಸರಿಯಾಗಿ ಪಾಲಿಸಿದರೆ, ಬರಲಿರುವ ಮುಂದಿನ ದಿನಗಳು ಸೋಂಕುಮುಕ್ತ ಹಾಗೂ ಆರೋಗ್ಯಯುತವಾಗಿರುವುದರಲ್ಲಿ ಸಂದೇಹವಿಲ್ಲ. ಆದರೆ ಭವಿಷ್ಯದ ಸುಖದ ದಿನಗಳು ಈಗ ನಮ್ಮಿಂದ ಏಕಾಂತ ಹಾಗೂ ತುಸು ಸಂಕಷ್ಟದ ಕಂದಾಯವನ್ನು ಕೇಳುತ್ತಿವೆ. ಈ ನಿರ್ಬಂಧದ ಸ್ಥಿತಿ ಶಾಶ್ವತವಾಗಿ ಮುಂದುವರಿಯಲು ಸಾಧ್ಯವಿಲ್ಲ. ಇದೆಲ್ಲ ಮುಕ್ತವಾಗಿ ವ್ಯಾಪಾರ ವಹಿವಾಟುಗಳು ಎಂದಿನಂತೆ ಚುರುಕಾಗಲೇಬೇಕು. ಆದರೆ ಸೋಂಕು ಪ್ರಕರಣಗಳು ಇಳಿಮುಖಗೊಳ್ಳುವ ಲಕ್ಷಣ ಕಾಣದಿದ್ದರೆ ಲಾಕ್‌ಡೌನ್‌ ಅನಿರ್ದಿಷ್ಟಾವಧಿಗೆ ಮುಂದುವರಿಸುವುದು ಸರಕಾರಕ್ಕೆ ಅನಿವಾರ‍್ಯವಾದೀತು. ಅಂಥ ಸ್ಥಿತಿಯನ್ನು ನಾವಾಗಿ ತಂದುಕೊಳ್ಳುವುದು ಬೇಡ. ಜವಾಬ್ದಾರಿಯುತ ಪ್ರಜೆ ಎಂಬ ಮಾತಿಗೆ ಅರ್ಥ ಬರುವಂತೆ ನಡೆದುಕೊಳ್ಳೋಣ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top