– ಭಾರತ ಒತ್ತಡಕ್ಕೆ ಮಣಿದ ಡ್ರ್ಯಾಗನ್
– ದೋವಲ್-ವಾಂಗ್ ಮಾತುಕತೆ ಯಶಸ್ವಿ.
ಹೊಸದಿಲ್ಲಿ: ಭಾರತದ ಹಲವು ಬಗೆಯ ಒತ್ತಡ ಹಾಗೂ ಅಂತಾರಾಷ್ಟ್ರೀಯ ಸಮುದಾಯದ ಎಚ್ಚರಿಕೆಗೆ ಮಣಿದ ಚೀನಾವು ಗಲ್ವಾನ್ ಕಣಿವೆಯಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದೆ. ಇದರಿಂದಾಗಿ ಎರಡು ತಿಂಗಳಿಂದ ಕದನ ಭೀತಿಯಿಂದ ಕುದಿಯುತ್ತಿದ್ದ ವಾಸ್ತವ ಗಡಿ ನಿಯಂತ್ರಣ ರೇಖೆಯ ಗಲ್ವಾನ್ ವ್ಯಾಲಿ ಶಾಂತವಾಗುವ ಲಕ್ಷಣಗಳು ಗೋಚರಿಸಿವೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಜತೆ ದೂರವಾಣಿ ಸುಮಾರು ಎರಡು ಗಂಟೆ ಕಾಲ ಮಾತುಕತೆ ನಡೆಸಿದ ಬಳಿಕ ಚಿತ್ರಣ ದಿಢೀರ್ ಬದಲಾಯಿತು. ವಿವಾದಗ್ರಸ್ಥ ಗಲ್ವಾನ್, ಹಾಟ್ ಸ್ಟ್ರಿಂಗ್ಸ್ ಮತ್ತು ಗೋಗ್ರಾ ಮುಂಚೂಣಿ ನೆಲೆಗಳಿಂದ ಚೀನಾ ಸೇನಾ ಪಡೆಗಳು 1.5 ಕಿ.ಮೀ ಹಿಂದಕ್ಕೆ ಸರಿದಿದ್ದು, ಪರಿಸ್ಥಿತಿ ತಿಳಿಗೊಳ್ಳಲು ಅನುವು ಮಾಡಿಕೊಟ್ಟಿದೆ. ಭಾರತೀಯ ಸೇನಾ ಪಡೆಗಳು ಕೂಡ ಗಲ್ವಾನ್ ವ್ಯಾಲಿಯಿಂದ ವಾಪಸಾಗತೊಡಗಿವೆ. ಲಡಾಖ್ ಗಡಿ ಭಾಗದಲ್ಲಿ ಹಿಮ ಬೀಳುತ್ತಿರುವ ಪ್ರತಿಕೂಲ ವಾತಾವರಣವೂ ಚೀನಾ ಗಡಿಯಿಂದ ಹಿಂದೆ ಸರಿಯಲು ಇನ್ನೊಂದು ಕಾರಣವಾಗಿದೆ ಎನ್ನಲಾಗಿದೆ.
ಜೂನ್ 15ರ ಹಿಂಸಾತ್ಮಕ ಸಂಘರ್ಷದ ಬಳಿಕ ಚೀನಾ ಪಡೆಗಳು ಭಾರಿ ಸಂಖ್ಯೆಯಲ್ಲಿ ಎಲ್ಎಸಿಯತ್ತ ಧಾವಿಸಿ ಬಿಡಾರ ಹೂಡಿದ್ದವು. ಇದಕ್ಕೆ ಪ್ರತಿಯಾಗಿ ಭಾರತೀಯ ಪಡೆಗಳು ಕೂಡ ಗಲ್ವಾನ್ ನದಿ ತಟದಲ್ಲಿ ಬೀಡುಬಿಟ್ಟಿದ್ದವು. ಪರಿಸ್ಥಿತಿ ನಿಯಂತ್ರಣಕ್ಕೆ ಉಭಯ ದೇಶಗಳ ನಡುವೆ ಮೂರು ಸುತ್ತಿನ ಮಿಲಿಟರಿ ಮಟ್ಟದ ಮಾತುಕತೆಗಳು ನಡೆದಿದ್ದವು. ಮಾತುಕತೆಯ ಸ್ಪಷ್ಟ ಇಂಗಿತ ಸೇನಾ ವಾಪಸಾತಿಯೇ ಆಗಿತ್ತು. ಇದರ ಮೊದಲ ಫಲಿತಾಂಶ ಸೋಮವಾರ ಕಾಣಿಸಿಕೊಂಡಿದೆ.
ದೋವಲ್ ಧಮಾಕಾ
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾ ವಿದೇಶಾಂಗ ಸಚಿವರು ಉದ್ವಿಗ್ನ ಶಮನ ಸೂತ್ರಗಳ ಚರ್ಚೆ ನಡೆಸಿದರು. ಮಿಲಿಟರಿ ಮಟ್ಟದ ಅಪೂರ್ಣ ಮಾತುಕತೆ ವೇಳೆ ತೆಗೆದುಕೊಂಡ ತೀರ್ಮಾನಗಳಿಗೆ ಪರಸ್ಪರ ಗೌರವ ನೀಡುವುದು ಮುಖ್ಯ, ಸೇನೆ ವಾಪಸಾತಿ ಇಲ್ಲದೇ ರಾಜತಾಂತ್ರಿಕ ಮಟ್ಟದಲ್ಲಿ ಶಾಂತಿ ಮಾತುಕತೆ ಆರಂಭವಾಗುವುದು ಅಸಾಧ್ಯ ಎನ್ನುವುದನ್ನು ದೋವಲ್ ಪ್ರತಿಪಾದಿಸಿದರು. ವಾಂಗ್ ತಕರಾರಿಲ್ಲದೇ ಸಮ್ಮತಿಸಿದರು.
ಟೆಂಟ್ ತೆರವು
ಅತ್ಯಂತ ನಾಜೂಕಿನ ನೆಲೆಗಳೆಂದು ಗುರುತಿಸಲಾದ ಗಡಿ ಮುಂಚೂಣಿಯ 14ನೇ ಪೆಟ್ರೋಲಿಂಗ್ ಪಾಯಿಂಟ್‌ನಲ್ಲಿ ಚೀನಾ ತನ್ನ ಟೆಂಟ್ ತೆರವುಗೊಳಿಸಿದೆ. ಚೀನಿ ಪಡೆಗಳು ಇಲ್ಲಿಂದ ವಾಪಸಾಗಿವೆ. ಗಲ್ವಾನ್, ಹಾಟ್ಸ್ಟ್ರಿಂಗ್ಸ್ ಮತ್ತು ಗೋಗ್ರಾ ಪೋಸ್ಟ್‌ನಿಂದಲೂ ಸೇನೆ ಹಾಗೂ ವಾಹನಗಳು ತೆರಳುತ್ತಿರುವ ದೃಶ್ಯಗಳು ಗೋಚರಿಸಿವೆ. ಆದರೂ ಗಲ್ವಾನ್ ನದಿ ವಲಯದ ಒಳಪ್ರದೇಶಗಳಲ್ಲಿ ಇನ್ನು ಕೆಲವು ಬೃಹತ್ ಯುದ್ಧ ಟ್ಯಾಂಕರ್ಗಳು ಉಳಿದಿವೆ. ಇದೆಲ್ಲವನ್ನು ಭಾರತ ಎಚ್ಚರದಿಂದಲೇ ಗಮನಿಸುತ್ತಿದೆ.
10 ದಿನ ಗಡುವು
ಸೇನಾ ಪಡೆಗಳ ಸಂಪೂರ್ಣ ವಾಪಸಾತಿಗೆ ಉಭಯ ದೇಶಗಳು 10 ದಿನಗಳ ಗಡುವು ವಿಧಿಸಿಕೊಂಡಿವೆ. ಚೀನಾ ತನ್ನ ಮಾತಿಗೆ ಅನುಗುಣವಾಗಿ ನಡೆದುಕೊಂಡಿದೆಯೇ ಎನ್ನುವುದರ ಕುರಿತು ಭಾರತೀಯ ಸೇನೆ ಹದ್ದಿನ ಕಣ್ಣಿಡಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಮಾತುಕತೆ ಮುಖ್ಯಾಂಶ
– ಗಲ್ವಾನ್ ವ್ಯಾಲಿ ಸೇರಿ ಎಲ್ಎಸಿಯಿಂದ ಸೇನೆಗಳು ಸಂಪೂರ್ಣ ಮರಳಬೇಕು.
– ಭವಿಷ್ಯದಲ್ಲಿ ಮಾರಾಮಾರಿ ತಡೆಗೆ ಭಾರತ-ಚೀನಾ ಪಡೆಗಳ ನಡುವೆ ಬಫರ್ ಝೋನ್ ನಿರ್ಮಾಣ
– ಭೌಗೋಳಿಕ ಸಾರ್ವಭೌಮತೆಯನ್ನು ಪರಸ್ಪರ ಗೌರವಿಸಬೇಕು, ಗಡಿಯಲ್ಲಿ ಶಾಂತಿ ನೆಲೆಸಲು ಕ್ರಮ
– ಗಡಿ ವ್ಯವಹಾರಗಳ ಸಮನ್ವಯ ಕಾರ್ಯತಂತ್ರ ಅನುಸಾರ ಉಭಯ ದೇಶಗಳ ಸೇನಾಧಿಕಾರಿಗಳ ನಡುವೆ ಮಾತುಕತೆ
ಚೀನಾ ಮೇಲೆ ಒತ್ತಡ ಬಿದ್ದಿದ್ದು ಹೇಗೆ?
– ಚೀನಾ ವಸ್ತುಗಳ ವಿರುದ್ಧ ಭಾರತೀಯರ ವ್ಯಾಪಕ ಅಭಿಯಾನ
– ರೈಲ್ವೆ, ರಸ್ತೆ ನಿರ್ಮಾಣ ಯೋಜನೆಗಳಲ್ಲಿ ಚೀನಿ ಹೂಡಿಕೆಗೆ ಭಾರತದ ಕಡಿವಾಣ
– ಟಿಕ್‌ಟಾಕ್, ಶೇರ್ ಇಟ್ ಸೇರಿ 59 ಚೀನಿ ಆ್ಯಪ್‌ಗಳಿಗೆ ನಿಷೇಧ
– ಭಾರತ ನೀಡಿದ ದಿಟ್ಟ ಪ್ರತ್ಯುತ್ತರ, ಅಂತರಾಷ್ಟ್ರೀಯ ಸಮುದಾಯದ ಎಚ್ಚರಿಕೆ