ನೀಚ ತಂತ್ರದ ಮೊರೆ ಹೋದ ಚೀನಾ

– ಗುಂಡೇಟಿನ ಬದಲು ಕಲ್ಲೇಟಿನ ತಂತ್ರ ಬಳಕೆ | ದೊಣ್ಣೆ, ತಂತಿಗಳಿಂದ ಸುತ್ತಿದ ಬಾಲ್ ಸಹ ಚೀನೀಯರ ಅಸ್ತ್ರ!

ಹೊಸದಿಲ್ಲಿ: ಚೀನಾ ಸೇನೆ ಇತ್ತೀಚಿನ ದಿನಗಳಲ್ಲಿ ಭಾರತೀಯ ಪಡೆಗಳ ಮೇಲೆ ಆಕ್ರಮಣ ನಡೆಸಲು ನೈತಿಕತೆ ಮರೆತು ಉಗ್ರರಂತೆ ಕೀಳುಮಟ್ಟದ ತಂತ್ರಗಾರಿಕೆಗಳನ್ನು ಬಳಸುತ್ತಿದೆ.
ಕಳೆದ ತಿಂಗಳು ಸಿಕ್ಕಿಂ ಗಡಿಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಮಾರಾಮಾರಿಯಾದಾಗಲೂ ಕಲ್ಲು, ದೊಣ್ಣೆಗಳನ್ನು ಬಳಸಲಾಗಿತ್ತು. ಸೋಮವಾರ ರಾತ್ರಿ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿಯೂ ಒಂದೇ ಒಂದು ಗುಂಡು ಹಾರಿಲ್ಲ. ಬದಲಿಗೆ ಕಲ್ಲು ತೂರಾಟ ನಡೆಸಲಾಗಿದೆ. ಚೀನಾ ಯೋಧರು ಶಸ್ತ್ರಾಸ್ತ್ರಗಳ ಜತೆಗೆ ಕಲ್ಲು, ವೈರ್‌ಗಳಿಂದ ಸುತ್ತಿದ ಬಾಲ್ ಹಾಗೂ ದೊಣ್ಣೆಗಳನ್ನು ಕೊಂಡೊಯ್ಯುತ್ತಾರೆ. ಅವುಗಳಿಂದಲೇ ಭಾರತದ ಸೈನಿಕರ ಮೇಲೆ ಆಕ್ರಮಣ ಮಾಡುತ್ತಾರೆ. ಇದು ಚೀನಾ ಸೇನೆಯ ಹೊಸ ತಂತ್ರವೂ ಹೌದು. ಹೊಸ ಬಗೆಯ ‘ಸಮರ’ದಲ್ಲಿಯೂ ಭಾರತೀಯ ಯೋಧರು ಚೀನಾ ಸೇನೆಗೆ ಪ್ರತ್ಯುತ್ತರ ನೀಡುತ್ತಿದ್ದಾರೆ.
ಕಮ್ಯೂನಿಸ್ಟ್ ರಾಷ್ಟ್ರ ಚೀನಾ ಮೊದಲಿನಿಂದಲೂ ಭಾರತದ ಗಡಿಯಲ್ಲಿ ಭಾರಿ ಸಂಖ್ಯೆಯಲ್ಲಿ ಯೋಧರು ಹಾಗೂ ಸೇನಾ ಉಪಕರಣಗಳನ್ನು ನಿಯೋಜಿಸುತ್ತದೆ. ಈಗ ಯುದ್ಧ ನೀತಿಯಲ್ಲಿ ಅದು ಅನೈತಿಕ ಮಾರ್ಗಗಳನ್ನು ಬಳಸಿಕೊಳ್ಳುತ್ತಿದೆ. ಗಲ್ವಾನ್‌‌ನಲ್ಲಿ ತೋರಿದ ವರ್ತನೆ ಇದನ್ನು ಸಾಬೀತುಪಡಿಸಿದೆ.
ಕಳೆದ ಒಂದೂವರೆ ತಿಂಗಳಿಂದ ಭುಗಿಲೆದ್ದ ಸಂಘರ್ಷದ ವೇಳೆ ಲಡಾಖ್, ಸಿಕ್ಕಿಂ, ಅರುಣಾಚಲ ಪ್ರದೇಶದ ಸೆಕ್ಟರ್‌ಗಳಲ್ಲಿ  ಚೀನಾ 5000ಕ್ಕೂ ಹೆಚ್ಚು ಯೋಧರು ನಿಯೋಜಿಸಿತ್ತು. ಪೂರ್ವ ಲಡಾಖ್‌ನಲ್ಲಿ ಈಗ ಅದು ಭಾರಿ ಸಂಖ್ಯೆಯಲ್ಲಿ ಯೋಧರನ್ನು ಹಿಂಪಡೆದಿದ್ದರೂ ಸಂಘರ್ಷದ ಮನೋಭಾವ ಬಿಟ್ಟಿಲ್ಲ.

ನೀತಿ ಬದಲಾಗಲಿ
ಭಾರತೀಯ ನಿವೃತ್ತ ಸೇನಾಧಿಕಾರಿಗಳು ಭಾರತದ ಸೇನಾ ನೀತಿಯಲ್ಲಿಯೂ ಬದಲಾವಣೆ ಆಗಬೇಕೆಂದು ಆಗ್ರಹಿಸಿದ್ದಾರೆ. ‘‘ಭಾರತೀಯ ಯೋಧರು ಸಣ್ಣ ಕತ್ತಿ ಒಯ್ಯಲೂ ಅವಕಾಶವಿಲ್ಲ. ಚೀನಾದ ಸಮರ ನೀತಿ ನೋಡಿಯಾದರೂ ನಮ್ಮ ನೀತಿಯಲ್ಲಿ ಬದಲಾವಣೆ ಆಗಬೇಕು,’’ ಎಂದು ಒತ್ತಾಯಿಸಿದ್ದಾರೆ.

ಚೀನಾಗೇಕೆ ಮುನಿಸು?
ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತವು ರಸ್ತೆ ಹಾಗೂ ಏರ್‌ಸ್ಟ್ರಿಪ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಚೀನಾ ಗಡಿ ಭಾಗಕ್ಕೆ ಹೊಂದಿಕೊಂಡಂತೆ 66 ಪ್ರಮುಖ ರಸ್ತೆಗಳ ನಿರ್ಮಾಣ ಯೋಜನೆಯನ್ನು 2022ರ ಹೊತ್ತಿಗೆ ಪೂರ್ಣಗೊಳಿಸಲು ಭಾರತ ಕಾಮಗಾರಿ ತ್ವರಿತಗೊಳಿಸಿದೆ. ಚೀನಾ ಹಾಗೂ ಪಾಕಿಸ್ತಾನ ಒಟ್ಟಿಗೇ ಭಾರತದ ಮೇಲೆ ದಾಳಿಗೆ ಮುಂದಾದಲ್ಲಿ ಗಡಿಭಾಗದಲ್ಲಿ ಸೇನಾ ಉಪಕರಣಗಳ ಸಾಗಣೆಗೆ ಅನುಕೂಲವಾಗುವ ವ್ಯೂಹಾತ್ಮಕ ಯೋಜನೆ ಇದಾಗಿದೆ. ಹೀಗಾಗಿಯೇ ಚೀನಾ ತಕರಾರು ತೆಗೆದು ಅತಿರೇಕದ ವರ್ತನೆ ತೋರುತ್ತಿದೆ.

ಸೇನಾ ಮುಖ್ಯಸ್ಥರ ಜತೆ ರಾಜನಾಥ್ ತುರ್ತು ಸಭೆ
ಚೀನಾ ಜತೆಗಿನ ಗಡಿ ಸಂಘರ್ಷ ತೀವ್ರಗೊಂಡ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ಭೂಸೇನೆ, ವಾಯುಪಡೆ, ನೌಕಾಪಡೆಯ ಮುಖ್ಯಸ್ಥರ ಜತೆ ತುರ್ತು ಸಭೆ ನಡೆಸಿದರು. ಸೋಮವಾರದ ಸಂಘರ್ಷದ ಕುರಿತು ಮಾಹಿತಿ ಪಡೆದುಕೊಂಡ ಅವರು, ಗಡಿ ಸುರಕ್ಷತೆ ಜತೆಗೆ ಶಾಂತಿ ನೆಲೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಜತೆಗೂ ರಾಜನಾಥ್ ಸಮಾಲೋಚನೆ ನಡೆಸಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ರಕ್ಷಣಾ ಸಚಿವರು ಪರಿಸ್ಥಿತಿಯ ಕುರಿತು ಸಮಗ್ರ ಮಾಹಿತಿ ನೀಡಿದರು. ಭೂಸೇನೆ ಮುಖ್ಯಸ್ಥ ಜನರಲ್ ಮುಕುಂದ್ ನರವಾಣೆ ಅವರು ಮಂಗಳವಾರ ಜಮ್ಮು-ಕಾಶ್ಮೀರದ ಪಠಾಣ್‌ಕೋಟ್‌ಗೆ ಭೇಟಿ ನೀಡಬೇಕಿತ್ತು. ಚೀನಾ ಸಂಘರ್ಷದ ಹಿನ್ನೆಲೆಯಲ್ಲಿ ಈ ಭೇಟಿ ರದ್ದುಪಡಿಸಿದರು.

ಲಡಾಖ್ ಗಡಿ ಸಂಘರ್ಷದ ಹಾದಿ
ಅರುಣಾಚಲ ಪ್ರದೇಶ, ಸಿಕ್ಕಿಂಗೆ ಸೀಮಿತವಾಗಿದ್ದ ಗಡಿ ತಂಟೆಯನ್ನು ಚೀನಾ ಈ ಸಲ ಜಮ್ಮು-ಕಾಶ್ಮೀರದ ಪೂರ್ವ ಲಡಾಖ್‌ನಲ್ಲಿ ಆರಂಭಿಸಿದೆ. ಎರಡೂವರೆ ತಿಂಗಳಿನಿಂದ ಇಲ್ಲಿ ಸಂಘರ್ಷ ಆರಂಭವಾಗಿದೆ.
ಮೇ 5: ಲಡಾಖ್‌ನ ಪ್ಯಾಂಗೊಂಗ್ ತ್ಸೋ ಮತ್ತು ಉತ್ತರ ಸಿಕ್ಕಿಂನ ನಾಕು ಲಾ ಬಳಿ ಉಭಯ ಸೇನೆಗಳಿಂದ ಆಕ್ರಮಣ. ಎರಡೂ ಕಡೆ ಯೋಧರಿಗೆ ಗಾಯ.
ಮೇ 6: ಭಾರತದ ರಸ್ತೆ ನಿರ್ಮಾಣ ಯೋಜನೆಗೆ ಚೀನಾ ಆಕ್ಷೇಪ. ಪಾಂಗೊಂಗ್ ತ್ಸೋ ಗಡಿ ಭಾಗದಲ್ಲಿ ಕಾಮಗಾರಿಗೆ ನಿರ್ಬಂಧ. ಸಂಘರ್ಷ ಬಳಿಕ ಉಭಯ ಸೇನೆಗಳಿಂದ ಹೆಚ್ಚುವರಿ ಯೋಧರ ನಿಯೋಜನೆ.
ಮೇ 12: ಎಲ್ಒಸಿಗೆ ಹತ್ತಿರದ ಪ್ರದೇಶಗಳಲ್ಲಿ ಚೀನಾ ಸೇನಾ ಹೆಲಿಕಾಪ್ಟರ್‌ಗಳ ಹಾರಾಟ ಗುರುತಿಸಿದ ಭಾರತೀಯ ಸೇನೆ. ಸುಖೋಯ್-30 ಯುದ್ಧ ವಿಮಾನದ ಮೂಲಕ ಭಾರತ ಕಣ್ಗಾವಲು. ಹೆಚ್ಚುವರಿ ಸೇನೆ ನಿಯೋಜನೆ.
ಮೇ 23: ಲೇಹ್‌ನ 14 ಕಾರ್ಫ್ಸ್ ಕೇಂದ್ರ ಕಚೇರಿಗೆ ಸೇನಾ ಮುಖ್ಯಸ್ಥ ಜನರಲ್ ನರವಾಣೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ.
ಮೇ 26: 20 ದಿನಗಳಿಂದ ಪಾಂಗೊಂಗ್ ತ್ಸೋ, ಗಲ್ವಾನ್ ಕಣಿವೆ, ದೆಮ್ಚೋಕ್ ಮತ್ತು ದೌಲತ್ ಬೇಗ್ ಒಲ್ದಿಯಲ್ಲಿನ ಬಿಕ್ಕಟ್ಟು ಪರಿಸ್ಥಿತಿ ಕುರಿತು ಮೇಜರ್ ಜನರಲ್ ಮಟ್ಟದ ನಾಲ್ವರು ಅಧಿಕಾರಿಗಳಿಂದ ರಕ್ಷಣಾ ಸಚಿವರಿಗೆ ವಿವರಣೆ. ಬಳಿಕ ಪ್ರಧಾನಿ ಮೋದಿ ಅವರಿಗೆ ವಸ್ತುಸ್ಥಿತಿ ವಿವರಣೆ.
ಮೇ 27: ತಮ್ಮ ದೇಶದ ಸಾರ್ವಭೌಮತೆ ಕಾಪಾಡಲು ಯುದ್ಧಕ್ಕೆ ಸನ್ನದ್ಧವಾಗುವಂತೆ ಸೇನೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಆದೇಶ.
ಜೂನ್ 1: ಗಡಿಯಲ್ಲಿನ ಪರಿಸ್ಥಿತಿ ಸ್ಥಿರವಾಗಿದೆ ಮತ್ತು ನಿಯಂತ್ರಣದಲ್ಲಿದೆ ಎಂದು ಹೇಳಿಕೆ ನೀಡಿದ ಚೀನಾ. ಪೂರ್ವ ಲಡಾಖ್‌ನಲ್ಲಿ 10-12 ಯುದ್ಧ ವಿಮಾನಗಳಿಂದ ಭಾರತದ ಗಡಿ ಚಟುವಟಿಕೆಗಳ ಮೇಲೆ ಕಣ್ಗಾವಲು.
ಜೂನ್ 2: ಬಿಕ್ಕಟ್ಟು ಶಮನಗೊಳಿಸಲು ಮೇಜರ್ ಜನರಲ್ ಮಟ್ಟದ ಅಧಿಕಾರಿಗಳ ಮತ್ತೊಂದು ಸುತ್ತಿನ ಸಭೆ ವಿಫಲ.
ಜೂನ್ 6: ಪರಿಸ್ಥಿತಿ ತಿಳಿಗೊಳಿಸಲು ಮತ್ತೆ ಪ್ರಯತ್ನ. ಲೇಹ್‌ನ 14ನೇ ಕ್ರಾರ್ಪ್ಸ್‌ನ ಲೆ.ಜನರಲ್ ಹರಿಂಧರ್ ಸಿಂಗ್ ಮತ್ತು ಚೀನಾದ ಮೇಜರ್ ಜನರಲ್ ಲಿಯು ಲಿನ್ ಸುದೀರ್ಘ ಮಾತುಕತೆ. ಬಳಿಕ ಎರಡೂ ಕಡೆ ಸೇನೆ ಹಿಂಪಡೆಯಲು ಚಾಲನೆ.
ಜೂ. 13: ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸರಣಿ ಸಭೆಗಳ ಬಳಿಕ ಗಡಿ ಬಿಕ್ಕಟ್ಟು ಪೂರ್ಣ ಶಾಂತಗೊಳ್ಳಲಿದೆ ಎಂದ ಸೇನಾ ಮುಖ್ಯಸ್ಥ ನರವಾಣೆ.
ಜೂ. 15: ಗಲ್ವಾನ್ ಕಣಿವೆಯಲ್ಲಿ ಚೀನಿ ಯೋಧರಿಂದ ಗಡಿ ಅತಿಕ್ರಮಣ. ಸಂಘರ್ಷದಲ್ಲಿ ಮೂವರು ಭಾರತದ ಯೋಧರು ಹುತಾತ್ಮ. ಐವರು ಚೀನಿ ಯೋಧರು ಬಲಿ.

ಭಾರತ ಈಗ ಪ್ರಬಲ ರಾಜಕೀಯ ಇಚ್ಛಾಶಕ್ತಿ ಹೊಂದಿದೆ ಮತ್ತು ಸೇನೆ ಸಹ ಯಾವುದೇ ಪರಿಸ್ಥಿತಿ ಎದುರಿಸಲು ಸಮರ್ಥವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದೇಶದ ಗಡಿಗಳು ಸುಭದ್ರವಾಗಿವೆ.
– ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ

ಲಡಾಖ್‌ನಲ್ಲಿ ಉದ್ವಿಗ್ನತೆ ಶಮನಗೊಳಿಸಲು ಚೀನಾ ಮಾತುಕತೆಗೆ ಮುಂದಾಗಬೇಕು. ವಾಸ್ತವ ಸ್ಥಿತಿ ಏನು ಎನ್ನುವುದರ ಬಗ್ಗೆ ಕೇಂದ್ರ ಸರಕಾರವು ಅಧಿಕೃತ ಹೇಳಿಕೆ ನೀಡಬೇಕು.
– ಸಿಪಿಐ ಮತ್ತು ಸಿಪಿಐ(ಎಂ)

ಗಡಿಯಲ್ಲಿ ಭಾರತ-ಚೀನಾ ಸಂಘರ್ಷ ನೋವಿನ ಸಂಗತಿ. ಕೇಂದ್ರ ಸರಕಾರ ದೇಶದ ಜನತೆಗೆ ವಾಸ್ತವ ತಿಳಿಸಬೇಕು ಮತ್ತು ಸೇನೆ ಹಿಂತೆಗೆತದ ಸಂದರ್ಭದಲ್ಲಿ ನಮ್ಮ ಮೂವರು ಯೋಧರ ಹತ್ಯೆ ನಡೆದದ್ದು ಹೇಗೆ ಎಂಬ ಬಗ್ಗೆ ಸರಕಾರ ಮಾಹಿತಿ ನೀಡಬೇಕು.
– ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ಚೀನಾ ನಡೆ ಆಘಾತಕಾರಿ. ಕೇಂದ್ರ ಸರಕಾರವು ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರತಿಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ವಾಸ್ತವ ಚಿತ್ರಣ ನೀಡುವ ಸಲುವಾಗಿ ಸರ್ವಪಕ್ಷ ಸಭೆ ಕರೆಯಬೇಕು.
– ಆನಂದ್ ಶರ್ಮಾ, ಕಾಂಗ್ರೆಸ್ ನಾಯಕ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top