ಬಿಷ್ಣೊಯಿಗಳ ಪರಿಸರಪ್ರೇಮ

– ಸುನೀಲ್‌ ಬಾರ್ಕೂರ್‌. 

ಕೆಲದಿನಗಳ ಹಿಂದಿನ ಮಾತು. ಭಾರತಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದ್ದು ಜನ ಮನೆಗಳಲ್ಲಿಯೇ ಬಂದಿಯಾಗಿರುವ ಸಂದರ್ಭ, ರಾಜಸ್ಥಾನದ ಜೋಧಪುರ ಜೈಸಲ್ಮೇರ್‌ ಹೆದ್ದಾರಿಯ ಭಾಲುರಾಜ್ವಾ ಎಂಬ ಪುಟ್ಟಹಳ್ಳಿಯ ಅರಣ್ಯ ಪ್ರದೇಶಕ್ಕೆ ಮಧ್ಯರಾತ್ರಿಯಲ್ಲಿ ಲಗ್ಗೆಯಿಟ್ಟ ನಾಲ್ಕು ಜನ ಬಂದೂಕುಧಾರಿಗಳ ತಂಡವೊಂದು ಕೃಷ್ಣಮೃಗಗಳನ್ನು ಬೇಟೆಯಾಡಲು ಯಶಸ್ವಿಯಾಯಿತು. ಅಲ್ಲಿಂದ ಅವರು ಕಾಲ್ಗೀಳಲು ಮುಂದಾಗುತ್ತಿದ್ದಾಗ ಹದಿನೇಳು ವರ್ಷದ ಯುವಕನೊಬ್ಬ ಧುತ್ತನೆ ಬಂದು ಅಡ್ಡಲಾಗಿ ನಿಂತ. ಇದನ್ನು ನಿರೀಕ್ಷಿಸದ ತಂಡದಲ್ಲೊಬ್ಬ ಬಂದೂಕು ತೋರಿಸಿದ. ಆ ಯುವಕನೂ ಬಲು ಘಾಟಿಯೇ. ಅವರ ಬಂದೂಕಿನಲ್ಲಿ ಗುಂಡುಗಳು ಖಾಲಿಯಾದುದನ್ನರಿತಿದ್ದ ಆತ ತಕ್ಷಣ ಅದನ್ನು ಕಸಿದುಕೊಂಡು ಖೂಳನ ತಲೆಗೆ ಬಾರಿಸಿದ. ಅಪಾಯವನ್ನರಿತ ಅವರು ಸೇರಿ ಹೇಗೋ ಆ ಬಾಲಕನ ಮೇಲೆ ಪ್ರಹಾರ ಮಾಡಿ ಓಡಿಹೋದರು. ಏಟು ತಿಂದು ನೆಲಕ್ಕೆ ಬಿದ್ದರೂ ಧೃತಿಗೆಡದ ಆ ಬಾಲಕ ತಕ್ಷ ಣ ತನ್ನ ಸ್ನೇಹಿತರಿಗೆ ಫೋನಾಯಿಸಿದ. ಹತ್ತೇ ನಿಮಿಷದಲ್ಲಿ ಆ ಊರಿನ ನೂರಕ್ಕೂ ಹೆಚ್ಚು ಜನ ಜಮಾಯಿಸಿ ಕಾಡನ್ನು ಜಾಲಾಡಿ ಖದೀಮರನ್ನು ಹೆಡೆಮುರಿ ಕಟ್ಟಿ ಅರಣ್ಯ ಇಲಾಖೆಗೊಪ್ಪಿಸಿದರು. ಮರುದಿನ ಈ ಹುಡುಗನ ಪರಾಕ್ರಮದ ವಿಷಯ ಎಲ್ಲೆಡೆ ಹಬ್ಬಿ, ಇನ್ನೂ ಮೀಸೆ ಸರಿಯಾಗಿ ಬಲಿಯದ ಹತ್ತನೆಯ ತರಗತಿಯ ಯುವಕ ಮುಕೇಶ ಬಿಷ್ಣೊಯಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಹವಾ ಸೃಷ್ಟಿಸಿದ. ಆದರೆ ಪರಿಸರವನ್ನು ಅಕ್ಷರಶಃ ಪೂಜಿಸುವ ಬಿಷ್ಣೊಯಿಗಳ ಬಗ್ಗೆ ಅರಿವಿದ್ದವರಿಗೆ ಇದೊಂದು ಆಶ್ಚರ್ಯದ ವಿಷಯವೇನೂ ಅಗಿರಲಿಲ್ಲ.
ಖೇಜಾರ್ಲಿ ರಾಜಸ್ಥಾನದ ಜೋಧಪುರದಿಂದ 27 ಕಿ.ಮೀ. ದೂರದಲ್ಲಿರುವ ಪುಟ್ಟ ಊರು. ಬಿಷ್ಣೊಯಿ ಪಂಗಡದ ಜನರೇ ವಾಸವಾಗಿರುವ ಆ ಊರಿಗೆ ಈ ಹೆಸರು ಬರಲು ಅಲ್ಲಿ ಬೆಳೆಯುವ ಖೇಜರಿ (ಬನ್ನಿ) ಗಿಡಗಳೇ ಕಾರಣ. ಮುನ್ನೂರು ವರ್ಷಗಳ ಹಿಂದೊಂದು ದಿನ ಮಧ್ಯಾಹ್ನ ತನ್ನ ಗುಡಿಸಲಿನಲ್ಲಿದ್ದ ಅಮೃತಾದೇವಿಗೆ ಮರ ಕಡಿಯುವ ಸದ್ದು ಕೇಳಿ ಹೊರಬಂದು ನೋಡಿದಾಗ, ಆಸುಪಾಸಿನಲ್ಲಿ ಸಮೃದ್ಧವಾಗಿ ಬೆಳೆದಿದ್ದ ಮರಗಳ ಕಡಿಯುತ್ತಿದ್ದ ರಾಜಸೈನಿಕರನ್ನು ಕಾಣುತ್ತಾಳೆ. ಅವರು ಮಾರವಾಡದ ರಾಜ ಅಭಯಸಿಂಹನ ಮಂತ್ರಿ ಗಿರಿಧರ ಭಂಡಾರಿಯ ಆದೇಶದಂತೆ ಬಂದ ಸಿಪಾಯಿಗಳೆಂದೂ ಹೊಸ ರಾಜವಾಡೆಗಾಗಿ ಮರ ಕಡಿದು ಸಾಗಿಸಲು ಬಂದಿದ್ದಾರೆಂದೂ ತಿಳಿಯುತ್ತದೆ. ಆಕೆ ಮರ ಕಡಿಯುವುದನ್ನು ನಿಲ್ಲಿಸಲು ಅವರಲ್ಲಿ ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ. ಆದರೆ ಇವಳ ಬಿನ್ನಹಕ್ಕೆ ಕ್ಯಾರೇ ಎನ್ನದೆ ಸಿಪಾಯಿಗಳು ಮುಂದುವರಿಸುತ್ತಾರೆ. ಕೋಪೋದ್ರಿಕ್ತಳಾದ ಆಕೆ ಕಡಿಯುತ್ತಿದ್ದ ಮರವೊಂದನ್ನು ಅಪ್ಪಿಕೊಂಡು ಕಡಿಯುವುದಿದ್ದರೆ ಮೊದಲು ತನ್ನ ತಲೆ ಕಡಿಯಿರೆಂದವರಿಗೆ ಸವಾಲೆಸೆಯುತ್ತಾಳೆ. ಗಲಾಟೆಗೆ ಎಚ್ಚರವಾಗಿ ಹೊರಬಂದು ತಾಯಿಯ ಪ್ರಲಾಪವನ್ನು ನೋಡಿದ ಆಕೆಯ ಮೂರು ಹೆಣ್ಣುಮಕ್ಕಳಾದ ಆಸು, ರತ್ನಿ ಮತ್ತು ಭಾಗೂ ಕೂಡ ಆಕೆಯಂತೆ ಒಂದೊಂದು ಮರ ತಬ್ಬಿಕೊಂಡು ನಿಲ್ಲುತ್ತಾರೆ. ದರ್ಪದಲ್ಲಿ ವಿವೇಚನೆಯನ್ನು ಕಳೆದುಕೊಂಡ ಸಿಪಾಯಿಗಳು ಬೀಸಿದ ಕೊಡಲಿಯೇಟುಗಳು ಆ ನಾಲ್ವರ ರುಂಡಗಳನ್ನು ದೇಹದಿಂದ ಬೇರ್ಪಡಿಸುತ್ತವೆ. ಸೈನಿಕರ ದೌರ್ಜನ್ಯದ ವಿರುದ್ಧ ಅಮೃತಾದೇವಿಯ ಒಂಟಿ ಹೋರಾಟದ ವಿಷಯವನ್ನರಿತ ಇಡೀ ಹಳ್ಳಿಯೇ ಅಲ್ಲಿ ಜಮಾಯಿಸುತ್ತದೆ. ಆ ಭಿಭತ್ಸಸನ್ನಿವೇಶವನ್ನು ಕಂಡು ಹೌಹಾರಿದರೂ ತಮ್ಮೂರಿನ ಹೆಣ್ಮಗಳ ಬಲಿದಾನವನ್ನು ವ್ಯರ್ಥ ಮಾಡಲೊಪ್ಪದ ಬಿಷ್ಣೊಯಿಗಳು ಮರಗಳನ್ನು ಉಳಿಸಿಕೊಳ್ಳಲು ಒಬ್ಬೊಬ್ಬರು ಒಂದೊಂದು ಮರವನ್ನು ಅಪ್ಪಿಕೊಳ್ಳುತ್ತಾರೆ. ರಾಜನ ಆಜ್ಞಾಪಾಲನೆಯನ್ನೊಂದನ್ನೇ ಶಿರಸಾವಹಿಸಿಕೊಂಡ ಸಿಪಾಯಿಗಳು ಈ ಅಮಾಯಕರ ಮೇಲೂ ತಮ್ಮ ಪೌರುಷ ಮೆರೆದು ರುಂಡಗಳನ್ನು ಚೆಂಡಾಡುತ್ತಾರೆ. ರಕ್ತದ ಕೋಡಿಯೇ ಹರಿಯುತ್ತದೆ. ಅದ್ಹೇಗೋ ವಿಷಯ ಮಹಾರಾಜನಿಗೆ ತಲುಪಿ ಆತ ಖೇಜಾರ್ಲಿಗೆ ದೌಡಾಯಿಸುವಷ್ಟರಲ್ಲಿ 363 ಬಿಷ್ಣೊಯಿಗಳ ಮಾರಣಹೋಮ ನಡೆದಿರುತ್ತದೆ. ಕೂಡಲೆ ಈ ಕ್ರೂರಕೃತ್ಯವನ್ನು ನಿಲ್ಲಿಸಿದ ಆತ ಊರಜನರ ಮುಂದೆ ಮಂಡಿಯೂರಿ ಕ್ಷಮೆ ಕೇಳಿ ಆ ಕ್ಷಣದಿಂದಲೇ ಖೇಜಾರ್ಲಿ ಪ್ರದೇಶದಲ್ಲಿ ಮರಗಳ, ಪ್ರಾಣಿಗಳ ಬೇಟೆ ನಿಷಿದ್ಧವೆಂದು ಶಾಸನ ಜಾರಿಗೊಳಿಸುತ್ತಾನೆ. ಅಲ್ಲಿ ಪರಿಸರ ರಕ್ಷ ಣೆಗಾಗಿ ಜೀವತ್ಯಾಗ ಮಾಡಿದವರ ನೆನಪಿನಲ್ಲಿ ಸ್ಮಾರಕವೊಂದು ನಿರ್ಮಾಣಗೊಳ್ಳುತ್ತದೆ. ಅಮೃತಾದೇವಿಯ ಬಲಿದಾನದ ಈ ಗಾಥೆ ಭಾರತದ ಇತಿಹಾಸದ ಪ್ರಪ್ರಥಮ ಪರಿಸರ ರಕ್ಷ ಣೆಯ ಹೋರಾಟವೆಂದೇ ವ್ಯಾಖ್ಯಾನಿಸಲಾಗುತ್ತದೆ. ಎಪ್ಪತ್ತರ ದಶಕದಲ್ಲಿ ದೇಶಾದ್ಯಂತ ಪರಿಸರ ಹೋರಾಟದ ಹೊಸ ಮಜಲನ್ನು ತೆರೆದ ಅಪ್ಪಿಕೋ ಚಳಿವಳಿಯ ಮೂಲ ಸ್ಫೂರ್ತಿಯಿರುವುದು ಖೇಜಾರ್ಲಿಯ ಈ ತ್ಯಾಗದಲ್ಲೇ.
ಪ್ರಕೃತಿಯನ್ನೇ ದೇವರೆಂದು ನಂಬುವ ಬಿಷ್ಣೊಯಿ ಪಂಗಡವನ್ನು ವಿಷ್ಣುದೇವರ ಅವತಾರವೆಂದು ನಂಬಲಾಗುವ ಗುರು ಜಾಂಬೇಶ್ವರರರು ಸುಮಾರು 500 ವರ್ಷಗಳ ಹಿಂದೆ ಸ್ಥಾಪಿಸಿದರು. ರಾಜಪೂತರ ಕುಟುಂಬದಲ್ಲಿ ಜನಿಸಿದರೂ ಅವರ ಚಿತ್ತವೆಲ್ಲ ಪರಿಸರ ಸಂರಕ್ಷಣೆಯಲ್ಲೇ ಇತ್ತು. ಈ ಪಂಗಡದ ಸೂತ್ರ ಕೂಡ ಈ ಮೌಲ್ಯಗಳ ಸುತ್ತವೇ ಸುತ್ತುತ್ತದೆ. ಜೀವನದ 29 ಮೌಲ್ಯಗಳನ್ನು ಪ್ರತಿಪಾದಿಸಿದ ಕಾರಣ ಈ ಪಂಗಡಕ್ಕೆ ಬೀಸ್‌ (20) ನೌಯಿ (9) ಎಂಬ ಹೆಸರು ಬಂದಿದೆ. ಪರಿಸರವಷ್ಟೇ ಅಲ್ಲ ಪ್ರಾಣಿ, ಪಕ್ಷಿಸಂಕುಲವನ್ನೂ ಕಾಪಾಡುವ ಕರ್ತವ್ಯ ಮನುಷ್ಯನದು, ಈ ಭೂಮಿಯ ಮೇಲೆ ಹಕ್ಕು ಮಾನವನಿಗೂ ಸೇರಿದಂತೆ ಯಾರಿಗೂ ಇಲ್ಲವೆಂದು ಪ್ರತಿಪಾದಿಸುವ ರಾಜಸ್ಥಾನದ ಈ ಪಂಗಡ 10 ಲಕ್ಷ ಸಂಖ್ಯೆಯನ್ನು ಹೊಂದಿದೆ. ಇವರ ಈ ನಂಬಿಕೆಯ ಪರಿಣಾಮದಿಂದಲೇ ಇವರು ವಾಸವಾಗಿರುವ ಥಾರ್‌ ಮರುಭೂಮಿಯ ನಡುವೆ ಇರುವ ಜೋಧಪುರದಂತಹ ಪ್ರದೇಶದಲ್ಲೂ ಹಸಿರು ನಳಿನಳಿಸುತ್ತಿದೆ. ಕೃಷ್ಣಮೃಗ, ನವಿಲು, ಹದ್ದುಗಳು, ಸಣ್ಣ ಹುಲ್ಲೆಗಳು, ನೀಲಗಾಯಿಗಳು ಈ ಬಿಷ್ಣೊಯಿಗಳು ನೆಲೆಸಿರುವ ಗ್ರಾಮಗಳಲ್ಲಿ ಸ್ವೇಚ್ಛೆಯಿಂದ ಬಾಳುತ್ತಿವೆ. ಜೋಧಪುರದ ವ್ಯಾಪ್ತಿಯ ಅರಣ್ಯಪ್ರದೇಶದಲ್ಲಿರುವ ಕೃಷ್ಣಮೃಗ ಮತ್ತು ಸಣ್ಣ ಹುಲ್ಲೆಗಳ ಸಂಖ್ಯೆಯು ರಾಜಸ್ಥಾನದಲ್ಲಿರುವ ಇತರೆಲ್ಲ ಅಭಯಾರಣ್ಯಗಳಲ್ಲಿನ ಇವುಗಳ ಸಂಖ್ಯೆಯನ್ನು ಮೀರಿಸುತ್ತದೆಯಂತೆ.
ಬಿಷ್ಣೊಯಿಗಳ ಹೊಸ ಪೀಳಿಗೆ ಸಹ ಪರಿಸರ ಸಂರಕ್ಷಣೆ ಮೌಲ್ಯಗಳನ್ನು ಕಾಪಿಟ್ಟುಕೊಂಡಿರುವುದು ಮೆಚ್ಚತಕ್ಕ ವಿಷಯ. ಹಿರಿಯರಿಂದ ಸ್ಪೂರ್ತಿ ಪಡೆದ ನವತರುಣರು ಪರಿಸರ ರಕ್ಷಣಾ ದಳವನ್ನು ರಚಿಸಿಕೊಂಡಿದ್ದಾರೆ. ಲಾಠಿ ಹಿಡಿದು ಹಗಲು ರಾತ್ರಿ ಇಲ್ಲಿನ ಪರಿಸರವನ್ನು ಕಾವಲು ಕಾಯುವ ಇವರು ತಮ್ಮ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅರಣ್ಯಗಳ್ಳತನ, ಶಿಕಾರಿಗೆ ಆಸ್ಪದ ಕೊಡದೆ ಅರಣ್ಯಗಳ್ಳರನ್ನು ಹಿಡಿದು ಪೋಲಿಸರಿಗೊಪ್ಪಿಸುತ್ತಾರೆ. ಆ ಯುವಕ ಮುಕೇಶ ಬಿಷ್ಣೊಯಿ ಸಹ ಈ ರೀತಿಯ ರಾತ್ರಿಪಾಳಿಯಲ್ಲಿ ಸೇವೆಗೈಯ್ಯುತ್ತಿದ್ದ ಸ್ವಯಂಸೇವಕ. ಪ್ರಚಾರದಿಂದ ದೂರವುಳಿದು ತಲೆತಲಾಂತರದಿಂದ ಪರಿಸರ ಸೇವೆಗೈಯ್ಯುತ್ತಿರುವ ಬಿಷ್ಣೊಯಿಗಳ ಬಗ್ಗೆ ಹೊರಜಗತ್ತಿಗೆ ಗೊತ್ತಾಗಿದ್ದು ತುಸು ತಡವಾಗಿಯೇ. ದಶಕಗಳ ಹಿಂದೆ ಈ ಭಾಗದಲ್ಲಿ ಚಿತ್ರೀಕರಣದ ಸಮಯದಲ್ಲಿ ರಾತ್ರಿ ತನ್ನ ಸಹನಟರ ತಂಡದೊಂದಿಗೆ ಬಾಲಿವುಡ್‌ ತಾರೆ ಸಲ್ಮಾನ್‌ ಖಾನ್‌ ಶಿಕಾರಿಗೆ ತೆರಳಿದಾಗ ಆತನನ್ನು ಹಿಡಿದು ಹೆಡೆಮುರಿ ಕಟ್ಟಿ ಪೋಲಿಸರಿಗೊಪ್ಪಿಸಿದ್ದು ಈ ಬಿಷ್ಣೊಯಿಗಳ ಪಡೆಯೇ. ಆ ಘಟನೆಯ ನಂತರ ಇವರ ಬಗ್ಗೆ ಎಲ್ಲೆಡೆ ಅರಿವು ಮೂಡಿ ಅರಣ್ಯಗಳ್ಳರು ಈ ಭಾಗಕ್ಕೆ ಬರಲು ಹಿಂದೇಟು ಹಾಕುವಂತೆ ಮಾಡಿತು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top