ಭೀತಿಯ ಬೀಜ ಬಿತ್ತಿದ್ದು ಕುರ್ಬಾನ್ ಅಲಿಯೆಂಬ ಪಾತಕಿ..

ಅಮೆರಿಕದಂತಹ ದೇಶದಲ್ಲಿ ಸುತ್ತುವಾಗ ವಿಮಾನ ನಿಲ್ದಾಣದಿಂದ ಹಿಡಿದು ಹೋದಲ್ಲಿ ಬಂದಲ್ಲಿ ಬೂಟು, ಬೆಲ್ಟಿನಿಂದ ಹಿಡಿದು ಎಲ್ಲವನ್ನೂ ಬಿಚ್ಚಿ ಸ್ಕಾೃನ್ ಮಾಡುವಾಗ ಕಿರಿಕಿರಿ ಅನಿಸುತ್ತದೆ. ಆದರೆ ಅಂತಿಮವಾಗಿ ಅದೇ ಸರಿ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ.

ಅದು ಈಗ ನಾವು ಮಾಡುತ್ತಿರುವ ಆಲೋಚನೆ. ದಿನೇದಿನೆ ಹೆಚ್ಚುತ್ತಿರುವ ಅಸುರಕ್ಷತೆ ಭೀತಿಗೆ ಪರಿಹಾರ ಕಂಡುಕೊಳ್ಳಬೇಕು. ದೇಶದ ಇಂಚಿಂಚು ನೆಲವನ್ನು ಆಕ್ರಮಿಸಿಕೊಳ್ಳುತ್ತಿರುವ ಭಯೋತ್ಪಾದನೆಯನ್ನು ಮಟ್ಟಹಾಕಬೇಕು, ಸುಂದರ ಕಾಶ್ಮೀರವನ್ನು ಕಾಪಾಡಿಕೊಳ್ಳಬೇಕು. ಈ ವಿಷಯಗಳಲ್ಲಿ ನಮ್ಮ ಸರ್ಕಾರ ಸರಿಯಾದ ಹೆಜ್ಜೆ ಇಡಬೇಕು, ತಂತ್ರಗಾರಿಕೆ ರೂಪಿಸಬೇಕು ಅಂತೆಲ್ಲ ನಾವು ಇಷ್ಟು ವರ್ಷಗಳ ಬಳಿಕ ನಿಧಾನವಾಗಿ ಅಪೇಕ್ಷೆಪಡುತ್ತಿದ್ದೇವೆ ನಿಜ. ಆದರೆ ಕಾಶ್ಮೀರವನ್ನು ಭಾರತದಿಂದ ಕಿತ್ತುಕೊಳ್ಳಬೇಕು, ಆ ಮೂಲಕ ಇಡೀ ಭಾರತವನ್ನು ಅಸ್ಥಿರಗೊಳಿಸಲು ಭದ್ರ ಬುನಾದಿ ಹಾಕಿಕೊಳ್ಳಬೇಕು ಅಂತ ತೀರ್ಮಾನ ಮಾಡಿದವರು ಯಾವಾಗಿನಿಂದ ಕುತಂತ್ರ ರೂಪಿಸಿ ಕಾರ್ಯಾಚರಣೆಗಿಳಿದಿದ್ದಾರೆ ಎಂಬುದರ ಅರಿವು ನಮಗುಂಟೇ?

ಪಿತೂರಿ ಶುರುವಾಗಿದ್ದು 1940ರಲ್ಲಿ! ಕುರ್ಬಾನ್ ಅಲಿ ಅಂತ ಒಬ್ಬ ಇದ್ದ. ದೇಶ ವಿಭಜನೆ ಪೂರ್ವದಲ್ಲಿ ಆತ ಭಾರತದ ಗುಪ್ತಚರ ದಳದ ಡೆಪ್ಯುಟಿ ಡೈರೆಕ್ಟರ್ ಆಗಿದ್ದ. ಪಾಕಿಸ್ತಾನ ಜನ್ಮತಾಳಿದ ಬಳಿಕ ಆತ ಅಲ್ಲಿಗೆ ಹೋದ. ಅಷ್ಟು ಮಾತ್ರವಲ್ಲ, ಪಾಕ್ ಗುಪ್ತಚರ ದಳದ ಮೊದಲ ಡೈರೆಕ್ಟರ್ ಆಗಿ ನೇಮಕಗೊಂಡ. ಭಾರತವನ್ನು ನೂರು ಹೋಳು ಮಾಡಬೇಕು, ಅಖಂಡ ಭಾರತವನ್ನು ಸಣ್ಣಸಣ್ಣ ಭಾಗಗಳನ್ನಾಗಿ ತುಂಡರಿಸಿ ನೆರೆಯವರ ಸಣ್ಣ ಆಕ್ರಮಣವನ್ನೂ ಎದುರಿಸಲಾಗದ ದೈನೇಸಿ ಸ್ಥಿತಿಗೆ ತಳ್ಳಬೇಕೆಂದು ತೀರ್ಮಾನಿಸಿದ. ಅದೇ ‘Qurban Ali Doctrin’- ಕುರ್ಬಾನ್ ಅಲಿಯ ಸಂಕಲ್ಪ ಅದು.

commentory.in 08-11-2014ಕಾಶ್ಮೀರದಲ್ಲಿ ಹಿಂಸಾಚಾರ ಶುರುಮಾಡುವ ಮೂಲಕ ಕುರ್ಬಾನ್ ಅಲಿ ಕನಸನ್ನು ನನಸಾಗಿಸುವ ಕೆಲಸ 1948ಕ್ಕೂ ಮೊದಲೇ ಆರಂಭವಾಯಿತು. ಅಲಿ ವಿಷಯದಲ್ಲಿ ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥ ಗುಲ್ ಹಸನ್ ಖಾನ್ ಹೇಳಿದ ಮತ್ತೊಂದು ಸಂಗತಿಯನ್ನು ಕೇಳಬೇಕು. `ಕುರ್ಬಾನ್ ಅಲಿ ಜಮ್ಮು- ಕಾಶ್ಮೀರದಲ್ಲಿ ಅಸ್ಥಿರತೆಯ ವಿಷಬೀಜ ಬಿತ್ತಲು ಸಂಕಲ್ಪಿಸಿದ್ದಷ್ಟೇ ಅಲ್ಲ, ಭಾರತದಿಂದ ಹೈದರಾಬಾದನ್ನು ಪ್ರತ್ಯೇಕಿಸುವ ಹುನ್ನಾರದಿಂದಾಗಿ `ಹೈದರಾಬಾದ್ ವಿಮೋಚನೆ’ಗೆ ಹೋರಾಡುತ್ತಿದ್ದವರಿಗೆ ಖುದ್ದು ಕುಮ್ಮಕ್ಕು ನೀಡಿದ್ದ, ಅಗತ್ಯ ಶಸ್ತ್ರಾಸ್ತ್ರವನ್ನು ಸರಬರಾಜು ಮಾಡಿದ್ದ’ ಅಂತ ಜ.ಗುಲ್ ಹಸನ್ ಗುಟ್ಟು ರಟ್ಟುಮಾಡಿದ್ದ. 1951ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಉಗ್ರರು ದೂರವಾಣಿ ಸಂಪರ್ಕ, ಸೇತುವೆಗಳು ಮತ್ತು ಅತಿಥಿ ಗೃಹಗಳನ್ನು ನಿರ್ನಾಮ ಮಾಡಿದರು. ಈ ಕುಕೃತ್ಯವನ್ನು ಜನರಲ್ ಜಿಯಾ ಉಲ್ ಹಕ್ ಮುಂದೆ ಭಾರತದ ಇತರೆ ಭಾಗಗಳಿಗೆ ವಿಸ್ತರಿಸಿದ. 1977ರಿಂದ ಆರಂಭಿಸಿ 1990ರ ದಶಕದ ಕೊನೆಯವರೆಗೂ ಪಾಕಿಸ್ತಾನ ಭಾರತದೊಂದಿಗೆ ನಡೆಸಿದ ನೇರ ಹಾಗೂ ಪರೋಕ್ಷ ಯುದ್ಧಗಳಿಗೂ ಜಿಯಾ ನೇರ ಕಾರಣೀಕರ್ತ. ಇದೆಲ್ಲದಕ್ಕೂ ಮೂಲ ಕುರ್ಬಾನ್ ಅಲಿ ಮತ್ತು ಆತನಿಂದ ಪ್ರೇರಣೆ ಪಡೆದ ಪಾಕಿಸ್ತಾನದ ಗುಪ್ತಚರ ದಳ ಐಎಸ್‍ಐ.

ಈ ವಿಷಯಕ್ಕೆ ಸಂಬಂಧಿಸಿ `ಇಂಡಿಯಾ ಪಾಲಿಸಿ ಫೌಂಡೇಷನ್’ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿ ಇದಕ್ಕಿಂತಲೂ ಆತಂಕಕಾರಿಯಾಗಿದೆ. ವರದಿ ಪ್ರಕಾರ, ಈಗ ಐಎಸ್‍ಐ ನಿರ್ಮಿತ ಮುನ್ನೂರಕ್ಕೂ ಹೆಚ್ಚು ಉಗ್ರಗಾಮಿ ಸಂಘಟನೆಗಳು ಭಾರತದಲ್ಲಿ ಸಕ್ರಿಯವಾಗಿವೆ. ಪಾಕ್ ಐಎಸ್‍ಐನಿಂದ ಸಕಲ ತರಬೇತಿ ಪಡೆದ ದೊಡ್ಡ ಪ್ರಮಾಣದ ಹದಿಹರೆಯದ ಜಿಹಾದಿಗಳು ಕಾಶ್ಮೀರದ ಮೂಲಕ ಒಳನುಸುಳಿ ಭಾರತದ ಮುಗ್ಧ ಯುವಕರಲ್ಲಿ ದೇಶವಿರೋಧಿ ಭಾವನೆಯನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಭಾರತವನ್ನು ಆಂತರಿಕವಾಗಿ ದುರ್ಬಲಗೊಳಿಸುವ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ಬಾಂಗ್ಲಾದೇಶ, ನೇಪಾಳ ಮತ್ತು ಮಧ್ಯಪ್ರಾಚ್ಯ ದೇಶಗಳ ನೆಲೆಗಳನ್ನು ಐಎಸ್‍ಐ ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದೆ ಎಂದಿದೆ ಆ ವರದಿ.

ಈಗ ಭಾರತದಲ್ಲಿ ಉಂಟಾಗುತ್ತಿರುವ ಕೆಲ ಬೆಳವಣಿಗೆಗಳನ್ನು ಗಮನಿಸಿ. ಅದು, `ಇಂಡಿಯಾ ಪಾಲಿಸಿ ಫೌಂಡೇಷನ್’ ಬಿಡುಗಡೆ ಮಾಡಿರುವ ವರದಿಗೆ ತಾಳೆಯಾಗುತ್ತದೆ. ಒಂದು ಉದಾಹರಣೆ ನೋಡಿ. ಆಲ್ ಇಂಡಿಯಾ ಮಜ್ಲಿಸ್ ಇತ್ತೆಹಾದುಲ್ ಮುಸ್ಲಿಮಿನ್ ಅಥವಾ ಎಂಐಎಂ ಹೆಸರನ್ನು ಕೇಳಿದ್ದೀರಲ್ಲವೆ? ಆ ಸಂಘಟನೆಯ ಮುಖ್ಯಸ್ಥನ ಹೆಸರು ಅಕ್ಬರುದ್ದೀನ್ ಓವೈಸಿ. ಆತನನ್ನು ಮತಾಂಧ ಅಂತ ಕರೆಯಬೇಕೋ, ಇಲ್ಲ ಹಾದಿ ತಪ್ಪಿದ ಯುವಕ ಅಂತ ಹೇಳಬೇಕೋ ಎಂಬುದನ್ನು ನಿಮಗೇ ಬಿಡುತ್ತೇನೆ. ತೆಲಂಗಾಣ ರಾಜ್ಯದ ಚಂದ್ರಯಾನ ಗುಟ್ಟದ ಶಾಸಕನಾಗಿರುವ ಓವೈಸಿಯ ನಡೆ-ನುಡಿ, ಹೈದರಾಬಾದ್ ಮತ್ತು ತೆಲಂಗಾಣದ ರಾಜಕೀಯದಲ್ಲಿ ಈತ ಬೆಳೆಸಿಕೊಳ್ಳುತ್ತಿರುವ ಪ್ರಭಾವ, ಸ್ಥಳೀಯ ಪೊಲೀಸರಿಂದ ಹಿಡಿದು ಇಡೀ ಸರ್ಕಾರಿ ವ್ಯವಸ್ಥೆಯ ಮೇಲೆ ಆತ ಹಿಡಿತ ಸಾಧಿಸುತ್ತಿರುವ ರೀತಿ ನಿಜಕ್ಕೂ ಆತಂಕಕಾರಿ. ಉದ್ರೇಕಕಾರಿ ಭಾಷಣದ ಮೂಲಕವೇ ಆತ ನಾಂದೇಡ್ ನಗರಪಾಲಿಕೆಯನ್ನು ಈಗಾಗಲೇ ಎಂಐಎಂ ವಶಕ್ಕೆ ತೆಗೆದುಕೊಂಡಿದ್ದಾನೆ. ಹೈದರಾಬಾದ್ ನಗರಪಾಲಿಕೆಯಲ್ಲಿ ಬೆರಳೆಣಿಕೆಯಷ್ಟು ಮಾತ್ರ ಎಂಐಎಂ ಸದಸ್ಯರಿದ್ದಾರೆ. ಆದರೂ ಮೇಯರ್ ಹುದ್ದೆ ಎಂಐಎಂ ಸದಸ್ಯರಿಗೇ ದಕ್ಕಿದೆ. ಭಾವನಾತ್ಮಕ ಪ್ರಚೋದನೆಯ ಮಾತಿನ ಮೂಲಕ ಅಲ್ಪಸಂಖ್ಯಾತರ ಪ್ರಶ್ನಾತೀತ ನಾಯಕನಾಗಿ ಹೊರಹೊಮ್ಮುತ್ತಿರುವ ಓವೈಸಿಗೆ ಕಾಂಗ್ರೆಸ್‍ಮತ್ತು ಟಿಆರ್‍ಎಸ್ ಪಕ್ಷಗಳು ಅಕ್ಷರಶಃ ಶರಣಾಗತವಾಗಿವೆ.

ಈಗ ಓವೈಸಿ ಎಂಐಎಂ ಸಂಘಟನೆಯ ವ್ಯಾಪ್ತಿಯನ್ನು ಮಹಾರಾಷ್ಟ್ರಕ್ಕೆ ವಿಸ್ತರಿಸಲು ಗಮನ ಹರಿಸುತ್ತಿದ್ದಾನೆ. ಹೋದ ತಿಂಗಳಷ್ಟೇ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ 23 ಕ್ಷೇತ್ರಗಳಲ್ಲಿ ಎಂಐಎಂ ಅಭ್ಯರ್ಥಿಗಳನ್ನು ಓವೈಸಿ ಕಣಕ್ಕಿಳಿಸಿದ್ದ. ಯಾವ ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಶೇ.30ಕ್ಕಿಂತ ಹೆಚ್ಚಿದೆಯೋ ಅಂತಹ ಕ್ಷೇತ್ರಗಳಲ್ಲಿ ಎಂಐಎಂ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ವೇಳೆ ಓವೈಸಿ ಹೇಳಿದ್ದೇನು ಗೊತ್ತೇ? “ನಾನು ನನ್ನ ರಾಜ್ಯದಲ್ಲಿ ಆರಾಮಾಗಿದ್ದೆ, ಆದರೆ ನೀವು ಹೀನಾಯ ಸ್ಥಿತಿಯಲ್ಲಿರುವುದನ್ನು ನೋಡಲಾಗದೆ ಇಲ್ಲಿಗೆ ಬಂದಿದ್ದೇನೆ. ಈ ಹಿಂದಿನಂತೆ ಭೌಗೋಳಿಕವಾಗಿ ನಾವೆಲ್ಲ ಒಂದಾಗಬೇಕಿದೆ. ಆಗ ಮಾತ್ರ ನಮ್ಮ ಪಾಲು ನಮಗೆ ಸಿಗಲು ಸಾಧ್ಯ, ನಮ್ಮ ಪಾಲನ್ನು ನಾವು ಪಡೆದು ನೆಮ್ಮದಿಯಾಗಿರೋಣ” ಎಂದು ಓವೈಸಿ ಹೇಳುತ್ತಿದ್ದ. ಭೌಗೋಳಿಕವಾಗಿ ನಾವೆಲ್ಲ ಒಂದಾಗಬೇಕು ಎಂದರೆ, ಆಂಧ್ರ ಮತ್ತು ಮಹಾರಾಷ್ಟ್ರದ ಕೆಲ ಭೂಪ್ರದೇಶವನ್ನೊಳಗೊಂಡ ಈ ಹಿಂದಿನ `ನಿಜಾಮ್ ಸಾಮ್ರಾಜ್ಯ’ವನ್ನು ಮತ್ತೆ ಒಗ್ಗೂಡಿಸಬೇಕೆಂಬುದು ಓವೈಸಿ ಮಾತಿನ ಅರ್ಥ. ಎಂಐಎಂ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಎರಡು ಸ್ಥಾನವನ್ನು ಗೆದ್ದುಕೊಂಡಿದೆ. ಆದರೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಎನ್‍ಸಿಪಿ ಮತ್ತು ಇತರ ಸೆಕ್ಯುಲರ್ ಪಕ್ಷಗಳ ಅಭ್ಯರ್ಥಿಗಳ ಸೋಲಿಗೆ ಕಾರಣವಾಯಿತು. ಇದರ ಅರ್ಥವೇನು? ಮುಸ್ಲಿಂ ಲೀಗ್ ಮತ್ತು ಭೂಗತ ಜಗತ್ತಿನಿಂದ 1980ರ ದಶಕದಲ್ಲಿ ರಾಜಕೀಯಕ್ಕೆ ಬಂದು ಮತದ ಹೆಸರಲ್ಲಿ ರಾಜಕೀಯ ಅಸ್ತಿತ್ವ ಕಾಣಲು ಇನ್ನಿಲ್ಲದ ಪ್ರಯತ್ನ ನಡೆಸಿದ ಹಾಜಿ ಮಸ್ತಾನನ ಪರಂಪರೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಓವೈಸಿ ಹೆಜ್ಜೆ ಇಡುತ್ತಿದ್ದಾನೆ ಅಂತ ಅನ್ನಿಸುವುದಿಲ್ಲವೇ?

ಇತ್ತ ನೋಡಿ, ಒಂದು ಹಂತದಲ್ಲಿ ಭರವಸೆ ಮೂಡಿಸಿದ್ದ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಪಕ್ಷ ಕೂಡ, ಎಂಐಎಂ ಹಾದಿಯನ್ನೇ ಹಿಡಿಯುತ್ತಿದೆ. ತೃಣಮೂಲ ಕಾಂಗ್ರೆಸ್‍ನ ಹಲವು ಎಂಪಿಗಳಿಗೆ ಬಾಂಗ್ಲಾದೇಶದ ನಿಷೇಧಿತ ಉಗ್ರಗಾಮಿ ಸಂಘಟನೆ `ಜಮಾತೆ-ಇ-ಇಸ್ಲಾಮಿ’ ಜತೆ ನಂಟಿದೆ ಎಂದು ಸಿಪಿಐಎಂನ ಹಿರಿಯ ನಾಯಕ ಬಿಮನ್ ಬೋಸ್ ಮೇಲಿಂದ ಮೇಲೆ ಆರೋಪ ಮಾಡುತ್ತ ಬಂದಿದ್ದರು. ಆದರೆ ಯಾರೊಬ್ಬರೂ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಈಗ ಶಾರದಾ ಚಿಟ್‍ಫಂಡ್ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಬಿಮನ್ ಬೋಸ್ ಮಾಡಿದ ಆರೋಪಕ್ಕೆ ಪೂರಕವಾಗಿ ಪುರಾವೆಗಳನ್ನು ಹುಡುಕಿ ತೆಗೆದು ಬಹಿರಂಗ ಮಾಡಿದೆ.
ಮಮತಾ ಬ್ಯಾನರ್ಜಿಯವರಿಗೆ ಆಪ್ತನಾದ, ಟಿಎಂಸಿ ರಾಜ್ಯಸಭಾ ಸದಸ್ಯ ಅಹಮದ್ ಹುಸೇನ್ ಮೂಲದಲ್ಲಿ ಪಾಕಿಸ್ತಾನ ಪ್ರಜೆ. ಆತನ ತಂದೆ ಬಾಂಗ್ಲಾ ವಿಮೋಚನಾ ಚಳವಳಿ ವೇಳೆ ಐಎಸ್‍ಐ ಏಜೆಂಟನಾಗಿ ಕೆಲಸ ಮಾಡುತ್ತಿದ್ದ. ಈಗ ಅಹಮದ್ ಹುಸೇನ್ ಪಶ್ಚಿಮ ಬಂಗಾಳದಲ್ಲಿ ರಾಜಕೀಯವಾಗಿ ಪ್ರಭಾವಿಯಾಗಿ ಬೆಳೆದು ಜೆಇಇ ಮತ್ತು ಸಿಮಿ ಸಂಘಟನೆಗಳಿಗೆ ಅವ್ಯಾಹತವಾಗಿ ದುಡ್ಡು ಮತ್ತು ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದಾನೆ ಎಂಬುದನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪತ್ತೆಮಾಡಿದ್ದಾರೆ. ಅವರು ಹೇಳಿರುವ ಪ್ರಕಾರ ರಾಜಕಾರಣಿಗಳು ಮತ್ತು ಭಯೋತ್ಪಾದಕ ಸಂಘಟನೆಗಳ ನಂಟು ಇನ್ನೂ ಆಳಕ್ಕಿದೆ.

ಇವೆಲ್ಲ ಒಂದೆರಡು ಸ್ಯಾಂಪಲ್ಲುಗಳಷ್ಟೆ. ಇಲ್ಲಿ ಉದ್ಭವವಾಗುವ ಮುಖ್ಯ ಪ್ರಶ್ನೆ ನಮ್ಮ ಸರ್ಕಾರ, ಗುಪ್ತಚರ ದಳ ಯಾಕಿಷ್ಟು ದುರ್ಬಲವಾಗಿಹೋಗಿವೆ? ಯಾತಕ್ಕೆ ಕೈಕಟ್ಟಿ ಕುಳಿತುಕೊಂಡಿವೆ ಎಂಬುದು.

2001ರ ನವೆಂಬರ್ 11ರಂದು ಅಮೆರಿಕದ ವಿಶ್ವವಾಣಿಜ್ಯ ಕೇಂದ್ರದ ಮೇಲೆ ಅಲ್‍ಕೈದಾ ಉಗ್ರರು ನಡೆಸಿದ ದಾಳಿಯ ಉದಾಹರಣೆಯನ್ನೇ ತೆಗೆದುಕೊಳ್ಳಿ. ದಾಳಿಯ ಮರುಕ್ಷಣವೇ ಅಮೆರಿಕ ಸರ್ಕಾರ ಎಚ್ಚೆತ್ತುಕೊಂಡು, ದೇಶದ ಆಂತರಿಕ ಸುರಕ್ಷೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಯಿತು, ಭದ್ರತೆ ಬಿಗಿಗೊಳಿಸಲು ಬೇಕಾದ ಅಗತ್ಯ ಅತ್ಯಾಧುನಿಕ ಸೌಕರ್ಯಗಳನ್ನು ತಕ್ಷಣವೇ ಒದಗಿಸಿತು. ಆಂತರಿಕ ಭದ್ರತೆ ನಿರ್ವಹಣೆಗೋಸ್ಕರವೇ `ಡಿಪಾರ್ಟ್‍ಮೆಂಟ್ ಆಫ್ ಹೋಮ್‍ಲ್ಯಾಂಡ್ ಸೆಕ್ಯುರಿಟಿ’ ಎಂಬ ಪ್ರತ್ಯೇಕ ಭದ್ರತಾ ವಿಭಾಗವನ್ನೇ ಅಮೆರಿಕ ಸರ್ಕಾರ ತೆರೆಯಿತು. ಆ ಸಂದರ್ಭದಲ್ಲಿ ಅಧ್ಯಕ್ಷ ಬುಷ್ ಹೇಳಿದ ಮಾತು ಸದಾ ಕಾಲ ನೆನಪಿಡುವಂಥದ್ದು. “ನಾವು ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರೃವನ್ನು ಗೌರವಿಸುತ್ತೇವೆ, ಆದರೆ ರಾಷ್ಟ್ರಹಿತದ ಪ್ರಶ್ನೆ ಬಂದಾಗ ವ್ಯಕ್ತಿಸ್ವಾತಂತ್ರೃ ಗೌಣವಾಗುತ್ತದೆ’ ಎಂದು ಬುಷ್ ಖಂಡತುಂಡವಾಗಿ ಹೇಳಿದ್ದರು. ಭಯೋತ್ಪಾದನೆಗೆ ಸಂಬಂಧಿಸಿದ ಮಾಹಿತಿ ಸಂವಹನಕ್ಕಾಗಿ ಗುಪ್ತಚರ ದಳದ ಉನ್ನತ ಹಂತದಿಂದ ಕಟ್ಟಕಡೆಯ ಪೊಲೀಸ್ ಠಾಣೆಯವರೆಗೆ `ಡಿಪಾರ್ಟ್‍ಮೆಂಟ್ ಆಫ್ ಹೋಮ್‍ಲ್ಯಾಂಡ್ ಸೆಕ್ಯುರಿಟಿ’ ಅಂತರ್ಜಾಲ ಸಂಪರ್ಕವನ್ನು ಹೆಣೆಯಿತು. ಕೇಂದ್ರೀಕೃತ ಭಯೋತ್ಪಾದನಾ ಮಾಹಿತಿ ಮತ್ತು ದಾಖಲೆ ಸಂಗ್ರಹ ಕೇಂದ್ರ (Centralised Counter Terror Databank)ನ್ನು ತೆರೆಯಲಾಯಿತು. ಆ ಘಟನೆ ನಡೆದು ಹದಿನಾಲ್ಕು ವರ್ಷವಾಯಿತು. ಮತ್ತೆ ಅಮೆರಿಕದ ನೆಲದಲ್ಲಿ ಒಂದೇ ಒಂದು ಉಗ್ರರ ದಾಳಿ ನಡೆಯಿತೇ? ಒಂದು ಹನಿ ರಕ್ತ ಭೂಮಿಯ ಮೇಲೆ ಬಿತ್ತೇ? ಊಹೂಂ ಬಿಲ್‍ಕುಲ್ ಇಲ್ಲ.

ವಿಶ್ವವಾಣಿಜ್ಯ ಕೇಂದ್ರದ ಮೇಲೆ ನಡೆದ ದಾಳಿ ಮಾದರಿಯಲ್ಲೇ 2008ರ ನವೆಂಬರ್ 26ರಂದು ಮುಂಬೈ ಮೇಲೆ ಭಯೋತ್ಪಾಕರಿಂದ ದಾಳಿ ನಡೆಯಿತು. ಕೇವಲ ಹೇಳಿಕೆ ಕೊಟ್ಟದ್ದನ್ನು ಬಿಟ್ಟರೆ ನಮ್ಮ ಭದ್ರತಾ ವ್ಯವಸ್ಥೆಯ, ಗುಪ್ತಚರ ದಳದ ಲೋಪ, ದೌರ್ಬಲ್ಯದ ಅಂದಾಜು ಮಾಡಲಾಯಿತೇ? ವ್ಯವಸ್ಥೆಯಲ್ಲಿ ಒಂದಿಷ್ಟಾದರೂ ಬದಲಾವಣೆಯಾಯಿತೇ? ಭಯೋತ್ಪಾದಕರ ದಾಳಿ-ದಾಳಿ ಭೀತಿ ಕಡಿಮೆ ಆಯಿತೇ? ವಾಸ್ತವವಾಗಿ ದಾಳಿ ಮತ್ತು ದಾಳಿಯ ಭೀತಿ ಎರಡೂ ಮೂರ್ನಾಲ್ಕು ಪಟ್ಟು ಹೆಚ್ಚಾಗಿದೆ. ನಿನ್ನೆ ಕೋಲ್ಕತ, ಇಂದು ಕಾಶ್ಮೀರ, ನಾಳೆ ಬೆಂಗಳೂರು, ಮುಂಬೈ, ದೆಹಲಿ…. ಏನೇ ಆದರೂ ಎಚ್ಚೆತ್ತುಕೊಳ್ಳುವ ಲಕ್ಷಣ ಮಾತ್ರ ಇಲ್ಲವೇ ಇಲ್ಲ. ಅಮೆರಿಕದಂತಹ ದೇಶದಲ್ಲಿ ಸುತ್ತುವಾಗ ವಿಮಾನ ನಿಲ್ದಾಣದಿಂದ ಹಿಡಿದು ಹೋದಲ್ಲಿ ಬಂದಲ್ಲಿ ಬೂಟು, ಬೆಲ್ಟಿನಿಂದ ಹಿಡಿದು ಎಲ್ಲವನ್ನೂ ಬಿಚ್ಚಿ ಸ್ಕಾೃನ್ ಮಾಡುವಾಗ ಕಿರಿಕಿರಿ ಅನಿಸುತ್ತದೆ. ಆದರೆ ಅಂತಿಮವಾಗಿ ಅದೇ ಸರಿ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ. ಹೌದಲ್ಲವೇ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top