ಉನ್ನತ ಶಿಕ್ಷಣದಲ್ಲಿ ಬೆಂಗಳೂರು ಬೆಸ್ಟ್

– ಕೇಂದ್ರದಿಂದ ಐದನೇ ವರ್ಷದ ಶ್ರೇಯಾಂಕ ಪ್ರಕಟ | ಕರ್ನಾಟಕದ ಸಂಸ್ಥೆಗಳ ಮೇಲುಗೈ.

ಹೊಸದಿಲ್ಲಿ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ‘ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ರ್ಯಾಂಕಿಂಗ್‌(Ranking) ವ್ಯವಸ್ಥೆ’ಯು (ಎನ್ಐಆರ್‌ಎಫ್‌) ಗುರುವಾರ ಪಟ್ಟಿ ಪ್ರಕಟಿಸಿದ್ದು ಇದರಲ್ಲಿ ಬೆಂಗಳೂರಿನ ಶಿಕ್ಷಣ ಸಂಸ್ಥೆಗಳು ಉತ್ತಮ ಸಾಧನೆ ಮಾಡಿವೆ.
ಸಮಗ್ರ ರ್ಯಾಂಕಿಂಗ್‌‌ನಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೆ (ಐಐಎಸ್ಸಿ) ಎರಡನೇ ಸ್ಥಾನ ಲಭಿಸಿದ್ದರೆ, ಅಗ್ರ ಮೂರು ಶ್ರೇಷ್ಠ ವಿವಿಗಳಲ್ಲಿ ಮೊದಲ ಸ್ಥಾನ ಪಡೆದಿದೆ. ಭಾರತೀಯ ನಿರ್ವಹಣಾ ಸಂಸ್ಥೆಗಳ(ಐಐಎಂ) ಪೈಕಿ ಐಐಎಂ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಕಾನೂನು ವಿಭಾಗದಲ್ಲಿ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯನ್ ಯೂನಿವರ್ಸಿಟಿ ಮೊದಲ ಸ್ಥಾನ ಪಡೆದಿದೆ. ದಂತ ವೈದ್ಯಕೀಯ ವಿಭಾಗದಲ್ಲಿ ಮಣಿಪಾಲ ದಂತವೈದ್ಯಕೀಯ ಕಾಲೇಜು ಎರಡನೇ ಸ್ಥಾನದಲ್ಲಿದೆ.
ಬೋಧನೆ, ಕಲಿಕೆ, ಸಂಪನ್ಮೂಲ, ಸಂಶೋಧನೆ ಮತ್ತು ವೃತ್ತಿಪರ ತರಬೇತಿ, ಪದವಿಧರರ ಪ್ರಾವೀಣ್ಯತೆ, ಪ್ರಭಾವ ಮತ್ತು ಒಳಗೊಳ್ಳುವಿಕೆ ಇತ್ಯಾದಿ ಮಾನದಂಡಗಳನ್ನು ಅನುಸರಿಸಿ ರ್ಯಾಂಕಿಂಗ್‌ ಪಟ್ಟಿ ತಯಾರಿಸಲಾಗುತ್ತದೆ. ಇಲ್ಲಿ ರ್ಯಾಂಕಿಂಗ್‌ ಪಡೆದ ಸಂಸ್ಥೆಗಳಿಗೆ ಜಾಗತಿಕ ಸ್ಪರ್ಧೆಗೆ ಪ್ರವೇಶಿಸಲು ಅನುಕೂಲವಾಗುತ್ತದೆ. ಶ್ರೇಷ್ಠ ವಿವಿಗಳು, ಕಾಲೇಜು, ವೈದ್ಯಕೀಯ, ಎಂಜಿನಿಯರಿಂಗ್, ಮ್ಯಾನೇಜ್ಮೆಂಟ್, ಫಾರ್ಮಸಿ ಹೀಗೆ ಹಲವು ವಿಭಾಗಗಳಲ್ಲಿ ಟಾಪ್ 10 ಸ್ಥಾನಗಳನ್ನು ಪ್ರಕಟಿಸಲಾಗಿದೆ.
ಸಮಗ್ರ ರ್ಯಾಂಕಿಂಗ್‌ನಲ್ಲಿ ಮದ್ರಾಸ್ ಐಐಟಿ ಮೊದಲ ಸ್ಥಾನದಲ್ಲಿದ್ದರೆ, ದಿಲ್ಲಿ ಐಐಟಿ ಮೂರನೇ ಸ್ಥಾನದಲ್ಲಿದೆ. ದೇಶದ ಮೂರು ಶ್ರೇಷ್ಠ ವಿವಿಗಳಲ್ಲಿ ಬೆಂಗಳೂರು ಐಐಎಸ್ಸಿ ಮೊದಲ ಸ್ಥಾನ ಪಡೆದಿದ್ದು, ದಿಲ್ಲಿಯ ಜವಾಹರಲಾಲ್ ನೆಹರೂ ವಿವಿ (ಜೆಎನ್‌ಯು) ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಸಿಕ್ಕಿವೆ. ಅತ್ಯುತ್ತಮ ಭಾರತೀಯ ನಿರ್ವಹಣಾ ಸಂಸ್ಥೆಗಳ(ಐಐಎಂ) ಪೈಕಿ ಐಐಎಂ ಅಹಮದಾಬಾದ್ಗೆ ಮೊದಲ, ಐಐಎಂ ಬೆಂಗಳೂರಿಗೆ ಎರಡನೇ ಹಾಗೂ ಐಐಎಂ ಕೊಲ್ಕೊತಾಗೆ ಮೂರನೇ ಸ್ಥಾನ ಲಭಿಸಿದೆ. ಐಐಎಂ ಬೆಂಗಳೂರು ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದರೆ, ಅಹಮದಾಬಾದ್ ಎರಡನೇ ಸ್ಥಾನದಲ್ಲಿತ್ತು. ಎಂಜಿನಿಯರಿಂಗ್ ಕಾಲೇಜುಗಳ ಪೈಕಿ ಐಐಟಿ ಮದ್ರಾಸ್, ಐಐಟಿ ದಿಲ್ಲಿ ಮತ್ತು ಐಐಟಿ ಮುಂಬಯಿ ಟಾಪ್ 3 ಸ್ಥಾನ ಪಡೆದಿವೆ.
ಫಾರ್ಮಸಿ ಕ್ಷೇತ್ರದಲ್ಲಿ ದಿಲ್ಲಿಯ ಜಾಮಿಯಾ ಹಮ್ದರ್ದ್ ಸಂಸ್ಥೆ, ಚಂಡೀಗಢದ ಪಂಜಾಬ್ ಯೂನಿವರ್ಸಿಟಿ ಹಾಗೂ ಮೊಹಾಲಿಯ ನ್ಯಾಷನಲ್ ಇನ್ಸ್‌ಟಿಟ್ಯೂಟ್‌ ಆಫ್ ಫಾರ್ಮಾಸುಟಿಕಲ್ ರಿಸರ್ಚ್ ಸಂಸ್ಥೆಗಳು ಮೊದಲ 3 ಸ್ಥಾನ ಪಡೆದಿವೆ. ವೈದ್ಯಕೀಯ ಕಾಲೇಜುಗಳ ವಿಭಾಗದಲ್ಲಿ ದಿಲ್ಲಿಯ ಏಮ್ಸ್, ಚಂಡೀಗಢದ ಪೋಸ್ಟ್ ಗ್ರ್ಯಾಜುಯೇಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಅಂಡ್ ರಿಸರ್ಚ್ ಹಾಗೂ ತಮಿಳುನಾಡಿನ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು (ಸಿಎಂಸಿ) ಮೊದಲ ಮೂರು ಸ್ಥಾನ ಪಡೆದಿವೆ.
ಎಚ್ಆರ್‌ಡಿ ಸಚಿವಾಲಯ ಸಾಮಾನ್ಯವಾಗಿ ಏಪ್ರಿಲ್‌ನಲ್ಲಿ ಈ ರ್ಯಾಂಕಿಂಗ್‌ ಪಟ್ಟಿ ಪ್ರಕಟಿಸುತ್ತದೆಯಾದರೂ ಈ ಬಾರಿ ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತಡವಾಗಿ ಪಟ್ಟಿ ಬಿಡುಗಡೆ ಮಾಡಿದೆ. ದೇಶಾದ್ಯಂತ 3,771 ವಿವಿಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ರ್ಯಾಂಕಿಂಗ್‌ ಪ್ರಕ್ರಿಯೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಈ ರ್ಯಾಂಕಿಂಗ್‌ ವ್ಯವಸ್ಥೆಯನ್ನು 2015ರಿಂದ ಆರಂಭಿಸಲಾಗಿದೆ. ಪ್ರತಿವರ್ಷ ಎಂಜಿನಿಯರಿಂಗ್, ವೈದ್ಯಕೀಯ, ತಾಂತ್ರಿಕತೆ ಮತ್ತು ಆಡಳಿತ ನಿರ್ವಹಣೆ ವಿಭಾಗಗಳನ್ನು ಮಾತ್ರ ಪರಿಗಣಿಸಲಾಗುತ್ತಿತ್ತು. ಈ ವರ್ಷ ದಂತ ವೈದ್ಯಕೀಯ ವಿಭಾಗವನ್ನೂ ಸೇರ್ಪಡೆ ಮಾಡಲಾಗಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top