ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ಬೈ

ಕೊರೊನಾ ಸೋಂಕು ನಿರ್ವಹಣೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವಿಫಲವಾಗಿದೆ; ಅದು ಚೀನಾ ಪಕ್ಷಪಾತಿಯಾಗಿದೆ ಎಂದು ಆರೋಪಿಸಿ ಅಮೆರಿಕ ಸಂಸ್ಥೆಯಿಂದ ಹೊರಬರಲು ಮುಂದಾಗಿದೆ. ಏನೀ ವಿವಾದ? ಅಮೆರಿಕದ ವಾದವೇನು? ಡಬ್ಲ್ಯುಎಚ್‌ಒ ಯಾಕೆ ಅನಿವಾರ್ಯ?

ಅಮೆರಿಕದ ವಾದವೇನು?
ಡಬ್ಲ್ಯುಎಚ್‌ಒ ಅದರ ನೀತಿ ನಿಯಮಾವಳಿಯ ಪ್ರಕಾರ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಚೀನಾದ ಪಕ್ಷಪಾತಿಯಾಗಿ ವರ್ತಿಸುತ್ತಿದೆ. ಕಳೆದ ಡಿಸೆಂಬರ್‌ನಲ್ಲೇ ಚೀನಾದ ವುಹಾನ್‌ನಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಆದರೆ ಅದನ್ನು ಡಬ್ಲ್ಯುಎಚ್‌ಒಗೆ ತಿಳಿಸಲು ತಡ ಮಾಡಿತು. ನಂತರವೂ ಡಬ್ಲ್ಯುಎಚ್‌ಒ ವಿಶ್ವ ಸಮುದಾಯದ ಮುಂದೆ ಇದರ ವಾಸ್ತವ ಚಿತ್ರಣವನ್ನು ಬಿಡಿಸಿಡಲೇ ಇಲ್ಲ. ಬದಲಾಗಿ, ಇದು ಮಾನವರಿಂದ ಮಾನವರಿಗೆ ಹರಡುವುದಿಲ್ಲ ಎಂದು ಚೀನಾ ಹೇಳಿದ್ದನ್ನೇ ತಾನೂ ಸಾರಿತು. ಜನವರಿ ಅಂತ್ಯದ ವೇಳೆಗೆ ಸೋಂಕು ಬಿಗಡಾಯಿಸಲು ಆರಂಭಿಸಿದ ಬಳಿಕ ಇದು ಸಾಂಕ್ರಾಮಿಕ ಎಂಬುದನ್ನು ಒಪ್ಪಿಕೊಂಡಿತು. ಮೊದಲು ಇದೊಂದು ‘ಎಂಡೆಮಿಕ್‌’ (ಸೋಂಕು) ಎಂದಿತು. ನಂತರ ‘ಪ್ಯಾಂಡೆಮಿಕ್‌’ (ಸಾಂಕ್ರಾಮಿಕ) ಎಂದು ಒಪ್ಪಿಕೊಂಡಿತು. ಆದರೆ ಚೀನಾದ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು ಎಂಬ ಅಮೆರಿಕ, ಬ್ರಿಟನ್‌, ಆಸ್ಪ್ರೇಲಿಯದ ಮಾತುಗಳನ್ನು ಮಾನ್ಯ ಮಾಡಲಿಲ್ಲ. ಡಬ್ಲ್ಯುಎಚ್‌ಒ ಕಡೆಯಿಂದ ಸಮಗ್ರ ತನಿಖೆ ನಡೆಸಬೇಕು ಎಂದಾಗಲೂ ಅದನ್ನು ದೃಢವಾಗಿ ಚೀನಾದ ಮೇಲೆ ಒತ್ತಾಯಿಸಲಿಲ್ಲ. ಹೀಗಾಗಿ ಚೀನಾ ಪಕ್ಷಪಾತಿಯಾದ ಡಬ್ಲ್ಯುಎಚ್‌ಒದಲ್ಲಿ ತಾನು ಯಾಕಿರಬೇಕು- ಇದು ಅಮೆರಿಕದ ವಾದ.

ಡಬ್ಲ್ಯುಎಚ್‌ಒ ಸಮರ್ಥನೆ ಏನು?
ಕೊರೊನಾ ಸೋಂಕಿನ ಬಗ್ಗೆ ವಿಶ್ವದ ಪ್ರಮುಖ ವಿಜ್ಞಾನಿಗಳು ಪ್ರಯೋಗಾತ್ಮಕ ಪ್ರತಿಪಾದನೆಯ ಮೂಲಕ ಏನನ್ನು ಹೇಳುತ್ತಾರೋ ಅದನ್ನೇ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯ ಮಾಡುತ್ತದೆ. ಅದರಲ್ಲಿ ಚೀನಾ, ಅಮೆರಿಕ ಸೇರಿದಂತೆ ಎಲ್ಲ ದೇಶಗಳ ತಜ್ಞರೂ ಇದ್ದಾರೆ. ಡಬ್ಲ್ಯುಎಚ್‌ಒ ಎಲ್ಲ ದೇಶಗಳಿಗೆ ಸೇರಿದ, ಎಲ್ಲ ದೇಶಗಳ ದೇಣಿಗೆಯಿಂದ ನಡೆಯುವ ಸ್ವಾಯತ್ತ ಸಂಸ್ಥೆ. ಕೊರೊನಾ ಸೋಂಕಿನ ಗಂಭೀರತೆ ಅರಿವಾದ ಕೂಡಲೇ ಅದರ ಕುರಿತ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ಎಲ್ಲ ದೇಶಗಳಿಗೆ ನೀಡಲಾಗಿದೆ. ಅದರ ಅನುಷ್ಠಾನ ಆಯಾ ದೇಶಗಳಿಗೆ ಸೇರಿದ್ದು. ಇಲ್ಲಿ ಚೀನಾ ಪರ, ಅಮೆರಿಕ ವಿರೋಧ ಎಂಬುದೇನಿಲ್ಲ- ಇದು ಡಬ್ಲ್ಯುಎಚ್‌ಒ ಸಮರ್ಥನೆ.

ಡಬ್ಲ್ಯುಎಚ್‌ಒದ ಕೆಲವೇನು?
ಡಬ್ಲ್ಯುಎಚ್‌ಒ, ವಿಶ್ವಸಂಸ್ಥೆಗೆ ಸೇರಿದ, ಜಗತ್ತಿನ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಉತ್ತರದಾಯಿತ್ವ ಹೊಂದಿರುವ ಒಂದು ತಜ್ಞ ಸಮಿತಿ. ಸ್ವಿಡ್ಜರ್‌ಲ್ಯಾಂಡ್‌ನ ಜಿನೇವಾದಲ್ಲಿ ಇದರ ಕೇಂದ್ರ ಕಚೇರಿಯಿದೆ. ಆರು ಪ್ರಾಂತೀಯ ಶಾಖೆಗಳಿವೆ. 1948ರ ಏಪ್ರಿಲ್‌ 7ರಂದು ಇದರ ಸ್ಥಾಪನೆಯಾಯ್ತು. ಅದಕ್ಕಾಗಿ ಏಪ್ರಿಲ್‌ 7ನ್ನು ವಿಶ್ವ ಆರೋಗ್ಯ ದಿನವೆಂದು ಆಚರಿಸಲಾಗುತ್ತದೆ. ‘ವಿಶ್ವ ಆರೋಗ್ಯ ಸಭೆ’ ಇದರ ಆಡಳಿತ ಸಭೆ. ಇದರಲ್ಲಿ 194 ದೇಶಗಳ ಸದಸ್ಯರಿದ್ದಾರೆ. ಇದರ ಕರ್ತವ್ಯಗಳು ಹಲವು.
– ಜಾಗತಿಕ ಆರೋಗ್ಯವನ್ನು ಖಾತ್ರಿಪಡಿಸುವುದು. ಪ್ರತಿ ವ್ಯಕ್ತಿಯ ಆರೋಗ್ಯ ಮತ್ತು ಸೌಖ್ಯವನ್ನು ಸುಧಾರಿಸುವತ್ತ ಚಿಂತಿಸುವುದು.
– ಸಾರ್ವಜನಿಕ ಆರೋಗ್ಯ ರಿಸ್ಕ್‌ಗಳ ನಿಗಾ ಇಡುವುದು.
– ಆರೋಗ್ಯ ತುರ್ತುಪರಿಸ್ಥಿತಿಗಳ ಗಮನ ಇಡುವುದು.
– ದೇಶಗಳಿಗೆ ತಾಂತ್ರಿಕ, ತಂತ್ರಜ್ಞಾನ ನೆರವು ನೀಡುವುದು.
– ಅಂತಾರಾಷ್ಟ್ರೀಯ ಆರೋಗ್ಯ ಮಾನದಂಡಗಳು, ಮಾರ್ಗಸೂಚಿಗಳನ್ನು ನಿಗದಿಪಡಿಸುವುದು.
– ಜಾಗತಿಕ ಆರೋಗ್ಯ ಸಮೀಕ್ಷೆಯ ಮೂಲಕ ಮಾಹಿತಿ ಸಂಗ್ರಹ ಹಾಗು ಹಂಚುವಿಕೆ.
– ಕಾಲಕಾಲಕ್ಕೆ ಸಭೆ ನಡೆಸಿ ಆರೋಗ್ಯ ಸ್ಥಿತಿಗಳ ಬಗ್ಗೆ ಚರ್ಚಿಸುವುದು.
– ವಾರ್ಷಿಕ ‘ವಿಶ್ವ ಆರೋಗ್ಯ ವರದಿ’ಯ ಮೂಲಕ ತಜ್ಞ ಅಭಿಪ್ರಾಯ, ಮಾಹಿತಿಗಳನ್ನು ಒದಗಿಸುವುದು.

ಡಬ್ಲ್ಯುಎಚ್‌ಒದ ಸಾಧನೆಯೇನು?
ಬಡ ಹಾಗೂ ದುರ್ಬಲ ಆರೋಗ್ಯ ಸನ್ನಿವೇಶಗಳಿರುವ ಹಲವು ದೇಶಗಳಲ್ಲಿ ಸಾರ್ವಜನಿಕ ಆರೋಗ್ಯ ಸ್ಥಿತಿ ಉತ್ತಮಗೊಳ್ಳುವಂತೆ ಹಲವು ಕಾರ್ಯಕ್ರಮಗಳನ್ನು ಡಬ್ಲ್ಯುಎಚ್‌ಒ ಕೈಗೊಂಡಿದೆ. ಉದಾಹರೆಗೆ ಆಫ್ರಿಕ ಹಾಗೂ ದಕ್ಷಿಣ ಅಮೆರಿಕದ ದೇಶಗಳಲ್ಲಿ ಎಚ್‌ಐವಿ ಹರಡತೊಡಗಿದಾಗ ಅದರ ಬಗ್ಗೆ ಮೂಡಿಸುವ ಹಾಗೂ ತಡೆಯುವ ಕೆಲಸ ಮಾಡಿತು. ಸಿಡುಬು ರೋಗವನ್ನು ನಿರ್ಮೂಲನ ಮಾಡುವಲ್ಲಿ ಡಬ್ಲ್ಯುಎಚ್‌ಒ ಕೊಡುಗೆಯಿದೆ. ಎರಡು ದಶಕಗಳ ನಿರಂತರ ಹೋರಾಟದ ಬಳಿಕ 1979ರಲ್ಲಿ ‘ವಿಶ್ವ ಸಿಡುಬು ಮುಕ್ತ’ ಎಂದು ಆರೋಗ್ಯ ಸಂಸ್ಥೆ ಘೋಷಿಸಿತು. ಮಲೇರಿಯಾ, ಕ್ಷಯ, ಏಡ್ಸ್‌ ಮುಂತಾದ ಕಾಯಿಲೆಗಳಿಗೆ ಔಷಧ, ಲಸಿಕೆ ಸಿದ್ಧಪಡಿಸಲು ನೆರವಾಯಿತು. ದಡಾರದ ಕುರಿತು ಡಬ್ಲ್ಯುಎಚ್‌ಒ ನಡೆಸಿದ ಹೋರಾಟದ ಫಲವಾಗಿ ಅದರಿಂದಾಗುವ ಸಾವುಗಳು 68%ರಷ್ಟು ಇಳಿದಿವೆ. 1988ರಲ್ಲಿ ಪೋಲಿಯೋ ನಿರ್ಮೂಲನ ಕಾರ್ಯಕ್ರಮಗಳನ್ನು ಆರಂಭಿಸಿದ್ದು, ಅದರ ಲಸಿಕೆ ಕಾರ್ಯಕ್ರಮಗಳು ಈಗಲೂ ನಡೆಯುತ್ತಿವೆ. ಎಬೋಲಾ ರೋಗಕ್ಕೆ ಲಸಿಕೆ ಆವಿಷ್ಕರಿಸಲು ನೆರವಾಗಿದೆ.

ಅಮೆರಿಕದ ಹೋದರೆ ಸಮಸ್ಯೆಯೇನು?
ಡಬ್ಲ್ಯುಎಚ್‌ಒ ಕಾರ್ಯಾಚರಿಸುವುದು ಸದಸ್ಯ ದೇಶಗಳು ನೀಡುವ ದೇಣಿಗೆಯಿಂದ. ಇದರ ವಾರ್ಷಿಕ ವೆಚ್ಚ 560 ಕೋಟಿ ಡಾಲರ್‌. ಇದರಲ್ಲಿ ಅಮೆರಿಕದ ಕೊಡುಗೆಯೇ ಶೇ.15ರಷ್ಟು. ಯುರೋಪ್‌ ಒಕ್ಕೂಟ ಶೇ.11ರಷ್ಟು ನೀಡುತ್ತದೆ. ಚೀನಾದ ಕೊಡುಗೆ ಶೇ.0.2. ಈಗ ಏಪ್ರಿಲ್‌ನಲ್ಲೇ ಡಬ್ಲ್ಯುಎಚ್‌ಒ ಮೇಲೆ ಸಿಟ್ಟಿಗೆದ್ದಿರುವ ಅಮೆರಿಕ, ತಾನು ನೀಡಬೇಕಿರುವ ವಾರ್ಷಿಕ ದೇಣಿಗೆಯಲ್ಲಿ ಅರ್ಧದಷ್ಟನ್ನು ಮಾತ್ರ ನೀಡಿದೆ. ಈಗ ಉಳಿದದ್ದನ್ನೂ ಕೊಡುವುದಿಲ್ಲ ಎಂದಿದೆ. ಅಮೆರಿಕದ ಹಣದ ಮೊತ್ತ ಬರದಿದ್ದರೆ ಡಬ್ಲ್ಯುಎಚ್‌ಒಗೆ ತನ್ನ ಕಾರ್ಯರ್ನಿಹಣೆ ಕಷ್ಟವಾಗಲಿದೆ. ಅನಿವಾರ್ಯವಾದರೆ ಉಳಿದ ದೇಶಗಳು ಈ ಹೊರೆಯನ್ನು ಹೊರಬೇಕಾಗಬಹುದು.

ಆರೋಗ್ಯ ಸಂಸ್ಥೆಯ ವಿವಾದಗಳು
ಡಬ್ಲ್ಯುಎಚ್‌ಒಗೂ ಸಾಕಷ್ಟು ಬಾರಿ ವಿವಾದಗಳು ಅಂಟಿಕೊಂಡಿವೆ.
– ಚೀನಾದ ಸಾಂಪ್ರದಾಯಿಕ ವೈದ್ಯಕೀಯವನ್ನು ಮಾನ್ಯ ಮಾಡಲು ಮುಂದಾಗಿದೆ. ಆದರೆ ಇದಕ್ಕಾಗಿ ವನ್ಯಜೀವಿ ಹತ್ಯೆ ಮಾಡುವುದರಿಂದ ಇದನ್ನು ಮಾನ್ಯ ಮಾಡಬಾರದೆಂದು ತಜ್ಞರು ತಡೆದಿದ್ದಾರೆ.
– 2007ರಲ್ಲಿ ಎಚ್‌1ಎನ್‌1 ಇನ್‌ಫ್ಲುಯೆಂಜಾ ಲಸಿಕೆ ಸಿದ್ಧಪಡಿಸಲಾಯಿತು. ಆದರೆ ಅದರ ನಿರ್ವಹಣೆ ವೇಳೆ ಅನವಶ್ಯಕ ಆತಂಕ ಹರಡಿತು ಎಂಬ ದೂರು.
– 2014ರಲ್ಲಿ ಆಫ್ರಿಕಾದಲ್ಲಿ ಎಬೋಲಾ ವೈರಸ್‌ ಹರಡಿತು. ಆಗ ಡಬ್ಲ್ಯುಎಚ್‌ಒದಲ್ಲಿ ಸಾಕಷ್ಟು ನಿದಿಯಿಲ್ಲದೆ ಅದು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿಲ್ಲ ಎಂಬ ಟೀಕೆ.
– ಕ್ಯಾನ್ಸರ್‌ ವಿರುದ್ಧ ಪರಿಣಾಮಕಾರಿ ಔಷಧ ಸೃಷ್ಟಿ ಸಾಧ್ಯವಿದೆ. ಆದರೆ ಔಷಧ ಕಂಪನಿಗಳ ಲಾಭಿಯಿಂದಾಗಿ ಅದನ್ನು ಮಾಡಲು ಡಬ್ಲ್ಯುಎಚ್‌ಒ ಬಿಡುತ್ತಿಲ್ಲ ಎಂಬ ದೂರು ಇದೆ.

ಮುಂದೇನಾಗಬಹುದು?
– ಅಮೆರಿಕದ ಹಿಂದೆಗೆತದಿಂದ ಕೊರೊನಾಗೆ ಲಸಿಕೆ ತಯಾರಿಸುವಲ್ಲಿ ನಡೆಯುತ್ತಿರುವ ಪ್ರಯತ್ನಗಳಿಗೆ ಹಿನ್ನಡೆ ಉಂಟಾಗಬಹುದು. ಅಮೆರಿಕದ ಹಲವು ಕಂಪನಿಗಳು ಇತರ ಜಾಗತಿಕ ಕಂಪನಿಗಳ ಜತೆಗೆ ಲಸಿಕೆ ಸೃಷ್ಟಿಗೆಎ ಕೈಜೋಡಿಸಿವೆ.
– ಕೊರೊನಾ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳು, ನಿರ್ದೇಶನಗಳಿಗೆ ಒಂದು ಬಗೆಯ ಸಾರ್ವತ್ರಿಕ ಮಾನ್ಯತೆ ಈಗಾಗಲೇ ಲಭ್ಯವಾಗಿದೆ. ಈಗ ಅಮೆರಿಕ ತನ್ನದೇ ಆದ ಆರೋಗ್ಯ ವ್ಯವಸ್ಥೆಯನ್ನು ಕಟ್ಟುವ ಮಾತಾಡುತ್ತಿದೆ. ಇದು ಗೊಂದಲಕ್ಕೆ ಕಾರಣವಾಗಬಹುದು.
– ಡಬ್ಲ್ಯುಎಚ್‌ಒದಿಂದ ಹಿಂದೆಗೆಯಲು ಟ್ರಂಪ್‌ಗೆ ಅಮೆರಿಕನ್‌ ಕಾಂಗ್ರೆಸ್‌ ಒಪ್ಪಿಗೆ ಅಗತ್ಯ. ಇದು ಸಿಗದೆ ಹೋಗಲೂಬಹುದು. ಅಥವಾ ಈ ಘೋಷಣೆಯ ಬಳಿಕ ಒಂದುವ ವರ್ಷದ ನೋಟಿಸ್‌ ಅವಧಿ ಇದೆ. ಈ ಅವಧಿಯಲ್ಲಿ ಬಿಕ್ಕಟ್ಟು ಸರಿಹೋಗಿ ತಿಳಿಯಾಗಲೂಬಹುದು.
– ಅಮೆರಿಕ ಹಿಂದೆಗೆದದ್ದೇ ಆದರೆ, ಎರಡನೇ ಬೃಹತ್‌ ಆರ್ಥಿಕ ಶಕ್ತಿಯಾದ ಚೀನಾವನ್ನು ಅನಿವಾರ್ಯವಾಗಿ ಅವಲಂಬಿಸಬೇಕಾದ ಸ್ಥಿತಿ ಆರೋಗ್ಯ ಸಂಸ್ಥೆಯದಾಗುತ್ತದೆ. ಆಗ ಅದು ನಿಜಕ್ಕೂ ಚೀನಾದ ಕೈಗೊಂಬೆಯಾಗಬೇಕಾಗುತ್ತದೆ. ಅದರಿಂದ ಭಾರತದಂಥ ದೇಶಗಳಿಗೆ ಹೆಚ್ಚೇನೂ ಒಳ್ಳೆಯದಾಗಲಿಕ್ಕಿಲ್ಲ.

ಕೊರೊನಾ ಮತ್ತು ಡಬ್ಲ್ಯುಎಚ್‌ಒ
ಕೊರೊನಾ ವಿರುದ್ಧದ ಹೋರಾಟದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೈಸೋತಿರುವುದು ನಿಜ. ಅದು ಇನ್ನೂ ಬೇಗನೆ ಎಚ್ಚೆತ್ತುಕೊಂಡು ಇತರ ದೇಶಗಳಿಗೆ ರೋಗ ಹರಡದಂತೆ ನೋಡಿಕೊಳ್ಳಬೇಕಿತ್ತು ಎಂಬ ಅಮೆರಿಕದ ವಾದದಲ್ಲಿ ಹುರುಳಿದೆ. ಆದರೆ ಅದು ಚೀನಾ ಪಕ್ಷಪಾತಿ ಎನ್ನುವಂತಿಲ್ಲ.

ಡಬ್ಲ್ಯುಎಚ್‌ಒ ಟೀಮ್‌
ಪ್ರಸ್ತುತ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷತೆಯನ್ನು ಭಾರತ ವಹಿಸಿದೆ. ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಇದರ ಅಧ್ಯಕ್ಷರಾಗಿದ್ದಾರೆ. ವಿಜ್ಞಾನಿ ಮೈಕೆಲ್‌ ರಾರ‍ಯನ್‌, ಆರೋಗ್ಯ ತುರ್ತುಪರಿಸ್ಥಿತಿ ಕಾರ್ಯಕ್ರಮದ ಕಾರ್ಯಕಾರಿ ನಿರ್ದೇಶಕರು. ಭಾರತೀಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್‌ ಮುಂತಾದವರು ಮುಖ್ಯ ವಿಜ್ಞಾನಿಗಳ ಬಳಗದಲ್ಲಿದ್ದಾರೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top