ಸೈಯದ್‌ ಅಕ್ಬರುದ್ದೀನ್‌ ದಿ ಗ್ರೇಟ್‌…

– ರಮೇಶ್‌ ಕುಮಾರ್‌ ನಾಯಕ್‌.

ವಿದೇಶಾಂಗ ಇಲಾಖೆಯ ವಕ್ತಾರ ಮತ್ತು ವಿಶ್ವಸಂಸ್ಥೆಯಲ್ಲಿ ಕಾಯಂ ಪ್ರತಿನಿಧಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಿರಿಮೆ ಹೆಚ್ಚಿಸಿದ್ದ ಸೈಯದ್‌ ಅಕ್ಬರುದ್ದೀನ್‌ ಇತ್ತೀಚೆಗೆ ನಿವೃತ್ತರಾಗಿದ್ದಾರೆ. ದೇಶದ ಹಿತಾಸಕ್ತಿ ರಕ್ಷ ಣೆಯಲ್ಲಿ ಅವರಿಗಿದ್ದ ಬದ್ಧತೆ ಯುವ ಅಧಿಕಾರಿಗಳಿಗೆ ಮಾದರಿ.

ಅದು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರದ ಮೋದಿ ಸರಕಾರ ಕಿತ್ತು ಬಿಸಾಕಿದ ಹೊತ್ತು. ಸುದೀರ್ಘ ಕಾಲದಿಂದ ಚರ್ಚೆಯಲ್ಲಿದ್ದ 370ನೇ ವಿಧಿ ರದ್ದತಿ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಈ ಬೆಳವಣಿಗೆ ಗಡಿಯಾಚೆಗಿನ ಪುಂಡ ದೇಶ ಪಾಕಿಸ್ತಾನದ ಮರ್ಮಾಂಗದ ಮೇಲೆ ಬರೆ ಎಳೆದಂತಾಗಿತ್ತು! ಭಾರತದ ಐತಿಹಾಸಿಕ ದಿಟ್ಟ ನಡೆ ಇಡೀ ವಿಶ್ವದ ಗಮನ ಸೆಳೆದಿತ್ತು. ನಿರೀಕ್ಷಿತವಾಗಿಯೇ ಪಾಕಿಸ್ತಾನ ಈ ವಿಷಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಖಾಡಕ್ಕೆ ಒಯ್ದು ಒಂದೇ ಸಮನೆ ಊಳಿಟ್ಟಿತು. ಭಾರತದ ಬಗಲ್‌ ಕಾ ದುಷ್ಮನ್‌ ಚೀನಾ ಎಂದಿನಂತೆ ಪಾಕಿಸ್ತಾನಕ್ಕೆ ಹವಾ ಹೊಡೆಯಿತು. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ರಾಷ್ಟ್ರವಾಗಿರುವ ಚೀನಾ ಆ ಸಭೆಯಲ್ಲಿ ಭಾರತದ ವಿರುದ್ಧ ಕತ್ತಿ ಮಸೆಯಿತು. ಅಂಥ ವಿಷಮ ಸನ್ನಿವೇಶದಲ್ಲಿ ಭಾರತದ ಪರ ಕರಾರುವಾಕ್‌ ಮತ್ತು ಖಡಕ್‌ ಆಗಿ ವಾದ ಮಂಡಿಸಿ ಪಾಕ್‌- ಚೀನಾ ಜೋಡಿಯ ಸದ್ದಡಗಿಸಿದವರು ಸೈಯದ್‌ ಅಕ್ಬರುದ್ದೀನ್‌.
ಇವರು ವಿಶ್ವಸಂಸ್ಥೆಯ ಭಾರತದ ಕಾಯಂ ಪ್ರತಿನಿಧಿ ಹುದ್ದೆಯಲ್ಲಿದ್ದರು. ಕಾಶ್ಮೀರ ಕುರಿತ ಅಂದಿನ ವಿಶೇಷ ಸಭೆ ಮುಗಿದ ಬಳಿಕ ಪತ್ರಿಕಾಗೋಷ್ಠಿಯ ಸರದಿ. ಪಾಕಿಸ್ತಾನದ ಪ್ರತಿನಿಧಿ ಮಲೀದಾ ಲೋಧಿ ಮತ್ತು ಚೀನಾದ ಝಾಂಗ್‌ ಜುನ್‌ ಲಿಖಿತ ಹೇಳಿಕೆಯನ್ನು ಓದಿ, ಜಾಗತಿಕ ಪತ್ರಕರ್ತರ ಒಂದೇ ಒಂದು ಪ್ರಶ್ನೆಗೆ ಉತ್ತರಿಸದೆ ಎಸ್ಕೇಪ್‌ ಆಗಿದ್ದರು. ಆ ಬಳಿಕ ಪತ್ರಿಕಾಗೋಷ್ಠಿಗೆ ಬಂದು ಕಾಶ್ಮಿರ ಕುರಿತ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದ ಅಕ್ಬರುದ್ದೀನ್‌, ‘‘ಐದು ಪ್ರಶ್ನೆಗೆ ಉತ್ತರಿಸುವೆ. ಅದರಲ್ಲಿ ಮೂರು ಪಾಕಿಸ್ತಾನದ ಪತ್ರಕರ್ತರಿಗೆ ಮೀಸಲು,’’ ಎಂದುಬಿಟ್ಟರು. ಉಭಯ ದೇಶಗಳ ನಡುವೆ ಶಾಂತಿ ಮಾತುಕತೆ ಯಾವಾಗ ಎಂಬ ಮೊದಲ ಪಾಕ್‌ ಪತ್ರಕರ್ತ ಕೇಳಿದ ಪ್ರಶ್ನೆಗೆ ಇವರ ಉತ್ತರ ಹೀಗಿತ್ತು: ಶಾಂತಿ-ಸೌಹಾರ್ದದ ಮಾತುಕತೆ ನಡೆಯುವುದು ಸಭ್ಯ ದೇಶಗಳ ನಡುವೆ ಮಾತ್ರ. ಗಡಿಯಾಚೆಯಿಂದ ಉಗ್ರರನ್ನು ನುಸುಳಿಸುತ್ತ ಭಾರತದಲ್ಲಿ ಅಶಾಂತಿ ಸೃಷ್ಟಿಸಲು ಸದಾ ಯತ್ನಿಸುವ ದೇಶದ ಜತೆ ಮಾತುಕತೆ ನಡೆದರೆಷ್ಟು ಬಿಟ್ಟರೆಷ್ಟು?
ಪಾಕ್‌ ಜತೆ ಮಾತುಕತೆಗೆ ಭಾರತ ಸಿದ್ಧವೇ ಎಂದು ಮತ್ತೊಬ್ಬ ಪಾಕ್‌ ಪತ್ರಕರ್ತ ಪ್ರಶ್ನೆ ಕೇಳಿದ್ದೇ ತಡ. ಅಕ್ಬರುದ್ದೀನ್‌ ಸೀದಾ ಪತ್ರಕರ್ತರ ಗುಂಪಿನತ್ತ ದೌಡಾಯಿಸಿ ಅಲ್ಲಿದ್ದ ಮೂವರು ಪಾಕ್‌ ಪತ್ರಕರ್ತರ ಕೈಕುಲುಕಿ ಪತ್ರಕರ್ತರ ಸಮೂಹವನ್ನು ಅಚ್ಚರಿಗೆ ಕೆಡವಿದರು. ವಾಪಸ್‌ ಸ್ವಸ್ಥಾನಕ್ಕೆ ಬಂದು, ನಾವು ಯಾವಾಗಲೂ ಸ್ನೇಹಕ್ಕೆ ಕೈಚಾಚಲು ಸಿದ್ಧ. ಶಿಮ್ಲಾ ಒಪ್ಪಂದಕ್ಕೆ ಯಾವಾಗಲೂ ಬದ್ಧ. ಆದರೆ ಸ್ನೇಹಕ್ಕೆ ಗೌರವ ಕೊಡುವುದನ್ನು ನೀವು ಕಲಿಯಬೇಕಷ್ಟೆ ಎಂದು ಮುಖಕ್ಕೆ ಅಪ್ಪಳಿಸುವಂತೆ ಸಾಂಕೇತಿಕವಾಗಿ ಹೇಳಿದ್ದರು. ಹೀಗೆ ಕಾಶ್ಮೀರ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿಶ್ವಾಸಾರ್ಹತೆಗೆ ಒಂದಿನಿತೂ ಧಕ್ಕೆಯಾಗದಂತೆ ನೋಡಿಕೊಳ್ಳುವಲ್ಲಿ ಸೈಯದ್‌ ಅಕ್ಬರುದ್ದೀನ್‌ ಮಹತ್ವದ ಪಾತ್ರ ನಿಭಾಯಿಸಿದ್ದಾರೆ.
ಕಳೆದ ವರ್ಷ ಮೇನಲ್ಲಿ ಪಾಕ್‌ ಮೂಲದ ಉಗ್ರ ಮಹಾಪೋಷಕ ಮಸೂದ್‌ ಅಜರ್‌ನನ್ನು ವಿಶ್ವಸಂಸ್ಥೆ ಜಾಗತಿಕ ಉಗ್ರ ಎಂದು ಘೋಷಿಸುವಲ್ಲಿಯೂ ಅಕ್ಬರುದ್ದೀನ್‌ ಮಹತ್ವದ ಪಾತ್ರ ನಿಭಾಯಿಸಿದ್ದಾರೆ. ಕಂದಹಾರ್‌ ವಿಮಾನ ಅಪಹರಣ ಪ್ರಕರಣದಲ್ಲಿ ಭಾರತದಿಂದ ಸೇಫ್‌ ಆಗಿ ಪಾಕ್‌ ಸೇರಿಕೊಂಡು ಅಲ್ಲಿ ಉಗ್ರರ ಕಾರ್ಖಾನೆ ತೆರೆದಿರುವ ಮಸೂದ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವಂತೆ ಭಾರತ ದಶಕದಿಂದ ಪ್ರತಿಪಾದಿಸುತ್ತ ಬಂದಿತ್ತು. ಆದರೆ ಯಥಾಪ್ರಕಾರ ಚೀನಾ ಪಾಕ್‌ ಪರ ಗುರಾಣಿಯಾಗಿ ನಿಲ್ಲುತ್ತ ಭಾರತದ ಯತ್ನವನ್ನು ಹಾಳುಗೆಡವುತ್ತಿತ್ತು. ಮಸೂದ್‌ ಮೇಲೆ ಉಗ್ರ ಕ್ರಮ ಕುರಿತು ಅಕ್ಬರುದ್ದೀನ್‌ ವಿಶ್ವಸಂಸ್ಥೆಯ ಹಲವು ವೇದಿಕೆಗಳಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದಾರೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ಏಕೆ ಬೇಕು ಎಂಬ ಬಗ್ಗೆ ಅಕ್ಬರುದ್ದೀನ್‌, 135 ಕೋಟಿ ಜನಸಂಖ್ಯೆ ಹೊಂದಿರುವ ಮತ್ತು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಇಲ್ಲ ಎಂದರೆ ಹೇಗೆ ಎಂದು ವಾದ ಮಂಡಿಸಿ ಗಮನ ಸೆಳೆದಿದ್ದರು. ಕಾಶ್ಮೀರ ವಿಚಾರ, ಜಾಗತಿಕ ಉಗ್ರ ಘೋಷಣೆ ಇತ್ಯಾದಿ ಭಾರತದ ಯಶಸ್ವಿ ‘ರಾಜಕೀಯ ರಾಯಭಾರ’ದಲ್ಲಿ ಮಾತ್ರವಲ್ಲ, ದೀಪಾವಳಿ ವೇಳೆ ವಿಶ್ವಸಂಸ್ಥೆ ಕಟ್ಟಡಕ್ಕೆ ದೀಪಾಲಂಕಾರ ಮಾಡುವ, ದೀಪಾವಳಿ ಕುರಿತ ವಿಶ್ವಸಂಸ್ಥೆಯ ವಿಶೇಷ ಅಂಚೆಚೀಟಿ ಹೊರತುವ ನಿರ್ಧಾರದಲ್ಲೂ ಅಕ್ಬರುದ್ದೀನ್‌ ಭಾರತದ ‘ಸಾಂಸ್ಕೃತಿಕ ರಾಯಭಾರ’ ಪಾತ್ರ ನಿರ್ವಹಿಸಿದ್ದಾರೆ.
ಅಕ್ಬರುದ್ದೀನ್‌ ಹೈದರಾಬಾದಿನವರು. ತಂದೆ ಎಸ್‌ ಬಶಿರುದ್ದೀನ್‌ ಒಸ್ಮಾನಿಯಾ ವಿವಿಯಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾಗಿದ್ದರು. ತಾಯಿ ಕೂಡ ಸತ್ಯ ಸಾಯಿ ವಿವಿಯಲ್ಲಿ ಪ್ರಾಧ್ಯಾಪಕಿಯಾಗಿದ್ದರು. ಅಕ್ಬರುದ್ದೀನ್‌ ಪತ್ನಿ ಪದ್ಮಾ. ಇಬ್ಬರು ಗಂಡು ಮಕ್ಕಳು. ರಾಜಕೀಯ ಶಾಸ್ತ್ರದಲ್ಲಿ ಎಂಎ ಮುಗಿಸಿದ್ದ ಅಕ್ಬರುದ್ದೀನ್‌ 1985ರಲ್ಲಿ ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್‌)ಗೆ ಸೇರಿದರು. ಇಲಾಖೆಯ ಹಲವು ವಿಭಾಗಗಳಲ್ಲಿ ಕಾರ್ಯ ನಿರ್ವಹಣೆ ಬಳಿಕ 1995ರಿಂದ 98ರವರೆಗೆ ವಿಶ್ವಸಂಸ್ಥೆಯಲ್ಲಿ ಕಾರ್ಯದರ್ಶಿಯಾಗಿದ್ದರು. 2000ದಿಂದ 2005ರವರೆಗೆ ವಿದೇಶಾಂಗ ಕಚೇರಿ ನಿರ್ದೇಶಕನ ಹುದ್ದೆಯಲ್ಲಿದ್ದರು. 2006ರಿಂದ 11ರವರೆಗೆ ಇಂಟರ್‌ನ್ಯಾಷನಲ್‌ ಅಟೊಮಿಕ್‌ ಎನರ್ಜಿ ಏಜೆನ್ಸಿಯಲ್ಲಿದ್ದರು.
2012ರಲ್ಲಿ ವಿದೇಶಾಂಗ ವ್ಯವಹಾರ ಇಲಾಖೆಯ ವಕ್ತಾರನ ಹುದ್ದೆ ಖಾಲಿ ಇತ್ತು. ಹಲವು ಅಧಿಕಾರಿಗಳು ಈ ಹುದ್ದೆ ನಿಭಾಯಿಸಲು ಹಿಂದೆ ಸರಿದಿದ್ದರು. ಏಕೆಂದರೆ ಇದು ಅತ್ಯಂತ ಹೊಣೆಗಾರಿಕೆಯ, ಜಗತ್ತಿನ ಘಟಾನುಘಟಿ ಪತ್ರಕರ್ತರನ್ನು ಎದುರಿಸಬೇಕಾದ, ಪ್ರತಿಕ್ಷಣದ ಜಾಗತಿಕ ಮಾಹಿತಿ ಹೊಂದಿರಬೇಕಾದ ಮತ್ತು ಪ್ರತಿಯೊಂದು ಪದವನ್ನೂ ಅಳೆದು ತೂಗಿ ಪ್ರಯೋಗಿಸಬೇಕಾದ ಸವಾಲಿನ ಹುದ್ದೆ. ಪ್ರಧಾನಿಯ ವಿದೇಶ ಪ್ರವಾಸ ಮತ್ತು ಇತರ ದೇಶಗಳ ಮುಖ್ಯಸ್ಥರ ಭಾರತ ಭೇಟಿಯ ವೇಳೆಯಲ್ಲಂತೂ 24*7 ಸಮರೋಪಾದಿ ಕೆಲಸ. ಈ ಹೊಣೆಗಾರಿಕೆಯನ್ನು ಸವಾಲಾಗಿ ಸ್ವೀಕರಿಸಿದ ಅಕ್ಬರುದ್ದೀನ್‌ ಜಾಣ್ಮೆಯ ಮಾತುಗಾರಿಕೆಯಿಂದ ಖ್ಯಾತಿ ಗಳಿಸತೊಡಗಿದರು. ಪ್ರಧಾನಿ ಮೋದಿ ಕೂಡ, ‘‘ನಾನು ಅಕ್ಬರುದ್ದೀನ್‌ ಅಭಿಮಾನಿ. ಇಂತಹ ಅಧಿಕಾರಿಗಳು ಎಲ್ಲ ಇಲಾಖೆಗಳಲ್ಲೂ ಇರಬೇಕು,’’ ಎಂದು ಬಣ್ಣಿಸಿದ್ದರು. ಮುಂದೆ 2016ರಲ್ಲಿ ಇವರನ್ನು ಕೇಂದ್ರ ಸರಕಾರ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಂಥ ಮಹತ್ವದ ಹುದ್ದೆ ನೀಡಿತು.
ಅಕ್ಬರುದ್ದೀನ್‌ ಯುವ ಅಧಿಕಾರಿಗಳಿಗೆ ಮಾದರಿ. ಬೆಳಗ್ಗೆ 7ರಿಂದ ಮಧ್ಯರಾತ್ರಿ 12ರವರೆಗೆ ಸಕ್ರಿಯರಾಗಿರುತ್ತಿದ್ದ ಇವರು, ನಿತ್ಯ 300ಕ್ಕೂ ಹೆಚ್ಚು ಫೋನ್‌ ಕರೆ ಮತ್ತು ಮೆಸೇಜ್‌ಗಳನ್ನು ನಿಭಾಯಿಸುತ್ತಿದ್ದರು. ಸಾಂಪ್ರದಾಯಿಕ ಮಾಧ್ಯಮಗಳ ಜತೆಗೆ, ಫೇಸ್‌ಬುಕ್‌-ಟ್ವಿಟರ್‌ನಂಥ ನವಮಾಧ್ಯಮಗಳ ಮೂಲಕವೂ ನಿರಂತರ ಸಂವಹನ ನಡೆಸುತ್ತ ನಾನಾ ವಿದ್ಯಮಾನಗಳಿಗೆ ಭಾರತದ ನಿಲುವನ್ನು ಬಿಂಬಿಸುತ್ತಿದ್ದರು. ನಾನೊಬ್ಬ ಭಾರತದ ಸೇನಾನಿ, ಸಾಂಸ್ಕೃತಿಕ ರಾಯಭಾರಿ ಎಂದು ಹೇಳಿಕೊಳ್ಳುವ ಸೈಯದ್‌ ಅಕ್ಬರುದ್ದೀನ್‌, ಏ.30ರಂದು ನಿವೃತ್ತರಾಗುವಾಗ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌ ಅವರಿಗೆ, ‘‘ಇಂದು ನನ್ನ ಕರ್ತವ್ಯದ ಕೊನೆಯ ದಿನ. ಭಾರತೀಯ ಸಂಸ್ಕೃತಿಯಂತೆ ನಿಮಗೆ ತಲೆಬಾಗಿ ಕೈಜೋಡಿಸಿ ನಮಸ್ತೆ ಹೇಳುತ್ತೇನೆ,’’ ಎನ್ನುವ ಮೂಲಕ ಮತ್ತೊಮ್ಮೆ ಕೋಟ್ಯಂತರ ಭಾರತೀಯರ ಹೃದಯ ಗೆದ್ದಿದ್ದಾರೆ. ಹಿಂದೆ ಕೆಲವು ದಕ್ಷ ಅಧಿಕಾರಿಗಳಿಗೆ ನೀಡಿದಂತೆ ಅಕ್ಬರುದ್ದೀನ್‌ ಅವರಿಗೂ ಮೋದಿ ಸರಕಾರ ಮತ್ತೊಂದು ಮಹತ್ವದ ಹೊಣೆಗಾರಿಕೆ ನೀಡಲಿ ಎಂದು ಆಶಿಸೋಣ. ಉಳಿದೆಲ್ಲವುಗಳಿಗಿಂತ ನನ್ನ ದೇಶವೇ ಮೊದಲು ಎನ್ನುವ ಅಕ್ಬರುದ್ದೀನ್‌ರಂಥ ಅಧಿಕಾರಿಗಳು ದೇಶದ ಹೆಮ್ಮೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top