ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಿಸಲಿರುವ ಮೆಗಾ ಪ್ಯಾಕೇಜ್

(ಆತ್ಮನಿರ್ಭರ ಭಾರತ್ ಭಾಗ 4)

ಕೃಷಿ ವಲಯದ ಮಾರುಕಟ್ಟೆ ಸುಧಾರಣೆಗೆ ಹಲವು ದೀರ್ಘಕಾಲೀನ ಪರಿಣಾಮ ಬೀರಬಲ್ಲ ಯೋಜನೆಗಳನ್ನು ಆತ್ಮನಿರ್ಭರ ಭಾರತ್ ಯೋಜನೆಯಲ್ಲಿ ಪ್ರಕಟಿಸಿರುವುದು ವಿಶೇಷ.
ಪ್ರತಿ ರಾಜ್ಯಗಳಲ್ಲಿ ಕೃಷಿ ಸಂಬಂಧಿತ ಕಿರು ಉದ್ದಿಮೆ ಘಟಕ ಅಭಿವೃದ್ಧಿಪಡಿಸಲು 10,000 ಕೋಟಿ ರೂ. ಮೀಸಲಿಟ್ಟಿರುವುದು, ಕೃಷಿ ಮಾರುಕಟ್ಟೆ ನಿಯಮಗಳನ್ನು ಸಡಿಲಗೊಳಿಸುತ್ತಿರುವುದು, ಕೃಷಿ ಉತ್ಪನ್ನ ಮುಕ್ತ ವ್ಯಾಪಾರಕ್ಕೆ ಇ-ಟ್ರೇಡಿಂಗ್, ಮೀನುಗಾರಿಕೆ ನೆರವು, ಅಗತ್ಯ ವಸ್ತುಗಳ ಕಾಯಿದೆ ವ್ಯಾಪ್ತಿಯಿಂದ ಈರುಳ್ಳಿ, ಆಲೂಗಡ್ಡೆ ಇತ್ಯಾದಿಗಳನ್ನು ಬೇರ್ಪಡಿಸಿರುವುದು, ಕರ್ನಾಟಕದ ರಾಗಿ ಸೇರಿ ಸ್ಥಳೀಯ ವಿಶಿಷ್ಟ ಧಾನ್ಯಗಳನ್ನು ಗ್ಲೋಬಲ್ ಬ್ರ್ಯಾಂಡ್ ಆಗಿಸಲು ಉಪಕ್ರಮ, ಎಲ್ಲವೂ ಭವಿಷ್ಯದಲ್ಲಿ ಕೃಷಿಕರ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಿಸಲು ಅನುಕೂಲಕರ. ಶೀಥಲೀಕರಣ ಘಟಕ ಇತ್ಯಾದಿ ಮೂಲ ಸೌಕರ್ಯಗಳು ವೃದ್ಧಿಸಲಿವೆ ಎನ್ನುತ್ತಾರೆ ತಜ್ಞರು. ಕೃಷಿ ಮಾರುಕಟ್ಟೆ ಸುಧಾರಣೆಯಿಂದ ಹಳ್ಳಿಗಳಲ್ಲಿಯೇ ಉಳಿದುಕೊಳ್ಳಲು ಬಯಸಿರುವ ಜನತೆಗೂ ಉದ್ಯೋಗ ಸೃಷ್ಟಿಯಾಗಲಿದೆ ಎನ್ನುತ್ತಾರೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರೊ. ಎಸ್.ಆರ್ ಕೇಶವ್.
ನಬಾರ್ಡ್ ಮೂಲಕ 30,000 ಕೋಟಿ ರೂ.ಗಳ ಹಣಕಾಸು ನೆರವನ್ನು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಮತ್ತು ಸೊಸೈಟಿಗಳಿಗೆ ವಿತರಿಸಲು ನಿರ್ಧರಿಸಲಾಗಿದೆ. ಕೃಷಿಕರಿಗೆ ಬೆಳೆ ಸಾಲ ಪಡೆಯಲು ಇದು ಅನುಕೂಲಕರ. ನಬಾರ್ಡ್‌ಗೆ ನೀಡಿರುವ 90,000 ಕೋಟಿ ರೂ.ಗೆ ಹೆಚ್ಚುವರಿ 30,000 ಕೋಟಿ ರೂ. ನೀಡಲಾಗುತ್ತಿದೆ. 3 ಕೋಟಿ ರೈತರಿಗೆ ಇದು ಪ್ರಯೋಜನಕಾರಿ. 2.5 ಕೋಟಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ವಿತರಣೆಗೆ 2 ಲಕ್ಷ ಕೋಟಿ ರೂ. ಘೋಷಿಸಲಾಗಿದೆ.
ರೈತರು ಸಹಕಾರ ಸಂಘಗಳಿಂದ ಪಡೆದ ಬೆಳೆ ಸಾಲ ಮರು ಪಾವತಿಸಲು ರಾಜ್ಯ ಸರಕಾರ ಜೂನ್ 30ರ ತನಕ ಗಡುವು ವಿಸ್ತರಿಸಿತ್ತು. ಆದರೆ ಸಕಾಲದಲ್ಲಿ ಸಾಲ ಮರುಪಾವತಿಸಿ ಶೇ.3ರ ಬಡ್ಡಿ ಸಹಾಯಧನ ಪಡೆಯಲು ಗಡುವನ್ನು ಕೇಂದ್ರ ಮೇ 31ಕ್ಕೆ ಮುಂದೂಡಿತ್ತು. ಇನ್ನೂ ಹಲವು ತಿಂಗಳು ಸೂಕ್ತ ಮಾರುಕಟ್ಟೆ ಸಿಗುವುದು ಕಷ್ಟ. ಹೀಗಾಗಿ ಸರಕಾರ ಬಡ್ಡಿ ಮನ್ನಾ ಮಾಡಬೇಕು ಎನ್ನುತ್ತಾರೆ ಕಬ್ಬು ಬೆಳೆಗಾರರ ಸಂಘಟನೆ ಅಧ್ಯಕ್ಷ ಕುರುಬೂರು ಶಾಂತಕುಮಾರ್.

ರೈತರಿಗೆ ಕೊಟ್ಟಿದ್ದೇನು?
– ಒಟ್ಟು 1.63 ಲಕ್ಷ ಕೋಟಿ ರೂ. ನೆರವು. ಕೃಷಿ ಮೂಲ ಸೌಕರ್ಯ, ಸೊಸೈಟಿ, ರೈತ ಉತ್ಪಾದಕ ಕಂಪನಿ, ಕೃಷಿ ಉದ್ದಿಮೆಗೆ ಪುಷ್ಟಿ
– ಅಗತ್ಯ ವಸ್ತುಗಳ ಕಾಯಿದೆಗೆ ತಿದ್ದುಪಡಿ. ಕೃಷಿ ಮಾರುಕಟ್ಟೆ ಸುಧಾರಣೆ, ರೈತರು ಎಲ್ಲಿ ಬೇಕಾದರೂ ಉತ್ಪನ್ನ ಮಾರಾಟ ಮಾಡಲು ಅವಕಾಶ
– ಪಶುಸಂಗೋಪನೆ ಮೂಲಸೌಕರ್ಯಕ್ಕೆ 15,000 ಕೋಟಿ ರೂಪಾಯಿ, ಕೃಷಿ ಆಧಾರಿತ ಆಹಾರೋದ್ದಿಮೆಗೆ 10,000 ಕೋಟಿ ರೂ. ಮೀನುಗಾರಿಕೆಗೆ 20,000 ಕೋಟಿ ರೂ.
– ಟೊಮೆಟೊ, ಈರುಳ್ಳಿ, ಆಲೂಗಡ್ಡೆ ಜತೆಗೆ ಇತರ ಹಣ್ಣು, ತರಕಾರಿಗಳನ್ನು ಮಾರುಕಟ್ಟೆಗೆ ಸಾಗಿಸಲು 500 ಕೋಟಿ ರೂ. ವೆಚ್ಚದ ವ್ಯವಸ್ಥೆ, ಜೇನು ಸಾಕಾಣಿಕೆಗೆ 500 ಕೋಟಿ ರೂ.

ಪ್ಯಾಕೇಜ್‌ನಲ್ಲಿ ಏನಿರಬೇಕಿತ್ತು?
– ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್, ಸೊಸೈಟಿಗಳಲ್ಲಿ ಹಳೆ ಬೆಳೆ ಸಾಲದ ಮರು ಪಾವತಿಗೆ ಮತ್ತಷ್ಟು ಕಾಲಾವಕಾಶ.
– ಬೆಂಬಲ ಬೆಲೆಗೆ ಅನುಗುಣವಾಗಿ ಖರೀದಿಸುವ ಕೃಷಿ ಉತ್ಪನ್ನಗಳ ಸಂಖ್ಯೆಯನ್ನು ಹೆಚ್ಚಿಸಿ ರೈತರಿಗೆ ಅನುಕೂಲ ಮಾಡಬಹುದಿತ್ತು.
– ನರೇಗಾ ಯೋಜನೆಯಲ್ಲಿ ಎಲ್ಲ ಕೃಷಿ ಚಟುವಟಿಕೆಗಳನ್ನು ಸೇರಿಸಬೇಕು. ಈಗ ಕೆಲ ಚಟುವಟಿಕೆಗಳಿಗೆ ಸೀಮಿತವಾಗಿದೆ.
– ಫಸಲ್ ಬಿಮಾ ಯೋಜನೆಯಲ್ಲಿ ಬಹುತೇಕ ಎಲ್ಲ ಬೆಳೆಗಳಿಗೂ ವಿಮೆ ಪರಿಹಾರ ಕಲ್ಪಿಸಬೇಕು. ಈಗ ಮುಖ್ಯವಾಗಿ ಆಹಾರ ಬೆಳೆಗಳಿಗೆ ಸೀಮಿತವಾಗಿದೆ.
– ಗ್ರಾಮಾಂತರ ವಲಯದಲ್ಲಿ ಮಹಿಳಾ ಸ್ವ ಸಹಾಯ ಸಂಸ್ಥೆಗಳು ಸಾಲ ಮರುಪಾವತಿಸುವಲ್ಲಿ ವಿಫಲವಾಗುತ್ತಿವೆ. ಅವುಗಳಿಗೆ ನೆರವು ನೀಡಬಹುದಿತ್ತು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top