ಅಚ್ಛೇ ದಿನ್ ಮಾತುಕೊಟ್ಟ ಮೋದಿ ಈಗೇನು ಮಾಡ್ತಾರೆ?

ಬಿಜೆಪಿ ವರಿಷ್ಠರಿಗೆ ಪಕ್ಷದ ಭವಿಷ್ಯದ ಚಿಂತೆ ಕಿಂಚಿತ್ತಾದರೂ ಇದ್ದರೆ, ಹಗರಣದ ನೆರಳಿನಲ್ಲಿ ಯುಪಿಎ ಸರ್ಕಾರದ ಸಾಲುಸಾಲು ಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ತಲೆದಂಡ ಪಡೆದ ನೆನಪು ತುಸುವಾದರೂ ಇದ್ದರೆ, ಮೊದಲು ಸುಷ್ಮಾ ಮತ್ತು ವಸುಂಧರಾ ರಾಜೆ ರಾಜೀನಾಮೆ ಪಡೆಯಬೇಕು.

111ಸರ್ಕಾರ ನಡೆಸುವುದು ಅಂದರೆ ಅಷ್ಟು ಸಲೀಸೇ? ಕುರ್ಚಿ ಅಂದರೆ ಸುಖದ ಸುಪ್ಪತ್ತಿಗೆ ಮಾತ್ರವೇ? ಸರ್ಕಾರದ ಚುಕ್ಕಾಣಿ ಹಿಡಿದವರು ಕೀರ್ತಿಯ ಹಾರ ತುರಾಯಿಗಳಿಗೆ ಮಾತ್ರ ಕೊರಳೊಡ್ಡಿದರೆ ಸಾಕೇ? ಅದರ ಜೊತೆಜೊತೆಗೇ ಬರುವ ಅಪಮಾನ, ಅಪವಾದ, ಕಳಂಕಗಳಿಗೂ ಹೆಗಲು ಕೊಡುವುದು ಬೇಡವೇ?
ಹಾಂ.. ಅಂದ ಹಾಗೆ ಕೇಂದ್ರದ ಮೋದಿ ಸರ್ಕಾರ ಹಿಂದಿನ ಯುಪಿಎ ಸರ್ಕಾರದ ಆಧಾರ್, ಜನಧನ ಮತ್ತೊಂದು ಮಗದೊಂದು ಯೋಜನೆಗಳನ್ನು ಕಾಪಿ ಮಾಡುತ್ತಿದೆ ಎಂಬ ಟೀಕೆಯಷ್ಟೇ ಈವರೆಗೆ ಗೊತ್ತಿತ್ತು. ಆದರೆ, ಸಿಬಿಐ, ಜಾರಿ ನಿರ್ದೇಶನಾಲಯದಂತಹ ಉನ್ನತ ತನಿಖಾ ಏಜೆನ್ಸಿಗಳನ್ನು ರಾಜಕೀಯ ಎದುರಾಳಿಗಳ ವಿರುದ್ಧ ಛೂ ಬಿಡುವುದರಲ್ಲೂ ಹಿಂದಿನ ಸರ್ಕಾರದ ಪರಿಪಾಠವನ್ನು ಮುಂದುವರಿಸಲಾಗುತ್ತಿದೆಯೇ? ಕಳೆದೊಂದು ವಾರದಿಂದ ಇಂತಹ ಚರ್ಚೆಯೊಂದು ದೆಹಲಿ ರಾಜಕೀಯ ವಲಯದಲ್ಲಿ ಗಿರಕಿ ಹೊಡೆಯುತ್ತಿದೆ. ನಕಲಿ ಪದವಿ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕೇಜ್ರಿವಾಲ್ ಸರ್ಕಾರದ ಕಾನೂನು ಮಂತ್ರಿ ಜಿತೇಂದ್ರ ಸಿಂಗ್ ತೋಮರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದಾಗ ಈ ಚರ್ಚೆ ಶುರುವಾದದ್ದು. ಕಾಂಗ್ರೆಸ್ ನಾಯಕರಾದ ಹಿಮಾಚಲ ಪ್ರದೇಶದ ಹಾಲಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಹಾಗೂ ಗುಜರಾತ್ ಮಾಜಿ ಸಿಎಂ ಶಂಕರ ಸಿಂಗ್ ವಘೇಲಾ ವಿರುದ್ಧ ಸಿಬಿಐ ತನಿಖೆ ಕೈಗೆತ್ತಿಕೊಳ್ಳುತ್ತದೆ ಎಂದಾಗ ಈ ಚರ್ಚೆ ವ್ಯಾಪಕ ಸ್ವರೂಪ ಪಡೆಯಿತು. ಹಾಗಾದರೆ ಈ ಹೇಳಿಕೆಗಳಲ್ಲಿ ವಾಸ್ತವ ಎಷ್ಟು, ಅಪವಾದದ ಪಾಲೆಷ್ಟು?

ತೋಮರ್ ವಿಷಯಕ್ಕೇ ಬರೋಣ. ಅವರು ಮಾಡಿದ್ದು ಮಹಾಪರಾಧ ಅಲ್ಲವೇ? ಭ್ರಷ್ಟಾಚಾರ ಮತ್ತು ಅಪರಾಧಿಕ ರಾಜಕಾರಣವನ್ನು ಮೂಲೋತ್ಪಾಟನೆ ಮಾಡುವ ಸಂಕಲ್ಪದೊಂದಿಗೆ ಅಖಾಡಕ್ಕಿಳಿದು ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷದ ಸರ್ಕಾರದ ಈ ಕಾನೂನು ಮಂತ್ರಿಯ ಮೂಲ ಜಾತಕವೇ ನಕಲಿ. ಬಿಎಸ್‍ಸಿ ಸರ್ಟಿಫಿಕೆಟ್ ನಕಲಿ. ಕಾನೂನು ಪದವಿ ಸರ್ಟಿಫಿಕೆಟ್ ನಕಲಿ. ನಕಲಿ ಪ್ರಮಾಣಪತ್ರವಿಟ್ಟುಕೊಂಡು ಬಾರ್ ಕೌನ್ಸಿಲ್‍ನಲ್ಲಿ ವಕೀಲಿಕೆಗೆ ನೋಂದಣಿಯನ್ನೂ ಮಾಡಿಸಿದ್ದರು. ಇದು ಬಟಾಬಯಲಾದಾಗ ಆಂತರಿಕ ತನಿಖೆಗೆ ಮುಂದಾದ ಆಮ್ ಆದ್ಮಿ ಪಕ್ಷದ ಓಂಬುಡ್ಸ್‍ಮನ್‍ಗೆ ಅದೇ ನಕಲಿ ದಾಖಲೆ ತೋರಿಸಿ ತನ್ನದೇ ಸರಿ ಎಂದರು. ಕೊನೆಗೂ ತೋಮರ್ ತಾನು ಮಾಡಿದ್ದು ಪ್ರಮಾದ ಎಂದು ಒಪ್ಪಿಕೊಳ್ಳಲು ದೆಹಲಿ ಪೊಲೀಸರೇ ಬರಬೇಕಾಯಿತು. ಆದರೆ ಅಷ್ಟೊತ್ತಿಗಾಗಲೇ ದ್ವೇಷ ರಾಜಕಾರಣದ ಚರ್ಚೆ ತಾರಕಕ್ಕೆ ತಲುಪಿಯಾಗಿತ್ತು.

ವಾಸ್ತವದಲ್ಲಿ ಏನಾಗಬೇಕಿತ್ತು? ಆಮ್ ಆದ್ಮಿ ಸರ್ಕಾರದಿಂದ ದೆಹಲಿ ಜನರು ಯಾವ ನಿರೀಕ್ಷೆ ಇಟ್ಟುಕೊಂಡಿದ್ದರು? ಮಂತ್ರಿ ತೋಮರ್ ವಿರುದ್ಧ ಕ್ರಿಮಿನಲ್ ಅಪರಾಧದ ಆರೋಪ ಕೇಳಿಬಂದಾಗ ಸಿಎಂ ಕೇಜ್ರಿವಾಲ್ ಮೊದಲು ಪ್ರಕರಣದ ಸತ್ಯಾಸತ್ಯತೆ ತಿಳಿದುಕೊಳ್ಳಬೇಕಿತ್ತು. ಮುಖ್ಯಮಂತ್ರಿಯಾದವರಿಗೆ ಅದು ಕಷ್ಟದ ಕೆಲಸವಲ್ಲ. ಹಕೀಕತ್ ಗೊತ್ತಾದ ಬಳಿಕ ಮುಲಾಜಿಲ್ಲದೆ ತೋಮರ್ ರಾಜೀನಾಮೆ ಪಡೆಯಬೇಕಿತ್ತು. ಆಗ ಕೇಜ್ರಿವಾಲ್ ಬಗೆಗಿನ ಗೌರವ ನೂರ್ಮಡಿ ಹೆಚ್ಚಾಗುತ್ತಿತ್ತು. ವಿಚಿತ್ರ ಎಂದರೆ ನಿರೀಕ್ಷೆಯ ಬೆಟ್ಟವನ್ನೇ ನಿರ್ಮಿಸಿದ್ದ ಕೇಜ್ರಿವಾಲ್ ಕೂಡ ಮಾಮೂಲಿ ರಾಜಕಾರಣಿಯಂತೆ ವರ್ತಿಸಿ ನಿರಾಸೆ ಮೂಡಿಸಿಬಿಟ್ಟರು.

ಇನ್ನು ವೀರಭದ್ರ ಸಿಂಗ್ ಮತ್ತು ವಘೇಲಾ ಪ್ರಕರಣ. ನಿಜವಾಗಿ ಅವು ಹೊಸ ಪ್ರಕರಣಗಳೇ ಅಲ್ಲ. ಹಿಂದಿನ ಯುಪಿಎ ಸರ್ಕಾರ ಕ್ರಮ ಜರುಗಿಸಿದ್ದರೆ ಇವರಿಬ್ಬರೂ ಎಂದೋ ಜೈಲು ಸೇರಬೇಕಿತ್ತು. ಆದರೆ ಅವರು ಕಾಂಗ್ರೆಸ್ಸಿಗರು ಎಂಬುದಕ್ಕಾಗಿ ಸರ್ಕಾರದ ಆಶ್ರಯ ಪಡೆದು ಬಚಾವಾಗಿದ್ದರು. ವೀರಭದ್ರ ಸಿಂಗ್ ವಿರುದ್ಧ 1989ರಲ್ಲೇ ಪ್ರಕರಣ ದಾಖಲಾಗಿತ್ತು. ಆಗಲೂ ಅವರು ಆ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮ ಆಸ್ತಿ ಸಂಪಾದಿಸಿದ್ದಾರೆಂಬುದು ಪ್ರಕರಣದ ತಿರುಳಾಗಿತ್ತು. ಅದು ಗೊತ್ತಿದ್ದೂ ಯುಪಿಎ ಸರ್ಕಾರದಲ್ಲಿ ಅವರನ್ನು ಸಣ್ಣ ಮತ್ತು ಮಧ್ಯಮ ಕೈಗಾರಿಕೆಯಂಥ ಮಹತ್ವದ ಖಾತೆಯ ಮಂತ್ರಿಯನ್ನಾಗಿ ಮಾಡಲಾಯಿತು. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ವೀರಭದ್ರ ಸಿಂಗ್, ಪತ್ನಿ ಪ್ರತಿಭಾ, ಪುತ್ರ ವಿಕ್ರಮಾದಿತ್ಯ ಮತ್ತು ಪುತ್ರಿ ಅಪರಾಜಿತಾ ಅಪರಾಧಿಗಳೆಂದು ಎರಡು ವರ್ಷದ ಹಿಂದೆ ಕೋರ್ಟ್ ತೀರ್ಪು ನೀಡಿತು. ಆಗ ವೀರಭದ್ರ ಸಿಂಗ್ ಅನಿವಾರ್ಯವಾಗಿ ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದರು. ಕೋರ್ಟ್ ಆದೇಶದಂತೆಯೇ ಸಿಬಿಐ ಈಗ ವಿಸ್ತೃತ ತನಿಖೆಯನ್ನು ಕೈಗೆತ್ತಿಕೊಂಡಿದೆ. ವಘೇಲಾ ಪ್ರಕರಣವೂ ಇಂಥದ್ದೆ. ರಾಷ್ಟ್ರೀಯ ಜವಳಿ ನಿಗಮಕ್ಕೆ ಸಂಬಂಧಿಸಿದ 709 ಕೋಟಿ ರೂ.ಗಳ ಭೂ ಹಗರಣವದು. ಹಾಗಾದರೆ ಸಿಬಿಐ ತನಿಖೆಯನ್ನೇ ಮಾಡಬಾರದೆ? ಸೇಡಿನ ರಾಜಕಾರಣದ ಹುಯಿಲೆಬ್ಬಿಸುವವರಿಗೆ ಇದಾವುದೂ ಗಮನಕ್ಕೆ ಬಾರದೇ ಇರುವುದು ಆಶ್ಚರ್ಯ.

ಆದರೆ ಅದೆಲ್ಲಕ್ಕಿಂತ ಮಿಗಿಲಾಗಿ ಕೇಂದ್ರ ಸರ್ಕಾರಕ್ಕೆ ಸಂದಿಗ್ಧ, ಮುಜುಗರ, ಅಗ್ನಿಪರೀಕ್ಷೆ ಎದುರಾದದ್ದು ಸುಷ್ಮಾ ಸ್ವರಾಜ್ ಮತ್ತು ವಸುಂಧರಾ ರಾಜೆ ಅಧಿಕಾರ ದುರುಪಯೋಗದ ಆರೋಪ ಪ್ರಕರಣದಲ್ಲಿ.

ಮೋದಿ ಸರ್ಕಾರದ ಮಂತ್ರಿ ಮತ್ತು ರಾಜಸ್ಥಾನ ಮುಖ್ಯಮಂತ್ರಿಗಳು ಲಲಿತ್ ಮೋದಿ ಜೊತೆಗೆ ಹೊಂದಿರುವ ಸಂಬಂಧದ ಕುರಿತು ವಿವಾದ ಇಷ್ಟು ದೊಡ್ಡದಾಗಲು ಎರಡು ಮುಖ್ಯ ಕಾರಣಗಳಿವೆ. ಒಂದು- ನೈತಿಕ ಕಾರಣ. ಮತ್ತೊಂದು- ಕ್ರಿಮಿನಲ್ ಅಪರಾಧದ ವಿಚಾರ. ಜನಪ್ರಿಯ ಕ್ರೀಡೆ ಕ್ರಿಕೆಟನ್ನು ಶುದ್ಧ ಜೂಜಿನ ಅಡ್ಡೆಯನ್ನಾಗಿ ಮಾಡಿದ ಕುಖ್ಯಾತಿ ಇದೇ ಲಲಿತ್ ಮೋದಿಗೆ ಸಲ್ಲುತ್ತದೆ. ಕ್ರಿಕೆಟ್‍ನಲ್ಲಿ ಬೆಟ್ಟಿಂಗ್ ಆಟಾಟೋಪ, ಚಿಯರ್‍ಗರ್ಲ್ಸ್  ಅಬ್ಬರ, ಆಟಗಾರರ ಹರಾಜಿನಂತಹ ಪ್ರಳಯಾಂತಕ ಜೂಜು ಶುರುವಾದದ್ದು ಐಪಿಎಲ್ ಬಂದ ನಂತರವೇ. ಅದಕ್ಕೆ ನೇರ ಹೊಣೆ ಲಲಿತ್ ಮೋದಿ. ಆ ನಂತರದ್ದು ಕ್ರಿಕೆಟ್ ಮಂಡಳಿಯಲ್ಲಿ ಅವರು ಎಸಗಿದ ಸಾವಿರಾರು ಕೋಟಿ ರೂಪಾಯಿಗಳ ಅವ್ಯವಹಾರದ ಆರೋಪ. ಇಲ್ಲಿ ಎಲ್ಲ ರೀತಿಯ ಅಕ್ರಮ ಅವ್ಯವಹಾರದ ಆಟ ಮುಗಿಸಿದ ಲಲಿತ್ ಮೋದಿ ಇನ್ನು ಬಚಾವಾಗಲು ಸಾಧ್ಯವೇ ಇಲ್ಲ ಎಂದಾಗ ಇಂಗ್ಲೆಂಡ್‍ಗೆ ಹೋಗಿ ಅಕ್ಷರಶಃ ತಲೆಮರೆಸಿಕೊಂಡರು. ಹಾಗೆ ನೋಡಿದರೆ ಮೋದಿ ಮಾಡಿದ ಆರ್ಥಿಕ ಅವ್ಯವಹಾರಕ್ಕಿಂತಲೂ ಅವರು ಇಂಗ್ಲೆಂಡ್‍ಗೆ ಹೋಗಿ ತಲೆಮರೆಸಿಕೊಂಡಿದ್ದೇ ಮಹಾಪರಾಧ. ಅಂಥವರೊಂದಿಗೆ ಓರ್ವ ಮಂತ್ರಿ, ಮುಖ್ಯಮಂತ್ರಿ ನಂಟು ಇಟ್ಟುಕೊಳ್ಳುವುದೇ? ತಮ್ಮದೇ ಸರ್ಕಾರದ ಜಾರಿ ನಿರ್ದೇಶನಾಲಯ ಲಲಿತ್ ಮೋದಿ ಬಂಧನಕ್ಕಾಗಿ ಹುಡುಕಾಟ ನಡೆಸಿರುವಾಗ ಅದೇ ವ್ಯಕ್ತಿಯೊಂದಿಗಿನ ನಂಟಿಗೆ ಮಾನವೀಯ ಸಂಬಂಧದ ಮುಖವಾಡ ತೊಡಿಸುವುದೇ? ಇದೆಂಥಾ ಸೋಗಲಾಡಿತನ! ಮಾನವೀಯ ಸಂಬಂಧ ಮಣ್ಣು ಮಸಿ ಏನೂ ಇಲ್ಲ. ಸುಷ್ಮಾ ಸ್ವರಾಜ್ ಪತಿ ಕೌಶಲ್ ಸ್ವರಾಜ್ ಮತ್ತು ಮಗಳು ಬಾನ್ಸುರಿ ಹೊಂದಿರುವುದು ಶುದ್ಧ ವ್ಯಾವಹಾರಿಕ ಸಂಬಂಧ ಮಾತ್ರ. ವಕೀಲಿಕೆ ವೃತ್ತಿ ನಡೆಸುತ್ತಿರುವ ಈ ಇಬ್ಬರೂ ಲಲಿತ್ ಮೋದಿಯನ್ನು ಕಾನೂನಿನ ಜಂಜಾಟದಿಂದ ಮುಕ್ತಗೊಳಿಸಲು ಹಗಲು ರಾತ್ರಿ ದುಡಿಯುತ್ತಿರುವವರು. ಅದಕ್ಕೆ ಪೂರಕವಾಗಿ ಸುಷ್ಮಾರ ಪ್ರಭಾವ ಮತ್ತು ಅಧಿಕಾರ ಬಲವನ್ನು ಬಳಸಿಕೊಂಡಿದ್ದಾರೆ ಅಷ್ಟೆ. ಹೀಗಾಗಿ ಸುಷ್ಮಾ ಸ್ವರಾಜ್ ಪಾಲಿಗೆ ಉಳಿದಿರುವುದು ರಾಜೀನಾಮೆಯ ಆಯ್ಕೆಯೊಂದೆ. ಇದು ನೈತಿಕ ನೆಲೆಗಟ್ಟಿನ ಫರ್ಮಾನೂ ಹೌದು. ಆದರೂ ಪ್ರಧಾನಿ ಮೋದಿಯವರು ಸುಷ್ಮಾ ವಿಚಾರದಲ್ಲಿ ಕಮಕ್ ಕಿಮಕ್ ಅನ್ನುವ ಹಾಗಿಲ್ಲ. ಮೋದಿ ಮಹಾಮೌನ ತಾಳಿದ್ದಾರೆ. ಬಾಯಿ ಬಿಟ್ಟರೆ ಸುಷ್ಮಾ ರಾಜೀನಾಮೆ ಪಡೆಯುವುದೊಂದೇ ಅವರ ಮುಂದಿರುವ ಆಯ್ಕೆ. ಆದರೆ ಇದು ಉಡಿಯೊಳಗಿನ ಕೆಂಡ. ರಾಜೀನಾಮೆ ಪಡೆದರೆ ಸುಷ್ಮಾ ಆಡ್ವಾಣಿಗಿಂತಲೂ ಅಪಾಯಕಾರಿ. ಜನತೆಮುಂದೆ ಮತಭಿಕ್ಷೆ ಕೇಳಿ ಅಧಿಕಾರಕ್ಕೆ ಬಂದದ್ದು ಅಚ್ಛೇ ದಿನದ ಸಂಕಲ್ಪದೊಂದಿಗೆ. ಸದ್ಯಕ್ಕೆ ಈ ತುತ್ತನ್ನು ಹೊಟ್ಟೆಯೊಳಕ್ಕೂ ಹಾಕಿಕೊಳ್ಳಲಾಗದು, ಉಗುಳಲೂ ಆಗದು. ಗಂಟಲೊಳಗೇ ಇಟ್ಟುಕೊಳ್ಳಬೇಕು. ಪ್ರಧಾನಿಯಾದವರೊಬ್ಬರು ಸರ್ವಾಧಿಕಾರಿಯಂತೆ ವರ್ತಿಸುತ್ತಾರೆಂಬ ಟೀಕೆಯನ್ನು ಎದುರಿಸುತ್ತಲೇ, ಎಲ್ಲ ಮಂತ್ರಿಗಳ ಚಲನವಲನದ ಮೇಲೆ ತೀವ್ರ ನಿಗಾ ಇಟ್ಟರೇ ಹೀಗೆ. ಅದಿಲ್ಲ ಅಂದಿದ್ದರೆ ಇನ್ನು ಹೇಗಿರುತ್ತಿತ್ತೋ?

ಹೇಗೂ ಇಲ್ಲ. ಬೊಫೋರ್ಸ್, ಸ್ಪೆಕ್ಟ್ರಂ, ಕಾಮನ್‍ವೆಲ್ತ್ ಗೇಮ್ಸ್, ಕಲ್ಲಿದ್ದಲು, ಹೆಲಿಕಾಪ್ಟರ್ ಖರೀದಿ, ಮಿಲಿಟರಿ ಟ್ರಕ್ ಖರೀದಿ, ಟೆಲಿಕಾಂ, ಆದರ್ಶ ಹೌಸಿಂಗ್, ಆಹಾರ ರಫ್ತು ಮತ್ತು ಜಯಂತಿ ಟ್ಯಾಕ್ಸ್ ಹಗರಣಗಳಂತಹವು ಮೋದಿ ಸರ್ಕಾರದಲ್ಲೂ ಆಗುವುದು ಗ್ಯಾರಂಟಿ. ಕಾರಣ ಇಷ್ಟೆ, ರಣಹಸಿದವರು ದಶದಿಕ್ಕುಗಳಲ್ಲೂ ಇದ್ದಾರೆ. ಒಂದೇ ಕಾರಣ. ಏಕಾದಶಿ ಒಂದು ಕಳೆದುಬಿಡಲಿ ಎಂದು ಕೈ ಬಾಯಿ ಕಟ್ಟಿಕೊಂಡು ಕುಳಿತುಕೊಂಡಿದ್ದಾರೆ ಅಷ್ಟೆ. ವಿಪಕ್ಷಗಳ ಒತ್ತಡದ ಕಾರಣದಿಂದ ಸುಷ್ಮಾ ತಾವಾಗೇ ರಾಜೀನಾಮೆ ಕೊಡಲಿ ಎಂದು ಪ್ರಧಾನಿ ಲೆಕ್ಕಹಾಕುತ್ತಿರಬಹುದು. ಸುಷ್ಮಾಗೆ ಸದ್ಯ ಹಾಗೆ ಮಾಡುವುದನ್ನು ಬಿಟ್ಟು ಅನ್ಯಮಾರ್ಗವಿಲ್ಲ ಎಂದರೆ ತಪ್ಪಾಗಲಾರದು.

ಹಾಗೆ ನೋಡಿದರೆ ಲಲಿತ್-ಸುಷ್ಮಾ ನಂಟಿಗಿಂತಲೂ ಲಲಿತ್-ವಸುಂಧರಾ ರಾಜೆ ನಂಟಿನ ಪ್ರಕರಣ ಹೆಚ್ಚು ಗಂಭೀರವಾದದ್ದು. ಬಿಜೆಪಿ ವರಿಷ್ಠರಿಗೆ ಪಕ್ಷದ ಭವಿಷ್ಯದ ಚಿಂತೆ ಕಿಂಚಿತ್ತಾದರೂ ಇದ್ದರೆ, ಹಗರಣದ ನೆಪದಲ್ಲಿ ಯುಪಿಎ ಸರ್ಕಾರದ ಸಾಲುಸಾಲು ಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ತಲೆದಂಡ ನೆನಪು ತುಸುವಾದರೂ ಇದ್ದರೆ, ಮೊದಲು ವಸುಂಧರಾ ರಾಜೆ ರಾಜೀನಾಮೆ ಪಡೆಯಬೇಕು. ರಾಜೆ ಮತ್ತು ಅವರ ಮಗ ದುಷ್ಯಂತನಿಗೆ ಲಲಿತ್ ಮೋದಿಯೊಂದಿಗೆ ಇರುವುದು ನೇರ ವ್ಯಾವಹಾರಿಕ ಸಂಬಂಧ ಎಂಬುದು ಮೇಲ್ನೋಟಕ್ಕೇ ಎಂಥವನಿಗಾದರೂ ಅರ್ಥವಾಗುತ್ತದೆ. ಇದು ಹತ್ತಾರು ಕೋಟಿ ರೂ.ಗಳ ಸಂಬಂಧ. ವ್ಯಾವಹಾರಿಕ ನಂಟು ರಾಜಸ್ಥಾನದ ಸರ್ಕಾರಕ್ಕೂ ಉಂಟು. ಇದರಲ್ಲಿ ಯಾವ ಅನುಮಾನವೂ ಬೇಡ. ಈಗಿನ ಅಂದಾಜಿನ ಪ್ರಕಾರ ವಸುಂಧರಾ ಸುಷ್ಮಾಗಿಂತಲೂ ಮೊದಲು ರಾಜೀನಾಮೆ ಕೊಡಬೇಕಾಗಿ ಬಂದರೆ ಅಚ್ಚರಿಪಡುವಂಥದ್ದು ಏನೂ ಇಲ್ಲ. ಹಾಗಾಗಲಿಲ್ಲ ಅಂದರೆ ಅದಕ್ಕೆ ಎರಡೇ ಕಾರಣ. ಒಂದು- ಕಾಂಗ್ರೆಸ್ ದೌರ್ಬಲ್ಯ. ಮತ್ತೊಂದು- ಬಿಜೆಪಿ ವರಿಷ್ಠರ ಭಂಡ ಧೈರ್ಯ.

ಒಂದು ವಿಷಯವನ್ನು ಬಿಜೆಪಿ ನಾಯಕರು ನೆನಪಿಟ್ಟುಕೊಳ್ಳುವುದು ಒಳ್ಳೆಯದು. ಮೊದಮೊದಲು ಭ್ರಷ್ಟ ಮಂತ್ರಿಗಳನ್ನು ಯುಪಿಎ ಸಂಪುಟದಿಂದ ಕೈಬಿಡಲು ಕಾಂಗ್ರೆಸ್ ವರಿಷ್ಠರು ಸಾಕಷ್ಟು ಸಮಯ ತೆಗೆದುಕೊಂಡರು. ಕಳಂಕಿತರನ್ನು ರಕ್ಷಿಸಲು ಸಾಕಷ್ಟು ತಿಣುಕಾಡಿದರು. ಉದಾಹರಣೆಗೆ 2ಜಿ ಹಗರಣಕ್ಕೆ ಸಂಬಂಧಿಸಿ ಎ. ರಾಜಾ ರಾಜೀನಾಮೆಗೆ ನಾಲ್ಕು ವರ್ಷ ತೆಗೆದುಕೊಂಡರು. ಟೆಲಿಕಾಂ ಹಗರಣದಲ್ಲಿ ಮಾರನ್ ತಲೆದಂಡಕ್ಕೆ ವರ್ಷಾನುಗಟ್ಟಲೆ ಕಾಲಹರಣ ಮಾಡಿದರು. ಕೊನೆಕೊನೆಗೆ ಏನಾಯಿತು? ಕಾನೂನು ಸಚಿವ ಅಶ್ವನಿ ಕುಮಾರ್, ರೈಲ್ವೆ ಸಚಿವ ಪವನ್‍ಕುಮಾರ್ ಬನ್ಸಲ್, ಪರಿಸರ ಸಚಿವೆ ಜಯಂತಿ ನಟರಾಜನ್ ಇವರೆಲ್ಲ ಕೊನೇ ಓವರಿನಲ್ಲಿ ಬರುವ ಬ್ಯಾಟ್ಸ್‍ಮನ್‍ಗಳು ಬಾಲಿಗೊಬ್ಬರು ಔಟಾದಂತೆ ಮನಮೋಹನ ಸಿಂಗ್ ಸರ್ಕಾರದಿಂದ ಸಾಲಾಗಿ ಹೊರನಡೆದದ್ದು ಗೊತ್ತಿದೆಯಲ್ಲ. ಸ್ವಲ್ಪ ಮೈಮರೆತರೆ ಈಗಲೂ ಅದೇ ಆಗುತ್ತದೆ. ಹಾಗಾದರೆ ಸುಷ್ಮಾ ಮತ್ತು ವಸುಂಧರಾ ವಿಷಯದಲ್ಲಿ ಮೋದಿ ಮುಂದಿನ ನಡೆಯೇನು?
ಒಂದು ತಮಾಷೆ ಹೇಳಿ ಮುಗಿಸಲಾ?

ಆಡ್ವಾಣಿಯವರಿಗೆ ಅದೇಕೋ ತುರ್ತು ಪರಿಸ್ಥಿತಿಯ ಚಿಂತೆ ಶುರುವಾಗಿದೆಯಂತೆ. ಯಾಕೋ ಗೊತ್ತಿಲ್ಲ. ಇದು ಹಗಲುಗನಸಾ, ಅರಳುಮರುಳಾ, ಕೊರಗಾ? ಆಡ್ವಾಣಿಯವರು ಹತ್ತು ವರ್ಷದ ಹಿಂದೇ ನಿವೃತ್ತಿ ಆಗಿದ್ದಿದ್ದರೆ ಈ ಚಿಂತೆ ಅವರನ್ನು ಕಾಡುತ್ತಿರಲಿಲ್ಲವೋ ಏನೋ..

ಅದಕ್ಕಿಂತ ತಮಾಷೆ ಏನು ಗೊತ್ತೇ… ತುರ್ತು ಪರಿಸ್ಥಿತಿಯ ಆತಂಕದ ಕುರಿತು ಆಡ್ವಾಣಿ ಮಾತಿಗೆ ಕಾಂಗ್ರೆಸ್‍ನವರು ದನಿಗೂಡಿಸುತ್ತಿರುವುದು. ಹಾಗಾದರೆ ಈ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು ಯಾವ ಪುಣ್ಯಾತ್ಗಿತ್ತಿ ಎಂಬುದೂ ಈಗಿನ ಕಾಂಗ್ರೆಸ್ಸಿಗರಿಗೆ ಮರೆತೇಹೋಯಿತೇ?!

 

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top