ಮರುಮತಾಂತರವೂ, ಇತಿಹಾಸದ ಅರಿವಿಲ್ಲದವರ ಅವಾಂತರವೂ

ಮತಾಂತರ, ಮರುಮತಾಂತರದ ಗದ್ದಲದಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನ ಕಳೆದುಹೋಯಿತು. ಪ್ರಧಾನಿ ಮೋದಿ ಹೇಳಿಕೆ ನೀಡಬೇಕೆಂದು ಪ್ರತಿಪಕ್ಷಗಳು ಹಟ ಹಿಡಿದಿದ್ದವು. ಅಷ್ಟಕ್ಕೂ ಈ ಮತಾಂತರ, ಮರುಮತಾಂತರಕ್ಕೂ ಮೋದಿ ಸರ್ಕಾರಕ್ಕೂ ಏನಾದರೂ ಸಂಬಂಧ ಉಂಟೇನು? 

 

 ಲೋಕಸಭಾ ಚುನಾವಣೆಯಲ್ಲಿ ಅನುಭವಿಸಿದ ಸೋಲಿನ ನಿರಾಸೆ, ಅದರ ಪರಿಣಾಮವಾಗಿ ಕಾಡುತ್ತಿರುವ ಹತಾಶೆ, ಕೊರಗಿನಿಂದ ಹೊರಬರಲಾಗದೆ ಚಡಪಡಿಸುತ್ತಿರುವ ಕಾಂಗ್ರೆಸ್ ಹಾಗೂ ಅದರ ಸಹವರ್ತಿ ಪಕ್ಷಗಳಿಗೆ `ಘರ್ ವಾಪಸಿ’ ಅನ್ನುವ ಪದ ಬಹಳ ಕರ್ಕಶವಾಗಿ ಕೇಳಿಸುತ್ತಿರುವಂತಿದೆ. ಲೋಕಸಭಾ ಚುನಾವಣೆ ಎಷ್ಟೊಂದು ಸಂಸದರ ಪಾಲಿಗೆ `ಘರ್ ವಾಪಸಿ’ ಆಯಿತು! ನಂತರ ನಡೆದ ಸಾಲುಸಾಲು ವಿಧಾನಸಭಾ ಚುನಾವಣೆಗಳಲ್ಲೂ ಅದೇ ಕತೆ. ಇನ್ನೆಷ್ಟು ದಿನ ಈ `ಘರ್ ವಾಪಸಿ’ ಎಂಬುದನ್ನು ನೆನೆಸಿಕೊಂಡು ಇವರೆಲ್ಲ ಹೀಗೆ ಆಡುತ್ತಿದ್ದಾರಾ? ಗೊತ್ತಿಲ್ಲ!

ವಾಸ್ತವದಲ್ಲಿ ಇದು ಆ ಘರ್ ವಾಪಸಿ ಅಲ್ಲ, ಮತಾಂತರ ಮತ್ತು ಮರುಮತಾಂತರದ ಸುತ್ತ ನಡೆಯುತ್ತಿರುವ ಚರ್ಚೆ. ಮತಾಂತರ ತಪ್ಪೇ ಮರುಮತಾಂತರ ತಪ್ಪೇ ಎಂಬುದರ ಕುರಿತು ನಡೆಯುತ್ತಿರುವ ಆರೋಪ-ಪ್ರತ್ಯಾರೋಪ ಮತ್ತು ಜಿಜ್ಞಾಸೆ. ಈ ಹಿನ್ನೆಲೆಯಲ್ಲಿ ಮತಾಂತರ ಹೇಗೆ ಸಂವಿಧಾನ ವಿರೋಧಿ ಎಂಬುದನ್ನು ಹಿಂದಿನ ವಾರ ಸವಿಸ್ತಾರವಾಗಿ ಪ್ರಸ್ತಾಪಿಸಿದ್ದೆ. ಮತಾಂತರದ ಕುರಿತು ನ್ಯಾಯಾಲಯಗಳ ತೀರ್ಪುಗಳು, ಕಾನೂನು ತಜ್ಞರ ಅಭಿಪ್ರಾಯಗಳನ್ನು ವಿವರಿಸಿದ್ದೆ. ಈ ಲೇಖನದಲ್ಲಿ ಮತಾಂತರದ ವಿವಿಧ ಮಜಲು, ಕಾಲಘಟ್ಟಗಳ ಕುರಿತು ಒಂದಿಷ್ಟು ಸಂಗತಿಗಳನ್ನು ಪ್ರಸ್ತಾಪಿಸಿದ್ದೇನೆ.

ಸರಿvijayaಸುಮಾರು ನಾಲ್ಕನೇ ಶತಮಾನದ ಹೊತ್ತಿಗೆ ಸಿರಿಯನ್ ಕ್ರೈಸ್ತರು ಮೊದಲ ಬಾರಿಗೆ ಭಾರತದೊಳಕ್ಕೆ ಪ್ರವೇಶ ಮಾಡಿದರೆಂಬುದಕ್ಕೆ ಇತಿಹಾಸದಲ್ಲಿ ಪುರಾವೆ ಸಿಗುತ್ತದೆ. ನಂತರದಲ್ಲಿ ಹದಿಮೂರು ಹದಿನಾಲ್ಕನೇ ಶತಮಾನದ ಹೊತ್ತಿಗೆ ಕ್ರೈಸ್ತರ ಎರಡನೇ ಗುಂಪು ಭಾರತಕ್ಕೆ ಆಗಮಿಸಿತು. ಅವರು ಬಂದದ್ದು ಮಸಾಲೆ ಪದಾರ್ಥಗಳ ವ್ಯಾಪಾರದ ಉದ್ದೇಶಕ್ಕಾಗಿ. ಆದರೆ ಈ ಎರಡನೇ ಗುಂಪಿನವರು ತಮಗಿಂತ ಮೊದಲೇ ಭಾರತಕ್ಕೆ ಪದಾರ್ಪಣೆ ಮಾಡಿದ ಸಿರಿಯನ್ ಕ್ರೈಸ್ತರ ಕುರಿತು ವ್ಯಾವಹಾರಿಕ ದಾಖಲೆಗಳಲ್ಲೆಲ್ಲೂ ಉಲ್ಲೇಖಿಸಿಲ್ಲ. ಅಂದರೆ ವ್ಯಾಪಾರ ವಹಿವಾಟನ್ನು ಬಿಟ್ಟು ಅವರ್ಯಾರೂ ಇಲ್ಲಿನ ಜನಜೀವನದ ಮೇಲೆ ಯಾವುದೇ ಪ್ರಭಾವ ಬೀರುವ ಕೆಲಸಕ್ಕೆ ಕೈಹಾಕುವುದಿಲ್ಲ ಎಂಬುದನ್ನು ಗಮನಿಸಬೇಕು.

ನಿಜವಾದ ಸಾಂಸ್ಕøತಿಕ ಆಕ್ರಮಣ ಶುರುವಾಗುವುದು ಹದಿನೆಂಟನೇ ಶತಮಾನದಲ್ಲಿ. ಯೇಸುವಿನ ಶಿಷ್ಯರಾದ ಸಂತ ಥಾಮಸರ ಜತೆಯಲ್ಲೇ ಸಿರಿಯನ್ನರು ಭಾರತಕ್ಕೆ ಆಗಮಿಸಿದರು ಎಂದು ಸಿರಿಯನ್ ಕ್ರೈಸ್ತ ವಿದ್ವಾಂಸರು ವ್ಯಾಖ್ಯಾನ ಶುರುಮಾಡುತ್ತಾರೆ. ಭಾರತದ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಸಿದ್ಧಾಂತಗಳಿಗೂ, ಭಕ್ತಿ ಮತ್ತು ಮುಕ್ತಿ ಮಾರ್ಗಗಳೆಲ್ಲದಕ್ಕೂ ಯೇಸುವಿನ ಬೋಧನೆಯೇ ಸ್ಫೂರ್ತಿ ಎಂಬ ಕಲ್ಪನೆ ಬಿತ್ತುವುದರಲ್ಲಿ ತೊಡಗಿಸಿಕೊಳ್ಳುತ್ತಾರೆ. ಹಲವರಿಗೆ ಒಂದು ಘಟನೆ ನೆನಪಿರಬಹುದು, ಈ ಹಿಂದೆ ರಾಷ್ಟ್ರಪತಿಗಳಾಗಿದ್ದ ಕೆ.ಆರ್.ನಾರಾಯಣನ್ ಅವರು ಕೇರಳದ ಸಮಾರಂಭವೊಂದರಲ್ಲಿ ಮಾತನಾಡುತ್ತ, `ಆಚಾರ್ಯ ಶಂಕರರೂ ಕೂಡ ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳಿಂದ ಪ್ರಭಾವಿತರಾಗಿದ್ದರು’ ಎಂದಿದ್ದರು. ದೇಶಾದ್ಯಂತ ವ್ಯಾಪಕ ಆಕ್ಷೇಪ ವ್ಯಕ್ತವಾಗಿ, ಅವರು ತಮ್ಮ ಹೇಳಿಕೆ ಕುರಿತು ಸಮಜಾಯಿಶಿ ರೂಪದಲ್ಲಿ ವಾಪಸು ಪಡೆದುಕೊಳ್ಳಬೇಕಾಯಿತು. ಅವರ ಆ ಹೇಳಿಕೆಗೆ ಸಿರಿಯನ್ ವಿದ್ವಾಂಸರ ತಲೆಬುಡವಿಲ್ಲದ ತರ್ಕ, ಸಂಶೋಧನೆಗಳೇ ಮೂಲ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.

ಮುಂದೆ ಭಾರತಕ್ಕೆ ಪೋರ್ಚುಗೀಸರ ಆಗಮನವಾಗುತ್ತಿದ್ದಂತೆ ಸಿರಿಯನ್ನರ ಪ್ರಭಾವ ಮತ್ತಷ್ಟು ಬಲಗೊಂಡಿತು. 1498ರಲ್ಲಿ ಕಲ್ಲಿಕೋಟೆಗೆ ಬಂದ ವಾಸ್ಕೋಡಗಾಮ ಮತ್ತು 1542ರಲ್ಲಿ ಗ್ಸೇವಿಯರ್ ಅನ್ನುವ ಪಾದ್ರಿ ಗೋವಾಕ್ಕೆ ಬರುವುದರೊಂದಿಗೆ ಸಿರಿಯನ್ ಕ್ರೈಸ್ತರು ಭಾರತದಲ್ಲಿ ಮತ್ತಷ್ಟು ಪ್ರಭಾವಶಾಲಿಗಳಾದರು. ಇನ್ನಷ್ಟು ಆಳಕ್ಕೆ ಬೇರುಬಿಟ್ಟರು.

ಇಷ್ಟೆಲ್ಲಾ ಆದ ನಂತರ ಮತಾಂತರದ ಪರ ಮತ್ತು ವಿರೋಧದ ಬಿಸಿ ಬಹಿರಂಗವಾಗಿ ಕಾಣಿಸಿಕೊಂಡದ್ದು ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ವಿರುದ್ಧ ನಡೆಯುತ್ತಿದ್ದ ಸ್ವಾತಂತ್ರೃ ಹೋರಾಟ ಕಾವು ಪಡೆದುಕೊಳ್ಳುತ್ತಿದ್ದ ಕಾಲಘಟ್ಟದಲ್ಲಿ. ವ್ಯಾಪಾರದ ಉದ್ದೇಶಕ್ಕೆ ಭಾರತಕ್ಕೆ ಬಂದು ಇಲ್ಲಿ ಸಾಂಸ್ಕøತಿಕ ಆಕ್ರಮಣಕ್ಕೆ ಕೈ ಹಾಕಿದ ಬ್ರಿಟಿಷ್ ಚಕ್ರಾಧಿಪತ್ಯವನ್ನು ಕೊನೆಗಾಣಿಸಲು ಶುರುವಾದ ಸ್ವಾತಂತ್ರೃ ಸಂಗ್ರಾಮದಲ್ಲಿ ಕೈಜೋಡಿಸಲು ಕ್ರೈಸ್ತರು ಮುಂದಾಗುವುದಿಲ್ಲ. ಅದಕ್ಕೆ ಕಾರಣ ಇಷ್ಟೆ, ಭಾರತವನ್ನು ಆಳುತ್ತಿದ್ದ ಆಂಗ್ಲರು ಕ್ರೈಸ್ತರು ಎಂಬ ಪಕ್ಷಪಾತ ಧೋರಣೆ. ಅದಕ್ಕಿಂತ ಮುಖ್ಯವಾದದ್ದು ಭಾರತದಲ್ಲಿ ತಮ್ಮವರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಮತಾಂತರದ ಚಟುವಟಿಕೆಗೆ ಬ್ರಿಟಿಷ್ ಆಡಳಿತಗಾರರು ಸಂಪೂರ್ಣ ಬೆಂಬಲ ನೀಡಿದ್ದರು ಎಂಬುದು. ಅದೇ ಕಾರಣಕ್ಕೆ ಆ ಸಮುದಾಯ ಸ್ವಾತಂತ್ರೃ ಸಂಗ್ರಾಮದಿಂದ ಸಂಪೂರ್ಣವಾಗಿ ದೂರ ನಿಂತುಕೊಂಡಿತ್ತು. ಈ ವ್ಯವಹಾರಸೂಕ್ಷ್ಮ ಸಂಗತಿ ಸ್ವಾತಂತ್ರೃ ಹೋರಾಟವನ್ನು ಮುನ್ನಡೆಸುತ್ತಿದ್ದ ಗಾಂಧೀಜಿಯವರ ಅರಿವಿಗೂ ಬಂದಿತ್ತು. ಅದಕ್ಕೋಸ್ಕರವೇ ಅವರು ಸ್ವಾತಂತ್ರೃ ಚಳವಳಿಯಲ್ಲಿ ಹಿಂದುಗಳೊಂದಿಗೆ ಮುಸಲ್ಮಾನರು ಮತ್ತು ಕ್ರೈಸ್ತರು ಸೇರಿಕೊಂಡರಷ್ಟೇ ಅದು ಪರಿಪೂರ್ಣವಾಗಲು ಸಾಧ್ಯ ಎಂದು ಬಹಿರಂಗವಾಗಿ ಘೋಷಿಸಿದರು. ತಮ್ಮ ಜತೆಗಾರರಲ್ಲಿ ಮುಸ್ಲಿಂ ಮತ್ತು ಕ್ರೈಸ್ತರ ಕೋಟಾವನ್ನು ಗಾಂಧೀಜಿ ನಿಗದಿ ಮಾಡಿಬಿಟ್ಟರು. ಆದರೆ ಕ್ರೈಸ್ತರ ಕೋಟಾದಲ್ಲಿ ಗಾಂಧೀಜಿಗೆ ಜತೆಯಾದವರು ಸ್ಕಾಟ್‍ಲೆಂಡಿನ ಪಾದ್ರಿ ಸಿ.ಎಫ್. ಆ್ಯಂಡ್ರೂಸ್ ಮತ್ತು ಐರ್ಲೆಂಡಿನ ಡಾ. ಅನಿಬೆಸೆಂಟ್ ಎಂಬಿಬ್ಬರು ಮಾತ್ರ. ಅದಕ್ಕಿಂತ ಮುಖ್ಯವಾಗಿ ಜಲಿಯನ್‍ವಾಲಾ ಬಾಗ್‍ನಲ್ಲಿ ಜನರಲ್ ಡಯರ್ ನಡೆಸಿದ ಹತ್ಯಾಕಾಂಡವನ್ನು ಕ್ರೈಸ್ತ ಮಿಷನರಿಗಳು ಬಹಿರಂಗವಾಗಿ ಬೆಂಬಲಿಸಿದರು.

ಮತಾಂತರದ ಚರ್ಚೆಯ ಸಂದರ್ಭದಲ್ಲಿ ಇಂಗ್ಲಿಷ್ ಶಿಕ್ಷಣದ ಕುರಿತು ಬರೆದ ಎರಡು ಐತಿಹಾಸಿಕ ಪತ್ರಗಳನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ. 1822ರಲ್ಲಿ ಕ್ರೈಸ್ತ ಮಿಷನರಿಯೊಬ್ಬರು ಬರೆದ ಪತ್ರವೊಂದು `ಕಲ್ಕತ್ತಾ ಜರ್ನಲ್’ ಪತ್ರಿಕೆಯಲ್ಲಿ ಪ್ರಕಟವಾಯಿತು. ಅದರ ಸಾರಾಂಶ ಹೀಗಿದೆ: “ಈ ದೇಶದ ಜನರು ಕೀಳು, ಕೊಳಕು ಮೂರ್ತಿಪೂಜೆಯನ್ನು ತೊರೆದು ಯೇಸುವಿನ ಅರಿವುಂಟಾಗುವಂತೆ ಮಾಡಲು ಇಂಗ್ಲಿಷ್ ಶಿಕ್ಷಣವನ್ನು ವ್ಯಾಪಕವಾಗಿ ಮುಂದುವರೆಸಬೇಕು”. ಮತ್ತೊಂದು ಪತ್ರ ಲಾರ್ಡ್ ಮೆಕಾಲೆ ತನ್ನ ತಂದೆಗೆ ಬರೆದದ್ದು. ಬ್ರಿಟಿಷ್ ಸರ್ಕಾರದಲ್ಲಿ ಉನ್ನತ ಅಧಿಕಾರಿಯಾಗಿದ್ದ ಮೆಕಾಲೆ, “ಬ್ರಿಟಿಷ್ ಶಿಕ್ಷಣ ಕ್ರಮವನ್ನು ಭಾರತದಲ್ಲಿ ಸರಿಯಾಗಿ ಅಳವಡಿಸುವುದರಿಂದ ಇಲ್ಲಿನ ಧಾರ್ಮಿಕ ವ್ಯವಹಾರದಲ್ಲಿ ಮೂಗು ತೂರಿಸದೆಯೇ ಮುಂದಿನ ಮೂವತ್ತು ವರ್ಷಗಳಲ್ಲಿ ಬಂಗಾಳದ ಸಂಪ್ರದಾಯಸ್ಥರ ಮನೆಗಳಲ್ಲೂ ಕೂಡ ಒಬ್ಬನೇ ಒಬ್ಬ ಮೂರ್ತಿಪೂಜಕ ಇರದಂತೆ ಮಾಡಬಹುದು” ಎಂದು ಖಡಾಖಂಡಿತವಾಗಿ ಬರೆಯುತ್ತಾರೆ. ಮೆಕಾಲೆ ಆಲೋಚನೆಗೆ ಪೂರಕವಾಗಿ ಬ್ರಿಟಿಷ್ ಪಾರ್ಲಿಮೆಂಟ್ ಸದಸ್ಯನಾಗಿದ್ದ ಚಾಲ್ರ್ಸ್ ಗ್ರಾೃಂಟ್, ಬ್ರಿಟಿಷ್ ಇಂಡಿಯಾಕ್ಕೆ ಸ್ಕೂಲ್ ಮೇಷ್ಟ್ರುಗಳನ್ನು ಇಂಗ್ಲೆಂಡಿನಿಂದಲೇ ಕಳಿಸಬೇಕೆಂಬ ಠರಾವನ್ನು ಮಂಡಿಸುತ್ತಾರೆ.

ಮೆಕಾಲೆ ಮತ್ತು ಚಾಲ್ರ್ಸ್ ಗ್ರಾೃಂಟ್ ಚಿಂತನೆಗೆ ಪೂರಕವಾಗಿ ಭಾರತದಲ್ಲಿ ಇಂಗ್ಲಿಷ್ ಶಿಕ್ಷಣದ ಪ್ರಸಾರ ಮತ್ತು ದೇಶಭಾಷೆಗಳಲ್ಲಿ ಕೃಷಿ ಮಾಡುವ ಕೆಲಸದಲ್ಲಿ ಹಲವು ವಿದ್ವಾಂಸರು ಮುಂದೆ ತೊಡಗಿಸಿಕೊಳ್ಳುವುದನ್ನು ನಾವು ಕಾಣುತ್ತೇವೆ. 1801ರಲ್ಲಿ `ಕ್ಯಾರಿಯ ಕೇಂದ್ರ’ (ಮಿಷನರಿ ಸಂಸ್ಥೆ)ವು ಬಂಗಾಲಿ ಭಾಷೆಯ ಸಮಗ್ರ ವ್ಯಾಕರಣ ಪುಸ್ತಕವನ್ನು ಪ್ರಕಟಿಸಿತು. 1815ರಲ್ಲಿ ಬಂಗಾಲಿ ಗೆಜೆಟಿಯರ್, ಅಸ್ಸಾಮಿ ಭಾಷೆಯ ವ್ಯಾಕರಣ ಪುಸ್ತಕ, ಮರಾಠಿ ನಿಘಂಟು, ಮೊರೀಸ್ ಎಂಬ ಪಾದ್ರಿಯಿಂದ ತೆಲುಗು ವ್ಯಾಕರಣ, ನೇಟಿವ್ ಸ್ಕೂಲ್ ಬುಕ್ ಮತ್ತು ಸ್ಕೂಲ್ ಸೊಸೈಟಿಯಿಂದ ತಮಿಳು ವ್ಯಾಕರಣ, ರೆವರೆಂಡ್ ಕಿಟ್ಟೆಲ್‍ರಿಂದ ಕನ್ನಡ ನಿಘಂಟು, ಬಿ.ಎಲ್. ರೈಸ್‍ರಿಂದ ಕನ್ನಡ ಗೆಝೆಟಿಯರ್ ಮುಂತಾದವು ಪ್ರಕಟವಾಗುತ್ತವೆ. ಭಾರತೀಯ ಭಾಷಾ ಸಾಹಿತ್ಯಕ್ಕೆ ಪಾದ್ರಿಗಳ ಕೊಡುಗೆಯನ್ನು ಮೆಚ್ಚಲೇಬೇಕು. ಆದರೆ ಆ ಕೆಲಸದ ಮೂಲ ಉz್ದÉೀಶ ಒಳ್ಳೆಯದಾಗಿರಲಿಲ್ಲ ಎಂಬುದನ್ನೂ ನಾವಿಲ್ಲಿ ಗಮನಿಸಬೇಕಲ್ಲವೇ? ದೇಶೀಯ ಭಾಷೆಗಳಲ್ಲಿ ಪ್ರಭುತ್ವ ಸಂಪಾದಿಸಿ ಯೇಸುವನ್ನು ಆಯಾ ಭಾಷೆಗಳ ಮೂಲಕವೇ ಜನಜನಿತಗೊಳಿಸುವುದು ಭಾಷಾ ಕೃಷಿಯ ಹಿಂದಿನ ಉದ್ದೇಶವಾಗಿತ್ತು ಎಂಬುದನ್ನು ನಾವು ಅರಿಯಬೇಕು. ಇದು ಸರಿಯಲ್ಲ ಮತ್ತು ಕೃತಜ್ಞತೆಗೂ ಅರ್ಹವಲ್ಲ.

ಮಿಷನರಿ ಸಂಸ್ಥೆಗಳ ಸ್ಥಾಪನೆಯ ಉದ್ದೇಶಕ್ಕೇ ಬರೋಣ. ಭಾರತದಲ್ಲಿರುವ ಅಂಥ ಸಾವಿರಾರು ಸಂಸ್ಥೆಗಳ ಪೈಕಿ ಒಂದೆರಡರ ಕಾರ್ಯವೈಖರಿ ಮತ್ತು ಅದರ ಪರಿಣಾಮವನ್ನು ಗಮನಿಸೋಣ. ಭಾರತದ ಅಸ್ತಿತ್ವ ಇರುವುದೇ ಹಿಂದುಧರ್ಮದಲ್ಲಿ ಎಂದು ತಿಳಿದ ಅಲೆಗ್ಸಾಂಡರ್ ಡಫ್ ಎನ್ನುವ ಪಾದ್ರಿ `ಇಂಡಿಯಾ ಆ್ಯಂಡ್ ಇಂಡಿಯಾ ಮಿಷನ್’ ಎಂಬ ಸಂಸ್ಥೆಯನ್ನು ಕೋಲ್ಕತ್ತಾದಲ್ಲಿ ಸ್ಥಾಪಿಸುತ್ತಾರೆ. ಇದರ ವಿದ್ಯಾಸಂಸ್ಥೆಯಾದ ಜನರಲ್ ಅಸೆಂಬ್ಲಿ ಇನ್‍ಸ್ಟಿಟ್ಯೂಟ್ ಸ್ಕೂಲು ವಿದ್ಯಾರ್ಥಿಗಳನ್ನು ಮತಾಂತರಿಸುವ ಕೆಲಸಕ್ಕೆ ದೊಡ್ಡ ಪ್ರಮಾಣದಲ್ಲಿ ಕೈ ಹಾಕಿತು. ಆ ಪೈಕಿ ಪ್ರಭಾವಿ ವಿದ್ಯಾರ್ಥಿಯಾಗಿದ್ದ ಕೃಷ್ಣಮೋಹನ ಬ್ಯಾನರ್ಜಿ ಮತ್ತು ಆತನ ಕುಟುಂಬ ಕ್ರೈಸ್ತ ಮತಕ್ಕೆ ಮತಾಂತರಗೊಂಡಾಗ ಬ್ರಹ್ಮಸಮಾಜದ ಮುಖಂಡ ದೇವೇಂದ್ರನಾಥ ಠಾಕೂರರ ನೇತೃತ್ವದಲ್ಲಿ ಸಹಸ್ರಾರು ಹಿಂದುಗಳು ಸಭೆಸೇರಿ ಮಿಷನ್ ಶಾಲೆಗೆ ಮಕ್ಕಳನ್ನು ಸೇರಿಸಬಾರದೆಂದು ನಿರ್ಣಯ ತೆಗೆದುಕೊಳ್ಳುತ್ತಾರೆ. ತಾವೇ ದೇಣಿಗೆ ಸಂಗ್ರಹಿಸಿ ಶಾಲೆ ಆರಂಭಿಸುತ್ತಾರೆ. ಈ ಘಟನೆಯ ಪ್ರೇರಣೆಯಿಂದ ಮುಂದೆ ಸಾಲು ಸಾಲು ದೇಶೀಯ ಆಂಗ್ಲ ಶಾಲೆಗಳು ಆರಂಭವಾಗುತ್ತವೆ.

ಈ ಬೆಳವಣಿಗೆಯ ನಂತರ ಮಹರ್ಷಿ ದಯಾನಂದ ಸರಸ್ವತಿಯವರು ವಿಶೇಷವಾಗಿ ಪಂಜಾಬ್, ರಾಜಸ್ತಾನ, ಉತ್ತರಪ್ರದೇಶಗಳಲ್ಲಿ ಹಿಂದಿಯ ಮೂಲಕ ತಮ್ಮ ತತ್ತ್ವ ಪ್ರಸಾರ ಕಾರ್ಯ ಆರಂಭಿಸಿ, ಸಾಂಸ್ಕøತಿಕ ಆಕ್ರಮಣವನ್ನು ಸಾಧ್ಯವಾದಷ್ಟೂ ತಡೆಯಲು ಮುಂದಾಗುತ್ತಾರೆ.
1830 ಹೊತ್ತಿಗೆ ಭಾರತದಲ್ಲಿ ಸಮಾಚಾರ ಪತ್ರಿಕೆಗಳು ಬೆಳೆದವು. ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಪ್ರಕಾರಗಳು ಬಂದವು. ಬಂಗಾಲಿ ಭಾಷೆಯಲ್ಲಿ ಬಂದ ಮೇವಾಡ ಚರಿತ್ರೆಯಂತಹ ನಾಟಕಗಳು, ಬಂಕಿಮಚಂದ್ರರ ಕಾದಂಬರಿಗಳು ಭಾರತೀಯರಲ್ಲಿ ಸ್ವಾತಂತ್ರೃದ ಜಾಗೃತಿ ಮೂಡಿಸಿದವು. ಯೇಸುವನ್ನು ಚಾರಿತ್ರಿಕ ವ್ಯಕ್ತಿಯೆಂದು ಬಿಂಬಿಸುವ ಕ್ರೈಸ್ತರ ರೀತಿಗೆ ಉತ್ತರವಾಗಿಯೇ ಬಂಕಿಮಚಂದ್ರರು `ಶ್ರೀ ಕೃಷ್ಣ ಚರಿತ್ರೆ’ ಬರೆದರು. ಆರ್ಯರು ಗುಲಾಮಗಿರಿಯಲ್ಲಿರಲು ತಮ್ಮ ಧರ್ಮದ ಆಚರಣೆಯಿಂದ ವಿಮುಖವಾದದ್ದೇ ಕಾರಣ ಎಂಬುದನ್ನು ಒರಿಯಾ ಸಾಹಿತಿ ರಾಧಾನಾಥ ರೇ ಅವರು ತಮ್ಮ `ಮಹಾಯಾತ್ರಾ’ ಕೃತಿಯಲ್ಲಿ ಮನೋಜ್ಞವಾಗಿ, ಸವಿಸ್ತಾರವಾಗಿ ಹೇಳಿದ್ದರು.

ಹೀಗೆ ಭಾರತೀಯರಲ್ಲಿ ವೈಚಾರಿಕತೆ ಜಾಗೃತವಾದದ್ದರ ಪರಿಣಾಮ “ನಾವು ನಮ್ಮ ಪೂರ್ವಜರಿಂದ ಬೇರ್ಪಡಲಾರೆವು ಮತ್ತು ನಮ್ಮಲ್ಲಿರುವ ಲೊಪದೋಷಗಳನ್ನು ನಾವೇ ಸರಿಪಡಿಸಿಕೊಳ್ಳುವೆವು”ಎಂದು ಮಹಾದೇವ ರಾನಡೆಯವರು ಘೋಷಿಸಿದರು. ತಿಲಕರು ಬಾಲ್ಯವಿವಾಹದಂತಹ ಕಳಂಕ ತೊಡೆದುಹಾಕಲು ಪಣತೊಟ್ಟರು. ಹಿಂದುಗಳಲ್ಲಿ ಈ ರೀತಿ ಬದಲಾವಣೆ ಗುರುತಿಸಿದ ರಾಬರ್ಟ್ ನೊಬಿಲಿಯಂತಹ ಪಾದ್ರಿಗಳು ಸಂಸ್ಕøತ ಕಲಿತು, ಜುಟ್ಟು ಬಿಟ್ಟು, ಕಾವಿತೊಟ್ಟು ಆಶ್ರಮ ಕಟ್ಟಿದರು. ಆದರೂ ವಿದ್ಯಾವಂತ ಭಾರತೀಯರು ಕ್ರೈಸ್ತ ಮತದತ್ತ ಮುಖಮಾಡದೇ ಹೋದಾಗ ಮಿಷನರಿಗಳು ನಿರಾಸೆಯಿಂದ ಕೊಳೆಗೇರಿ ಮತ್ತು ಗುಡ್ಡಗಾಡುಗಳ ಕಡೆ ಮುಖಮಾಡಿದರು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತವೆ. ಭಾರತೀಯತೆಯ ತುಚ್ಛೀಕರಣದ ಭರಾಟೆ ಜೋರಾಗಿದ್ದಾಗ ರವೀಂದ್ರನಾಥ ಠಾಕೂರ್, ರಾಜಾರಾಮ ಮೋಹನ ರಾಯ್ ಮುಂತಾದವರೆಲ್ಲ ಬ್ರಿಟಿಷರಿಗೆ ನೇರವಾಗಿ ಸೆಡ್ಡುಹೊಡೆದರು. ತೀರಾ ಇತ್ತೀಚಿನ ವರ್ಷಗಳ ಉದಾಹರಣೆ ಹೇಳುವುದಾದರೆ 1966ರಲ್ಲಿ ಅಲಹಾಬಾದ್‍ನ ಪ್ರಯಾಗದಲ್ಲಿ ನಡೆದ ವಿಶ್ವ ಹಿಂದು ಪರಿಷತ್ತಿನ ಮೊದಲ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಒಂದು ಮಹತ್ವದ ನಿರ್ಣಯ ತೆಗೆದುಕೊಳ್ಳಲಾಯಿತು. ಯಾವ್ಯಾವ ಹಿಂದುಗಳು ಆಮಿಷ, ಬಲವಂತ, ಬದುಕಿನ ಅನಿವಾರ್ಯತೆಗೆ ಸಿಲುಕಿ ಮತಾಂತರಗೊಂಡಿದ್ದಾರೋ ಅವರನ್ನೆಲ್ಲ ಮತ್ತೆ ಹಿಂದುತ್ವದ ತೆಕ್ಕೆಗೆ ಕರೆತರಲು ಸಂಕಲ್ಪ ಮಾಡಲಾಯಿತು. ಅಂದಿನಿಂದ ಅಲ್ಲಲ್ಲಿ ಈ ರೀತಿಯ ಚಟುವಟಿಕೆಗಳು ನಡೆದುಕೊಂಡೇ ಬರುತ್ತಿವೆ. ಅನೇಕ ಮಠಾಧೀಶರು, ಧರ್ಮಾಸಕ್ತರು, ಕೊಳೆಗೇರಿ ಜನರ, ಗುಡ್ಡಗಾಡು ಜನರ, ಬುಡಕಟ್ಟು ಜನಾಂಗದ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವ ಸಮಾಜಸೇವಾಸಕ್ತರು ತಮ್ಮತಮ್ಮ ವೈಯಕ್ತಿಕ ನೆಲೆಯಲ್ಲಿ ಮತಾಂತರದ ವಿರುದ್ಧ ಜಾಗೃತಿ ಮೂಡಿಸುವ ಕೆಲಸ, ಮರುಮತಾಂತರದ ಕಾರ್ಯಕ್ರಮವನ್ನು ನಡೆಸುತ್ತಲೇ ಬಂದಿದ್ದಾರೆ. ಹಾಗಿರುವಾಗ, ಮೋದಿ ಸರ್ಕಾರ ಬಂದ ಮೇಲೆ ಮರುಮತಾಂತರ ಚುರುಕಾಯಿತು ಎಂದು ಬೊಬ್ಬೆ ಹೊಡೆಯುವುದು ಎಷ್ಟು ಸರಿ? ಮತಾಂತರದ ವಿರುದ್ಧ ಮಾತನಾಡುವಾಗ ಇತಿಹಾಸದ ಕನಿಷ್ಠ ಪರಿಜ್ಞಾನವನ್ನಾದರೂ ಇಟ್ಟುಕೊಳ್ಳಬೇಕು ತಾನೆ? ಜನ ಈ ಲೊಳಲೊಟ್ಟೆಯನ್ನಷ್ಟೇ ಕೇಳಿಸಿಕೊಳ್ಳಬೇಕು ಅಂದರೆ ಹೇಗೆ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top