ಹೃದಯದಲ್ಲಿರಿಸಿಕೊಂಡ ಫೋಟೋ ಮುಂದೆ ಸೆಲ್ಪಿ ಯಾವ ಲೆಕ್ಕ? (April 8, 2017)

ನಾವು ಹೆಚ್ಚೆಚ್ಚು ಆಧುನಿಕರಾದಂತೆ, ಮುಂದುವರಿದಂತೆ ಭಾವನಾಲೋಕದಲ್ಲಿ ಹಿಂದುಳಿಯುತ್ತೇವೆ ಅನಿಸುತ್ತದೆ. ‘ನಾನು’ ಎಂಬ ಸ್ವಾರ್ಥವೇ ಮೇಲುಗೈ ಪಡೆದಾಗ ಎದುರಿನ ವಾಸ್ತವ ಗೋಚರಿಸುವುದೇ ಇಲ್ಲ. ಆತ್ಮರತಿಯ ಪರದೆ ತೆಗೆಯದಿದ್ದರೆ ಎಲ್ಲವೂ ಮಸುಕೇ.

ಎರಡು ವಾರಗಳ ಹಿಂದೆ ನನಗೊಂದು ಅಚ್ಚರಿ ಕಾದಿತ್ತು. ಮಾರ್ಚ್ 26, ಭಾನುವಾರದ ವಿಜಯವಾಣಿ ಸಂಚಿಕೆಯ ‘ಒಳನೋಟ’ ಅಂಕಣದಲ್ಲಿ ಎನ್.ರವಿಶಂಕರ್ ಹಾಗೂ ‘ಜಲದ ಕಣ್ಣು’ ಅಂಕಣದಲ್ಲಿ ಪ್ರೊ.ಕೃಷ್ಣೇಗೌಡ ಈ ಇಬ್ಬರ ಬರಹಗಳ ವಿಷಯ ವಸ್ತುವಿನಲ್ಲಿಯೂ ಸಾಕಷ್ಟು ಸಾಮ್ಯತೆ ಇತ್ತು. ಬರೆದ ರೀತಿ, ವಿಷಯವಸ್ತುವನ್ನು ವಿವರಿಸಿದ ಬಗೆ ಬೇರೆ ಬೇರೆ ಆಗಿದ್ದರೂ, ಆ ಲೇಖನಗಳ ಒಟ್ಟಾರೆ ತಾತ್ಪರ್ಯ, ಆಶಯ, ಕಳಕಳಿ ಒಂದೇ ತೆರನಾಗಿತ್ತು. ಒಂದೆಡೆ, ಒಳ್ಳೆಯ ಓದು ಸಿಕ್ಕಿದ ಖುಷಿ, ಮತ್ತೊಂದೆಡೆ ನಾವು ಎತ್ತ ಸಾಗುತ್ತಿದ್ದೇವೆ ಎಂಬ ಕಳವಳ.

ಇಬ್ಬರ ಲೇಖನಗಳೂ ಈಗೀಗ ಲಂಗುಲಗಾಮಿಲ್ಲದೆ ಹಬ್ಬುತ್ತಿರುವ ಸೆಲ್ಪಿ ಗೀಳಿನ ಕುರಿತಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಮುಳುಗಿಹೋಗುವ, ಕಳೆದುಹೋಗುವ ಮತ್ತು ಮಿತಿಮೀರಿದ ಆತ್ಮರತಿ ಪ್ರವೃತ್ತಿ ಮನುಷ್ಯನನ್ನು ಎಲ್ಲಿಗೆ ಕೊಂಡೊಯ್ಯುತ್ತಿದೆ ಎಂಬುದರ ಕುರಿತಾಗಿತ್ತು. ಹಾಗಾದರೆ, ಈ ಅನಾರೋಗ್ಯಕರ ಟ್ರೆಂಡ್ ಕುರಿತು ಹೀಗೆ ಯೋಚಿಸುವವರು, ಕಳವಳಪಡುವವರು ಇವರಿಬ್ಬರೇನಾ? ಅಂಕಣ ಬರೆಯುವ ಅವಕಾಶ ಇದ್ದುದರಿಂದ ಇವರು ಮನಸ್ಸಿನಾಳದ ಭಾವನೆಯನ್ನು ಹಂಚಿಕೊಳ್ಳಲು ಅನುವಾಯಿತು. ಸಾವಿರ, ಲಕ್ಷ, ಕೋಟಿ ಜನರು ಸಹ ಇದೇ ತೆರನಾದ ಭಾವನೆ ಹೊಂದಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ.

ಆರಂಭ ಎಲ್ಲಿಂದ?

ಕೆಲವೊಮ್ಮೆ ಗೊತ್ತಿಲ್ಲದೆಯೋ, ಅರಿವಿಲ್ಲದೆಯೋ ತಪ್ಪುಗಳನ್ನು ಮಾಡುತ್ತಿರುತ್ತೇವೆ. ಗಂಭೀರವಾಗಿ ಆಲೋಚಿಸದಿರುವುದರಿಂದಲೂ ತಪ್ಪುಗಳಾಗುತ್ತವೆ. ಆದರೆ ಗೊತ್ತಿದ್ದೂ ಗೊತ್ತಿದ್ದೂ ತಪ್ಪು ಮಾಡಿದರೆ? ಅದಕ್ಕೆ ಕ್ಷಮೆ ಇಲ್ಲ. ಹೀಗೇ ಒಂದೆರಡು ಸಂಗತಿಗಳ ಬಗ್ಗೆ ಆಲೋಚನೆಯನ್ನು ಹರಿಯಬಿಡೋಣ.

ಗೆಳೆಯರು, ಸೆಲೆಬ್ರಿಟಿಗಳು ಸಿಕ್ಕಾಗ ಸೆಲ್ಪೀ ಗಿಲ್ಪೀ ತೆಗೆಸಿಕೊಳ್ಳುವುದು ಒತ್ತಟ್ಟಿಗಿರಲಿ, ಮನೆಯಲ್ಲಿ ಒಂದು ಪುಟ್ಟ, ಮುದ್ದಾದ ಮಗುವಿದ್ದರೆ ದಿನದಲ್ಲಿ ಆ ಮಗುವಿನ ಅದೆಷ್ಟು ಫೋಟೊಗಳನ್ನು ತೆಗೆಯುತ್ತೇವೆ ಅಲ್ಲವೇ? ಆಯಿತು, ಅಂಥ ಎಷ್ಟು ಫೋಟೊಗಳನ್ನು ಇಟ್ಟುಕೊಳ್ಳುತ್ತೇವೆ? ಎಂದೋ ಒಂದು ದಿನ ನಿರ್ದಾಕ್ಷಿಣ್ಯವಾಗಿ ಅಳಿಸಿಹಾಕಿಬಿಡುತ್ತೇವೆ. ಅದಕ್ಕಿಂತ ಕೆಟ್ಟದ್ದೆಂದರೆ, ಚೆನ್ನಾಗಿ ಬರಲಿ ಎಂದು ಫ್ಲ್ಯಾಷ್ ಹಾಕಿ ಫೋಟೊ ತೆಗೆಯೋದು. ಪ್ರಾಣಿ ಸಂಗ್ರಹಾಲಯಗಳಲ್ಲಿ ‘ಫೋಟೊ ತೆಗೆಯುವುದು ನಿಷಿದ್ಧ’ ಎಂಬ ಒಕ್ಕಣೆಯ ಸೂಚನಾ ಫಲಕಗಳನ್ನು ನೀವೂ ಗಮನಿಸಿರಬಹುದು. ಇನ್ನು ಕೆಲವೆಡೆ ‘ಫ್ಲ್ಯಾಷ್ ಆಫ್ ಮಾಡಿ ಫೋಟೊ ತೆಗೆಯಿರಿ’ ಎಂದು ಬರೆದಿರುತ್ತದೆ. ಯಾಕೆ? ಪ್ರಾಣಿಗಳಿಗೆ ತೊಂದರೆ ಆಗಬಾರದು, ಅವು ವಿಚಲಿತ ಆಗಬಾರದು ಅಂತ. ಅಂಥ ತೊಂದರೆ ನಮ್ಮ ಮಗುವಿಗೂ ಆಗಬಹುದಲ್ಲ. ಅದಕ್ಕೆ ಮಾತು ಬರುವುದಿಲ್ಲ ಎಂದಾಕ್ಷಣ ಎಷ್ಟು ಬೇಕಾದರೂ, ಹೇಗೆ ಬೇಕಾದರೂ ಫೋಟೊ ತೆಗೆಯಬಹುದು ಅಂತಾನಾ? ಹಾಗಾದರೆ ಇದು ನಮ್ಮ ತಪ್ಪೋ ಅಥವಾ ನಮ್ಮ ಕೈಲಿರುವ ಮೊಬೈಲ್ ಫೋನು, ಕ್ಯಾಮರಾ ತಪ್ಪೋ? ಡಿಜಿಟಲ್ ಫೋಟೊ ತಂತ್ರಜ್ಞಾನ ಬರುವ ಮೊದಲು ಅಥವಾ ಸ್ಟುಡಿಯೋಗೆ ಹೋಗಿ ಫೋಟೊ ತೆಗೆಸುವ ಕಾಲದಲ್ಲಿ ಅಥವಾ ತೆಗೆದ ಫೋಟೊ ರೀಲನ್ನು ಸ್ಟುಡಿಯೋದಲ್ಲಿ ಪ್ರಿಂಟ್ ಹಾಕಿಸಿಕೊಂಡು ಬರುತ್ತಿದ್ದ ಕಾಲದಲ್ಲಿ ಅಬ್ಬಬ್ಬಾ ಎಂದರೆ ಎಷ್ಟು ಫೋಟೊ ತೆಗೆಯುತ್ತಿದ್ದೆವು? ಒಂದೋ ಎರಡೋ ಮಾತ್ರ. ಆ ಫೋಟೋವನ್ನೇ ಎಷ್ಟೋ ವರ್ಷಗಳ ಕಾಲ ಎಷ್ಟು ಜತನದಿಂದ ಇಟ್ಟುಕೊಳ್ಳುತ್ತಿದ್ದೆವು ಅಲ್ಲವೇ? ಆ ಬ್ಲ್ಯಾಕ್ ಅಂಡ್ ವೈಟ್ ಫೋಟೊಗಳನ್ನು ಒಮ್ಮೆ ಕಣ್ಣಮುಂದೆ ತಂದುಕೊಳ್ಳಿ. ಆ ಆಪ್ತತೆ, ಪ್ರೀತಿ, ಅಭಿಮಾನ ಈ ಡಿಜಿಟಲ್ ಫೋಟೊ ಯುಗದಲ್ಲಿ ಉಂಟೇ?

ಈಗ ನಾವು ನಮ್ಮ ಮಕ್ಕಳ ಫೋಟೊಗಳನ್ನು ತೆಗೆದು ತೆಗೆದು ಡಿಲಿಟ್ ಮಾಡುತ್ತೇವೆ. ಮುಂದೆ ಅದೇ ಮಕ್ಕಳು ಪ್ರಾಯಕ್ಕೆ ಬಂದಾಗ ಅವರು ತಮಗೆ ಬೇಕಾದ ಸೆಲ್ಪಿಗಳನ್ನು ತೆಗೆಯುತ್ತ ನಮ್ಮನ್ನು ಅಂದರೆ ಅಪ್ಪ ಅಮ್ಮಂದಿರನ್ನು ಮರೆಯುತ್ತಾರೆ. ಅದಕ್ಕೆ ಕಾರಣ ನಾವೇ ಅಲ್ಲವೆ?

ಹಿಂದೆ ಅಂತರ್ದೇಶಿ ಪತ್ರ ಮತ್ತು ಪೋಸ್ಟ್ ಕಾರ್ಡ್ ಬಿಟ್ಟರೆ ಬೇರೆ ಸಂವಹನ ಸಾಧನ ಇರಲಿಲ್ಲ. ಆಗಿನ ಸಂದರ್ಭ, ಸಂಬಂಧಗಳೆಲ್ಲ ಎಷ್ಟು ಮಧುರವಾಗಿದ್ದವು! ಆ ನಂತರ ಟೆಲಿಫೋನ್ ಬಂತು. ಸಂಬಂಧಗಳು ಸ್ವಲ್ಪ ಔಪಚಾರಿಕವಾದವು. ಕೆಲವಾದರೂ ಫೋನ್ ನಂಬರುಗಳನ್ನು ನಾಲಿಗೆ ತುದಿಯಲ್ಲಿ ಇಟ್ಟುಕೊಳ್ಳುತ್ತಿದ್ದೆವು. ಈಗ ಮೊಬೈಲು, ಗ್ಯಾಡ್ಜೆಟ್ಟುಗಳು, ಇಂಟರ್ನೆಟ್ ಬಂದಿವೆ. ಯಾವ ನಂಬರನ್ನೂ, ಯಾವ ಸಂಬಂಧಗಳನ್ನೂ ನಾವು ನೆನಪಿನಲ್ಲಿ ಇಟ್ಟುಕೊಳ್ಳುತ್ತಿಲ್ಲ. ಗೀಚುವುದು, ಡಿಲಿಟ್ ಮಾಡುವುದು ಎರಡೂ ಸುಲಭ. ಅಪ್ಪ, ಅಮ್ಮ, ಅಣ್ಣ, ತಮ್ಮ, ತಂಗಿ, ಗಂಡ, ಹೆಂಡತಿ ಹೀಗೆ ಎಲ್ಲ ಸಂಬಂಧಗಳೂ ಯಾವಾಗ ಬೇಕಾದರೂ ಡಿಲಿಟ್ ಆಗುತ್ತಿವೆ.

ಕಾಕತಾಳೀಯವೋ ಏನೋ, ಅದೇ ಭಾನುವಾರದ ಸಂಚಿಕೆಯಲ್ಲಿ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಅವರ ‘ಭವದ ಬೆಳಗು’ ಅಂಕಣದಲ್ಲಿ ಮಹಾನ್ ಸಂತ ಟೇಂಬೇಸ್ವಾಮಿ ಮಹಾರಾಜರ ಜೀವನ-ಸಾಧನೆ ಕುರಿತಾದ ಲೇಖನದಲ್ಲಿನ ಒಂದು ಸಾಲು ಕೂಡ ಗಮನ ಸೆಳೆಯಿತು. ಅದರಲ್ಲಿನ ಒಂದು ಸಂದರ್ಭ. ಟೇಂಬೇಸ್ವಾಮಿಗಳು ಊರು, ದೇಶ ಸಂಚರಿಸುತ್ತಿರುತ್ತಾರೆ. ಎಷ್ಟೋ ವರ್ಷಗಳ ನಂತರ ಮಹಾರಾಷ್ಟ್ರದ ಮಾಣಗಾಂವಿಗೆ ಬಂದಾಗ ಭಕ್ತರು ಅವರ ಫೋಟೊ ತೆಗೆಸಲು ತೀರ್ವನಿಸಿ ಸ್ವಾಮಿಗಳ ಅಪ್ಪಣೆ ಕೇಳುತ್ತಾರೆ. ಆಗ ಟೇಂಬೆಸ್ವಾಮಿ ಮಹಾರಾಜರು ‘ಹೃದಯದಲ್ಲಿ ಇಟ್ಟುಕೊಳ್ಳುವುದನ್ನು ಬಿಟ್ಟು ಕಾಗದದ ಮೇಲೆ ಎಂಥಾ ಫೋಟೊ ತೆಗೆಯುತ್ತೀರಿ? ಅದರ ಜರೂರು (ಅವಶ್ಯಕತೆ) ಇಲ್ಲ’ ಎಂದು ಕಡ್ಡಿ ಮುರಿದ ಹಾಗೆ ಹೇಳಿಬಿಟ್ಟರಂತೆ. ಎಂಥಾ ಮಾತು ನೋಡಿ. ಈ ಮೂರೂ ಲೇಖನಗಳು ಎಷ್ಟು ಸಾಂರ್ದಭಿಕವಾಗಿವೆಯಲ್ಲ ಅಂತ ಅನ್ನಿಸಿ ಇಷ್ಟೆಲ್ಲ ಹೇಳಬೇಕು ಅನ್ನಿಸಿತು.

ನಮ್ಮಲ್ಲಿ ಈ ಮಾಧ್ಯಮಗಳು, ಸೋಷಿಯಲ್ ಮೀಡಿಯಾಗಳು, ಡಿಜಿಟಲ್ ಸಲಕರಣೆಗಳು ಯಾವ ರೀತಿಯ, ಸ್ವಾರ್ಥ, ಆತ್ಮರತಿಯನ್ನು ಬೆಳೆಸುತ್ತಿವೆಯಲ್ಲ, ಒಂದಿಲ್ಲೊಂದು ದಿನ ನಾವೂ ಈ ಇಳಿಜಾರಿನಲ್ಲಿ ಜಾರಿಹೋಗುತ್ತೇವಾ ಎನ್ನುವ ಅನುಮಾನ ಕಾಡತೊಡಗುತ್ತದೆ. ಈ ಆಸೆ, ಕೀರ್ತಿಶನಿಯನ್ನು ಬೆನ್ನಿಗೆ ಅಂಟಿಸಿಕೊಂಡವರನ್ನು ನೋಡಿದಾಗ ಓರ್ವ ವ್ಯಕ್ತಿ ಸದಾ ನೆನಪಿಗೆ ಬರುತ್ತಾರೆ.

ನನಗೆ ಬಹಳ ಆತ್ಮೀಯರಾದ ಓರ್ವ ಹಿರಿಯ ಸಾಮಾಜಿಕ ಕಾರ್ಯಕರ್ತರಿದ್ದಾರೆ. ಪ್ರಕಾಶ್ ಕಾಮತ್ ಅಂತ. ಊರು ಶೃಂಗೇರಿ. ಮನೆಯನ್ನು ತೊರೆದು ಮೂವತ್ತು ವರ್ಷಗಳ ಮೇಲಾಗಿರಬೇಕು. ಆ ಕಾಲಕ್ಕೇ ಅವರು ಇಂಜಿನಿಯರಿಂಗ್ನಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದರು. ಓದಿನ ನಂತರ ಕಳೆದ ಇಪ್ಪತೆôದು ಮೂವತ್ತು ವರ್ಷಗಳಿಂದ ವನವಾಸಿಗಳು, ಗುಡ್ಡಗಾಡುಗಳಲ್ಲಿ ಇರುವ ಸಿದ್ದಿ, ಗೌಳಿ ಮುಂತಾದ ಬುಡಕಟ್ಟು ಜನರಿಗೆ ಶಿಕ್ಷಣ ಸಂಸ್ಕಾರ ಕೊಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ದೂರದ ಜಾರ್ಖಂಡ್, ಛತ್ತೀಸ್ಗಢದ ನಕ್ಸಲ್ ಪ್ರದೇಶಗಳಲ್ಲಿ ವನವಾಸಿಗರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದ್ದಾರೆ. ದೇಶದ ನಾನಾ ಕಡೆಗಳಲ್ಲಿ ಹತ್ತಾರು ಹಾಸ್ಟೆಲು, ಏಕೋಪಾಧ್ಯಾಯ ಶಾಲೆಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ. ಅವರ ಬಳಸುವುದು ಎರಡು ಪಂಚೆ, ಎರಡು ಅಂಗಿ. ಒಂದು ಜೊತೆಯನ್ನು ಧರಿಸಿದರೆ ಮತ್ತೊಂದು ಜೊತೆ ಒಗೆದುಹಾಕುತ್ತಾರೆ. ಒಗೆದ ಬಟ್ಟೆಯನ್ನು ದಿಂಬಿನ ಅಡಿ ಇಟ್ಟು ಮಲಗಿದರೆ ಬೆಳಗಾಗುವುದರೊಳಗೆ ಇಸ್ತ್ರಿ ಆಗಿರುತ್ತದೆ. ಅವರು ಮದುವೆ, ಮುಂಜಿ ಮುಂತಾದ ಕಾರ್ಯಕ್ರಮಗಳಿಗೆ ಹೋದಾಗ ಪಂಚೆ, ಅಂಗಿಯ ವಸ್ತ್ರವನ್ನೋ ನೀಡಿದರೆ ಅದನ್ನು ತಮ್ಮ ಜೊತೆಗಾರ ಸಾಮಾಜಿಕ ಕಾರ್ಯಕರ್ತರಿಗೆ ಕೊಟ್ಟುಬಿಡುತ್ತಾರೆ. ‘ಅರೇ ಅದು ನಿಮಗೆ ಕೊಟ್ಟಿದ್ದು’ ಎಂದು ಹೇಳಿದರೆ ‘ಹೌದು ಅವರೂ ನಮ್ಮವರೇ, ನನಗೆ ಎರಡೇ ಜೊತೆ ಸಾಕು ಬಿಡಿ’ ಎನ್ನುತ್ತಾರೆ. ಯಾವ ಕಾರ್ಯಕರ್ತನ ಬಳಿ ಎಷ್ಟು ಬಟ್ಟೆಗಳು ಇವೆ, ಯಾರಿಗೆ ಯಾವಾಗ ಕೊಟ್ಟಿದ್ದೇನೆ ಎಂಬುದರ ಮಾಹಿತಿಯೂ ಅವರಿಗೆ ಇರುವುದು ವಿಶೇಷ.

ಅವರೆಂದೂ ಕೈಗೆ ವಾಚು ಕಟ್ಟುವುದಿಲ್ಲ. ಆದರೆ ಸಮಯದ ಪಾಲನೆಯನ್ನು ಅವರು ಎಂದೂ ತಪ್ಪಿದ್ದನ್ನು ನೋಡಿಲ್ಲ. ಪೋಸ್ಟ್ ಕಾರ್ಡೆ ಅವರಿಗೆ ಸಂಪರ್ಕ ಸಾಧನ. ಲ್ಯಾಂಡ್ ಲೈನನ್ನೂ ಅವರು ಬಳಸುವುದು ಕಡಿಮೆ. ಹಾಗಿದ್ದರೂ ಎಂದೂ ಕಮ್ಯುನಿಕೇಶನ್ ಗ್ಯಾಪ್ ಆಗಿದ್ದನ್ನು ನೋಡಿಲ್ಲ. ಮುಂದಿನ ತಿಂಗಳು ಇಂಥ ದಿನಾಂಕ ಇಂಥ ಸಮಯಕ್ಕೆ ನಿಮ್ಮ ಮನೆಗೆ ಅಥವಾ ಇಂಥ ಸ್ಥಳಕ್ಕೆ ಬರುತ್ತೇನೆಂದು ಪೋಸ್ಟ್ ಕಾರ್ಡಲ್ಲಿ ಬರೆದು ತಿಳಿಸುತ್ತಿದ್ದರು. ಅವರು ಹೇಳಿದ ಸಮಯಕ್ಕಿಂತ ಐದು ನಿಮಿಷ ಮುಂಚಿತವಾಗಿಯೇ ಕಾಮತರ ಆಗಮನವಾಗುತ್ತಿತ್ತು. ಗೊತ್ತಿರಲಿ ಅವರೆಂದೂ ಕಾರು, ಮೋಟಾರು ಸೈಕಲ್ಲನ್ನು ಹತ್ತುವುದಿಲ್ಲ. ಕಾಮತರಿಗೆಂದೂ ಸರ್ಕಾರಿ ಬಸ್ಸು ಕೈಕೊಟ್ಟು ತಾಪತ್ರಯ ಅನುಭವಿಸಿದ್ದನ್ನು ನೋಡಿಲ್ಲ. ಏಕೆಂದರೆ ಅವರದು ಎಲ್ಲವೂ ಅಡ್ವಾನ್ಸ್ ಪ್ಲ್ಯಾನ್ ಆಗಿರುತ್ತದೆ. ಕಾಮತರಂಥ ನಿಸ್ವಾರ್ಥ ಸೇವಕರನ್ನು ಯಾವ ರೀತಿ ಗೌರವಿಸಿದರೂ ಕಡಿಮೆಯೇ.

ಹಾಗೇ ಇತ್ತೀಚೆಗೆ ನನ್ನ ಅನುಭವಕ್ಕೆ ಬಂದ ಇನ್ನೊಂದು ವಿಚಾರವನ್ನು ಇಲ್ಲಿ ಪ್ರಸ್ತಾಪಿಸಿದರೆ ಉಚಿತ ಎಂದು ತೋರುತ್ತದೆ. ನಮ್ಮ ವಿಆರ್ಎಲ್ ಮಾಲೀಕರಾದ ಡಾ. ವಿಜಯ ಸಂಕೇಶ್ವರ ಅವರು ತಾವು ಬಾಲ್ಯದಲ್ಲಿ ಓದಿದ ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೇರೆ ಬೇರೆ ಕ್ಷೇತ್ರದಲ್ಲಿ ಹೆಸರು ಮಾಡಿರುವ ಸಹಪಾಠಿಗಳು ಅನೇಕರು ಸಹ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಶಾಲೆಯ ಜೀಣೋದ್ಧಾರಕ್ಕೆ ಅವರೆಲ್ಲ ತೀರ್ವನಿಸಿ ದೇಣಿಗೆ ಘೊಷಣೆ ಮಾಡಿದ್ದರು. ಸಂಕೇಶ್ವರರೂ ದೇಣಿಗೆ ನೀಡಿದರು. ಸಹಜವಾಗಿ ನಮ್ಮ ಪತ್ರಿಕೆ ವರದಿಗಾರ ಆ ಕುರಿತು ಸುದ್ದಿ ಮಾಡಿದ್ದರು. ಸಾಯಂಕಾಲ ಸುದ್ದಿ ತರಿಸಿಕೊಂಡು ನೋಡಿದ ಡಾ. ಸಂಕೇಶ್ವರ ತಾನು ದೇಣಿಗೆ ನೀಡಿದ್ದನ್ನು ಸುದ್ದಿ ಮಾಡಬಾರದು ಎಂದು ಕಟ್ಟಪ್ಪಣೆ ಮಾಡಿದರು. ಎಡಗೈಯಿಂದ ಕೊಟ್ಟಿದ್ದು ಬಲಗೈಗೆ ಗೊತ್ತಾಗಬಾರದು ಎಂಬುದು ಅವರ ತತ್ತ್ವ. ಇನ್ನು ಶಿಸ್ತು, ಸಮಯಪಾಲನೆ ವಿಷಯದಲ್ಲಿ ಅವರ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆಯಿಲ್ಲ.

ಇದೇ ವೇಳೆ ಇನ್ನೊಂದು ಘಟನೆ ನೆನಪಿಗೆ ಬರುತ್ತದೆ. ಒಂದು ಊರಿಗೆ ಓರ್ವ ಸಂತರು ಬಂದಿದ್ದರಂತೆ. ಊರ ಸಭಾಭವನದಲ್ಲಿ ಅವರಿಗೆ ಗೌರವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬಿರು ಬೇಸಿಗೆ ಕಾಲ. ಸಂತರಿಗೆ ಆಯಾಸ ಆಗಬಾರದು ಅಂತ ಫ್ಯಾನ್ ಹಾಕಿದರು. ಆಗ ಅಲ್ಲಿದ್ದ ಓರ್ವ ಘನ ಗಾಂಭೀರ್ಯದ ವ್ಯಕ್ತಿ ಅದಕ್ಕೆ ತಕರಾರು ತೆಗೆದರು. ಅವರೂ ಆ ಸಂತರ ಭಕ್ತರೇ. ಆದರೂ ಅವರೇಕೆ ತಕರಾರು ತೆಗೆಯುತ್ತಾರೆಂದು ನೋಡಿದರೆ ಆ ಫ್ಯಾನ್ ರೆಕ್ಕೆಗಳ ಮೇಲೆ ಈ ಮಹಾನುಭಾವರು ದಾನ ನೀಡಿದ್ದು ಅಂತ ಬರೆದಿತ್ತು. ಫ್ಯಾನು ಜೋರಾಗಿ ತಿರುಗಿದರೆ ತನ್ನ ಹೆಸರು ಕಾಣುವುದಿಲ್ಲ ಎಂಬುದು ಅವರ ತಕರಾರಿನ ಮೂಲ. ಜನರು ಹೀಗೂ ಇರುತ್ತಾರೆ.

ನಿಮ್ಮೂರಿನ ಅಥವಾ ಪರವೂರಿನ ನೂರಾರು ವರ್ಷ ಹಳೆಯ ಎಷ್ಟೋ ದೇವಸ್ಥಾನಗಳನ್ನು ನೋಡಿ. ಆ ಗುಡಿಯನ್ನು ಕಲ್ಲಿನಲ್ಲಿ ಅಷ್ಟು ಸುಂದರವಾಗಿ ಕೆತ್ತಿಸಿದ ಪುಣ್ಯಾತ್ಮ ಯಾರೋ ಗೊತ್ತಿರುವುದಿಲ್ಲ. ಗರ್ಭಗುಡಿಯಲ್ಲಿರುವ ದೇವರಿಗೆ ಬಂಗಾರದ ಕಿರೀಟ, ಬೆಳ್ಳಿಯ ಕವಚ ತೊಡಿಸಿದವರು ಯಾರೆಂದು ಗೊತ್ತಿರುವುದಿಲ್ಲ. ಆದರೆ ಇತ್ತಿತ್ತಲಾಗಿ ಪುಟಗೋಸಿ ಟ್ಯೂಬ್ಲೈಟಿಗೆ, ಫ್ಯಾನಿಗೆ ಇಂಥವರು ದಾನ ನೀಡಿದ್ದು ಎಂದು ಬರೆದಿರಲಾಗುತ್ತದೆ. ಇದು ಈಗಿನ ಮಾತು.. ಈ ಸೆಲ್ಪಿ ಯುಗದಲ್ಲಿ, ಕಂಡದ್ದು, ಕಾಣದ್ದು, ತಿಂದದ್ದು, ಉಗುಳಿದ್ದು ಎಲ್ಲವನ್ನೂ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡುವ ಈ ಜಮಾನಾದಲ್ಲಿ ಇನ್ನೆಷ್ಟು ಸೆಲ್ಪಿಷ್ಗಳು ಹುಟ್ಟಿಕೊಳ್ಳುತ್ತಾರೋ ಆ ಭಗವಂತನೇ ಬಲ್ಲ.

ಎಲ್ಲವೂ ಸತ್ಯ… ಹಾಗಂತ ಇದು ತಂತ್ರಜ್ಞಾನದ ಪ್ರಮಾದ ಅಂತ ಹೇಳುವುದಿಲ್ಲ. ಘೊರ ಮೈಮರೆವು, ಸ್ವಾರ್ಥ, ಆತ್ಮರತಿಯ ಪರಮಾವಧಿ. ನಾನು ನಾನು ಮತ್ತು ನಾನು ಎನ್ನುವ ಗೀಳಿನ ಪರಿಣಾಮ ಅಷ್ಟೆ…

ಇಷ್ಟೆಲ್ಲ ಆಲೋಚನೆಗೆ ಹಚ್ಚಿದ ಆ ಮೂವರು ಲೇಖಕರಿಗೆ ನನ್ನದೊಂದು ಗೌರವಪೂರ್ವಕ ಸೆಲ್ಯೂಟ್.

(ಲೇಖಕರು ‘ವಿಜಯವಾಣಿ’ ಸಂಪಾದಕರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top