ಕ್ಲೀನ್ ಇಂಡಿಯಾ ಸಾಕಾರ ಬಹಳ ಕಷ್ಟ ಕಣ್ರಿ..

ಇನ್ನೂ ಬೀದಿ ಬದಿಯ ಕಸಗುಡಿಸುವ ಸ್ವಚ್ಛ ಭಾರತ ಅಭಿಯಾನ, ಮಲೇರಿಯಾ, ಡೆಂಘೆ, ಎಬೋಲಾ, ಎಚ್-1 ಎನ್-1 ಕಾಯಿಲೆಗಳ ದಮನದ ಕುರಿತು ಚರ್ಚೆ ಮಾಡುತ್ತಿರುವ ನಾವು ಅದಕ್ಕಿಂತ ದೊಡ್ಡ ಕಾಯಿಲೆಯೊಂದು ನಮಗೆ ಅಂಟಿಕೊಂಡಿದೆ ಎಂಬುದನ್ನು ಮರೆತೇಬಿಟ್ಟಿದ್ದೇವೆ!

ಸ್ವಚ್ಛ ಭಾರತ ಅಭಿಯಾನದ ಜಾಹೀರಾತು ಟಿವಿಗಳಲ್ಲಿ ಜೋರಾಗಿಯೇ ಓಡುತ್ತಿದೆ. ಅದನ್ನು ನೋಡುತ್ತಿದ್ದರೆ ನಮ್ಮ ಕನಸಿನ ಕ್ಲೀನ್ ಇಂಡಿಯಾ ಚಿತ್ರ ಕಣ್ಣಮುಂದೆ ಬರುವುದು ಸಹಜ. ಆದರೆ ಕಾಣುವ ಕನಸು ನನಸಾಗುವುದು ಜಾಹೀರಾತಲ್ಲಿ ನೋಡಿದಷ್ಟು ಸಲೀಸಾ ಎಂಬುದು ಪ್ರಶ್ನೆ. ಸಂಕಲ್ಪಶಕ್ತಿಯಿದ್ದರೆ ಬಾಹ್ಯ ಕಸ, ಕೊಳಕನ್ನು ಗುಡಿಸಿಹಾಕಿ ಫಳಫಳ ಮಾಡಿಬಿಡಬಹುದು. ಅದೊಂದು ಸವಾಲೇ ಅಲ್ಲ. ನಿಜವಾದ ಛಾಲೆಂಜ್ ಇರುವುದು ಈ ದೇಶದ ಬಹುಪಾಲು ಜನರ ಮನಸ್ಸಿಗೆ ಅಂಟಿಕೊಂಡಿರುವ ಆಂತರಂಗಿಕ ಕೊಳೆಯನ್ನು ತೊಳೆದು ಹೊಸ ಹೊಳಪು ತರುವುದು. ಸ್ವಲ್ಪ ಯೋಚನೆ ಮಾಡಿ ನೋಡಿ, ನಿಮಗೂ ಹಾಗೆ ಅನ್ನಿಸದಿದ್ದರೆ ಹೇಳಿ.
ಹಾಗೇ ಸುಮ್ಮನೆ ಅನಿಸಿಕೆ ಹೇರುವುದಕ್ಕಿಂತ ಒಂದೆರಡು ದೃಷ್ಟಾಂತಗಳ ಸಹಿತ ಹೇಳಿದರೆ ಮೇಲಿನ ಮಾತು ಹೆಚ್ಚು ಸ್ಪಷ್ಟವಾಗಿ ಮನದಟ್ಟಾದೀತು. ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿ ಪರಪ್ಪನ ಅಗ್ರಹಾರದ ಜೈಲಿನ ಕಂಬಿಯ ಹಿಂದೆ ಹೋಗುವ ಹಿಂದಿನ ದಿನ ಕಾರ್ಯನಿಮಿತ್ತ ನಾನು ಚೆನ್ನೈನಲ್ಲಿದ್ದೆ. ಆ ಸನ್ನಿವೇಶದಲ್ಲಿ ಒಬ್ಬೊಬ್ಬ ತಮಿಳು ಪ್ರಜೆಯ ಬಾಯಲ್ಲಿ ಹೊರಡುತ್ತಿದ್ದ ಮಾತುಗಳನ್ನು ಕೇಳಿಸಿಕೊಂಡರೆ ಎಂಥವನೂ ದಂಗಾಗಿ ಹೋಗಬೇಕು. ಸ್ವಚ್ಛ ಭಾರತ ಅಭಿಯಾನದ ಹಿನ್ನೆಲೆಯಲ್ಲಿ ತರಹೇವಾರಿ ಆಲೋಚನೆಯಲ್ಲಿ ತೊಡಗಿದ್ದ ನನ್ನಲ್ಲಿ ಆ ದಿನ ಜಯಲಲಿತಾ ಅಭಿಮಾನಿಗಳ ಬಾಯಿಂದ ಬರುತ್ತಿದ್ದ ಪ್ರತಿಯೊಂದು ಮಾತೂ ಹತಾಶೆ, ನಿರಾಸೆಗಳ ಅಲೆಯನ್ನೇ ಎಬ್ಬಿಸುವಂತಿತ್ತು. ರಾತ್ರಿ ಕಳೆದು ಬೆಳಕು ಹರಿದರೆ ಮಾಡಿದ ಕರ್ಮಕ್ಕಾಗಿ ಜಯಾ ಜೈಲೊಳಗೆ ಹೋಗಬೇಕು. ಆದರೆ ಅದ್ಯಾವುದರ ಪರಿವೆಯೇ ಇಲ್ಲದ ಜಯಾ ಅಭಿಮಾನಿ ದೇವರುಗಳ ಮಾತು ಹೇಗಿತ್ತು ಗೊತ್ತಾ? `ಅಯ್ಯೋ ನಾಳೆ ತೀರ್ಪು ಬರೋದೇನು, ಎಲ್ಲವೂ ಈಗಲೇ ತೀರ್ಮಾನ ಆಗಿಹೋಗಿರುತ್ತದೆ. ಇಲ್ಲಿಯವರೆಗೆ ಅಮ್ಮ ನ್ಯಾಯಾಲಯದಲ್ಲಿ ಒಂದೇ ಒಂದು ಕೇಸನ್ನು ಸೋತ ಉದಾಹರಣೆ ಇಲ್ಲವೇ ಇಲ್ಲ. ನಾಳೆಯೂ ಅಷ್ಟೆ, ಜಯಾಗೇ ಜಯ ಸಿಗುವುದು ಗ್ಯಾರಂಟಿ’ ಅಂತ ಒಬ್ಬ ಭಯಂಕರ ಭರವಸೆಯಿಂದ ಬೀಗುತ್ತಿದ್ದ. ಅದಕ್ಕೆ ಧ್ವನಿಗೂಡಿಸಿದ ಮತ್ತೊಬ್ಬ, `ಅಮ್ಮ ಕೋರ್ಟ್‍ನಲ್ಲಿ ಸೋಲುವ ಮಾತೇ ಇಲ್ಲ ಬಿಡಿ. ಹಾಗೇನಾದರೂ ಆಯಿತು ಅನ್ನಿ, ಇಡೀ ತಮಿಳುನಾಡು ಜನರು ಸಿಡಿದೇಳುತ್ತಾರೆ. ಕೋರ್ಟ್ ತೀರ್ಪು ವ್ಯತಿರಿಕ್ತವಾಗಿ ಬಂದರೆ ಜಯಮ್ಮನ ಜನಪ್ರಿಯತೆ ಇನ್ನೂ ನೂರ್ಮಡಿಯಾಗುತ್ತದೆ. ರಾಜಕೀಯವಾಗಿ ಅವರು ಮತ್ತಷ್ಟು ಬಲಿಷ್ಠವಾಗುತ್ತಾರೆ ಬಿಡಿ’ ಅಂತ ಒಂದೇ ಉಸಿರಿಗೆ ಹೇಳಿಬಿಟ್ಟ. ಆ ದಿನ ಬೀದಿ ಬದಿಯ ವ್ಯಾಪಾರಿಯಿಂದ ಹಿಡಿದು ವಿಮಾನನಿಲ್ದಾಣಕ್ಕೆ ತೆರಳುವವರವರೆಗೆ ಎಲ್ಲರ ಬಾಯಲ್ಲಿ ಜಯಾ ಪರಾಕ್ರಮದ್ದೇ ಮಾತು-ಕತೆ. ಎಲ್ಲಿ ನೋಡಿದರಲ್ಲಿ ಗರಿಗರಿ ಬಿಳಿಪಂಚೆ, ಬಿಳಿ ಶರ್ಟ್ ತೊಟ್ಟು ಕಿಸೆಯಲ್ಲೊಂದು ಅಮ್ಮನ ಫೋಟೊ ಇಟ್ಟುಕೊಂಡವರ ಗತ್ತು. ಯಾವುದೋ ಮಹಾಯುದ್ಧದಲ್ಲಿ ಗೆಲುವಿಗಾಗಿ ಕಾದು ಕುಳಿತವರ ಮುಖದಲ್ಲಿ ಕಾಣಬಹುದಾದ ಜೋಷ್, ಅಭಿಮಾನ, ಆಕ್ರೋಶ ಇವೆಲ್ಲವೂ ಜಯಾ ಅಭಿಮಾನಿಗಳ ಮುಖದಲ್ಲಿ ಉಕ್ಕುತ್ತಿತ್ತು. ಸುದೈವವಶಾತ್ ಜಯಾ ಅಭಿಮಾನಿಗಳ ಲೆಕ್ಕಾಚಾರ ಆ ದಿನದ ಮಟ್ಟಿಗೆ ನಿಜವಾಗಲಿಲ್ಲ. ದಕ್ಷ ನ್ಯಾಯಾಧೀಶ ಮೈಕಲ್ ಡಿ. ಕುನ್ಹಾ ಎದುರು ಈ ಸಲ ಜಯಲಲಿತಾ ಆಟ ನಡೆಯಲೇ ಇಲ್ಲ. ಎಲ್ಲರ ನಿರೀಕ್ಷೆ, ಅಂದಾಜುಗಳು ತಲೆಕೆಳಗಾಗಿ ನ್ಯಾಯವ್ಯವಸ್ಥೆಯಲ್ಲಿ ಹೊಸ ಭರವಸೆ ಮೂಡಿಸುವಂಥ ತೀರ್ಪು ಹೊರಬಿತ್ತು. ಜಯಾ ಪ್ರಕರಣದಲ್ಲಿ ಈಗ ಆಗಿರುವ ಬೆಳವಣಿಗೆ ಕುರಿತು ಈಗಲೇ ಚರ್ಚಿಸುವುದು ಸರಿಯಾಗಲಾರದು.
ಹಾಗೇ ನೋಡಿದರೆ ಈಗ ಸಾಬೀತಾಗಿರುವ ಭ್ರಷ್ಟಾಚಾರ ಪ್ರಕರಣ ಜಯಲಲಿತಾ ನಿಜವಾಗಿಯೂ ಗಳಿಸಿರುವ ಅಕ್ರಮ ಆಸ್ತಿ ಪ್ರಮಾಣಕ್ಕೆ ಹೋಲಿಸಿದರೆ ಏನೇನೂ ಅಲ್ಲ. ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಅವರ ಪೋಯೆಸ್ ಗಾರ್ಡನ್ ನಿವಾಸದ ಮೇಲೆ ದಾಳಿ ಮಾಡಿದಾಗ ಸಿಕ್ಕ, 750 ಜೋಡಿ ಚಪ್ಪಲಿ, ಸಾವಿರ ಲೆಕ್ಕದಲ್ಲಿ ಸಿಕ್ಕ ಚಿನ್ನದ ಜರತಾರಿ ಸೀರೆ, ತೊಂಭತ್ತಕ್ಕೂ ಹೆಚ್ಚು ವಿವಿಧ ವಿನ್ಯಾಸದ ಕೈಗಡಿಯಾರಗಳು ಇವೆಲ್ಲ ಜಯಾ ಊಟದಲ್ಲಿ ಉಪ್ಪಿನಕಾಯಿ ಇದ್ದ ಹಾಗೆ. ಯಾಕೆಂದರೆ ಜಯಲಲಿತಾ ಅಕ್ರಮ ಆಸ್ತಿ ಸಾಮ್ರಾಜ್ಯ ತಮಿಳುನಾಡು, ಪಾಂಡಿಚೆರಿ, ದೆಹಲಿ, ಮುಂಬೈ ಗಡಿ ದಾಟಿ ದೂರದ ಲಂಡನ್, ಆಸ್ಟ್ರೇಲಿಯಾ, ಶ್ರೀಲಂಕಾ, ದುಬೈ, ಮಲೇಷ್ಯಾ, ಹಾಂಕಾಂಗ್, ಸಿಂಗಪುರ, ಆಫ್ರಿಕಾ, ಜಮೈಕಾದವರೆಗೂ ವ್ಯಾಪಿಸಿಕೊಂಡಿದೆ. ಬಡವರಿಗೆ ನೀಡುವ ಟೀವಿ ಖರೀದಿಯಲ್ಲಿ, ಬಡಬಗ್ಗರಿಗೆ ಉಚಿತವಾಗಿ ಹಂಚುವ ಅಕ್ಕಿ ಖರೀದಿಯಲ್ಲಿ, ಸರ್ಕಾರಿ ಸಾರಿಗೆ ಸಂಸ್ಥೆಗೆ ಬಸ್ ಖರೀದಿಯಲ್ಲಿ, ಬಡವರಿಗೆ ಪುಕ್ಕಟೆ ನಿರ್ಮಿಸಿಕೊಡುವ ಗೃಹ ನಿರ್ಮಾಣ ಯೋಜನೆಯಲ್ಲಿ, ಸಣ್ಣ ಕೈಗಾರಿಕೆಗೆ ಭೂ ಹಂಚಿಕೆ ಯೋಜನೆ (ಅದೇ ತಾನ್ಸಿ ಹಗರಣ ಅಂದರೆ)ಯಲ್ಲಿ , ಕಲ್ಲಿದ್ದಲು ಖರೀದಿ ಹಗರಣ, ಗ್ರಾನೈಟ್ ಹಂಚಿಕೆ ಹಗರಣ ಹೀಗೆ ಅಕ್ರಮದ ಸರಣಿ ಒಂದೇ ಎರಡೇ? ಇಂಥ ಮೂವತ್ತಕ್ಕೂ ಹೆಚ್ಚು ಹಗರಣಗಳ ಬಗ್ಗೆ ತಮಿಳುನಾಡು ಕ್ರೈಮ್ ಬ್ರಾೃಂಚ್, ಸಿಐಡಿ ಮತ್ತು ವಿಜಿಲೆನ್ಸ್ ಡೈರಕ್ಟರೆಟ್ ಕಲೆಹಾಕಿದ ಮಾಹಿತಿ ನೋಡಿದರೆ ಎಂಥವರೂ ಬೆಚ್ಚಿಬೀಳಬೇಕು. ಈ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿ ಜಯಲಲಿತಾ ವಿರುದ್ಧ ಬೇರೆ ಬೇರೆ ನ್ಯಾಯಾಲಯಗಳಲ್ಲಿ ದೂರು ಕೂಡ ದಾಖಲಾಗಿತ್ತು. ಆದರೆ ಎಲ್ಲ ಪ್ರಕರಣಗಳನ್ನು ಜಯಲಲಿತಾ ಹೇಗೋ ದಕ್ಕಿಸಿಕೊಂಡು ಬಂದರು. ಜಯಲಲಿತಾ ಅಕ್ರಮ ಆಸ್ತಿಪಾಸ್ತಿ ಸಂಪಾದನೆ ಮಾಡಿದ್ದು ಮಾತ್ರವಲ್ಲ. ಅದೊಂದೇ ಆದರೆ ಎಲ್ಲ ರಾಜಕಾರಣಿಗಳೂ ಮಾಡುವುದನ್ನೇ ಅವರು ಕೂಡ ಮಾಡಿದ್ದಾರೆ ಅಂತ ಭಾವಿಸಿ ಸುಮ್ಮನಾಗಬಹುದಿತ್ತು. ಜಯಾ ಭ್ರಷ್ಟೆ ಮಾತ್ರವಲ್ಲ, ತನ್ನ ರಕ್ತ, ನರನಾಡಿಗಳಲ್ಲೆಲ್ಲ ದ್ವೇಷ, ವಿಷದ ನಂಜನ್ನೇ ತುಂಬಿಕೊಂಡ ರಣಚಂಡಿ. ಪೊಲೀಸರ ಮೂಲಕ ಕಂಚಿ ಶ್ರೀಗಳಿಗೆ ಕೊಡಬಾರದ ಕಿರುಕುಳ ಕೊಟ್ಟಿದ್ದು, ಕಾವೇರಿ ನದಿ ನೀರಿನ ವಿಚಾರದಲ್ಲಿ ಕನ್ನಡಿಗರನ್ನು ಬೇತಾಳದಂತೆ ಕಾಡಿದ್ದು ಜಯಾ ದ್ವೇಷ ರಾಜಕಾರಣದ ಒಂದು ಝಲಕ್ ಮಾತ್ರ. ಜಯಲಲಿತಾ ದ್ವೇಷ ಸಾಧನೆಗೆ ತನ್ನ ರಾಜಕೀಯ ಎದುರಾಳಿಗಳನ್ನು ಮಾತ್ರವಲ್ಲ, ತನ್ನಿಚ್ಛೆಗೆ ವಿರೋಧ ಬರುತ್ತಾರೆಂಬ ಒಂದು ಸಣ್ಣ ಅನುಮಾನದ ಎಳೆ ಸಿಕ್ಕರೂ ಸಾಕು, ತನ್ನದೇ ಹಿಂಬಾಲಕರನ್ನೂ ಗೋಳುಹೊಯ್ದುಕೊಳ್ಳದೇ ಬಿಟ್ಟ ಉದಾಹರಣೆಯಿಲ್ಲ. ಆದರೆ ಪರಿಸ್ಥಿತಿ ಹೇಗೆ ಬದಲಾಗುತ್ತದೆ ನೋಡಿ. ಅಂದು ಜಯಲಲಿತಾರಿಂದ ಕಾಟ ಎದುರಿಸಿದ ಕಂಚಿ ಶ್ರೀಗಳು ಈಗ ನ್ಯಾಯಾಲಯದಲ್ಲಿ ಖುಲಾಸೆ ಆಗಿದ್ದಾರೆ. ಕಾಟಕೊಟ್ಟ ಜಯಲಲಿತಾ ಕಂಬಿ ಹಿಂದೆ ಮುದ್ದೆ ಮುರಿಯುತ್ತಿದ್ದಾರೆ (ಸುಪ್ರೀಂ ಕೋರ್ಟ್ ಶುಕ್ರವಾರ ಅವರಿಗೆ ಜಾಮೀನು ನೀಡಿದೆ ಎನ್ನಿ). ಕಾವೇರಿ ನೀರಿನ ವಿಚಾರದಲ್ಲಿ ಕಿರುಕುಳ ಅನುಭವಿಸಿದ ಕನ್ನಡದ ಪೊಲೀಸರಿಂದಲೇ ಈಗ ಜಯಲಲಿತಾ ಜೀವರಕ್ಷಣೆ ಪಡೆಯಬೇಕಿದೆ. ಉಳಿದುಕೊಳ್ಳಲು ಕನ್ನಡದ ನೆಲ, ಕುಡಿಯಲು ಕಾವೇರಿ ನೀರು, ಕನ್ನಡದ ಗಾಳಿಯನ್ನೇ ಆಶ್ರಯಿಸಬೇಕಾಗಿ ಬಂದಿದೆ. ಮಾಡಿದ ತಪ್ಪಿಗೆ ಇದಕ್ಕಿಂತ ದೊಡ್ಡ ಶಿಕ್ಷೆ ಬೇರೆ ಬೇಕಾ?
ಆದರೆ ಇದೆಲ್ಲ ಜಯಲಲಿತಾ ಅಭಿಮಾನಿಗಳಿಗೆ ಅರ್ಥವಾಗುವುದು ಯಾವಾಗ?
ಜಯಲಲಿತಾ ಕಡು ಭ್ರಷ್ಟ ರಾಜಕಾರಣಿ, ಆಕೆ ಮಾಡಿದ್ದೆಲ್ಲವೂ ಅಕ್ರಮವೇ ಅಂತ ಇಡೀ ಲೋಕಕ್ಕೇ ಗೊತ್ತಿದ್ದರೂ ಅವರ ಅಭಿಮಾನಿಗಳಿಗೆ ಮಾತ್ರ ಅವ್ಯಾವವೂ ಲೆಕ್ಕಕ್ಕೇ ಇಲ್ಲ. ಜಯಲಲಿತಾರನ್ನು ಜೈಲಿಗೆ ಕಳುಹಿಸಿದಾಗ, ಆಕೆಗೆ ಮಹಾನ್ ಅನ್ಯಾಯವಾಗಿದೆ ಎಂಬ ರೀತಿಯಲ್ಲಿ ಅಭಿಮಾನಿಗಳು ಬಂದ್ ಆಚರಣೆ, ಪ್ರತಿಭಟನೆ, ಸಾರ್ವಜನಿಕ ಆಸ್ತಿಪಾಸ್ತಿ ಹಾಳುಮಾಡುವ ಕೆಲಸದಲ್ಲಿ ಮುಳುಗಿದ್ದರು. ಅಂಧಾಭಿಮಾನಕ್ಕೆ ಅಕ್ಷರಸ್ಥರು, ಅನಕ್ಷರಸ್ಥರು ಎಂಬ ಭೇದವೂ ಇಲ್ಲ. ಇದಕ್ಕೆಲ್ಲ ಕೊನೆ ಎಂದು?
ಇಂಥ ಭ್ರಷ್ಟರು ಈ ಪರಿ ಬಲಿಯಲು ಇಂಥ ಕುರುಡು ಅಭಿಮಾನವೇ ಕಾರಣವಲ್ಲವೆ? ಈ ಕುರುಡು ಅಭಿಮಾನವೇ ಭ್ರಷ್ಟ ರಾಜಕಾರಣಿಗಳ ಮೂಲ ಬಂಡವಾಳ ಕೂಡ. `ಅಮ್ಮ’ ಇವರಿಗೆ ಎಂಟಾಣೆಗೆ ಇಡ್ಲಿ ಕೊಟ್ಟರೆ, ಪುಗಸಟ್ಟೆ ಅಕ್ಕಿ, ಬೇಳೆ, ಕಲರ್ ಟೀವಿ, ಗುಟುಕು ಸಾರಾಯಿ, ಸಿಮೆಂಟು ಯಾವುದು ಕೊಟ್ಟರೂ ಖುಷಿಯೇ. ಇಂಥ ಮೂರ್ಖತನದ ಯೋಜನೆಗಳಿಂದ ಜನರು ನಿದ್ದಂಡಿಗಳಾಗುವುದರ ಜತೆಗೆ ಸಾರ್ವಜನಿಕರ ತೆರಿಗೆ ಹಣ ಅಪಾಪೋಲು ಆಗುತ್ತಿದೆ ಅಂತ ಯೋಚಿಸುವುದಕ್ಕೆ ಇವರಿಗೆಲ್ಲಿ ವ್ಯವಧಾನವಿದೆ? ಸರ್ಕಾರದ ಪುಗಸಟ್ಟೆ ಯೋಜನೆಗಳಿಗೆ ಕೈಯೊಡ್ಡಿ ಹಲ್ಲುಗಿಂಜುವವರೇ ತಮ್ಮ ನಾಯಕರು ಜೈಲಿಗೆ ಹೋದಾಗ ಬೀದಿಗಿಳಿದು ಅಭಿಮಾನ ಮೆರೆಯುವವರು ತಾನೆ?

32152734ಜಯಲಲಿತಾ ಅಭಿಮಾನಿಗಳ ವಿಚಾರಶೂನ್ಯತೆ ಮಾತು ಹೇಗೂ ಇರಲಿ. ಸ್ವಚ್ಛ ಭಾರತ ಅಭಿಯಾನದ ಕನಸು ಕಾಣುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳ ಆಲೋಚನೆಗೆ ಹೇಗೆ ತುಕ್ಕು ಹಿಡಿಯುತ್ತಿದೆ ಎಂಬುದನ್ನೊಮ್ಮೆ ನೋಡಿ. ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ಕೊಡುವುದಕ್ಕೂ ಹತ್ತು ದಿನ ಮೊದಲು ತುಮಕೂರಿನ ಫುಡ್ ಪಾರ್ಕ್ ಉದ್ಘಾಟನೆಗೆಂದು ಮೋದಿ ಬೆಂಗಳೂರಿಗೆ ಆಗಮಿಸಿದ್ದರು. ಆ ಎರಡು ದಿನ ಪ್ರಧಾನಿಗೆ ಹದಿನೆಂಟು ಗಂಟೆ ಕಾರ್ಯಕ್ರಮದ ಒತ್ತಡ. ಅದರ ನಡುವೆ ಸ್ಥಳೀಯ ಬಿಜೆಪಿ ನಾಯಕರಿಗೆ ಮೋದಿ ಹೆಸರಲ್ಲಿ ಮಿಂಚುವ ತವಕ. ಅದರ ಪರಿಣಾಮ ಎಚ್‍ಎಎಲ್ ವಿಮಾನ ನಿಲ್ದಾಣದಿಂದ ಹಿಡಿದು ತುಮಕೂರಿನವರೆಗೆ ಹಾಕಿದ ಫ್ಲೆಕ್ಸ್, ಕಟೌಟು, ಸ್ವಾಗತ ಕಮಾನುಗಳ ಹಾವಳಿಯನ್ನು ನೋಡಬೇಕಿತ್ತು. ಒಂದೊಂದು ಕಮಾನಿಗೆ, ಕಟೌಟಿಗೆ, ಫ್ಲೆಕ್ಸಿಗೆ ಐದ್ಹತ್ತು ಲಕ್ಷ ರೂಪಾಯಿಗೆ ಕಮ್ಮಿ ಇರಲಿಲ್ಲ. ಒಟ್ಟು ಲೆಕ್ಕಹಾಕಿದರೆ ಹತ್ತಾರು ಕೋಟಿ ರೂಪಾಯಿಗೆ ಕಡಿಮೆ ಇರಲಿಲ್ಲ. ಸ್ವಂತ ದುಡಿಮೆಯ ಹಣವನ್ನು ಯಾರಾದರೂ ಹೀಗೆಲ್ಲ ಪೋಲು ಮಾಡುತ್ತಾರೆಯೇ? ರಸ್ತೆ ಇಕ್ಕೆಲಗಳಲ್ಲಿ ಎಲ್ಲಿ ನೋಡಿದಲ್ಲಿ ಗಲೀಜು ಬೇರೆ. ಮಾರನೇ ದಿನ ಬೆಂಗಳೂರು ಹಿಂದೆಂದೂ ಕಾಣದ ಧೋ ಮಳೆ ಬಂತು. ಆಗ ಅದೇ ಫ್ಲೆಕ್ಸ್, ಬ್ಯಾನರು, ಕಟೌಟುಗಳೆಲ್ಲ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿ. ಮೋರಿಯಲ್ಲಿ ಕಟೌಟ್ ಕಸವೆಲ್ಲ ತುಂಬಿಕೊಂಡು ರಸ್ತೆಯೆಲ್ಲಾ ಸಮುದ್ರ, ಗುಂಡಿ ಗಂಡಾಂತರ. ಮೋದಿ ಸ್ವಚ್ಛ ಭಾರತಕ್ಕೆ ಸಂಕಲ್ಪ ಮಾಡಿದರೆ, ಅಭಿಮಾನಿಗಳು ಗಬ್ಬು, ಗಲೀಜು ಭಾರತಕ್ಕೆ ಪಣ ತೊಟ್ಟಂತೆ ತೋರುತ್ತಿತ್ತು. ಇದು ಆಲೋಚನಾ ದಾರಿದ್ರೃದ ಒಟ್ಟು ಪರಿಣಾಮವಲ್ಲದೆ ಮತ್ತೇನು? ಈ ಮಾತನ್ನು ಬಿಜೆಪಿಯವರು ಮಾತ್ರವಲ್ಲ, ಎಲ್ಲ ಪಕ್ಷ, ಸಂಘಟನೆಗಳ `ಕಟೌಟ್ ವೀರರೂ’ ಕೇಳಿಸಿಕೊಂಡರೆ ಒಳ್ಳೆಯದು. ಇಂಥ ಅನುಯಾಯಿಗಳನ್ನು ಕಟ್ಟಿಕೊಂಡ ಮೋದಿ ಈ ವ್ಯವಸ್ಥೆಯನ್ನು ಸರಿಪಡಿಸಲು ಎಷ್ಟು ಹೆಣಗಾಡಿದರೆ ಏನು ಬಂತು?
ತಮಾಷೆ ನೋಡಿ, ಮಾರನೇ ದಿನ ಅದೇ ಎಚ್‍ಎಎಲ್ ರಸ್ತೆಯ ಮೂಲಕ ಜಯಲಲಿತಾ ಪರಪ್ಪನ ಅಗ್ರಹಾರ ಜೈಲಿಗೆ ಬರಬೇಕಿತ್ತು. ಹಿಂದಿನ ದಿನ ಮೋದಿ ಸ್ವಾಗತಕ್ಕೆ ಕಟೌಟ್,ಬ್ಯಾನರುಗಳನ್ನು ಹಾಕಿದ ಜಾಗದಲ್ಲೇ ಜಯಲಲಿತಾಗೆ ಸ್ವಾಗತ ಕೋರುವ ಆಳೆತ್ತರದ ಕಟೌಟುಗಳು ಬೆಳಗಾಗುವುದರೊಳಗೆ ತಲೆಎತ್ತಿದ್ದವು. ಬಹುಶಃ ಮೋದಿ ಮತ್ತು ಜಯಲಲಿತಾ ಸ್ವಾಗತಕ್ಕೆ ಕಟೌಟು, ಫ್ಲೆಕ್ಸ್ ಹಾಕಿದ ಕಾಂಟ್ರಾಕ್ಟರ್ ಒಬ್ಬನೇ ಇದ್ದಿರಬೇಕು! ಇದರಿಂದ ಯಾರಿಗೆ ಮಾನ, ಯಾರಿಗೆ ಅಪಮಾನ!
ಈಗ ಹೇಳಿ ಯಾವ ಕೊಳೆಯನ್ನು ಮೊದಲು ತೊಳೆಯಬೇಕು? ಬಾಹ್ಯ ಕೊಳೆಯನ್ನೋ, ಇಲ್ಲ ಮನಸ್ಸಿನ ಆಳಕ್ಕೆ ಬೇರುಬಿಟ್ಟ ಆಲೋಚನಾ ದಾರಿದ್ರೃದ ಕೊಳಕನ್ನೋ? ಇದನ್ನೆಲ್ಲ ನೋಡಿದರೆ ದೇಶವಾಸಿಗಳ ಮಾನಸಿಕ ಕೊಳೆ ತೊಳೆಯಲೆಂದೇ ಪ್ರಧಾನಿ ಮೋದಿ ಪ್ರತ್ಯೇಕ ಬೃಹತ್ ಅಭಿಯಾನವೊಂದನ್ನು ತುರ್ತಾಗಿ ಹಮ್ಮಿಕೊಳ್ಳಬೇಕು ಅಂತ ತೋರುತ್ತದೆ. ಅಂದಮೇಲೆ ಬೀದಿ ಬದಿಯ ಕಸವೆಲ್ಲ ಯಾವ ಲೆಕ್ಕ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top