ಆತಂಕದ ಅಲೆಯಲ್ಲಿ ತೇಲುತ್ತಿರುವ ಕನ್ನಡ

ಇಂಗ್ಲಿಷ್ ಮೂಲಕ ಕಲಿಸುವ ಮತ್ತು ಅನುದಾನ ಪಡೆಯದ ಶಾಲೆಗಳನ್ನು ನಡೆಸುತ್ತಿರುವವರು ತಮ್ಮ ಆಯ್ಕೆಯೇ ಪಾಲಕರ ಆಯ್ಕೆ ಎಂದು ತೀರ್ಮಾನಿಸಿಬಿಟ್ಟಿದ್ದಾರೆ. ಸರ್ಕಾರ ಏನೂ ಮಾಡಲಾಗದ ಹಂತವನ್ನು ತಲುಪಿದೆ ಎಂದು ಈಗ ನಂಬಬೇಕಾಗಿಬಿಟ್ಟಿದೆ. 

ಪ್ರೊ. ಕೆ.ವಿ.ನಾರಾಯಣ.-ಕೆ. ವಿ. ನಾರಾಯಣ

ತಾಯ್ನುಡಿಯಲ್ಲಿ ಕಲಿಕೆ ನಡೆಯುವುದಕ್ಕೆ ಈಗ ಮೊದಲಿಗಿಂತ ಹಲವಾರು ಅಡೆತಡೆಗಳು ಹೆಚ್ಚಾಗಿ ಉಂಟಾಗಿವೆ. ಅದರಲ್ಲೂ 2014ರಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಗಮನಿಸಿ ಈಗ ಕೈಚೆಲ್ಲಿ ಕೂರುವವರು ಹೆಚ್ಚಾಗಿದ್ದಾರೆ. ಇನ್ನೂ ಕೆಲವರು ಮುಂದುವರೆದು, ಸಂವಿಧಾನಕ್ಕೆ ತಿದ್ದುಪಡಿಯನ್ನು ತಂದು ಕಲಿಕೆಯು ತಾಯ್ನುಡಿಯಲ್ಲೇ ನಡೆಯುವಂತೆ ಮಾಡಬೇಕೆಂಬ ಉಮೇದಿನಲ್ಲಿದ್ದಾರೆ. ಇದು ಕನ್ನಡಕ್ಕೆ ಮಾತ್ರ ಬಂದ ಕುತ್ತು ಅಲ್ಲ, ಎಲ್ಲ ದೇಶಭಾಷೆಗಳು ಈ ಬಿಕ್ಕಟ್ಟನ್ನು ಎದುರಿಸುತ್ತಿರುವುದರಿಂದ ಸಂವಿಧಾನಕ್ಕೆ ತಿದ್ದುಪಡಿ ತರುವುದೊಂದೇ ಈಗ ನಮ್ಮ ಮುಂದೆ ಇರುವ ದಾರಿ ಎಂದು ವಾದಿಸಲಾಗುತ್ತಿದೆ. ಇದೆಲ್ಲವೂ ಎಲ್ಲಿ ಹೋಗಿ ಮುಟ್ಟುವುದೋ ಎಂಬುದನ್ನು ಕಾದು ನೋಡಬೇಕಿದೆ.

ತಾಯ್ನುಡಿಯಲ್ಲಿ ಕಲಿಕೆ ನಡೆಯಬೇಕು; ಅದರಲ್ಲೂ ಕಲಿಕೆಯ ಮೊದಲ ಹಂತದಲಿ ್ಲಇದು ಬೇಕೇ ಬೇಕು ಎನ್ನುವವರ ವಿಚಾರವೇನೆಂದು ನೋಡೋಣ. ತಾಯ್ನುಡಿಯಲ್ಲಿ ಕಲಿಕೆ ನಡೆದರೆ ಮಗುವಿಗೆ ಹೆಚ್ಚು ಸುಲಭವಾಗುತ್ತದೆ; ಹಾಗಿಲ್ಲದೆ ತನಗೆ ಗೊತ್ತಿಲ್ಲದ ನುಡಿಯೊಂದರ ಮೂಲಕ ಕಲಿತರೆ ಅದರ ಕಲಿಕೆ ಊನವಾಗುತ್ತದೆ ಎಂಬುದು ಇವರ ಚಿಂತನೆಯ ಒಂದು ನೆಲೆ. ಇನ್ನೊಂದು ನೆಲೆಯಲ್ಲಿ ಕಲಿಕೆಯ ಹಂತದಲ್ಲಿ ಮಗು ತಾಯ್ನುಡಿಯಿಂದ ದೂರಾಗತೊಡಗಿದರೆ ಅದು ಬೆಳೆದ ಮೇಲೆ ತನ್ನ ಪರಿಸರದೊಡನೆ ಇರುವ ನಂಟನ್ನು ಕಳೆದುಕೊಳ್ಳುತ್ತದೆ; ಇದರಿಂದ ಮುಂದಿನ ಜನಾಂಗವು ತನ್ನ ಪರಂಪರೆಯಲ್ಲಿ ನಿರಾಸಕ್ತವಾಗುತ್ತದೆ; ಇದು ಒಟ್ಟಾರೆ ಕನ್ನಡ ಸಂಸ್ಕøತಿಯ ಅಳಿವಿಗೆ ನಾಂದಿಯಾಗುತ್ತದೆ ಎಂದು ವಾದಿಸಲಾಗುತ್ತಿದೆ. ಇವುಗಳಲ್ಲಿ ಮೊದಲನೆಯ ನಿಲುವು ಕಲಿಯುತ್ತಿರುವ ಮಗುವನ್ನು ಕೇಂದ್ರದಲ್ಲಿ ಇರಿಸಿಕೊಂಡಿದೆ. ಅದು ಕನ್ನಡದ ಬಗೆಗಿನ ಕಾಳಜಿಗಿಂತ ಹೆಚ್ಚಾಗಿ ಮಗು ಚೆನ್ನಾಗಿ ಕಲಿಯಲಾಗುತ್ತಿಲ್ಲ ಎಂಬ ಆತಂಕದಿಂದ ಹುಟ್ಟಿದೆ. ಎರಡನೆಯ ನಿಲುವು ಕನ್ನಡದ ಉಳಿವಿನ ಕಾಳಜಿಯಿಂದ ಹುಟ್ಟಿಕೊಂಡಿದೆ.

ಏಕೀ ಇಂಗ್ಲಿಷ್ ಮೋಹ?
ತನ್ನದಲ್ಲದ ನುಡಿಯ ಮೂಲಕ ಕಲಿಯುವುದರಿಂದ ಮಗುವಿನ ಕಲಿಕೆಯಲ್ಲಿ ಊನವಾಗುತ್ತದೆ ಎಂದು ಸಾರಿ ಸಾರಿ ಹೇಳಿದರೂ ಪಾಲಕರು ಏಕೆ ತಮ್ಮ ಮಕ್ಕಳನ್ನು ಇಂಗ್ಲಿಷ್ ಮೂಲಕ ಕಲಿಸುವ ಶಾಲೆಗಳಿಗೆ ಕಳಿಸಲು ಸಾಲುಗಟ್ಟುತ್ತಿದ್ದಾರೆ? ಇದಕ್ಕೆ ಹಲವಾರು ಕಾರಣಗಳನ್ನು ಕೊಡಲಾಗುತ್ತದೆ. ಇಂಗ್ಲಿಷ್ ಅವಕಾಶಗಳನ್ನು ಹುಟ್ಟಿಹಾಕುತ್ತದೆ; ಕನ್ನಡ ಅನ್ನ ಕೊಡುವ ನುಡಿಯಲ್ಲ; ಮುಂದಿನ ಹಂತದ ಕಲಿಕೆಗೆ ಇಂಗ್ಲಿಷ್ ಬೇಕೆ ಬೇಕು- ಹೀಗೆ ಹಲವು ವಾದಗಳನ್ನು ಮುಂದಿಡಲಾಗುತ್ತಿದೆ. ದಿಟದಲ್ಲಿ ಇವೆಲ್ಲಕ್ಕಿಂತ ಮುಂಚೂಣಿಯಲ್ಲಿ ಇರುವ ಕಾರಣವೊಂದಿದೆ. ಅದೆಂದರೆ ಈ ನಾಡಿನಲ್ಲಿ ಕಲಿಕೆ ಎಂಬುದು ಸಮಾಜದಲ್ಲಿ ಈಗ ಇರುವ ಅಸಮಾನತೆಯನ್ನು ಕಾಯ್ದುಕೊಳ್ಳುವ ವ್ಯವಸ್ಥೆಯೇ ಆಗಿದೆ. ಸಮಾನತೆಯ ಸಾಧನೆಯೇ ಕಲಿಕೆಯ ಗುರಿ ಎಂಬುದು ಅದರ ಮೇಲ್ಪದರದ ಹೇಳಿಕೆಯಾಗಿ ಕಂಡರೂ ದಿಟದಲ್ಲಿ ಅದು ಅಸಮಾನತೆಯನ್ನೇ ಕಾಯ್ದುಕೊಳ್ಳುತ್ತಿರುತ್ತದೆ. ಸಮಾಜದಲ್ಲಿ ತಮಗಿರುವ ಇಕ್ಕಟ್ಟುಗಳಿಂದ ಬಿಡುಗಡೆ ಪಡೆದು ಹೆಚ್ಚಿನ ಅವಕಾಶಗಳನ್ನು ಪಡೆದುಕೊಳ್ಳಬೇಕು ಎಂಬುದನ್ನು ಬಯಸುವ ಜನರು ಸಹಜವಾಗಿಯೇ ಮೇಲ್ಮುಖ ಚಲನೆಗಾಗಿ ಹಂಬಲಿಸುತ್ತಿರುತ್ತಾರೆ. ಕಲಿಕೆಯ ಮೂಲಕ ಅದನ್ನು ಸಾಧಿಸಲು ಆಗಬಹುದೇನೋ ಎಂಬ ನಂಬುಗೆಯಿಂದ ಇಂಗ್ಲಿಷಿಗೆ ಮೊರೆಹೋಗುತ್ತಿರುತ್ತಾರೆ. ಹಾಗಾಗಿ ಅವರಿಗೆ ಇಂಗ್ಲಿಷ್ ತೇಲಲು ನೆರವಾಗುವ ಬೆಂಡಿನಂತೆಯೂ ಕನ್ನಡ ಇಲ್ಲವೇ ತಾಯ್ನುಡಿಯು ಮುಳುಗಿಸುವ ಗುಂಡಿನಂತೆಯೂ ತೋರಿದರೆ ಅಚ್ಚರಿಯೇನಿಲ್ಲ. ನಮ್ಮ ಕಲಿಕೆಯ ವ್ಯವಸ್ಥೆಯಲ್ಲಿ ಬೇರೂರಿರುವ ಅಸಮಾನತೆಯನ್ನು ಕಾಯ್ದುಕೊಳ್ಳುವ ಚಹರೆ ಕಳೆದುಹೋಗುವ ತನಕ ಈ ಇಂಗ್ಲಿಷ್ ಬಯಕೆ ಇಂಗುವುದಿಲ್ಲ.

kannada 1ಇನ್ನು ಎರಡನೆಯ ನಿಲುವನ್ನು ನೋಡೋಣ. ಕನ್ನಡದ ನಾಳೆಗಳು ಮಸುಕಾಗಲಿವೆ ಎಂಬ ಕಾಳಜಿಯಿಂದ ಇಂದಿನಿಂದಲೇ ಮಕ್ಕಳಿಗೆ ಕನ್ನಡದ ಮೂಲಕ ಲೋಕವನ್ನು ಗ್ರಹಿಸುವ, ಗ್ರಹಿಸಿದ್ದನ್ನು ಹೇಳುವ ಕೌಶಲಗಳನ್ನು ಕಲಿಸಬೇಕು ಎಂಬ ನಿಲುವು ಇದು. ಈಗಿರುವಂತೆ ಇಂಗ್ಲಿಷ್ ಬಲೆಗೆ ಬಿದ್ದು ಮಕ್ಕಳು ಕನ್ನಡವನ್ನು ತಾತ್ಸಾರ ಮಾಡತೊಡಗಿದರೆ ನಾಳೆ ಅವರು ನಮ್ಮ ಪರಿಸರದ ಅಂಗವಾಗಿ ಉಳಿಯಲಾರರು; ಸಾವಿರಾರು ವರುಷಗಳ ನಮ್ಮ ಬದುಕಿನ ಕ್ರಮಗಳಿಂದ ಅವರು ದೂರಾಗಿ ಬಿಡುತ್ತಾರೆ ಎಂಬುದು ಇಲ್ಲಿನ ಆತಂಕ. ಈ ಆತಂಕವನ್ನು ಸರಿಯಾದ ಚೌಕಟ್ಟಿನಲ್ಲಿ ನಾವು ಅರಿಯಬೇಕಾಗಿದೆ. ಕಲಿತವರು ತಾವು ಯಾವ ನುಡಿ ಸಂಸÀ್ಕøತಿಗೆ ಸೇರಿದವರೋ ಅದಕ್ಕೆ ಎರವಾಗುವಂತೆ ಬೆಳೆಯುತ್ತಾರೆ ಎಂದು ತಿಳಿಯಲು ಬಲವಾದ ಪುರಾವೆಗಳಿಲ್ಲ. ಹಾಗೇನಾದರೂ ಅವರು ದೂರ ಸರಿಯುತ್ತಿದ್ದರೆ ಅದಕ್ಕೆ ಬೇರೆ ಬೇರೆ ಕಾರಣಗಳಿರಲು ಸಾಧ್ಯ. ಕನ್ನಡ ಇಲ್ಲವೇ ತಾಯ್ನುಡಿಯ ಮೂಲಕ ಕಲಿತವರು ತಮ್ಮ ಸಂಸ್ಕøತಿಗೆ ಹತ್ತಿರವಾಗುವಂತೆ ಬೆಳೆಯುತ್ತಾರೆ ಮತ್ತು ಬೇರೆ ನುಡಿಯ ಮೂಲಕ ಕಲಿತವರು ತಮ್ಮ ಸಂಸÀ್ಕøತಿಗೆ ದೂರವಾಗಿ ಬೆಳೆಯುತ್ತಾರೆ ಎಂಬ ತೀರ್ಮಾನಕ್ಕೆ ಬರುವುದು ಹೇಗೆ? ಅಲ್ಲದೆ ಸಂಸ್ಕøತಿಗೆ ಹತ್ತಿರವಾಗುವುದು; ಅದಕ್ಕೆ ಹಕ್ಕುದಾರರಾಗುವುದು ಎಂದರೇನು? ಸಂಸ್ಕøತಿ ಎಂದು ನಾವು ವ್ಯವಹರಿಸುತ್ತಿರುವ ನೆಲೆಗಳೆಲ್ಲವೂ ಸಾಮಾಜಿಕ ಅಸಮಾನತೆಯನ್ನು, ಅಸಂಗತ ಮೌಲ್ಯಗಳನ್ನು ಪ್ರತಿಪಾದಿಸುತ್ತಿದ್ದರೆ ಆಗ ಸಹಜವಾಗಿಯೇ ಅಂತಹ ನೆಲೆಗಳಿಗೆ ಹಕ್ಕುದಾರರಾಗಲು ಬೆಳೆಯುವವರು ಒಪ್ಪದಿರಬಹುದಲ್ಲವೇ? ಅಂದರೆ ಹೊಸ ತಲೆಮಾರು ಸಂಸÀ್ಕøತಿಗೆ ಎರವಾಗುತ್ತಿರುವುದಕ್ಕೆ ನಾವು ಹೊತ್ತು ಮೆರೆಯುತ್ತಿರುವ ಸಂಸ್ಕøತಿಯ ಒಳಗೇ ಇರುವ ಸಮಸ್ಯೆಗಳು ಕಾರಣವಾಗಿರಬೇಕೇ ಹೊರತು ಆ ತಲೆಮಾರಿನವರು ಯಾವ ನುಡಿಯ ಮೂಲಕ ಕಲಿತಿದ್ದಾರೆ ಎಂಬುದು ಮುಖ್ಯ ಕಾರಣವಾಗಿರಲಿಕ್ಕಿಲ್ಲ.
ಕಲಿಕೆಯ ಗುರಿ ಮತ್ತು ಹಾದಿ

ಈಗ ಈ ಸಮಸ್ಯೆಯ ಇನ್ನೊಂದು ಮುಖವನ್ನು ನೋಡೋಣ. ಕಲಿಕೆ ಯಾವ ನುಡಿಯ ಮೂಲಕ ನಡೆಯುತ್ತದೆ ಎಂಬುದು ಹಾಗಿದ್ದಲ್ಲಿ ಒಂದು ಚರ್ಚೆಯ ವಿಷಯವೇ ಅಲ್ಲವೇ? ಈ ಪ್ರಶ್ನೆಗೆ ಉತ್ತರ ನೀಡುವ ಮೊದಲು ಕಲಿಕೆಯ ಸ್ವರೂಪವನ್ನು ಅರಿಯಬೇಕಾಗುತ್ತದೆ. ಕಲಿಕೆಯು ಯಾವುದಾದರೊಂದು ಕೌಶಲವನ್ನು ನಮ್ಮಲ್ಲಿ ಬೆಳೆಸುವ ಗುರಿಯನ್ನು ಹೊಂದಿರಲು ಸಾಧ್ಯ. ಇಲ್ಲವೇ ಕಲಿಕೆಯು ಕೆಲವೊಮ್ಮೆ ನಮ್ಮಲ್ಲಿ ಮಾಹಿತಿಗಳ ಮೊತ್ತವನ್ನು ಹೆಚ್ಚಿಸುವ ಗುರಿಯನ್ನು ಮಾತ್ರವೇ ಹೊಂದಿರಬಹುದು. ಇನ್ನೂ ಕೆಲವೊಮ್ಮೆ ಕಲಿಕೆಯು ನಮಗೆ ಕಲಿಯುವ, ಅರಿಯುವ ಬಗೆಯನ್ನು ಹೇಳಿಕೊಡುತ್ತಿರಬಹುದು. ಹೀಗೆ ಕಲಿಕೆಯಲ್ಲಿ ಹಲವು ಬಗೆಗಳಿರುತ್ತವೆಯಷ್ಟೆ. ನಮ್ಮ ಸದ್ಯದ ಶಾಲಾ ಕಲಿಕೆ ಎರಡನೆಯ ಬಗೆಯದ್ದು. ಅಲ್ಲಿ ನಮಗೆ ಗೊತ್ತಿರದ ಮಾಹಿತಿಯನ್ನು ಕಲಿಸುವ ಕೆಲಸ ನಡೆಯುತ್ತಿರುತ್ತದೆ. ಕಲಿತದ್ದು ಮಾಹಿತಿಯಾಗಿ ಮಾತ್ರ ನೆನಪಿನಲ್ಲಿ ಉಳಿಯಬೇಕೆಂದು ಬಯಸುವ ಗುರಿ ಈ ಬಗೆಯ ಕಲಿಕೆಗೆ ಇದೆ. ಹಾಗಾಗಿ ಕಲಿಕೆಯ ಫಲವಾಗಿ ಮಕ್ಕಳಲ್ಲಿ ಸ್ವತಂತ್ರವಾಗಿ ವಿವೇಚಿಸುವ, ವಿಶ್ಲೇಷಿಸುವ ಕೌಶಲಗಳು ಬೆಳೆಯಬೇಕೆಂಬ ಗುರಿ ಇರುವುದಿಲ್ಲ. ಒಂದು ವೇಳೆ ಇಂತಹ ಗುರಿಯನ್ನು ಹೊಂದಿದ್ದರೆ ಆಗ ಯಾವ ನುಡಿಯ ಮೂಲಕ ಕಲಿಸಲಾಗುತ್ತದೆ ಮತ್ತು ಕಲಿಯಲಾಗುತ್ತಿದೆ ಎಂಬುದಕ್ಕೆ ಹೆಚ್ಚಿನ ಮಹತ್ವ ಬರುತ್ತದೆಂದು ತೋರುತ್ತದೆ.

ಹಾಗಿದ್ದರೆ ಕಲಿಕೆಯಲ್ಲಿ ತಾಯ್ನುಡಿಗೆ ಯಾವ ಮಹತ್ವವೂ ಇಲ್ಲವೇ ಎಂಬ ಪ್ರಶ್ನೆ ಈಗ ಎದುರಾಗುತ್ತದೆ. ಈ ಪ್ರಶ್ನೆಯನ್ನು ನಾವು ಯಾವ ಸಂದರ್ಭದಲ್ಲಿ ಕೇಳುತ್ತಿz್ದÉೀವೆ ಎಂಬುದನ್ನು ಮೊದಲು ಗಮನಿಸಬೇಕು. ತಾಯ್ನುಡಿಯ ಕೆಲವು ಕೌಶಲಗಳನ್ನು ಶಾಲೆಯಲ್ಲಿ ಮಕ್ಕಳಿಗೆ ಕಲಿಸಬೇಕಾದ ಅಗತ್ಯ ಇದೆ. ಓದುವ ಮತ್ತು ಬರೆಯುವ ಕೌಶಲಗಳಂತೂ ಸರಿಯೇ ಸರಿ. ಇದಲ್ಲದೆ ಮಾತಾಡುವ ಮತ್ತು ಆಲಿಸಿ ಅರಿಯುವ ಕೌಶಲಗಳೂ ಶಾಲೆಯಲ್ಲಿ ಹೆಚ್ಚು ಪರಿಷ್ಕಾರಗೊಳ್ಳಬೇಕಾಗುತ್ತದೆ. ಒಂದು ಗುಂಪಿನಲ್ಲಿ ಮಾತಾಡುವುದು; ಬೇರೆ ಬೇರೆ ಸನ್ನಿವೇಶಗಳಲ್ಲಿ ಬೇರೆ ಬೇರೆ ಉz್ದÉೀಶದಿಂದ ಮಾತಾಡುವುದು ಶಾಲೆಯಲ್ಲಿ ಕಲಿಯಬೇಕಾದ ಕೌಶಲಗಳು. ಈ ನಿಟ್ಟಿನಲ್ಲಿ ನುಡಿಯನ್ನು ನಾವು ಶಾಲೆಯಲ್ಲಿ ಕಲಿಸುತ್ತಿರುವ ರೀತಿ ತುಂಬಾ ತಪ್ಪು ದಾರಿ ಹಿಡಿದಿದೆ. ಗೊತ್ತಿಲ್ಲದಿರುವುದನ್ನು ಕಲಿಸುವ ಬಗೆಯನ್ನೇ ನುಡಿಯ ಕಲಿಕೆಯಲ್ಲೂ ಬಳಸಲಾಗುತ್ತಿದೆ, ಗಣಿತದ ಕಲಿಕೆಗೂ ನುಡಿಯ ಕಲಿಕೆಗೂ ಇರುವ ವ್ಯತ್ಯಾಸಗಳನ್ನು ನಾವು ಗಮನಕ್ಕೆ ತಂದುಕೊಂಡಿಲ್ಲ. ಈ ಕಾರಣದಿಂದಾಗಿಯೇ ಹಲವು ವರುಷಗಳ ಶಾಲಾ ಕಲಿಕೆಯ ಬಳಿಕವೂ ಮಕ್ಕಳಲ್ಲಿ ನುಡಿ ಬಳಕೆಯ ಕೌಶಲಗಳು ಬೆಳೆಯದೇ ಹೋಗುತ್ತಿವೆ. ಕಲಿಕೆಯ ಬಗೆಯನ್ನು ಕುರಿತು ಯೋಜನೆಗಳನ್ನು ರೂಪಿಸುತ್ತಿರುವವರು ಇದನ್ನೊಂದು ಸಮಸ್ಯೆಯೆಂದೇ ಪರಿಗಣಿಸುತ್ತಿಲ್ಲ. ಈಗಲೂ ವ್ಯಾಕರಣದ ನಿಯಮಗಳನ್ನು ಹೇಳಿಕೊಡುವ ಮತ್ತು ಅದನ್ನೆ ನುಡಿ ಕಲಿಕೆಯ ಪರಮಗುರಿ ಎಂದು ಸಾಧಿಸುವ ಬಗೆ ಮುಂದುವರೆದಿದೆ. ತಾಯ್ನುಡಿಯ ವ್ಯಾಕರಣ ಎಂಬುದು ಮಕ್ಕಳಲ್ಲಿ ಶಾಲೆಗೆ ಬರುವ ಹೊತ್ತಿಗೇ ನೆಲೆಗೊಂಡಿರುತ್ತದೆ. ಅದನ್ನು ಬೇರೆಯಾಗಿ ಹೇಳಿಕೊಡುವ ಅಗತ್ಯ ಇರುವುದಿಲ್ಲ. ಹಾಗಿದ್ದÀಲ್ಲಿ ಮಕ್ಕಳು ಬರೆಯುವಾಗ ಮತ್ತು ಮಾತಾಡುವಾಗ ಮಾಡುವ `ತಪ್ಪು’ಗಳಿಗೆ ಬೇರೆಯದೇ ಕಾರಣಗಳಿರುತ್ತವೆ. ತಪ್ಪುಗಳನ್ನು ತಿದ್ದುತ್ತೇವೆಯೇ ಹೊರತು ಮೂಲಕಾರಣವನ್ನು ಕಂಡುಕೊಂಡು ಅದನ್ನು ಸರಿಪಡಿಸುವ ಕೆಲಸ ಈಗ ನಮ್ಮ ಶಾಲೆಗಳಲ್ಲಿ ನಡೆಯುತ್ತಿಲ್ಲ.

ಕಲಿಕೆಯು ತಾಯ್ನುಡಿಯ ಮೂಲಕ ಆಗಬೇಕು ಎಂದು ಸರ್ಕಾರ ಕಟ್ಟಳೆಗಳನ್ನು ರೂಪಿಸಿದರೂ ಅದನ್ನು ಜಾರಿಗೆ ತರಲು ಉಂಟಾಗಿರುವ ಕಾನೂನಿನ ಅಡೆತಡೆಗಳನ್ನು ಕುರಿತು ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಭಾಷಿಕ ಅಲ್ಪಸಂಖ್ಯಾತರು ಎಂಬ ಹಣೆಪಟ್ಟಿಯು ಹುಟ್ಟಿಕೊಂಡದ್ದರ ಚಾರಿತ್ರಿಕ ಹಿನ್ನೆಲೆಗಳನ್ನು ಚರ್ಚಿಸಲು ಇಲ್ಲಿ ಅವಕಾಶವಿಲ್ಲ. ಸರ್ವೋಚ್ಚ ನ್ಯಾಯಾಲಯದ ಈಚಿನ ತೀರ್ಪು ಭಾಷಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಅದರಲ್ಲೂ ಆ ಗುಂಪಿನವರೆಂದು ತಿಳಿಯಬಹುದಾದ ಪಾಲಕರ ಹಕ್ಕುಗಳ ಪರವಾಗಿ ನಿಂತಿದೆ. ತಮ್ಮ ಮಕ್ಕಳು ಯಾವ ನುಡಿಯ ಮೂಲಕ ಕಲಿಯಬೇಕೆಂಬುದನ್ನು ಗೊತ್ತುಮಾಡುವ ಹಕ್ಕು, ಅವಕಾಶ ಪಾಲಕರಿಗೆ ಇರಬೇಕೆಂದು ಹೇಳಲಾಗಿದೆಯಷ್ಟೆ. ಈ ಆಯ್ಕೆಯ ವ್ಯಾಪ್ತಿಯನ್ನು ಹೆಚ್ಚಿಸಿದರೆ ನಾಳೆ ಪಾಲಕರು ತಮ್ಮ ಮಕ್ಕಳು ಚರಿತ್ರೆಯನ್ನು ಓದಬೇಕೆ ಬೇಡವೇ ಎಂಬುದನ್ನು ನಿರ್ಧರಿಸುವ ಹಕ್ಕು ತಮಗಿದೆ ಎಂದು ವಾದಿಸಲೂಬಹುದು. ಅದು ಒತ್ತಟ್ಟಿಗಿರಲಿ. ಈ ಆಯ್ಕೆಯ ಸ್ವರೂಪವನ್ನು ಇನ್ನೂ ಒಂದು ರೀತಿಯಲ್ಲಿ ನೋಡಬಹುದು. ಲಂಬಾಣಿ ಮಾತನಾಡುವ ಕುಟುಂಬದಿಂದ ಬಂದ ಮಗುವಿನ ಪಾಲಕರು ತಮ್ಮ ಮಗುವಿಗೆ ಅದರ ತಾಯ್ನುಡಿಯಾದ ಲಂಬಾಣಿ ನುಡಿಯ ಮೂಲಕವೇ ಕಲಿಯುವ ಅವಕಾಶ ಇರಬೇಕೆಂದು ಕೋರುತ್ತಾರೋ ಇಲ್ಲವೇ ಆ ಮಗು ಇಂಗ್ಲಿಷಿನ ಮೂಲಕವೇ ಕಲಿಯುವ ಅವಕಾಶ ಇರಬೇಕೆಂದು ಹೇಳುತ್ತಾರೋ? ಇಂಗ್ಲಿಷ್ ಮೂಲಕ ಕಲಿಸುವ ಮತ್ತು ಅನುದಾನ ಪಡೆಯದ ಶಾಲೆಗಳನ್ನು ನಡೆಸುತ್ತಿರುವವರು ತಮ್ಮ ಆಯ್ಕೆಯೇ ಪಾಲಕರ ಆಯ್ಕೆ ಎಂದು ತೀರ್ಮಾನಿಸಿಬಿಟ್ಟಿದ್ದಾರೆ. ಸರ್ಕಾರ ಏನೂ ಮಾಡಲಾಗದ ಹಂತವನ್ನು ತಲುಪಿದೆ ಎಂದು ಈಗ ನಂಬಬೇಕಾಗಿಬಿಟ್ಟಿದೆ. ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಈ ಇಕ್ಕಟ್ಟಿನಿಂದ ಪಾರಾಗಬಹುದೆಂದು ವಾದಿಸುವವರು ಯಾವ ಬಗೆಯ ತಿದ್ದುಪಡಿಯನ್ನು ತರಬೇಕೆಂದು ಹೇಳುತ್ತಿಲ್ಲ. ಸಂವಿಧಾನದ ಯಾವ ಕಲಮನ್ನು ಬದಲಿಸಿದರೆ, ಅದರಲ್ಲಿ ತಿದ್ದುಪಾಟುಗಳನ್ನು ಮಾಡಿದರೆ ಈಗ ತಾಯ್ನುಡಿಗಳಿಗೆ ಇಲ್ಲದಿರುವ ಹಕ್ಕುಗಳು ದೊರಕುತ್ತವೆ ಎಂದು ಹೇಳುವುದು ಕಷ್ಟ. ಏಕೆಂದರೆ ಮೂಲ ಹಕ್ಕುಗಳಿಗೆ ಮತ್ತು ಭಾಷಿಕ ಅಲ್ಪಸಂಖ್ಯಾತರಿಗೆ ಹಕ್ಕುಗಳನ್ನು ಒದಗಿಸುವ ಕಲಮುಗಳನ್ನು ಬದಲಿಸುವುದು ಮತ್ತು ತಿದ್ದುಪಾಟುಗಳನ್ನು ತರುವುದು ಸುಲಭವೆಂದು ತೋರುತ್ತಿಲ್ಲ. ಇದಕ್ಕೆ ಬೇಕಾದ ರಾಜಕೀಯ ಒತ್ತಡ ಇಡೀ ನಾಡಿನಲ್ಲಿ ಒಟ್ಟಾಗಿ ಮೂಡಲು ಬೇರೆ ಬೇರೆ ಅಡೆತಡೆಗಳಿವೆ.
ದಾರಿ ಯಾವುದಯ್ಯಾ?

ಹಾಗಿದ್ದಲ್ಲಿ ಈಗ ಏನು ಮಾಡಬೇಕು? ಕರ್ನಾಟಕ ಸರ್ಕಾರದ ಶಿಕ್ಷಣ ಕಾಯಿದೆ 1983 (1995)ರಲ್ಲಿ ಸರ್ಕಾರಕ್ಕೆ ವಿಶೇಷ ಅಧಿಕಾರವನ್ನು ಒದಗಿಸಲಾಗಿದೆ. ಈ ಕಾಯಿದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಲು ಹನ್ನೆರಡು ವರುಷÀಗಳು ಬೇಕಾದವು. 1995ರಲ್ಲಿ ಅದಕ್ಕೆ ಸಮ್ಮತಿ ದೊರೆಯುವುದಕ್ಕೆ ಮೊದಲು ಕರ್ನಾಟಕ ಸರ್ಕಾರ ಹೊರಡಿಸಿದ 1994ರ ಆದೇಶವೇ ಈಗ ಹಲವು ನ್ಯಾಯಾಲಯಗಳಲ್ಲಿ ಪ್ರಶ್ನಿತವಾಗಿರುವುದು. ಆ ಆದೇಶವನ್ನು ಹೊರಡಿಸಲು ಸರ್ಕಾರಕ್ಕೆ ಆಗ ಯಾವ ಕಾಯಿದೆಯ ಬೆಂಬಲವೂ ಇರಲಿಲ್ಲ. ಕರ್ನಾಟಕ ಸರ್ಕಾರದ ಶಿಕ್ಷಣ ಕಾಯಿದೆ 1983 (1995)ರ ಕಲಮುಗಳನ್ನು ಈವರೆಗೆ ನ್ಯಾಯಾಲಯದಲ್ಲಿ ಪ್ರಶ್ನಿಸಿಲ್ಲ. ಈವರೆಗಿನ ದಾವೆಗಳ ವಾದಗಳಲ್ಲಿ ಅದು ಉಲ್ಲೇಖವೂ ಆಗಿಲ್ಲ. ಅಂದರೆ ಮಕ್ಕಳು ಯಾವ ನುಡಿಯ ಮೂಲಕ ಕಲಿಯಬೇಕೆಂಬುದನ್ನು ಗೊತ್ತುಮಾಡುವ ಅಧಿಕಾರವನ್ನು ಈ ಕಾಯಿದೆ ಸರ್ಕಾರಕ್ಕೆ ಕೊಡುತ್ತದೆ. ಆದರೆ ಈ ನಿರ್ಧಾರವನ್ನು ಜಾರಿಗೊಳಿಸುವಂತೆ ಸರ್ಕಾರದ ಅನುದಾನ ಪಡೆಯದಿರುವ ಶಾಲೆಗಳ ಮೇಲೆ ಒತ್ತಾಯ ಹೇರುವಂತಿಲ್ಲ ಎಂದು ನ್ಯಾಯಾಲಯಗಳು ಹೇಳಬಹುದು. ಆಗ ಸರ್ಕಾರಕ್ಕೆ ಉಳಿದಿರುವ ದಾರಿಯೆಂದರೆ ನಾಡಿನಲ್ಲಿ ಇರುವ ಎಲ್ಲ ಶಾಲೆಗಳೂ ಸರ್ಕಾರದ ಅನುದಾನವನ್ನು ಪಡೆಯಲೇಬೇಕೆಂದು ಹೇಳುವುದು. ಇದು ಯಾರ ಹಕ್ಕನ್ನೂ ಮೊಟಕು ಮಾಡಿದಂತೆ ಆಗುವುದಿಲ್ಲ. ಈಗಿನ ಲೆಕ್ಕದಂತೆ ಇದರಿಂದ ಸರ್ಕಾರಕ್ಕೆ ಆಗುವ ಹಣಕಾಸಿನ ಹೊರೆ ಹೆಚ್ಚೇನೂ ಅಲ್ಲ. ಹಾಗೆ ನೋಡಿದರೆ 1986ರ ಬಳಿಕ 1994 ರವರೆಗೆ ಕರ್ನಾಟಕ ಸರ್ಕಾರವು ಅನುದಾನ ಪಡೆಯದೆ ಶಾಲೆಗಳನ್ನು ನಡೆಸಬಹುದೆಂದು ತೀರ್ಮಾನಿಸಿ ಅನುಮತಿಯನ್ನು ನೀಡಿದ್ದರಿಂದಲೇ ಈ ಸಮಸ್ಯೆಗಳು ಉಂಟಾಗಿರುವುದು. 1983ರ ಕಾಯಿದೆಯಲ್ಲಿ ಅನುದಾನ ಪಡೆಯದ ಶಾಲೆಗಳ ಸೂಚನೆಯೂ ಇಲ್ಲ. ಈ ಕಾಯಿದೆಗೆ ಸರ್ಕಾರ ಒಪ್ಪಿಗೆ ನೀಡಿದ ಬಳಿಕ ಈ ಬಗೆಯ ಶಾಲೆಗಳು ತಲೆ ಎತ್ತಿವೆ. ಈಗ ಇವನ್ನು ಅನುದಾನ ಪಡೆಯುವ ಶಾಲೆಗಳನ್ನಾಗಿ ಮಾಡಬೇಕಾಗಿದೆ.

ಇದಲ್ಲದೆ ಇನ್ನೂ ಒಂದು ದಾರಿ ಇದೆಯೆಂದು ಬಲ್ಲವರು ಹೇಳುತ್ತಿದ್ದಾರೆ. ಅದೆಂದರೆ ಯಾವ ಶಾಲೆಯು ಕೂಡ ತಾನು ಇಂತಹುದೇ ನುಡಿಯ ಮೂಲಕ ಕಲಿಸುವುದಾಗಿ ಹೇಳಕೂಡದೆಂದು ಷರತ್ತು ಹಾಕುವುದು. ಒಂದಕ್ಕಿಂತ ಹೆಚ್ಚು ನುಡಿಗಳನ್ನು ಬಳಸಿ ಕಲಿಸುವ ಬಗೆಯನ್ನು ಜಾರಿಗೆ ಕೊಡುವುದು. ಈಗ ಈ ವಿಧಾನವÀನ್ನು ಜಾಗತಿಕವಾಗಿ ಬಳಸಲಾಗುತ್ತಿದೆ. ಕನ್ನಡ ಇಲ್ಲವೇ ಇಂಗ್ಲಿಷ್ ಎಂಬ ಒಡೆದ ಹಾದಿಯನ್ನು ಬಿಟ್ಟು ಕನ್ನಡದ ಜೊತೆಗೆ ಇಂಗ್ಲಿಷ್ ಎಂಬ ಕೂಡುಹಾದಿಯನ್ನು ಅನುಸರಿಸುವುದು ಸರಿ. ಹಾಗೆ ನೋಡಿದರೆ ಈಗ ಇಂಗ್ಲಿಷ್ ನುಡಿಯ ಮೂಲಕ ಕಲಿಸುತ್ತಿರುವುದಾಗಿ ಹೇಳಿಕೊಳ್ಳುತ್ತಿರುವ ನೂರಾರು ಶಾಲೆಗಳಲ್ಲಿ ಪಾಠ ಹೇಳಿಕೊಡುವಾಗ ಇಂಗ್ಲಿಷ್ ಜೊತೆಗೆ ಕನ್ನಡ ಇಲ್ಲವೇ ತಾಯ್ನುಡಿಗಳನ್ನು ಬಳಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಮಕ್ಕಳು ಕಲಿತು ಬರೆಯುವ ಉತ್ತರಗಳು ಮಾತ್ರ ಇಂಗ್ಲಿಷಿನಲ್ಲಿ ಇರುತ್ತವೆ. ಆದರೆ ಕಲಿಯುವಾಗ ಎರಡೂ ನುಡಿಗಳ ನೆರವು ದೊರಕುತ್ತಿರುತ್ತದೆ. ಎರಡು ನುಡಿಗಳನ್ನು ಬಳಸಿಯೇ ಕಲಿಸುವ ದಾರಿಗೆ ಮನ್ನಣೆಯನ್ನು ನೀಡುವುದು ಈಗ ಇರುವ ಆಯ್ಕೆಗಳಲ್ಲಿ ಒಂದೆಂದು ತೋರುತ್ತದೆ.

(ಲೇಖಕರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರು)

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top