ಶ್ರಮಿಕರ ಬದುಕು ದುರ್ಬರ

– ಅಸಂಘಟಿತ ವಲಯದ 10 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಡೋಲಾಯಮಾನ
– ದುಡಿಮೆಯ ಹಾದಿ ಕಾಯುತ್ತಿರುವ ವೃತ್ತಿಪರರು | ವಿಶೇಷ ಪ್ಯಾಕೇಜ್ ನಿರೀಕ್ಷೆ

ವಿಕ ಸುದ್ದಿಲೋಕ ಬೆಂಗಳೂರು
ಒಂದೆಡೆ ಕೊರೊನಾದಿಂದ ಜೀವಭಯ. ಇನ್ನೊಂದೆಡೆ ಅತಂತ್ರವಾಗಿರುವ ಜೀವನೋಪಾಯ. ಇದು ಸಾಂಪ್ರದಾಯಿಕ ವೃತ್ತಿಪರರೂ ಸೇರಿದಂತೆ 10 ಲಕ್ಷಕ್ಕೂ ಹೆಚ್ಚು ಕುಟುಂಬಗಳ ದಾರುಣ ಕತೆ. ಅನಿವಾರ್ಯವಾಗಿರುವ 35 ದಿನಗಳ ಲಾಕ್‌ಡೌನ್‌ ಅವಧಿಯು ನಿತ್ಯದ ದುಡಿಮೆಯಲ್ಲಿ ಬದುಕು ಸಾಗಿಸುತ್ತಿದ್ದವರನ್ನು ಹೈರಾಣಾಗಿಸಿದೆ.
ಆಟೊ-ಟ್ಯಾಕ್ಸಿ ಚಾಲಕರು, ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಮಾತ್ರವಲ್ಲದೆ ಸವಿತಾ ಸಮಾಜದವರು, ನೇಕಾರರು, ಬಡಗಿಗಳು ಸೇರಿದಂತೆ ನಾನಾ ಸಾಂಪ್ರದಾಯಿಕ ವೃತ್ತಿಪರರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸೋಂಕು ಹರಡುವುದು ನಿಂತರೂ ತಮ್ಮ ಬದುಕು ಮತ್ತೆ ಸರಿದಾರಿಗೆ ಬರುವುದು ಯಾವಾಗಲೋ ಎಂಬ ಉತ್ತರವಿಲ್ಲದ ಪ್ರಶ್ನೆ ಲಕ್ಷಾಂತರ ಮಂದಿಯನ್ನು ಕಾಡುತ್ತಿದೆ.
ನಂಬಿದ್ದ ಮಗ್ಗಗಳು ಮುಚ್ಚಿ ಬೀದಿಗೆ ಬಿದ್ದಿದ್ದೇವೆ ಎಂದು ನೇಕಾರರು ಅಳಲು ತೋಡಿಕೊಳ್ಳುತ್ತಿದ್ದಾರೆ. ಕುಟುಂಬ ನಿರ್ವಹಣೆಗೆ ಹಣವಿಲ್ಲ, ಇಂತಹ ಸ್ಥಿತಿಯಲ್ಲಿ ಬ್ಯಾಂಕ್ ಸಾಲದ ಕಂತು, ವಿಮಾ ಕಂತು ತುಂಬುವುದು ಹೇಗೆ ಎಂದು ಆಟೋರಿಕ್ಷಾ-ಟ್ಯಾಕ್ಸಿ ಚಾಲಕರ ಪ್ರತಿನಿಧಿಗಳು ಗೋಳಿಡುತ್ತಿದ್ದಾರೆ. ನಿತ್ಯದ ಹಸಿವು ನೀಗಿಸುತ್ತಿದ್ದ ದುಡಿಮೆ ಕೈಕೊಟ್ಟಿದೆ ಎಂದು ಬೀದಿ ಬದಿ ವ್ಯಾಪಾರಿಗಳು ಹಾಗೂ ಸವಿತಾ ಸಮಾಜ ಮತ್ತಿತರ ಸಾಂಪ್ರದಾಯಿಕ ವೃತ್ತಿ ಅವಲಂಬಿತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ನೇಕಾರರ ಹಾಹಾಕಾರ
ಅತಿವೃಷ್ಟಿ ಮತ್ತು ಪ್ರವಾಹದಿಂದ ಕಂಗೆಟ್ಟಿದ್ದ ನೇಕಾರ ಸಮುದಾಯ ಅಬ್ಬಾ ಅಂತೂ ಬಚಾವ್ ಆದೆವು ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ ಕೊರೊನಾ ಲಾಕ್‌ಡೌನ್ ಅಪ್ಪಳಿಸಿದೆ. ಹುಬ್ಬಳ್ಳಿ, ಬೆಳಗಾವಿ, ದೊಡ್ಡಬಳ್ಳಾಪುರ ಸೇರಿದಂತೆ ಲಕ್ಷಾಂತರ ನೇಕಾರರು ನಿತ್ಯದ ಜೀವನ ನಿರ್ವಹಣೆಗೂ ಪರದಾಡುತ್ತಿದ್ದಾರೆ. ಮಾಲೀಕರು, ಕೂಲಿ ನೇಯುವವರು, ವಾರದ ಬಟವಾಡೆ ಕೂಲಿ ಕಾರ್ಮಿಕರೆನ್ನದೆ ಎಲ್ಲರೂ ಈಗ ಯಾತನೆ ಅನುಭವಿಸುತ್ತಿದ್ದಾರೆ. ಶುಭ ಸಮಾರಂಭಗಳಿಲ್ಲದೆ ಸೀರೆ ಮಾರಾಟ ನೆಲಕಚ್ಚಿದೆ. ಪವರ್ ಲೂಮ್ ಕಾರ್ಮಿಕರು, ಕೈ ಮಗ್ಗ ನೇಕಾರರಂತೂ ಅಕ್ಷರಶಃ ನಲುಗಿ ಹೋಗಿದ್ದಾರೆ.

ಸಲೂನ್ ನಂಬಿದವರು ಸುಸ್ತು
ಲಾಕ್‌ಡೌನ್ ಹಿನ್ನೆಲೆಯಲ್ಲಿ ಸವಿತಾ ಸಮಾಜದವರು ಮತ್ತು ಮಂಗಳವಾದ್ಯ ನುಡಿಸುವವರೂ ದುಡಿಮೆ ಇಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯಾದ್ಯಂತ ಸವಿತಾ ಸಮುದಾಯವು ಸುಮಾರು 15 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಬೆಂಗಳೂರಿನಲ್ಲಿ ಸುಮಾರು ಒಂದು ಲಕ್ಷ ಸಲೂನ್‌ಗಳಿವೆ. ರಾಜ್ಯದಲ್ಲಿ ಸುಮಾರು 2.50 ಲಕ್ಷ ಸಲೂನ್‌ಗಳಿವೆ. ಇತರ ವಲಯಗಳಿಗೆ ವಿನಾಯಿತಿ ಬೇಗ ಸಿಕ್ಕರೂ ಸಲೂನ್ ತೆರೆಯಲು ಅನುಮತಿ ವಿಳಂಬವಾಗಲಿದೆ. ಈ ವೃತ್ತಿಯನ್ನೇ ಅವಲಂಬಿಸಿರುವ ಲಕ್ಷಾಂತರ ಮಂದಿ ಆತಂಕಿತರಾಗಿದ್ದಾರೆ.

ಆಟೊ ಚಾಲಕರಿಗೆ ದಿಗಿಲು
ಬೆಂಗಳೂರೊಂದರಲ್ಲೇ 1 ಲಕ್ಷ 40 ಸಾವಿರ ಆಟೊ ಚಾಲಕರಿದ್ದಾರೆ. ಇವರಲ್ಲಿ ಹೆಚ್ಚಿನವರು ಸಾಲದ ಮೇಲೆ ಬದುಕು ಕಟ್ಟಿಕೊಂಡವರು. ಆಟೊ ಸಾಲದ ಕಂತು, ಮಕ್ಕಳ ಶಾಲಾ ಶುಲ್ಕ, ಸಂಸಾರ ನಿರ್ವಹಣೆಗೆ ಸಾಲಗಳ ಸರಣಿಯಲ್ಲೇ ಇರುವವರು. ಲಾಕ್‌ಡೌನ್ ವೇಳೆ ಸಾಲ ಕಟ್ಟಿಸಿಕೊಳ್ಳಬೇಡಿ ಎಂದು ಸರಕಾರ ಬಾಯಿ ಮಾತಲ್ಲಿ ಹೇಳಿತು. ಆದರೆ ಅಕ್ಕಿ-ಬೇಳೆಗೆಂದು ಉಳಿತಾಯ ಖಾತೆಯಲ್ಲಿದ್ದ ಚಿಲ್ಲರೆ ಹಣವನ್ನೂ ಬ್ಯಾಂಕ್‌ಗಳು ಸಾಲಕ್ಕೆ ಜಮೆ ಮಾಡಿಕೊಂಡಿವೆ ಎಂದು ದುಃಖಿಸುತ್ತಿದ್ದಾರೆ ಆಟೊ ಚಾಲಕರು. ಟ್ಯಾಕ್ಸಿ ಚಾಲಕರ ಕತೆಯೂ ಇದೇ ಆಗಿದೆ.

ಲಾಕ್‌ಡೌನ್‌ನಿಂದ ಶ್ರಮಿಕ ವರ್ಗದ ಬದುಕು ಚಿಂತಾಜಕನ ಸ್ಥಿತಿ ತಲುಪಿದೆ. ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ ಈ ಸಮುದಾಯದ ಕುಟುಂಬಗಳು ಒಂದು ಹೊತ್ತಿನ ಊಟಕ್ಕೂ ಪರದಾಡುವ ಸನ್ನಿವೇಶ ನಿರ್ಮಾಣವಾಗಿದೆ. ಸಿಎಂ ಕೂಡಲೇ ಎಚ್ಚೆತ್ತುಕೊಂಡು ವಿಶೇಷ ಯೋಜನೆ ಪ್ರಕಟಿಸಬೇಕು.
– ಸಿದ್ದರಾಮಯ್ಯ ಮಾಜಿ ಸಿಎಂ

ಅಸಂಘಟಿತ ವೃತ್ತಿ ಅವಲಂಬಿತ ಸಮಾಜಗಳು ಕೊರೊನಾದಿಂದ ಸಾಯುವ ಮೊದಲೇ ಆಹಾರವಿಲ್ಲದೆ ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಾಜಗಳಿಗೆ ಆಹಾರ ಕಿಟ್ ಕೊಡುವ ಬದಲು ವೈಯಕ್ತಿಕ ರಕ್ಷಣಾ ಸಾಮಗ್ರಿ ಕಲ್ಪಿಸಿ ಅವರವರ ವೃತ್ತಿ ಬದುಕು ಆರಂಭಿಸಲು ಅನುಮತಿ ಕೊಡಬೇಕು.
-ಎಂ.ಸಿ. ವೇಣುಗೋಪಾಲ್, ಮೇಲ್ಮನೆ ಸದಸ್ಯ, ಸವಿತಾ ಸಮಾಜದ ನಾಯಕ

ಅಸಂಘಟಿತ ಶ್ರಮಿಕರ ಬೇಡಿಕೆಗಳೇನು?
– ಆಟೊ, ಟ್ಯಾಕ್ಸಿ ವಾಹನ ಸಾಲದ ಕಂತು ಪಾವತಿಗೆ ತಾತ್ಕಾಲಿಕ ವಿನಾಯಿತಿ
– ವಾಹನಗಳ ವಿಮಾ ಕಂತು, ರಸ್ತೆ ತೆರಿಗೆ ಪಾವತಿಯಿಂದ ಕೆಲ ತಿಂಗಳವರೆಗೆ ವಿನಾಯಿತಿ
– ಸೆಲೂನ್‌ಗಳನ್ನು ತೆರೆಯಲು ಅವಕಾಶ ಮಾಡಿಕೊಡಬೇಕು
– ಶ್ರಮಿಕ ವರ್ಗದವರ ಮಕ್ಕಳ ಶಾಲಾ ಶುಲ್ಕ ಪಾವತಿಗೆ ವಿನಾಯಿತಿ
– ಬೀದಿ ಬದಿಯ ವ್ಯಾಪಾರಿಗಳು ಮತ್ತೆ ವ್ಯಾಪಾರ ಆರಂಭಿಸಲು ಬಂಡವಾಳ
– ಪಡಿತರ ಚೀಟಿ ಇಲ್ಲದ ಕಾರ್ಮಿಕರಿಗೂ ಆಹಾರ ಧಾನ್ಯ ವಿತರಣೆ
– ಲಾಕ್‌ಡೌನ್ ವೇಳೆ ವಶಪಡಿಸಿಕೊಂಡಿರುವ ಕಮರ್ಶಿಯಲ್ ವಾಹನ ಬಿಡುಗಡೆ
– ನೇಕಾರರು, ಬಡಗಿಗಳು, ಮಡಿವಾಳರು, ಕುಂಬಾರರು, ಗಾಣಿಗರು ಮತ್ತಿತರ ಸಾಂಪ್ರದಾಯಿಕ ವೃತ್ತಿಪರರಿಗೆ ವಿಶೇಷ ಪ್ಯಾಕೇಜ್

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top