ವಿಧಾನಮಂಡಲ ಸುಸ್ಥಿತಿಗೆ ಧರಣಿ ಮಂಡಲವೇ ಮದ್ದು

ಸದಾ ಗದ್ದಲ, ಗೋಜಲು, ಹೊಡೆದಾಟ ಬಡಿದಾಟ, ಅದಿಲ್ಲ ಅಂದರೆ ಸದನದಲ್ಲಿ ಬ್ಲೂ ಫಿಲ್ಮ್ ನೋಡುವ ಶಾಸಕರಿಂದಲೇ ಅಪಖ್ಯಾತಿಗೆ ಸುದ್ದಿಯಾಗುತ್ತಿದ್ದ ಕರ್ನಾಟಕ ವಿಧಾನಮಂಡಲದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂಸದೀಯ ನಡವಳಿಕೆ ಸುಧಾರಣೆ ಮಾಡುವುದು ಹೇಗೆ ಎಂಬುದರ ಕುರಿತು ಆಲೋಚನೆ ಆರಂಭ ಆಗಿದೆ. ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆ ಮಟ್ಟಿಗೆ ಅಭಿನಂದನಾರ್ಹರು.
ಒಂದು ಮಾತಿದೆ. ತಪ್ಪು ಮಾಡುವುದು ತೀರಾ ಪ್ರಮಾದವೇನಲ್ಲ. ಆದರೆ,ಅದನ್ನು ತಿದ್ದಿಕೊಳ್ಳಲು ಆಲೋಚನೆ ಮಾಡದೇ ಇರುವುದು ಮಾತ್ರ ದೊಡ್ಡ ಪ್ರಮಾದ ಎಂದು. ಆ ದೃಷ್ಟಿಯಿಂದಲೂ ಈಗ ಆರಂಭ ಆಗಿರುವ ಚಿಂತನ ಮಂಥನ ಉತ್ತಮ ಬೆಳವಣಿಗೆ ಎನ್ನಲು ಅಡ್ಡಿಯಿಲ್ಲ.
ವಿಧಾನಮಂಡಲ ಕಲಾಪಗಳ ಗುಣಮಟ್ಟ ಸುಧಾರಣೆ ಕುರಿತು ಚರ್ಚೆ ಮಾಡಲು ಮೂರು ದಿನದ ಹಿಂದೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲಲ್ಲಿ ನಡೆದ ಚಿಂತಕರ ಸಭೆಯಲ್ಲಿ ಆರಂಭಿಕವಾಗಿ, ವ್ಯಕ್ತಿತ್ವ ವಿಕಸನ ತಜ್ಞ ಗುರುರಾಜ ಕರ್ಜಗಿ ಮಾತನಾಡಿದರು. ಮಾತಿಗೂ ಕೃತಿಗೂ, ಹೇಳುವುದಕ್ಕೂ ಮಾಡುವುದಕ್ಕೂ ಉಂಟಾಗುತ್ತಿರುವ ಅಂತರವೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಎಲ್ಲ ಸಮಸ್ಯೆಗಳ ಮೂಲ ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ಮನಮುಟ್ಟುವಂತೆ ವಿವರಿಸಿದರು. ಹಾಗೆ ನೋಡಿದರೆ ಇದು ಹೊಸ ವಿಚಾರವೇನೂ ಅಲ್ಲ. ಧರಣಿ ಮಂಡಲ ಮಧ್ಯದೊಳಗೆ ಎಂಬ ಗೀತೆಯಲ್ಲಿ ಸತ್ಯವೇ ನಮ್ಮ ತಾಯಿ,ತಂದೆ, ಸತ್ಯವೇ ನಮ್ಮ ಬಂಧು ಬಳಗ ಎಂದು ಮಾತು ಕೊಡುವ ಪುಣ್ಯಕೋಟಿ ಗೋವು ಹಾಗೂ ಸತ್ಯಕ್ಕೆ ಮನಕರಗಿದ ಚಂಡವ್ಯಾಘ್ರನ ಕಥೆ ಕೇಳಿ ಬೆಳೆದ ಕನ್ನಡಿಗರು ನಾವು. ಆದರೆ ಈ ತತ್ವಜ್ಞಾನದ ಜಾರಿಯಲ್ಲಿ ಕೆಲವೆಡೆ ಏರುಪೇರಾಗಿದೆ. ನಿಜ. ಇಂದಿನ ರಾಜಕೀಯದಲ್ಲಿ ತಕ್ಷಣದ ಲಾಭ ನಷ್ಟದ ಚಿಂತೆ ಇದೆಯೇ ಹೊರತು ಭವಿಷ್ಯದ ಚಿಂತನೆ ಇಲ್ಲ, ನಮ್ಮ ನಡುವೆ ನಾಯಕರಿದ್ದಾರೆ ಆದರೆ ಮುತ್ಸದ್ದಿಗಳು ಇಲ್ಲವೇ ಇಲ್ಲ. ಇದೇ ಇಂದಿನ ಎಲ್ಲ ಸಮಸ್ಯೆಗಳ ಮೂಲ. ಹಾಗಾದರೆ ತಪ್ಪಿದ್ದೆಲ್ಲಿ? ಸರಿಮಾಡಿಕೊಳ್ಳುವುದು ಹೇಗೆ? ಇದೇ ಇಂದು ಆಗಬೇಕಿರುವ ಆಲೋಚನೆ.
ರಾಜಕೀಯಕ್ಕೆ ಬರುವವರ ಆಲೋಚನೆ ಹೇಗಿರಬೇಕು?
ಈ ಪ್ರಶ್ನೆಗೆ ಮುತ್ಸದ್ದಿ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ ಅವರು ಯುವ ರಾಜಕೀಯ ನೇತಾರರ ಕುರಿತು ಅಥವಾ ರಾಜಕೀಯಕ್ಕೆ ಪ್ರವೇಶ ಮಾಡಬೇಕೆನ್ನುವವರ ಕುರಿತು ಎಂದೋ ಆಡಿದ ಮಾತು ಇಂದಿಗೂ ಪ್ರಸ್ತುತ ಎನಿಸುತ್ತದೆ. ವಾಜಪೇಯಿ ಹೀಗೆ ಹೇಳಿದ್ದರು. ರಾಜಕೀಯ ಎಂದರೆ ಬಚ್ಚಲುಮನೆ ಇದ್ದಹಾಗೆ! ತೇವದಿಂದ ಕೂಡಿರುವ ಬಚ್ಚಲು ಮನೆಗೆ ಕಾಲಿಡುವಾಗ ಜಾರಿ ಬೀಳಬಾರದೆಂದು ಯಾವ ಎಚ್ಚರಿಕೆ ವಹಿಸುತ್ತೇವೆಯೋ ಅಂಥದ್ದೇ ಎಚ್ಚರಿಕೆಯನ್ನು ರಾಜಕೀಯಕ್ಕೆ ಕಾಲಿಡುವಾಗಲೂ ಸದಾ ಹೊಂದಿರಬೇಕು ಎಂದು ಹೇಳಿದ್ದರು. ಸ್ವಲ್ಪ ಎಚ್ಚರ ತಪ್ಪಿದರೂ ಬಿದ್ದು ಮಗ್ಗಲ ಮೂಳೆ ಮುರಿದುಕೊಳ್ಳುವುದು ಗ್ಯಾರಂಟಿ ಎಂಬುದು ಅವರ ಮಾತಿನ ತಾತ್ಪರ್ಯ. ಅಧಿಕಾರ ಮತ್ತು ಹಣ ಇರುವಲ್ಲಿ ತಪ್ಪು ಮಾಡುವ ಸಾಧ್ಯತೆಗಳೂ ಹೆಚ್ಚಿರುವುದರಿಂದ, ಬಚ್ಚಲು ಮನೆಗೆ ಹೋಗುವಾಗ ವಹಿಸುವ ಎಚ್ಚರಿಕೆ ವಹಿಸಬೇಕು ಎಂಬರ್ಥದಲ್ಲಿ ನಾವಿದನ್ನು ತೆಗೆದುಕೊಂಡರೆ ಒಳ್ಳೆಯದು.
ರಾಜಕೀಯ ನಾಯಕರ ಹಾಗೆಯೇ ಮಹತ್ವದ ಹೊಣೆಗಾರಿಕೆ ಸ್ಥಾನದಲ್ಲಿರುವವರು ಉನ್ನತ ಸರಕಾರಿ ಅಧಿಕಾರಿಗಳು. ಒಂದೋ ರಾಜಕೀಯ ಮಾಸ್ಟರ್ಗಳು ಅರ್ಥಾತ್ ಮಂತ್ರಿಗಳು ಅಧಿಕಾರಿಗಳನ್ನು ಹಾದಿ ತಪ್ಪಿಸಿ ತಪ್ಪೆಸಗುವಂತೆ ಮಾಡುತ್ತಾರೆ. ಅಥವಾ ಭ್ರಷ್ಟ ಅಧಿಕಾರಿಗಳು, ರಾಜಕೀಯ ನಾಯಕರು ತಮ್ಮ ಹಾದಿಗೆ ಬರುವ ಹಾಗೆ ಮಾಡುತ್ತಾರೆ. ಈ ಇಬ್ಬರಲ್ಲಿ ಎಚ್ಚರಿಕೆ ಅಗತ್ಯ. ಅಧಿಕಾರಿಯೊಬ್ಬ ಹೇಗಿದ್ದರೆ ಚೆನ್ನ ಎಂಬುದಕ್ಕೆ ಮತ್ತೊಂದು ಸಾರ್ವಕಾಲಿಕ ಉದಾಹರಣೆ ತೊಂಭತ್ತರ ದಶಕದಲ್ಲಿ ಬೃಹನ್ ಮುಂಬಯಿ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಜಿ.ಎಆರ್.ಖೈರ್ನಾರ್ ಅವರು. ಖೈರ್ನಾರ್ ಘಟಾನುಘಟಿ ರಾಜಕೀಯ ನಾಯಕರಿಂದ ಹಿಡಿದು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಒಡೆತನಕ್ಕೆ ಸೇರಿದ ಅಕ್ರಮ ಕಟ್ಟಡಗಳನ್ನು ಮುಲಾಜಿಲ್ಲದೆ ನೆಲಸಮಗೊಳಿಸಿದರು. ಖೈರ್ನಾರ್ ಅವರ ಖಡಕ್ ಧೋರಣೆಯೇ ಸೇವೆಯುದ್ದಕ್ಕೂ ಅವರನ್ನು ಫುಟ್ಬಾಲಂತೆ ಟ್ರಾನ್ಸ್ ಫರ್ ಶಿಕ್ಷೆಗೆ ಒಳಗಾಗುವಂತೆ ಮಾಡಿತು. ಅದಕ್ಕಿಂತಲೂ ಇಂಟೆರೆಸ್ಟಿಂಗ್ ಪಾರ್ಟ್ ಅವರ ವೈಯಕ್ತಿಕ ಜೀವನದ್ದು. ಖೈರ್ನಾರ್ ಉನ್ನತ ಐಎಎಸ್ ಅಧಿಕಾರಿ ಆದರೂ ಅವರ ಜೀವನ ಅತ್ಯಂತ ಸರಳವಾಗಿತ್ತು. ಖೈರ್ನಾರ್ ಅವರು ಪಾಲಿಕೆ ಆಯುಕ್ತರಾಗಿದ್ದಾಗಲೂ ಅವರ ಸಹೋದರಿ ಬೇರೆ ಕಡೆ ಮನೆವಾರ್ತೆ ಕೆಲಸ ಮಾಡಿಯೇ ಜೀವನ ಸಾಗಿಸುತ್ತಿದ್ದರು. ಕರ್ನಾಟಕದಲ್ಲೂ ಇಂತಹ ಕೆಲವು ಅಧಿಕಾರಿಗಳಿದ್ದಾರೆ. ಹಿರಿಯ ಐಎಎಸ್ ಅಧಿಕಾರಿ ಹರ್ಷ ಗುಪ್ತ, ತಮ್ಮ 20 ವರ್ಷದ ಸೇವಾವಧಿಯಲ್ಲಿ 28 ಬಾರಿ ವರ್ಗಾವಣೆ ಆಗಿದ್ದಾರೆ. ಅಂದರೆ, ಯಾವ ರಾಜಕೀಯ ಪಕ್ಷದ ಭೇದವಿಲ್ಲದೆ ಎಲ್ಲ ಸರಕಾರಗಳು ನಿಷ್ಠುರ ಅಧಿಕಾರಿಗಳನ್ನು ಅಷ್ಟೇ ನಿರ್ದಾಕ್ಷಿಣ್ಯವಾಗಿ ಎತ್ತಂಗಡಿ ಮಾಡುತ್ತ ಹೋಗುತ್ತವೆ. ವಾಜಪೇಯಿ ಅವರು ನುಡಿದ ಎಚ್ಚರಿಕೆ ಮಾತು, ಇಂತಹವರ ಜೀವನ, ಬಹುಶಃ ಹಳಿ ತಪ್ಪಿದ ನಮ್ಮ ಸಾರ್ವಜನಿಕ ವ್ಯವಸ್ಥೆಯನ್ನು ಮರಳಿ ಹಳಿಗೆ ತರಲು ಉತ್ತಮ ಉದಾಹರಣೆ ಆಗಬಹುದು ಎಂದು ಭಾವಿಸೋಣ.
ಭ್ರಷ್ಟಾಚಾರ ಎಂದರೆ ಏನು?
ರಾಜ್ಯವನ್ನು,ದೇಶವನ್ನು ಭ್ರಷ್ಟಾಚಾರ ಮುಕ್ತವಾಗಿ ಮಾಡುತ್ತೇವೆ, ಮಾಡಬೇಕು ಎಂಬ ಮಾತನ್ನು ನಾವು ನಿತ್ಯವೂ ಕೇಳುತ್ತೇವೆ. ಬೇರೆಯವರು ಮಾಡುವ ಭ್ರಷ್ಟಾಚಾರವನ್ನು ಯಾರೊಬ್ಬರೂ ಸಹಿಸುವುದಿಲ್ಲ. ಅದೇ ತಮ್ಮ ಬುಡಕ್ಕೆ ಬಂದಾಗ ಅವರವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಭ್ರಷ್ಟಾಚಾರ ಮಾಡಲು ಅವಕಾಶ ಹಾಗೂ ಅಂತಹ ಸ್ಥಾನಮಾನ ಸಿಕ್ಕಿಲ್ಲ, ಹಾಗಾಗಿ ಪ್ರಾಮಾಣಿಕ ಎನ್ನುವಂಥವರೂ ಸಾಕಷ್ಟಿದ್ದಾರೆ. ಮುಖ್ಯವಾಗಿ ಈ ದೇಶದಲ್ಲಿ ದೊಡ್ಡ ರಾಜಕೀಯ ಸ್ಥಿತ್ಯಂತರಕ್ಕೆ ಕಾರಣ ಆಗಿದ್ದು ಇದೇ ಭ್ರಷ್ಟಾಚಾರದ ವಿರುದ್ಧದ ಧ್ವನಿ ಎಂದರೆ ತಪ್ಪಾಗಲಾರದು. 1975ರಲ್ಲಿ ದೇಶ ಅಂದಿನ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಸಿಡಿದೇಳಲು ತುರ್ತುಪರಿಸ್ಥಿತಿ ಕಾರಣವಾದರೂ, ಅದಕ್ಕೆ ದೊಡ್ಡ ಮಟ್ಟದಲ್ಲಿ ಕಾವು ನೀಡಿದ್ದು ಭ್ರಷ್ಟಾಚಾರ. ಹತ್ತು ವರ್ಷಗಳ ಮನಮೋಹನ ಸಿಂಗ್ ಆಡಳಿತದಲ್ಲಿ ದೊಡ್ಡ ದೊಡ್ಡ ಹಗರಣಗಳು ನಡೆದವು, ಭ್ರಷ್ಟಾಚಾರ ಮಿತಿಮೀರಿದೆ ಎಂಬ ಆರೋಪ ಮತ್ತು ಭಾವನೆಯೇ ಮೋದಿ ಆಡಳಿತ ಸ್ಥಾಪನೆಗೆ ಮುಖ್ಯ ಕಾರಣ ಆಗಿದ್ದು. ಆದರೆ ವಾಸ್ತವ ಏನು ಗೊತ್ತಾ? ಭ್ರಷ್ಟಾಚಾರ ಎಂಬುದು ಕೇವಲ ಲಂಚ, ರುಷುವತ್ತಿಗೆ ಮಾತ್ರ ಸೀಮಿತವಾದ್ದಲ್ಲ. ಭ್ರಷ್ಟ ಅಂದರೆ ಬಿದ್ದಿರುವುದು ಎಂದರ್ಥ. ನೈತಿಕತೆಯ ಗೆರೆಯಿಂದ ಕೆಳಗೆ ಬಿದ್ದಿರುವುದು ಎಂದರ್ಥ. ಹಾಗೆ ನೋಡಿದರೆ ನುಡಿದಂತೆ ನಡೆಯದೇ ಇರುವುದೂ ಭ್ರಷ್ಟತನವೆ. ಮಾಡಿದ ತಪ್ಪುಗಳನ್ನು ಒಪ್ಪದೆ, ತಿದ್ದಿಕೊಳ್ಳುವ ದೊಡ್ಡಗುಣ ತೋರಿಸದೇ ಇರುವುದೂ ಭ್ರಷ್ಟತನವೇ ಅಲ್ಲವೇ?.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾಯಕರ ನಡವಳಿಕೆಗಳು, ಆಲೋಚನೆಗಳು ಹೇಗಿರಬೇಕು ಎಂಬುದಕ್ಕೂ ಕೆಲವೊಂದು ಐತಿಹಾಸಿಕ ನಿದರ್ಶನಗಳಿವೆ.
ಸ್ವಾತಂತ್ರ್ಯಾ ನಂತರ ಮೊದಲ ಬಾರಿಗೆ ಪಂಡಿತ್ ನೆಹರು ಭಾರತದ ಪ್ರಧಾನಿಯಾಗಿ ಸರಕಾರ ರಚನೆ ಮಾಡಿದಾಗ ಸಂಪುಟದಲ್ಲಿ ಷೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಶನ್ ಸದಸ್ಯ ಡಾ. ಬಿ. ಆರ್. ಅಂಬೇಡ್ಕರ್, ಹಿಂದು ಮಹಾಸಭಾದ ಶ್ಯಾಮಪ್ರಸಾದ್ ಮುಖರ್ಜಿ ಮುಂತಾದವರು ಮಂತ್ರಿಗಳಾಗಿದ್ದರು. ಮುಂದೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಬಂದಾಗ ಸರಕಾರದಿಂದ ಹೊರ ಬಂದರು. ಆದರೆ ವೈಯಕ್ತಿಕ ದ್ವೇಷಕ್ಕೆ ಎಂದೂ ಅಸ್ಪದ ಕೊಟ್ಟಿರಲಿಲ್ಲ. ಈಗ ಪಕ್ಷಗಳ ವಿಷಯದಲ್ಲಿ ಅಸ್ಪ್ರಶ್ಯತೆ, ದ್ವೇಷ ಕಾರುವ ಮುನ್ನ ಈ ಇತಿಹಾಸವನ್ನೊಮ್ಮೆ ತಿರುಗಿ ನೋಡುವುದು ಒಳ್ಳೆಯದು.
ನೆಹರು-ವಾಜಪೇಯಿ ಸಂಬಂಧ
ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ನಾಯಕರ ಸಂಬಂಧ ಹೇಗಿರಬೇಕು ಎಂಬುದಕ್ಕೆ ನೆಹರು, ವಾಜಪೇಯಿ ನಡುವಿನ ಸಂಬಂಧ ಹಾಗೂ ನಡವಳಿಕೆಗಳೇ ಸಾಕ್ಷಿ,ಪುರಾವೆ. 1957ರಲ್ಲಿ ಪ್ರಧಾನಿ ನೆಹರು ಅವರು ವಿದೇಶಾಂಗ ಖಾತೆಯ ಹೊಣೆಯನ್ನೂ ಹೊತ್ತಿದ್ದರು. ವಿದೇಶಾಂಗ ಇಲಾಖೆಯ ನಿರ್ವಹಣೆ ಕುರಿತು ಸಂಸತ್ತಿನಲ್ಲಿ ಬಹು ಸುದೀರ್ಘ ಚರ್ಚೆ ನಡೆದು, ಕೊನೆಯಲ್ಲಿ ಪ್ರತಿಪಕ್ಷಗಳ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ನೆಹರು, ವಿದೇಶಾಂಗ ನೀತಿಯ ವಿಷಯದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಅಭಿಪ್ರಾಯವನ್ನು ಒಪ್ಪಿಕೊಳ್ಳುತ್ತೇನೆ ಎಂದಿದ್ದರು. ಇದೊಂದೇ ಅಲ್ಲ, ನೆಹರು ಅವರ ಅಧಿಕಾರದುದ್ದಕ್ಕೂ ವಾಜಪೇಯಿ ಮತ್ತು ನೆಹರು ನಡುವೆ ಸಂಸತ್ತಿನಲ್ಲಿ ಸೈದ್ಧಾಂತಿಕ ಜಟಾಪಟಿ ನಡೆದೇ ಇತ್ತು. ಆದರೆ ವೈಯಕ್ತಿಕ ಘನತೆ, ಗೌರವದ ಎಲ್ಲೆಯನ್ನು ಎಂದೂ ಮೀರಿದ ಉದಾಹರಣೆ ಇಲ್ಲ. ಅಷ್ಟೇ ಅಲ್ಲ, ಸ್ವತಃ ನೆಹರು ಅವರು ಆರೆಸ್ಸೆಸ್ನ ಸೈದ್ಧಾಂತಿಕ ನಿಲುವುಗಳನ್ನು ಒಪ್ಪದೇ ಇದ್ದರೂ ಅದರ ಬಗ್ಗೆ ಗೌರವಾದರ ಹೊಂದಿದ್ದರು. ಇಂಥಾ ಅನೇಕ ಉದಾಹರಣೆಗಳಿವೆ.
ಇಂದಿರಾ ಗಾಂಧಿ ಅವರ ನಡೆ, ನುಡಿ, ನಿಲುವುಗಳ ವಿಷಯದಲ್ಲಿ ವಾಜಪೇಯಿ ಬಹಳ ನಿಷ್ಠುರವಾದಿಯಾಗಿದ್ದರು. ಅದೇ ಬಾಂಗ್ಲಾ ವಿಮೋಚನೆ ಯುದ್ಧದ ಸಂದರ್ಭದಲ್ಲಿ ಇಂದಿರಾ ತೋರಿದ ಜಾಣ್ಮೆ ಮತ್ತು ಕಠೋರತೆಯನ್ನು ಅದೇ ವಾಜಪೇಯಿ ಮೆಚ್ಚಿ ಕೊಂಡಾಡಿದ್ದರು.
ವಿವಾದಿತ ಬಾಬರಿ ಕಟ್ಟದ ನೆಲಸಮಗೊಂಡ ನಂತರ ಸಂಸತ್ತಿನಲ್ಲಿ ಭಾಷಣ ಮಾಡುತ್ತಿದ್ದ ರಾಂ ವಿಲಾಸ್ ಪಾಸ್ವಾನ್, ಬಿಜೆಪಿ ಜೈ ಶ್ರೀರಾಮ್ ಎನ್ನುತ್ತಿದೆ. ಆದರೆ ಅವರಲ್ಲಿ ರಾಮ ಯಾರೂ ಇಲ್ಲ. ಅದೇ ನನ್ನ ಹೆಸರಲ್ಲೇ ರಾಮ್ ಇದೆ ಎಂದಾಗ ತೀಕ್ಷ್ಣವಾಗಿ ಪ್ರತಿಕ್ರಿಯಿಸದ ವಾಜಪೇಯಿ ಅದೇ ರೀತಿ ಹರಾಮ್ನಲ್ಲೂ ರಾಮ್ ಇದೆಯಲ್ಲವೇ ಎಂದು ಚುಚ್ಚಿದ್ದರು! ಆಗ ಇಡೀ ಸದನ ನಗೆಗಡಲಲ್ಲಿ ತೇಲಿತೇ ಹೊರತು ತೋಳ್ಬಲ ಪ್ರದರ್ಶನಕ್ಕೆ ಇಳಿಯಲಿಲ್ಲ. ಅಷ್ಟು ಮಾತ್ರವಲ್ಲ, 1994ರಲ್ಲಿ ಪಿ.ವಿ. ನರಸಿಂಹರಾಯರು ವಾಜಪೇಯಿ ಅವರಿಗೆ ಉತ್ತಮ ಸಂಸದೀಯ ಪಟು ಎಂದು ಬಿರುದುತ್ತು ಗೌರವಿಸಿದರು. ವಾಜಪೇಯಿ ಭಾರತದ ಸಮಕಾಲೀನ ರಾಜಕಾರಣದ ಭೀಷ್ಮಪಿತಾಮಹ ಎಂದು ಅಂದಿನ ಪ್ರಧಾನಿ ಡಾ. ಮನಮೋಹನ ಸಿಂಗ್ ಹೊಗಳಿದ್ದರು.
ಹಾಗೇ ಇನ್ನೊಂದು ಸಂದರ್ಭ. ಜನತಾ ಪಕ್ಷ ಉಚ್ಚ್ರಾಯ ಸ್ಥಿತಿಯಲ್ಲಿದ್ದ ದಿನಗಳು. ರಾಜಕೀಯ ನಾಯಕರ ಮಾತಿನ ನಡುವೆ ಕೆಲವರು ಆರೆಸ್ಸೆಸ್ ನಿಷೇಧ ಮಾಡಬೇಕೆಂದು ವೀರಾವೇಷದಲ್ಲಿ ಹೇಳಿದಾಗ, ಜನತಾಪಕ್ಷದ ವರಿಷ್ಠ ನಾಯಕರಾಗಿದ್ದ ರಾಮಕೃಷ್ಣ ಹೆಗಡೆ ಅವರು ನೋ, ಅದೊಂದು ಮೂರ್ಖತನದ ಆಲೋಚನೆ ಎಂದು ಸೊಲ್ಲೆತ್ತಿದವರನ್ನು ಸುಮ್ಮನಿರಿಸಿದ್ದರಂತೆ. ಹಾಗಂತ ಹೆಗಡೆ ಎಂದೂ ಆರೆಸ್ಸೆಸ್ ನ ಹತ್ತಿರಕ್ಕೂ ಸುಳಿದವರಲ್ಲ.
ನಾಯರಕ ನಡವಳಿಕೆಗಳು ಹೇಗಿರಬೇಕು ಎಂಬುದಕ್ಕೆ ಇವೆಲ್ಲ ಕೆಲ ಉದಾಹರಣೆಗಳು ಅಷ್ಟೆ.
ಸಂಸದೀಯ ನಡವಳಿಕೆಗಳ ಪ್ರಸಕ್ತ ಸನ್ನಿವೇಶ ಸಂಪೂರ್ಣ ಭಿನ್ನವಾಗಿದೆ. ಹೇಳುವವರು, ಕೇಳುವವರು ಇಬ್ಬರೂ ಒಂದೇ ಗುಣಮಟ್ಟದವರಾಗುತ್ತಿದ್ದಾರೆ. ಇದೊಂದು ಆತಂಕಕಾರಿ ಬೆಳವಣಿಗೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಚರ್ಚೆಯ ವೇಳೆ ಕಾಂಗ್ರೆಸ್ ನಾಯಕ ಬಿ.ಎಲ್. ಶಂಕರ್ ಕೆಲ ಅತ್ಯುತ್ತಮ ಅಂಶಗಳನ್ನು ಪ್ರಸ್ತಾಪ ಮಾಡಿದರು. ಕ್ರಿಮಿನಲ್ ಹಿನ್ನೆಲೆಯುಳ್ಳವರು ದೊಡ್ಡ ಸಂಖ್ಯೆಯಲ್ಲಿ ಶಾಸಕರು, ಸಂಸದರಾಗುತ್ತಿದ್ದಾರೆ. ಟಿಕೆಟ್ ಕೊಡುವ ಹಂತದಲ್ಲೇ ಪಕ್ಷಗಳು ತೀರ್ಮಾನ ಮಾಡಿದರೆ ಅಂಥವರನ್ನು ತಡೆಯುವುದು ಕಷ್ಟವೇ? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ನಮ್ಮಲ್ಲಿ ಶೈಕ್ಷಣಿಕ ಅರ್ಹತೆ ನಿಗದಿ ಮಾಡದ ಏಕೈಕ ಹುದ್ದೆ ಅಂದರೆ ಶಾಸಕ ಮತ್ತು ಸಂಸದ ಸ್ಥಾನ. ಇದನ್ನು ಮಾರ್ಪಾಟು ಮಾಡುವುದು ಕಷ್ಟದ ಕೆಲಸವೇ? ಪಕ್ಷಾಂತರ ನಿಷೇಧ ಕಾಯಿದೆ ಜಾರಿ ನಂತರವೂ ವ್ಯಾಖ್ಯಾನಗಳ ಮೂಲಕ ರಂಗೋಲಿಯ ಕೆಳಗೆ ನುಸುಳುವ ನಮ್ಮ ವ್ಯವಸ್ಥೆ ನಗೆಪಾಟಲಲ್ಲವೇ? ಪದವೀಧರ ಕ್ಷೇತ್ರದ ಪರಿಷತ್ ಚುನಾವಣೆಯಲ್ಲಿ ಮತ ಹಾಕುವವರಿಗೆ ಪದವಿ ಕಡ್ಡಾಯ, ಪದವೀಧರ ಕ್ಷೇತ್ರಕ್ಕೆ ಸ್ಪರ್ಧೆ ಮಾಡುವವನಿಗೆ ಅದು ಕಡ್ಡಾಯ ಅಲ್ಲವೇ ಅಲ್ಲ. ನಮಗೆ ಮಧ್ಯಂತರ ಚುನಾವಣೆ, ಉಪಚುನಾವಣೆ ತಡೆಯುವುದು ಕಷ್ಟದ ಕೆಲಸವೇ?
ಒಬ್ಬ ಎಷ್ಟು ಬಾರಿ ಶಾಸಕ, ಸಂಸದ, ಮಂತ್ರಿ, ಮುಖ್ಯಮಂತ್ರಿ ಆಗಬಹುದು? ಅಮೆರಿಕ ಅಧ್ಯಕ್ಷಗಿರಿಗಿಂತ ಇವೆಲ್ಲ ಹೆಚ್ಚೇ?. ಕೇಳಬೇಕಾದ ಪ್ರಶ್ನೆಗಳ ಸರಣಿ ಉದ್ದದಿತ್ತು. ಸಮಯಾವಕಾಶ ಕಡಿಮೆ ಇತ್ತು.
ಪರಿಹಾರ ಏನು?
• ಓರ್ವ ವ್ಯಕ್ತಿ ಎಷ್ಟು ಬಾರಿ ಶಾಸಕ, ಸಂಸದ, ಮಂತ್ರಿ ಆಗಬಹುದೆಂದು ನಿಗದಿ ಮಾಡುವುದು
• ಚುನಾವಣಾ ವೆಚ್ಚ ನಿಗದಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು
• ಚುನಾವಣೆಗೆ ಸ್ಪರ್ಧಿಸುವವರ ಅರ್ಹತೆಗೆ ಒಂದಿಷ್ಟು ಮಾನದಂಡಗಳನ್ನು ಪಕ್ಷಗಳೇ ನಿಗದಿ ಮಾಡುವುದು
• ಮಂತ್ರಿ ಆಗಬೇಕಾದರೆ ಅಂಥವರ ಸಾರ್ವಜನಿಕ ನಡವಳಿಕೆ/ಶಾಸನಸಭೆಯಲ್ಲಿ ನಡವಳಿಕೆ ಇತಿಹಾಸವನ್ನು ಮಾನದಂಡವಾಗಿ ಪರಿಗಣಿಸುವುದು
• ಶಾಸಕರು/ಸಂಸದರಿಗೆ ತರಬೇತಿ ಮತ್ತು ತೇರ್ಗಡೆ ಕಡ್ಡಾಯ ಮಾಡುವುದು
• ವಾಸ್ತವದಲ್ಲಿ ಬೇರೆಲ್ಲ ಹುದ್ದೆ, ಉದ್ಯೋಗಗಳಿಗೆ ನಿಗದಿತ ಪದವಿ, ತರಬೇತಿ ಎಲ್ಲವೂ ಇದೆ. ಬಹುಶಃ ವ್ಯವಸ್ಥಿತ ರಾಜಕೀಯ ತರಬೇತಿ ಸಂಸ್ಥೆಯೊಂದನ್ನು ಆರಂಭಿಸಲು ಇದು ಸಕಾಲ.
• ಸಂಸದೀಯಯ ನಡವಳಿಕೆಗಳು ಜಗತ್ತಿಗೆ ತೆರೆದುಕೊಳ್ಳುವ ಕಾಲ;
ಸಂಸದೀಯ ಮೌಲ್ಯಗಳು ದಿನದಿಂದ ದಿನಕ್ಕೆ ಕುಸಿತ ಆಗುತ್ತಿರುವುದು ಕಳವಳಕಾರಿ ಸಂಗತಿಯೆ. ಹಾಗಂತ ವಿಧಾನ ಮಂಡಲ, ಸಂಸತ್ತಿನ ಕಲಾಪಗಳ ನೇರ ವರದಿ ಮಾಡುವುದರಿಂದ ಮಾಧ್ಯಮಗಳನ್ನು ನಿರ್ಬಂಧಿಸುವುದರಿಂದ ಜನಪ್ರತಿನಿಧಿಗಳು, ಜನಪ್ರತಿನಿಧಿ ಸಭೆಗಳ ಗೌರವ ಕಾಪಾಡಲು ಸಾಧ್ಯವಿಲ್ಲ. ಇದು ಮಾಹಿತಿ ಯುಗ. ಮುಕ್ತ ಸ್ವಾತಂತ್ರ್ಯ ಬಯಸುವ ಯುಗ. ಪ್ರಜಾತಂತ್ರ ಪಕ್ವವಾಗಬೇಕಾದರೆ ಶಾಸನಸಭೆಗೆ ಯೋಗ್ಯರನ್ನು ಚುನಾಯಿಸುವ ವ್ಯವಸ್ಥೆ ರೂಪಿಸಬೇಕು. ಅಂಥವರು ನಡೆಸುವ ಕಲಾಪವನ್ನು ಇಡೀ ಜಗತ್ತಿಗೇ ತೆರೆದಿಡಬೇಕು. ಅಥವಾ ಅಯೋಗ್ಯರನ್ನು ಮುಲಾಜಿಲ್ಲದೇ ಎಕ್ಸ್ ಪೋಸ್ ಮಾಡಬೇಕು.
ಎರಡೂ ಕೈ ಸೇರಿದರೆ ಚಪ್ಪಾಳೆ ಎನ್ನುವಂತೆ, ಈ ಕಾರ್ಯದಲ್ಲಿ ಜನರ ಪಾತ್ರವೂ ದೊಡ್ದದಿದೆ. ಸದನದಲ್ಲಿ ಜನರ ಆಶೋತ್ತರವಾಗಿ ವರ್ತಿಸುತ್ತಿದ್ದಾರೆ ಎಂಬುದು ಕಂಡುಬಂದರೆ ಅವ ತಮ್ಮ ಊರು, ತಮ್ಮ ಜಾತಿ, ತಮ್ಮ ಸಂಘಟನೆ ಎಂಬ ಮುಲಾಜಿಗೆ ಒಳಗಾಗದೆ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಬೇಕು. ಕಳೆದ ಚುನಾವಣೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸದಿದ್ದರೆ ಜಯಿಸಲು ಸಾಧ್ಯವಿಲ್ಲ ಎಂಬ ವಾತಾವರಣ ಸೃಷ್ಟಿಯಾಗಬೇಕು. ಪ್ರಬುದ್ಧ ಮತದಾರರಿದ್ದರೆ ಮಾತ್ರವೇ ಪ್ರಜಾಪ್ರಭುತ್ವ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತದೆ. ಇಲ್ಲದಿದ್ದರೆ ಅಪಾತ್ರರಿಗೆ ಅಧಿಕಾರ ಗದ್ದುಗೆ ಸಿಕ್ಕಿ ಸಮಾಜ ಅಧೋಗತಿಯತ್ತ ಸಾಗುತ್ತದೆ.
ಈ ಎಲ್ಲ ಅಂಶಗಳೂ ಸಾಕಾರವಾದಾಗ ಮಾತ್ರವೇ ಸಂಸದೀಯ ನಡವಳಿಕೆ ಘನತೆ ಎತ್ತರಿಸುವ ಸಭಾಧ್ಯಕ್ಷರ ಕಳಕಳಿ ನಿಜಾರ್ಥದಲ್ಲಿ ಸಾರ್ಥಕವಾಗುತ್ತದೆ.
ಕಡೆಮಾತು: ಶಾಸನಸಭೆಗೆ ಆಯ್ಕೆಯಾಗುವವರೇ ಕಳಂಕಿತರಾಗಿದ್ದರೆ, ಓದು ಬರಹ ಅರಿಯದ ಅನಕ್ಷರಸ್ಥರಾಗಿದ್ದರೆ ಅವರು ರೂಪಿಸುವ ಶಾಸನಗಳ ಕಥೆ ಏನಾಗಿರಬೇಡ ? ಹಾಗಾಗಿ, ಶಾಸನಸಭೆಗೆ ಕಳಂಕಿತರು ಆಯ್ಕೆಯಾಗದಂತೆ ಕ್ರಮ ವಹಿಸಬೇಕು, ಶಾಸಕ-ಸಂಸದರಾಗಲು ಕನಿಷ್ಠ ಶೈಕ್ಷಣಿಕ ವಿದ್ಯಾರ್ಹತೆ ನಿಗದಿಪಡಿಸಬೇಕು ಎಂದು ಈ ದೇಶದಲ್ಲಿ ಕೆಲವರು ಬಹಳ ಹಿಂದೆಯೇ ಪಿಐಎಲ್ ಮೂಲಕ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ, ಭಾರತದಂಥ ಬಡ ದೇಶದಲ್ಲಿ ಶೈಕ್ಷಣಿಕ ಅರ್ಹತೆ ನಿಗದಿ ಸಲ್ಲದು ಎಂದು ಕೆಲವರು ವಾದಿಸುತ್ತಾರೆ. ಹಾಗಾಗಿ ಈ ವಿಷಯ ಇದುವರೆಗೂ ತಾರ್ಕಿಕ ಅಂತ್ಯ ಕಂಡಿಲ್ಲ.
ಆದರೆ, ಡಿ ದರ್ಜೆ ನೌಕರಿಗೆ ಅರ್ಜಿ ಆಹ್ವಾನಿಸಿದರೆ ಪಿಎಚ್ ಡಿ ಪೂರ್ಣಗೊಳಿಸಿದರೂ ಸಾಲುಗಟ್ಟಿ ನಿಲ್ಲುವಷ್ಟರಮಟ್ಟಿಗೆ ಭಾರತದ ಶೈಕ್ಷಣಿಕ ಸ್ಥಿತಿ ಸುಧಾರಿಸಿದೆ. ಸಾಕ್ಷರತೆಯ ಪ್ರಮಾಣ ಶೇ.75ರಷ್ಟು ತಲುಪಿದೆ. ಕಸ ಗುಡಿಸುವವನಿಗೂ ಕನಿಷ್ಠ ಶೈಕ್ಷಣಿಕ ಅರ್ಹತೆ ಕೇಳುವ ದೇಶ, ಕಾನೂನು ರೂಪಿಸುವ ಶಾಸಕ-ಸಂಸದರಿಗೆ ಶೈಕ್ಷಣಿಕ ಅರ್ಹತೆ ನಿಗದಿ ಪಡಿಸದಿದ್ದರೆ ಹೇಗೆ ?ಯೋಚಿಸಲು ಇದು ಸಕಾಲ
 
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top