ಶಾಲೆಗಳು ಯಾವಾಗ ಆರಂಭ? ಗೊತ್ತಿಲ್ಲ. ಕೊರೊನಾ ಸೋಂಕಿನ ಗ್ರಾಫ್ ಯಾವಾಗ ಇಳಿಯುತ್ತದೆ? ಗೊತ್ತಿಲ್ಲ. ಮತ್ತೆ ನಾವೆಲ್ಲ ಯಾವಾಗ ಕೈ ಕುಲುಕಬಹುದು? ಯಾವಾಗ ಅಪ್ಪಿಕೊಳ್ಳಬಹುದು? ಊರಿಗೆ ಹೋದವರು ಯಾವಾಗ ಹಿಂದಿರುಗಬಹುದು? ಪರದೇಶಗಳಲ್ಲಿರುವವರು ಯಾವಾಗ ಬರಬಹುದು? ಐಸಿಯುನಲ್ಲಿರುವವರು ಮನೆಗೆ ಮರಳಬಹುದೇ? ಮಾಸ್ಕ್ ಹಾಕಿದ ಮುಖಗಳ ಹಿಂದೆ ಯಾರಿದ್ದಾರೆ? ಕೊರೊನಾ ಹೋದ ಮೇಲೆ ಬದುಕುಳಿದವರ ಜೀವನ ಹೇಗಿರುತ್ತದೆ? ಆಗಲೂ ಸಣ್ಣಪುಟ್ಟ ಸಂಗತಿಗಳಿಗೆ ನಕ್ಕು ಹಗುರಾಗುವಷ್ಟು ಶಕ್ತಿ ನಮ್ಮಲ್ಲಿ ಉಳಿದಿರಬಹುದಾ? ಯಾವುದೂ ಗೊತ್ತಿಲ್ಲ.
ಕತೆ, ಕಾದಂಬರಿ ಬರೆಯುವವರು ಮೊದಲ ಸಾಲು ಬರೆಯುತ್ತಾರೆ. ಅದರ ನಂತರ ಹಿಂಬಾಲಿಸಿ ಬರುವ ಸಾಲುಗಳಿಗಾಗಿ ಕಾಯುತ್ತಾರೆ. ಮೊದಲ ಸಾಲು ಬರೆಯುವವರೆಗೂ ಕತೆಯ ಬಗ್ಗೆ ಆತನಿಗೆ ಏನೂ ಗೊತ್ತಿರುವುದಿಲ್ಲ. ಯಾವ ಪಾತ್ರಗಳು ಬರುತ್ತವೆ ಅನ್ನುವುದೂ ತಿಳಿದಿರುವುದಿಲ್ಲ. ‘‘ಪಾರ್ಥಸಾರಥಿ ಅವೆನ್ಯೂ ರೋಡಿನಲ್ಲಿ ನಡೆದುಹೋಗುತ್ತಿದ್ದಾಗ ಪುಸ್ತಕದ ಅಂಗಡಿಗಳ ನಡುವಿನಿಂದ ಒಬ್ಬಳು ಚೆಲುವೆ ಅವನ ಕಡೆಗೆ ಬಂದಳು,’’ ಅಂತ ಮೊದಲ ಸಾಲು ಬರೆದೆನೆಂದಿಟ್ಟುಕೊಳ್ಳಿ. ಈ ಪಾರ್ಥಸಾರಥಿ ಯಾರು, ಅವನೇಕೆ ಅವೆನ್ಯೂ ರೋಡಿಗೆ ಬಂದ, ಆ ಹುಡುಗಿ ಯಾರು, ಅವನ ಜೊತೆ ಅವಳಿಗೇನು ಕೆಲಸ ಎಂಬುದನ್ನೆಲ್ಲ ಕತೆಗಾರ ಇನ್ನಷ್ಟೇ ಯೋಚಿಸಬೇಕಿದೆ. ಯಾವುದೋ ಮ್ಯಾಜಿಕ್‌ನಂತೆ ಅವನಿಗೆ ಸಾಲುಗಳು ಹೊಳೆಯುತ್ತ ಹೋಗಬೇಕು. ಆಗ ಯಶಸ್ವಿ ಕತೆಯೊಂದು ಬರೆಸಿಕೊಳ್ಳುತ್ತದೆ. ಮುಂದೆ ಒಯ್ಯದೆ ಸಾಲುಗಳು ಕುಂಟಿದರೆ ಅಂಥ ಕತೆಗಳು ಸರಾಗವಾಗಿ ಓದಿಸಿಕೊಳ್ಳುವುದಿಲ್ಲ. ಸದ್ಯ ಭಗವಂತ ನಮ್ಮ ಬದುಕನ್ನು ಅಂಥ ಒಂದು ಕತೆಯ ಮಧ್ಯದಲ್ಲಿ ತಂದು ಬಿಟ್ಟು, ಮುಂದಿನ ಸಾಲುಗಳಿಗಾಗಿ ತಿಣುಕುತ್ತ ಕೂತಿರುವಂತಿದೆ.
ಕಳೆದ ಮೂರು ತಿಂಗಳಲ್ಲಿ ಯಾರೂ ಊಹಿಸದ ಸಂಗತಿಗಳು ಘಟಿಸಿವೆ. ಬದುಕು, ಕತೆಗಿಂತ ವಿಚಿತ್ರವಾಗಿರುತ್ತದೆ ಎಂಬ ಮಾತಿದೆಯಾದರೂ ಈ ಮಾತನ್ನು ಕೊರೊನಾ ಹಲವು ರೀತಿಯಲ್ಲಿ ಋುಜುವಾತುಪಡಿಸಿದೆ. ಬಲಿಷ್ಠವೆಂದುಕೊಂಡ ದೇಶಗಳು ಈ ಕಣ್ಣಿಗೆ ಕಾಣದ ಕ್ರಿಮಿಯ ಮುಂದೆ ಮಂಡಿಯೂರಿದ್ದು ಒಂದು ಉದಾಹರಣೆ. ಕುಟುಂಬದ ಹಿರಿಯರು ಸೋಂಕಿನಿಂದ ಸತ್ತರೆ ಶವಸಂಸ್ಕಾರದಲ್ಲಿ ಮಕ್ಕಳು ಕೂಡ ಭಾಗವಹಿಸುವಂತಿಲ್ಲ ಎಂಬ ಸ್ಥಿತಿ ಬರುತ್ತದೆ ಎಂದು ಯಾರಾದರೂ ಊಹಿಸಲು ಸಾಧ್ಯವಿತ್ತೆ? ಹೆತ್ತವರನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಮಕ್ಕಳು ಕ್ರೂರಿಗಳೆಂದೇ ನಮ್ಮ ಎಣಿಕೆ. ಈಗ ನೋಡಿದರೆ, ಊರ ತುಂಬಾ ತಿರುಗಾಡಿ ಬರುವ ಮಕ್ಕಳಿರುವ ಮನೆಯಿಂದ ದೂರ ವೃದ್ಧಾಶ್ರಮದಲ್ಲಿರುವುದೇ ವಾಸಿ ಅಲ್ಲವೇ ಎಂದು ಹಿರಿಯರ್ಯಾರೋ ಮೊನ್ನೆ ಪ್ರಶ್ನಿಸುತ್ತಿದ್ದರು. ಅಂದರೆ ನಾವು ಜತನದಿಂದ ಪೋಷಿಸಿಕೊಂಡು ಬಂದ ಸಾಂಪ್ರದಾಯಿಕ ಮೌಲ್ಯಗಳನ್ನು ಕೂಡ ಈ ರೋಗ ಪರೀಕ್ಷೆ, ಪ್ರಶ್ನೆಗಳಿಗೆ ಒಡ್ಡಿದೆ. ಅದೂ ಥೇಟ್ ಕ್ಲಾಸಿಕ್ ಕೃತಿಯ ಹಾಗೆಯೇ.
ಕ್ಲಾಸಿಕ್ ಕೃತಿಗಳು ಏನು ಮಾಡುತ್ತವೆ? ಅವು ನಮ್ಮ ನಂಬಿಕೆ, ನಾವು ರೂಢಿಸಿಕೊಂಡು ಬಂದ ಚಿಂತನೆಗಳನ್ನು ಪರೀಕ್ಷೆಗೊಡ್ಡುತ್ತವೆ ಇಲ್ಲವೇ ತಲೆಕೆಳಗು ಮಾಡುತ್ತವೆ. ಯಾವುದೋ ಬಿಂದುವಿನಲ್ಲಿ ಅನಿರೀಕ್ಷಿತವಾಗಿ ತಿರುವು ಕಂಡು ಬೆಚ್ಚಿಬೀಳಿಸುತ್ತವೆ ಹಾಗೂ ಪ್ರಶ್ನಿಸುವಂತೆ ಮಾಡುತ್ತವೆ. ರಾವಣನನ್ನು ರಾಮ ಯುದ್ಧದಲ್ಲಿಕೊಂದು, ಇನ್ನೇನು ಸೀತೆಯನ್ನು ಕೂಡಿಕೊಳ್ಳುತ್ತಾನೆ ಎನ್ನುವಾಗ ಮುಖ ತಿರುಗಿಸಿ, ಪ್ರೀತಿ ಮತ್ತು ರಾಜಧರ್ಮಗಳ ನಡುವೆ ಇಷ್ಟೊಂದು ಕಂದರವಿದೆಯೇ ಎಂಬ ಪ್ರಶ್ನೆ ಕೇಳುವಂತೆ ಮಾಡುತ್ತದೆ. ಕೃಷ್ಣನಂಥ ಕೃಷ್ಣನನ್ನೇ ಬಂಧುಗಳ ಕಲಹದ ಮಧ್ಯೆ ಅಸಹಾಯಕನಾಗಿ ನಿಲ್ಲಿಸಿ, ಬೇಡನ ಬಾಣ ತಾಗಿಸಿ ಇಂಥ ಸಾವು ಇವನಿಗೆ ನ್ಯಾಯವೇ ಎಂಬ ಪ್ರಶ್ನೆ ಕೇಳುವಂತೆ ಮಾಡುತ್ತದೆ. ರೋಮಿಯೋ ಮತ್ತು ಜ್ಯೂಲಿಯೆಟ್ಟರನ್ನು ವಿಚಿತ್ರ ಘಟನೆಗಳ ತಿರುಗಣಿ ಮಡುವಿನಲ್ಲಿ ಸಿಕ್ಕಿಸಿ, ಇವರ ಪಾಲಿಗೆ ಕ್ರೂರಿಯಾಗಿರುವುದು ವಿಧಿಯೇ ಸ್ವಂತ ಬುದ್ಧಿಯೇ ಅಂತ ಕೇಳಿಕೊಳ್ಳುವಂತೆ ಮಾಡುತ್ತದೆ. ಬದುಕಿನ ಪ್ರಮುಖ ಭಾಗವನ್ನೆಲ್ಲ ಕಾಡಿನಲ್ಲಿ ಕಳೆದು, ಯುದ್ಧ ಮಾಡಿ ರಾಜ್ಯ ಪಡೆದ ಪಾಂಡವರು ಬಂಧುಗಳನ್ನೆಲ್ಲ ಕೊಂದು ಸುಖವಾಗಿದ್ದರೇ ಎಂಬ ಪ್ರಶ್ನೆಯಂತೂ ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ.
ವಿಷದ ಕೊಳದ ನೀರು ಕುಡಿದ ಭೀಮಾರ್ಜುನ ನಕುಲ ಸಹದೇವರು ಅಸು ಕಳೆದುಕೊಂಡು ಬಿದ್ದಿದ್ದಾಗ, ದಾಹದಿಂದ ಬಳಲುತ್ತಿದ್ದರೂ ಮೊಣಕಾಲಾಳದ ನೀರಿನಲ್ಲಿ ನಿಂತು ಯಕ್ಷನ ಪ್ರಶ್ನೆಗಳಿಗೆ ಧರ್ಮರಾಯ ಉತ್ತರಿಸುತ್ತಿದ್ದಾನೆ. ‘‘ಜಗತ್ತಿನಲ್ಲೇ ಅತ್ಯಂತ ಅಚ್ಚರಿಯ ವಿಷಯ ಯಾವುದು?’’ ಎಂಬ ಯಕ್ಷನ ಪ್ರಶ್ನೆಗೆ ಧರ್ಮರಾಯ, ‘‘ತನ್ನ ಕಣ್ಣ ಮುಂದೆಯೇ ಪ್ರತಿದಿನ ಪ್ರತಿಕ್ಷಣ ಜೀವಗಳು ಯಮಾಲಯ ಸೇರುತ್ತಿದ್ದರೂ, ತನಗೆ ಸಾವಿಲ್ಲವೆಂಬಂತೆ ಮನುಷ್ಯ ಬದುಕುತ್ತಿರುವುದೇ ಅತ್ಯಂತ ಅಚ್ಚರಿದಾಯಕ,’’ ಎಂಬ ಉತ್ತರ ನೀಡುತ್ತಾನೆ. ಇದನ್ನು ಇನ್ನೊಂದು ರೀತಿಯಿಂದಲೂ ನೋಡಬಹುದು. ಪ್ರತಿದಿನ ಪ್ರತಿಕ್ಷಣ ಸಾವು ಸಂಭವಿಸುತ್ತಿದೆ, ಸೋಂಕು ಹೆಚ್ಚುತ್ತಿದೆ ಎಂಬ ಅರಿವಿದ್ದರೂ ಅದರ ಮುಂದೆ ನಿಂತು ನಗುವುದು, ಈ ಕ್ಷಣವಷ್ಟೇ ಸತ್ಯ ಎಂಬಂತೆ ಬದುಕುವುದೂ ಮಾನವನಿಗೆ ಸಾಧ್ಯ. ಮುಂದೇನು ಎಂಬುದು ಗೊತ್ತಿಲ್ಲದಿದ್ದಾಗ ಈ ಬದುಕಿಗೆ ಬರುವ ರೋಚಕತೆ, ಭವಿಷ್ಯ ಗೊತ್ತಿದ್ದಾಗ ಬರಲಾರದಷ್ಟೆ!