ಪ್ರಾದೇಶಿಕ ವೈವಿಧ್ಯತೆಯನ್ನು ಕೇಂದ್ರ ಗೌರವಿಸಿದರೆ ಒಕ್ಕೂಟ ವ್ಯವಸ್ಥೆ ಬಲಿಷ್ಠ-

ಸ್ಥಳೀಯ ನಾಯಕತ್ವವನ್ನು ಮರೆತು ಹೈಕಮಾಂಡ್ ಪಾಳೇಗಾರಿಕೆ ಮೆರೆದವರು ದುಷ್ಪಲ ಉಂಡಿದ್ದಾರೆ, ನೋಡಿ ಪಾಠ ಕಲಿಯೋಣ

 

ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ, ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ, ಇಂಗ್ಲಿಷ್ ಭಾಷೆಗಳ ಪಾರಮ್ಯ, ದಿಲ್ಲಿಕೇಂದ್ರಿತ ಹೈಕಮಾಂಡ್ ಸಂಸ್ಕೃತಿಯಂಥ ವಿಷಯಗಳು ಚರ್ಚೆಯ ಸಂಗತಿಗಳಾಗುತ್ತಿರುವ ಹೊತ್ತಲ್ಲಿ, ಎಂದಿನಂತೆ ಪ್ರತ್ಯೇಕತೆಯ ಸೊಲ್ಲುಗಳು, ತಾರತಮ್ಯ ನೀತಿಯ ಬಗೆಗಿನ ಬೇಸರದ ಬೇಗುದಿ ಅಲ್ಲಲ್ಲಿವ್ಯಕ್ತವಾಗುತ್ತಿವೆ. ಇದು ಸಹಜ. ಆದರೆ, ಇಂಥಾ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಧಿಸಬೇಕು. ಈ ಎಲ್ಲಆಕ್ರೋಶ, ಬೇಗುದಿಗಳ ನೆಲೆ, ಅವುಗಳ ಉದ್ದೇಶ ಒಂದೇ ಆಗಿರುವುದಿಲ್ಲ. ಅಲ್ಲಿನಾಡು-ನುಡಿಯನ್ನು ಒಡೆಯುವ, ದೇಶವನ್ನು ಹಾಳು ಮಾಡುವ ಕಾರ್ಯಸೂಚಿಯೂ ಇರುತ್ತದೆ.
ಉದಾಹರಣೆಗೆ ಹೇಳುವುದಾದರೆ, ಉಮೇಶ್ ಕತ್ತಿ ಸೇರಿದಂತೆ ನಮ್ಮ ಉತ್ತರ ಕರ್ನಾಟಕದ ಕೆಲವು ರಾಜಕಾರಣಿಗಳು ಪ್ರತ್ಯೇಕ ಕನ್ನಡ ರಾಜ್ಯದ ಬಗ್ಗೆ ಮಾತನಾಡಿದರೆ, ಬಹಳ ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಅದು ತೀರಾ ಗಂಭೀರವಾದ ಮಾತಲ್ಲ. ಸಾರ್ವಜನಿಕರ ಗಮನ ಸೆಳೆಯಲೆಂದೋ, ಅನೇಕ ಬಾರಿ ಉತ್ತರ ಕರ್ನಾಟಕಕ್ಕೆ ನಿರೀಕ್ಷಿಸಿದಷ್ಟು ನ್ಯಾಯ ಸಿಗುತ್ತಿಲ್ಲಎಂಬ ಪ್ರಾಮಾಣಿಕ ಒಡಲುರಿ¬ಯಿಂದಲೋ, ಅಂಥ ಬಿರುನುಡಿಗಳು ವ್ಯಕ್ತವಾಗುತ್ತಿರುತ್ತವೆ. ಇವು ರಾಜಕೀಯದ ಮಾತುಗಳೂ ಆಗಿರುತ್ತವೆ.
ಆದರೆ, ಇಂಥದ್ದೇ ಮಾತುಗಳನ್ನು ಕಾಶ್ಮೀರದ ದೇಶದ್ರೋಹಿ ಪ್ರತ್ಯೇಕತಾವಾದಿಗಳು ಹಾಗೂ ಅವರ ಬಗ್ಗೆ ಮೃದುಧೋರಣೆ ಹೊಂದಿರುವ ಫಾರೂಕ್ ಅಬ್ದುಲ್ಲಾ ಅವರಂಥವರು ನುಡಿದರೆ, ಅದನ್ನು ಖಂಡಿಸಲು ಮುಲಾಜೇ ಬೇಡ. ಪಾಕಿಸ್ತಾನವೇ ವಾಸಯೋಗ್ಯ ಎನಿಸಿದರೆ, ಮೊದಲು ಅಲ್ಲಿಗೆ ಹೋಗು ಮಾರಾಯ ಎಂದು ಫಾರೂಕ್ ಅವರನ್ನು ಕಳುಹಿಸಿಕೊಡಬೇಕು. ಪ್ರತ್ಯೇಕತೆ ಮಾತಿನ ಬಳಕೆಯ ಹಿಂದೆ ಅಡಗಿರುವ ಈ ಸೂಕ್ಷ ್ಮತೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಹೋದರೆ, ಭವಿಷ್ಯದಲ್ಲಿಆಪತ್ತು ತಪ್ಪಿದ್ದಲ್ಲ. ಪ್ರತ್ಯೇಕತೆ, ತಾರತಮ್ಯ ಮಾತುಗಳ ಬಗೆಗಿನ ಈ ಅರಿವನ್ನು ಸ್ಪಷ್ಟಪಡಿಸುತ್ತಲೇ, ನಾನೀಗ ಕೆಲವು ವಿದ್ಯಮಾನಗಳತ್ತ ನಿಮ್ಮನ್ನು ಕೊಂಡೊಯ್ಯುವೆ.
ರಾಷ್ಟ್ರೀಯ ಪಕ್ಷ ಗಳ ಹಿಂದಿ ಪ್ರೀತಿ
ತೀರಾ ಇತ್ತೀಚಿನ ಒಂದು ಉದಾಹರಣೆ ನೋಡಿ. ತಿಂಗಳಾಂತ್ಯದಲ್ಲಿ ಬಿಹಾರ ವಿಧಾನಸಭೆಗೆ ನಡೆಯುವ ಚುನಾವಣೆಗೆ ಬಿಜೆಪಿ ಮತ್ತು ಕಾಂಗ್ರೆಸ್ ವರಿಷ್ಠರು, ಹಂತ ಹಂತವಾಗಿ ತಮ್ಮ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದಾರೆ. ಅದರಲ್ಲೊಂದು ವಿಶೇಷ¬ವಿದೆ. ಏನು ಗೊತ್ತಾ? ಆ ಎಲ್ಲಪಟ್ಟಿಗಳು ಹಿಂದಿ ಭಾಷೆಯಲ್ಲಿವೆ! ಅದೇ ವೇಳೆ ಕರ್ನಾಟಕದ ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಬಿಹಾರ ಅಭ್ಯರ್ಥಿಗಳ ಪಟ್ಟಿಯನ್ನು ಹಿಂದಿಯಲ್ಲಿ ನಮೂದಿಸುವ ಪಕ್ಷ ಗಳು ಕರ್ನಾಟಕದ ಅಭ್ಯರ್ಥಿಗಳ ಪಟ್ಟಿಯನ್ನು ಇಂಗ್ಲಿಷ್ ಭಾಷೆಯಲ್ಲಿ ಬಿಡುಗಡೆ ಮಾಡಿವೆ.(ಒಂದು ಪಕ್ಷ ಹಿಂದಿಯಲ್ಲೂಬಿಡುಗಡೆ ಮಾಡಿದೆ).
ಉತ್ತರ ಭಾರತದ ರಾಜ್ಯಗಳಿಗೆ ಹಿಂದಿ ಭಾಷೆ ಬಳಸುವ ರಾಷ್ಟ್ರೀಯ ಪಕ್ಷ ಗಳು ನಮ್ಮ ಉಪ ಚುನಾವಣೆ ಪಟ್ಟಿಯನ್ನು ಕನ್ನಡದಲ್ಲಿಏಕೆ ಬಿಡುಗಡೆ ಮಾಡಲಿಲ್ಲ? ಕನ್ನಡ ಅಂದ್ರೆ ಈ ಪಕ್ಷ ಗಳಿಗೆ ಯಾಕಿಷ್ಟು ಸದರ? ಕನ್ನಡಿಗರು ಎಂದರೆ ಅಬ್ಬೇಪಾರಿಗಳು, ಏನು ಮಾಡಿದರೂ ಸಹಿಸಿಕೊಳ್ಳುವ ಅಶಕ್ತರು ಎಂದು ಈ ಪಕ್ಷ ಗಳು ಪರಿಗಣಿಸಿವೆಯೇ? ಇಂಥ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಮೂಡಬೇಕಿದೆ.
ಈ ವಿಷಯದಲ್ಲಿತಪ್ಪು ರಾಷ್ಟ್ರೀಯ ಪಕ್ಷ ಗಳದ್ದು ಮಾತ್ರ ಅಂತ ನಾನು ಭಾವಿಸುವುದಿಲ್ಲ, ಭಾಷೆ ಮತ್ತು ಪ್ರಾದೇಶಿಕತೆ ವಿಷಯದಲ್ಲಿ ನಮ್ಮ ನಿರಭಿಮಾನವೂ ದೊಡ್ಡ ಪಾತ್ರ ವಹಿಸಿದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ನಮ್ಮತನವನ್ನು ನಾವು ಮರೆತಿರುವ ಕಾರಣಕ್ಕೆ ಅಥವಾ ನಮ್ಮತನಕ್ಕೆ ಧಕ್ಕೆಯಾಗಿರುವುದು ಗೊತ್ತಾಗಿದ್ದರೂ ನಾವೆಲ್ಲರೂ ಅನಪೇಕ್ಷ ಣೀಯ ಸಹನಶೀಲರಾಗಿರುವುದೇ ದಿಲ್ಲಿಯ ಹಿಂದಿ ದೊರೆಗಳು ಕನ್ನಡಿಗರ ನೆತ್ತಿಯ ಮೇಲೆ ಕುಳಿತಿದ್ದಾರೆ ಅನಿಸುತ್ತೆ. ಈ ಸಹನೆ, ತಾಳ್ಮೆಯಿಂದ ನಾವು, ನಮ್ಮವರು ತೆರುತ್ತಿರುವ ಬೆಲೆ ಏನು ಗೊತ್ತೇ? ಅದನ್ನು ಒಂದೊಂದಾಗಿ ಚರ್ಚಿಸೋಣ.
ಕನ್ನಡಿಗರ ಪ್ರಾತಿನಿಧ್ಯ ಕ್ಷೀಣ
ಐಎಎಸ್, ಐಪಿಎಸ್, ಐಎಫ್ಎಸ್ನಂಥ ಭಾರತೀಯ ನಾಗರಿಕ ಸೇವೆಯ ಹುದ್ದೆಗಳಿಗೆ ಕೇಂದ್ರ ಲೋಕಸೇವಾ ಆಯೋಗವು ಪ್ರತಿವರ್ಷ ನಡೆಸುವ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಲಭ್ಯ. ಸಂವಿಧಾನದ ಎಂಟನೇ ಪರಿಚ್ಛೇದದಡಿ ಬರುವ ಎಲ್ಲ 22 ಭಾರತೀಯ ಭಾಷೆಗಳಲ್ಲಿಯುಪಿಎಸ್ಸಿ ಪ್ರಶ್ನೆಪತ್ರಿಕೆ¬ಗಳನ್ನು ನೀಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆಯಾದರೂ ಅದಕ್ಕೆ ಆಯೋಗ ಸೇರಿದಂತೆ ಯಾರೊಬ್ಬರೂ ಕ್ಯಾರೇ ಎನ್ನುತ್ತಿಲ್ಲ. ನಮಗೆ ನಮ್ಮದೇ ಭಾಷೆಯಲ್ಲಿ ಪ್ರಶ್ನೆಪತ್ರಿಕೆ ನೀಡಿ ಎಂಬ ಹಿಂದಿಯೇತರ ಭಾಷಿಕರ ಕೂಗಿಗೆ ಅನೇಕ ವರುಷಗಳ ಇತಿಹಾಸವಿದೆ. ಇದೆಲ್ಲಾ ಗೊತ್ತಿದ್ದರೂ ನಮ್ಮನ್ನು ಆಳಿದ/ಆಳುತ್ತಿರುವ ಕೇಂದ್ರ ಸರಕಾರಗಳು ಮೌನವಾಗಿವೆ. ಏಕೆಂದರೆ, ಹಿಂದಿಯೇತರ ಭಾಷಿಕರು ಕೈಲಾಗದ¬ವರು ಎಂಬ ಉದಾಸೀನವೇ ಇದಕ್ಕೆ ಕಾರಣ. ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳದ್ದೂ ಇದೇ ಕಥೆ. ಬ್ಯಾಂಕಿಂಗ್ ಪ್ರಶ್ನೆಪತ್ರಿಕೆಗಳನ್ನೂ ಪ್ರಾದೇ¬ಶಿಕ ಭಾಷೆಗಳಲ್ಲಿ ನೀಡಿ ಎಂಬ ಕೂಗು ಆರಂಭವಾಗಿ ಎಷ್ಟು ವರ್ಷಗಳಾದವು. ಯಾರಾದರೂ ಕೇಳಿಸಿಕೊಂಡಿದ್ದಾರಾ? ನಮ್ಮ ಕರ್ನಾಟಕದ ಹಳ್ಳಿಗಳಲ್ಲಿ ಎಸ್ಬಿಐ ಬ್ರಾಂಚ್ನ ಮ್ಯಾನೇಜ¬ರುಗಳಾಗಿರುವ ಹಿಂದಿ ಬಾಬುಗಳ ದರ್ಪ, ದಬ್ಬಾಳಿಕೆ, ಗತ್ತಿನ ಹಿಂದೆ ಕೆಲಸ ಮಾಡಿರುವುದು ಕೂಡ, ನಾವು ಏನೂ ಮಾಡುವುದಿಲ್ಲ ಎಂಬ ಉದಾಸೀನ ಧೋರಣೆಯೇ!
ಇದರಿಂದ ಕನ್ನಡಿಗರಿಗೆ ಆಗಿರುವ ನಷ್ಟ ಎಷ್ಟು ಗೊತ್ತೇ? ಯುಪಿಎಸ್ಸಿ ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷಿಕರಿಗೆ ಸಮಾನ ಅವಕಾಶ ಸಿಗಬೇಕು ಎಂದು ಹೋರಾಟ ನಡೆಸುತ್ತಿರುವ ಮೈಸೂರಿನ ಮನುಕುಮಾರ್ ಅರಸ್ ಅವರು ಹೇಳುವ ಪ್ರಕಾರ, ಯುಪಿಎಸ್ಸಿಗೆ ಆಯ್ಕೆಯಾಗುತ್ತಿರುವ ಶೇ.90ರಷ್ಟು ಮಂದಿ ಇಂಗ್ಲಿಷ್ -ಹಿಂದಿ ಬಲ್ಲವರಷ್ಟೇ.
ಪರಿಸರ ಸಚಿವಾಲಯದ ಉಡಾಫೆ
ಇತ್ತೀಚೆಗೆ ಕೇಂದ್ರ ಪರಿಸರ ಸಚಿವಾಲಯವು ಪರಿಸರ ಪರಿಣಾಮ ಅಧ್ಯಯನದ ಕರಡು ಅಧಿಸೂಚನೆ-2020ಯನ್ನು ಎಂದಿನಂತೆಯೆ ಇಂಗ್ಲಿಷ್ ಹಾಗೂ ಹಿಂದಿಯಲ್ಲಿಬಿಡುಗಡೆ ಮಾಡಿತು. ಈ ಬಗ್ಗೆ ಕರ್ನಾಟಕವೂ ಸೇರಿ ಅನೇಕ ರಾಜ್ಯಗಳು ತಕರಾರು ತೆಗೆದವು. ದೆಹಲಿ ಹೈಕೋರ್ಟ್ ಕೂಡ, ಇದು ತಪ್ಪು ಎಂದು ಸ್ಪಷ್ಟವಾಗಿ ಹೇಳಿತು. ಆದರೆ ಕೇಂದ್ರ ಸರಕಾರದ್ದು ಮತ್ತದೇ ಅಸಡ್ಡೆಯ ನಿಲುವು. ಸ್ಥಳೀಯ ಭಾಷೆಗಳಲ್ಲಿ ಕರಡು ಅವಶ್ಯಕತೆ ಇಲ್ಲ, ಭಾಷಾಂತರಕ್ಕೆ ಸರಿಯಾದ ಪದಗಳು ಪ್ರಾದೇಶಿಕ ಭಾಷೆಗಳಲ್ಲಿ ಸಿಗುವುದಿಲ್ಲ, ಇದಕ್ಕೆಲ್ಲಾ ಸಮಯ ಬೇಕು, ಈ ಕೆಲಸ ದುಬಾರಿ- ಈ ರೀತಿಯ ಕಾನೂನೇ ಇಲ್ಲ ಎಂದು ಉದ್ಧಟತನದ ಹೇಳಿಕೆಯನ್ನು ನ್ಯಾಯಾಲಯಕ್ಕೆ ನೀಡಿತು.
ದೇಶದ ಜನರಿಗೆ ಅವರದ್ದೇ ಭಾಷೆಯಲ್ಲಿ ಕಾಯಿದೆ, ಕಾನೂನು ತಿಳಿಸುವ ಜವಾಬ್ದಾರಿ ತನಗಿಲ್ಲ ಎಂದು ಕೇಂದ್ರವೇ ಭಾವಿಸಿದರೆ ಹೇಗೆ? ಇಂಥಾ ಸಂದರ್ಭದಲ್ಲಿ ಕೇಂದ್ರ ಸರಕಾರದ ಕಿವಿಹಿಂಡಿ ತಿಳಿ ಹೇಳಬೇಕಾದ ಸಂಘ ಪರಿವಾರದವರೂ ಮೌನಕ್ಕೆ ಶರಣಾಗಿದ್ದು ಅಚ್ಚರಿ ಮೂಡಿಸಿತು. ಇಂಗ್ಲಿಷ್ ಕರಡನ್ನು ಹಿಂದಿಗೆ ಅನುವಾದ ಮಾಡಬಹುದು ಎಂದಾದರೆ, ಇತರೆ ಭಾಷೆಗಳಿಗೆ ಮಾಡಲು ಸಾಧ್ಯವಿಲ್ಲವೇಕೆ ಎಂಬ ಸರಳ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ. ಏಕೆಂದರೆ, ಭಾಷಾ ಪಾರಮ್ಯ, ಪಾಳೇಗಾರಿಕೆ ದಿಲ್ಲಿ ದೊರೆಗಳನ್ನು ಆವರಿಸಿದೆ, ರಾಷ್ಟ್ರೀಕೃತ ಬ್ಯಾಂಕ್ಗಳ ಮ್ಯಾನೇಜರ್ಗಳಿಗೆ ಹಿಡಿದಿರುವ ಜ್ವರದಂತೆ!
ಬಿಜೆಪಿಗೆ ಆರೆಸ್ಸೆಸ್ ನಿಲುವೂ ಅಪಥ್ಯವೇ!?
ರಾಷ್ಟ್ರೀಯ ಸಮಗ್ರತೆ, ಭಾಷೆ, ಪ್ರಾದೇಶಿಕತೆ, ಆರ್ಥಿಕತೆ, ನಿರುದ್ಯೋಗ ಹೀಗೆ ನಮ್ಮ ದೇಶವನ್ನು ಕಾಡುತ್ತಿರುವ ಅನೇಕ ಸಮಸ್ಯೆಗಳಿಗೆ ಗಾಂಧೀಜಿ ತತ್ತ್ವಗಳಲ್ಲಿಪರಿಹಾರವಿದೆ ಎಂಬುದು ಸಾಮಾಜಿಕ ವಿಜ್ಞಾನಿಗಳು ಹೇಳುವ ಮಾತು. ಅಂತಹ ಗಾಂಧಿ ತತ್ವಗಳಿಗೂ ಮತ್ತು ಇಂದಿನ ಬಿಜೆಪಿಯ ಮಾತೃಸಂಸ್ಥೆ ಆರೆಸ್ಸೆಸ್ ಸಿದ್ಧಾಂತಕ್ಕೂ ಒಂದು ಸಾಮ್ಯತೆ, ಸಾಮೀಪ್ಯ ಎಲ್ಲವೂ ಇದೆ. ಗಾಂಧೀಜಿ ಹೇಳಿದ ಮಾತೃಭಾಷಾ ಶಿಕ್ಷ ಣ, ಗ್ರಾಮ ಸ್ವರಾಜ್ಯ, ಗ್ರಾಮೀಣಾಭಿವೃದ್ಧಿ, ಸ್ವದೇಶಿ ಆರ್ಥಿಕತೆ, ಅಧಿಕಾರ ವಿಕೇಂದ್ರೀಕರಣ, ಗೋ ಆಧಾರಿತ ಕೃಷಿ, ಪರಿಸರ ಸಂರಕ್ಷ ಣೆ, ಸಾಂಸ್ಕೃತಿಕ ರಾಷ್ಟ್ರೀಯತೆ ಇವೇ ಸಂಘ ಪರಿವಾರದ ಮೂಲತತ್ವ ಎಂದು ಓದಿದ್ದೇವೆ.
ಇವುಗಳ ಪೈಕಿ ಮುಖ್ಯವಾಗಿ ಮಾತೃಭಾಷಾ ಶಿಕ್ಷ ಣಕ್ಕೆ ಪೋಷಣೆ, ಸ್ವದೇಶಿ ಆರ್ಥಿಕತೆ, ಅಧಿಕಾರ ವಿಕೇಂದ್ರೀಕರಣ, ಒಕ್ಕೂಟ ವ್ಯವಸ್ಥೆ ಬಲಗೊಳಿಸುವಿಕೆಯ ಆಶಯಗಳು ಇಂದೇನಾಗುತ್ತಿವೆ ಎಂಬುದನ್ನು ನೋಡಿದರೆ, ಗಾಬರಿಯಾಗುತ್ತದೆ. ಬಿಜೆಪಿಗೆ ಈ ಎಲ್ಲವೂ ಅಪಥ್ಯವಾಗುತ್ತಿವೆಯೇ ಎಂಬ ಅನುಮಾನ ಮೂಡುತ್ತದೆ. ಇಷ್ಟಕ್ಕೂ ಸಂವಿಧಾನದ ಪ್ರಕಾರ, ಹಿಂದಿ ನಮ್ಮ ಅಧಿಕೃತ ಭಾಷೆಯೇ ಹೊರತು ರಾಷ್ಟ್ರಭಾಷೆಯಲ್ಲ. ಉಳಿದಂತೆ ಸಂವಿಧಾನ ಮಾನ್ಯ ಮಾಡಿರುವ ಎಲ್ಲಭಾಷೆಗಳಿಗೂ ಸಮಾನ ಗೌರವ ದೊರೆಯಲೇಬೇಕು. ಕರ್ನಾಟಕದ¬ಲ್ಲಂತೂ ಕನ್ನಡವೇ ಸಾರ್ವಭೌಮ ಭಾಷೆ. ಇದನ್ನು ಹಿಂದಿ ದೊರೆಗಳು, ಹಿಂದಿಯೇತರರು- ಇಬ್ಬರೂ ಅರಿತುಕೊಳ್ಳಬೇಕಿದೆ.
ಜಿಎಸ್ಟಿ ರಾಜ್ಯಗಳನ್ನು ದುರ್ಬಲಗೊಳಿಸಲಿದೆ
ಪ್ರಾದೇಶಿಕ ಭಾಷೆ ಬಳಕೆ ವಿಷಯದಲ್ಲಿಉದಾಸೀನ, ಜಿಎಸ್ಟಿ ಜಾರಿಯಿಂದ ಹಿಡಿದು ಎಪಿಎಂಸಿ ಕಾಯಿದೆ, ಕೃಷಿ ಕಾಯಿದೆ ತಿದ್ದುಪಡಿವರೆಗೆ ಒಕ್ಕೂಟ ವ್ಯವಸ್ಥೆಯೇ ಅಲಕ್ಷ ್ಯಕ್ಕೆ ಒಳಗಾಗುತ್ತಿರುವು¬ದನ್ನು ಎಳೆ ಎಳೆಯಾಗಿ ಕಾಣಬಹುದು.
ಜಿಎಸ್ಟಿ ಜಾರಿಗೆ ಆರಂಭದಲ್ಲೇ ವಿರೋಧ ಇತ್ತು. ಆಗ ಅದರ ಸ್ಪಷ್ಟ ಅರಿವಿರಲಿಲ್ಲ. ಅದೀಗ ನಿಧಾನವಾಗಿ ಅರಿವಿಗೆ ಬರುತ್ತಿದೆ. ಮುಖ್ಯವಾಗಿ ಈ ವ್ಯವಸ್ಥೆ ರಾಜ್ಯಗಳನ್ನು ಅಸಹಾಯಕ ಸ್ಥಿತಿಗೆ ತಳ್ಳಿ, ಕೇಂದ್ರದ ಕೈಗೊಂಬೆಯನ್ನಾಗಿಸಿದೆ. ಮುಖ್ಯವಾಗಿ ರಾಜ್ಯಗಳ ನಡುವೆ ಸ್ಪರ್ಧಾಧಿತ್ಮಕತೆಯನ್ನೇ ಇದು ಸಾಯಿಸಿಬಿಡುತ್ತದೆ. ಜಿಎಸ್ಟಿಗೆ ಮೊದಲು ವಿರೋಧಿಸಿದ್ದ ರಾಜ್ಯಗಳು, ಕೊನೆಗೆ ನಷ್ಟ ಭರ್ತಿ ಮಾಡಿಕೊಡಲಾಗು¬ವುದು ಎಂಬ ಷರತ್ತಿನ ಮೇಲೆ ಒಲ್ಲದ ಮನಸ್ಸಿನಿಂದ ಒಪ್ಪಿಗೆ ನೀಡಿದವು. ಆದರೆ, ಇಂದು ಏನಾಗಿದೆ. ರಾಜ್ಯಗಳು ಸಂಪನ್ಮೂಲ ಕೊರತೆಯಿಂದ ಬಳಲತೊಡಗಿವೆ. ಪರಿಹಾರ ಕೊಡುವುದಕ್ಕೆ ಕೇಂದ್ರಕ್ಕೂ ಕಷ್ಟವಾಗುತ್ತಿದೆ. ಇದೀಗ ವಿಧಿಯಿಲ್ಲದೆ ಒಂದು ಲಕ್ಷ ಕೋಟಿ ರೂ. ಸಾಲಕ್ಕೆ ಕೇಂದ್ರವೇ ಮುಂದಾಗಿದೆ. ಮುಂದೆ ಆಗುವ ವಿತ್ತೀಯ ಕೊರತೆ ಊಹಿಸಿಕೊಳ್ಳುವುದೂ ಕಷ್ಟ.
ಹಾಗೆಯೇ ಇತ್ತೀಚಿನ ಎಪಿಎಂಸಿ, ಕೃಷಿ ತಿದ್ದುಪಡಿ ಕಾಯಿದೆ ಸಂದರ್ಭದಲ್ಲಿ ರಾಜ್ಯಗಳನ್ನು ಕೇಂದ್ರ ಸರಕಾರ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ರಾಜ್ಯಗಳ ಮುಖ್ಯಮಂತ್ರಿಗಳಿಗೆ ಯಾವುದೇ ಮಾಹಿತಿಯನ್ನೂ ನೀಡದೆ ಅಧಿಕಾರಿಗಳ ಮೂಲಕ ಸುಗ್ರೀವಾಜ್ಞೆ ಜಾರಿಗೊಳಿಸುತ್ತಾರೆಂದರೆ ಏನರ್ಥ. ರಾಜ್ಯದ ಮುಖ್ಯಮಂತ್ರಿಗಳೇನು ಗುಮಾಸ್ತರಾ? ಹೀಗೇ ಆದರೆ ಮುಂದೊಂದು ದಿನ ಭಾರಿ ಬೆಲೆ ತೆರಬೇಕಾಗಿ ಬರೋದು ಗ್ಯಾರಂಟಿ
ಸ್ವದೇಶಿ/ಸಹಕಾರವೇ ಬೆನ್ನೆಲುಬು
ನಮ್ಮ ದೇಶದ ಆರ್ಥಿಕ ವ್ಯವಸ್ಥೆಯ ಜೀವಾಳವೇ ಸಹಕಾರ ರಂಗ, ಸಣ್ಣಪುಟ್ಟ ಬ್ಯಾಂಕುಗಳು. ಸಣ್ಣ ಪುಟ್ಟ ಕೃಷಿ ಹಿಡುವಳಿಗಳು. ಇವುಗಳಿಗೆ ಜಗತ್ತಿನ ಯಾವುದೇ ಭಾಗದಲ್ಲಿಪರ್ಯಾಯ ಇಲ್ಲ.
ಹೀಗಿರುವಾಗ ಅಮೆರಿಕದ ರೀತಿಯಲ್ಲಿ ಎಲ್ಲಬ್ಯಾಂಕುಗಳ ವಿಲೀನ ಮಾಡಿ ಒಂದೋ ಎರಡೊ ದೊಡ್ಡ ಬ್ಯಾಂಕುಗಳನ್ನು ಸೃಷ್ಟಿ ಮಾಡುತ್ತೇವೆಂದರೆ, ಸಣ್ಣ ಹಿಡುವಳಿದಾರರ ಹಿತಕಾಯಲು ರೂಪಿಸುವ ಎಪಿಎಂಸಿಗಳಿಗೆ ಖಾಸಗಿ ವ್ಯವಸ್ಥೆಯೇ ಪರ್ಯಾಯ ಎಂದರೆ, ಅದು ಖಂಡಿತ ಕಾರ್ಯಸಾಧುವೇ ಅಲ್ಲ. ಈಗಾಗಲೇ ಜಾರಿಯಲ್ಲಿದ್ದ ನಮ್ಮ ವ್ಯವಸ್ಥೆಯಲ್ಲಿ ಸಣ್ಣಪುಟ್ಟ ಲೋಪಗಳಿದ್ದರೆ ಸರಿಪಡಿಸಬೇಕೇ ಹೊರತು ಅದನ್ನು ನಾಶ ಮಾಡಲು ಹೋಗಬಾ¬ರದು. ಇದೇ ರೀತಿ ಸಾಗಿದರೆ, ಮುಂದೊಂದು ದಿನ ನಮ್ಮ ವಿಧಾನ¬ಸಭೆ, ಲೋಕಸಭೆಯೂ ನಿಸ್ತೇಜವಾಗಿ ಕಂಡುಬಿಟ್ಟರೆ!? ಅವನ್ನೂ ರದ್ದುಪಡಿಸಲಾದೀತೇ? ನೆಗಡಿ ಎಂದು ಮೂಗನ್ನು ಕೊಯ್ದುಕೊಳ್ಳಲು ಸಾಧ್ಯವೇ ? ನಮ್ಮ ಪ್ರಸಿದ್ಧ ನಾಣ್ಣುಡಿಯನ್ನೇ ಮರೆತರೆ ಹೇಗೆ?
ಇಂಥಾ ಆರ್ಥಿಕ ಸಂಕಟಗಳನ್ನು ದೇಶ ಹಿಂದೆಯೂ ಎದುರಿಸಿದೆ. 2008, ಅದಕ್ಕೂ ಪೂರ್ವದಲ್ಲೂಜಾಗತಿಕ ಆರ್ಥಿಕ ಹಿಂಜರಿತ ಉಂಟಾಧಿಗಿತ್ತು. ಆದರೆ ಅದರ ಪರಿಣಾಮ ಭಾರತದ ಮೇಲೆ ಆಗ ಉಂಟಾಗಿರಲಿಲ್ಲ. ಈಗ ಮತ್ತೆ ಜಾಗತಿಕ ಆರ್ಥಿಕ ಹಿಂಜರಿತ ಉಂಟಾಗಿದೆ, ಅದರ ನೇರ ಪರಿಣಾಮ ಭಾರತದ ಮೇಲೆ ಆಗುತ್ತಿರುವುದು ಅನುಭವಕ್ಕೆ ಬರುತ್ತಿದೆ!
ಹೈಕಮಾಂಡ್ ಸಂಸ್ಕೃತಿ ಮಾರಕ
ಅತಿಯಾದ ವ್ಯಕ್ತಿ ಪ್ರತಿಷ್ಠೆ ,ವ್ಯಕ್ತಿ ಪೂಜೆ ಯಾರಿಗೂ ಒಳ್ಳೆಯದಲ್ಲ. ಯಾವುದಕ್ಕೂ ಒಂದು ಮಿತಿ ಇದ್ದರೆ ಒಳ್ಳೆಯದು. ದೀರ್ಘ ಕಾಲ ದೇಶವನ್ನಾಳಿದ ಕಾಂಗ್ರೆಸ್ ರಾಷ್ಟ್ರಪತಿ ಭವನದ ಮೂಲಕ ರಾಜಭ¬ವನಗಳ ಮೂಲಕ ರಾಜ್ಯ ಸರಕಾರಗಳನ್ನು ರಾತ್ರಿ ಬೆಳಗಾಗುವು¬ದರೊಳಗೆ ಬುಡಮೇಲು ಮಾಡುತ್ತಿತ್ತು. ಹೈಕಮಾಂಡ್ ಎಂಬ ಪಾಳೇಗಾರಿಕೆಗೆ ಕಾಂಗ್ರೆಸ್ ತೆತ್ತ ಬೆಲೆ ಅಪಾರ. ದಿಲ್ಲಿಯ ಹೈಕಮಾಂಡ್ ವ್ಯವಸ್ಥೆ ಪ್ರಾದೇಶಿಕ ನಾಯಕತ್ವಕ್ಕೆ ಬೆಲೆ ನೀಡುವುದಿಲ್ಲ. ಇದಕ್ಕೆ ಮತ್ತೆ ಕಾಂಗ್ರೆಸ್ ಅನ್ನೇ ಉದಾಹರಿಸೋಣ.
1980ರ ದಶಕದಲ್ಲಿ ದೇಶದ ತುಂಬೆಲ್ಲಾ ಇಂದಿರಾಗಾಂಧಿ ಹವಾ. ಬಹುತೇಕ ರಾಜ್ಯಗಳಲ್ಲಿಕಾಂಗ್ರೆಸ್ ಆಳ್ವಿಕೆ ನಡೆಸುತ್ತಿತ್ತು. ಇಂದಿರಾ ಗಾಂಧಿ ಅವರಿಗೆ ನಿಚ್ಚಳ ಬಹುಮತವೂ ಇತ್ತು. ಇದೇ ಕಾರಣದಿಂದಲೋ ಏನೋ, ಮುಖ್ಯಮಂತ್ರಿ ಬದಲಾವಣೆ ಎಂಬುದು ಪಗಡೆಯಾಟದಲ್ಲಿ ದಾಳ ಹಾಕಿದಷ್ಟೇ ಸಲೀಸಾಗಿತ್ತು. ಅಂಥಾ ದಿನಗಳಲ್ಲಿಯೇ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಜೀವ್ ಗಾಂಧಿ ಅವರು ಹೈದ್ರಾಬಾದಿನಲ್ಲಿ ನಡೆದ ಎಐಸಿಸಿ ಅಧಿವೇಶನದಲ್ಲಿಅಂದಿನ ಆಂಧ್ರದ ಮುಖ್ಯಮಂತ್ರಿ ಟಿ.ಅಂಜಯ್ಯ ಅವರನ್ನು ನಿರ್ಲಕ್ಷಿಸಿದ್ದು ದೊಡ್ಡ ಸುದ್ದಿಯಾಯಿತು! ಇದು ಆಂಧ್ರದ ಸ್ವಾಭಿಮಾನಕ್ಕೆ ಉಂಟಾದ ಧಕ್ಕೆ ಎಂದೇ ಅಲ್ಲಿನ ಜನ ಭಾವಿಸಿದರು. ಬಳಿಕ ಕಾಂಗ್ರೆಸ್ ಆಂಧ್ರದಲ್ಲಿಬಹಳ ವರುಷಗಳ ಕಾಲ ನೆಲಕಚ್ಚಿತು. ಕರ್ನಾಟಕದಲ್ಲಿಆಗಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರನ್ನು ರಾಜೀವ್ ಗಾಂಧಿ ವಿಮಾನ ನಿಲ್ದಾಣದಲ್ಲಿಬದಲಿಸಿದರು ಎಂಬ ಆಕ್ರೋಶಕ್ಕೆ ತುತ್ತಾದ ಕಾಂಗ್ರೆಸ್, ಈ ನೆಲದಲ್ಲೂ ಸಂಕಷ್ಟಕ್ಕೆ ಗುರಿಯಾಯಿತು. ಒಕ್ಕೂಟ ವ್ಯವಸ್ಥೆ ಬಲಗೊಳ್ಳಬೇಕು ಎಂದರೆ ಪ್ರಾದೇಶಿಕ ನಾಯಕತ್ವ ಗಟ್ಟಿ ಇರಬೇಕು ಎಂಬ ವಿವೇಕವನ್ನೇ ಕಾಂಗ್ರೆಸ್ ಮರೆತಿತ್ತು. ಅದರ ಫಲ ಉಂಡಿತು.
ವರ್ತಮಾನಕ್ಕೆ ಬರೋಣ. ಕಳೆದ ಆರು ವರುಷಗಳಿಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೂ ಬಹುಮತವಿದೆ. ಬಿಜೆಪಿಯೇತರ ಸರಕಾರಗಳು ಆಪರೇಶನ್ ಕಮಲದ ಮೂಲಕ ರಾತ್ರೋರಾತ್ರಿ ಬದಲಾಗುತ್ತಿವೆ. ಬಿ.ಎಸ್. ಯಡಿಯೂರಪ್ಪ ಅವರಂಥ ಬಲಾಢ್ಯ ಪ್ರಾದೇಶಿಕ ನಾಯಕರು, ದೆಹಲಿಯಿಂದ ಬರುವ ಚೀಟಿ, ಫೋನ್ಕಾಲ್ಗಳಿಗೆ ಕಾದು ಕಾದು ಸುಸ್ತಾಗಬೇಕಾಗಿದೆ. ವ್ಯಕ್ತಿಗಳು ಬದಲಾಗಿದ್ದಾರೆ, ಪಕ್ಷ ಬೇರೆಯಾಗಿದೆ. ಹೈಕಮಾಂಡ್ ಎಂಬ ಪಾಳೇಗಾರಿಕೆ ಜೀವಂತವಾಗಿದೆ ಎನ್ನದೆ ವಿಧಿಯಿಲ್ಲ!
ಕೊನೆಮಾತು: ಭಾರತ ಭಾವನಾತ್ಮಕವಾಗಿ ಒಂದು ದೇಶ. ಆದರೆ ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ, ವ್ಯಾವಹಾರಿಕವಾಗಿ ವೈವಿಧ್ಯ¬ಮಯ ದೇಶ ಎಂಬುದನ್ನು ದಿಲ್ಲಿಯಲ್ಲಿಕುಳಿತು ದೇಶ ಆಳುವವರು ಅರಿಯಲೇಬೇಕು. ಭಾರತದ ವಿಷಯದಲ್ಲಿಬರೀ ಏಕತೆಯಲ್ಲವಿವಿಧತೆಯಲ್ಲಿಏಕತೆ ಎಂಬುದೇ ಸರಿಯಾದ ಆಲೋಚನೆ. ವೈವಿ-ಧ್ಯತೆಯಲ್ಲಿಏಕತೆಯೇ ಇಲ್ಲಿನ ಜೀವಾಳ. ಅನೇಕ ಗಣರಾಜ್ಯಗಳನ್ನು ಒಗ್ಗೂಡಿಸಿ ದೇಶವನ್ನು ಆಳುವವರು, ಎಲ್ಲರಾಜ್ಯಗಳನ್ನು ಸಮಾನ¬ವಾಗಿ ನೋಡಬೇಕು. ಪ್ರತಿ ರಾಜ್ಯ, ಅಲ್ಲಿನ ಭಾಷೆ, ಅದರ ಅನನ್ಯ¬ವಾದ ಸಂಸ್ಕೃತಿಯನ್ನು ಗೌರವಿಸಬೇಕು. ಇದಕ್ಕೆ ನಮ್ಮ ಸಂವಿಧಾನ, ನಾವು ಒಪ್ಪಿಕೊಂಡಿರುವ ಒಕ್ಕೂಟ ವ್ಯವಸ್ಥೆಯೇ ಅಂತಿಮ ಪ್ರಮಾಣ. ಅದು ಎಂದೆಂದಿಗೂ ಆಳುವವರಿಗೆ ನೆನಪಿನಲ್ಲಿರಲಿ.
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top