ಬಡತನದಿಂದ ಬಳಲುತ್ತಿದ್ದ ಭಾರತದ ಗ್ರಾಮೀಣ ಜನತೆ ತುಸುವಾದರೂ ಹಣದ ಮುಖ ನೋಡಲು ಸಾಧ್ಯವಾದದ್ದು ಕ್ಷೀರ ಕ್ರಾಂತಿಯಿಂದ. ಮಹಿಳೆಯರು ಸ್ವಾವಲಂಬಿಗಳಾಗಲು, ಮಕ್ಕಳು ಪೌಷ್ಟಿಕ ಆಹಾರ ಪಡೆಯಲು ಕಾರಣವಾದ ಈ ಕ್ಷೀರ ಕ್ರಾಂತಿ, ಹಸಿರು ಕ್ರಾಂತಿಯ ಜೊತೆಗೇ ಉಲ್ಲೇಖಿಸಬೇಕಾದ್ದು. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ, ನಮ್ಮ ಜನತೆಗೆ ಅಗತ್ಯವಾದಷ್ಟು ಆಹಾರಧಾನ್ಯ ಬೆಳೆಯುತ್ತಿರಲಿಲ್ಲ. ಇದನ್ನು ನಿವಾರಿಸಲು ಬೃಹತ್ ಕೃಷಿಕ್ಷೇತ್ರಗಳ ಬಳಕೆ, ಆಧುನಿಕ ಯಂತ್ರೋಪಕರಣಗಳು, ರಸಗೊಬ್ಬರಗಳು, ಹೈಬ್ರಿಡ್ ತಳಿಗಳು ಇತ್ಯಾದಿಗಳನ್ನು ಬಳಸಿ ‘ಹಸಿರು ಕ್ರಾಂತಿ’ ನಡೆಸಲಾಯಿತು. 60ರ ದಶಕದಲ್ಲಿ ಇದಕ್ಕೆ ವೇಗ ದೊರೆಯಿತು. […]