ಎಸ್ಎಸ್ಎಲ್‌ಸಿ ಪರೀಕ್ಷೆ ಪೂರ್ಣ ಸಕ್ಸೆಸ್

– ಕೋವಿಡ್ ಆತಂಕದ ನಡುವೆಯೂ ಶೇ.90ರಷ್ಟು ವಿದ್ಯಾರ್ಥಿಗಳು ಹಾಜರು.

ವಿಕ ಸುದ್ದಿಲೋಕ ಬೆಂಗಳೂರು.
ಕೋವಿಡ್-19ನಿಂದಾಗಿ ತೀವ್ರ ಆತಂಕದೊಂದಿಗೆ ಜೂ.25ರಿಂದ ಆರಂಭವಾಗಿದ್ದ 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾವುದೇ ಅಹಿತಕರ ಘಟನೆಗಳಿಲ್ಲದೆ ಪೂರ್ಣಗೊಂಡಿತು. ಶುಕ್ರವಾರ ನಡೆದ ತೃತೀಯ ಭಾಷಾ ವಿಷಯಗಳ ಪರೀಕ್ಷೆಗೆ ಶೇ.98.10ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು.
‘‘ಕೊರೊನಾ ವೈರಸ್ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಸವಾಲಾಗಿತ್ತು. ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪುದುಚೆರಿ, ಮಹಾರಾಷ್ಟ್ರಗಳಲ್ಲಿ ಅಲ್ಲಿನ ಸರಕಾರಗಳು ಪರೀಕ್ಷೆ ಮುಂದೂಡಿವೆ. ಆದರೆ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಾವು ನಡೆಸಿದ ಪ್ರಯತ್ನ ಯಶಸ್ವಿಯಾಗಿರುವುದು ಹೆಮ್ಮೆಯ ಸಂಗತಿ,’’ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದರು.
‘‘ಪ್ರತಿ ಪರೀಕ್ಷೆಗೆ ಸರಾಸರಿ ಶೇ.98 ವಿದ್ಯಾರ್ಥಿಗಳು ಹಾಜರಾಗಿ ವ್ಯವಸ್ಥೆಯ ಮೇಲಿನ ಭರವಸೆ ತೋರಿದ್ದಾರೆ. ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರ ಪರೀಕ್ಷೆಗಳನ್ನು ನಡೆಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಬರೆದಿದ್ದಾರೆ. ನಮ್ಮ ಮೇಲೆ ಭರವಸೆಯಿಟ್ಟು, ಪರೀಕ್ಷೆಯ ಯಶಸ್ಸಿಗೆ ಸಹಕರಿಸಿದ ಪೋಷಕರಿಗೂ ಧನ್ಯವಾದ ಅರ್ಪಿಸುತ್ತೇನೆ,’’ ಎಂದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವು ಆಗಸ್ಟ್ ಮೊದಲ ವಾರದಲ್ಲಿ ಪ್ರಕಟವಾಗಲಿದೆ.

ಮುಖ್ಯಮಂತ್ರಿ ಶ್ಲಾಘನೆ
ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಾಕ್ಷ್ಯಚಿತ್ರ ತಯಾರು ಮಾಡಿದ್ದು, ಯಾವುದೇ ಅಹಿತಕರ ಘಟನೆಗಳಿಲ್ಲದಂತೆ ಪರೀಕ್ಷೆ ಪೂರ್ಣಗಳಿಸಿದ ಇಲಾಖೆಯ ಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ‘‘ಸಂಕಷ್ಟದ ಪರಿಸ್ಥಿತಿಯಲ್ಲಿ ಇಡೀ ದೇಶ ನಮ್ಮತ್ತ ತಿರುಗಿ ನೋಡುವಂತೆ ಶಿಕ್ಷಣ ಇಲಾಖೆ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಿ ಸೈ ಎನಿಸಿಕೊಂಡಿದೆ. ದೇಶದ ಇತಿಹಾಸ ಪುಟಗಳಲ್ಲಿ ಸೇರುವಂಥ ಕ್ರಾಂತಿಕಾರಕ ಕೆಲಸವನ್ನು ಶಿಕ್ಷಣ ಸಚಿವ ಸುರೇಶ್‌ ಕುಮಾರ್ ಮಾಡಿ ದಕ್ಷತೆ ಮೆರೆದಿದ್ದಾರೆ,’’ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

32 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು
‘‘ರಾಜ್ಯಾದ್ಯಂತ 32 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ಸೋಂಕು ತಗಲಿದೆ. ಆದರೆ, ಈ ಸೋಂಕು ವಿದ್ಯಾರ್ಥಿಗಳ ಪೋಷಕರಿಂದ ಹರಡಿದೆಯೇ ಹೊರತು ಯಾವುದೇ ಪರೀಕ್ಷಾ ಕೇಂದ್ರದಿಂದ ಅಲ್ಲ. ಇದರಲ್ಲಿ ಕೆಲ ವಿದ್ಯಾರ್ಥಿಗಳು ಒಂದೆರಡು ಪರೀಕ್ಷೆಗಳನ್ನು ಸಹ ಬರೆದಿದ್ದಾರೆ. ಸೋಂಕು ದೃಢಪಡುತ್ತಿದ್ದಂತೆಯೇ ಈ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಿರಾಕರಿಸಲಾಗಿದೆ. ಜತೆಗೆ, ಹೋಮ್ ಕ್ವಾರಂಟೈನ್‌ಗೆ ಒಳಪಟ್ಟ ಒಟ್ಟು 80 ವಿದ್ಯಾರ್ಥಿಗಳಿಗೂ ಪರೀಕ್ಷೆಗೆ ಅವಕಾಶ ಕಲ್ಪಿಸಿಲ್ಲ. ಆದ್ದರಿಂದ ಈ ವಿದ್ಯಾರ್ಥಿಗಳೂ ಸೇರಿದಂತೆ ಕೋವಿಡ್-19 ಹೊರತಾಗಿ ಸಕಾರಣದಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಎಲ್ಲಾ ವಿದ್ಯಾರ್ಥಿಗಳಿಗೂ ಆಗಸ್ಟ್ ತಿಂಗಳಲ್ಲಿ ನಡೆಯಲಿರುವ ಪೂರಕ ಪರೀಕ್ಷೆ ವೇಳೆ ‘ಹೊಸ ವಿದ್ಯಾರ್ಥಿ’ಗಳು ಎಂದು ಪರಿಗಣಿಸಿ ಪರೀಕ್ಷೆಗೆ ಬರೆಯಲು ಅವಕಾಶ ನೀಡಲಾಗುವುದು,’’ ಎಂದು ಸುರೇಶ್‌ ಕುಮಾರ್‌ ತಿಳಿಸಿದರು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top