ಸಾಮಾಜಿಕ ಹೊಣೆಗಾರಿಕೆ ಇರಲಿ: ಸಮುದಾಯ ಕಾಯಿಲೆ ಹರಡುವಿಕೆ ತಡೆಯಬೇಕು

ದಿಲ್ಲಿಯ ನಿಜಾಮುದ್ದೀನ್‌ ತಬ್ಲಿಘ್‌-ಇ-ಜಮಾತ್‌ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಮಂದಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿರುವುದು ದೇಶದ ಆತಂಕಕ್ಕೆ ಕಾರಣವಾಗಿದೆ. ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಳ, ಬಿಹಾರ ಹಾಗೂ ಇತರ ರಾಜ್ಯಗಳಿಗೆ ಸೇರಿದ ಸಾವಿರಾರು ಮಂದಿ ಜಮಾತ್‌ ಸಭೆಯಲ್ಲಿ ಭಾಗವಹಿಸಿ ವಾಪಸಾಗಿ ನಾನಾ ಕಡೆ ಸಂಚರಿಸಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ.
ತಬ್ಲಿಘ್‌-ಇ-ಜಮಾತ್‌ ಸಭೆಯಲ್ಲಿ ಭಾಗವಹಿಸಿ ವಾಪಸಾದ ಕರ್ನಾಟಕದ ಸಿರಾದ ವೃದ್ಧ, ಆಂಧ್ರ ಮತ್ತು ತೆಲಂಗಾಣದ ತಲಾ ಓರ್ವರು ಸೇರಿ ಒಟ್ಟು ಹತ್ತಕ್ಕೂ ಹೆಚ್ಚು ಮಂದಿ ಕೊರೊನಾ ಸೊಂಕಿನಿಂದ ಈಗಾಗಲೇ ಮೃತಪಟ್ಟಿರುವುದು ಸಂಬಂಧಪಟ್ಟ ರಾಜ್ಯಗಳ ಜೊತೆಗೆ ಇತರ ಎಲ್ಲ ರಾಜ್ಯಗಳ ತಲೆಬಿಸಿಯನ್ನು ಹೆಚ್ಚಿಸಿದೆ. ತಬ್ಲಿಘ್‌ ಸಭೆ ನಡೆದಿರುವುದು ಕಳೆದ ಮಾರ್ಚ್‌ 10ರಂದು. ಆ ವೇಳೆ ಭಾರತದಲ್ಲಿ ಲಾಕ್‌ಡೌನ್‌ ಇತ್ಯಾದಿ ಕೊರೊನಾ ತಡೆಗೆ ಕಠಿಣ ಕ್ರಮ ಜಾರಿಗೊಂಡಿರಲಿಲ್ಲ. ಹೀಗಾಗಿ ಆ ಸಭೆಯಲ್ಲಿ ಭಾಗವಹಿಸಿರುವವರು ಸಹಜವಾಗಿ ತಮ್ಮ ತಮ್ಮ ಊರಿಗೆ ವಾಪಸಾಗಿರಲು ಸಾಕು. ಆದರೆ ತಬ್ಲಿಘ್‌ ಸಭೆಯಲ್ಲಿ ಭಾಗವಹಿಸಿರುವವರಿಗೆ ಕೊರೊನಾ ಸೋಂಕು ತಗುಲಿರುವುದು ಮತ್ತು ಇತರರಿಗೆ ಹಬ್ಬುತ್ತಿರುವುದು ಪತ್ತೆಯಾದ ಬಳಿಕವೂ ಆ ಸಭೆಯಲ್ಲಿ ಭಾಗವಹಿಸಿದ ಹಲವರು ಸ್ವಯಂಪ್ರೇರಿತವಾಗಿ ಮಾಹಿತಿ ನೀಡಲು ಮುಂದೆ ಬರದೆ ಇರುವುದು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಆ ಹಿನ್ನೆಲೆಯಲ್ಲಿ ತಬ್ಲಿಘ್‌ ಮುಖ್ಯಸ್ಥರ ವಿರುದ್ಧ ದಿಲ್ಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿ ಕ್ರಮಕ್ಕೆ ಮುಂದಾಗಿದ್ದಾರೆ. ಕರ್ನಾಟಕದ ಗೃಹ ಸಚಿವರೂ ಈ ಸಂಬಂಧ ಕಠಿಣ ನಿಲುವನ್ನು ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಬೆಳವಣಿಗೆಗಳು ಏನು ಎಂಬುದು ಎಲ್ಲರನ್ನು ತುದಿಗಾಲ ಮೇಲೆ ನಿಲ್ಲಿಸಿದೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಒಂದು ಪ್ರಸಂಗವನ್ನು ಪ್ರಸ್ತಾಪಿಸುವುದು ಇಲ್ಲಿ ಸಮಂಜಸ. ದೆಹಲಿಯ ತಬ್ಲಿಘ್‌ ಸಭೆಯಲ್ಲಿ ಪಾಲ್ಗೊಂಡವರು ಕೊರೊನಾ ಸೋಂಕಿನಿಂದ ಮೃತಪಟ್ಟ ಆತಂಕಕಾರಿ ಘಟನೆ ಕುರಿತು ಪತ್ರಿಕೆ ಒಂದು ವರದಿ ಮಾಡಿತ್ತು. ಆಯಾ ಸಮುದಾಯಗಳಲ್ಲಿ ಕೊರೊನಾ ಬಗ್ಗೆ ಸೂಕ್ತ ಜಾಗೃತಿ ಮೂಡಬೇಕೆಂಬುದು ಆ ವರದಿಯ ಮುಖ್ಯ ಆಶಯವಾಗಿತ್ತು. ಆದರೆ ಅದನ್ನು ಕೆಲವರು ಅಪಾರ್ಥ ಮಾಡಿಕೊಂಡ ಪರಿಣಾಮ ವರದಿ ಕುರಿತು ವಿವರಣೆ ನೀಡಬೇಕಾಗಿ ಬಂತು. ಆದರೆ ಈಗ ಆಗಿರುವ ಬೆಳವಣಿಗೆ ಆ ವರದಿಯ ಪ್ರಸ್ತುತತೆ ಹಾಗೂ ಕಾಳಜಿಯ ಮಹತ್ವವನ್ನು ನಿರೂಪಿಸಿದೆ. ಅಪ್ರಿಯವಾದ ಸತ್ಯವನ್ನು ಹೇಳಬಾರದೆಂದು ಶಾಸ್ತ್ರಗಳು, ಪಂಡಿತರು ಹೇಳಿರುವುದು ನಿಜ. ಆದರೆ ಈ ಕಾಲದಲ್ಲಿ ಅಪ್ರಿಯವಾದರೂ ಹೇಳಬೇಕಾದ ಸತ್ಯವನ್ನು ಹೇಳಲೇಬೇಕೆಂಬುದು ಪತ್ರಿಕೆಯ ದೃಢವಾದ ನಿಲುವು, ಮತ್ತೇನೂ ಅಲ್ಲ. ಈಗ ಕಂಡುಬಂದಿರುವ ಸತ್ಯಕ್ಕೆ ಸಮರ್ಥನೆಯ ಅಗತ್ಯವೂ ಇಲ್ಲ.
ಕೊರೊನಾ ಕಾಯಿಲೆ ದೂರವಿಡಲು ನಿರ್ದಿಷ್ಟ ಕಾಲಮಿತಿಯವರೆಗೆ ವ್ಯಕ್ತಿಗಳ ನಡುವೆ ಅಂತರ ಕಾಯ್ದುಕೊಳ್ಳುವುದೇ ಸದ್ಯಕ್ಕಿರುವ ಏಕಮಾತ್ರ ಪರಿಹಾರ ಕ್ರಮ. ಆ ಹಿನ್ನೆಲೆಯಲ್ಲಿ ಸಭೆ ಅಥವಾ ಯಾವುದೇ ತೆರನಾದ ಜನಜಂಗುಳಿ ಸೇರಬಾರದೆಂದು ಸರಕಾರ ಶಾಸನಬದ್ಧ ಆಜ್ಞೆ ಹೊರಡಿಸಿದೆ. ಅದನ್ನು ಉಲ್ಲಂಘಿಸಿ ಧಾರ್ಮಿಕ ಸಭೆ ನಡೆಸುವುದು, ಸಾರ್ವತ್ರಿಕ ಸಾರಿಗೆ ಬಳಸುವುದು, ಆದೇಶ ಉಲ್ಲಂಘಿಸಿ ಓಡಾಡುವುದನ್ನು ಯಾರು ತಾನೆ ಸಹಿಸಿಕೊಳ್ಳಲು ಸಾಧ್ಯ. ಅರಿವಿಲ್ಲದೆ ಸೋಂಕು ತಗುಲಿರುವ ಸಾಧ್ಯತೆ ಇದ್ದರೂ, ಮಾಹಿತಿ ಮುಚ್ಚಿಡುವುದು ಅಪರಾಧವೇ ಸರಿ. ಅದರಿಂದ ಮುಂದೆ ಆಗಬಹುದಾದ ದುಷ್ಪರಿಣಾಮ ಊಹಾತೀತ. ಮನುಷ್ಯ ಮಾಹಿತಿ ಮುಚ್ಚಿಟ್ಟ ಮಾತ್ರಕ್ಕೆ ಸೋಂಕು ಸುಮ್ಮನಿದ್ದೀತೆ? ಈ ಹಿನ್ನೆಲೆಯಲ್ಲಿ ವ್ಯಕ್ತಿ ಯಾವುದೇ ಸಮುದಾಯ, ಪ್ರದೇಶಕ್ಕೆ ಸೇರಿರಲಿ, ತನ್ನ ಸಂಪೂರ್ಣ ಮಾಹಿತಿಯನ್ನು ಸರಕಾರಕ್ಕೆ ನೀಡಿ ಸಾರ್ವತ್ರಿಕ ಹಿತ ಕಾಯುವುದೊಂದೇ ಆದ್ಯತೆಯಾಗಬೇಕಿದೆ. ಈ ವಿಷಯದಲ್ಲಿ ಜಾತಿ, ಮತ, ಪ್ರಾಂತಗಳಿಗಿಂತ ಹೆಚ್ಚಾಗಿ ಸಮಷ್ಠಿಯ ಹಿತವೇ ಪ್ರಧಾನ ಆಗಬೇಕು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top