– ಮೊದಲ ಕಂತಿನ ಐದು ರಫೇಲ್ ಜೆಟ್ ಭಾರತದ ತೆಕ್ಕೆಗೆ
– ತಂಟೆಕೋರ ಚೀನಾ-ಪಾಕ್ ಜೋಡಿ ಎದೆಯಲ್ಲಿ ನಡುಕ.
ಹೊಸದಿಲ್ಲಿ/ಅಂಬಾಲಾ: ಭಾರತೀಯ ರಕ್ಷಣಾ ಸಾಮರ್ಥ್ಯವನ್ನು ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಮಟ್ಟಕ್ಕೆ ಎತ್ತರಿಸಬಲ್ಲ ಯುದ್ಧ ‘ವಿಮಾನಗಳ ರಾಜ’ ರಫೇಲ್ 5 ಜೆಟ್‌ಗಳು ಬುಧವಾರ ಮಧ್ಯಾಹ್ನ ಹರಿಯಾಣದ ಅಂಬಾಲಾ ವಾಯುನೆಲೆಗೆ ಬಂದಿಳಿದಿವೆ. ಒಟ್ಟು 36ರ ಪೈಕಿ ಮೊದಲ ಬ್ಯಾಚ್‌ನ 5 ಯುದ್ಧ ವಿಮಾನಗಳನ್ನು ಫ್ರಾನ್ಸ್ ಸರಕಾರ ಒಪ್ಪಿಸಿದೆ. ಸೋಮವಾರ ಫ್ರಾನ್ಸ್‌ನಿಂದ ಹಾರಿದ್ದ 5 ರಫೇಲ್ ಜೆಟ್‌ಗಳ ಪೈಕಿ ಮೂರು ಸಿಂಗಲ್ ಸೀಟರ್, ಎರಡು 2 ಸೀಟರ್. ಸುಮಾರು ಏಳು ಸಾವಿರ ಕಿ.ಮೀ ಕ್ರಮಿಸಿ ಭಾರತ ತಲುಪಿವೆ. ಭಾರತೀಯ ವಾಯುಪಡೆ (ಐಎಎಫ್) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆಕೆಎಸ್ ಭದೌರಿಯಾ ಅವರು ಅಂಬಾಲಾ ನೆಲೆಯಲ್ಲಿ ಉಪಸ್ಥಿತರಿದ್ದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ರಫೇಲ್ ಹಾರಿಸಿಕೊಂಡು ಬಂದ ಐಎಎಫ್‌ನ ಪೈಲಟ್‌ಗಳಿಗೆ ಬೆನ್ನು ತಟ್ಟಿ ಶುಭಾಶಯ ಹೇಳಿದರು. ರಫೇಲ್ ಜೆಟ್‌ಗಳು ಭಾರತೀಯ ವಾಯುಪ್ರದೇಶ ಪ್ರವೇಶಿಸಿದಾಗಿನಿಂದ ಕ್ಷಣಕ್ಷಣದ ಮಾಹಿತಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಐಎಎಫ್‌ನಿಂದ ಪಡೆದುಕೊಂಡು ಟ್ವಿಟರ್‌ನಲ್ಲಿ ಹಂಚಿಕೊಂಡರು. ಯುದ್ಧವಿಮಾನಗಳು ಸುರಕ್ಷಿತವಾಗಿ ಲ್ಯಾಂಡ್ ಆದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದರು. 2022ರೊಳಗೆ ಬಾಕಿ ಉಳಿದ 31 ರಫೇಲ್ ಜೆಟ್‌ಗಳನ್ನು ಫ್ರಾನ್ಸ್ ಡಸಾಲ್ಟ್ ಏವಿಯೇಷನ್ ಕಂಪನಿ ಭಾರತಕ್ಕೆ ನೀಡಲಿದೆ. 2 ಸುಖೋಯ್‌ನಿಂದ ಸ್ವಾಗತ: ಬುಧವಾರ ಮಧ್ಯಾಹ್ನ 2.09ಕ್ಕೆ ಭಾರತೀಯ ವಾಯುಪ್ರದೇಶ ಪ್ರವೇಶಿಸಿದ ರಫೇಲ್ ಜೆಟ್‌ಗಳನ್ನು ವಾಯುಪಡೆಯ ಸುಖೋಯ್ ಎಸ್‌ಯು 30 ಎಂಕೆಐ ಯುದ್ಧವಿಮಾನಗಳು ಆಗಸಕ್ಕೆ ಚಿಮ್ಮಿ ಎದುರಾಗಿ ಅದ್ಧೂರಿಯಾಗಿ ಬರಮಾಡಿಕೊಂಡವು. ಈ ವಿಡಿಯೊವನ್ನು ಕೂಡ ರಕ್ಷಣಾ ಸಚಿವಾಲಯ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಸಂಭ್ರಮಿಸಿದೆ.
ಜಲಫಿರಂಗಿಯ ಸೆಲ್ಯೂಟ್ ಮಧ್ಯಾಹ್ನ 3.15ರ ಸುಮಾರಿಗೆ ಹರಿಯಾಣದ ಅಂಬಾಲಾದಲ್ಲಿನ ಭಾರತೀಯ ವಾಯುನೆಲೆಗೆ ಬಂದಿಳಿದ ರಫೇಲ್ ಜೆಟ್‌ಗಳಿಗೆ ವಾಟರ್ ಕ್ಯಾನಾನ್ (ಜಲಫಿರಂಗಿ) ಸೆಲ್ಯೂಟ್ ನೀಡಲಾಯಿತು. ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್‌ಕೆಎಸ್ ಭದೌರಿಯಾ ಅವರು ಜೆಟ್‌ಗಳನ್ನು ಮತ್ತು ಪೈಲಟ್‌ಗಳನ್ನು ಬರಮಾಡಿಕೊಂಡರು. 2019ರ ಅಕ್ಟೋಬರ್ 8ರಂದು ಫ್ರಾನ್ಸ್ ಗೆ ತೆರಳಿ ಅಲ್ಲಿಯೇ ಮೊದಲ ರಫೇಲ್ ಯುದ್ಧವಿಮಾನವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸ್ವೀಕರಿಸಿದ್ದರು. ಭಾರತೀಯ ಸಂಪ್ರದಾಯದಂತೆ ತಿಲಕವಿಟ್ಟು ಪೂಜೆ ಕೂಡ ನಡೆಸಿದ್ದರು.
ಫೋಟೊ, ವಿಡಿಯೊ ಚಿತ್ರೀಕರಣಕ್ಕೆ ನಿರ್ಬಂಧ ರಫೇಲ್ ಜೆಟ್‌ಗಳ ಮೊದಲ ಬ್ಯಾಚ್‌ನ 5 ವಿಮಾನಗಳು ಬುಧವಾರ ಮಧ್ಯಾಹ್ನ ಅಂಬಾಲಾ ವಾಯುನೆಲೆಗೆ ಬಂದಿಳಿಯುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಶೋಕ್ ಕುಮಾರ್ ಶರ್ಮಾ ಅವರು ನೆಲೆಯ ಸುತ್ತಲೂ ಜನಜಂಗುಳಿ ಸೇರದಂತೆ ನಿರ್ಬಂಧ ವಿಧಿಸಿದ್ದರು. ಸಾರ್ವಜನಿಕರು ಫೋಟೊ ಮತ್ತು ವಿಡಿಯೊಗಳನ್ನು ಚಿತ್ರೀಕರಿಸಿಕೊಳ್ಳುವುದಕ್ಕೂ ನಿರ್ಬಂಧ ಹೇರಲಾಗಿತ್ತು. ನೆಲೆಯ ಸುತ್ತಲಿನ ಗ್ರಾಮಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು.
ಚೀನಾ, ಪಾಕ್ ಗೆ ಶಾಕ್
ಸಮಯಕ್ಕೆ ಸರಿಯಾದ ದಾಳಿ ಸಾಮರ್ಥ್ಯದ ಉನ್ನತೀಕರಣ ಅಸ್ತ್ರವು ಭಾರತೀಯ ವಾಯುಪಡೆಗೆ ಸಿಕ್ಕಿದೆ. ಇದೊಂದು ಕ್ರಾಂತಿಕಾರಿ ಸಾಮರ್ಥ್ಯ ಹೆಚ್ಚಳ ನಡೆಯಾಗಿದೆ. ಪ್ರಾಂತೀಯ ಸಮಗ್ರತೆಗೆ ಬೆದರಿಕೆ ಒಡ್ಡುತ್ತಿರುವವರು ನಮ್ಮ ಈ ಹೊಸ ಸಾಮರ್ಥ್ಯದಿಂದ ಚಿಂತೆಗೊಳಗಾಗಿವೆ ಎಂದು ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎಲ್ಎಸಿಯಲ್ಲಿ ಚೀನಾ, ಎಲ್ಒಸಿಯಲ್ಲಿ ಪಾಕ್ ಕ್ಯಾತೆಗೆ ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆ. ನಮ್ಮ ಸೇನಾ ಸಾಮರ್ಥ್ಯದ ಬಗ್ಗೆ ಲಘುವಾಗಿ ಅಂದಾಜಿಸುವವರು ಇನ್ನು ಮುಂದೆ ಬಾಯಿ ಮುಚ್ಚಿಕೊಂಡು ಸುಮ್ಮನಿರುವುದು ಒಳಿತು ಎಂದು ಅವರು ಗುಡುಗಿದ್ದಾರೆ. ‘‘ಸಮರ ಹಕ್ಕಿಗಳು ಅಂಬಾಲಾದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿವೆ. ಮಿಲಿಟರಿ ಇತಿಹಾಸದ ಹೊಸ ಪರ್ವದ ಆರಂಭವಿದು. ‘ಉದಯಂ ಅಜಸ್ರಂ’ ಎಂಬ ಧ್ಯೇಯ ಹೊಂದಿರುವ ಗೋಲ್ಡನ್ ಆ್ಯರೋಸ್‌ನ 17ನೇ ಸ್ಕ್ವಾಡ್ರನ್ ದಾಳಿಯಲ್ಲಿ ಮತ್ತಷ್ಟು ವೃತ್ತಿಪರತೆ ಸಾಧಿಸಲು ರಫೇಲ್ ನೆರವಾಗಲಿದೆ,’’ ಎಂದು ರಾಜನಾಥ್ ಹೇಳಿದ್ದಾರೆ.
ರಫೇಲ್ ಹಾರಿ ಬಂದ ದಾರಿ
– ಸೋಮವಾರ ಫ್ರಾನ್ಸ್‌ನಿಂದ ಹೊರಟು ಯುಎಇ ತಲುಪಿದ್ದ ಜೆಟ್‌ಗಳು
– ಬುಧವಾರ ಬೆಳಗ್ಗೆ 11.30ಕ್ಕೆ ಯುಎಇ ಅಲ್ ಧಫ್ರಾ ನೆಲೆಯಿಂದ ಆಗಸಕ್ಕೆ.
– ಭಾರತೀಯ ವಾಯುಪಡೆಯ ಕಮಾಂಡಿಂಗ್ ಆಫೀಸರ್ ಗ್ರೂಪ್ ಕ್ಯಾಪ್ಟನ್ ಹರ್‌ಕಿರತ್ ಸಿಂಗ್ ನೇತೃತ್ವ.
– ಪಶ್ಚಿಮ ಅರಬ್ಬಿ ಸಾಗರದಲ್ಲಿನಿಯೋಜಿತ ಯುದ್ಧನೌಕೆ ಐಎನ್ಎಸ್ ಕೋಲ್ಕೊತಾದೊಂದಿಗ ಸಂಪರ್ಕ ಮಾರ್ಗದರ್ಶನ ಪಡೆದು ಅಂಬಾಲ ಕಡೆಗೆ ಸಂಚಾರ.
– ಮಧ್ಯಾಹ್ನ 3.15ಕ್ಕೆ ಹರಿಯಾಣದ ಅಂಬಾಲಾ ವಾಯುನೆಲೆಯಲ್ಲಿ ಸುರಕ್ಷಿತ ಭೂಸ್ಪರ್ಶ.
ಸಂಸ್ಕೃತದಲ್ಲಿ ಸ್ವಾಗತ
‘‘ರಾಷ್ಟ್ರ ರಕ್ಷಾಸಮಂ ಪುಣ್ಯಂ, ರಾಷ್ಟ್ರ ರಕ್ಷಾಸಮಂ ವ್ರತಂ, ರಾಷ್ಟ್ರ ರಕ್ಷಾಸಮಂ ಯಜ್ಞೋ, ದೃಷ್ಟೋ ನೈವ ಚ ನೈವ ಚ -ನಭಃ ಸ್ಪರ್ಶಂ ದೀಪ್ತಂ.. ಸ್ವಾಗತಂ ’’, ಎಂದು ಸಂಸ್ಕೃತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸಂಜೆ ಟ್ವೀಟ್ ಮಾಡಿ ರಫೇಲ್ ಜೆಟ್‌ಗಳಿಗೆ ಸ್ವಾಗತ ಕೋರಿದರು. ಇದರಲ್ಲಿ ಭಾರತೀಯ ವಾಯುಪಡೆ ಧ್ಯೇಯ ವಾಕ್ಯ ಸೇರ್ಪಡೆಯಾಗಿದ್ದು ವಿಶೇಷ. ವೈಭವದಿಂದ, ಘನತೆಯಿಂದ ಆಕಾಶವನ್ನು ಸ್ಪರ್ಶಿಸಿ ಎಂದು ಹೇಳುವ ಮೂಲಕ ಪ್ರಧಾನಿ ಸಂತಸ ವ್ಯಕ್ತಪಡಿಸಿದ್ದಾರೆ. 4 ವರ್ಷಗಳ ಹಿಂದೆ ಫ್ರಾನ್ಸ್ ಸರಕಾರದೊಂದಿಗೆ 36 ರಫೇಲ್ ಯುದ್ಧವಿಮಾನಗಳ ಪೂರೈಕೆಗೆ ಭಾರತ 59 ಸಾವಿರ ಕೋಟಿ ರೂ. ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿತ್ತು.
ಗೇಮ್ ಚೇಂಜರ್
ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಬಿ.ಎಸ್. ಧನೋವಾ ಅವರು, ರಫೇಲ್, ಸುಖೋಯ್ ಚೀನಾಗೆ ತಕ್ಕ ಉತ್ತರ ನೀಡಲು ಸಾಧ್ಯವಿದೆ. ಚೀನಾದ ಯಾವುದೇ ಕ್ಷಿಪಣಿಗಳನ್ನು ಇವುಗಳು ಉಡಾಯಿಸಬಲ್ಲವು. ಚೀನಾದ ಆಧುನಿಕ ಯುದ್ಧ ವಿಮಾನ ಜೆ-20 ರಫೇಲ್, ಸುಖೋಯ್ ಎದುರು ನಗಣ್ಯ ಎಂದಿದ್ದಾರೆ.
ದೀಪ ಬೆಳಗಿ ಸಂಭ್ರಮ
ರಫೇಲ್ ಯುದ್ಧವಿಮಾನಗಳ ಆಗಮನಕ್ಕೆ ಅಂಬಾಲಾ ನಗರವಾಸಿಗಳು ಸಂಭ್ರಮ ಆಚರಿಸಿದ್ದಾರೆ. ಸ್ಥಳೀಯ ಶಾಸಕ ಆಸೀಮ್ ಗೋಯೆಲ್ ಅವರ ಕರೆಯಂತೆ ಬುಧವಾರ ಸಂಜೆ 7 ರಿಂದ 7.30ರವರೆಗೆ ಪ್ರತಿ ಮನೆಯಲ್ಲೂ ದೀಪ ಬೆಳಗಿಸಿ ಸಂಭ್ರಮಿಸಲಾಯಿತು.
ಭಾರತವನ್ನು ಶಕ್ತಿಶಾಲಿ ಮತ್ತು ಸುಭದ್ರ ರಾಷ್ಟ್ರವಾಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪಕ್ಕೆ ರಫೇಲ್ ಸೇರ್ಪಡೆಯಿಂದ ಪುಷ್ಟಿ ಸಿಕ್ಕಿದೆ. ಭಾರತದ ರಕ್ಷಣಾ ಸಾಮರ್ಥ್ಯಗಳ ಬಲವರ್ಧನೆಗೆ ಮೋದಿ ಸರಕಾರ ಬದ್ಧವಾಗಿದೆ. ನಮ್ಮ ವಾಯುಪಡೆಗೆ ರಫೇಲ್ ನೀಡಿದ್ದಕ್ಕಾಗಿ ಪ್ರಧಾನಿ ಅವರಿಗೆ ಧನ್ಯವಾದ. – ಅಮಿತ್ ಶಾ, ಗೃಹ ಸಚಿವ
‘ಗರ್ಜಿಸುವ ಹಕ್ಕಿ’ ರಫೇಲ್ ಬಂದಿವೆ! ಭಾರತದ ಆಗಸಕ್ಕೆ ಹೊಸ ರಕ್ಷಾ ಕವಚ ದೊರಕಿದೆ. ವಾಯುದಾಳಿಯ ಸಾಮರ್ಥ್ಯ ಇನ್ನಿಲ್ಲದ ಪ್ರಮಾಣದಲ್ಲಿ ಹೆಚ್ಚಲಿದೆ. -ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ
ಶಸ್ತ್ರಗಳಿಂದ ರಕ್ಷಿತ ರಾಷ್ಟ್ರದಲ್ಲಿ ಮಾತ್ರ ಶಾಸ್ತ್ರಗಳ ಚಿಂತನೆ ಸಂಭವ. ನರೇಂದ್ರ ಮೋದಿ ಅವರ ವಿಶೇಷ ಯತ್ನದಿಂದ ಈಗ ರಫೇಲ್ ಭಾರತೀಯ ವಾಯುಪಡೆಯ ಭಾಗವಾಗಿದೆ. ಪ್ರಧಾನಿ ಅವರಿಗೆ ಧನ್ಯವಾದ.-ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ಸಿಎಂ
ರಫೇಲ್‌ಗಾಗಿ ಐಎಎಫ್‌ಗೆ ಅಭಿನಂದನೆ. ಆದರೆ ಕೇಂದ್ರ ಸರಕಾರ ಈ ಪ್ರಶ್ನೆಗಳಿಗೆ ಉತ್ತರಿಸಬೇಕು. 526 ಕೋಟಿ ರೂ. ಬದಲು ಪ್ರತಿ ಜೆಟ್‌ನ ಬೆಲೆ 1670 ಕೋಟಿ ರೂ. ಯಾಕೆ? 126ರ ಬದಲಾಗಿ 36 ಜೆಟ್ ಖರೀದಿಸಿದ್ದು ಯಾಕೆ? ಎಚ್ಎಎಲ್ ಬದಲಾಗಿ ದಿವಾಳಿಯಾದ ಅನಿಲ್‌ಗೆ 30 ಸಾವಿರ ಕೋಟಿ ರೂ. ಗುತ್ತಿಗೆ ನೀಡಿದ್ದು ಏಕೆ?-ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ರಫೇಲ್ ಇಳಿದ ಅಲ್-ಧಫ್ರಾ ನೆಲೆಯಲ್ಲಿ ಕ್ಷಿಪಣಿ ಪರೀಕ್ಷೆ
ತೆಹ್ರಾನ್: ರಫೇಲ್ ಜೆಟ್‌ಗಳು ಭಾರತಕ್ಕೆ ಬರುವ ಮುನ್ನ ತಾತ್ಕಾಲಿಕ ನಿಲ್ದಾಣವಾಗಿ ಬಳಸಿದ್ದ ಯುಎಇಯಲ್ಲಿನ ಅಲ್-ಧಫ್ರಾ ವಾಯುನೆಲೆಯಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಅರೆಸೈನಿಕ ಪಡೆ ನಡೆಸಿದ ಕ್ಷಿಪಣಿ ಪರೀಕ್ಷೆ ಕ್ಷಣಕಾಲ ಆತಂಕದ ವಾತಾವರಣ ನಿರ್ಮಿಸಿತ್ತು. ಖಂಡಾಂತರ ಕ್ಷಿಪಣಿ ಹಾರಿದ ಕೂಡಲೇ ಅಗ್ನಿ ಜ್ವಾಲೆ ಬಹುತೇಕ ಕಡೆಗಳಲ್ಲಿ ಆವರಿಸಿದ್ದರಿಂದ ಅಲ್ಲಿದ್ದಂತಹ ಅಮೆರಿಕದ ಮಿಲಿಟರಿ ಸೆಂಟ್ರಲ್ ಕಮಾಂಡ್ ಸೈನಿಕರು ಆತಂಕಗೊಂಡರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಗಾರ್ಡ್ಸ್‌ನ ಏರೋಸ್ಪೇಸ್ ವಿಭಾಗ ಮುಖ್ಯಸ್ಥ ಜನರಲ್ ಆಮಿರ್ ಅಲಿ ಹಾಜಿಝಾದೆ ತಾಲೀಮಿನ ನಡುವೆ ಎರಡು ಕ್ಷಿಪಣಿಗಳು ಸಿಡಿದು ಹಾರಿದ್ದರಿಂದ ಕೆಲವು ಅವಶೇಷಗಳು ನೆಲೆಯ ಪ್ರದೇಶಗಳಿಗೆ ಅಪ್ಪಳಿಸಿದೆ. ಆದರೆ ಯಾವುದೇ ಹಾನಿಯಾಗಿಲ್ಲ ಎಂದಿದ್ದಾರೆ.