ಕೊರೊನಾ ವೈರಸ್ ಹರಡುವಿಕೆ ಕಾರಣದಿಂದಾಗಿ ಇಡೀ ದೇಶವೇ ತುರ್ತು ಸ್ಥಿತಿಗೆ ಸಿಲುಕಿದೆ. ಈ ಸಂಕಟದ ಸಮಯದಲ್ಲಿ ಜಾತಿ, ಧರ್ಮ, ನಂಬಿಕೆಗಳು ಮೇಲುಗೈ ಸಾಧಿಸಬಾರದು. ಮಂದಿರ, ಮಸೀದಿ, ಚರ್ಚುಗಳ ಚಟುವಟಿಕೆಗಳು ಸ್ತಬ್ಧವಾಗಿ, ಧಾರ್ಮಿಕ ಆಚರಣೆಗಳೆಲ್ಲ ಹೊಸ್ತಿಲೊಳಗೆ ಸೀಮಿತವಾಗಿವೆ. ಕೊರೊನಾ ಸೇನಾನಿಗಳು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಇದು ಇಡೀ ಭಾರತ ಕೊರೊನಾ ಮಹಾಮಾರಿ ವಿರುದ್ಧ ತೋರುತ್ತಿರುವ ಒಗ್ಗಟ್ಟಿನ ಝಲಕ್. ಆದರೆ, ಭಾನುವಾರ ರಾತ್ರಿ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಘಟನೆ ಒಗ್ಗಟ್ಟಿನ ಹೋರಾಟಕ್ಕೆ ಭಂಗ ತರಲು ಕಾರಣವಾಗಿದೆ.
ಕೊರೊನಾ ವೈರಸ್ ಹರಡದಂತೆ ಹಗಲಿರುಳೆನ್ನದೇ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ, ಪೊಲೀಸರ ಮೇಲೆ ಹಲ್ಲೆ ನಡೆಯುತ್ತಿರುವ ಘಟನೆಗಳು ಅಕ್ಷಮ್ಯ. ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಸಾದಿಕ್ ನಗರದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಇಂಥದ್ದೇ ಹಲ್ಲೆ ನಡೆದಿತ್ತು. ಅದಾದ ಬಳಿಕ ಬೆಳಗಾವಿ, ಹಾವೇರಿ, ಹುಬ್ಬಳ್ಳಿ, ಬೀದರ್, ಮಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಇದೇ ರೀತಿಯ ಘಟನೆಗಳು ವರದಿಯಾಗಿದ್ದವು. ಆದರೆ, ಬೆಂಗಳೂರಿನ ಪಾದರಾಯನಪುರದ ಘಟನೆಯ ಸಂಘಟಿತ ಅಪರಾಧಕ್ಕೆ ಸಮನಾಗಿದ್ದು, ಇದೊಂದು ಆಕಸ್ಮಿಕ ಘಟನೆ ಎಂದಷ್ಟೇ ಭಾವಿಸುವ ಹಾಗಿಲ್ಲ.
ಘಟನೆಗೆ ಕಾರಣವಾದವರು ಅನಕ್ಷರಸ್ಥರು, ತಿಳಿವಳಿಕೆ ಇಲ್ಲದವರು ಎಂಬ ಸಬೂಬುಗಳ ಮೂಲಕ ಸಮರ್ಥಿಸಿಕೊಳ್ಳುವ ಕೆಲಸಗಳು ಕೂಡ ನಡೆಯುತ್ತಿವೆ. ಈ ಪ್ರವೃತ್ತಿ ಕೂಡ ಈಗ ಒಪ್ಪುವಂಥದ್ದಲ್ಲ. ಏಕೆಂದರೆ, ಈಗಿನ ಪರಿಸ್ಥಿತಿಯಲ್ಲಿ ಯಾವುದೇ ಸಬೂಬು, ಸಮರ್ಥನೆಗಳಿಗೆ ಅವಕಾಶವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಆಯಾ ಸಮುದಾಯದ ಹಿರಿಯರು, ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು ತಮ್ಮ ಸಮುದಾಯಗಳಿಗೆ ತಿಳಿ ಹೇಳುವ ಕೆಲಸವನ್ನು ಮಾಡಬೇಕು. ಇದು ಅವರು ಹೊಣೆಗಾರಿಕೆಯೂ ಹೌದು. ಯಾಕೆಂದರೆ, ಈ ಪ್ರಕ್ರಿಯೆಯಲ್ಲಿ ಆಯಾ ಸಮುದಾಯದ ಜೊತೆಗೆ ಇತರರ ಹಿತವೂ ಅಡಗಿದ್ದು, ಯಾವುದೇ ನೆಪಗಳನ್ನು ಮುಂದಿಟ್ಟುಕೊಂಡು ಸಮರ್ಥನೆಗಿಳಿಯುವ ಕೆಲಸವನ್ನು ಯಾರೂ ಮಾಡಬಾರದು. ಇಷ್ಟಾಗಿಯೂ ಪಾದರಾಯನಪುರದಂಥ ಘಟನೆಗಳು ಪುನರಾವರ್ತಿತಗೊಳ್ಳಲಾರಂಭಿಸಿದರೆ ಅವುಗಳನ್ನು ತಡೆಯಲು ಇರುವ ಉಳಿದ ಮಾರ್ಗಗಳ ಶೋಧನೆಯನ್ನು ಸರಕಾರ ಅನಿವಾರ್ಯವಾಗಿ ಮಾಡಬೇಕಾಗಲಿದೆ. ಈ ನಿಟ್ಟಿನಲ್ಲಿ ಸರಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ ಕೂಡ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಖಡಕ್ ಎಚ್ಚರಿಕೆ ಮುಂದಿನ ನಡೆಯ ದಿಕ್ಸೂಚಿಯೇ ಸರಿ.
ಸಾಮಾನ್ಯವಾಗಿ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದಂಥ ಘಟನೆಗಳನ್ನು ಸಹಾನುಭೂತಿಯಿಂದ ಬಹುದೊಡ್ಡ ವರ್ಗ ಭಾರತದಲ್ಲಿದೆ. ಆದರೆ ಉದ್ದೇಶಪೂರ್ವಕವಾಗಿ ಇದೇ ಪ್ರವೃತ್ತಿ ಮುಂದುವರೆದರೆ ಯಾರು ತಾನೆ ಸಹಾನುಭೂತಿ ತೊರಿಯಾರು? ಸಂಬಂಧಪಟ್ಟವರು ಈ ಸಂಗತಿಯನ್ನು ಗಮನದಲ್ಲಿಟ್ಟುಕೊಂಡು ವ್ಯವಹರಿಸಬೇಕು. ಈಗಲೂ ಕಾಲ ಮಿಂಚಿಲ್ಲ. ಕೊರೊನಾ ವಾರಿಯರ್ಸ್ ವಿರುದ್ಧ ನಡೆಯುತ್ತಿರುವ ಹಲ್ಲೆ, ದೌರ್ಜನ್ಯಗಳನ್ನು ತಡೆಗಟ್ಟಲು ಒಂದು ದೇಶದ ಪ್ರಜೆಗಳಾಗಿ ಎಲ್ಲರೂ ಮುಂದಾಗಬೇಕಿದೆ. ಇದು ಯಾವುದೇ ಒಂದು ವರ್ಗ ಅಥವಾ ಸಮುದಾಯಕ್ಕೆ ಸಂಬಂಧಿಸಿದ ವಿಷಯವಲ್ಲ. ಇಡೀ ರಾಜ್ಯ, ದೇಶದ ಭವಿಷ್ಯಕ್ಕೆ ಸಂಬಂಧಿಸಿದ ವಿಚಾರ. ಕೊರೊನಾ ವೈರಸ್ ಸಾಂಕ್ರಾಮಿಕವಾಗಿ ಹಬ್ಬುವುದನ್ನು ತಡೆಯುವ ಗುರಿಯೊಂದೇ ನಮಗೆ ಈಗ ಪ್ರಮುಖವಾಗಬೇಕಿದೆ; ಉಳಿದೆಲ್ಲವೂ ಗೌಣ. ಹಾಗಾಗಿ, ಪಾದರಾಯನಪುರದಂಥ ಘಟನೆಗಳಿಗೆ ಕಾರಣರಾದವರು ಮತ್ತು ಅವುಗಳ ಹಿಂದೆ ಕೆಲಸ ಮಾಡುವ ವ್ಯಕ್ತಿಗಳಿಗೆ ಯಾವುದೇ ಅನುಕಂಪ ತೋರದೆ ಕಠಿಣ ಶಿಕ್ಷೆಗೆ ಗುರಿಪಡಿಸುವ ಕೆಲಸಕ್ಕೆ ಏಕಂಠದಿಂದ ಆಗ್ರಹಿಸಬೇಕಿದೆ. ಆಯಾ ಸಮುದಾಯದ ಗೌರವ, ಹಿತ ಕಾಯುವ ಹೊಣೆಯನ್ನು ಆಯಾ ಸಮುದಾಯಗಳೇ ತೆಗೆದುಕೊಳ್ಳಬೇಕಿದೆ. ಅಷ್ಟಾಗಿಯೂ ಪರಿಸ್ಥಿತಿ ಕೈ ಮೀರುತ್ತಿದ್ದರೆ ಸರಕಾರ ಕಠಿಣ ದಂಡನೆಯ ಮಾರ್ಗ ಅನುಸರಿಸಲು ಹಿಂದೆಮುಂದೆ ನೋಡಬಾರದು.