ಉದ್ಯೋಗ ನಷ್ಟ ಬದುಕು ಕಷ್ಟ

ಕೊರೊನಾ ವೈರಸ್‌ನಿಂದ ಹೆಚ್ಚಿನ ಎಲ್ಲ ದೇಶಗಳು ಲಾಕ್‌ಡೌನ್, ಭಾಗಶಃ ಲಾಕ್‌ಡೌನ್ ಘೋಷಿಸಿವೆ. ಇದರಿಂದಾಗಿ ಅವಶ್ಯಕ ಸೇವೆ ಹೊರತುಪಡಿಸಿ ಉಳಿದ ಎಲ್ಲ ಉದ್ಯಮಗಳು ಮುಚ್ಚಿದ್ದು, ಇದರಿಂದ ಕೋಟ್ಯಂತರ ಮಂದಿ ಭವಿಷ್ಯದ ಕಡೆಗೆ ಶೂನ್ಯ ದೃಷ್ಟಿ ಬೀರುವಂತಾಗಿದೆ. ಯಾವ ದೇಶದಲ್ಲಿ ಏನು ಪರಿಣಾಮವಾಗಿದೆ? ಇಲ್ಲೊಂದು ನೋಟವಿದೆ.

ಭಾರತದ ಸ್ಥಿತಿಗತಿ ಗಂಭೀರ
ಭಾರತದಲ್ಲಿ ಸಂಸತ್ ಸದಸ್ಯರ ವಾರ್ಷಿಕ ವೇತನ, ಭತ್ಯೆ ಹಾಗೂ ಪಿಂಚಣಿಯಲ್ಲಿ ಶೇ.30ರಷ್ಟು ಕಡಿತ ಮಾಡುವ ನಿರ್ದೇಶನವನ್ನು ಸಚಿವ ಪ್ರಕಾಶ್ ಜಾವಡೇಕರ್ ನೀಡಿದ್ದಾರೆ. 2010-21 ಹಾಗೂ 2021-22ರಲ್ಲಿ ಎಂಪಿಗಳು ಬಳಸಿಕೊಳ್ಳಬೇಕಿದ್ದ ಸ್ಥಳೀಯಾಭಿವೃದ್ಧಿ ನಿಧಿಯ 7900 ಕೋಟಿ ರೂ.ಗಳನ್ನು ಸಮಗ್ರ ನಿಧಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಲಾಕ್‌ಡೌನ್ ಅನ್ನು ಕಾರಣವಾಗಿ ನೀಡಿ ಯಾವುದೇ ಕಂಪನಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವಂತಿಲ್ಲ ಎಂದು ಕೇಂದ್ರ ಸರಕಾರ ನಿರ್ದೇಶನ ನೀಡಿದೆ. ಹೀಗಾಗಿ ಯಾವ ಸಂಸ್ಥೆಯೂ ಉದ್ಯೋಗಿಗಳಿಗೆ ನೇರವಾಗಿ ಲೇಆಫ್ ಮಾಡುತ್ತಿಲ್ಲ. ಆದರೆ ಎಲ್ಲ ಉದ್ಯಮಗಳೂ ಬಾಗಿಲು ಹಾಕಿವೆ. ಉದ್ಯೋಗಿಗಳನ್ನು ನಿಭಾಯಿಸಲು ಕೆಲವು ಬಳಸು ವಿಧಾನಗಳನ್ನು ಕಂಡುಕೊಂಡಿವೆ. ಉದಾಹರಣೆಗೆ, ಲಾಕ್‌ಡೌನ್‌ನಿಂದ ಆಗುತ್ತಿರುವ ನಷ್ಟವನ್ನು ಸರಿದೂಗಿಸಲು, ನೌಕರರ ಸಂಬಳದ ಸ್ಲಾಬ್‌ಗೆ ಅನುಸರಿಸಿ, ಶೇ.10ರಿಂದ ಶೇ.75ರವರೆಗೂ ಸಂಬಳ ಕಡಿತ ಮಾಡಲಾರಂಭಿಸಿವೆ. ಕೆಲವರಿಗೆ ಸಂಬಳರಹಿತ, ಅನಿರ್ದಿಷ್ಟಾವಧಿ ರಜೆ ನೀಡಿ ಕಳುಹಿಸಿವೆ.
ಭಾರತದಲ್ಲಿ ಕೊರೊನಾ ಆಗಮಿಸುವ ಮುನ್ನವೇ ಆಟೊಮೊಬೈಲ್ ಇಂಡಸ್ಟ್ರಿ ಏಟು ತಿನ್ನಲಾರಂಭಿಸಿತ್ತು. ಆಗಲೇ 1 ಲಕ್ಷ ಉದ್ಯೋಗಿಗಳನ್ನು ಕೆಲಸ ಬಿಡಿಸಿದ್ದವು. ಕೊರೊನಾ ಲಾಕ್‌ಡೌನ್ ಬಳಿಕ ಮಾರಾಟ ಹೇಗೂ ಇಲ್ಲ; ಉತ್ಪಾದನೆಯೂ ನಿಂತುಹೋಗಿದೆ. ದೊಡ್ಡ ವಾಹನ ತಯಾರಿಕೆ ಕಂಪನಿಗಳು ತಮ್ಮ ಫ್ಯಾಕ್ಟರಿಗಳನ್ನು ಮುಚ್ಚಿವೆ. ಫ್ಯಾಕ್ಟರಿಗಳು ತೆರೆದ ಮೇಲೂ ತಕ್ಷಣವೇ ವಾಹನಗಳಿಗೆ ಬೇಡಿಕೆ ಹುಟ್ಟುವುದು ಅನುಮಾನ. ಹೀಗಾಗಿ ಉದ್ಯೋಗಿಗಳ ಭವಿಷ್ಯ ಡೋಲಾಯಮಾನ. ಒಂದು ಲೆಕ್ಕಾಚಾರದಂತೆ ಈಗಲೇ ವಾಹನೋದ್ಯಮ 18,000 ಕೋಟಿ ರೂ. ನಷ್ಟ ಅನುಭವಿಸಿದೆ.

ಇನ್ನು ನಾಗರಿಕ ವಿಮಾನಯಾನ ಉದ್ಯಮ ತುಂಬಾ ಸಂಕಷ್ಟದಲ್ಲಿದೆ. ಎಲ್ಲ ವಾಯುಯಾನಗಳೂ ನಿಂತಿವೆ. ಅಗ್ಗದ ದರದ ಸೇವೆ ಒದಗಿಸುತ್ತಿದ್ದ ಸ್ಪೈಸ್‌ಜೆಟ್ ಕಂಪನಿ ಎಲ್ಲ ನೌಕರರಿಗೆ ಶೇ.30 ಸಂಬಳಕ್ಕೆ ಕತ್ತರಿ ಹಾಕಿದೆ ಎಂದು ಉದ್ಯೋಗಿಗಳು ದೂರಿದ್ದಾರೆ. ಕೆಲವು ಸ್ಟಾರ್ಟಪ್‌ಗಳು ತಮ್ಮ ನೌಕರರಿಗೆ, ಉದ್ಯಮ ಮುಂದುವರಿಯಬೇಕಿದ್ದರೆ ಈಗ ಪ್ರತಿಯೊಬ್ಬರೂ ತಮ್ಮ ಸಂಬಳದಲ್ಲಿ ಗಣನೀಯ ಕಡಿತ ಮಾಡಿಕೊಂಡು ಸಹಕರಿಸುವುದು ಅಗತ್ಯ ಎಂದು ಹೇಳಿವೆ.

ದೇಶದ ಇನ್ನೊಂದು ಪ್ರಮುಖ ವಲಯವಾಗಿರುವ ಐಟಿಯಲ್ಲೂ ತಲ್ಲಣ ಎದ್ದಿದೆ. ಇದಕ್ಕೆ ಕಾರಣ, ಇಲ್ಲಿನ ಹಲವು ಕಂಪನಿಗಳು ಅಮೆರಿಕ ಮತ್ತು ಯುರೋಪ್‌ನ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿರುವುದು. ಆದರೆ ಈ ದೇಶಗಳಲ್ಲೂ ಉದ್ಯಮ ನೆಲಕಚ್ಚಿದ್ದು, ಅಲ್ಲೂ ಕೂಡ ಐಟಿ ಕಂಪನಿಗಳು ಕೆಲಸ ಸ್ಥಗಿತಗೊಳಿಸುವ ಭೀತಿ ಎದುರಿಸುತ್ತಿವೆ. ಕೇಂದ್ರ ಸರಕಾರ, ಐಟಿ ಹಾಗೂ ಸಂಬಂಧಿತ ಕೆಲವು ಸೇವೆಗಳನ್ನು ಅವಶ್ಯಕ ಸೇವೆ ಎಂದು ಪರಿಗಣಿಸಿ, ಕಚೇರಿಯಿಂದ ಕೆಲಸ ಮಾಡಲು ಅನುಮತಿ ನೀಡಿತ್ತು. ಆದರೆ ಕೋವಿಡ್ ಹರಡುವಿಕೆಯ ಭೀತಿಯಿಂದ ಕಂಪನಿಗಳು ವರ್ಕ್ ಫ್ರಂ ಹೋಮ್ ನೀಡಿದ್ದು, ಇದರಲ್ಲಿ ಉತ್ಪಾದಕತೆಯ ಕೊರತೆ ಎದುರಿಸುತ್ತಿವೆ. ಈ ಸಂದರ್ಭ ಉದ್ಯೋಗಿಗಳ ಅನಿವಾರ‌್ಯತೆಯನ್ನು ನಿರ್ಧರಿಸುವ ಸಂದರ್ಭವೂ ಆಗಲಿದ್ದು, ಇನ್ನೊಂದು ತಿಂಗಳಲ್ಲಿ ನಿಜವಾದ ಲೇಆಫ್‌ಗಳು ಆರಂಭವಾಗಲಿವೆ. ಒಟ್ಟಾರೆ ಭಾರತದಲ್ಲಿ ಎಷ್ಟು ಉದ್ಯೋಗಗಳು ನಷ್ಟವಾಗಬಹುದು ಎಂದು ಊಹಿಸುವುದು ಯಾರಿಂದಲೂ ಸಾಧ್ಯವಿಲ್ಲ.

ಚೀನಾದ ಉದ್ಯಮ ಕುಸಿತ
ಮೊದಲ ಬಾರಿಗೆ ಕೊರೊನಾ ಕಂಡುಬಂದ ಚೀನಾದಲ್ಲಿ ಕಳೆದ ಜನವರಿ- ಫೆಬ್ರವರಿಯಲ್ಲಿ ಉದ್ಯಮ ಉತ್ಪಾದನೆ 13.5% ಕುಸಿತ ಕಂಡಿದೆ. ಕಾರು ಉತ್ಪಾದನೆ ಹಾಗೂ ಬೇಡಿಕೆ 86%ದಷ್ಟು ಕುಸಿದಿದೆ. ವಾಹನ ಉತ್ಪಾದನೆ ಹಾಗೂ ಐಟಿ ವಲಯದ ಮುಂಚೂಣಿಯಲ್ಲಿದ್ದ ವುಹಾನ್ ನಗರದಲ್ಲಿ ಸುಮಾರು ಎರಡು ತಿಂಗಳ ಕಾಲ ಸಂಪೂರ್ಣ ಲಾಕ್‌ಡೌನ್ ಮಾಡಿದ ಪರಿಣಾಮ, ಈಗ ಎಲ್ಲ ಉದ್ಯಮಗಳನ್ನೂ ಮೊದಲಿನಿಂದ ಆರಂಭಿಸಬೇಕಿದೆ. ಕೊರೊನಾಗೂ ಮುನ್ನ ಚೀನಾದ ಈ ವರ್ಷದ ಜಿಡಿಪಿ 6% ಇರಬಹುದು ಎಂದು ಲೆಕ್ಕಿಸಲಾಗಿತ್ತು. ಈಗ ಅದು 5%ಕ್ಕಿಂತಲೂ ಕೆಳಗೆ ಇಳಿಯುವ ಸಾಧ್ಯತೆ ಇದೆ. ಎಂದರೆ ಉದ್ಯೋಗದಲ್ಲೂ ಸಾಕಷ್ಟು ಕಡಿತ ಆಗಲಿದೆ.

ತೈಲ ರಾಷ್ಟ್ರಗಳಲ್ಲಿ ಆತಂಕ
ಪೆಟ್ರೋಲಿಯಂ ತೈಲದಿಂದ ತಮ್ಮ ಹಣಕಾಸನ್ನು ಕಂಡುಕೊಳ್ಳುವ ಸೌದಿ ಅರೇಬಿಯಾ, ಇರಾನ್, ಕುವೈತ್, ಇರಾಕ್ ಮುಂತಾದ ಗಲ್ಫ್ ರಾಷ್ಟ್ರಗಳಲ್ಲಿ ಕೂಡ ಆತಂಕದ ಕಾರ್ಮೋಡ ಕವಿದಿದೆ. ಅಲ್ಲಿ ಪೆಟ್ರೋಲಿಯಂ ಇಂಡಸ್ಟ್ರಿಗಳಲ್ಲಿ ಲಕ್ಷಾಂತರ ಭಾರತೀಯರು ಸೇರಿದಂತೆ ಇತರ ದೇಶಗಳವರು ದುಡಿಯುತ್ತಿದ್ದಾರೆ. ರಷ್ಯಾದ ಜೊತೆಗೆ ಜಿದ್ದಿಗೆ ಬಿದ್ದ ಸೌದಿ ಅರೇಬಿಯಾ ಕಳೆದ ತಿಂಗಳು ಕಚ್ಚಾ ತೈಲದ ಬೆಲೆಯನ್ನು ಬ್ಯಾರಲ್‌ಗೆ 25 ಡಾಲರ್‌ಗೆ ಇಳಿಸಿತ್ತು. ಪ್ರಸ್ತುತ ಎಲ್ಲ ದೇಶಗಳಲ್ಲಿ ಲಾಕ್‌ಡೌನ್ ಪರಿಣಾಮ ತೈಲದ ಬೇಡಿಕೆ ಕುಸಿದಿದೆ.

ಅಮೆರಿಕದಲ್ಲಿ 7 ಲಕ್ಷ ಉದ್ಯೋಗ ನಷ್ಟ
ಜಗತ್ತಿನ ದೊಡ್ಡಣ್ಣನಂತೆ ಮೆರೆಯುತ್ತಿದ್ದ ಅಮೆರಿಕದ ಪರಿಸ್ಥಿತಿ ಗಂಭೀರವಾಗಿದೆ. ಏಪ್ರಿಲ್- ಜೂನ್ ಅವಧಿಯಲ್ಲಿ ದೇಶದ ಉತ್ಪಾದಕತೆ ಶೇ.24ರಷ್ಟು ಕುಸಿಯಬಹುದು ಎಂದು ತಜ್ಞರು ಹೇಳಿದ್ದಾರೆ. ಇದಕ್ಕೆ ಹೋಲಿಸಬಹುದಾದರೆ, 2008ರಲ್ಲಿ ದೊಡ್ಡ ಆರ್ಥಿಕ ಕುಸಿತವಾಗಿದ್ದು, ಆಗ ಶೇ.8.4ರಷ್ಟು ಕುಸಿತ ದಾಖಲಿಸಿತ್ತು. ಇಲ್ಲಿ ಮಾರ್ಚ್‌ನ ಮೊದಲ ಎರಡು ವಾರಗಳಲ್ಲಿ 7 ಲಕ್ಷ ಉದ್ಯೋಗಗಳು ನಷ್ಟವಾಗಿವೆ. ನಿರುದ್ಯೋಗ ದರ ಶೇ.3.5ರಿಂದ ಶೇ.4.4ಕ್ಕೆ ಏರಿಕೆಯಾಗಿದೆ ಎಂದು ಕಾರ್ಮಿಕ ಇಲಾಖೆ ಶುಕ್ರವಾರ ಹೇಳಿದೆ. 2009ರ ಮಾರ್ಚ್‌ನಿಂದ ಈಚೆಗೆ ಅಮೆರಿಕದ ಉದ್ಯೋಗ ವಲಯದಲ್ಲಿ ಈಗಿನದು ಅತ್ಯಂತ ಕಳಪೆ ಪರಿಸ್ಥಿತಿಯಾಗಿದೆ. 2008ರಲ್ಲಿ ಆರ್ಥಿಕ ಬಿಕ್ಕಟ್ಟು ಬಿಗಡಾಯಿಸಿ ಆ ವರ್ಷದ ಮೇನಲ್ಲಿ 80 ಲಕ್ಷ ಉದ್ಯೋಗಗಳು ನಷ್ಟವಾಗಿದ್ದವು. ಈಗ ಕೊರೊನಾ ವೈರಸ್ ಪ್ರಭಾವದಿಂದ ಜಾಗತಿಕ ಹಣಕಾಸು ಸ್ಥಿತಿ ಬಿಗಡಾಯಿಸಿದ್ದು, ಕಳೆದ 45 ವರ್ಷಗಳಲ್ಲಿಯೇ ಉದ್ಯೋಗ ದರ ತೀವ್ರ ಕುಸಿದಿದೆ. ರೆಸ್ಟೋರೆಂಟ್, ಬಾರ್, ರೀಟೇಲರ್ ವಲಯದಲ್ಲಿ ಹೆಚ್ಚಿನ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಮಾರ್ಚ್‌ನ ಮೊದಲ ಎರಡು ವಾರಗಳಲ್ಲಿಯೇ ಹೆಚ್ಚಿನ ಉದ್ಯೋಗ ನಷ್ಟವಾಗಿದ್ದು, ಏಪ್ರಿಲ್ ತಿಂಗಳಾಂತ್ಯದ ಹೊತ್ತಿಗೆ ಇಪ್ಪತ್ತು ಲಕ್ಷಕ್ಕೂ ಅಧಿಕ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ವೈಟ್ ಕಾಲರ್ ಉದ್ಯೋಗಗಳೂ ಸುರಕ್ಷಿತವಾಗಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಉದ್ಯೋಗ ಕಳೆದುಕೊಂಡವರಿಗೆ ಊಟ ನೀಡುವ ಪರಿಹಾರ ಕೇಂದ್ರಗಳನ್ನು ಅಮೆರಿಕದ ಹಲವು ಕಡೆ ತೆರೆಯಲಾಗಿದೆ. ಇವರಿಗೆ ಮಾಸಿಕ ಎರಡು ಸಾವಿರ ಡಾಲರ್ ನೀಡುವ ಪ್ರಸ್ತಾಪವನ್ನು ಸಂಸತ್ತು ಮಂಡಿಸಿದೆ.

ಯುರೋಪ್‌ನ ಶೀತಲ ದಿನಗಳು
ಈಗ ಬೇಸಿಗೆ ಆಗಿದ್ದರೂ ಯುರೋಪ್‌ನ ಇಟಲಿ, ಸ್ಪೇನ್, ಫ್ರಾನ್ಸ್, ಜರ್ಮನಿ, ಬ್ರಿಟನ್ ಮುಂತಾದ ದೇಶಗಳಲ್ಲಿ ಒಂದು ಬಗೆಯ ಶೀತಲ ಭಯ, ವಿಷಣ್ಣತೆ ಕವಿದಿದೆ. ಸ್ಪೇನ್ ಹಾಗೂ ಇಟಲಿಗಳಲ್ಲಿ ಕೋವಿಡ್ ಸಾವುಗಳು ಹತ್ತು ಸಾವಿರ ಮೀರಿದ್ದು, ಎಲ್ಲ ಬಗೆಯ ಸಾರ್ವಜನಿಕ ಜೀವನ ಸ್ತಬ್ಧವಾಗಿದೆ. ಇದು 2008ರಲ್ಲಿ ಅನುಭವಿಸಿದ ಆರ್ಥಿಕ ಕುಸಿತಕ್ಕಿಂತಲೂ ಭೀಕರವಾಗಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ನಿರ್ಮಾಣ ಮತ್ತು ಸೇವಾ ವಲಯದ ಪಿಎಂಐ ಸೂಚ್ಯಂಕ 50ಕ್ಕಿಂತ ಕೆಳಗಿಳಿದರೆ ಅದು ದುರಂತಮಯ ಎಂದು ಅಂದಾಜಿಸಲಾಗುತ್ತದೆ. ಈಗ ಕೆಲವು ದೇಶಗಳು ಸೂಚ್ಯಂಕ 30ಕ್ಕಿಂತಲೂ ಕೆಳಗಿಳಿದಿದ್ದು, ಅದು ಕಳೆದ 22 ವರ್ಷಗಳಲ್ಲಿ ಕಂಡು ಕೇಳರಿಯದ್ದು. ಸುಮಾರು 25% ಮಂದಿ ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಜರ್ಮನಿಯ ಹಣಕಾಸು ಸಚಿವ ಥಾಮಸ್ ಶೆಫರ್ ಅವರು ಕೊರೊನಾದಿಂದ ಶೋಚನೀಯ ಸ್ಥಿತಿಗಳಿಯಲಿರುವ ದೇಶದ ಆರ್ಥಿಕ ಭವಿಷ್ಯವನ್ನು ನೆನೆದು ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top