ಇವ್ರು ಹೊಟ್ಟೆಗೇನ್ ತಿಂತಾರೆ ಅಂತ ಕೇಳುವ ಕಾಲ ಬಾರದಿರಲಿ…

ಬೆಲೆ ಏರಿಕೆಯು ಬಡ ಮತ್ತು ಮಧ್ಯಮ ವರ್ಗದವರ ಜಂಘಾಬಲವನ್ನೇ ಉಡುಗಿಸಿಬಿಡುವಂಥದ್ದು. ಅಕ್ಕಿ, ಬೇಳೆಕಾಳು, ತರಕಾರಿ, ಹಣ್ಣುಹಂಪಲು ಬೆಲೆ ಎರಡು-ಮೂರು ಪಟ್ಟು ಏರಿಕೆಯಾದರೆ ಬಡಜನರು ಅದ್ಹೇಗೆ ಬದುಕಬಲ್ಲರು ಎಂಬುದನ್ನು ಸರ್ಕಾರ ನಡೆಸುವವರು ಕಿಂಚಿತ್ತಾದರೂ ಯೋಚಿಸಬೇಡವೇ?

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

‘ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ’ ಎನ್ನುವುದಾದರೆ, ಕೇವಲ ಭಾಷಣ, ಬಾಯಿಮಾತು ಮತ್ತು ಘೊಷಣೆಗಳಿಂದ ದೇಶದ ಜನರ ಹೊಟ್ಟೆ ತುಂಬುವುದಿಲ್ಲ ಎಂಬುದನ್ನೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೂತ್ರ ಹಿಡಿದಿರುವವರು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ತಾನೆ?! ನಾನಿಲ್ಲಿ ಹೇಳಲು ಹೊರಟಿರುವುದು ದಿನೇದಿನೇ ಗಗನಮುಖಿಯಾಗುತ್ತಿರುವ ಆಹಾರ ಧಾನ್ಯಗಳ ಬೆಲೆ ಕುರಿತು ಎಂಬುದು ನಿಮಗೀಗ ನಿಚ್ಚಳ ಆಗಿರಲು ಸಾಕು.

ಹದಿನೈದು ವರ್ಷಗಳ ಹಿಂದಿನ ಘಟನೆಯನ್ನು ಈಗ ಮತ್ತೊಮ್ಮೆ ಮೆಲುಕು ಹಾಕೋಣ. ಕೆಜಿ ಈರುಳ್ಳಿ ಬೆಲೆ ನೂರು ರೂಪಾಯಿ ಗಡಿ ದಾಟಿತು ಎಂಬುದೇ ಆಗ ದೇಶದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಅಷ್ಟು ಮಾತ್ರವಲ್ಲ, ತದನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಗಿನ ದೆಹಲಿ ಬಿಜೆಪಿ ಸರ್ಕಾರವನ್ನು ಅಲ್ಲಿನ ಮತದಾರರು ಗುಡಿಸಿ ಗುಡ್ಡೆ ಹಾಕಿ ಆಚೆ ನೂಕಿದ್ದರು. ಅದಕ್ಕೊಂದು ಬಲವಾದ ಕಾರಣವಿದೆ. ಬೇರೆಲ್ಲ ಹೇಗೂ ಇರಲಿ, ನಮ್ಮ ದೇಶದಲ್ಲಿ ಒಂದು ವಿಚಾರದಲ್ಲಿ ಮಾತ್ರ ನಾವು ಸಮಾನತೆ ಸಾಧಿಸಿದ್ದೇವೆ. ಅದು ಈರುಳ್ಳಿ, ಟೊಮೆಟೋ ಮತ್ತು ಆಲೂಗಡ್ಡೆ ಬಳಕೆ ವಿಷಯದಲ್ಲಿ! ಈ ಮೂರೂ ಪದಾರ್ಥಗಳ ಸೇವನೆ ವಿಚಾರದಲ್ಲಿ ಬಡವ ಬಲ್ಲಿದ ಎಂಬ ಭೇದಭಾವವಿಲ್ಲ. ಕಾರಣ ಇಷ್ಟೆ, ಅನ್ನವನ್ನು ಎಲ್ಲರೂ ಎಲ್ಲ ದಿನವೂ ಎರಡು ಹೊತ್ತು ಅಥವಾ ಒಪ್ಪೊತ್ತು ತಿನ್ನುತ್ತಾರೆ ಎನ್ನುವ ಹಾಗಿಲ್ಲ. ಏಕೆಂದರೆ ಅಕ್ಕಿ ತುಟ್ಟಿ ಎಂಬ ಕಾರಣಕ್ಕೆ ಒಂದು ಹೊತ್ತು ಮಾತ್ರ ಅನ್ನ ಉಣ್ಣುವ ಬಡವರಿದ್ದಾರೆ. ಒಂದು ಹೊತ್ತೂ ಊಟ ಮಾಡದವರೂ ಇದ್ದಾರೆ. ಅನ್ನದ ಗಂಜಿ ಉಂಡು ಬದುಕುವವರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಸರ್ಕಾರಗಳಿಗೆ ಅದರ ಅರಿವಿದೆಯೋ ಇಲ್ಲವೋ ಗೊತ್ತಿಲ್ಲ. ಇನ್ನು ಶ್ರೀಮಂತರ ವಿಚಾರ. ಸಕ್ಕರೆ ಕಾಯಿಲೆ ಇರುವ ಕಾರಣದಿಂದ ಅಂತಹ ಬಹಳಷ್ಟು ಮಂದಿ ಸುತಾರಾಂ ಅನ್ನವನ್ನು ತಿನ್ನುವುದಿಲ್ಲ. ಅಂಥವರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಲೇ ಇದೆಯೆನ್ನಿ. ಈರುಳ್ಳಿ, ಆಲೂಗಡ್ಡೆ, ಟೊಮೆಟೊ ಮತ್ತು ಬೇಳೆ-ಕಾಳುಗಳು ಹಾಗಲ್ಲ. ಎಲ್ಲ ವರ್ಗದವರು, ಎಲ್ಲ ಕಾಲದಲ್ಲೂ, ಎಲ್ಲ ರೀತಿಯ ಆಹಾರ ತಯಾರಿಕೆಯಲ್ಲೂ ಬಳಸುತ್ತಾರೆ. ಹೀಗಾಗಿ ದೇಶದ ಬಹುಪಾಲು ಜನರಿಗೆ ಅಕ್ಕಿ ಬೆಲೆಗಿಂತ ಈರುಳ್ಳಿ, ಟೊಮೆಟೊ, ಆಲೂಗಡ್ಡೆ, ಬೇಳೆ ಕಾಳುಗಳ ಬೆಲೆಯೇ ಮುಖ್ಯವಾಗುತ್ತದೆ. ಇದನ್ನು ಅನ್ನಭಾಗ್ಯ ನೀಡುವುದರಲ್ಲಿ ‘ಸಿದ್ಧಹಸ್ತರು’ ಮತ್ತು ‘ಅಚ್ಛೇ ದಿನ’ದ ಕನಸುಗಾರರು ಇಬ್ಬರೂ ಅರ್ಥಮಾಡಿಕೊಳ್ಳಬೇಕು.

ಸ್ವಲ್ಪ ಆಲೋಚಿಸಿ ನೋಡಿ. ಅದನ್ನು ಬೇಕಾದರೆ ರಾಜಕೀಯ ಲೆಕ್ಕಾಚಾರ ಅಂದರೂ ತಪ್ಪಾಗಲಾರದು. ಎರಡು ವರ್ಷದ ಹಿಂದೆ ದೇಶದಲ್ಲಿ ಮತದಾರರು ಅಧಿಕಾರದ ಕೈ ಬದಲಾಯಿಸಲು ಮನಸು ಮಾಡಿದ್ದು ಎರಡು ಮುಖ್ಯ ಕಾರಣಕ್ಕೆ. ಒಂದು ಭ್ರಷ್ಟಾಚಾರ ಅಥವಾ ಕಪ್ಪುಹಣದ ಕ್ರೋಡೀಕರಣ. ಮತ್ತೊಂದು ಬೆಲೆಯೇರಿಕೆ ವಿಚಾರ. ಈ ಎರಡೂ ವಿಷಯಗಳು ಎರಡು ವಿಭಿನ್ನ ವರ್ಗಗಳ ಆಸಕ್ತಿ ಮತ್ತು ಹಿತದ ಜೊತೆಗೆ ಬೆಸೆದುಕೊಂಡಿವೆ. ಭ್ರಷ್ಟಾಚಾರ ಅಥವಾ ಕಪ್ಪುಹಣದ ವಿಷಯ ವಿದ್ಯಾವಂತ ಅಥವಾ ಊಟಕ್ಕೆ ಚಿಂತೆ ಇರದವರ ಆಸಕ್ತಿಗೆ ಸಂಬಂಧಿಸಿದ್ದು. ಭ್ರಷ್ಟಾಚಾರದ ವಿಷಯದಲ್ಲಿ ಬಡಬಗ್ಗರಿಗೆ ಗಮನ ಅಷ್ಟಕ್ಕಷ್ಟೆ. ಒಪ್ಪೊತ್ತಿನ ಅನ್ನಕ್ಕೆ ಪರದಾಡುವವನಿಗೆ ದೇಶದ ಸಮಸ್ಯೆ ಕುರಿತು ಯೋಚನೆ ಮಾಡಲು ಎಲ್ಲಿ ಪುರುಸೊತ್ತು? ಸಂದರ್ಭ ಬಂದರೆ ಅವರು ಆ ವಿಚಾರವಾಗಿ ಮಾತನಾಡಬಹುದು. ಆಡುವವರ ಮಾತಿಗೆ ಕಿವಿಗೊಡಲೂಬಹುದು. ಆದರೆ ಕಪ್ಪುಹಣ, ಭ್ರಷ್ಟಾಚಾರ ಇವೆಲ್ಲ ಅಂಥವರಿಗೆ ಮುಖ್ಯ ಆಸಕ್ತಿಯ ವಿಷಯ ಆಗಲಾರದು. ಬೆಲೆ ಏರಿಕೆ ಹಾಗಲ್ಲ, ಬಡ ಮತ್ತು ಮಧ್ಯಮ ವರ್ಗದವರ ಜಂಘಾಬಲವನ್ನೇ ಉಡುಗಿಸಿಬಿಡುವಂಥದ್ದು. ಬಡ ಮಧ್ಯಮ ವರ್ಗದವರ ಗಳಿಕೆ, ಬಳಕೆ ಮತ್ತು ಉಳಿಕೆಗೆ ಕರಾರುವಾಕ್ಕಾದ ಲೆಕ್ಕಾಚಾರವಿರುವುದು ಅದಕ್ಕೆ ಕಾರಣ. ಲೆಕ್ಕಾಚಾರದಲ್ಲಿ ತುಸು ಏರುಪೇರಾದರೂ ಸಂಸಾರದ ಬಂಡಿ ಸುಗಮವಾಗಿ ಮುಂದೆ ಸಾಗದು. ತಿಂಗಳ ಸಂಬಳದಲ್ಲಿ ಇಷ್ಟು ಊಟಕ್ಕೆ ತಿಂಡಿಗೆ, ಇಷ್ಟು ಮನೆ ಬಾಡಿಗೆಗೆ, ಇಷ್ಟು ಮಕ್ಳಳು ಮರಿಗಳ ಸಾಲಿಪಾಲಿಗೆ. ಇನ್ನು ಅಡಚಣೆ ಬಂದರೆ, ಕಾಯಿಲೆ ಕಸಾಲೆ ವಕ್ಕರಿಸಿದರೆ ಕೈಗಡ, ಮುಂಗಡ ಸಾಲಸೋಲದ ಮೊರೆಯೇ ಆಸರೆ. ಹೀಗಾಗಿ ತಿಂಗಳ ಕೊನೆಗೆ ಬರುವ ಸಂಬಳದ ಖುಷಿ ಕ್ಷಣಿಕ ಮಾತ್ರ. ಅಂದಮೇಲೆ ಅಕ್ಕಿ, ಬೇಳೆಕಾಳು, ತರಕಾರಿ, ಹಣ್ಣುಹಂಪಲು ಬೆಲೆ ಎರಡು-ಮೂರು ಪಟ್ಟು ಏರಿಕೆಯಾದರೆ ಬಡಜನರು ಅದ್ಹೇಗೆ ಬದುಕಬಲ್ಲರು ಎಂಬುದನ್ನು ಸರ್ಕಾರ ನಡೆಸುವವರು ಕಿಂಚಿತ್ತಾದರೂ ಯೋಚಿಸಬೇಡವೇ?

ಸುಖಾಸುಮ್ಮನೆ ಹೇಳುವುದಲ್ಲ. ಇಲ್ಲೊಂದು ಲೆಕ್ಕಾಚಾರವಿದೆ ಓದಿ ನೋಡಿ. ಕಳೆದ ಎರಡು ವರ್ಷಗಳಲ್ಲಿ ಆಲೂಗಡ್ಡೆ ಬೆಲೆ ದೇಶದ ನಾನಾ ಭಾಗಗಳಲ್ಲಿ ಶೇ.33ರಿಂದ ಶೇ.156ರಷ್ಟು ಏರಿದೆ. ಟೊಮೆಟೋ ಬೆಲೆಯೂ ಅಷ್ಟೆ. ಕೆ.ಜಿ.ಗೆ ಶೇ.195ರಿಂದ ಶೆ.424ರಷ್ಟು ಏರಿಕೆ ಕಂಡಿದೆ. ಟೊಮೆಟೋ ಬೆಲೆ ಏರಿಕೆಯಲ್ಲಿ ದೆಹಲಿ ನಂಬರ್ ವನ್ ಸ್ಥಾನದಲ್ಲಿದ್ದರೆ, ಬೆಂಗಳೂರಲ್ಲಿ ಶೇ.357ರಷ್ಟು ಏರಿಕೆಯಾಗಿ ಎರಡನೇ ಸ್ಥಾನದಲ್ಲಿದೆ. ಉಳಿದ ಎಲ್ಲ ರೀತಿಯ ತರಕಾರಿ, ಮೀನು, ಮೊಟ್ಟೆ, ತೊಗರಿಬೇಳೆ, ಉದ್ದಿನಬೇಳೆ, ಹೆಸರುಬೇಳೆ ಇವೆಲ್ಲವುಗಳ ಬೆಲೆಯೂ ಶೇ 77ರಿಂದ ಶೇ.195ರಷ್ಟು ಏರಿದೆ. ಇಲ್ಲಿ ಇನ್ನೊಂದು ಲೆಕ್ಕಾಚಾರವನ್ನು ಗಮನಿಸಬೇಕು. ಉದಾಹರಣೆಗೆ ಮುಂಚೆ ಒಂದು ಮಧ್ಯಮ ವರ್ಗದ ಕುಟುಂಬಕ್ಕೆ ಒಂದು ತಿಂಗಳಿಗೆ ಆಹಾರದ ಖರ್ಚಿಗೆ 6ರಿಂದ 8 ಸಾವಿರ ರೂಪಾಯಿ ಬೇಕಾಗಿದ್ದರೆ ಈಗ ಅದು ಕನಿಷ್ಠ 16 ಸಾವಿರ ರೂಪಾಯಿಗೆ ಏರುತ್ತದೆ. ಇನ್ನು ಸರಾಸರಿ ವೇತನ ವಿಚಾರಕ್ಕೆ ಬರೋಣ. ದೇಶದಲ್ಲಿ ಶೇ.58ರಷ್ಟು ಜನರ ಸರಾಸರಿ ತಿಂಗಳ ಆದಾಯವೇ 15ರಿಂದ 18 ಸಾವಿರ ರೂಪಾಯಿ. ಹಾಗಾದರೆ ಈ ಜನರೆಲ್ಲ ಏನನ್ನು ತಿನ್ನಬೇಕು? ಏನನ್ನು ಉಣ್ಣಬೇಕು ಎಂಬುದನ್ನು ಸರ್ಕಾರಗಳೇ ಹೇಳಬೇಕಾಗುತ್ತದೆ. ಇದೆಲ್ಲದರ ಪರಿಣಾಮ ಹಣದುಬ್ಬರ ದರದ ಗತಿ ಒಂದೇ ಸಮನೆ ಏರುಮುಖವಾಗಿದೆ. 2014-15ರಲ್ಲಿ ಇದ್ದ ಹಣದುಬ್ಬರದ ದರ ಶೇ.6.94. ಈಗ ಅದು ಶೇ.8ಕ್ಕೆ ಬಂದು ತಲುಪಿದೆ.

ತೈಲ ಬೆಲೆ ಮೂಲ ಕಾರಣ: ಈ ಹಿಂದೆ ಕೇಂದ್ರ ಸರ್ಕಾರ ತೈಲ ಬೆಲೆ ಏರಿಳಿಕೆ ಅಧಿಕಾರವನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಂಡಿತ್ತು. ಆ ಅಧಿಕಾರ ರಾಜಕೀಯ ಲಾಭ ಹಾನಿಯ ಅಂದಾಜಿಗೆ ಸೀಮಿತವಾಗಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ತೀವ್ರ ನಷ್ಟ ಅನುಭವಿಸತೊಡಗಿದಾಗ ತೈಲ ಬೆಲೆ ನಿರ್ಧಾರದ ಅಧಿಕಾರವನ್ನು ಆಯಾ ಕಂಪನಿಗಳಿಗೇ ವಹಿಸಿದ್ದು ಸರಿಯಷ್ಟೆ. ಆದರೆ ಅದರ ಜೊತೆಗೇ ತೈಲೋತ್ಪನ್ನಗಳ ಮೇಲೆ ಮತ್ತು ಅವುಗಳ ಮಾರಾಟದ ಮೇಲೆ ನಾನಾ ಕಾರಣಗಳಿಗಾಗಿ ಮೇಲ್ತೆರಿಗೆ (ಸೆಸ್) ವಿಧಿಸುವುದನ್ನೂ ನಿಲ್ಲಿಸಬೇಕಲ್ಲವೆ? ಅದನ್ನು ಮಾಡಲಿಲ್ಲ. ಬದಲಾಗಿ ಈಗಲೂ ನೆರೆ-ಬರ ಪರಿಹಾರ, ಶೈಕ್ಷಣಿಕ ತೆರಿಗೆಯಿಂದ ಹಿಡಿದು ಸ್ವಚ್ಛಭಾರತ ಅಭಿಯಾನದವರೆಗೆ ಎಲ್ಲದಕ್ಕೂ ಸುಲಭವಾಗಿ ತೈಲೋತ್ಪನ್ನಗಳ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮನಸೋ ಇಚ್ಛೆ ಮೇಲ್ತೆರಿಗೆಯನ್ನು ವಿಧಿಸುತ್ತಿವೆ. ಅದರ ಪರಿಣಾಮವಾಗಿ ತೈಲೋತ್ಪನ್ನಗಳ ಮೂಲಬೆಲೆಗಿಂತಲೂ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ. ಹೀಗಾಗಿ 30ರಿಂದ 40 ರೂಪಾಯಿಗೆ ಸಿಗಬಹುದಾಗಿದ್ದ ಪೆಟ್ರೋಲ್ ಮತ್ತು ಡೀಸೆಲ್ 60ರಿಂದ 70 ರೂಪಾಯಿವರೆಗೆ ಏರಿಕೆ ಕಂಡಿವೆ. ಇದರ ನೇರ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಹಿಡಿದು ಹಣದುಬ್ಬರದ ನಾಗಾಲೋಟದವರೆಗೆ ಕಾರಣವಾಗಿದೆ. ವಾಸ್ತವ ಹೀಗಿರುವಾಗ, ಜನರ ಬವಣೆಗೆ ಸರ್ಕಾರಗಳೇ ನೇರ ಹೊಣೆ ಎಂಬುದನ್ನು ಅದೇ ಸರ್ಕಾರಗಳ ಚುಕ್ಕಾಣಿ ಹಿಡಿದವರು ಹೇಗೆ ಅಲ್ಲಗಳೆಯುತ್ತಾರೋ ಗೊತ್ತಿಲ್ಲ. ಚುನಾವಣೆ ನಡೆದು ಮತದಾನ ಮುಗಿದ ಮರುಕ್ಷಣದಲ್ಲಿ ತೈಲ ಬೆಲೆ ಏರಿಕೆ ನಿರ್ಧಾರ ಪ್ರಕಟಿಸುವ ಸರ್ಕಾರಗಳಿಗೆ ತೈಲ ಬೆಲೆ ಏರಿಕೆ ನಿಯಂತ್ರಣದ ಮಹತ್ವ ಗೊತ್ತಿಲ್ಲ ಎಂದರೆ ನಂಬಲಾದೀತೆ?

ಇತರೆ ಕಾರಣಗಳೂ ಉಂಟು: ಒಂದೆಡೆ ವರ್ಷದಿಂದ ವರ್ಷಕ್ಕೆ ಕೃಷಿ ಭೂಮಿ ಪ್ರಮಾಣ ಕಡಿಮೆ ಆಗುತ್ತಿದೆ. ಅದರ ಜೊತೆಗೆ ಸತತವಾಗಿ ಕಳೆದ ಮೂರು ವರ್ಷಗಳಿಂದ ದೇಶಾದ್ಯಂತ ಭೀಕರ ಬರಗಾಲ ಆವರಿಸಿತ್ತು. ಹೀಗಾಗಿ ಆಹಾರ ವಸ್ತುಗಳ ಉತ್ಪಾದನೆ ಕುಸಿತವನ್ನು ಸಹಜವಾಗಿ ಅಂದಾಜು ಮಾಡಬಹುದಿತ್ತು. ಅಕ್ಕಿ, ಬೇಳೆಕಾಳು, ಸಕ್ಕರೆ ಇತ್ಯಾದಿ ಆಹಾರೋತ್ಪನ್ನಗಳ ಮೇಲಿನ ರಫ್ತು ನಿರ್ಬಂಧವನ್ನು ಕಠಿಣಗೊಳಿಸಬಹುದಿತ್ತು. ಕನಿಷ್ಠ ಮೂರ್ನಾಲ್ಕು ವರ್ಷಗಳಿಗಾಗುವಷ್ಟು ಆಹಾರೋತ್ಪನ್ನಗಳನ್ನು ಸಂಗ್ರಹ ಮಾಡಿ ತುರ್ತು ಕಾಲದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದಿತ್ತು. ಅದನ್ನು ಬಿಟ್ಟು ಈಗ ಬೆಲೆಯೇರಿಕೆಯ ಹಾಹಾಕಾರ ಕೇಳಿಸತೊಡಗಿದಾಗ ದವಸಧಾನ್ಯಗಳನ್ನು ಹೊರ ದೇಶದಿಂದ ಆಮದು ಮಾಡಿಕೊಳ್ಳುತ್ತೇವೆ, ಮುಂದಿನ ಹತ್ತು ದಿನದಲ್ಲಿ ಬೆಲೆ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳುವುದನ್ನು ಜವಾಬ್ದಾರಿ ಲಕ್ಷಣ ಎನ್ನಲು ಸಾಧ್ಯವೇ?

ಮೂಲಭೂತವಾಗಿ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಈಗಲೂ ಕ್ರಾಪ್ ಪ್ಲಾನಿಂಗ್ ವಿಚಾರದಲ್ಲಿ ಗಂಭೀರ ಹೆಜ್ಜೆ ಇಡುತ್ತಿಲ್ಲ. ಬೇಡಿಕೆಗೆ ಅನುಗುಣವಾಗಿ ಮಣ್ಣು ಮತ್ತು ಹವಾಗುಣ ಆಧರಿಸಿ ರೈತರು ಬೆಳೆ ಬೆಳೆದು ಲಾಭ ಮಾಡಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ರೈತರು ಎಲ್ಲೋ ಒಂದು ಕಡೆ ಒಂದು ಬೆಳೆಗೆ ಉತ್ತಮ ಬೆಲೆ ಬಂದಿದೆ ಎಂಬುದನ್ನು ಕೇಳಿ ತಿಳಿದುಕೊಂಡು ಬೆಳೆ ಬೆಳೆದು ಕೈಸುಟ್ಟುಕೊಳ್ಳುವಂತಹ ಅವೈಜ್ಞಾನಿಕ, ಅವಾಸ್ತವಿಕ ಪದ್ಧತಿ ಈಗಲೂ ಬಹುಪಾಲು ಕಡೆಗಳಲ್ಲಿ ನಡೆದುಕೊಂಡು ಬರುತ್ತಿದೆ. ಅದರ ಒಟ್ಟು ಪರಿಣಾಮ ಒಂದೋ ಬೆಲೆ ಕುಸಿತದಿಂದ ಅಥವಾ ಬೆಳೆ ಕುಸಿತದಿಂದ ರೈತರು ಮತ್ತು ಗ್ರಾಹಕರಿಬ್ಬರೂ ಬವಣೆಪಡುವುದು ಮುಂದುವರಿದುಕೊಂಡೇ ಬರುತ್ತಿದೆ.

ಇನ್ನು ಈರುಳ್ಳಿ, ಟೊಮೆಟೋ, ಆಲೂಗಡ್ಡೆ, ಇತರ ತರಕಾರಿ ಮತ್ತು ಹಣ್ಣುಹಂಪಲುಗಳದ್ದು ಮತ್ತೊಂದು ಕತೆ. ಈ ಬೆಳೆಗಳದ್ದು ಬೇರೆಯದರ ಹಾಗಲ್ಲ. ಆಗ ಬೆಳೆದು, ಆಗಲೇ ಮಾರಿಬಿಡುವ ಅನಿವಾರ್ಯತೆ ರೈತನಿಗಿರುತ್ತದೆ. ಮುಖ್ಯವಾಗಿ ಈ ಬೆಳೆಗಳ ಶೇಖರಣೆ, ಸಾಗಾಟಕ್ಕೆ ಬೇಕಾದ ಆಧುನಿಕ ಸಲಕರಣೆ ಗಳನ್ನು ಹೊಂದುವಲ್ಲಿ ಈಗಲೂ ನಮ್ಮ ಸರ್ಕಾರಗಳು ಗಂಭೀರವಾಗಿ ಗಮನ ಹರಿಸುತ್ತಿಲ್ಲ. ಈ ವಿಷಯದಲ್ಲಿ ನಾವು ಸನ್ನದ್ಧರಾಗುವವರೆಗೆ, ಕಾಲಮಿತಿಯಲ್ಲಿ ವಿಲೇವಾರಿ ಆಗುವ ಪದಾರ್ಥ ಬೆಳೆಯುವವರ ಗೋಳು ತಪ್ಪಿದ್ದಲ್ಲ.

ಅದೆಲ್ಲ ಸರಿ. ಇದೇ ವೇಗದಲ್ಲಿ ಬೆಲೆ ಏರಿಕೆ ಪ್ರವೃತ್ತಿ ಮುಂದುವರಿಯಿತು ಅನ್ನಿ. ಆಗ ಅದರ ಪರಿಣಾಮದ ಕಡೆಗೊಮ್ಮೆ ಆಲೋಚನೆ ಮಾಡೋಣ. ಈ ಹಿಂದಿನ ಯುಪಿಎ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ದೇಶದ ಮತದಾರ ಎನ್​ಡಿಎ ಸರ್ಕಾರಕ್ಕೂ ಅದೇ ತೆರನಾದ ಚುರುಕು ಮುಟ್ಟಿಸದಿರುವನೇ? ಮುಖ್ಯವಾಗಿ ಮೋದಿ ಸರ್ಕಾರದ ಮುಂದಿರುವುದು ಇನ್ನೊಂದು ವರ್ಷದ ಒಳಗೆ ಎದುರಾಗುವ ಪಂಜಾಬ್ ಮತ್ತು ಉತ್ತರಪ್ರದೇಶ ವಿಧಾನಸಭಾ ಚುನಾವಣೆ. ಇವೆರಡೂ ರಾಜ್ಯಗಳಲ್ಲಿ ಬಾಕಿ ಎಲ್ಲ ವಿಷಯಗಳ ಜೊತೆಗೆ ರೈತಾಪಿ ಜನ ಮತ್ತು ಬಳಕೆದಾರರ ವರ್ಗದ ತೀರ್ಮಾನ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸ್ವತಃ ಬಿಜೆಪಿ ಹೇಳಿಕೊಂಡಿರುವ ಹಾಗೆ ಕಪ್ಪುಹಣ ಹಿಂತಿರುಗಿ ತರುವ ಕೆಲಸ ಈ ಸರ್ಕಾರವಲ್ಲ ಯಾವ ಸರ್ಕಾರ ಬಂದರೂ ಆಗದ ಮಾತು ಎಂಬುದು ಎಲ್ಲರಿಗೂ ಗೊತ್ತಿದೆ. ಕನಿಷ್ಠಪಕ್ಷ ವಿದೇಶಿ ಬ್ಯಾಂಕುಗಳಲ್ಲಿ ಇನ್ನು ಮುಂದಾದರೂ ಕಾಳಧನ ಸಂಗ್ರಹ ಆಗದಂತೆ ನೋಡಿಕೊಂಡರೆ ಸಾಕು ಎಂಬಂತಾಗಿದೆ. ಆದರೆ ಅದೆಲ್ಲಕ್ಕಿಂತ ಮುಖ್ಯವಾದದ್ದು ಈಗ ಆತಂಕಕ್ಕೆ ಕಾರಣ ಆಗಿರುವ ಬೆಲೆ ಏರಿಕೆ ಮತ್ತು ಹಣದುಬ್ಬರದ ಮೇಲೆ ಸರ್ಕಾರ ಹಿಡಿತ ಸಾಧಿಸುವುದು. ಈಗಲೂ ಆ ಕೆಲಸಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗದಿದ್ದರೆ ಜನರೇ ಬೀದಿಗಿಳಿದು ‘ಇವರು ಹೊಟ್ಟೆಗೇನ್ ತಿಂತಾರೆ?’ ಎಂದು ಕೇಳುವ ದಿನ ಬಹಳ ದೂರ ಇರಲಿಕ್ಕಿಲ್ಲ ಅಲ್ಲವೇ?

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top