ಜೀವನ ಉಳಿಸಲು ಜೀವವೈವಿಧ್ಯ

ಮೇ 22 ವಿಶ್ವ ಜೀವವೈವಿಧ್ಯ ದಿನ. ಜೀವ ವೈವಿಧ್ಯತೆಯ ಮಹತ್ವವನ್ನು ಅರ್ಥ ಮಾಡಿಸಲು ವಿಶ್ವ ಸಂಸ್ಥೆ ಈ ದಿನವನ್ನು ಮುಡಿಪಾಗಿಟ್ಟಿದೆ. ಕೊರೊನಾ ಕಾಡುತ್ತಿರುವ ಹೊತ್ತಿನಲ್ಲಿಈ ದಿನ ಪ್ರಸ್ತುತ.

‘‘ಇನ್ನಾದರೂ ನಮ್ಮ ಜೀವವೈವಿಧ್ಯವನ್ನು ಅರ್ಥ ಮಾಡಿಕೊಂಡು ಅದನ್ನ ಉಳಿಸಲು ಪಣ ತೊಡದಿದ್ದರೆ ಮಾನವನೂ ಸರ್ವನಾಶವಾಗುವ ದಿನ ದೂರವಿಲ್ಲ,’’ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಹೆಚ್ಚುತ್ತಿರುವ ಕೊರೊನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿಈ ಮಾತು. ಭೂಮಿಯಲ್ಲಿ ಗಿಡಮೂಲಿಕೆ, ಕ್ರಿಮಿಕೀಟಗಳೂ ಸೇರಿದಂತೆ ಕೋಟ್ಯಂತರ ಜೀವಿಗಳಿವೆ. ಇವುಗಳ ಜೀವನ ಒಂದಕ್ಕೊಂದು ಹೆಣೆದುಕೊಂಡಿವೆ. ಆಹಾರ ಸರಪಳಿಯ ಬಗ್ಗೆ ನೀವು ಅರಿತೇ ಇರುತ್ತೀರಿ. ಹುಲ್ಲಿನಿಂದ ಹಿಡಿದು ಮಾನವನವರೆಗೂ, ಕೀಟದಿಂದ ಹದ್ದಿನವರೆಗೂ ಆಹಾರ ಸರಪಳಿ ಹರಡಿಕೊಂಡಿದೆ. ಇವುಗಳಲ್ಲಿ ಒಂದು ಕೊಂಡಿ ನಾಶವಾದರೆ ಇಡೀ ಸರಪಳಿಯೇ ನಾಶವಾಗುತ್ತದೆ.

ಪ್ರಕೃತಿಯಲ್ಲಿ ಪರಿಹಾರ
ಈ ವರ್ಷದ ಬಯೋಡೈವರ್ಸಿಟಿ ದಿನದ ಥೀಮ್ ‘ಪ್ರಕೃತಿಯಲ್ಲಿ ನಮ್ಮ ಸಮಸ್ಯೆಗೆ ಪರಿಹಾರಗಳಿವೆ.’ ಹಾರ ಸುರಕ್ಷತೆ, ಹವಾಮಾನ ವೈಪರೀತ್ಯ, ಜಲ ಸುರಕ್ಷತೆ, ಮನುಷ್ಯನ ಆರೋಗ್ಯ, ವಿಪತ್ತು ನಿರ್ವಹಣೆ, ಆರ್ಥಿಕ ಬೆಳವಣಿಗೆ- ಹೀಗೆ ಏನೇ ಇದ್ದರೂ ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ನೈಜ ಪರಿಹಾರ ಪ್ರಕೃತಿಯಲ್ಲೇ ಇದೆ. ಅಂದರೆ ನಿಸರ್ಗವನ್ನು ನಾವು ಆರೋಗ್ಯಕರವಾಗಿ ಇಟ್ಟುಕೊಂಡರೆ, ಅದು ನಮ್ಮ ಬಹುತೇಕ ಸಮಸ್ಯೆಗಳನ್ನು ಪರಿಹರಿಸಲಿದೆ. ಜೀವ ವೈವಿಧ್ಯವನ್ನು ನಾಶ ಮಾಡಿ ನಡೆಸುವ ಅಭಿವೃದ್ಧಿ, ಅದು ಅಭಿವೃದ್ಧಿಯೇ ಅಲ್ಲ. ಅದರಿಂದ ದೀರ್ಘಕಾಲಿಕವಾಗಿ ನಾಶವೇ ಖಚಿತ.

ಮೂಕ ವಸಂತ
ಒಂದು ಬೆಳೆಗೆ ಯಾವುದಾದರೂ ಕ್ರಿಮಿಗಳು ಬಂದು ಕಾಟ ಕೊಟ್ಟರೆ, ಅದನ್ನು ಇನ್ನೊಂದು ಕ್ರಿಮಿ ಅಥವಾ ಕೀಟಜಾತಿ ಬಂದು ತಿಂದು ವಾತಾವರಣದ ಸಮತೋಲನವನ್ನು ಜಾರಿಯಲ್ಲಿಡುತ್ತದೆ. ಮನುಷ್ಯ ಬೆಳೆಗಳಿಗೆ ರಾಸಾಯನಿಕ ಸಿಂಪಡಿಸುವುದರಿಂದ ನಾನಾ ಬಗೆಯ ನಿರಪಾಯಕಾರಿ, ಲಾಭಕಾರಕ ಕ್ರಿಮಿಕೀಟಗಳು ಕೂಡ ನಾಶವಾಗತೊಡಗಿದವು. ಉದಾಹರಣೆಗೆ, ಐವತ್ತು- ಅರುವತ್ತರ ದಶಕದಲ್ಲಿ ಅಮೆರಿಕದಲ್ಲಿ ಬೆಳೆಗಳಿಗೆ ಕಾಡುವ ಕ್ರಿಮಿಕೀಟಗಳನ್ನು ನಾಶಪಡಿಸಲು ಡಿಡಿಟಿ ಸಿಂಪಡಿಸಲು ಆರಂಭ ಮಾಡಿದರು. ಇದರಿಂದ ಕೀಟಗಳೇನೋ ನಾಶವಾದವು. ಇದರ ಜೊತೆಗೆ, ಕೀಟಗಳನ್ನು ತಿಂದು ಬದುಕುತ್ತಿದ್ದ ಕೆಲವು ಸಣ್ಣ ಹಕ್ಕಿಗಳು, ಪತಂಗಗಳು ಕೂಡ ನಾಶವಾದವು. ಇದರಿಂದಾಗಿ, ಈ ಹಕ್ಕಿಗಳು, ಚಿಟ್ಟೆಗಳು ಪರಾಗಸ್ಪರ್ಶ ಮಾಡದೆ ಎಷ್ಟೋ ಜಾತಿಯ ಮರಗಿಡಗಳು ಹೂವು, ಹಣ್ಣು ಬಿಡಲೇ ಇಲ್ಲ. ಅಮೆರಿಕನ್ನರಲ್ಲೂ ಕ್ಯಾನ್ಸರ್ ಮುಂತಾದ ರೋಗಗಳು ಹೆಚ್ಚಾದವು. ಇದನ್ನು ಅಮೆರಿಕನ್ ಲೇಖಕಿ ರಾಶೆಲ್ ಕಾರ್ಸನ್ ‘ಸೈಲೆಂಟ್ ಸ್ಟ್ರಿಂಗ್’ (ಮೂಕ ವಸಂತ) ಎಂದು ಕರೆದು ಕೃತಿ ರಚಿಸಿದರು. ಅಂತಿಮವಾಗಿ, ಪ್ರಕೃತಿಯ ಜೀವ ವೈವಿಧ್ಯದ ಮೇಲೆ ಮನುಷ್ಯ ನಡೆಸುವ ಆಕ್ರಮಣ, ಅವನನ್ನೇ ನಾಶ ಮಾಡುತ್ತದೆ ಎಂದು ಪ್ರತಿಪಾದಿಸಿದರು.

ಮಾಡು ಇಲ್ಲವೇ ಮಡಿ
2020ನ್ನು ಪರಿಸರ ವಿಜ್ಞಾನಿಗಳು ‘ಸೂಪರ್ ಇಯರ್’ ಅಥವಾ ‘ಮಾಡು ಇಲ್ಲವೇ ಮಡಿ’ ಕ್ರಿಯೆಗೆ ಆಸ್ಪದ ಮಾಡಿಕೊಡಲಿರುವ ವರ್ಷ ಎಂದು ಕರೆದಿದ್ದರು. 2011- 2020 ವಿಶ್ವಸಂಸ್ಥೆಯ ಜೀವವೈವಿಧ್ಯ ದಶಕವೆಂದು ಕರೆಯಲಾಗಿತ್ತು. ಸಾವಿರಾರು ಜೀವತಳಿಗಳು ವಿನಾಶದ ಅಂಚಿನಲ್ಲಿವೆ; ಜಾಗತಿಕ ತಾಪಮಾನ ಅಪಾಯಕಾರಿ ಮಟ್ಟ ಮುಟ್ಟಿದೆ; ಜಾಗತಿಕ ಪರಿಸರ ಪ್ರಾಕೃತಿಕ ತುರ್ತುಪರಿಸ್ಥಿತಿ ಎದುರಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಎಲ್ಲ ಸರಿ ಇದ್ದಿದ್ದರೆ ಈ ಜೀವವೈವಿಧ್ಯದ ನೆನಪಿನ ಆಚರಣೆಗಳು ನಡೆಯಬೇಕಿತ್ತು. ಆದರೆ ಕೊರೊನಾ ಬಂದು ಮನುಷ್ಯನನ್ನು ಸುಮ್ಮನೆ ಕೂರಿಸಿದೆ.

ಸಮೂಹ ಜೀವನಾಶ
ಭೂಮಿ ಆಗಿಂದಾಗ, ಪ್ರಕೃತಿಯಲ್ಲಿ ಅಸಮತೋಲನ ಉಂಟಾದಾಗಲೆಲ್ಲ ‘ಸಮೂಹ ಜೀವನಾಶ’ ನಡೆಯುತ್ತಿರುತ್ತದೆ. ಇದುವರೆಗೆ ಐದು ಇಂಥ ಜೀವನಾಶಗಳು ಸಂಭವಿಸಿವೆ. ಐದನೇ ಜೀವನಾಶ 6.5 ಕೋಟಿ ವರ್ಷಗಳ ಹಿಂದೆ ನಡೆದಿದ್ದು, ಅದರಲ್ಲಿ ಡೈನೋಸಾರ್ಗಳು ನಾಶವಾಗಿದ್ದವು. ಆರನೇ ಸಮೂಹ ಜೀವನಾಶ ಈಗ, ಮಾನವನಿಂದಾಗಿ ನಡೆಯುತ್ತಿದೆ. ಸುಮಾರು 75%ದಷ್ಟು ಸೇವಿಸಬಹುದಾದ ಆಹಾರಧಾನ್ಯಗಳ ಸಸ್ಯ ವೈವಿಧ್ಯವನ್ನು ಮಾನವ ಈಗಾಗಲೇ ನಾಶ ಮಾಡಿದ್ದಾನೆ. ಇಂದು ಜಗತ್ತಿನ 60% ಮಂದಿ ಕೇವಲ ಮೂರು ದಾನ್ಯಗಳನ್ನು ಅವಲಂಬಿಸಿದ್ದಾರೆ- ಅಕ್ಕಿ, ಗೋಧಿ ಮತ್ತು ಜೋಳ. ಭಾರತದಲ್ಲಿ ಕೂಡ ಸಾವಿರಾರು ಭತ್ತದ ತಳಿಗಳಿದ್ದವು. ಈಗ ಅದು ಕೆಲವೇ ನೂರಕ್ಕೆ ಇಳಿದಿದೆ. ಒಂದೊಂದು ಸಸ್ಯ, ಒಂದೊಂದು ಪ್ರಾಣಿ ನಾಶವಾದಂತೆ ಅದನ್ನು ಅವಲಂಬಿಸಿದ ಇನ್ನೂ ಹಲವು ಸಸ್ಯ- ಜೀವಿ- ಕ್ರಿಮಿ ಕೂಡ ನಾಶವಾಗುತ್ತವೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top