ನಮ್ಮ ಇಂಟೆಲಿಜೆನ್ಸ್‌ ಬ್ಯೂರೋದ ಬೆಚ್ಚಿ ಬೀಳಿಸುವ ದುರಂತ ಕಥೆ

– ಮಂಜುನಾಥ ಅಜ್ಜಂಪುರ.

ಬೇಹುಗಾರರ ಬಗೆಗೆ ನಮಗೆ ಒಂದಿಷ್ಟು ರೊಮ್ಯಾಂಟಿಕ್‌ ಕಲ್ಪನೆಗಳಿವೆ. ಅವನು ಸೀಕ್ರೆಟ್‌ ಏಜಂಟ್‌, ಯುವಕ, ಅವನ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿರುತ್ತವೆ. ಅರ್ಧಂಬರ್ಧ ಬಟ್ಟೆ ಉಟ್ಟ ಸುಂದರಿಯರು ಅವನನ್ನು ಕಂಡರೆ ಮುಗಿಬೀಳುತ್ತಾರೆ. ಕ್ಷಣಾರ್ಧದಲ್ಲಿ ವೇಷ ಬದಲಾಯಿಸುತ್ತಾನೆ. ಹಾಡಬಲ್ಲ, ಕುಣಿಯಬಲ್ಲ, ರಿಜರ್ವೇಷನ್‌ ಇಲ್ಲದೆಯೇ ಯಾವುದೇ ವಿಮಾನದಲ್ಲಿ, ಟ್ರೈನಿನಲ್ಲಿ, ಹಡಗಿನಲ್ಲಿಯೂ ಓಡಾಡಬಲ್ಲ. ಒಮ್ಮೆಗೇ ಹತ್ತಾರು ಜನ ಗೂಂಡಾಗಳನ್ನು ಹೊಡೆದುರುಳಿಸಬಲ್ಲ, ಇತ್ಯಾದಿ.
ಕಲ್ಪಿತ ಕಥನಗಳಿಗೂ ನಿಜಜೀವನಕ್ಕೂ ಎಷ್ಟು ಅಂತರ ಎಂಬುದನ್ನು ತಿಳಿಯಲು ಈ ಬೇಹುಗಾರರ ಬಗೆಗೆ ಓದಬೇಕು, ತಿಳಿಯಬೇಕು. ಉತ್ತರ ಕರ್ನಾಟಕದ ಸವಣೂರಿನ ಆರ್‌.ಎನ್‌.ಕುಲಕರ್ಣಿಯವರು ತುಂಬ ಮಹತ್ತ್ವದ ‘ಸಿನ್‌ ಆಫ್‌ ನ್ಯಾಷನಲ್‌ ಕಾನ್‌ಸೈನ್ಸ್‌’ (SIN OF NATIONAL CONSCIENCE) ಎಂಬ ಕೃತಿ ರಚಿಸಿದ್ದಾರೆ. ಬೇಹುಗಾರಿಕೆ ಸಂಸ್ಥೆ ‘ಇಂಟೆಲಿಜೆನ್ಸ್‌ ಬ್ಯೂರೋ’(ಐಬಿ)ದಲ್ಲಿ ಮೂವತ್ತೈದು ವರ್ಷಗಳ ಸೇವಾನುಭವ ಅವರದ್ದು. ಇಲ್ಲಿ ಅಪ್ರಿಯ ಸತ್ಯಗಳೆಂಬ ನಿಜವಾದ ಸ್ಫೋಟಕ ಸಾಮಗ್ರಿಯನ್ನೇ ಲೇಖಕರು ನೀಡಿದ್ದಾರೆ. ಓದಿ ಮುಗಿಸುವಷ್ಟರಲ್ಲಿ, ಈ ಬೇಹುಗಾರರ ದಾರುಣ ಸ್ಥಿತಿಗತಿ ತಿಳಿಯುವಾಗ, ಕಣ್ಣು-ಮನಸ್ಸುಗಳು ಆದ್ರ್ರವಾಗುತ್ತವೆ.
ಈ ಐಬಿ ಎಂಬುದು ಬ್ರಿಟಿಷರು ತಮ್ಮ ಉಪಯೋಗಕ್ಕೆ ಹುಟ್ಟುಹಾಕಿ, ‘ಹಾಸ್ಯುಂಡು ಬೀಸಿ ಒಗೆದ’ ಸಂಸ್ಥೆ . ಸ್ವಾತಂತ್ರ್ಯ ಹೋರಾಟಗಾರರ ಬಗೆಗೆ ಮಾಹಿತಿ ಸಂಗ್ರಹಿಸಲು 1887ರಲ್ಲಿ ‘ಸೆಂಟ್ರಲ್‌ ಸ್ಪೆಷಲ್‌ ಬ್ರ್ಯಾಂಚ್‌’ ಪ್ರಾರಂಭಿಸಿದರು. ಬ್ರಿಟಿಷ್‌ ಸೇನಾಧಿಕಾರಿ ಕರ್ನಲ್‌ ಸ್ಲೀಮನ್‌, ಕಳ್ಳರನ್ನು ಹಿಡಿಯಲು 1890ರಲ್ಲಿ ಇದನ್ನು ಉಪಯೋಗಿಸಿದ. ಇದು 1904ರಲ್ಲಿ ‘ಸೆಂಟ್ರಲ್‌ ಕ್ರಿಮಿನಲ್‌ ಇಂಟೆಲಿಜೆನ್ಸ್‌’ ಎಂಬ ಹೊಸ ಹೆಸರನ್ನು ಪಡೆಯಿತು. 1920ರಲ್ಲಿ ‘ಸೆಂಟ್ರಲ್‌ ಇಂಟೆಲಿಜೆನ್ಸ್‌ ಬ್ಯೂರೋ’ ಎಂದಾಯಿತು. ಅನಂತರ, 1930ರ ದಶಕದಲ್ಲಿ ’ಇಂಟೆಲಿಜೆನ್ಸ್‌ ಬ್ಯೂರೋ’ ಹೆಸರು ಪಡೆಯಿತು. ತುಂಬ ಮಹತ್ತ್ವದ ಕಾರ್ಯನಿರ್ವಹಣೆಯ ಉದ್ದೇಶದ ಈ ಐಬಿಗೆ, ಬ್ರಿಟಿಷ್‌ ಅವಧಿಯಲ್ಲಾಗಲೀ ನಂತರದ ಕಾಂಗ್ರೆಸ್‌ ಆಳ್ವಿಕೆಯಲ್ಲಾಗಲೀ ಸಂವಿಧಾನದ, ಕಾಯಿದೆಗಳ ಬೆಂಬಲವೇ ದೊರೆಯಲಿಲ್ಲ. ನಮ್ಮವರೇ ಆದ ಕಾಂಗ್ರೆಸ್ಸಿಗರು ತಮ್ಮ ಸ್ವಾರ್ಥಕ್ಕೆ, ವಿರೋಧ ಪಕ್ಷಗಳನ್ನು ಹಣಿಯಲು ಇದನ್ನು ಬಳಸಿದರು.
ಕುಲಕರ್ಣಿಯವರ ಗ್ರಂಥದ ಒಂದೊಂದು ಸಾಲೂ ಮಹತ್ತ್ವದ್ದು. ಇಂತಹ ಗಂಭೀರ ವಿಷಯಗಳನ್ನೂ ಸಂಗ್ರಹಿಸಿ ವ್ಯವಸ್ಥಿತವಾಗಿ ಜೋಡಿಸಿ, ಓದಿಸಿಕೊಂಡು ಹೋಗುವಂತೆ ಬರೆಯುವುದು ತುಂಬ ಶ್ರಮದ, ಅಪಾರ ಪ್ರತಿಭೆಯ ಕೆಲಸ. ಅನೇಕ ವಿಷಯಗಳ ಮೇಲಿನ ಮತ್ತು ರಾಷ್ಟ್ರೀಯ ಸುರಕ್ಷತೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹವೇ ಬೇಹುಗಾರರ ಪ್ರಾಥಮಿಕ ಕೆಲಸ. ಪ್ರತಿ-ಗೂಢಚರ್ಯೆ (Counter Intelligence) ಮತ್ತು ಅತಿಗಣ್ಯ ವ್ಯಕ್ತಿಗಳ ಸುರಕ್ಷತೆಯ ವಿಷಯವೂ ಐಬಿಗೆ ಸೇರಿದ್ದು. ಸಂಶೋಧನೆ, ಸಂಪರ್ಕ, ಕಂಪ್ಯೂಟರ್‌, ಛಾಯಾಗ್ರಹಣಗಳಿಗೆ ಸಂಬಂಧಿಸಿದ ಸಂಗತಿಗಳೂ ಇದಕ್ಕೇ ಸೇರುತ್ತವೆ. ಜವಾಬ್ದಾರಿ, ಕೆಲಸ ಜಾಸ್ತಿ; ಆದರೆ ಅಧಿಕಾರ-ಅಥಾರಿಟಿಗಳೇ ಇಲ್ಲ.
ಪೊಲೀಸರೆಂದರೆ ಜನರಿಗೆ ಭಯ ಹಾಗೂ ವಜ್ರ್ಯ. ಅಂತಹ ಖ್ಯಾತಿಯ ಪೊಲೀಸ್‌ ಇಲಾಖೆಯವರೇ ಇಂದಿಗೂ ಈ ಸಂಸ್ಥೆಯನ್ನು ಆವರಿಸಿಕೊಂಡಿದ್ದಾರೆ. ರಾಜಕಾರಣಿಗಳಂತೆಯೇ ಐಪಿಎಸ್‌ ದಣಿಗಳು ಈ ಐಬಿಯನ್ನು ಉಪಭೋಗಿಸಿದ್ದಾರೆ ಮತ್ತು ಹಾಳುಮಾಡಿದ್ದಾರೆ. ಐಪಿಎಸ್‌ ದಣಿಗಳು ಆಡಿದ್ದೇ ಆಟ, ಹೇಳಿದ್ದೇ ಕಾಯಿದೆ! ನಿಯಮ, ಪದ್ಧತಿ, ವ್ಯವಸ್ಥೆ, ಯಾವುದೂ ಕೇಳುವಂತಿಲ್ಲ. ಇಂದಿರಾ ಗಾಂಧಿಯವರು, ತಮ್ಮನ್ನು ನಾಯಕಿಯನ್ನಾಗಿ ಮಾಡಿದ ಎಲ್ಲ ಕಾಂಗ್ರೆಸ್ಸಿಗರನ್ನೂ ತುಳಿದು ಮೇಲೇರಿ ತಾವೊಬ್ಬರೇ ‘ಹೈಕಮಾಂಡ್‌’ ಆಗಲು ಐಬಿಯನ್ನು ಸ್ವಂತಕ್ಕೆ ಬಳಸಿಕೊಂಡರು.
1971ರ ಇಂದಿರಾ ಅವರ ಚುನಾವಣಾ ಅಕ್ರಮಗಳ ವಿರುದ್ಧ ರಾಜನಾರಾಯಣ್‌ ಅವರು ಮೊಕದ್ದಮೆ ಹೂಡಿದರು. ಅಲಹಾಬಾದ್‌ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಜಗಮೋಹನಲಾಲ್‌ ಸಿನ್ಹಾ ಅಪರೂಪದ ನ್ಯಾಯಾಧೀಶರು. ಅವರು ಏನು ತೀರ್ಪು ನೀಡುತ್ತಾರೆ ಎಂಬುದನ್ನು ತಿಳಿಯಲು ಐಬಿ ಹರಸಾಹಸ ಮಾಡಿತು. ಅಂತಿಮ ತೀರ್ಪಿನ ಕರಡು ಪ್ರತಿಯನ್ನು ಮುಂಚಿತವಾಗಿಯೇ ಪಡೆಯಲು ಪ್ರಯತ್ನ ನಡೆಯುತ್ತಿದೆ ಎಂಬ ಸುಳಿವು ಪಡೆದ ನ್ಯಾಯಮೂರ್ತಿಗಳು, ತಮ್ಮ ಸಹಾಯಕರ ನೆರವು ಪಡೆಯದೆ ತೀರ್ಪನ್ನು ತಮ್ಮ ಕೈಯ್ಯಲ್ಲೇ ಬರೆದರು. ಆ ತೀರ್ಪು ಭಾರತದ ಇತಿಹಾಸದ ಮಹತ್ವಪೂರ್ಣ ತೀರ್ಪಾಗಿತ್ತು. 12ನೆಯ ಜೂನ್‌ 1975ರಂದು, ಆ ತೀರ್ಪು ಪ್ರಕಟವಾದ ಅನಂತರವೇ ಐಬಿ ಮತ್ತು ಪ್ರಧಾನಿ ಇಂದಿರಾ ಗಾಂಧಿಗೆ ತಿಳಿದದ್ದು. ತಮ್ಮ ಲೋಕಸಭಾ ಸ್ಥಾನವನ್ನು ಕಳೆದುಕೊಂಡ ಇಂದಿರಾ ಗಾಂಧಿ ಅಧಿಕಾರ ಉಳಿಸಿಕೊಳ್ಳುವ ಏಕಮೇವ ಉದ್ದೇಶದಿಂದ ಆಂತರಿಕ ತುರ್ತುಪರಿಸ್ಥಿತಿಯನ್ನು ಹೇರಿದರು. ಪ್ರಜಾಪ್ರಭುತ್ವದ, ಪತ್ರಿಕಾ ಸ್ವಾತಂತ್ರ್ಯದ, ಎಲ್ಲ ಸ್ವಾತಂತ್ರ್ಯಗಳ ಕಗ್ಗೊಲೆಯಾಯಿತು.
ಮುಂದೆ ತುರ್ತುಪರಿಸ್ಥಿತಿಯ ಅಕ್ರಮಗಳ ವಿರುದ್ಧ ವಿಚಾರಣೆ ನಡೆಸಲು 1977ರಲ್ಲಿ, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿದ್ದ ಷಾ ಅವರ ನೇಮಕವಾಗಿ, ‘ಷಾ ಆಯೋಗ’ದ ರಚನೆಯಾಯಿತು. ಐಬಿ ಸಂಸ್ಥೆಯ ಅಂದಿನ ನಿರ್ದೇಶಕರಾಗಿದ್ದ ಆತ್ಮಜಯರಾಮ್‌ ಅವರು, ಷಾ ಆಯೋಗದ ಮುಂದೆ ಸಾಕ್ಷ ್ಯ ನೀಡಿ ವಿಷಾದ – ಪಶ್ಚಾತ್ತಾಪಗಳ ದನಿಯಲ್ಲಿ, ತುರ್ತುಪರಿಸ್ಥಿತಿ ಹೇರಿಕೆಯ ವಿಷಯವು ತಮ್ಮ ಸಂಸ್ಥೆಗೆ ಮುಂಚಿತವಾಗಿ ತಿಳಿದಿರಲಿಲ್ಲವೆಂದೂ, 1975ರ ಜೂನ್‌ 26ರ ಬೆಳಿಗ್ಗೆ ತಮ್ಮ ಕಚೇರಿಗೆ ಎಂದಿನಂತೆ ಹೋದಮೇಲೆಯೇ ತಿಳಿಯಿತೆಂದೂ ಸಾಕ್ಷ ್ಯ ನುಡಿದರು. ಇಂದಿರಾ ಗಾಂಧಿಯವರ ಲೋಕಸಭಾ ಸದಸ್ಯತ್ವ ಅನೂರ್ಜಿತವಾಗಿದ್ದುದರಿಂದ ಹಿಡಿದು, ತುರ್ತುಪರಿಸ್ಥಿತಿಯ ಹೇರಿಕೆಯವರೆಗಿನ ಭಯಾನಕ ವಿದ್ಯಮಾನಗಳು, ಐಬಿ ಮುಖ್ಯ ಕಚೇರಿಯಿದ್ದ ದಿಲ್ಲಿಯಲ್ಲಿಯೇ ನಡೆಯುತ್ತಿದ್ದರೂ ವಿಷಯ ತಿಳಿದಿರಲಿಲ್ಲ, ಎಂಬುದು ಎಂತಹ ನಾಚಿಕೆಗೇಡಿನ ಸಂಗತಿ !
ಈ ‘ಸಿನ್‌ ಆಫ್‌ ನ್ಯಾಷನಲ್‌ ಕಾನ್‌ಸೈನ್ಸ್‌’ ಓದುವಾಗ ನಮ್ಮ ಗತ ಇತಿಹಾಸದ ನೂರೆಂಟು ಪುಟಗಳು ಬೆತ್ತಲೆಯಾಗಿಬಿಡುತ್ತವೆ. ಐಬಿಯ ದುರುಪಯೋಗ ತಡೆದಿದ್ದರೆ, ಆ ಶಕ್ತಿಯನ್ನು ದೇಶದ ಹಿತಕ್ಕಾಗಿ ಬಳಸಿದ್ದರೆ, ಎಷ್ಟೆಲ್ಲಾ ದುರಂತಗಳನ್ನು ತಪ್ಪಿಸಬಹುದಿತ್ತು. ಕನಿಷ್ಠ, ಕಾಂಗ್ರೆಸ್‌ ಪಕ್ಷ ವು ತಮ್ಮ ಪಕ್ಷದ ಅತ್ಯುಚ್ಚ ನಾಯಕ ರಾಜೀವ್‌ ಗಾಂಧಿಯವರನ್ನಾದರೂ ಉಳಿಸಬಹುದಿತ್ತಲ್ಲವೆ! ಈ ಕೃತಿ ನಮ್ಮನ್ನು ಇನ್ನಷ್ಟು ಬೆಚ್ಚಿ ಬೀಳಿಸುವುದು, ಸ್ವಾತಂತ್ರ್ಯಪೂರ್ವದ ಅವಧಿಯ ಉಲ್ಲೇಖಗಳಿಂದ. ಬ್ರಿಟಿಷರು ಅತ್ಯಂತ ನೀಚರು. ಅವರ ಆಳ್ವಿಕೆಯ ಕಾಲದ ರಾಜಕೀಯ ನಾಯಕರ, ರಾಜರ, ನವಾಬರ ಖಾಸಗಿ ಜೀವನದ ದಾಖಲೆಗಳನ್ನು ಮತ್ತು (ಬ್ರಿಟಿಷರ) ಚೇಲಾಗಳ, ಮಾಹಿತಿದಾರರ, ಷಡ್ಯಂತ್ರ ಮಾಡುವವರ ಬಗೆಗಿನ ಮಾಹಿತಿಗಳ ಬಹು ಮುಖ್ಯವಾದ ದಾಖಲೆಗಳನ್ನು ಸುಟ್ಟುಹಾಕಿದರು. ಬರಿಯ ಅವ್ಯವಸ್ಥೆಯೊಂದೇ ಇಲ್ಲಿ ಉಳಿದುದು. ಐಬಿ ಸಂಸ್ಥೆಯ ಕಾರ್ಯವಿಧಾನ ಅರಿತಿದ್ದ ಗುಲಾಂ ಮೊಹಮ್ಮದ್‌ ಎಂಬಾತನಿಗೆ ತುಂಬ ಅನುಭವವೂ ಇತ್ತು. ಅದು ಸ್ವಾತಂತ್ರ್ಯೋತ್ತರ ಭಾರತದ ಹೊಸ ಐಬಿಯ ಪುನರ್‌-ನಿರ್ಮಾಣಕ್ಕೆ ಪ್ರಾಯಶಃ ಉಪಯೋಗವಾಗಬಹುದಿತ್ತು. ಆದರೆ, ಆತ ಪಾಕಿಸ್ತಾನಕ್ಕೆ ಹೋದ. ಅಲ್ಲಿನ ‘ಇಂಟೆಲಿಜೆನ್ಸ್‌ ಬ್ಯೂರೋ ಆಫ್‌ ಪಾಕಿಸ್ತಾನ್‌’ ಸಂಸ್ಥೆಯ ಮೊದಲ ನಿರ್ದೇಶಕನೂ ಆದ.
ಭಾರತದಿಂದ ಈ ಗುಲಾಂ ಮೊಹಮ್ಮದ್‌ ಅದೇನೇನು ಮಾಹಿತಿಯನ್ನು, ದಾಖಲೆಗಳನ್ನು ಕದ್ದುಕೊಂಡು ಹೋದನೋ ತಿಳಿಯದು. ಆದರೆ ಬಹು ಮುಖ್ಯರಾದ ಭಾರತೀಯ ನಾಯಕಮಣಿಗಳಿಗೆ ಸಂಬಂಧಿಸಿದ ಮಹತ್ವದ ವಿವರ ಅವನ ಬಳಿ ಇದ್ದಿರಬೇಕು. ಕಾಂಗ್ರೆಸ್‌ ನಾಯಕರನ್ನು ಬ್ಲ್ಯಾಕ್‌ಮೇಲ್‌ ಮಾಡಲು ಅದು ಪ್ರಾಯಶಃ ಅವನಿಗೆ ಉಪಯೋಗವಾಗಿರಬೇಕು. ಹಾಗೂ, ಬ್ರಿಟಿಷರ ಆಡಳಿತದಲ್ಲಿ ಅವರಿಗೆ ಮಾಹಿತಿದಾರರಾಗಿ, ಏಜಂಟರಾಗಿ ಕೆಲಸ ಮಾಡುತ್ತಾ, ಅವರಿಂದ ಹಣ ಪಡೆಯುತ್ತಾ, ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ದೇಶಭಕ್ತರಂತೆ ಸೋಗು ಹಾಕಿದ ಅದೆಷ್ಟು ಜನರ ಇಂತಹ ರಹಸ್ಯವಾದ ವಿವರಗಳು ಹೀಗೆ ಕಾಣೆಯಾದವೋ ತಿಳಿಯದು. ಪಾಕ್‌ ಆಡಳಿತಗಾರರು ಅಲ್ಲಿನ ಯಾವುದೇ ಪಕ್ಷ ಕ್ಕೆ ಸೇರಿದ್ದರೂ ಅವರೊಂದಿಗೆ ಏಳು ದಶಕಗಳಿಂದಲೂ ‘ಸೌಹಾರ್ದ ಸ್ನೇಹ ಸಂಬಂಧ’ ಇಟ್ಟುಕೊಂಡಿರುವ ಕಾಂಗ್ರೆಸ್‌ ರಾಜಕಾರಣಿಗಳನ್ನು ಗಮನಿಸಿದರೆ, ಷಡ್ಯಂತ್ರಗಳ ಮತ್ತು ಅನುಚಿತ ವ್ಯವಹಾರಗಳ ದುರ್ವಾಸನೆ ಮೂಗಿಗೇ ರಾಚುತ್ತದೆ.

(ಲೇಖಕರು ಹಿರಿಯ ಅಂಕಣಕಾರರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top