ವೈದ್ಯನ ಜೀವನದ ಒಳನೋಟ

– ಡಾ. ಅಜಿತ್‌ ಈಟಿ, ಶ್ವಾಸಕೋಶ ತಜ್ಞರು.

ದೇಶ ಕಂಡ ಅಪ್ರತಿಮ ವೈದ್ಯರು ಹಾಗೂ 14 ವರ್ಷ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ ಭಾರತರತ್ನ ಪುರಸ್ಕೃತ ಡಾ. ಬಿಧಾನ್‌ ಚಂದ್ರ ರಾಯ್‌ ಅವರ ಜನ್ಮ ಮತ್ತು ಮರಣ ದಿನ – ಜುಲೈ 1ನ್ನು ರಾಷ್ಟ್ರೀಯ ವೈದ್ಯರ ದಿನ ಎಂದು ಗುರುತಿಸಲಾಗಿದೆ. ಡಾ.ಬಿ.ಸಿ. ರಾಯ್‌ ಅವರು ದೇಶದ ವೈದ್ಯಕೀಯ ವ್ಯವಸ್ಥೆಗೆ ನೀಡಿರುವ ಅಪಾರ ಕೊಡುಗೆಗೆ ಗೌರವ ಸೂಚಿಸುವ ಜೊತೆಗೆ ಸಮಾಜದಲ್ಲಿ ವೈದ್ಯರ ಪಾತ್ರ, ಶ್ರಮ ಹಾಗೂ ಮಹತ್ವವನ್ನು ಎತ್ತಿಹಿಡಿಯುವ ಉದ್ದೇಶ ಈ ದಿನಾಚರಣೆಯದು.
ಪುರಾಣಗಳಲ್ಲಿ ವೈದ್ಯರ ಬಗ್ಗೆ ಉಲ್ಲೇಖವಾಗಿರುವ ಎರಡು ಶ್ಲೋಕಗಳನ್ನು ನೆನಪಿಸಿಕೊಳ್ಳಬಹುದು. ‘‘ಶರೀರೇ ಜರ್ಜರಿಭೂರೇ ವ್ಯಾಧಿಗ್ರಸ್ತೇ ಕಲೇಬರೇ, ಔಷಧಂ ಜಾಹ್ನವಿತೋಯಂ ವೈದ್ಯೋ ನಾರಾಯಣ ಹರಿ’’. ಈ ಶ್ಲೋಕದ ಅರ್ಥ- ಮಾನವನ ದೇಹ ರೋಗಗ್ರಸ್ತಗೊಂಡಾಗ ಪವಿತ್ರ ಗಂಗಾ ನೀರಿನಂತಹ ಔಷಧಿ ನೀಡುವ ವೈದ್ಯನು ಭಗವಂತ ನಾರಾಯಣನಿಗೆ ಸಮಾನ ಎಂಬುದು. ಸಾವಿನ ಅಂಚಿನಲ್ಲಿರುವವರನ್ನು ಬದುಕಿಸಿ ಅವರ ಹಾಗೂ ಅವರ ಕುಟುಂಬಕ್ಕೆ ಪುನರ್ಜೀವ ನೀಡುವ ಮಹಾತ್ಮರೇ ವೈದ್ಯರು. ಇನ್ನೊಂದು ಶ್ಲೋಕ- ‘‘ವೈದ್ಯರಾಜ ನಮಸ್ತುಭ್ಯಂ ಯಮರಾಜ ಸಹೋದರ, ಯಮಸ್ತು ಹರತಿ ಪ್ರಾಣಾನ್‌ ವೈದ್ಯೋ ಪ್ರಾಣಾನ್‌ ಧನಾನಿ ಚ’’- ವೈದ್ಯನು ಯಮರಾಜನ ಸಹೋದರನಂತೆ, ಯಮರಾಜ ಕೇವಲ ಪ್ರಾಣವನ್ನು ಕಿತ್ತುಕೊಂಡರೆ, ವೈದ್ಯನು ಪ್ರಾಣದ ಜೊತೆ ದುಡ್ಡನ್ನು ಸಹ ಕಿತ್ತುಕೊಳ್ಳುತ್ತಾನೆ.
ಈ ಎರಡು ದೃಷ್ಟಿಕೋನದ ನಡುವೆ ವೈದ್ಯರ ಜೀವನೋಪಾದಿ ಹಾಗೂ ಅವರ ಬದುಕಿನ ವಾಸ್ತವಿಕ ಚಿತ್ರಣ ಹೇಗಿರುತ್ತದೆ ಎಂಬುದರ ಬಗ್ಗೆ ಗಮನ ಹರಿಸೋಣ. ಪ್ರಸ್ತುತ ಕಾಲಘಟ್ಟದಲ್ಲಿ ವೈದ್ಯನಾಗುವುದು ಸುಲಭದ ಮಾತೇನಲ್ಲ. ಅದರಲ್ಲೂ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಂದ ಬಂದಿರುವವರಿಗೆ ಅದು ಹರಸಾಹಸವೇ ಸರಿ. ಅತ್ಯುತ್ತಮ ಶ್ರೇಣಿ ಪಡೆದರಷ್ಟೇ ಸರಕಾರಿ ಮೆಡಿಕಲ್‌ ಕಾಲೇಜಿನಲ್ಲಿ ಕಡಿಮೆ ಶುಲ್ಕದಲ್ಲಿ ಸೀಟ್‌ ಲಭಿಸುತ್ತದೆ. ಅದೇ ಕೊಂಚ ಶ್ರೇಣಿ ದೂರವಿದ್ದರೆ, ಲಕ್ಷಗಟ್ಟಲೆ ತೆತ್ತಬೇಕಾಗುತ್ತದೆ. ಪದವಿ ಪಡೆಯಲು ಐದೂವರೆ ವರ್ಷದ ನಿರಂತರ ಪರಿಶ್ರಮ-ಶ್ರದ್ಧೆ-ಸಹನೆ ಅವಶ್ಯಕ. ದೇವರು ನಿರ್ಮಿಸಿರುವ ಅದ್ಭುತ ಮಾನವ ದೇಹವನ್ನು ತಿಳಿದು ಗ್ರಹಿಸುವುದು ಸಾಮಾನ್ಯ ವಿಷಯವಲ್ಲ. ಎಷ್ಟು ಓದಿದರೂ ಮುಗಿಯದ ಪಠ್ಯಕ್ರಮ, ವಿಷಯ ಗ್ರಹಿಸುವ ಹಾಗೂ ನೆನಪಿಡುವ ಸವಾಲು, ಕಠಿಣ ಪರೀಕ್ಷೆಗಳ ವೇಳಾಪಟ್ಟಿ, ತೇರ್ಗಡೆ ಅರ್ಹತೆ, ಒತ್ತಡದ ಮೌಖಿಕ ಪರೀಕ್ಷೆಗಳು ಹೀಗೆ ಎಲ್ಲಾ ಅಂಶಗಳಲ್ಲೂ ಅನ್ಯ ಪದವಿಗಳಿಗಿಂತ ಕಷ್ಟಕರ. ತಜ್ಞ ವೈದ್ಯರಾಗಲು ಕನಿಷ್ಠ 10-12 ವರ್ಷ ನಿರಂತರವಾಗಿ ಕಷ್ಟಪಡಬೇಕು, ಜೊತೆಗೆ ಲಕ್ಷ ಗಟ್ಟಲೆ ಖರ್ಚು ಸಹ ಭರಿಸಬೇಕು.
ಇಂದು ರೋಗಿ ಹಾಗೂ ವೈದ್ಯರ ಸಂಬಂಧ ಕ್ಷೀಣಿಸುತ್ತಿರುವುದಂತೂ ಸತ್ಯ. ಅವರಿಗೆ ವೈದ್ಯರಿಂದ ಅವಾಸ್ತವಿಕ ನಿರೀಕ್ಷೆಗಳು. ಡಾಕ್ಟರ್‌ ಬಳಿ ಹೋಗುವ ಮುನ್ನವೇ ಗೂಗಲ್‌ ಮಾಡಿ, ಒಂದು ತೊಂದರೆಗೆ ಹತ್ತಾರು ಪ್ರಶ್ನೆಗಳನ್ನು ಮುಂದಿಡುತ್ತಾರೆ. ಆಸ್ಪತ್ರೆಯಲ್ಲಿ ರೋಗಿ ತೀವ್ರ ತೊಂದರೆಯಿಂದ ಅಡ್ಮಿಟ್‌ ಆದರೆ, ವೈದ್ಯರ ಮೇಲೆ ಅನಗತ್ಯ ಸಂಶಯ ಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅನಗತ್ಯವಾಗಿ ಐಸಿಯುನಲ್ಲಿ ಇಟ್ಟಿದ್ದಾರೆ ಎಂಬ ಸಂಶಯ ತೀರ ಸಾಮಾನ್ಯ. ವೈದ್ಯರ ಪ್ರಯತ್ನ ಮೀರಿ ಸಹ ರೋಗಿ ಸಾವನ್ನಪ್ಪಿದರೆ ವೈದ್ಯರ ಮೇಲೆ ಅವಹೇಳನ, ಹಲ್ಲೆ ಮಾಡುವ ಘಟನಾವಳಿಗಳು ಸಾಮಾನ್ಯವಾಗಿದೆ. ಇದರಿಂದ ವೈದ್ಯರ ಆತ್ಮವಿಶ್ವಾಸ ಹಾಗೂ ಗೌರವದ ಮೇಲೆ ದೊಡ್ಡ ಪೆಟ್ಟು ಬೀಳುತ್ತದೆ.
ವೈದ್ಯರ ಮೇಲೆ ಬಹು ಸಾಮಾನ್ಯ ಆಪಾದನೆ ಎಂದರೆ ರೋಗಿಗಳನ್ನು ಹೆದರಿಸಿ ಅನವಶ್ಯಕ ಪರೀಕ್ಷೆಗಳನ್ನು ಮಾಡುತ್ತಾರೆ ಎಂಬುದು. ಮಾನವನ ದೇಹ ದೇವರು ಸೃಷ್ಟಿಸಿರುವ ಒಂದು ವಿಸ್ಮಯ. ಅದು ಯಾವುದೇ ಮಾನವನಿರ್ಮಿತ ಯಂತ್ರದಂತೆ ಅಲ್ಲ. ಒಂದೇ ರೋಗ ಬೇರೆಬೇರೆ ರೀತಿಯಲ್ಲಿ ಕಾಣಿಸಿಕೊಳ್ಳಬಹುದು ಹಾಗೂ ಚಿಕಿತ್ಸೆಗೆ ಸ್ಪಂದಿಸುವ ಶಕ್ತಿ ಮತ್ತು ಸಮಯ ಸಹ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಆಸ್ಪತ್ರೆಯ ಸೌಲಭ್ಯಕ್ಕೆ , ತಜ್ಞರ ಪರಿಣತಿ, ಸೇವೆಯ ಗುಣಮಟ್ಟದ ಅನುಸಾರ ಶುಲ್ಕವಿರುತ್ತದೆ. ಜನರು ಅವರ ಪರಿಮಿತಿ ತಿಳಿದು, ಸರಿಯಾದ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ರೋಗಿ ಕಟ್ಟುವ ಒಟ್ಟಾರೆ ಹಣದಲ್ಲಿ ಕೇವಲ ಸರಾಸರಿ 5%ರಷ್ಟು ವೈದ್ಯರ ಶುಲ್ಕವಿರಬಹುದು.
ಉತ್ತಮ ರೀತಿಯ ಸೌಕರ್ಯಗಳನ್ನ ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯಗೊಳಿಸಿ, ತಜ್ಞ ವೈದ್ಯರಿಗೆ ಉತ್ತಮ ವೇತನ ನೀಡಿ, ಔಷಧಿಗಳ ದರ ನಿಯಂತ್ರಣ ಮಾಡಿದರೆ ಇಂತಹ ಯಾವ ತಾಪತ್ರಯವೂ ಉದ್ಭವಿಸುವುದಿಲ್ಲ. ಜೊತೆಗೆ ಸರಕಾರಿ ಸೀಟುಗಳನ್ನು ಹೆಚ್ಚಿಸಿ, ಖಾಸಗಿ ಕಾಲೇಜಿನ ಸೀಟುಗಳ ಶುಲ್ಕ ನಿಯಂತ್ರಣಕ್ಕೆ ತರಬೇಕು. ಆಗ ರೋಗಿಗಳು ಹಾಗೂ ವೈದ್ಯರಿಬ್ಬರಿಗೂ ಅನುಕೂಲವಾಗುತ್ತದೆ. ದೇಶದ ಆರೋಗ್ಯ ವ್ಯವಸ್ಥೆಯ ದುಃಸ್ಥಿತಿಗೆ ವೈದ್ಯರನ್ನು ಬಲಿಪಶು ಮಾಡುವುದು ಸರಿಯಲ್ಲ.
ಎಲ್ಲಾ ಕ್ಷೇತ್ರಗಳಲ್ಲಿರುವಂತೆ ವೈದ್ಯಕೀಯ ಲೋಕದಲ್ಲಿಯೂ ಲೋಪದೋಷಗಳು ಹಾಗೂ ಅಧರ್ಮದ ದಾರಿ ಹಿಡಿದವರು ಇರಬಹುದು. ಹಾಗೆಂದು ಇಡೀ ವೈದ್ಯ ಸಮೂಹಕ್ಕೆ ನಿಂದಿಸುವುದು ಸಮಂಜಸವಲ್ಲ. ಮಾಧ್ಯಮ ಹಾಗೂ ಚಲನಚಿತ್ರಗಳಲ್ಲೂ ಸಹ ವೈದ್ಯರನ್ನು ನಕಾರಾತ್ಮಕವಾಗಿ ಬಿಂಬಿಸುವ ಪ್ರಯತ್ನಗಳು ಹೆಚ್ಚಾಗಿವೆ. ಕೊರೊನಾ ಎಂಬ ಹೊಸ ಮಹಾಮಾರಿ ವಿಶ್ವವನ್ನೆಲ್ಲಾ ಆವರಿಸಿದೆ. ಇಂತಹ ಭಯಾನಕ ಸನ್ನಿವೇಶದಲ್ಲಿಯೂ ಕೂಡ ಎದೆಗುಂದದೆ, ತನ್ನ ಹಾಗೂ ಕುಟುಂಬವನ್ನು ಅಪಾಯದಲ್ಲಿಟ್ಟು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ಅನಘ್ರ್ಯ ಸೇವೆಗೆ ಬೆಲೆ ಕಟ್ಟಲಾಗುವುದೇ? ಕೊರೊನಾ ಅಷ್ಟೇ ಅಲ್ಲ ಈ ತರಹದ ನೂರಾರು ರೋಗಗಳು ಬಂದರೂ, ವೈದ್ಯ ತನ್ನ ರೋಗಿಯ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ್ದಾನೆ, ಹೋರಾಡುತ್ತಿದ್ದಾನೆ, ಮುಂದೆಯೂ ಹೋರಾಡಲು ಸನ್ನದ್ಧನಾಗಿದ್ದಾನೆ.
ರೋಗಿ-ವೈದ್ಯನ ಸಂಬಂಧ ವಿಶೇಷವಾದದ್ದು. ರೋಗಿಗೆ ಚಿಕಿತ್ಸೆ ನೀಡುವುದರ ಜೊತೆಜೊತೆಗೆ, ತೊಂದರೆಗಳನ್ನು ಆಲಿಸುವ ಕಿವಿ, ಭರವಸೆ ಮೂಡಿಸುವ ಮಾತು, ನೋವಿನಲ್ಲಿ ಸಾಥ್‌ ನೀಡುವ ಕೈ, ತಳಮಳ ಅರ್ಥ ಮಾಡಿಕೊಳ್ಳುವ ಹೃದಯ, ನೋವು ಮರೆಸುವ ತಿಳಿಹಾಸ್ಯ- ವೈದ್ಯ ಇವನ್ನೆಲ್ಲಾ ನೀಡಿ ರೋಗಿ ಬೇಗನೆ ಚೇತರಿಸಿಕೊಳ್ಳುವಂತೆ ಮಾಡುತ್ತಾನೆ. ಒಬ್ಬ ರೋಗಿ ಸಾವಿನ ದವಡೆಯಿಂದ ಹೊರಬಂದಾಗ, ಶಸ್ತ್ರಚಿಕಿತ್ಸೆ ಸಫಲವಾದಾಗ, ಪ್ರಪಂಚಕ್ಕೆ ಒಂದು ಜೀವವನ್ನು ತಂದಾಗ – ವೈದ್ಯನಿಗಾಗುವ ಖುಷಿ- ತೃಪ್ತಿ ಉತ್ತುಂಗ ಮಟ್ಟದ್ದು. ಈ ಖುಷಿಗೋಸ್ಕರವೇ ಅವನು ವರ್ಷಗಳ ಕಾಲ ಅವಿರತ ತ್ಯಾಗ ನಿಷ್ಠೆಯಿಂದ ಶ್ರಮ ವಹಿಸಿರುತ್ತಾನೆ. ಅದೇ ರೋಗಿ ಸಾವನ್ನಪ್ಪಿದಾಗ ಅಷ್ಟೇ ದುಃಖ ಪಡುತ್ತಾನೆ, ಆದರೆ ಅದನ್ನು ತೋರ್ಪಡುವುದಿಲ್ಲ.
ಹಾಗಾಗಿ ವೈದ್ಯ ಬಳಗದ ಕಳಕಳಿಯ ಮನವಿ ಏನೆಂದರೆ, ಅವರನ್ನು ಸಾಮಾನ್ಯ ಮಾನವನೆಂದು ನೋಡಿ. ಅವರನ್ನು ನಾರಾಯಣನಿಗೆ ಹೋಲಿಸಿ ಹಿಗ್ಗಿಸುವುದು ಬೇಡ, ಯಮನ ಸಹೋದರನೆಂದು ಕುಗ್ಗಿಸುವುದೂ ಬೇಡ. ಅವರ ಪ್ರಯತ್ನಗಳನ್ನು ಗೌರವಿಸಿ, ಅವರ ಮೇಲಾಗುತ್ತಿರುವ ಅವಹೇಳನ ಹಾಗೂ ಹಲ್ಲೆಗಳನ್ನು ವಿರೋಧಿಸಿ. ವೈದ್ಯರ ಮೇಲೆ ನಂಬಿಕೆ ವಿಶ್ವಾಸ ಹೆಚ್ಚಾಗಲಿ, ಧನಾತ್ಮಕ ಭಾವ ತುಂಬಿರಲಿ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top